#ಅಮರಾವತಿ

#ಅಮರಾವತಿ

#ಅಮರಾವತಿ
ಒಮ್ಮೆ ಯೋಚಿಸಿ. ಬೆಳಗೆದ್ದು ಬೇಗ ಬೇಗ ವ್ಯಾಯಾಮ, ನಡಿಗೆ, ಸ್ನಾನ ಮುಗಿಸಿ ಕಚೇರಿಯ ಅರ್ಜೆಂಟ್ ಮೀಟಿಂಗ್ ಅಟೆಂಡ್ ಮಾಡಬೇಕು ಅಂದುಕೊಂಡಿದ್ದೀರಿ, ಧಾವಂತದಿಂದ ಶೌಚಾಲಯಕ್ಕೆ ಹೋಗುತ್ತೀರಿ. ಶೌಚಾಲಯದ ಪೈಪು ಕಟ್ಟಿಕೊಂಡಿರುತ್ತದೆ!!... ಛೆ.. ಮೂಡೆಲ್ಲಾ ಹಾಳು...!! ತಕ್ಷಣ ಬಿಬಿಎಂಪಿಗೊಂದು ಕರೆ ಮಾಡಿ ದೂರು ದಾಖಲಿಸುತ್ತೀರಿ, ಅವರು ಬರುವವರೆಗೂ ಏನೂ ಸಾಧ್ಯವಿಲ್ಲವಲ್ಲ ...!! ಕೊನೆಗೊಮ್ಮೆ ಉದ್ದದ ಬಿದಿರು ಗಳು ಎತ್ತಿಕೊಂಡು ಬಂದು ಕ್ಲೀನ್ ಮಾಡಿ ಹೋದವ ನಿಮ್ಮ ಪಾಲಿಗೆ ಅಕ್ಷರಶಃ ದೇವರಾಗುತ್ತಾನೆ, ನಿಮ್ಮ ದೈನಂದಿನ ಕಾರ್ಯಕ್ರಮಗಳು ಇನ್ನು ನಿರ್ವಿಘ್ನವಾಗಿ ಸಾಗುತ್ತವೆ.. ಬಿಗಿದಿದ್ದ ಮುಖದಲ್ಲಿ ಈಗ ಸಮಾಧಾನದ ಮುಗುಳ್ನಗೆ ಬಿರಿಯುತ್ತದೆ ಅಲ್ಲವೇ ....

ಹೀಗೆ ನಮ್ಮೆಲ್ಲರ ತ್ಯಾಜ್ಯಗಳನ್ನೂ ಸ್ವಚ್ಛಗೊಳಿಸಿ ನಮ್ಮಗಳ ಜೀವನವನ್ನು ಸಹನೀಯವನ್ನಾಗಿಸುವ ಪಾತ್ರ ಪೌರ ಕಾರ್ಮಿಕರದು. ಆದರೆ ಇವರ ಪಾಡು ಮಾತ್ರ ದೇವರಿಗೇ ಪ್ರೀತಿ..!! :( ಇತ್ತೀಚೆಗೆ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ೩ ಪೌರ ಕಾರ್ಮಿಕರು ಉಸಿರುಕಟ್ಟಿ ಸತ್ತ ಸುದ್ದಿ ಓದಿರಬಹುದು. ೮ ರಿಂದ ೧೫ ಅಡಿ ಆಳವಿರುವ ಈ ಕೊಳಚೆಗುಂಡಿಗಳಲ್ಲಿ 'ಮೀಥೇನ್' ಎಂಬ ಅನಿಲ ಉತ್ಪತ್ತಿಯಾಗುತ್ತದೆ. ಇದು ವಿಷವಲ್ಲವಾದರೂ ಗಾಳಿಯಲ್ಲಿ ಆಮ್ಲಜನಕ ಕಡಿಮೆ ಮಾಡಿ ಉಸಿರುಗಟ್ಟಿಸಬಲ್ಲ ಸಾಮರ್ಥ್ಯವಿರುವಂಥದ್ದು. ಯಾವುದೇ ಮುನ್ನೆಚ್ಚರಿಕೆಯ ವಿಧಾನಗಳನ್ನು ಅನುಸರಿಸದೆ ಅಂದರೆ ಕಾಲಿಗೆ ಗಮ್ ಬೂಟುಗಳು, ಕೈಗೆ ಕೈ ಗವಸುಗಳು, ಕಣ್ಣಿಗೆ ರಕ್ಷಣೆ ನೀಡುವ ಕನ್ನಡಕಗಳು ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಕೆಲಸಗಾರರ ಜೀವಹಾನಿ ಆಗುತ್ತಲೇ ಇದೆ. ಮುಕ್ಕಾಲು ಭಾಗ ಕಾರ್ಮಿಕರು ಬೇರೆ ರಾಜ್ಯದಿಂದ ವಲಸೆ ಬಂದು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು. ವರ್ಷದಿಂದ ವರ್ಷಕ್ಕೆ ಈ ಮ್ಯಾನ್ ಹೋಲ್ ದುರಂತಗಳು ಹೆಚ್ಚಾಗುತ್ತಿದ್ದರೂ ಖಾಯಂ ಕೆಲಸಗಾರರಲ್ಲದ ಕಾರಣ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಪ್ರಾಣಹಾನಿ ಆದರೂ ಯಾವುದೇ ಸೌಲಭ್ಯಗಳು ದೊರೆತಿಲ್ಲ.

ಈ ದಿಸೆಯಲ್ಲಿ ಇದೇ ಕಥಾ ವಸ್ತುವನ್ನಿಟ್ಟುಕೊಂಡ 'ಅಮರಾವತಿ' ಚಿತ್ರದ ನಿರ್ದೇಶಕರಾದ ಗಿರಿರಾಜ್ ಅವರು, ತೀರಿಕೊಂಡ ಮೂರು ಜನರ ಕುಟುಂಬಕ್ಕೆ ಹಣಸಹಾಯ ಮಾಡುವ ಉದ್ದೇಶದಿಂದ ಈ ಚಿತ್ರದ ಒಂದು ಶೋ ಇಟ್ಟುಕೊಂಡಿದ್ದರು. ಎಫ್ಬಿ, ವಾಟ್ಸಾಪ್ಗಳಲ್ಲಿ ಸಂದೇಶ ಹರಿಯಬಿಟ್ಟಿದ್ದರು. (ಈ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಸಂದೇಶ ಹಂಚಿಕೊಂಡಿದ್ದೆ.) ಚಿತ್ರ ನೋಡಿ ಕೈಲಾದಷ್ಟು ಧನ ಸಹಾಯ ಮಾಡಿ- ಎನ್ನುವುದು ಅವರ ಕೋರಿಕೆಯಾಗಿತ್ತು. ಅದಕ್ಕೆ ಸ್ಪಂದಿಸಿ ನಾನು ಕುಟುಂಬದೊಂದಿಗೆ ಸಂತ ಜೋಸೆಫ್ ಕಾಲೇಜಿನ ಆವರಣದಲ್ಲಿ ನಿನ್ನೆ ಹೋಗಿ ಸಿನಿಮಾ ನೋಡಿ ನನ್ನ ಕೈಲಾದ ಧನಸಹಾಯ ಮಾಡಿ ಬಂದೆ.
ಇನ್ನು ಚಿತ್ರದ ಬಗ್ಗೆ : ಒಳ್ಳೆಯ ಕಥಾಹಂದರ. ನಿರ್ದೇಶಕ ಗಿರಿರಾಜ್ ಅವರಿಂದ ಮೂಲಭೂತ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನ . ಇಂಥ ಚಿತ್ರಗಳ ಸಂಖ್ಯೆ ಹೆಚ್ಚಾಗಬೇಕು. ಇದರಿಂದಲಾದರೂ ವ್ಯವಸ್ಥೆ ಕಣ್ತೆರೆಯಲಿ, ತಳಮಟ್ಟದ ಕೆಲಸಗಾರರ ಜೀವನ ಎಷ್ಟು ನರಕವೆಂಬುದು ಅರಿವಾಗಿ ಮೇಲ್ವರ್ಗ, ಆಳುವವರು ಯೋಚನಾ ವಿಧಾನವನ್ನು ಬದಲಾಯಿಸಲಿ, ಬಡವರ ಬದುಕನ್ನು ಭದ್ರವಾಗಿಸಲಿ ಎಂಬ ಆಶಯ ನನ್ನದು. 
 
ನಾಗರೀಕ ಸಮಾಜದ ಸಹಜೀವಿಗಳಾದ ನಮ್ಮ ಜವಾಬ್ದಾರಿ ಇಷ್ಟೇನೆ ..??!!....