ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 2)

ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 2)

ವಿಶ್ವದ ಅತೀ ಎತ್ತರದ ಗ್ರ್ಯಾಂಡ್ ಸ್ಟೀಮ್ ಬೋಟ್ ಗೀಸರ್: ಗ್ರ್ಯಾಂಡ್ ಸ್ಟೀಮ್ ಬೋಟ್ ಗೀಸರ್( ಬಿಸಿ ನೀರಿನ ಬುಗ್ಗೆ ) ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಚೈತನ್ಯ ಶೀಲ ಬೀಸಿ ನೀರಿನ ಬುಗ್ಗೆ. ಇದಕ್ಕೆ ಬಿಸಿನೀರನ್ನು ಉಗಿಯುವ ಎರಡು ಬಾಯಿಗಳಿವೆ. ಇವು ಪರಸ್ಪರ 20 ಅಡಿ ಅಂತರದಲ್ಲಿವೆ. ಅದರಲ್ಲಿ ನಮ್ಮ ಅತ್ಯಂತ ದೊಡ್ಡ ಬುಗ್ಗೆ ಹೊರಹೊಮ್ಮುವುದು ಉತ್ತರ ದಿಕ್ಕಿನ ಬಾಯಿಯಿಂದ. ಇದು ಸುಮಾರು 300 ರಿಂದ 400 ಅಡಿ ಎತ್ತರದವರೆಗೂ ನೀರನ್ನು ಚಿಮ್ಮಿದ್ದನ್ನು ನಾವು ಕಣ್ಣಾರೆ ಕಂಡೆವು. ಇದರ ರುದ್ರ ನರ್ತನ ಸುಮಾರು ಹತ್ತು  ನಿಮಿಷಗಳ ಕಾಲ ಮುಂದುವರೆಯಿತು. ಅಲ್ಲಿದ್ದ ಎಲ್ಲಾ ಪ್ರವಾಸಿಗರೂ ಈ ದೃಶ್ಯವನ್ನು ಮಂತ್ರ ಮುಗ್ಧರಾಗಿ ನೋಡುತ್ತಿದ್ದರು. ಇದು ಮೂರು ದಿನಗಳಿಂದ 50 ವರ್ಷಗಳವರೆಗಿನ ಕಾಲಾವಧಿಯಲ್ಲಿ ಯಾವಾಗಲಾದರೂ ಬಿಸಿ ನೀರ ಚಿಲುಮೆ ಪುನರಾವರ್ತಿಸಬಹುದು. (ಚಿತ್ರ 1)

ನಂಬಿಗಸ್ಥ ಓಲ್ಡ್ ಫೈತ್ ಗೀಸರ್: ಇದೊಂದು ಅತ್ಯಂತ ನಂಬುಗೆಯ ಅಥವಾ ವಿಶ್ವಾಸದ ಬಿಸಿ ನೀರಿನ ಚಿಲುಮೆ; ಅದಕ್ಕೆಂದೇ ಈ ಹೆಸರು. ಇದು ಪ್ರತಿ 44 ನಿಮಿಷ ಹಾಗೂ ಎರಡು ಗಂಟೆಗಳ ಅವಧಿಯ ಒಳಗೆ ಚಿಲುಮೆಯನ್ನು ಪುನರಾವರ್ತಿಸಿ ಬಿಡುತ್ತದೆ. ಇದನ್ನು 1870 ರಲ್ಲಿ ಸರ್ವೇಕ್ಷಣೆಯ ತಂಡ ಪತ್ತೇ ಹಚ್ಚಿತು.ಇದು ಸುಮಾರು 100 ರಿಂದ 180 ಅಡಿ ಎತ್ತರಕ್ಕೆ ಚಿಮ್ಮಬಲ್ಲದು. ಇದರ ಬಾಯಿ ಶಂಕುವಿನಾಕೃತಿಯನ್ನು ಹೊಂದಿದೆ. ಇದು ತನ್ನ ಒಂದು ಬಾರಿಯ ಉಗಿತದಲ್ಲಿ ಸುಮಾರು  3,700 ರಿಂದ 8,400 ಗ್ಯಾಲನ್ ನೀರನ್ನು ಹೊರಹಾಕುತ್ತದೆ. (ಚಿತ್ರ 2)

ಇವುಗಳನ್ನು ನೋಡಲು ಇಲ್ಲಿ ಎಲ್ಲಾ ಕಡೆ ಪುಟ್ಟ ಮರದ ಅಟ್ಟಣಿಗೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ಹೊರಚೆಲ್ಲಿದ ನೀರು ಸುಣ್ಣದ ಅಂಶವನ್ನು ಹೊಂದಿರುವುದರಿಂದ ಇಲ್ಲಿಯ ನೆಲವೆಲ್ಲಾ ಬೆಳ್ಳಗಾಗಿ ಹೋಗಿದೆ. ಈ ಪ್ರದೇಶದಲ್ಲಿ ಯಾವ ಸಸ್ಯವೂ ಬೆಳೆಯುವುದಿಲ್ಲ. ದೂರದಲ್ಲಿ ಮಾತ್ರ ದಟ್ಟವಾದ ಕಾಡು ಗೋಚರಿಸುತ್ತಿತ್ತು. ಇಂತಹ ಅದ್ಭುತ ದೃಶ್ಯಗಳನ್ನು ನೋಡಲು ಜೀವಮಾನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಬರಬೇಕು!

ಕೋಟೆಯಂತೆ ಕಾಣುವ ಕ್ಯಾಸೆಲ್ ಗೀಜರ್: ಇದೊಂದು ಶಂಕುವಿನಾಕೃತಿಯ ಬಿಸಿ ನೀರಿನ ಬುಗ್ಗೆ. ನಾವು ಹೋದಾಗ ಯಾಕೋ ಇದು ಪ್ರಶಾಂತವಾಗಿತ್ತು. ಆದರೆ ಬುಸುಗುಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಯಾವ ಕ್ಷಣದಲ್ಲಾದರೂ ಇದು ಕೆರಳಬಹುದೆಂಬ ಭಯ ನಮ್ಮನ್ನು ಆವರಿಸಿತ್ತು! (ಚಿತ್ರ 3)

ಇದರ ಸುತ್ತಲೂ ಸುಣ್ಣದ ಕಲ್ಲಿನ ಪುಟ್ಟ ಬೆಟ್ಟವೇ ಸುತ್ತುವರೆದಿತ್ತು. ಇದು ಪುಟ್ಟ ಕೋಟೆಯಂತೆಯೇ ಕಾಣುತ್ತಿತ್ತು.ಇದು ಸುಮಾರು100 ಅಡಿಯವರೆಗೂ ಮೇಲಕ್ಕೆ ಚಿಮ್ಮುವುದಂತೆ. ಇದೂ ಕೂಡಾ 15 ರಿಂದ 17 ಗಂಟೆಗಳ ಅವಧಿಯಲ್ಲಿ ಪುನರಾವರ್ತಿಸುವುದಂತೆ. ಅದು ಚಿಮ್ಮುವುದೇನೋ ಎಂದು ನಾವು ಸುಮಾರು ಅರ್ಧಗಂಟೆ ಕಾದೆವು. ಆದು ನಮ್ಮ ಕಾಯುವಿಕೆಯನ್ನು ಮಾನ್ಯ ಮಾಡಲಿಲ್ಲ. ನಾವು ನಿರಾಸೆಯಿಂದ ಅಲ್ಲಿಂದ ಹೊರಟೆವು.

ಅಲ್ಲೇ ಸನಿಹದಲ್ಲಿ ಒಂದು ದೊಡ್ಡ ಗಿಫ್ಟ್ ಐಟಂ ಮಾರಾಟದ ಮಳಿಗೆ ಇತ್ತು. ಆಲ್ಲಿ ಸುತ್ತಾಡಿ ನಂತರ ಒಂದು ಪುಟ್ಟ ಥಿಯೆಟರ್ ನಲ್ಲಿ ಯೆಲ್ಲೋಸ್ಟೋನ್ ಇತಿಹಾಸದ ಒಂದು ಡಾಕ್ಯುಮೆಂಟರಿ ಸಿನಿಮಾವನ್ನೂ ನೋಡಿದೆವು; ಹೆಚ್ಚಿನ ಮಾಹಿತಿ ದೊರೆಯಿತು.

(ಇನ್ನೂ ಇದೆ)

ಚಿತ್ರ ಮತ್ತು ಬರಹ : ಕೆ. ನಟರಾಜ್, ಬೆಂಗಳೂರು