ಸ್ಟೇಟಸ್ ಕತೆಗಳು (ಭಾಗ ೯೬೦)- ನಂಬಿಕೆ

ಸ್ಟೇಟಸ್ ಕತೆಗಳು (ಭಾಗ ೯೬೦)- ನಂಬಿಕೆ

ಮನೆಯಲ್ಲಿ ತರಾತುರಿಯ  ಕೆಲಸವನ್ನು ಬೇಗ ಬೇಗನೆ ಮುಗಿಸಿ ಆ ದಿನ ಮಾಡಬೇಕಿದ್ದ ಕೆಲಸದ ಕಡೆಗೆ ಹೊರಡಲು ತಯಾರಾದರು. ಮಗನನ್ನು ತಯಾರು ಮಾಡಿ ಗಂಡ ಹೆಂಡತಿ ಇಬ್ಬರೂ ಅವನನ್ನು ಶಾಲೆಗೆ ಸೇರಿಸುವುದಕ್ಕೆ ನಡೆದೇಬಿಟ್ರು. ಅಂತಸ್ತುಗಳ ಕಟ್ಟಡ, ಒಳಗೆ ವಿವಿಧ ವಿನ್ಯಾಸದ ತರಗತಿಗಳು, ಅವುಗಳ ವಿಶೇಷಗಳನ್ನ ಬಿತ್ತರಿಸುವ ದೊಡ್ಡ ದೊಡ್ಡ ಜಾಹೀರಾತುಗಳು, ಸಾಧನೆಯ ದೊಡ್ಡ ದೊಡ್ಡ ಚಿತ್ರಗಳು, ಇವೆಲ್ಲವನ್ನ ನೋಡಿಕೊಂಡು ಆ ಶಾಲೆಯ ದಾಖಲಾತಿಗಾಗಿ ಸರತಿ ಸಾಲಿನಲ್ಲಿ ನಿಂತು ಬಿಟ್ಟರು. ಬಿಸಿಲು ಏರಿ ಬೆವರು ಇಳಿದರೂ ಸಹ ಸಾಲಿನಿಂದ ಹಿಂದೆ ಸರಿಯಲಿಲ್ಲ. ಮಗನನ್ನ ದಾಖಲಾತಿ ಮಾಡಿಸಲೇಬೇಕಿತ್ತು. ಕಷ್ಟಪಟ್ಟು ಹಲವು ಲಕ್ಷಗಳನ್ನು ಸೇರಿಸಿಬಿಟ್ಟರು. ಇನ್ನು ಮಗನ ಜೀವನ ಅದ್ಭುತವಾಗಿರುತ್ತೆ ಅನ್ನುವ ನಂಬಿಕೆಯಿಂದ ತಮ್ಮ ಕೆಲಸ ಕಡೆಗೆ ಹೊರಟು ಬಂದರು. ಆ ಶಾಲೆಗಿಂತ ಎರಡು ಕಿಲೋಮೀಟರ್ ದೂರದ ಪುಟ್ಟ ಹಳ್ಳಿಯ ಸರಕಾರಿ ಶಾಲೆಯಲ್ಲಿ ಅವರು ಅಧ್ಯಾಪಕರು ಆಗಿದ್ದರು. ತಮ್ಮ ಶಾಲೆಯ ಕಡೆಗೆ ತೆರಳಿ, ಆ ಶಾಲೆಗೆ ಸೇರಿಸುವುದಕ್ಕೆ ಬರುವ ತಂದೆ ತಾಯಿಗಳಲ್ಲಿ ಬನ್ನಿ ನಿಮ್ಮ ಮಕ್ಕಳ ಅದ್ಭುತ ಬದುಕಿಗಾಗಿ ಈ ಶಾಲೆಗೆ ಸೇರಿಸಿ, ಎಲ್ಲವೂ ಅವರಿಗೆ ಉಚಿತವಾಗಿ ಸಿಗುತ್ತದೆ ಅನ್ನುವ ಮಾತನಾಡುತ್ತಾ ಒಂದಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಬಿಟ್ರು. ಅವರ ಮಗನನ್ನ ಪ್ರತಿದಿನ ಖಾಸಗಿ ಶಾಲೆಗೆ ಬಿಟ್ಟು ತನ್ನ ಮಗನನ್ನ ಇದೇ ಶಾಲೆಗೆ ಸೇರಿಸುವ ಅವರ ಡ್ರೈವರ್ ನ ಮುಖದಲ್ಲಿ ಒಂದು ತಿರಸ್ಕಾರ ಭಾವವು ಮೂಡಲಾರಂಭಿಸಿತು, ಪರಿಸ್ಥಿತಿಯ ಕ್ರೂರತೆಯನ್ನು ನೆನೆದು ಡ್ರೈವರ್ ಸುಮ್ಮನೆ ತಣ್ಣಗಾಗಿ ಬಿಟ್ರು... ನಂಬಿಕೆ ಹೇಗೆ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ