ಒಳಸಂಚು ಸಿದ್ಧಾಂತವೆಂದರೇನು ಗೊತ್ತೆ....?

ಒಳಸಂಚು ಸಿದ್ಧಾಂತವೆಂದರೇನು ಗೊತ್ತೆ....?

’ತಾಜ್ ಮಹಲ್. ಅದು ಅಮರ ಪ್ರೇಮದ ಜೀವಂತ ಸಂಕೇತ ಎನ್ನುವುದು ಪ್ರತಿಯೊಬ್ಬ ಪ್ರೇಮಿಯ,ಭಾವುಕ ಜೀವಿಯ ನಂಬಿಕೆ.ಆದರೆ ನಿಮಗೆ ಗೊತ್ತೆ..? ಪ್ರಪಂಚದಲ್ಲಿ ಸೃಷ್ಟಿಯಾದ ಅದ್ಭುತ ಕಟ್ಟಡಗಳ ಪೈಕಿ ಒಂದಾಗಿರುವ ತಾಜ್ ಮಹಲ್ ಎನ್ನುವ ಈ ಸಂಗಮರಮರಿಯ ಸ್ಮಾರಕದ ರಚನೆಯ ಮೂಲಕತೆಯೇ ಒಂದು ಸುಳ್ಳಿನ ಕಂತೆ.ಇಷ್ಟಕ್ಕೂ ತಾಜ್ ಮಹಲ್ ಎನ್ನುವ ಅಮೃತಶಿಲೆಯ ಅಚ್ಚರಿ ನಾವೆಲ್ಲ ತಿಳಿದುಕೊಂಡಿರುವಂತೆ ಶಹಜಹಾನ್ ತನ್ನ ಮಡದಿ ಮುಮ್ತಾಜಳಿಗಾಗಿ ಕಟ್ಟಿಸಿದ್ದ ಸಮಾಧಿಯಲ್ಲ.ಅದು ಪುರಾತನ ಕಾಲದ ಶಿವ ದೇಗುಲ.ಅಷ್ಟಕ್ಕೂ ’ತಾಜ್ ಮಹಲ್’ಎನ್ನುವುದೂ ಸಹ ಅದರ ಅಸಲಿ ನಾಮಧೇಯವಲ್ಲ.’ತೇಜೋ ಮಹಾಲಯ’ ಎಂಬ ಹಿಂದೂ ಹೆಸರನ್ನೇ ಅಪಭ್ರಂಶಗೊಳಿಸಿ ತಾಜ್ ಮಹಲ್ ಎನ್ನುವ ಹೆಸರನ್ನಿಡಲಾಯಿತು.ಅದಾಗಲೇ ಕಟ್ಟಲ್ಪಟ್ಟಿದ್ದ ಹಿಂದೂ ದೇಗುಲದ ವಾಸ್ತುಶಿಲ್ಪವನ್ನು ಸಾಕಷ್ಟು ರೂಪಾಂತರಗೊಳಿಸಿ ತಾಜ್ ಮಹಲ್ ಎಂಬ ಗೋರಿಯನ್ನು ಸೃಷ್ಟಿಸಲಾಯಿತು.ಇದಕ್ಕೆ ಸಾಕಷ್ಟು ಋಜುವಾತುಗಳಿವೆ.ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ತೇಜೋ ಮಹಾಲಯವನ್ನು ಅಂದಿನ ಜೈಪುರದ ಮಹಾರಾಜ ಜೈ ಸಿಂಗನಿಂದ ಶಹಜಹಾನ್ ವಶಪಡಿಸಿಕೊಂಡಿದ್ದನ್ನೆನ್ನುವುದಕ್ಕೆ ಲಿಖಿತ ಪುರಾವೆಗಳಿವೆ.ತನ್ನ ಮುದ್ದಿನ ಮಡದಿ ಮಮ್ತಾಜಳ ಸಮಾಧಿಯ ನಿರ್ಮಾಣಕ್ಕಾಗಿ ಆಗ್ರಾದ ಒಂದು ಅತ್ಯದ್ಭುತ ಸುಂದರ ಮಹಾಸೌಧವನ್ನು ಜೈಪುರದ ರಾಜನಿಂದ ವಶಪಡಿಸಿಕೊಂಡಿರುವುದಾಗಿ ಸ್ವತ: ಶಹಜಹಾನ್ ತನ್ನ ವಂಶಾವಳಿಯ ದಾಖಲೆಗಳಲ್ಲಿ ಬರೆದುಕೊಂಡಿದ್ದಾನೆ.ಜೈಪುರದ ಮಹಾರಾಜರ ವಂಶಸ್ಥರ ಗುಪ್ತದಾಖಲೆಗಳಲ್ಲಿ ಇಂದಿಗೂ ತೇಜೋ ಮಹಾಲಯವನ್ನು ಶಹಜಹಾನನಿಗೆ ಒತ್ತಾಯಪೂರ್ವಕವಾಗಿ ಹಸ್ತಾಂತರಿಸಿರುವ ಕುರಿತು ನಮೂದಿತ ಒಪ್ಪಂದಗಳಿವೆ.ಆಕ್ರಮಿಸಲ್ಪಟ್ಟ ದೇಗುಲಗಳನ್ನು,ಮಹಲುಗಳನ್ನು ತಮ್ಮ ನೆಚ್ಚಿನ ಆಸ್ಥಾನಿಕರ,ಮಡದಿ ಮಕ್ಕಳ ಸಮಾಧಿಯಾಗಿ ಮಾರ್ಪಡಿಸುವ ಪದ್ದತಿ ಮುಸ್ಲಿಂ ರಾಜರುಗಳ ಆಳ್ವಿಕೆಯಲ್ಲಿ ಸರ್ವೇ ಸಾಮಾನ್ಯವಾಗಿತ್ತು.ಹುಮಾಯುನ್ ಮತ್ತು ಅಕ್ಬರರ ಸಮಾಧಿಗಳು ಇಂಥಹ ಪರಿವರ್ತಿತ ಸ್ಮಾರಕಗಳಿಗೆ ಸಾಕ್ಷಿಯಾಗಿವೆ. ಮಹಲ್’ಎನ್ನುವುದು ’ಮಮ್ತಾಜ್ ಮಹಲ್’ಎನ್ನುವ ಹೆಸರಿನ ಅಪಭ್ರಂಶವೆನ್ನುವ ವಾದವೂ ತರ್ಕಹೀನ.ಅಸಲಿಗೆ ಶಹಜಹಾನ್ ಮತ್ತು ಮಮ್ತಾಜಳ ಪ್ರೇಮಕತೆಯೇ ಒಂದು ಕಪೋಲಕಲ್ಪಿತ ಕತೆ.ಶಹಜಹಾನನ ಆಸ್ಥಾನದಲ್ಲಿದ್ದ ಹೊಗಳುಭಟ್ಟರಿಂದ ಸೃಷ್ಟಿಯಾದ ಕಲ್ಪನೆಯ ಚಿತ್ರಣ.ಅದನ್ನೇ ಅನೇಕ ದುರ್ಬಲ ಇತಿಹಾಸಕಾರರು ನಿಜವೆಂದು ನಂಬಿದರು.ಪುರಾತತ್ವ ಸಂಶೋಧಕರು ಸತ್ಯವೆಂಬಂತೆ ಸಾರಿದರು.ವಿಚಿತ್ರವೆಂದರೆ ಶಹಜಹಾನ ಮಮ್ತಾಜರ ಪ್ರೇಮಕತೆಯನ್ನು ಸಮರ್ಥಿಸುವ,ದೃಢಿಕರಿಸುವ ಒಂದೇ ಒಂದು ಲಿಖಿತವೂ ಅರಸೊತ್ತಿಗೆಯ ದಾಖಲೆಗಳಲ್ಲಿ ಸಿಗದು ಎಂದರೆ ನಿಮಗೆ ಆಶ್ಚರ್ಯವೆನ್ನಿಸಬಹುದು’ಎಂದು ಬರೆಯುತ್ತಾರೆ ಲೇಖಕ ಪಿ.ಎನ್ ಓಕ್ ತಮ್ಮ ,’ತಾಜ್ ಮಹಲ್: ದ ಟ್ರು ಸ್ಟೋರಿ’ಎನ್ನುವ ಪುಸ್ತಕದಲ್ಲಿ.1965ರಲ್ಲಿ ಪ್ರಕಟವಾದ ತಾಜಮಹಲ್ಲಿನ ಕುರಿತಾದ ಕೃತಿ ಸಾಹಿತ್ಯಲೋಕದಲ್ಲೊಂದು ಸಂಚಲನವನ್ನೇ ಸೃಷ್ಟಿಸಿದ್ದಲ್ಲದೇ ಸಾಕಷ್ಟು ವಿವಾದಗಳಿಗೂ ಕಾರಣವಾಗಿತ್ತು.ತಮ್ಮ ಸಂಶೋಧನೆಗಳನ್ನೇ ಆಧಾರವಾಗಿಟ್ಟುಕೊಂಡಿದ್ದ ಪಿ.ಎನ್ ಓಕ್,ತಾಜ್ ಮಹಲ್ ಎನ್ನುವ ಅದ್ಭುತವನ್ನು ಸೃಷ್ಟಿಸಿದ್ದು ಹಿಂದೂ ದೊರೆ ಎನ್ನುವ ಅಹವಾಲೊಂದನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. 2000ನೇ ಇಸ್ವಿಯಲ್ಲಿ ಪಿ.ಎನ್ ಓಕರ ಅಹವಾಲನ್ನು ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ,ಓಕರ ವಾದದಲ್ಲಿ ಯಾವುದೇ ಹುರುಳಿಲ್ಲವೆನ್ನುವುದಾಗಿ ಘೋಷಿಸಿತು.ವಿರೋಧಿಗಳಿಂದ ಸಾಕಷ್ಟು ಟೀಕೆಗೊಳಗಾಗಿದ್ದ ಪಿ.ಎನ್ ಓಕ್ ಎನ್ನುವ ವಿಲಕ್ಷಣ ವ್ಯಕ್ತಿಯನ್ನು ಇಂದಿಗೂ,’ಸಂಘಪರಿವಾರದ ಇತಿಹಾಸಕಾರ’ಎಂದೇ ಅನೇಕರು ಲೇವಡಿ ಮಾಡುತ್ತಾರೆ.ಇಂದಿಗೂ ಪಿ.ಎನ್ ಓಕ್ ರವರ ಪುಸ್ತಕವನ್ನು ಮುಂದಿಟ್ಟುಕೊಂಡು ವಾದಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಇಷ್ಟಾಗಿಯೂ ಪಿ.ಎನ್ ಓಕ್ ರ ವಾದದ ಕೆಲವು ಅಂಶಗಳನ್ನು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ ಸಹ ಗಮನಾರ್ಹ ಅಂಶವೇ.

ಹೀಗೆ ಅದಾಗಲೇ ಒಪ್ಪಿಕೊಂಡಿರುವ ಸತ್ಯಗಳನ್ನು,ರಾಜಕೀಯ ಘಟನಾವಳಿಗಳನ್ನು,ಆರ್ಥಿಕ,ಸಾಮಾಜಿಕ ಧೋರಣೆಗಳನ್ನು ಕಾಣದ ಕೈಗಳ ಪಿತೂರಿಯ ಪರಿಣಾಮವೆನ್ನುತ್ತ ,ಅವುಗಳನ್ನು ವಿವಾದಾತ್ಮಕವಾಗಿ ಪ್ರಶ್ನಿಸುವ ಪ್ರಕ್ರಿಯೆಗೆ Conspiracy Theory ಎಂದು ಹೆಸರು.ಕನ್ನಡದಲ್ಲಿ ’ಪಿತೂರಿ ಸಿದ್ಧಾಂತ’ ಅಥವಾ ’ಒಳಸಂಚು ವಾದ’ ಎಂದು ಕರೆಯುವುದು ಸೂಕ್ತವಾದೀತು. ಒಂದು ದೇಶದ ಸರಕಾರ ಅಥವಾ ನಿಗೂಢ ಸಂಸ್ಥೆಯೊಂದು ಯಾವುದೇ ಪ್ರಭಾವಿ ಐತಿಹಾಸಿಕ ಘಟನೆಯ ಕುರಿತಾದ ಒಂದಷ್ಟು ಕಠೋರವಾದ ಸತ್ಯಗಳನ್ನು ಬಚ್ಚಿಟ್ಟು,ಘಟನೆಯನ್ನು ಬೇರೊಂದು ಬಗೆಯಲ್ಲಿ ಜಗದೆದುರು ಬಿಚ್ಚಿಡುವ ಪ್ರಯತ್ನವೇ ಪಿತೂರಿಯ ಸಂಚು ಎನ್ನುವುದು ಸಾಮಾನ್ಯರ ನಂಬಿಕೆ.ಸಂಕ್ಷಿಪ್ತವಾಗಿ ವಿವರಿಸುವುದಾದರೆ ಪ್ರಭಾವಿ ಸಂಗತಿಯೊಂದರ ವಿವರಣೆಗಿರಬಹುದಾದ ಪರ್ಯಾಯ ಸ್ಪಷ್ಟೀಕರಣ ಎನ್ನುವುದು ಒಳಸಂಚು ವಾದದ ವ್ಯಾಖ್ಯಾನ. ಇಂಥಹ ಪಿತೂರಿ ಸಿದ್ಧಾಂತಗಳ ಹುಟ್ಟಿಗೆ ಮುಖ್ಯ ಕಾರಣ ಪ್ರಭಾವಿ ಸಂಗತಿಗಳ ಸಮರ್ಥನೆಗೆ ಸಿಗಬಹುದಾದ ದಾಖಲೆಗಳಲ್ಲಿನ ಅಸ್ಪಷ್ಟತೆ.ಬಹುಮುಖ್ಯ ಸಂಗತಿಯೊಂದಕ್ಕೆ ಸಂಬಂಧಪಟ್ಟ ವಾಸ್ತವಾಂಶಗಳನ್ನು,ಅದರ ಹಿನ್ನಲೆಗಳನ್ನು ಸಾರ್ವಜನಿಕ ವಲಯದಿಂದ ತಡೆಹಿಡಿಯಲ್ಪಡುವ ಸನ್ನಿವೇಶಗಳು ಪಿತೂರಿ ಸಿದ್ಧಾಂತಗಳ ಹುಟ್ಟಿಗೆ ಬಹುಮುಖ್ಯ ಕಾರಣಗಳೆನ್ನಿಸಿಕೊಳ್ಳುತ್ತವೆ.ಹೀಗೆ ಹುಟ್ಟಿಕೊಂಡ ವಾದಗಳ ಪೈಕಿ ತುಂಬ ಸೂಕ್ಷ್ಮ ,ಸಮರ್ಪಕ ಸಂಶೋಧನಾಪೂರಿತ ಸಿದ್ಧಾಂತಗಳು ಕೆಲವಾದರೆ, ಬಹುಪಾಲು ಒಳಸಂಚು ವಾದಗಳು ಅರ್ಥಹೀನ ಅತಿರೇಕಿ ಕಲ್ಪನೆಗಳ ಫಲಿತಾಂಶ.ಇಂಥಹ ಆತ್ಯಂತಿಕ ವಾದಗಳ ಫಲವಾಗಿ ಮೂಲತ: ತೀರ ತಟಸ್ಥ ಪದದಂತೆ ಬಳಕೆಯಾಗುತ್ತಿದ್ದ ’ಒಳಸಂಚು ವಾದ’ವೆನ್ನುವ ಶಬ್ದ ಕಾಲಾನಂತರ ನೇತ್ಯಾತ್ಮಕ ಪದವೆನ್ನುವಂತೆ ಬಿಂಬಿತವಾಗುತ್ತಿದೆ ಎನ್ನುವುದಂತೂ ಸುಳ್ಳಲ್ಲ.

ಸತ್ಯಾಸತ್ಯತೆಗಳ ಪರಾಮರ್ಶೆಗಿಳಿಯದೆ ನೋಡುವುದಾದರೆ ಹಲವು ಒಳಸಂಚುವಾದಗಳು ನಿಜಕ್ಕೂ ಕುತೂಹಲಕಾರಿಯಾಗಿವೆ.ಕಾಲಕಾಲಕ್ಕೆ ಪಿತೂರಿವಾದಿಗಳು ಬಗೆಬಗೆಯ ಆಸಕ್ತಿಕರ ಪಿತೂರಿವಾದಗಳನ್ನು ಮಂಡಿಸುತ್ತಲೇ ಬಂದಿದ್ದಾರೆ. ಅಮೇರಿಕಾದ ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲಿಳಿದ ಪ್ರಥಮ ಮಾನವನೆನ್ನುವ ಸತ್ಯ ನಮ್ಮಲ್ಲನೇಕರಿಗೆ ತಿಳಿದಿದೆ.ಹಾಗೆ ಚಂದ್ರನ ಮೇಲೆ ಹೆಜ್ಜೆಯಿಟ್ಟ ಪ್ರಥಮ ಮಾನವ ಅಮೇರಿಕಾದ ಪ್ರಜೆ ಎಂದು ಅಮೇರಿಕಾ ಹೆಮ್ಮೆಯಿಂದ ಘೋಷಿಸಿದ ಕೆಲವೇ ದಿನಗಳಲ್ಲಿಯೇ ಅಲ್ಲೊಂದು ಪಿತೂರಿವಾದ ಜನ್ಮಿಸಿತ್ತು.ಬಾಹ್ಯಾಕಾಶ ತಂತ್ರಜ್ನಾನ ಸಮರದಲ್ಲಿ ರಷ್ಯಾದೊಂದಿಗಿನ ಪೈಪೊಟಿಯನ್ನು ಜಯಿಸುವ ಕಾರಣಕ್ಕೆ,ನೀಲ್ ಆರ್ಮಸ್ಟ್ರಾಂಗ್ ಮತ್ತು ಬಝ್ ಅಲ್ಡ್ರಿನ್ ಎನ್ನುವ ಗಗನಯಾತ್ರಿಗಳನ್ನು ಬಳಸಿಕೊಂಡ ಅಮೇರಿಕಾ ನಕಲಿ ಚಂದ್ರಯಾನವೊಂದನ್ನು ಅಯೋಜಿಸಿತ್ತು ಎನ್ನುವುದು ಪಿತೂರಿವಾದಿಗಳ ಅಂಬೋಣ.ಅಮೇರಿಕೆಯ ಏರಿಯಾ 51 ಎನ್ನುವ ವಿವಾದಗ್ರಸ್ತ ಭೂಮಿಯಲ್ಲಿ ಗುಪ್ತ ಚಿತ್ರಣವನ್ನು ನಡೆಸಿದ ಅಮೇರಿಕಾ ಅದನ್ನೇ ಚಂದ್ರಯಾನವೆನ್ನುವಂತೆ ಜಗದೆದೆರು ಬಿಂಬಿಸಿತ್ತೆನ್ನುವುದು ಹಲವರ ವಾದ.ವಿಚಿತ್ರವೆಂದರೆ ಹೀಗೆ ನಕಲಿ ಚಂದ್ರಯಾನದ ಚಿತ್ರಣ ನಡೆದಿತ್ತೆನ್ನಲಾದ ಏರಿಯಾ 51 ಎನ್ನುವ ಪ್ರದೇಶವೂ ಸಹ ಮತ್ತೊಂದು ಪಿತೂರಿವಾದದ ಜನ್ಮಸ್ಥಾನ.ಅಮೇರಿಕಾದ ಹಾಲಿವುಡ್ ಬೆಟ್ಟಗಳಲ್ಲಿನ ತಾಣಗಳಲ್ಲೊಂದಾದ ಏರಿಯಾ 51 ,ಅನ್ಯಗ್ರಹ ಜೀವಿಗಳ ಕುರಿತಾಗಿ ಸಂಶೋಧನೆ ನಡೆಯುವ ಭೂಮಂಡಲದ ಗುಪ್ತತಾಣವೆನ್ನುವುದು ಅನೇಕರ ನಂಬಿಕೆ.ಅಲ್ಲಿ ಹಲವಾರು ಹಾರುವ ತಟ್ಟೆಗಳು ಪತ್ತೆಯಾಗಿವೆಯೆನ್ನುವ ಕತೆಗಳಿಗೂ ಬರವೇನಿಲ್ಲ.ತುಂಬ ಕಾಲ ಪ್ರಸಿದ್ಧಿಯಲ್ಲಿದ್ದ ನಕಲಿ ಚಂದ್ರಯಾನದ ಪ್ರಕರಣದ ಪಿತೂರಿಸಿದ್ಧಾಂತ,ನಾಸಾದ ಬಳಿಯಿದ್ದ ಚಂದ್ರಯಾನದ ಭಾವಚಿತ್ರಗಳ ಪ್ರಕಟಣೆಯ ನಂತರ ಸ್ತಬ್ಧವಾಯಿತು.ನ್ಯೂಯಾರ್ಕಿನ ಅವಳಿ ಕಟ್ಟಡಗಳ ಮೇಲೆ ನಡೆದ 2001ರ ದಾಳಿಯ ರೂವಾರಿ ಸ್ವತ: ಅಮೇರಿಕಾ ಎನ್ನುವ ಪಿತೂರಿವಾದ, ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಯ ಹತ್ಯೆಯ ಹಿಂದೆ ಅಮೇರಿಕಾದ ಪ್ರಭಾವಿ ವ್ಯಕ್ತಿಗಳ ಕೈವಾಡ ಎನ್ನುವ ಒಳಸಂಚು ವಾದದಂತಹ ತರ್ಕಗಳು ಅಮೇರಿಕಾದ ಕುರಿತು ಪ್ರಚಲಿತದಲ್ಲಿರುವ ಕೆಲವು ಪ್ರಮುಖ ಒಳಸಂಚು ಸಿದ್ಧಾಂತಗಳು. 

ಭಾರತೀಯ ಮಣ್ಣಿನಲ್ಲಿಯೂ ಹುಟ್ಟಿಕೊಂಡ ಆಸಕ್ತಿಕರ ಪಿತೂರಿವಾದಗಳಿಗೆ ಕೊರತೆಯೇನಿಲ್ಲ.ನೇತಾಜಿ ಸುಭಾಷ್ ಚಂದ್ರ ಭೋಸರ ಸಾವಿನ ಕುರಿತ ವಿವಾದ ಅಂಥಹ ಕುತೂಹಲಕಾರಿ ವಾದಗಳಲ್ಲೊಂದು.ತೈವಾನ್ ದೇಶದ ತೈಪೆೈ ನಗರದ ವಿಮಾನದ ಅಪಘಾತದಲ್ಲಿ ಸುಭಾಷ್ ಚಂದ್ರರು ಮೃತಪಟ್ಟರೆಂಬುದಾಗಿ ಟೋಕಿಯೋದ ಆಕಾಶವಾಣಿಯ ಸುದ್ದಿಯೊಂದು ಪ್ರಕಟಿಸಿತ್ತು.ಆದರೆ ಈ ಕುರಿತು ’ದ ಸರ್ಚ್ ಫಾರ್ ನೇತಾಜಿ:ನ್ಯೂ ಫೈಂಡಿಗ್ಸ್’ಎನ್ನುವ ಕೃತಿಯನ್ನು ಬರೆಯುವ ಬಂಗಾಳಿ ಲೇಖಕಿ ಪೂರಬಿ ರಾಯ್,ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಸ್ನೇಹಿತನೆನ್ನುವ ಕಾರಣಕ್ಕೆ ಸುಭಾಷ್ ಚಂದ್ರರನ್ನು ಬಂಧಿಸಿದ್ದ ಮಿತ್ರರಾಷ್ಟ್ರಗಳು ಅವರನ್ನು ಸೈಬೇರಿಯಾದಲ್ಲಿ ಗ್ರಹಬಂಧನದಲ್ಲಿಟ್ಟಿದ್ದವು ಮತ್ತು ಸೈಬಿರೀಯಾದಲ್ಲಿಯೇ ನೇತಾಜಿ ಕಾಲವಾದರು ಎಂಬುದಾಗಿ ವಾದಿಸುತ್ತಾರೆ. ಇದು ಸುಭಾಷರ ಸಾವಿನ ಕುರಿತಾಗಿರುವ ಏಕೈಕ ಪಿತೂರಿವಾದವೇನಲ್ಲ.’ಗುಮ್ನಾನಿ ಬಾಬಾ’ಎನ್ನುವ ಹೆಸರಿನಲ್ಲಿ ತುಂಬ ಕಾಲ ಬದುಕಿದ್ದ ಸುಭಾಷ್, 1985ರಲ್ಲಿ ಮರಣಿಸಿದರು ಎನ್ನುವ ಇನ್ನೊಂದು ವಾದವನ್ನು ಸಹ ಕೆಲವು ಇತಿಹಾಸಕಾರರು ಮಂಡಿಸುತ್ತಾರೆ.ಭಗತ್ ಸಿಂಗ್ ನೇಣುಶಿಕ್ಷೆ,ಹೋಮಿ ಜಹಾಂಗಿರ ಬಾಬಾರ ಮರಣ,ಅಶೋಕ ಚಕ್ರವರ್ತಿಯ ಆಸ್ಥಾನದ ಒಂಬತ್ತು ಗುಪ್ತ ವಿದ್ವಾಂಸರು ಎನ್ನುವ ವಿಷಯಗಳು ಸಹ ಪಿತೂರಿವಾದಿಗಳ ತರ್ಕಕ್ಕೆ ಆಹಾರವಾದಂತಹ ಸಂಗತಿಗಳು.ತೀರ ಭಾರತದ ಸ್ವಾತಂತ್ರ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವ ಒಳಸಂಚು ಸಿದ್ಧಾಂತವೂ ಅಸ್ತಿತ್ವದಲ್ಲಿದೆಯೆಂದರೆ ನೀವು ನಂಬಲಾರಿರಿ.

ಇಷ್ಟಕ್ಕೂ ಪಿತೂರಿ ಸಿದ್ಧಾಂತವೊಂದು ಏಕೆ ಜನಪ್ರಿಯವಾಗುತ್ತದೆಯೆನ್ನುವುದೇ ಒಂದು ಯಕ್ಷಪ್ರಶ್ನೆ.ನಾವರಿಯದ ಗುಪ್ತ ಪ್ರಪಂಚವೊಂದರ ಬಾಗಿಲು ನಮ್ಮೆದುರಿಗೆ ತೆರೆದುಕೊಳ್ಳುತ್ತಿದೆಯೆನ್ನುವ ಭಾವವೇ ನಮ್ಮಲ್ಲೊಂದು ಅವ್ಯಕ್ತ ರೋಮಾಂಚನವೊಂದನ್ನು ಹುಟ್ಟುಹಾಕಿ ಪಿತೂರಿ ಸಿದ್ಧಾಂತಗಳೆಡೆಗೆ ನಾವು ಆಕರ್ಷಿತರಾಗುವ ಸಂಭವನೀಯತೆ ಹೆಚ್ಚು ಎಂದರೆ ತಪ್ಪಾಗಲಾರದು.ಕೆಲವು ಸಂಶೋಧನಾಧಾರಿತ ಒಳಸಂಚು ವಾದಗಳ ಇತ್ಯಾತ್ಮಕ ಪ್ರಭಾವವನ್ನೂ ಸಹ ತಳ್ಳಿಹಾಕುವಂತಿಲ್ಲ.ಇಂಥಹ ಧನಾತ್ಮಕ ಸಿದ್ಧಾಂತಗಳು ನಮ್ಮಲ್ಲೊಂದು ತಾರ್ಕಿಕ ಮನೋಭಾವವನ್ನು ಬೆಳೆಸುತ್ತವೆನ್ನುವುದೇನೋ ನಿಜ.ಆದರೆ ಆಧಾರರಹಿತವಾದ ಪಿತೂರಿಸಿದ್ಧಾಂತಗಳು ಮನುಷ್ಯನನ್ನು ನಿರರ್ಥಕ ಮೂಢನಂಬಿಕೆಗಳತ್ತ ಸೆಳೆದೊಯ್ಯಬಲ್ಲವು ಎನ್ನುವುದು ಸಹ ನಿರೂಪಿಸಲ್ಪಟ್ಟ ಸತ್ಯವೇ.ಅದಾಗಲೇ ಒಪ್ಪಿತ ಸತ್ಯಗಳನ್ನು ಸುಳ್ಳಾಗಿಸಿ ತಮ್ಮ ನೆಮ್ಮದಿಯ ವಲಯದಿಂದ ತಮ್ಮನ್ನು ಹೊರತಳ್ಳುತ್ತವೆನ್ನುವ ಕಾರಣಕ್ಕೆ ಹಲವರು ಚರ್ಚಾತೀತವಾಗಿಯೇ ಪಿತೂರಿವಾದಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟರೆ,ಕೆಲವರು ಮಾತ್ರ ಇಂಥಹ ಮಸಲತ್ತು ಸಿದ್ಧಾಂತಗಳ ಬೆಂಬತ್ತಿ ಸತ್ಯಾಸತ್ಯತೆಗಳ ಪರೀಕ್ಷಣೆಗಿಳಿಯುತ್ತಾರೆ.ಆರಂಭದಲ್ಲಿ ತುಂಬ ಗಂಭೀರವೆನ್ನಿಸುವ ಹಲವು ಪಿತೂರಿವಾದಗಳು ತಾರ್ಕಿಕವಾದ ಚರ್ಚೆಗಳ ನಂತರ ಹಾಸ್ಯಾಸ್ಪದವಾದ ,ತೀರ ಬಾಲಿಶ ತರ್ಕಗಳಂತೆ ಭಾಸವಾಗಿ ಭ್ರಮನಿರಸನವನ್ನುಂಟು ಮಾಡಿದರೆ,ಬೆರಳೆಣಿಯಷ್ಟು ವಾದಗಳು ನಮ್ಮಲ್ಲಾಗಲೇ ಗಟ್ಟಿಯಾಗಿ ನೆಲೆಯೂರಿದ್ದ ಹಲವು ನಂಬಿಕೆಗಳ ಬೇರುಗಳನ್ನು ಬುಡಮೇಲು ಮಾಡಿಬಿಡಬಲ್ಲವು.ಏನೇ ಆದರೂ ಪಿತೂರಿವಾದಗಳು ಹಲವು ನಿರಾಸಕ್ತವಿಷಯಗಳ ಕುರಿತು  ಕುತೂಹಲಹುಟ್ಟಿಸುವಲ್ಲಿಯಶಸ್ವಿಯಾಗುತ್ತವೆನ್ನುವುದನ್ನಂತೂ ಒಪ್ಪಲೇಬೇಕು.ಏಕತಾನತೆಯ ಬದುಕನ್ನು ಕೊಂಚ ಆಸಕ್ತಿಕರವಾಗಿಸುವ ಶ್ರೇಯ ಖಂಡಿತವಾಗಿಯೂ ಇಂಥಹ ಪಿತೂರಿವಾದಗಳಿಗೆ ಸಲ್ಲಬೇಕು ಅಲ್ಲವೇ..??