ಮಂಗಳೂರಿನ ಸಾವಯವ ಸಂತೆಯ ಅಂತರಂಗ

ಮಂಗಳೂರಿನ ಸಾವಯವ ಸಂತೆಯ ಅಂತರಂಗ

ತರಕಾರಿ ಕೃಷಿಕ ರಾಮಣ್ಣ ಮುಂಡಾಜೆಯಿಂದ ಮಂಗಳೂರಿಗೆ ಭಾನುವಾರಗಳಂದು ೧೬೦ ಕಿಮೀ ದೂರ ಪ್ರಯಾಣಿಸುತ್ತಾರೆ – ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆ ಬದಿಯ ಸಾವಯವ ಸಂತೆಯಲ್ಲಿ ರಾಸಾಯನಿಕ-ರಹಿತ ತರಕಾರಿ ಮಾರಲಿಕ್ಕಾಗಿ. ರಾಮಣ್ಣ ಬೆಳೆಸಿದ ಸೊಪ್ಪುತರಕಾರಿಗಳು, ಗೆಡ್ಡೆಗಳು, ಸೌತೆಕಾಯಿ, ಸೋರೆಕಾಯಿ, ಪಡುವಲಕಾಯಿ, ಬೆಂಡೆ, ತೊಂಡೆ, ಬಾಳೆಹಣ್ಣು, ಪಪ್ಪಾಯಿ ಇತ್ಯಾದಿ ಸಂತೆಯಲ್ಲಿ ಮೂರು ಗಂಟೆಯೊಳಗೆ ಮಾರಾಟವಾಗುತ್ತವೆ. ಕಳೆದ ಎರಡೂವರೆ ವರುಷಗಳಿಂದ ಸಂತೆಯ ಭಾನುವಾರ ರಾಮಣ್ಣರ ಎರಡು ತಾಸುಗಳ ಒಮ್ನಿ ವ್ಯಾನಿನ ಪ್ರಯಾಣ ಮುಂಜಾನೆ ೫ ಗಂಟೆಗೆ ಶುರು. ಅವರು ಬೆಳಗ್ಗೆ ೭.೩೦ರ ಹೊತ್ತಿಗೆ ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆ ತಲಪಿದಾಗ ಸಾವಯವ ಸಂತೆಯಲ್ಲಿ ಮಧ್ಯವರ್ತಿಗಳಿಲ್ಲದ ಮಾರಾಟ ಆರಂಭ. ಇವರಿಂದ ತಾಜಾ ತರಕಾರಿ ಖರೀದಿಗಾಗಿ ಬೆಳಗ್ಗೆ
೭ ಗಂಟೆಯಿಂದಲೇ ಕಾದಿರುತ್ತಾರೆ ಕೆಲವು ಗ್ರಾಹಕರು.
ಇಂತಹ ೧೨ ತರಕಾರಿ ಬೆಳೆಗಾರರಿಂದ ಸಾವಯವ ಸಂತೆಯಲ್ಲಿ ಗ್ರಾಹಕರಿಗೆ ಹಣ್ಣು-ತರಕಾರಿ-ಧಾನ್ಯ ನೇರ ಮಾರಾಟ. ಇನ್ನೊಬ್ಬರು ಬ್ಯಾಂಕಿನಿಂದ ನಿವೃತ್ತರಾದ ಪ್ರದೀಪ್ ಸೂರಿ. ಹೊಸಬೆಟ್ಟಿನಲ್ಲಿ ತಮ್ಮ ಮನೆಯ ಟೆರೇಸಿನಲ್ಲಿ ಮತ್ತು ಪಕ್ಕದ ೧೪ ಸೆಂಟ್ಸ್ ಜಾಗದಲ್ಲಿ ತರಕಾರಿ ಬೆಳೆಸಿ ಮಾರುವವರು. “ನಾನು ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಸಲಿಕ್ಕಾಗಿಯೇ ಆ ಜಾಗ ಖರೀದಿಸಿದೆ” ಎನ್ನುತ್ತಾರೆ. ಭಾನುವಾರ ಬೆಳಗ್ಗೆ ೮.೩೦ರ ಹೊತ್ತಿಗೆ ಅವರು ತಂದಿರುವ ತರಕಾರಿಗಳೆಲ್ಲ ಮಾರಾಟವಾಗುತ್ತವೆ. “ಸಾವಯವ ಸಂತೆಯಲ್ಲಿ ಬೆಳೆಗಾರರು ನೇರವಾಗಿ ರೈತರಿಗೆ ಮಾರುವ ಕಾರಣ ಇದು ಬೆಳೆಗಾರರಿಗೆ ಲಾಭದಾಯಕ” ಎಂಬುದು ಸೂರಿ ಅವರ ಅಭಿಪ್ರಾಯ.
“ಇಲ್ಲಿ ಗ್ರಾಹಕರಿಂದ ಬೇಡಿಕೆ ಸಾಕಷ್ಟಿದೆ, ಆದರೆ ಪೂರೈಕೆ ಕಡಿಮೆ” ಎಂದು ತಿಳಿಸಿದವರು, ಈ ಸಂತೆ ಸಂಘಟಿಸುತ್ತಿರುವ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ. ಈ ಬಳಗದ ಕಾರ್ಯಕರ್ತರು ಸಂತೆಯಲ್ಲಿ ಮಾರುವ ಬೆಳೆಗಾರರ ಜಮೀನಿಗೆ ಭೇಟಿಯಿತ್ತಿದ್ದಾರೆ. ಈ ಬೆಳೆಗಾರರು ಸಾವಯವ ಪದ್ಧತಿಯಲ್ಲಿ ಹಣ್ಣುತರಕಾರಿ ಬೆಳೆಯುತ್ತಿದ್ದಾರೆಂದು ಖಚಿತಪಡಿಸಿಕೊಂಡ ನಂತರವೇ ಅವರಿಗೆ ಸಂತೆಯಲ್ಲಿ ಮಾರಲು ಅವಕಾಶ ನೀಡಲಾಗಿದೆ.
ರಾಸಾಯನಿಕ-ರಹಿತವಾದ ಹಣ್ಣುತರಕಾರಿಗಳೇ ಬೇಕೆನ್ನುವ ಗ್ರಾಹಕ ವರ್ಗವೊಂದನ್ನು ಮಂಗಳೂರಿನ ಸಾವಯವ ಸಂತೆ ಸೃಷ್ಟಿಸಿದೆ ಎಂಬ ಮಾಹಿತಿ ನೀಡಿದವರು ಬಳಗದ ಅಧ್ಯಕ್ಷರಾದ ಅಡ್ಡೂರು ಕೃಷ್ಣ ರಾವ್. ಬೆಳೆಗಾರರು ಬೆಳೆಸುವ ಸೌತೆ, ಬದನೆ, ಬೆಂಡೆ, ತೊಂಡೆ ಮುಂತಾದ ಸ್ಥಳೀಯ ತರಕಾರಿಗಳಿಗೆ ಈ ಸಂತೆ ಬೇಡಿಕೆ ರೂಪಿಸಿದೆ. ಸಂತೆಯಲ್ಲಿ ಮಾರುವ ಬೆಳೆಗಾರರು ತಮ್ಮೊಳಗೆ ಮಾತನಾಡಿಕೊಂಡು ತಮ್ಮ ಉತ್ಪನ್ನಗಳಿಗೆ ಏಕರೂಪದ ಬೆಲೆ ನಿಗದಿಪಡಿಸುತ್ತಾರೆ.
ಬಂಟ್ವಾಳ ತಾಲೂಕಿನ ಮುಡೂರು ಗ್ರಾಮದ ನರಸಿಂಹ ಮಯ್ಯರು ಮಾರಾಟ ಮಾಡುವ ಕೆಂಪಕ್ಕಿಯನ್ನೇ ಹುಡುಕಿಕೊಂಡು ಬರುವ ಹಲವು ಗ್ರಾಹಕರಿದ್ದಾರೆ. ಆರಂಭದಿಂದಲೂ ಸಾವಯವ ಸಂತೆಯ ಗ್ರಾಹಕರಾಗಿರುವ ಪ್ರೇಮಾನಂದ ಶೆಟ್ಟಿ, ಇಲ್ಲಿ ಮಾರುವ ತರಕಾರಿಗಳ ರುಚಿಯೇ ಅವು ರಾಸಾಯನಿಕ-ರಹಿತ ಎಂಬುದನ್ನು ಖಚಿತ ಪಡಿಸುತ್ತವೆ ಎಂದು ತಿಳಿಸಿದರು. ಕಳೆದ ಎರಡೂವರೆ ವರುಷಗಳಿಂದ ಸಾವಯವ ಸಂತೆ ಜರಗುತ್ತಿರುವುದೇ ಸಾವಯವ ಹಣ್ಣುತರಕಾರಿಗಳಿಗೆ ಹಲವು ಗ್ರಾಹಕರಿದ್ದಾರೆ ಎಂಬುದರ ಪುರಾವೆ.
ಸಾವಯವ ಕೃಷಿಕ ಗ್ರಾಹಕ ಬಳಗವು ಎರಡು ತಿಂಗಳಿಗೊಮ್ಮೆ ಬೆಳೆಗಾರರ ಹೊಲತೋಟಗಳಿಗೆ ಏರ್ಪಡಿಸುವ ಗ್ರಾಹಕರ ಭೇಟಿಯ ಬಗ್ಗೆ ತಿಳಿಸುತ್ತಾ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ನೀಡಿದ ಮಾಹಿತಿ: ಇದರಿಂದಾಗಿ ಗ್ರಾಹಕರು ಬೆಳೆಗಾರರ ಕೃಷಿಪದ್ಧತಿ ಬಗೆಗಿನ ಸಂಶಯ ನಿವಾರಿಸಿಕೊಳ್ಳಲು ಸಹಾಯ.
ವರ್ಷಾರಂಭ ದಿನದ ಸಾವಯವ ಸಂತೆ ಬಗ್ಗೆ 
“ದ ಹಿಂದೂ” ೨.೧.೨೦೧೭ರ ದಿನಪತ್ರಿಕೆಯಲ್ಲಿ ವರದಿ      
ಕನ್ನಡಾನುವಾದ: ಅಡ್ಡೂರು ಕೃಷ್ಣ ರಾವ್