ಬೆಂಗಳೂರಿನಲ್ಲಿ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ

ಬೆಂಗಳೂರಿನಲ್ಲಿ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೮ ಎಪ್ರಿಲ್ ೨೦೧೭ರಂದು ಉದ್ಘಾಟನೆಯಾದ ಮೂರು ದಿನಗಳ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಮೊದಲ ದಿನವೇ ಜನಸಾಗರ.ಅಲ್ಲಿನ ಮಳಿಗೆಗಳಲ್ಲಿ ನವಣೆ, ಬರಗು, ಊದಲು, ಸಜ್ಜೆ, ಸಾಮೆ, ಅರಕ, ರಾಗಿ - ಈ ಸಿರಿಧಾನ್ಯಗಳು ಮತ್ತು ಬಿಳಿಜೋಳದಿಂದ ತಯಾರಿಸಿದ ತಿಂಡಿತಿನಿಸುಗಳಿಗೆ ಭಾರೀ ಬೇಡಿಕೆ. ರುಚಿರುಚಿಯಾದ ಖಾದ್ಯಗಳನ್ನು ಸವಿದ ಜನರಿಂದ ಸಿರಿಧಾನ್ಯಗಳ ಉತ್ಪನ್ನಗಳ ಖರೀದಿ. ಮೇಳದಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೂ ಅಧಿಕ ಬೇಡಿಕೆ. ಸಾವಯವ ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ಸಾವಯವ ಬೆಲ್ಲಕ್ಕೂ ಹೆಚ್ಚಿನ ಬೇಡಿಕೆ. "ನಮ್ಮ ದೇಶದಲ್ಲಿ ಸಿರಿಧಾನ್ಯಗಳ ಕೃಷಿಗೆ ಪ್ರೋತ್ಸಾಹ ನೀಡಲಿಕ್ಕಾಗಿ ಸಿರಿಧಾನ್ಯಗಳ ರಾಷ್ಟ್ರೀಯ ಮಿಷನ್ ಸ್ಥಾಪಿಸಲಾಗುವುದು”  ಎಂದು ಕೇಂದ್ರ ಸರಕಾರದ ರಾಸಾಯನಿಕ ಗೊಬ್ಬರ ಸಚಿವ ಅನಂತ ಕುಮಾರ್ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು. ಈ ಬಗ್ಗೆ ಚರ್ಚಿಸಲಿಕ್ಕಾಗಿ ಎಲ್ಲ ರಾಜ್ಯಗಳ ಕೃಷಿ, ತೋಟಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರ ದುಂಡುಮೇಜಿನ ಸಭೆ ಕರೆಯಲಾಗುವುದು ಎಂಬುದು ಅವರು ನೀಡಿದ ಮಾಹಿತಿ. ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಕೃಷಿ ಸಚಿವ ಕೃಷ್ಣ ಭೈರೇ ಗೌಡ, ರಾಜ್ಯದಲ್ಲಿ ಸಾವಯವ ಕೃಷಿ ನೀತಿ ಜ್ಯಾರಿಯಾಗಿದ್ದು, ೧.೮೦ ಲಕ್ಷ ಹೆಕ್ಟೇರಿನಲ್ಲಿ ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ ಎಂದರು. (೨೦೦೪ರಲ್ಲಿ ಸಾವಯವ ಕೃಷಿಗೆ ಒಳಪಟ್ಟಿದ್ದ ಪ್ರದೇಶ ಕೇವಲ ೨,೪೦೦ ಎಕ್ರೆ.) ಕಳೆದ ನಾಲ್ಕು ವರುಷಗಳಲ್ಲಿ ರೈತರು ಹೆಚ್ಚುವರಿ ೯೦,೦೦೦ ಹೆಕ್ಟೇರು ಪ್ರದೇಶದಲ್ಲಿ ಸಾವಯವ ಕೃಷಿ ಅನುಸರಿಸಲು ತೊಡಗಿದ್ದಾರೆಂದು ತಿಳಿಸಿದರು.ಸಾವಯವ ಕೃಷಿಯ ಮತ್ತು ಸಿರಿಧಾನ್ಯಗಳ ಉತ್ಪನ್ನಗಳ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲ; ಸರಕಾರ ಮಾತುಕತೆ ನಡೆಸಿದ ನಂತರ, ದೊಡ್ಡ ಕಂಪೆನಿಗಳು ರೈತರಿಂದ ನೇರವಾಗಿ ಈ ಧಾನ್ಯಗಳನ್ನು ಖರೀದಿಸಲು ಆಸಕ್ತಿ ತೋರಿವೆ ಎಂದರು. ರಾಜ್ಯದ ಸಾವಯವ ಕೃಷಿಕರನ್ನು ಸಂಘಟಿಸಲಿಕ್ಕಾಗಿ ಈಗಾಗಲೇ ೧೪ ಒಕ್ಕೂಟಗಳನ್ನು ರಚಿಸಲಾಗಿದೆ. ಮುಂದಿನ ಹಂತ ಸಾವಯವ ಕೃಷಿ ಉತ್ಪನ್ನಗಳಿಗೆ ಬ್ರಾಂಡ್ ರೂಪ ನೀಡುವುದು. ಅದಕ್ಕಾಗಿ, ಗುಣಮಟ್ಟ ಉಳಿಸಿಕೊಳ್ಳುವುದು, ಉತ್ತಮ ರೀತಿಯ ಪ್ಯಾಕಿಂಗ್ ಮತ್ತು ಲೇಬಲಿಂಗ್ ಮಾಡುವ ಬಗ್ಗೆ ರೈತರಿಗೆ ತರಬೇತಿ ಕೊಡಲಾಗುತ್ತಿದೆ ಎಂದು ಅವರು ಹೇಳಿದರು. ಮೂರು ದಿನಗಳು ಜರಗಿದ ಮೇಳಕ್ಕೆ ಭೇಟಿಯಿತ್ತವರು ಸುಮಾರು ೪೮ ಸಾವಿರ ಜನರು. ಅಲ್ಲಿ ನಡೆದ ವಹಿವಾಟಿನ ಮೌಲ್ಯ ರೂಪಾಯಿ ೭೦ ಲಕ್ಷ. ಇದು ಸಿರಿಧಾನ್ಯಗಳು ಮತ್ತು ಸಾವಯವ ಹಣ್ಣು-ತರಕಾರಿ-ಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ ಎಂಬುದರ ಸೂಚಕ. ಫಲದ ಅಗ್ರೋ ರೀಸರ್ಚ್ ಪ್ರತಿಷ್ಠಾನ, ನೆಡ್ ಸ್ಪೈಸಸ್ ಕಂಪೆನಿ, ಮೆಹೋತ್ರಾ ಪ್ರಾಡಕ್ಟ್ಸ್, ರಾಪಿಡ್ ಆರ್ಗಾನಿಕ್ ಕಂಪೆನಿ, ತೆರಾ ಫಾರ್ಮ್ ಪ್ರಾಜೆಕ್ಟ್ಸ್ - ಇವು ರಾಜ್ಯದ ೧೪ ಸಹಕಾರಿ ಉತ್ಪಾದಕರ ಒಕ್ಕೂಟಗಳೊಂದಿಗೆ ೨೦ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಿಂದಾಗಿ ಸಾವಯವ ಕೃಷಿಕರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ ಎಂಬ ಆಶಯ.ಸಿರಿಧಾನ್ಯಗಳ ಸಂಸ್ಕರಣೆಗೆ ಯಂತ್ರಗಳು ಅತ್ಯಗತ್ಯ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರೂ ಸಂಸ್ಕರಣಾ ಯಂತ್ರಗಳು ಲಭ್ಯವಿಲ್ಲ. ರಾಮನಗರ, ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ತಲಾ ಒಂದೊಂದು ಯಂತ್ರವಿದೆ. ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ  ಭವಾನಿ ಇಂಡಸ್ಟ್ರೀಸ್ ತಯಾರಿಸಿದ ಈ ಯಂತ್ರದ ಬೆಲೆ ರೂ. ನಾಲ್ಕು ಲಕ್ಷ. ಈ ಮೇಳವನ್ನು ಅದ್ದೂರಿಯಾಗಿ ಜರಗಿಸಿದ ಕೃಷಿ ಇಲಾಖೆಯು ಸಹಾಯಧನ ನೀಡಿದರೆ, ಸಾವಯವ ರೈತರ ಸಂಘಟನೆಗಳ ಒಕ್ಕೂಟಗಳು ಈ ಯಂತ್ರ ಖರೀದಿಸಲು ಸಾಧ್ಯವಾದೀತು. ಇದು ಸಾವಯವ ಕೃಷಿಕರಿಗೆ ಸರಕಾರ ಮಾಡಬೇಕಾದ ನಿಜವಾದ ಸಹಾಯ.