ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 1)

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 1)

ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹುದಾದ ಅಪಾಯದ ಸಾದ್ಯತೆ, ಇಳಿಯಲು ಹತ್ತಲು ಮೆಟ್ಟಿಲು ಇಲ್ಲದ ಪಾಳು ಬಾವಿಗಳಲ್ಲಿ ಇಳಿಯುತ್ತಿದ್ದು.. ಹೀಗೆ ಈ ಮೇಲೆ ತಿಳಿಸಿದವುಗಳಿಂದ ಅಪಾಯ ಇದ್ದೇ ಇತ್ತು. ಏನೆಲ್ಲಾ ಆದರೂ ಜೇನು ತಿನ್ನುವುದು, ಜೇನು ಹುಡುಕುವುದು ಕಡಿಮೆ ಆಗಲಿಲ್ಲ. ವರ್ಷಗಳು ಕಳೆದಂತೆ ನಾನು ಜೇನಿ‌ನ ವಿಷಯದಲ್ಲಿ ಬಹಳ ಪರಿಣಿತನಾದೆ. ನನ್ನ ಜೇನು ಕೃಷಿ ನಿರಂತರವಾಗಿ ಮುಂದುವರೆದಿತ್ತು. ಈ ಹಿಂದೆ ಜೇನು ಹುಡುಕಲು, ಜೇನು ಕೀಳಲು ಪಡುತಿದ್ದ ಪ್ರಯಾಸ ಬಹಳಮಟ್ಟಿಗೆ ಸುಧಾರಿಸಿತು. ಅನುಭವದಿಂದ ಅನೇಕ ಪಾಠಗಳನ್ನು ಕಲಿತ ನಾನು ಈ ದಿನಗಳಲ್ಲಿ ಬಹುತೇಕ Smart techniques ಬಳಸಿದೆ ಎಂದೆನ್ನಬಹುದು. ದೈಹಿಕವಾಗಿ ಮಾನಸಿಕವಾಗಿ ಒಂದಷ್ಟು ವಿಕಸನ ನನ್ನಲ್ಲೂ ಆಗಿತ್ತು. ಸಾಧ್ಯಾಸಾಧ್ಯತೆ ಗಳನ್ನು ಬಹುಬೇಗ ಗುರುತಿಸುವ ಹಂತಕ್ಕೆ ಬಂದಿದ್ದೆ. ಅದೇನೆಂದರೆ ನಾನು ಜೇನು ಬೇಕೆಂದರೇ ಗಿಡಗಂಟೆಗಳು, ಪೊದರುಗಳಲ್ಲಿ ಹುಡುಕುವ ಬದಲು ನೀರು ಇರುವ ಜಾಗಕ್ಕೆ ಮೊದಲು ಭೇಟಿಕೊಡುತ್ತಿದ್ದೆ. ಬೇಸಿಗೆಯಲ್ಲಿ ನೀರುಕುಡಿಯಲು ದಾಂಗುಡಿ ಇಡುತಿದ್ದ ನೂರಾರು ಜೇನು ಹುಳುಗಳು ನೀರಲ್ಲಿ ಮುಳುಗದ, ನೀರು ನೇರವಾಗಿ ಹುಳುಗಳ ಮೇಲೆ ಬೀಳದ ಸುರಕ್ಷಿತ ಸ್ಥಳದಲ್ಲಿ ಜೇನುಹುಳುಗಳು ನೀರು ಕುಡಿಯುತ್ತವೆ. ನಾನು ಮೊದಲು ಇಂತಹ ಜೇನುಹುಳುಗಳು ನೀರು ಕುಡಿಯುವ ಸ್ಥಳಗಳಲ್ಲಿ ನಿಂತು ಒಂದೆರಡು ನಿಮಿಷ ಆ ಹುಳುಗಳು ಯಾವ ದಿಕ್ಕಿನಿಂದ ಹಾರಿ ಬರುತ್ತವೆ ಮತ್ತು ಯಾವ ದಿಕ್ಕಿನೆಡೆಗೆ ಹಾರಿ ಹೋಗುವವು ಎಂದು ಸೂಕ್ಷ್ಮವಾಗಿ ಅವಲೋಕಿಸಿ ನೋಡುತ್ತಿದ್ದೆ. ಆ ಹುಳುಗಳು ನೀರು ಕುಡಿಯುವ ಸ್ಥಳದಿಂದ ಯಾವ ಕಡೆಗೆ ಹಾರುತ್ತಾವೋ ಆ ಕಡೆಯೇ ಅವುಗಳ ಗೂಡು..! ಕೀಟ ಸಣ್ಣದಾಗಿದ್ದರಿಂದ ಅವುಗಳು ಹಾರುವುದು ದೂರದವರೆಗೆ ಕಾಣುತ್ತಿದ್ದಿಲ್ಲವಾದರೂ ಅವು ಎತ್ತಕಡೆಗೆ ಹಾರುತ್ತಾವೆಂದು ಒಂದೆರಡು ಮೀಟರ್ ನಷ್ಟು ಕಾಣಿಸುತ್ತಿದ್ದವು. ಆ ಸರಳರೇಖೆಯಲ್ಲಿಯೇ ಅದರ ಗೂಡು. ಆ ಹುಳುಗಳು ಎತ್ತಕಡೆಗೆ ಹಾರುವವು ಎಂಬುದನ್ನು ಗಮನಿಸಿಯೇ ನಾನು ಇಂತಹ ಜಾಗದಲ್ಲೇ ಜೇನು ಇದೆ, ಇಂತಹ ಗಿಡ, ಪೊದೆಯಲ್ಲೇ ಗೂಡು ಕಟ್ಟಿದೆ ಎಂದು ದೂರದಿಂದಲೇ ನಿರ್ಧರಿಸುತ್ತಿದ್ದೆ. ಪ್ರತಿ ಗಿಡವೂ, ಪ್ರತಿ ಕೊಂಬೆ ರೆಂಬೆಯ ಚಿತ್ರಣವು ನನ್ನ ತಲೆಯಲ್ಲಿ Data ಇತ್ತು. 

ಹೀಗೆ ಗುರುತಿಸಿದ ಸ್ಥಳ ನಿಖರವಾಗಿರುತ್ತಿತ್ತಾದರೂ ಗೂಡು ಕಟ್ಟಿರುವ ಗಿಡ, ಪೊದರು ಕೆಲವೊಮ್ಮೆ ಅಲ್ಪಸ್ವಲ್ಪ ವ್ಯತ್ಯಾಸಗಳು ಇರುತಿದ್ದವು. ಈ ಮೊದಲಿನಂತೆ ಕಿಲೋಮೀಟರ್ ಗಟ್ಟಲೇ ಬಿಸಿಲಲ್ಲಿ ನಡೆಯುವುದು ತಪ್ಪಿ Location ತಿಳಿದು ನೇರವಾಗಿ ಜೇನು ಕಿತ್ತುತರಲು ಹೋಗುತ್ತಿದ್ದೆ. ಹುಳುಗಳು ನೀರು ಕುಡಿಯುವ ಸ್ಥಳದಲ್ಲಿ ಕೂರುತ್ತಿದ್ದ ಹುಳುಗಳ ಪ್ರಮಾಣ ನೋಡಿಯೇ ಎಷ್ಟು ಜೇನು ಗೂಡಿನ ಹುಳುಗಳು ಎಂದು ಅಂದಾಜು ಮಾಡುತ್ತಿದ್ದೆ. ಕೆಲವೊಮ್ಮೆ ನಾನು ಹೋಗಲು ಸಾಧ್ಯವಾಗದೇ ಹಾಸ್ಟೆಲ್ ಗೆ ಹೋಗುವ ಸಂದರ್ಭಗಳಲ್ಲಿ ಅಮ್ಮ ಅಪ್ಪನಿಗೆ ಇಂತಹ ಸ್ಥಳದಲ್ಲಿ ಎಲ್ಲೋ ಜೇನು ಇದಾವೆ. ಯಾವಾಗಲಾದರೂ ಹೋದಾಗ ಕಿತ್ತುಕೊಂಡು ಬನ್ನಿ ಅಂತ ಹೇಳಿ ಹೋಗುತಿದ್ದೆ. ಒಂದುವೇಳೆ ನಾನು ಅಂದಾಜಿಸಿದ ಸ್ಥಳದಲ್ಲಿ ಜೇನು ಕಾಣದೇ ಇದ್ದರೇ ಅದೇ ಸರಳ ರೇಖೆಯಲ್ಲಿ ಹಿಂದೆ ಮುಂದೆ ನೋಡಿದರೆ ಜೇನು ಸಿಕ್ಕೆ ಸಿಗುತ್ತಿತ್ತು.

ಆಗಿನ ದಿನಗಳಲ್ಲಿ ಅತೀ ಹೆಚ್ಚು ಜೇನು ತಿನ್ನುತ್ತಿದ್ದ ನಾನು ನರಪೇತಲನಾಗಿ ಕಾಣುತ್ತಿದ್ದೆ. ಆ ಸಪೂರ ದೇಹದಿಂದಲೇ ಎಂಥಹ ಮರವನ್ನಾದರೂ ಹತ್ತುವುದಕ್ಕೆ ಅನುಕೂಲವಾಗಿತ್ತು. ಆ ದಿನಗಳಲ್ಲಿ ನನ್ನ ಕಣ್ಣಿಗೆ ಬಿದ್ದ ಯಾವ ಜೇನನ್ನು ಕಿತ್ತು ತಿನ್ನದೇ ಬಿಡುತ್ತಿರಲಿಲ್ಲ. ಅದನ್ನು ತೆಗೆಯಲು ಬೇಕಾಗುವ ಪರಿಕರಗಳನ್ನು ಅಥವಾ ಸಹಾಯಕ್ಕಾಗಿ ಇತರೆ ಯಾರಾದರೂ ಬೇಕೆಂದರೂ ಕರೆದು ಕೊಂಡಾದರೂ ತೆಗೆಯದೇ ಬಿಡುತ್ತಿರಲಿಲ್ಲ. ಎಷ್ಟೇ ಜೇನು ತೆಗೆದರೂ ಆರಂಭದ ದಿನಗಳನ್ನು ಹೊರತು ಪಡಿಸಿ ಇತರರ ಸಹಾಯ ಪಡೆದದ್ದು ತುಂಬಾ ಕಡಿಮೆಯೇ. ಬೇರೆಯವರು ನೋಡಿದ ಜೇನುಗಳನ್ನು ತೆಗೆಯಲು ನನ್ನ ಸಹಾಯವನ್ನು ಇತರರು ಪಡೆದುಕೊಳ್ಳುತ್ತಿದ್ದರು. ಆದರೆ ನಾನು ಏಕಾಂಗಿಯಾಗಿ ಜೇನುತೆಗೆದಿರುವ ದಿನಗಳೇ ಹೆಚ್ಚು.

ನಮ್ಮ ಪ್ರದೇಶದಲ್ಲಿ 1960 ರ ದಶಕದಲ್ಲಿ ಅವರವರು ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಕೃಷಿ ಮಾಡಲು ನೀರಿಗಾಗಿ ಅವರವರ ಶಕ್ತಾನುಸಾರ ಬಾವಿಗಳನ್ನು ತೋಡಿಸಿಕೊಂಡಿದ್ದರು. ಈ ಮೊದಲು ನದಿ, ಹಳ್ಳ ಕಾಲುವೆಗಳಲ್ಲಿ ಹರಿಯುವ ನೀರನ್ನು ಅವಲಂಬಿಸಿದ್ದ ನಾಗರೀಕತೆ ಹಳ್ಳದಲ್ಲಿ ನೀರು ಬತ್ತಿದಾಗ ನೀರಿಗಾಗಿ ಕಂಡುಕೊಂಡ ಸರಳ ವಿಧಾನವೇ ಈ ಬಾವಿ ತೋಡುವ ಮೂಲಕ ನೀರನ್ನು ಕಂಡುಕೊಂಡಿದ್ದು. ಬಾವಿಗಳನ್ನು ಚಿತ್ರದುರ್ಗ ಸುತ್ತಮುತ್ತಲಿನಲ್ಲಿ ಸಾಮಾನ್ಯವಾಗಿ ಮೂವತ್ತು ನಲವತ್ತು ಅಡಿ ಆಳ ಮತ್ತು ಅಗಲದ ಬಾವಿಯಲ್ಲಿ ಹತ್ತು ಹನ್ನೆರಡು ಅಡಿ ಆಳದಲ್ಲೇ ಹತ್ತಾರು ಎಕರೆಗೆ ಉಣಿಸಬಹುದಾದ ನೀರು ಸಿಗುತ್ತಿತ್ತು ಎಂದರೆ ಅಂತರ್ಜಲದ ಸಮೃದ್ಧಿ ಎಷ್ಟಿತ್ತು ಎಂದು ಅಂದಾಜಿಸಬಹುದು. ನಮ್ಮ ಚಿಕ್ಕಪ್ಪ ಹೇಳುವ ಪ್ರಕಾರ ಕೇವಲ ಹತ್ತು ಹದಿನೈದು ಅಡಿ ಆಳದಲ್ಲಿ ಬಾವಿಗೆ ಹರಿದು ಬರುತ್ತಿದ್ದ ನೀರಿನ ಹರಿವಿನ ರಭಸ ಈಜಾಡಲು ಹೋದವರನ್ನು ರಭಸದಿಂದ ಹಿಂದಕ್ಕೆ ತಳ್ಳುತ್ತಿತ್ತಂತೆ...!! ಈ ಮಾತು ನಾನು ಕೇಳಿದಾಗಿನಿಂದಲೇ ನನಗೆ ಈ ಬಾವಿಗಳ ಬಗ್ಗೆ ಕೌತುಕ ಉಂಟಾಗಿದ್ದು. ಅಂದಿನಿಂದ ನಾನು ಯಾವುದೇ ತೋಟ ಹೊಲಗದ್ದೆಗಳಿಗೆ ಹೋಗಲಿ ಮೊದಲು ನಾನು ಬೇಟಿಕೊಡುತ್ತಿದ್ದುದು ಅಲ್ಲಿನ ಬಾವಿಗಳ ಬಳಿ...! ಅದು ಪಾಳುಬಾವಿ ಯಾಗಿದ್ದರೂ..‌! ನನಗೆ ಬುದ್ಧಿ ಬರುವ ವೇಳೆಗೆ ನಾನು ನೋಡಿದ ಬಹುತೇಕ ಬಾವಿಗಳಲ್ಲಿ ನೀರು ತಳ ಕಂಡಿತ್ತು. 

ಬಹುತೇಕ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಕೆಲವೇ ವರ್ಷಗಳ ಹಿಂದೆ ಬಳಕೆಯಲ್ಲಿದ್ದ ತಾಜಾತನದ ಕುರುಹುಗಳು ಮಾತ್ರ ಉಳಿದಿದ್ದವು. ಉಳ್ಳವರಾದ ಕೆಲವರು ಆಳಕ್ಕೆ ಕುಸಿದ ಅಂತರ್ಜಲ ತೆಗೆಯಲು ಬಾವಿಯಲ್ಲೇ ಕೊಳವೆ ಬಾವಿಯನ್ನು ತೋಡಿಸಿ ಇನ್ನೂ ಆಳಕ್ಕೆ ಸೇರಿಹೋಗಿದ್ದ ನೀರನ್ನು ಎತ್ತುವ ಸಾಹಸಕ್ಕೆ ಕೈ ಹಾಕಿದ್ದರು.ಇನ್ನೂ ಬಹುತೇಕರು, ಬಾವಿಯಲ್ಲಿ ನೀರು ಹೋದವು ಎಂದು ತೋಟದಲ್ಲಿ ಬೆಳೆಸಿದ್ದ ತೆಂಗು, ಕಂಗು (ಅಡಕೆ), ಬಾಳೆ, ಮಾವು, ಹಲಸು ಎಲ್ಲವೂ ದಿನದಿಂದ ದಿನಕ್ಕೆ ಒಣಗಿ ಹಿಂದೊಂದು ದಿನ ತೋಟ ಇತ್ತು ಎನ್ನುವ ಮುಖಚರ್ಯೆಯೇ ಅಳಿದು ಹೋಯಿತು. ನದಿ ಹಳ್ಳದೊಂದಿಗೆ ಬೆಸೆದಿದ್ದ ಮನುಷ್ಯನ ನಾಗರೀಕತೆಯ ಸಂಬಂಧ ಬಾವಿಯೊಂದಿಗೆ ಬೆಸೆದು ಬಾವಿಯ ನೀರು ಬತ್ತಿದ ಮೇಲೆ ಮೇಟಿ ಹಿಡಿದು ದನಕರುಗಳ ಸಾಕಿ ಹಾಲು, ಮೊಸರು, ತುಪ್ಪದಲ್ಲಿ ಕೈ ತೊಳೆಯುತ್ತಿದ್ದ ಮನುಷ್ಯರು ತಲಾ ತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದ ಪದ್ಧತಿ, ಸಂಸ್ಕೃತಿಯ ನಾಶ ಆಗಿ ಇಂದಿನ ನಗರೀಕರಣ, ಕೈಗಾರಿಕೀಕರಣ, ನಿರುದ್ಯೋಗದ ಸಮಸ್ಯೆ, ಇನ್ನಿತರೆ ಪರೋಕ್ಷ ಸಾಮಾಜಿಕ ಸಮಸ್ಯೆಗಳ ಪಾಳುಬಾವಿಗೆ ಬಿದ್ದು ತೊಳಲಾಡುತ್ತಿರುವ ಇಂದಿನ ಸಮಾಜವನ್ನು ಕಣ್ಣಾರೆ ಕಾಣುತ್ತಿರುವುದು ದುರಂತ ಸಂಗತಿಯಾಗಿದೆ.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ; ಇಂಟರ್ನೆಟ್ ತಾಣ