ಸಾವಯವ ಸರ್ಟಿಫಿಕೇಟಿಗಿಂತ ವಿಶ್ವಾಸದ ವ್ಯವಹಾರ ಉತ್ತಮ

ಸಾವಯವ ಸರ್ಟಿಫಿಕೇಟಿಗಿಂತ ವಿಶ್ವಾಸದ ವ್ಯವಹಾರ ಉತ್ತಮ

ಸಾವಯವ ಕೃಷಿ ಉತ್ಪನ್ನಗಳ ಖರೀದಿಮಾಡುವಾಗ ಗ್ರಾಹಕರು ಮತ್ತೆ ಮತ್ತೆ ಕೇಳುವ ಪ್ರಶ್ನೆ: ಇದು ಸಾವಯವ ಎಂಬುದಕ್ಕೆ ಪುರಾವೆ ಏನು?
“ಸಾವಯವ ಸರ್ಟಿಫಿಕೇಟ್‌" ಅಂತಹ ಒಂದು ಪುರಾವೆ. ನಮ್ಮ ದೇಶದಲ್ಲಿ ಸಾವಯವ ದೃಢೀಕರಣದ (ಸರ್ಟಿಫಿಕೇಷನ್‌) ನಿಯಮಗಳನ್ನು ರೂಪಿಸುವ ಜವಾಬ್ದಾರಿ ಹೊಂದಿದ ಸಂಸ್ಠೆ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಪ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ). ಇದು ಕೇಂದ್ರ ಸರಕಾರದ ವಾಣಿಜ್ಯ ಮಂತ್ರಾಲಯದ ಅಧೀನ ಸಂಸ್ಠೆ. ಯುರೋಪಿಯನ್‌ ಯೂನಿಯನ್ನಿನ ಅತ್ಯಂತ ಕಠಿಣ ನಿಯಮಗಳುನ್ನು ಆಧರಿಸಿ ತನ್ನ ನಿಯಮಾವಳಿ ರೂಪಿಸಿದೆ.
ಸಾವಯವ ವಸ್ತುಗಳ ಜಾಗತಿಕ ವ್ಯವಹಾರಕ್ಕೆ (ಆಮದು_ರಪ್ತು) ಥರ್ಡ್ ಪಾರ್ಟಿ ಸರ್ಟಿಫಿಕೇಷನ್‌ (ಅಂದರೆ ಪೂರೈಕೆದಾರ ಮತ್ತು ಖರೀದಿದಾರನಿಂದ ಹೊರತಾದ) 
ಬೇಕೇಬೇಕು. ಇದಕ್ಕಾಗಿ ಭಾರತದಲ್ಲಿ ೨೨ ಏಜೆನ್ಸಿಗಳಿಗೆ ಎಪಿಇಡಿಎ ಮಾನ್ಯತೆ ನೀಡಿದೆ. ಈ ಏಜೆನ್ಸಿಗಳಿಂದ "ಸಾವಯವ ಕೃಷಿ ಉತ್ಪನ್ನ" ಎಂಬ ಸರ್ಟಿಫಿಕೇಟ್‌ ಪಡೆಯಬೇಕಾದರೆ ಪ್ರತಿಯೊಬ್ಬ ರೈತನಿಗೆ ಪ್ರತಿ ವರಷ ಸುಮಾರು ರೂ. ೩೦,೦೦೦ ವೆಚ್ಚ. ಅದಲ್ಲದೆ ರೈತನು ಹಲವಾರು ದಾಖಲೆಗಳನ್ನು ಪರಿಶೀಲನೆಗಾಗಿ ಬರೆದಿಡಬೇಕಾಗುತ್ತದೆ. (ವಿದೇಶಗಳಿಗೆ ವಿಷಮುಕ್ತ ಆಹಾರ ರಪ್ತು ಮಾಡುವುದಲ್ಲದೆ, ಅದರ ದೃಢೀಕರಣದ ವೆಚ್ಚವನ್ನೂ ನಮ್ಮ ರೈತರು ಭರಿಸಬೇಕಾದ ವಿಪರ್ಯಾಸ ಗಮನಿಸಿ.)
ನಮ್ಮ ದೇಶದ ಸಾವಯವ ಕೃಷಿಕರಿಗೆ (ಬಹುಪಾಲು ಸಣ್ಣರೈತರೂ ಅನಕ್ಷರಸ್ಥರೂ ಆಗಿರುವ ಪರಿಸ್ಥಿತಿಯಲ್ಲಿ) ಇದು ದೊಡ್ಡ ಸವಾಲು. ಅವರಿಗೆ ಇದು ದುಬಾರಿ ವೆಚ್ಚದ ಕೆಲಸವಾದರೆ ಗ್ರಾಹಕರಿಗೂ ಇದರಿಂದ ಅಧಿಕ ವೆಚ್ಚ. ಯಾಕೆಂದರೆ ಸರ್ಟಿಫಿಕೇಶನ್ನಿನ ವೆಚ್ಚ ಕೂಡಿಸಿದಾಗ ಸಾವಯವ ಆಹಾರವಸ್ತುಗಳು ದುಬಾರಿ ಎಂಬುದು ಗ್ಯಾರಂಟಿ. ಅದೇನಿದ್ದರೂ, ಸಣ್ಣರೈತರಿಗಾಗಿ ಸಾವಯವ ಕೃಷಿಉತ್ಪನ್ನಗಳ ಗುಣಮಟ್ಟ ಗ್ಯಾರಂಟಿ ನೀಡುವ ಪರ್ಯಾಯ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು "ಸಹಭಾಗಿತ್ವದ ಖಾತರಿ ವ್ಯವಸ್ಠೆ" (ಪಿಜಿಎಸ್‌ ಅಂದರೆ ಪಾರ್ಟಿಸಿಪೇಟರಿ ಗ್ಯಾರಂಟಿ ಸಿಸ್ಟಂ). ಇದು ಕಡಿಮೆ ವೆಚ್ಚದ ಮತ್ತು ಕಡಿಮೆ ದಾಖಲೆಪತ್ರಗಳ  ವಿಧಾನ . ಇದರಲ್ಲಿ ಪ್ರತಿಯೊಂದು ಸಾವಯವ ಕೃಷಿಕರ ಬಳಗದ ವಿಶ್ವಾಸಾರ್ಹತೆಯ ಹೊಣೆ ಹೊರಬೇಕಾದವರು ಅದರ ಸದಸ್ಯರೇ. ಈ ವಿಧಾನದಲ್ಲಿ ದೃಢೀಕರಣಕ್ಕೆ ಮಧ್ಯವರ್ತಿಗಳು ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಸದಸ್ಯನ ಕೃಷಿ ಮತ್ತು ಸಂಸ್ಕರಣಾ ವಿಧಾನಗಳ ತನಿಖೆ ಮತ್ತು ವಿಶ್ವಾಸಾರ್ಹತೆಯ ಖಾತರಿಗೆ ಇತರ ಸದಸ್ಯರೇ ಜವಾಬ್ದಾರರು.
ಈಗ ಪಿಜಿಎಸ್‌ ಮೂರು ಬಗೆಯ ಚಿಹ್ನೆಗಳನ್ನು ನೀಡುತ್ತಿದೆ. ಮಾರುಕಟ್ಟೆಯಲ್ಲಿರುವ ಹಲವು ಕೃಷಿಉತ್ಪನ್ನಗಳಲ್ಲಿ ಈ ಚಿಹ್ನೆಗಳನ್ನು ನಾವು ಕಾಣಬಹುದು. ಹಳದಿ ಬಣ್ಣದ "ನ್ಯಾಚುರಲ್‌" ಸ್ಟಿಕ್ಕರ್‌: ಯಾವುದೇ ರಾಸಾಯನಿಕ ಬಳಸಲಾಗಿಲ್ಲ ಎಂಬ ಸೂಚಕ. ನೀಲಿ ಬಣ್ಣದ "ಅರ್ಗಾನಿಕ್‌ ಇನ್‌ ಕನ್‌ವರ್ಶನ್" ಸ್ಟಿಕರ್‌: ದೃಢೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ; ಯಾವುದೇ ರಾಸಾಯನಿಕ ಬಳಸಲಾಗಿಲ್ಲ ಎಂಬ ಸೂಚಕ.ಮೂರನೆಯದು ಹಸುರು ಬಣ್ಣದ ಸರ್ಟಿಪೈಡ್‌ ಆಗಾನಿಕ್‌" ಸ್ಟಿಕರ್‌: ಸಾವಯವ ಉತ್ಪನ್ನವೆಂದು ಖಾತರಿ ನೀಡುವ ಇದರ ಜೊತೆಗೆ "ಎಸ್‌ಜಿಎಸ್‌" ಸ್ಟಿಕರ್‌ ಮತ್ತು "ಇಂಡಿಯಾ ಆರ್ಗಾನಿಕ್" ಎಂಬ ಇನ್ನೆರಡು ಸ್ಟಿಕರ್‌ ಇರಲೇಬೇಕು. ಅದೆಲ್ಲ ಸರಿ. ಕೃಷಿಕರ ಸಂಘಟನೆಗಳು ಪಿಜಿಎಸ್‌ ಬಗ್ಗೆ ಏನೆನ್ನುತ್ತವೆ? ೧೫೦೦ ರೈತರ ಸಂಘಟನೆ ಧರಣಿ ಸುಫಲಂನ ಅಧ್ಯಕ್ಷ  ಸುನಿಲ್‌ ಗುಪ್ತಾರ ಪ್ರಕಾರ ಪಿಜಿಎಸ್‌ ದೃಡೀಕರಣದ ಅರ್ಜಿ ವಿಲೇವಾರಿಗೆ ಎರಡು-ಮೂರು ವರುಷ ತಗಲುತ್ತದೆ. ಈ ವಿಳಂಬವನ್ನು ಪಿಜಿಎಸ್‌ ವ್ಯವಸ್ಥೆ ನಿಯಂತ್ರಿಸುವ ರಾಷ್ಟೀಯ ಸಾವಯವ ಕೃಷಿ ಕೇಂದ್ರದ (ಕೃಷಿ ಮಂತ್ರಾಲಯದ ಅಧೀನ ಸಂಸ್ಥೆ) ನಿರ್ದೇಶಕರಾದ ಎ.ಕೆ. ಯಾದವ್‌ ಒಪ್ಪಿಕೊಳ್ಳುತ್ತಾರೆ. ಇವೆಲ್ಲ ಗೊಂದಲಗಳ ಜೊತೆಗೆ, ಇದೀಗ, ಆಹಾರ ಸುರಕ್ಷತಾ ಮತ್ತು ಮಾನಕ ಪ್ರಾಧಿಕಾರದ (ಎಫ್ ಎಸ್‌ ಎಸ್‌ ಎ) ನಿಯಮಗಳು ನಮ್ಮ ದೇಶದಾದ್ಯಂತ ಜ್ಯಾರಿಯಾಗಿವೆ. ಇದರ ಅನುಸಾರ ಸಾವಯವ ಧಾನ್ಯಗಳು ಇತ್ಯಾದಿ ಮಾರಬೇಕಾದರೆ  ಅಗ್‌ ಮಾರ್ಕ್ ಹಾಕಿರಲೇಬೇಕು (ಭಾರತ ಸರಕಾರದ ಕೃಷಿ ಉತನ್ನ ಮಾರುಕಟ್ಟೆ ಇಲಾಖೆ ನೀಡುವ ಚಿಹ್ನೆ). ಆದರೆ,  ಸಾವಯವ ಎಂಬ ಲೇಬಲ್‌ ಇಲ್ಲದೆ ಸಾವಿರಾರು ಮಳಿಗೆಗಳಲ್ಲಿ ಮಾರಾಟವಾಗುವ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಧಾನ್ಯಗಳಿಗೆ ಇದ್ಯಾವುದೂ ಕಡ್ಡಾಯವಲ್ಲ!
ಜೊತೆಗೆ, ನಾವು ಗ್ರಾಹಕರಾಗಿ ನೂರಾರು ವಸ್ತುಗಳನ್ನು ಖರೀದಿಸುವವರು. ಯಾವುದನ್ನಾದರೂ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡುತ್ತೇವೆಯೇ? ಇಲ್ಲ. ಬದಲಾಗಿ, ವಸ್ತುಗಳ ಪ್ಯಾಕೆಟಿನಲ್ಲಿ ಮುದ್ರಿಸಿದ್ದನ್ನೆಲ್ಲ, ಜಾಹೀರಾತಿನಲ್ಲಿ ಬಿತ್ತರಿಸಿದ್ದನ್ನೆಲ್ಲ ನಂಬುತ್ತೇವೆ, ಅಲ್ಲವೇ?
ಬದಲಿ ವಿಧಾನ ಇಂತಹ ಸನ್ನಿವೇಶದಲ್ಲಿ ವಿಶ್ವಾಸಾರ್ಹ ಸಾವಯವ ಆಹಾರವೆಂದು ಖಾತರಿ ಪಡಿಸಿಕೊಳ್ಳಲು "ಸಾವಯವ ಧೃಡೀಕರಣ" ಎಂಬುದೇ ಅತ್ಯುತ್ತಮ ವಿಧಾನವೇ? ರೈತರ ಕಾರ್ಯಕರ್ತರು ಮತ್ತು ಸಾವಯವ ಆಹಾರ ಮಾರುವವರು "ಅಲ್ಲ" ಎನ್ನುತ್ತಾರೆ. ಅದಕ್ಕೆ ಅತ್ಯುತ್ತಮ ವಿಧಾನ: ಬೆಳೆಗಾರರು, ಮಳಿಗೆಯವರು ಮತ್ತು ಗ್ರಾಹಕರ ನಡುವೆ ನಿಕಟ ಸಂಪರ್ಕ ಬೆಳೆಸುವುದು.
ಹಾಗಾಗಿ ನಮ್ಮ ದೇಶದ ಹಲವಾರು ನಗರಗಳಲ್ಲಿ ಸಮುದಾಯಬೇಂಬಲಿತ ಸಾವಯವ ಆಹಾರ ಮಾರಾಟ ಮಳಿಗೆಗಳ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣಕನ್ನಡದ ಬಿ.ಸಿ. ರೋಡಿನಲ್ಲಿ ನೇತ್ರಾವತಿ ಸಾವಯವ ಕೃಷಿ ಪರಿವಾರದ ದೇವಸ್ಯ ನರಸಿಂಹ ಮಯ್ಯರು ೨೦೦೯ರಿಂದ ನಿರ್ವಹಿಸುತ್ತಿರುವ "ಅಮೃತ ಸಾವಯವ ಉತ್ಪನ್ನ ಮಳಿಗೆ"ಯ ತಿಂಗಳ ವಹಿವಾಟು ರೂ. 5೦,೦೦೦ ದಾಟಿದೆ. ಮಂಗಳೂರಿನ “ಸಾವಯವ ಕೃಷಿಕ-ಗ್ರಾಹಕ ಬಳಗ” ಪಂಜೆ ಮಂಗೇಶ ರಾವ್‌ ರಸ್ತೆಯ ಪಕ್ಕದಲ್ಲಿ ಮೇ ೨೦೧೪ರಿಂದ ಭಾನುವಾರಗಳಲ್ಲಿ ಜರಗಿಸುತ್ತಿರುವ “ಸಾವಯವ ಕೃಷಿ ಸಂತೆ”ಯಲ್ಲಿ ಪೂರೈಕೆಗಿಂತ ಬೇಡಿಕೆಯೇ ಜಾಸ್ತಿ. 
(ಈಗ ತಿಂಗಳಿಗೆ ಮೂರು ಬಾರಿ) ಇವೆಲ್ಲ ಅನುಭವಗಳಿಂದ ನಾವು ತಿಳಿಯಬೇಕಾದ್ದು: ಸಾವಯವ ಕೃಷಿ ನಿರತ ರೈತರಿಗೂ, ಸಾವಯವ ಕೃಷಿ ಉತ್ಪನ್ನಗಳ ಗ್ರಾಹಕರಿಗೂ ಅನುಕೂಲವಾದ ಮುಂದಿನ ಹಾದಿ “ಪರಸ್ಪರ ವಿಶ್ವಾಸದ ವ್ಯವಹಾರ”.