ಕಿಡ್ನಿಯಲ್ಲಿ ಕಲ್ಲು ಆಗದಂತೆ ನಿರ್ವಹಣೆ ಹೇಗೆ?

ಕಿಡ್ನಿಯಲ್ಲಿ ಕಲ್ಲು ಆಗದಂತೆ ನಿರ್ವಹಣೆ ಹೇಗೆ?

ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಾಗುವುದು ಈಗ ಬಹಳ ಸಾಮಾನ್ಯ ಮಾತು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ತಮ್ಮ ಆರೋಗ್ಯವನ್ನು ಗಮನಿಸುವುದಕ್ಕೆ ಪುರುಸೊತ್ತೇ ಇಲ್ಲ. ಯುವಕರಾಗಿರುವಾಗ ಬಿಡುವಿಲ್ಲ, ವಯಸ್ಸು ಕಳೆದು ಆರೋಗ್ಯ ಸಮಸ್ಯೆ ಪ್ರಾರಂಭವಾದಾಗ ಮೊದಲೇ ಜಾಗೃತೆ ಮಾಡಬೇಕಿತ್ತು ಅನ್ನೋ ಯೋಚನೆ ಸಾಮಾನ್ಯ. ಕಿಡ್ನಿ (ಮೂತ್ರ ಕೋಶ) ನಮ್ಮ ದೇಹದ ಬಹುಮುಖ್ಯ ಅಂಗ. ನಮ್ಮ ಆಹಾರ ಸೇವನೆಯ ಹಾಗೂ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಕಿಡ್ನಿಯಲ್ಲಿ ಕಲ್ಲಿನಂತಹ ರಚನೆಯುಂಟಾಗುತ್ತದೆ. ಇದು ಬಹಳ ಸಣ್ಣದಾಗಿದ್ದರೆ ಮೂತ್ರ ನಾಳದಲ್ಲಿ ಮೂತ್ರ ಚಲಿಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಅದೇ ಗಾತ್ರವು ದೊಡ್ಡದಾದರೆ ಬಹಳ ತೀವ್ರವಾದ ಸಹಿಸಲಾಗದ ನೋವು ಕಂಡು ಬರುತ್ತದೆ. 

ವಿಪರೀತ ದೇಹದ ತೂಕ, ಅಧಿಕ ರಕ್ತದೊತ್ತಡ, ಕೆಲವೊಂದು ಮಾತ್ರೆಗಳ ಅಡ್ಡ ಪರಿಣಾಮ, ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದೇ ಇರುವುದು ಎಲ್ಲವೂ ಕಿಡ್ನಿಯಲ್ಲಿ ಕಲ್ಲು ಬೆಳೆಯಲು ಕಾರಣವಾಗುತ್ತದೆ. ಈಗ ಈ ಕಲ್ಲುಗಳನ್ನು ನಿವಾರಿಸಲು ರಕ್ತರಹಿತ ಶಸ್ತ್ರ ಚಿಕಿತ್ಸೆಗಳು ಲಭ್ಯ ಇವೆ. ಆದರೆ ಅದಕ್ಕೆ ತಗಲುವ ವೆಚ್ಚ, ರೋಗಿ ಅನುಭವಿಸಬೇಕಾದ ನೋವು ಇವುಗಳಿಗಿಂತ ಕಲ್ಲು ಉತ್ಪತ್ತಿ ಆಗದೇ ಇರುವಂತೆ ನೋಡಿಕೊಳ್ಳುವುದೇ ಸೂಕ್ತ ವಿಧಾನ. ಕೆಲವು ನೈಸರ್ಗಿಕ ವಿಧಾನಗಳಿಂದ ಕಿಡ್ನಿಯಲ್ಲು ಕಲ್ಲು ಬೆಳೆಯದಂತೆ ನೋಡಿಕೊಳ್ಳಬಹುದು. 

ನೀರು: ನೀರು ಕಿಡ್ನಿಯಲ್ಲಿ ಕಲ್ಲಾಗದಂತೆ ತಡೆಯ ಬಲ್ಲ ಅತ್ಯಂತ ಮುಖ್ಯ ವಸ್ತು. ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೇಕೋ ಅಷ್ಟನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರಬೇಕು. ಬೇಸಿಗೆಯಲ್ಲಿ ನೀರಿನ ಸೇವನೆ ಹೆಚ್ಚಿರಲಿ. ಏಕೆಂದರೆ ಬಿಸಿಲಿನ ತಾಪಕ್ಕೆ ಬೆವರು ಹೊರಬಂದು ದೇಹದಲ್ಲಿ ನೀರಿನ ಕೊರತೆಯುಂಟಾಗುವುದು ಸಹಜ. ನೀರನ್ನು ನಿಯಮಿತವಾಗಿ ಕುಡಿಯುತ್ತಿದ್ದಾರೆ ದೇಹದ ಉಷ್ಣಾಂಶ ಮತ್ತು ತೇವಾಂಶ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿ ಇರುವ ವಿಷಕಾರಿ (Toxic) ಅಂಶಗಳನ್ನು ಮತ್ತು ಕಲ್ಲಿನ ಬೆಳವಣಿಗೆಗೆ ಕಾರಣವಾಗುವಂತಹ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಕರಿಸುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಾ ಬಂದರೆ ಸಣ್ಣ ಸಣ್ಣ ಕಲ್ಲುಗಳು ಮೂತ್ರದೊಂದಿಗೆ ಹೊರಹೋಗುವ ಸಾಧ್ಯತೆಯೂ ಇದೆ. ಈ ಕಾರಣದಿಂದ ಸಮರ್ಪಕವಾದ ನೀರು ಸೇವನೆ ಅತ್ಯಗತ್ಯ.

ಹುರುಳಿ: ಕಿಡ್ನಿ ಕಲ್ಲು ನಿವಾರಣೆಗೆ ಹುರುಳಿ ತುಂಬಾ ಉಪಯುಕ್ತ. ಇದು ಕಲ್ಲು ಸಂಗ್ರಹವಾಗದಂತೆ ತಡೆದು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಸಣ್ಣ ಸಣ್ಣ ಕಲ್ಲಿನ ತುಂಡುಗಳು ಮೂತ್ರದ ಮುಖಾಂತರ ಹೊರ ಬರುತ್ತದೆ.

ಎಳನೀರು: ಎಳನೀರು ಸೇವನೆಯು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಮೂತ್ರಕೋಶದ ಆರೋಗ್ಯವನ್ನೂ ಕಾಪಾಡುತ್ತದೆ. ಕಲ್ಲುಗಳಾಗುವುದನ್ನು ತಡೆಗಟ್ಟುತ್ತದೆ.

ತುಳಸಿ ಎಲೆ: ತುಳಸಿ ಸಸ್ಯವು ಒಂದು ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಎಲೆಯ ಸೇವನೆಯಿಂದ ನಮ್ಮ ದೇಹದಲ್ಲಿ ದ್ರವಾಂಶ, ಖನಿಜಾಂಶ ಮತ್ತು ಯೂರಿಕ್ ಆಮ್ಲದ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ. ದಿನದಲ್ಲಿ ಒಮ್ಮೆಯಾದರೂ ೩-೪ ತುಳಸಿ ಎಲೆಗಳನ್ನು ಅಗಿದು ತಿನ್ನಿರಿ. ಜಗಿದು ತಿನ್ನಲು ಕಷ್ಟವಾದರೆ ಅದನ್ನು ಚಹಾ, ಜ್ಯೂಸ್ ಅಥವಾ ಜೇನಿನ ಜೊತೆ ಸೇವನೆ ಮಾಡಿ. ಇದರಿಂದ ಕಿಡ್ನಿಯಲ್ಲಿ ಸಂಗ್ರಹವಾಗಿರುವ ಕಲ್ಲುಗಳು ಹೊರಹೋಗುತ್ತವೆ.

ಜೇನುತುಪ್ಪ ಮತ್ತು ಲಿಂಬೆ ರಸ: ಸ್ವಲ್ಪ ಬಿಸಿ ಇರುವ ನೀರಿಗೆ ಜೇನುತುಪ್ಪ ಮತ್ತು ಲಿಂಬೆರಸವನ್ನು ಹಾಕಿ ಕುಡಿದರೆ ಇದು ಕಿಡ್ನಿಯಲ್ಲಿ ಕಲ್ಲಾಗದಂತೆ ತಡೆಯುತ್ತದೆ. ಇದಕ್ಕೆ ಸಣ್ಣ ಪ್ರಮಾಣದಲ್ಲಿ ಕಲ್ಲುಪ್ಪು ಹಾಕಿದರೆ ಇನ್ನೂ ಉತ್ತಮವಾದ ಪರಿಣಾಮವನ್ನು ಬೀರುತ್ತದೆ. 

ಬೆಂಡೆಕಾಯಿ: ಬೆಂಡೆಕಾಯಿಯನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ಕಿಡ್ನಿಯಲ್ಲಿರುವ ರಾಸಾಯನಿಕಗಳು ಕಲ್ಲಿನ ರೂಪಕ್ಕೆ ಬರುವುದನ್ನು ತಡೆಯಬಹುದು. ಹಾಸಿಯಾಗಿ ಬೆಂಡೆಕಾಯಿಯ ಸೇವನೆ ಕಷ್ಟವಾಗುವುದರಿಂದ, ಅದನ್ನು ಪಲ್ಯ ಮಾಡಿ ತಿನ್ನುವುದು ಹಿತಕರ.

ಯಾವ ಹಣ್ಣು ಮತ್ತು ತರಕಾರಿಗಳು ಕೊಳೆತಾಗ ಅದು ಹೊಳೆಯುತ್ತವೆಯೋ ಅವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಉದಾಹರಣೆಗೆ ಬದನೆಕಾಯಿ, ಚಿಕ್ಕು, ದ್ರಾಕ್ಷೆ, ಟೊಮೆಟೋ ಇತ್ಯಾದಿ. ಆರೋಗ್ಯಕರ ಜೀವನಕ್ಕಾಗಿ ನಿಮ್ಮ ಆಹಾರ ಪದ್ಧತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳುವುದು ಇಂದಿನ ಆಧುನಿಕ ಯುಗಕ್ಕೆ ಬಹಳ ಅಗತ್ಯ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ