ವಿವಾದದ ರಾಜ ಪಿತ್ರೋಡಾ

ವಿವಾದದ ರಾಜ ಪಿತ್ರೋಡಾ

ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡಾ ವಿವಾದಗಳ ರಾಜನಾಗಿ ಮೂಡಿಬರುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಅಮೇರಿಕದ ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನೂ ಭಾರತದಲ್ಲೂ ಜಾರಿಗೊಳಿಸಬೇಕೆಂಬ ರೀತಿಯಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದ ಪಿತ್ರೋಡಾ ಇದೀಗ ಭಾರತೀಯರನ್ನು ಜನಾಂಗೀಯ ಮಾದರಿಯಲ್ಲಿ ವಿಭಜಿಸಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಭಾರತವು ವೈವಿಧ್ಯತೆಗಳಿಂದ ತುಂಬಿದ ದೇಶವಾಗಿದೆ ಎಂದು ವಿವರಿಸುವ ಭರದಲ್ಲಿ ಅವರು, ಈಶಾನ್ಯ ಭಾರತೀಯರು ಚೀನಿಯರಂತೆ ಕಾಣುತ್ತಾರೆ, ದಕ್ಷಿಣ ಭಾರತೀಯರು ಆಫ್ರಿಕ್ಕನ್ನರಂತೆ ಕಾಣುತ್ತಾರೆ, ಉತ್ತರ ಭಾರತೀಯರು ಬಿಳಿಯರಂತೆ ಮತ್ತು ಪಶ್ಚಿಮ ಭಾರತೀಯರು ಅರಬ್ಬರಂತೆ ಕಾಣುತ್ತಾರೆ ಎಂಬುದಾಗಿ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸಹಜವಾಗಿಯೇ ಪಿತ್ರೋಡಾ ಹೇಳಿಕೆಗೆ ದೇಶದಾದ್ಯಂತ ಖಂಡನೆಗಳು, ಟೀಕೆಗಳು ವ್ಯಕ್ತವಾಗಿವೆ.

ಪಿತ್ರೋಡಾ ಒಂದು ರೀತಿಯಲ್ಲಿ ಕಾಂಗ್ರೆಸ್ಸಿನ ಮಾನಸಿಕತೆಯನ್ನೇ ಪ್ರತಿಬಿಂಬಿಸುತ್ತಿದ್ದಾರೆನ್ನುವುದು ತಪ್ಪಲ್ಲ. ಕಾಂಗ್ರೆಸಿಗರು ಭಾರತವನ್ನು ಕಾಣುವ ರೀತಿಯೇ ಇಂತಹುದು. ಮಾತಿನಲ್ಲಿ ಭಾರತದ ಏಕತೆಯ ಕುರಿತಂತೆ ಮಾತನಾಡಿದರೂ ಅಂತರ್ಯದಲ್ಲಿ ಭಾರತೀಯರನ್ನು ವಿವಿಧ ರೀತಿಯಲ್ಲಿ ವಿಭಜಿಸಿಯೇ ನೋಡುವ ಸ್ವಭಾವವಿದು. ಉಳಿದೆಲ್ಲರಿಗೆ ದೇಶದ ಯಾವುದೇ ಭಾಗದ ಜನಋಉ ಕೇವಲ ‘ಭಾರತೀಯರಂತೆ' ಕಂಡು ಬಂದರೆ ಇವರಿಗೆಲ್ಲ ಒಂದೊಂದು ಭಾಗದ ಜನರು ಭಿನ್ನವಾಗಿ ಕಂಡುಬರುತ್ತಾರೆ. ಬೇರೆ ಬೇರೆ ಭಾಷೆ, ಮತಧರ್ಮಗಳವರೂ ಇವರ ಕಣ್ಣಿನಲ್ಲಿ ಬೇರೆಬೇರೆಯವರಾಗಿಯೇ ತೋರಿಬರುತ್ತಾರೆ. ಹಾಗೆ ಪ್ರತ್ಯೇಕವಾಗಿ ವಿಭಜಿಸುವುದರಲ್ಲೇ ಅವರು ರಾಜಕೀಯ ಲಾಭವನ್ನೂ ಪಡೆಯಲೆತ್ನಿಸುತ್ತಾರೆ. ಉತ್ತರ ಭಾರತ, ದಕ್ಷಿಣ ಭಾರತ ಮತ್ತು ಪೂರ್ವ ಭಾರತದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಪೋಷಿಸುವುದರಲ್ಲೇ ಲಾಭ ಕಾಣುವ ಪಿತ್ರೋಡಾನಂತವರಿಗೆ ಬೇರೆ ಬೇರೆ ಭಾಗದ ಜನರು ವಿಭಿನ್ನ ರೀತಿಯಲ್ಲಿ ಕಂಡುಬರುವುದರಲ್ಲಿ ಆಶ್ಚರ್ಯವಿಲ್ಲ. ಇದೇ ಪಿತ್ರೋಡಾ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ‘ರಾಜಕೀಯ ಗುರು' ಆಗಿರುವಾಗ ರಾಹುಲ್ ಗಾಂಧಿಯ ಹಲವಾರು ಉಪದ್ವ್ಯಾಪದ ಮಾತುಗಳ ಮೇಲೂ ಅವರ ಪ್ರಭಾವವಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ವಿದೇಶಗಳಲ್ಲಿ ರಾಹುಲ್ ಅಸಂಬದ್ಧಗಳಹುವುದಕ್ಕೂ ಇದೇ ಪಿತ್ರೋಡಾ ಕಾರಣರು ಎಂದು ನಿರ್ವಿವಾದವಾಗಿ ಹೇಳಬಹುದು. ಏಕೆಂದರೆ ವಿದೇಶಗಳಲ್ಲಿ ರಾಹುಲ್ ರ ಸಂದರ್ಶನ, ವಿಚಾರ ಸಂಕಿರಣಗಳನ್ನು ಆಯೋಜಿಸುವವರು ಇದೇ ಸ್ಯಾಮ್ ಪಿತ್ರೋಡಾ. ಇಂತಹವರನ್ನು ಕಾಂಗ್ರೆಸ್ ಇನ್ನೂ ತನ್ನ ಉನ್ನತ ಹುದ್ದೆಯಲ್ಲಿ ಅಲಂಕರಿಸಿಟ್ಟುಕೊಂಡಿರುವುದು ಅಚ್ಚರಿಯೇ ಸರಿ

(ಕೊನೇ ಸುದ್ದಿ: ಸ್ಯಾಮ್ ಪಿತ್ರೋಡಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಇತ್ತೀಚಿನ ಸುದ್ದಿ.)

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೯-೦೫-೨೦೨೪

ಚಿತ್ರ ಕೃಪೆ : ಅಂತರರ್ಜಾಲ ತಾಣ