ಕಡೂರಿನ ದಿನಗಳು - ಚಹರೆಗಳು!

ಕಡೂರಿನ ದಿನಗಳು - ಚಹರೆಗಳು!

ಕಡೂರಿನ ದಿನಗಳು - ಚಹರೆಗಳು!
 
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
 
ಅದೇನು ಮನಸ್ಸಿನ ಪ್ರವೃತ್ತಿಯೋ ಕಾಣೆ? ಕೆಲವೊಂದು ಮುಖ ಚಹರೆಗಳು ಅಗಾಗ ಅಲ್ಲಲ್ಲಿ ಮನಸ್ಸಿನಾಳದಿಂದ ಹೊರಬಂದು ಕಣ್ಣ ಮುಂದೆ ಸುತ್ತಾಡಿ ಒಂದು ರೀತಿಯ ಸವಿಯಾದ ಉತ್ಕಂಠತೆಯನ್ನು ನೀಡಿ ಸದ್ದಿಲ್ಲದೇ ತನ್ನಪಾಡಿಗೆ ತಾನೇ ಮರೆಯಾಗುವುದು. ಈ ನೆನಪಿನ ಶಕ್ತಿ ಮುಖದ ಚಹರೆಗಳನ್ನು ನೆನಪಿಸುವ ಮಟ್ಟಿಗೆ ಬೇರೆಯದನ್ನು ನೆನಪಿಸಲು ಅಶಕ್ತವಾದಂತೆನಿಸುತ್ತದೆ. ಕೆಲವೊಂದು ಮುಖಗಳು ತುಂಬಾ ಪರಿಚಯವಾಗಿರಬೇಕಿಲ್ಲ, ಬರೀ ಒಂದೇ ಸಾರಿ ನೋಡಿ ಮಾತನಾಡಿಸಿರಬಹುದು, ಮತ್ತೆ ಕೆಲವು ಚಿರಪರಿಚಿತವಾಗಿದ್ದರೂ ಇರಬಹುದು, ಇನ್ನಷ್ಟೂ ಊಹಾಪೂರಕವಾಗಿರಲೂಬಹುದು. ಇದೊಂದು ವಿಸ್ಮಯವೇ ಸರಿ, ಕೆಲವೊಮ್ಮೆ ಪರಿಚಯ ಮುಂಚಿತವಾಗಿ ಅವರ ಬಗ್ಗೆ ಕಲ್ಪನೆಯನ್ನು ಕಟ್ಟಿ, ಅವರ ಧ್ವನಿಯನ್ನು ದೂರವಾಣಿಯಲ್ಲಿ ಆಲಿಸಿ, ಅವರು ಹೀಗಿರಬಹುದೆಂದು ಮನಸ್ಸಿನಲ್ಲಿ ಊಹಿಸಿ ಒಂದು ಚಹರೆಯನ್ನು ಕಟ್ಟಿ ಅವರ ಮುಖಾ ಮುಖಿ ಭೇಟಿಯಾದಾಗ ಆಶ್ಚರ್ಯವೆಸಗಲೂ ಬಹುದು.
 
ಕಡೂರಿನ ಮುಖಗಳು (ಚಹರೆಗಳು) ದಿನ ನಿತ್ಯವೂ ಮನಸಲ್ಲಿ ಬಂದು ಹೋಗುತ್ತವೆ. ಕಡೂರು ಬಿಟ್ಟು ಸುಮಾರು ೪೦ ವರುಷಗಳು ಕಳೆದಿವೆ. ಕಾಲಾಯ ತಸ್ಮೈ ನಮಃ - ವರ್ತಮಾನದಲ್ಲಿ ಇರುವಂತೆ ಹಂದರವನ್ನು ಕಟ್ಟುತ್ತೆ ಈ ಮನಸ್ಸು. ಅಂತಹ ಚಹರೆಗಳಲ್ಲಿ ಮೊದಲು ಬರುವನು ಹಾಲಿನ ವಿಶ್ವಣ್ಣ. ವಿಶ್ವಣ್ಣನ ಮುಖ ಉದ್ದಗಿತ್ತು, ನೀಳನಾಸಿಕ, ದೊಡ್ಡ ಹಣೆಯಲ್ಲಿ ಒಂದೆರಡು ಅಡ್ಡ ಗೆರೆಗಳು. ತಲೆಕೂದಲು ಸ್ವಲ್ಪ ನೆರೆದಿತ್ತು ( ಅರ್ಧ ಕಪ್ಪು/ ಅರ್ಧ ಬಿಳಿ), ಎಣ್ಣೆ ಹಚ್ಚಿ ಬಾಚುತ್ತಿದ್ದ, ಹಾಗೇ ಮುಂದಲೆಯಲ್ಲೊಂದು ಸಣ್ಣ ಗುಂಗುರು ಬಿಟ್ಟು ಬೇರೇ ಕೂದಲನ್ನು ಎಣ್ಣೆಯಿಂದ ತೀಡಿ ಪಕ್ಕಕ್ಕೆ ಬಾಚುತ್ತಿದ್ದ. ಮೀಸೆ ಗಡ್ಡಕ್ಕೆ ಮುಖದಲ್ಲಿ ಅವಕಾಶವಿರಲಿಲ್ಲ. ಯಾವಾಗಲೂ ಹಸು, ಕರು, ಎಮ್ಮೆಗಳ ಕೊಠಡಿಯಲ್ಲಿ ಕೆಲಸಮಾಡುತ್ತಿದ್ದರೂ ಹೊರಗೆ ಹೊರಟಾಗ ಬಿಳಿ ಪಂಚೆ ಮತ್ತು ತುಂಬು ತೋಳಿನ ಶರಟು ಹಾಕೇ  ಬರುತ್ತಿದ್ದಿದ್ದು. ಎಲ್ಲರ ಮನೆಗೆ ಹಾಲನ್ನು ಚೊಂಬಿನಲ್ಲಿ ತಗೊಂಡು ಬರುತ್ತಿದ್ದ. ಮನೆಗೆ ಹಾಲು ತರುವುದರ ಜೊತೆ ಹೊಸ ಹೊಸ ವಿಷಯಗಳನ್ನೂ ತಂದು ತಿಳಿಸುತ್ತಿದ್ದ. ಅದಕ್ಕೇ ಹಾಲಿನ ವಿಶ್ವಣ್ಣ ಅಂದ್ರೇ ಕಡೂರಿನ ಕೋಟೆಯಲ್ಲಿ ತುಂಬಾ ಖ್ಯಾತಿಯಾಗಿದ್ದ. ಬಿಸಿ ಬಿಸಿ ಸುದ್ಧಿಗಳನ್ನು ಒಂದು ಮನೆಯಿಂದ ಇನ್ನೊಂದು ಮನೆಗೆ ಹೇಳುತ್ತಿದ್ದರಿಂದಲೋ ಏನೋ ಕೆಲವರು ಅವನನ್ನು ಖ್ಯಾತೆ ವಿಶ್ವಣ್ಣ ಅಂತಲೂ ಕರೆದಿದ್ದುಂಟು.
 
ಭಾಗೀರತಮ್ಮ ನಮ್ಮ ಮನೆಯಿಂದ ಒಂದು ನಾಲ್ಕಾರು ಮನೆಯಿಂದಾಚೆಗೆ ವಾಸವಿದ್ದರು. ಕರೀ ಮುಖ, ಮೂಗು ಸ್ವಲ್ಪನೀಳವಾಗೇ ಇತ್ತು, ಅದಕ್ಕೊಂದು ೩- ಬಿಳಿ ಹರಳಿನ ಮೂಗುತಿ, ಬಹಳಷ್ಟು ನೆರೆತ ಕೂದಲು. ಕೂದಲನ್ನು ಚೆನ್ನಾಗಿ ಹಿಂದಕ್ಕೆ ಬಾಚಿ ಜಡೆ ಹೆಣೆಯುತ್ತಿದ್ದರು. ಮೂಗುತಿಯ ಹರಳು ಫಳ ಫಳ ಹೊಳೆಯುತ್ತಿದ್ದು ಮುಖಕ್ಕೆ ಕೊಳೆಯಿದ್ದರೂ ಕಳೆ ಕೊಡುತ್ತಿತ್ತು. ಹೆಸರಿಗೆ ತಕ್ಕಂತೆ ಅವರ ಉಧ್ಯಾನವನದಲ್ಲಿ ಗಿಡಗಳಿಗೆ ಚೆನ್ನಾಗಿ ನೀರೆರೆದು ಕನಕಾಂಬರ, ಮಲ್ಲಿಗೆ, ಜಾಜಿ , ಸಂಪಿಗೆ ಎಲ್ಲ ಹೂವುಗಳ ಗಿಡಗಳನ್ನು ಬೆಳೆಸಿದ್ದರು. ಅವರು ಪೇಟೆ ಹೂವಾಡಗಿತ್ತಿಗೆ ಕನಕಾಂಬರವನ್ನು ಖರೀದಿಗೆ ಸಹ ಕೊಡುತ್ತಿದ್ದರು. ನಮ್ಮ ಮನೆಯಲ್ಲಿ ದುಂಡು ಮಲ್ಲಿಗೆ ಚೆನ್ನಾಗಿ ಬೆಳೆದಿತ್ತು. ಅದ್ಯಾಕೋ ಕನಕಾಂಬರ ಚೆನ್ನಾಗಿ ಬರುತ್ತಿರಲಿಲ್ಲ. ನಮ್ಮ ಅಜ್ಜಿ ಕೋಟೆಯಲ್ಲಿ ದಿನ ನಿತ್ಯವೂ ವಾಯು ವಿಹಾರಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಅವರ ಜೊತೆ ನಾವೂ ಕೆಲವೊಮ್ಮೆ ಹೋಗಿದ್ದುಂಟು. ಅಜ್ಜಿ ಭಾಗೀರತಮ್ಮನ್ನ ಕನಕಾಂಬರ ಸಸಿ ಕೊಡಿ ಎಂದು ತುಂಬಾ ನಮ್ರತೆಯಿಂದ ಕೇಳುತ್ತಿತ್ತು. ಆದರೂ ಭಾಗೀರತಮ್ಮ ನಗುಮುಖದಿಂದ, ಅದಿನ್ನೂ ಸಣ್ಣ ಸಸಿಗಳು ಬೆಳೆದಮೇಲೆ ಕೋಡುತ್ತೀನಿ ಅನ್ನುವರೇ ಹೊರತು ಕೊಡುತ್ತಿರಲಿಲ್ಲ. ಅಜ್ಜಿ ಮಲ್ಲಿಗೆ ಬಳ್ಳಿ ತಗೊಂಡು, ಟ್ರೇಡ್ ಇನ್ ತರಹವೂ ಪ್ರಯತ್ನ ಮಾಡಿ ವಿಫಲವಾಗಿತ್ತು ಕನಕಾಂಬರ ಸಸಿ ಗಿಟ್ಟಿಸುವುದರಲ್ಲಿ. ಹಾಗಾಗಿ ಭಾಗೀರತಮ್ಮನ ಮುಖ ಪರಿಚಯ ತುಂಬಾ ಇತ್ತು ನಮಗೆಲ್ಲ.
 
ವೆಂಕಮ್ಮ ಒಬ್ಬರು ಬಡ ಹೆಂಗಸು. ಗಂಡ ಶಾಲಾ ಪ್ರಾಧ್ಯಪಕರಾಗಿದ್ದರೂ ಮನೆ ತುಂಬಾ ಮಕ್ಕಳು, ಹಾಗಾಗಿ ಮೆಣಸಿನಪುಡಿ, ಚಟ್ನಿ ಪುಡಿ, ಇದನ್ನೆಲ್ಲ ಮನೆ ಮನೆಗಳಿಗೆ ಹೋಗಿ ಮಾಡಿ ಸ್ವಲ್ಪ ಹಣಕಾಸು ತಂದು ಸಂಸಾರದ ಹಣಕಾಸು ತೊಂದರೆ ನಿವಾರಿಸುತ್ತಿದ್ದರು. ತುಂಬಾ ನಾಚಿಕೆ ಸ್ವಭಾವದವರು. ಮಧ್ಯಮ ಬಣ್ಣದ ಮುಖ, ಸುಂದರವಾಗೇ ಇದ್ದರೂ ತಲೆಯ ಮೇಲೆ ಸೆರಗು ಹಾಕಿದ್ದರಿಂದ ಮುಖ ಪೂರ್ತಿ ಕಾಣಿಸುತ್ತಿರಲಿಲ್ಲ. ಮೇಲಿನ ಹಲ್ಲು ಸ್ವಲ್ಪ ಉಬ್ಬಾಗಿತ್ತು, ಆದರೂ ಹಸನ್ಮುಖಿಯಾಗಿದ್ದರು. ಅವರು ಅವರ ಗಂಡನ ವಿಷಯ ಹೇಳುವಾಗಲೂ "ಗಂಡ" ಅಂತ ಹೇಳುತ್ತಿರಲಿಲ್ಲ. "ಗಂಡಸರು" ಅಂತ ಬಹುವಚನದಲ್ಲಿ ತುಂಬಾ ಸಣ್ಣ ಧ್ವನಿಯಲ್ಲಿ ಹೇಳಿ, ಆಮೇಲೆ ಬೇರೆ ಪದಗಳನ್ನು ಸ್ವಲ್ಪ ಜೋರಾಗಿ ಹೇಳುತ್ತಿದ್ದರು. ಉದಾ: ನನಗೆ ಅವತ್ತು ಬರಲಾಗಲಿಲ್ಲ ಮೆಣಸಿನಪುಡಿ ಕುಟ್ಟಕ್ಕೆ ಏಕೆಂದರೆ, "ಗಂಡಸರು" ಮನೆಯಲ್ಲಿರಲಿಲ್ಲ ( ಅಂದರೆ, ಅವರ ಗಂಡ ಎಲ್ಲೋ ಹೊರಗೆ ಹೋಗಿದ್ದರು, ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಲಾಗಲಿಲ್ಲ ಅಂತ). ಈ ಗಂಡಸರು ವಿಷಯಕ್ಕಾಗಿ ನಮಗೆಲ್ಲ ಅವರ ಮುಖ ಪರಿಚಯ ಬಹಳವಾಗೇ ಇತ್ತು ಅನ್ನಬಹುದು.
 
ಬಾಂಬೆರಾಣಿ ವಿಷಯ ಅಂತೂ ಹೇಳಲೇ ಬೇಕು. ಆಸ್ಪತ್ರೆ ಕಾಂಪೌಂಡರ್ ನಾಗಮ್ಮನ ಮಗಳೇ ಬಾಂಬೆರಾಣಿ. ಅವಳಿಗೆ ಬಾಂಬೆರಾಣಿ ಅಂತ ಕರೆಯುತ್ತಿದ್ದಿದ್ದು ಯಾಕೆ ಅಂದರೆ...ಅವಳಿಗೆ ಬಾಂಬೆಯಲ್ಲಿ ಕೆಲಸ. ಅವಳು ವರುಷದಲ್ಲಿ ಒಂದು  ತಿಂಗಳಿಗೆ ಕಡೂರಿಗೆ ರಜಕ್ಕೆ ಬರುತ್ತಿದ್ದಳು. ಬಂದಾಗ ದಿನನಿತ್ಯವೂ ಚೆನ್ನಾಗಿ ಅಲಂಕರಿಸಿಕೊಂಡು ಕೋಟೆಯಿಂದ ಪೇಟೆಗೆ ಹೋಗುತ್ತಿದ್ದಳು. ಹೆಸರು ಸುಂದರಿ, ಮುಖವೆಲ್ಲಾ ವಂದರಿ ಅನ್ನೋಹಾಗೆ ಅವಳ ಮುಖವೆಲ್ಲಾ ಮೊಡವೆಗಳಿಂದ ತೂತಾಗಿತ್ತು. ಆದರೂ ಮೇಕಪ್ ಹಾಕಿ ಮುಚ್ಚುತ್ತಿದ್ದಳು. ಚೌರಿ ಹಾಕಿ, ಉದ್ದದ ಜಡೆಹಾಕಿ, ಹಣೆಗೆ ದೊಡ್ಡ ಕುಂಕುಮವಿಟ್ಟು, ತುಟಿಗೆ ಬಣ್ಣ ಬಳಿಯದೇ ಹೊರಗೆ ಬರುತ್ತಿರಲಿಲ್ಲ. ಕಲಿತ ಹುಡುಗಿ ಕುದುರೆ ನಡಿಗೆ ಹಾಕುತ್ತ ಬರುತಿತ್ತು ಅನ್ನುವ ಹಾಗೆ ಹೈ ಹೀಲ್ಸ್ ಹಾಕಿ ನಡೆಯುತ್ತಿದ್ದಳು. ಕಿವಿಗೆ ಭಾರದ ಲೋಲಕ್ ಕಿವಿತೂತವನ್ನು ದೊಡ್ದ ಕಿಂಡಿ ಮಾಡಿತ್ತು. ನಾಗಮ್ಮ ಅವಳ ಹಿಂದೆ ನಡೆಯುತ್ತಿದ್ದಳು....ನನ್ನ ಮಗಳು ಅಂತ ಬೀಗುತ್ತಾ. ಅವಳು ಬೀದಿಯಲ್ಲಿ ಬಂದಳೆಂದರೆ ಸಾಕು, ಎಲ್ಲರೂ ಬಾಂಬೆರಾಣಿ ಬಂದಳು ಅಂತ ಜಾಗ ಬಿಡುತ್ತಿದ್ದರು.
 
ಹೀಗೆ ಹತ್ತು ಹಲವಾರು ಮುಖ ಚಹರೆಗಳು ಮನಸ್ಸಿನಲ್ಲಿ ಆಗಾಗ ಬಂದು ನೆನಪಿನ ಸುಳಿಯನ್ನು ತಂದು ಮರೆಯಾಗುತ್ತಿರುತ್ತವೆ.