ಕ್ಯೂಕ್ರೀಕ್ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -2

ಕ್ಯೂಕ್ರೀಕ್ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -2

                                                                      ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ-1
 
               ಏಕೆಂದರೆ ಹಿಂದೆ ಕೊರೆದ ಬಾವಿಯೊಳಗೆ ಆಮ್ಲಜನಕ ಪರೀಕ್ಷಕವನ್ನು ಹಾಕಿದ್ದರು. ಅದರಿಂದ ಬಂದ ವರದಿ ನೋಡಿದಾಗ ಬೆಚ್ಚಿ ಬಿದ್ದರು, ಒಳಗೆ ಉಸಿರಾಡುವಷ್ಟು ಪ್ರಮಾಣದ ಆಮ್ಲಜನಕ ಇರಲಿಲ್ಲ. ನೀರು ಗಂಟೆಗೆ 7 mtr ಲೆಕ್ಕದಲ್ಲಿ ಮೇಲೆ ಬರುತಿತ್ತು. ಪ್ರವಾಹದ ರೂಪದಲ್ಲಿ ಒಳಬರುತ್ತಿದ್ದ ನೀರು, ಕಾರ್ಮಿಕರು ಸಿಲುಕಿರುವ ಪ್ರದೇಶವನ್ನು ತಲುಪಲು ಇನ್ನು ಒಂದು ಗಂಟೆ ಸಮಯ ಸಾಕಿತ್ತು. ಅಷ್ಟರೊಳಗೆ ಅವರನ್ನು ಮೇಲೆತ್ತಿ ರಕ್ಷಿಸುವುದು ಸಾಧ್ಯವೇ ಇರಲಿಲ್ಲ. ಯೋಚಿಸುತ್ತ ನಿಂತವರಿಗೆ ಒಂದು ಉಪಾಯ ಹೊಳೆಯಿತು. ಕಾರ್ಮಿಕರ ಉಸಿರಾಟಕ್ಕಾಗಿ ಸುರಂಗದ ಒಳಗೆ ಕಂಪ್ರೆಸರ್ ಮುಖಾಂತರ ಗಾಳಿಯನ್ನು ಪಂಪ್ ಮಾಡುತ್ತಿದ್ದರು ಎನ್ನುವುದನ್ನು ಈಗಾಗಲೇ ಓದಿದ್ದೀರಿ. ಅದೇ ಕಂಪ್ರೆಸರ್ ಅನ್ನು High ಮೋಡ್ ನಲ್ಲಿ ಇಟ್ಟು, ಅಪಾರ ಪ್ರಮಾಣದ ಗಾಳಿಯನ್ನು ಹಾಯಿಸಿದ್ದರೆ ಸುರಂಗದ ಒಳಗೆ ಒತ್ತಡ ಹೆಚ್ಚಾಗಿ, ಮೇಲೇರುತ್ತಿರುವ ನೀರು ಹಾಗು ಗಾಳಿಯ ಸಂಪರ್ಕದ ಸ್ಥಳದಲ್ಲಿ ಅನಿಲ ಗುಳ್ಳೆಗಳು ಮೂಡುತ್ತವೆ. ಇದರಿಂದ ನೀರಿನ ಮೇಲೆ ಹಿಮ್ಮುಖ ಒತ್ತಡ ಹೆಚ್ಚಾಗಿ, ಗಾಳಿಯು ನೀರನ್ನು ಕೆಳಗೆ ತಳ್ಳಲು ಪ್ರಯತ್ನಿಸುತ್ತದೆ. ಆಗ ನೀರಿನ ಮೇಲೇರುವಿಕೆ ಪ್ರಮಾಣ ನಿಧಾನವಾಗುತ್ತದೆ. ಒಳಗೆ ಗಾಳಿಯು ಉಂಟುಮಾಡಿರುವ ಅಪಾರ ಒತ್ತಡದಿಂದ ಏರ್ ಬ್ಯಾಗ್ ನಂತಹ ಸುರಕ್ಷಾ ಕವಚ ದೊರೆಯುತ್ತದೆ. ಈ ಉಪಾಯವನ್ನು ಈ ಮೊದಲು ಎಲ್ಲಿಯೂ ಬಳಸಿರಲಿಲ್ಲ. ಅಂತೆಯೇ ಕಂಪ್ರೆಸರ್ ನ್ನು ಹೈ-ಮೋಡ್ ನಲ್ಲಿಟ್ಟು ನಿಮಿಷಕ್ಕೆ 950 ಕ್ಯೂಬಿಕ್ ಫೀಟ್ ನಷ್ಟು ಗಾಳಿ ಪಂಪ್ ಮಾಡಲಾರಂಭಿಸಿದರು.
 
ಗಣಿಯೊಳಗೆ ಹೆಚ್ಚುತ್ತಿದ್ದ ನೀರನ್ನು ಹೊರಹಾಕಲು ಹೆಚ್ಚಿನ ಸಾಮರ್ಥ್ಯದ ಪಂಪ್ ಗಳನ್ನು ತರಿಸಿದ್ದರು. ಗುರುವಾರ ಸಾಯಂಕಾಲದ ಹೊತ್ತಿಗೆ ನೀರಿನ ಮಟ್ಟ ಗರಿಷ್ಠ ಅಂದರೆ 566 ಮೀಟರ್ಗೆ ಮುಟ್ಟಿತು. ಜೀವವನ್ನುಳಿಸಿಕೊಳ್ಳಲು ಗಣಿ ಕಾರ್ಮಿಕರು ಸುರಂಗದ ಅಂತ್ಯಂತ ಎತ್ತರಕ್ಕೆ ಪ್ರದೇಶಕ್ಕೆ ಚಲಿಸಿದರು. ಪೆನ್ಸಿಲ್ವೇನಿಯಾ ರಾಜ್ಯದ ಗವರ್ನೆರ್ ಮಾರ್ಕ್ ಸ್ಕ್ವೆಕೇರ್ ಘಟನಾ ಸ್ಥಳಕ್ಕೆ ಭೇಟಿಕೊಟ್ಟು, ರಕ್ಷಣಾ ಕಾರ್ಯ ಚುರುಕಾಗುವಂತೆ ನೋಡಿಕೊಂಡರು. ಗಣಿ ದುರಂತ ಸಂಭವಿಸಿದ ಸುದ್ದಿ ಕೇಳುತ್ತಲೇ, ರಕ್ಷಣಾ ತಂಡದವರು ಅಗಲವಾಗಿ ಬಾವಿ ಕೊರೆಯುವ ಯಂತ್ರದವರನ್ನು ಸಂಪರ್ಕಿಸಿದರು. ಕೆಳಗೆ ಸಿಲುಕಿಕೊಂಡವರನ್ನು ಮೇಲೆತ್ತಲು ಇಷ್ಟು ಅಗಲದ ರಕ್ಷಣಾ ಬಾವಿಯ ಅಗತ್ಯವಿತ್ತು. ಲಿಂಕನ್ ಟೌನ್ ಶಿಪ್ನಿಂದ 188 km ಆಚೆ, ದೂರದ ವೆಸ್ಟ್-ವರ್ಜಿನಿಯಾದಲ್ಲಿ ಇಂತಹ ಯಂತ್ರವಿತ್ತು. 30 ಇಂಚು ಅಗಲ ಬಾವಿ ಕೊರೆಯುವ ಸಾಮರ್ಥ್ಯವಿದ್ದ ಯಂತ್ರವನ್ನು ಪೊಲೀಸ್ ಕಾವಲಿನ ಜೊತೆಗೆ ಜೀರೋ ಟ್ರಾಫಿಕ್ನಲ್ಲಿ ತರಲಾಯಿತು. ಸಾಯಂಕಾಲ ಆರು ಗಂಟೆಗೆ, ಅಂದರೆ ದುರಂತ ಸಂಭವಿಸಿ 18 ತಾಸುಗಳ ಬಳಿಕ ಇದು ಕೆಲಸ ಆರಂಭಿಸಿತು. ಮೊದಲೇ ಕೊರೆದಿದ್ದ 15 ಸೆಂಟಿಮೀಟರ್ ಗುಂಡಿಯ ಆರು ಮೀಟರ್ ದೂರದಲ್ಲಿ, ಕೊರೆಯಲು ಶುರುಮಾಡಿದ ನಂತರ ಮಧ್ಯರಾತ್ರಿ 1.12ಕ್ಕೆ ಯಂತ್ರ ಸ್ಥಗಿತಗೊಂಡಿತು. ಕಾರಣವೇನೆಂದು ಪರಿಶೀಲಿಸಿದಾಗ ಅದರ ಡ್ರಿಲ್ ಬಿಟ್ ತುಂಡಾಗಿತ್ತು. ಆದರೆ ಇನ್ನು ಕೊರೆಯುವುದಕ್ಕೆ 42 ಮೀಟರ್ ಬಾಕಿಯಿತ್ತು. ತುಂಡಾದ ಡ್ರಿಲ್ ಬಿಟ್ ನ ಒಂದು ಭಾಗವನ್ನು ಮೇಲೆತ್ತುವಲ್ಲಿ ಸಫಲರಾದರು, ಇನ್ನೊಂದು ಭಾಗ ಒಳಗೆ ಉಳಿದಿತ್ತು. ಇದನ್ನು ಸರಿಪಡಿಸಲು ಸಾಮಾನ್ಯವಾಗಿ 3-4 ದಿನಗಳು ಬೇಕು. ಆದರೆ ಇಲ್ಲಿ ಅಷ್ಟು ಸಮಯಾವಕಾಶ ಇರಲಿಲ್ಲ. ರಕ್ಷಣಾ ತಂಡದ ಹೆಲಿಕ್ಯಾಪ್ಟರ್ ನಲ್ಲಿ, ಜೆಫರ್ಸನ್ ಕಂಟ್ರಿ  ಭಾಗದಲ್ಲಿ ಇದ್ದ ಭಾರಿ ವರ್ಕ್ ಶಾಪ್ ಗೆ ಒಯ್ದು ಸರಿಪಡಿಸಿದರು.
 
 
 
 

ಗವರ್ನೆರ್ ಮಾರ್ಕ್ ಸ್ಕ್ವೆಕೇರ್

 

ತಾಂತ್ರಿಕ ತೊಂದರೆಯಿಂದಾಗಿ ಹದಿನೆಂಟು ಗಂಟೆಗಳಿಂದ ಕೊರೆಯುವ ಕಾರ್ಯ ಸ್ಥಗಿತಗೊಂಡಿತ್ತು. ಮತ್ತೊಂದೆಡೆ, ಗಣಿಯಿಂದ ನೀರು ಹೊರಹಾಕುವ ಕೆಲಸ ಹಾಗು ಗಾಳಿಯನ್ನು ಪಂಪ್ ಮಾಡುವ ಕೆಲಸ ನಿರಂತರವಾಗಿ ಸಾಗಿತ್ತು. ಶುಕ್ರವಾರ ರಾತ್ರಿ ಎಂಟೂವರೆ ಹೊತ್ತಿಗೆ ಕೊರೆಯುವ ಕಾರ್ಯ ಮತ್ತೆ ಶುರುವಾಯಿತು. ರಾತ್ರಿ ಮತ್ತೆ ಅಡಚಣೆ ಉಂಟಾಗಿ ಸಮೀಪದಲ್ಲಿದ್ದ ಇನ್ನೊಂದು 26 ಇಂಚು ಅಗಲದ ಯಂತ್ರದಿಂದ ಕೊರೆಯಲು ನಿರ್ಧರಿಸಿದ್ದರು. ಮರುದಿನ ಬೆಳಿಗ್ಗೆ ಆರೂವರೆ ಹೊತ್ತಿಗೆ, ಯಂತ್ರ ಗಣಿ ಕಾರ್ಮಿಕರು ಸಿಲುಕಿದ್ದ ಸ್ಥಳದಿಂದ ಐದು ಮೀಟರ್ ಮೇಲೆ ತಲುಪಿದಾಗ ಕೆಲಸ ನಿಲ್ಲಿಸಲು ನಿರ್ಧರಿಸಿದ್ದರು. ಏಕೆಂದರೆ ಇಲ್ಲಿ ಇನ್ನೊಂದು ಅಪಾಯವಿತ್ತು, ಕಾರ್ಮಿಕರು ಸಿಲುಕಿದ್ದ ಸ್ಥಳಕ್ಕೆ ನೀರು ಬರದಿರಲೆಂದು, ಅಪಾರ ಪ್ರಮಾಣದ ಗಾಳಿಯನ್ನು 15 ಸೆಂಟಿಮೀಟರ್ ಅಗಲದ ಬಾವಿಯ ಮೂಲಕ ಸುರಂಗದ ಒಳಗೆ ಪಂಪ್ ಮಾಡಿದ್ದೂ ಸರಿಯಷ್ಟೇ; ಇದರಿಂದ ಏರುತ್ತಿದ್ದ ನೀರಿನ ಪ್ರಮಾಣಕ್ಕೆ ಕಡಿವಾಣ ಬಿದ್ದು ಅಲ್ಲೊಂದು ಗಾಳಿಯ ಸುರಕ್ಷಾ ಕವಚ ರಚನೆಯಾಗಿತ್ತು. ಒಂದು ವೇಳೆ ಈಗ ಇನ್ನೊಂದು ಬಾವಿ ಕೊರೆದರೆ, ಆ ಸುರಕ್ಷಾ ಕವಚ ಒಡೆದು ಹೋಗಿ ನೀರು ಇನ್ನು ಮೇಲೆ ಏರಿ ಕಾರ್ಮಿಕರ ಜೀವ ಹರಣವಾಗುತಿತ್ತು. 'ಕಾರ್ಮಿಕರು ಇನ್ನು ಬದುಕಿದ್ದಾರೆ' ಎನ್ನುವ ಆಶಾಭಾವನೆಯಿಂದ ಇನ್ನು ಎಂಟು ಗಂಟೆ ಕಾಯಲು ನಿರ್ಧರಿಸಿದರು.
 
 
 
 

ಪಾರಾದ ಗಣಿಕಾರ್ಮಿಕ 

 

ಶನಿವಾರ ಸಾಯಂಕಾಲ ನಾಲ್ಕು ಗಂಟೆ ಹೊತ್ತಿಗೆ ಮತ್ತೆ ಕೆಲಸ ಶುರು ಮಾಡಿದ್ದರು. ಭಾರಿ ಸಾಮರ್ಥ್ಯದ ಹನ್ನೆರಡು ಪಂಪ್ ಗಳನ್ನೂ ಬಳಸಿ ಸೆಕೆಂಡಿಗೆ 1200 ಲೀಟರ್ ನೀರು ಗಣಿಯಿಂದ ಹೊರ ಹೋಗುವಂತೆ ಮಾಡಿದ್ದರು. ನೀರು ನಿಧಾನವಾಗಿ ಇಳಿಯಲಾರಂಭಿಸಿತು. ರಾತ್ರಿ ಹತ್ತೂವರೆ ಹೊತ್ತಿಗೆ ಕೆಲಸ ಮುಗಿದು, ಸುರಂಗದ ಒಳಗಡೆ ಗಾಳಿಯ ಒತ್ತಡವನ್ನು ಪರಿಶೀಲಿಸಿದರು. ಮಾಪಕ, ಸುರಂಗದ  ಒಳಗಿನ ಒತ್ತಡ, ವಾತಾವರಣದ ಒತ್ತಡಕ್ಕೆ ಸಮನಾಗಿದೆ ಎಂದು ತೋರಿಸಿತು. ಒಳಗಡೆ ನಾಲ್ಕು ದಿನಗಳಿಂದ ಅನ್ನಾಹಾರಗಳಿಲ್ಲದೆ ಸಿಲುಕಿಕೊಂಡಿದ್ದ ಕಾರ್ಮಿಕರ ಸ್ಥಿತಿ ತಿಳಿಯುತ್ತಿರಲಿಲ್ಲ. ವಿಶೇಷ ಮೈಕ್ರೋಫೋನ್ ಒಂದನ್ನು ಕೆಳಗೆ ಬಿಟ್ಟು ಸದ್ದನ್ನು ಅಳಿಸಲಾಯಿತು. ರಕ್ಷಣಾ ತಂಡದ ಸದಸ್ಯನೊಬ್ಬ '' You traped 9 members....''  ಎನ್ನುತ್ತಿದ್ದಂತೆ ಒಳಗಡೆಯಿಂದ ಪ್ರತಿಕ್ರಿಯೆ ಬಂತು. ಈ ಶುಭಸುದ್ದಿಯನ್ನು ಅಮೆರಿಕಾದ ಟಿ.ವಿ ಚಾನೆಲ್ಗಳು ನೇರಪ್ರಸಾರ ಮಾಡಿದವು. ನಂತರ ವಿಶೇಷವಾದ ಬುಟ್ಟಿಯನ್ನು ಒಳಗೆ ಬಿಟ್ಟು ಕಾರ್ಮಿಕರನ್ನು ಮೇಲಕ್ಕೆ ಎಳೆದುಕೊಂಡರು. ಕೊನೆಯ ಕಾರ್ಮಿಕ ಮಾರ್ಕ್ ಪೋಪೆರ್ನಾಕ್ ಹೊರಬಂದಾಗ ಸಮಯ, ರಾತ್ರಿ ಎರಡೂವರೆ ಗಂಟೆ ಆಗಿತ್ತು. ಪವಾಡ ಸದೃಶ್ಯವಾಗಿ ಪಾರಾದ ಕಾರ್ಮಿಕರನ್ನು ರಕ್ಷಣಾ ತಂಡದ ಸದಸ್ಯರು ಹಾಗು ನೆರೆದ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ನಾವು ಮಾಡಿದ ಪ್ರಯತ್ನಗಳು ವಿಫಲವಾಗಲಿಲ್ಲ, ಎಂದು ಅರಿತ ಅವರ ಕಣ್ಣಲ್ಲಿ ಆನಂದ ಭಾಷ್ಪವಿತ್ತು. ಅಲ್ಲಿಗೆ 77 ಗಂಟೆಗಳ ಕಾತರತೆ ಮುಗಿಯಿತು, ಕುಟುಂಬ ವರ್ಗದವರ ಪ್ರಾರ್ಥನೆ ಫಲಕೊಟ್ಟಿತ್ತು.
 
 
 
 

ಈಗ ಕ್ಯೂಕ್ರಿಕ್ ಪ್ರದೇಶ ಹೀಗಿದೆ 

 
 
ಒಬ್ಬ ಕಾರ್ಮಿಕ ಎದೆನೋವಿನಿಂದ ಬಳಲಿದ್ದು ಬಿಟ್ಟರೆ, ಉಳಿದೆಲ್ಲರೂ ಆರೋಗ್ಯವಾಗಿದ್ದರು. ಅರೋಗ್ಯ ಪರೀಕ್ಷೆಗಳು ಮುಗಿದ ನಂತರ ಅವರನ್ನೆಲ್ಲ ಮನೆಗೆ ಕಳುಹಿಸಿ ಕೊಡಲಾಯಿತು. ಘಟನೆ ಬಗ್ಗೆ ತನಿಖೆ ನಡೆಸಿದ ಸಮಿತಿ  '' ಗಣಿಗಾರಿಕೆಗೆ ಅನುಮತಿ ನೀಡಿದ ಸಂದರ್ಭದಲ್ಲಿ ಕೊಟ್ಟಿದ್ದ ಹಳೆಯ ಮತ್ತು ತಪ್ಪಾದ ನಕ್ಷೆ ಈ ಘಟನೆಗೆ ಕಾರಣ '' ಎಂದಿತು. ಈ ಪವಾಡ ನಡೆದ ಸ್ಥಳ ಇಂದು ಪ್ರವಾಸಿ ತಾಣವಾಗಿದೆ.  www.quecreekrescue.org  ಎನ್ನುವ ಜಾಲತಾಣ ಸ್ಥಾಪಿಸಿ, ದತ್ತಿ ನಿಧಿಯನ್ನು ಸಂಗ್ರಹಿಸಲು ಶುರುಮಾಡಿದ್ದಾರೆ, ಹಾಗೂ ರಕ್ಷಣಾ ಬಾವಿ ಕೊರೆದ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿದ್ದಾರೆ. ಯಾವೊಂದು ಪೂರ್ವಾನುಭವ ಇಲ್ಲದಿದ್ದರೂ, ಸೂಕ್ತ ತಂತ್ರಜ್ಞಾನದ ಸಹಾಯದಿಂದ ಅವರು ರಕ್ಷಣಾ ಕಾರ್ಯ ನಿರ್ವಹಿಸಿದ ರೀತಿ ಪ್ರಶಂಸೆಗೆ ಕಾರಣವಾಯಿತು. ಅಂದವರಲ್ಲಿ ತೆಗೆದುಕೊಂಡ ಪ್ರತಿ ನಿರ್ಧಾರಗಳು ಸರಿಯಾಗಿದ್ದವು. ಆ ಸಂಕಷ್ಟದ ಸಮಯದಲ್ಲಿ ಇವರ ಮನಸ್ಸಿನಲ್ಲಿದ್ದ ಒಂದೇ ಯೋಚನೆ  '' Never give Up!.... '' .
 
                                                                                                                                                                   
                                                                                                                                                                                -Tharanatha Sona
 
 
ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ & ಜಿಯೋಗ್ರಾಫಿಕ್ ಚಾನೆಲ್