ಹರುಷದ ಹೊಸ ಹಬ್ಬ – ಕೃಷಿಮೇಳ

ಹರುಷದ ಹೊಸ ಹಬ್ಬ – ಕೃಷಿಮೇಳ

ಉಜಿರೆ - ಪುತ್ತೂರು ಹಾದಿಯಲ್ಲಿ ಗುರುವಾಯನಕೆರೆಯಿಂದ ಸ್ವಲ್ಪವೇ ದೂರದ ಗೇರುಕಟ್ಟೆಯ ವಿಶಾಲ ಬಯಲು. ಅಲ್ಲಿ ತೆಂಗಿನ ಗರಿ, ಅಡಿಕೆ ಸಿಂಗಾರ ಮುಂತಾಗಿ ಅಚ್ಚ ಹಳ್ಳಿಯ ಆಭರಣ ತೊಡಿಸಿ ಸಿಂಗರಿಸಿದ ಚಪ್ಪರ. ಚಪ್ಪರದ ಕಂಬಗಳೋ - ಕಂಬಗಳ ಸುತ್ತ ಬಂಗಾರದ ಬಣ್ಣದ ಅಡಿಕೆ ಕಾಯ್ಗಳ ನೇಯ್ಗೆ ಏನು ಚಂದ! ಚಪ್ಪರದೊಳಗೆ ಸೇರಿರುವ ಜನ - ಎಷ್ಟು ಸಾವಿರ !
 
ಗೇರುಕಟ್ಟೆಯಲ್ಲಂದು "ಕೃಷಿಮೇಳ" ಸೇರಿತ್ತು. ಸಾಲಮೇಳಗಳ ಬಗ್ಗೆ ಮಾತ್ರ ಕೇಳಿದ್ದ ನಮಗೆ ಕೇಷಿಮೇಳ ಒಂದು ಕುತೂಹಲ. ಅದಕ್ಕೇ ನೋಡಹೋದೆವು. ಮೊದಲ ನೋಟಕ್ಕೇ ಅದೊಂದು "ಮಿನಿ ದಸರಾ" ಎನಿಸಿತು. ಬಯಲಲ್ಲಿ ಎದುರಿಗೆ ಜನರಿಗೆ ಸಂಬಂಧಿಸಿದ ವಿವಿಧ ಮಳಿಗೆಗಳು ಸಾಲಾಗಿ. ರೇಷ್ಮೆ ಕೃಷಿ, ತುಂತುರು ನೀರಾವರಿ, ಸ್ವಉದ್ಯೋಗ ಯೋಜನೆ, ಸಮಾಜ ಕಲ್ಯಾಣ ಇಲಾಖೆ ಮುಂತಾದವುಗಳದ್ದು. ಅವುಗಳ ಕಾರ್ಯವ್ಯಾಪಿ , ಸಹಾಯ – ಸೌಲಭ್ಯಗಳ ನಿರೂಪಣೆ ಅಲ್ಲಿ.
 
ಆಗ ಮುಖ್ಯ ವೇದಿಕೆಯಲ್ಲಿ ಜನಪದ ಕಲೆಗಳ ಪ್ರದರ್ಶನ ನಡೆದಿತ್ತು. ಈ ಕಲೆಗಳೆಲ್ಲ ಇಷ್ಟು ದಿನ ಯಾವ್ಯಾವ ಮೂಲೆಯಲ್ಲಿ ಹುದುಗಿದ್ದವೊ! ಹಳ್ಳಿಯ ಜನಗಳ ಅದ್ಭುತ ಸೃಜನಶೀಲತೆಯೆಲ್ಲ ಇಲ್ಲಿ ಹೊರಹೊಮ್ಮಿದ್ದವು. ಕಪ್ಪು ಮೈಗೆ ಬಿಳಿಹಚ್ಚೆ ಹಚ್ಚಿಕೊಂಡವನ ಕರಂಗೋಲು ನೃತ್ಯ , ಇಜ್ಜಲಿನ ಅಜ್ಜನಂತಿದ್ದ ಕಪ್ಪು ಮೈ ಕೊರಗಿನಿಂದ ಕೊಳಲು ವಾದನ, ಡೊಳ್ಳು ಕುಣಿತ , ಮುದುಕಿಯರಿಂದ ಹಿಡಿದು ಹುಡುಗರವರೆಗೆ ಹಳ್ಳಿಯ ಎಲ್ಲರೂ ಸೇರಿಕೊಂಡ ಕೋಲಾಟ, ಹೀಗೆ ನಾನಾ ಥರ.
 
ವೇದಿಕೆ
 
ಈಗ ಇಬ್ಬರು ಹುಡುಗಿಯರ ಕುಸ್ತಿ ಪ್ರದರ್ಶನ. ಆ ಹದಿಹರೆಯದ ಚೆಲುವೆಯರು ರಂಗದ ಮೇಲೆ ಬಂದು ಲಾಗಹಾಕಿದ್ದು ನಾನಾ ಬಗೆ. ಲಜ್ಜೆಯಲ್ಲೇ ಕರಗಿಹೋಗುತ್ತಿದ್ದ ಹಳ್ಳಿ ಹುಡುಗಿಯರ ಪ್ರತಿಭೆ ಈ ಕೃಷಿ ಮೇಲಗಳಿಂದಾಗಿ ರಂಗದ ಮೇಲೆ ಬರುವಂಥಾದದ್ದು ಬಹಳ ಚೆನ್ನ. ನಿಜ, ಕೃಷಿ ಮೇಳಗಳೇ ಹಾಗೆ. ತಮ್ಮನ್ನು ಅಭಿವ್ಯಕ್ತಗೊಳಿಸಲು ಎಲ್ಲಿಯೂ ಅವಕಾಶ ಸಿಗದ ಹಳ್ಳಿಗರಿಗೆ ಅದೊಂದು ವೇದಿಕೆ. ಆರೆಂಟು ಹಳ್ಳಿಗಳ ಜನ ಒಂದೆಡೆ ಕಲೆಯುತ್ತಾರೆ. ಸತತ ಇಪ್ಪತ್ನಾಲ್ಕು ಗಂಟೆಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅಲ್ಲಿ ನಡೆದ ಆಟದ, ಕುಣಿತದ, ಊಟದ ಸವಿನೆನಪಿನೊಂದಿಗೆ ಮನೆಗೆ ಮರಳುವ ಜನ ಮತ್ತೆ ಮುಂದಿನ ವರ್ಷ ಇನ್ನೊಂದು ಹಳ್ಳಿಯಲ್ಲಿ ನಡೆವ "ಕೃಷಿಮಮೇಳ"ಕ್ಕಾಗಿ ಕಾಯುತ್ತಾರೆ. ಹೀಗಾಗಿ "ಕೃಷಿಮೇಳ" ಬೆಳ್ತಂಗಡಿ ತಾಲ್ಲೂಕಿನಲ್ಲಿ - ವರ್ಷ ವರ್ಷ ಬಂದೇ ಬರುವ ಹರುಷದ ಹಬ್ಬ.
 
ಈ ಕೃಷಿ ಮೇಳಗಳ ಸಂಘಟಕರು ಯಾರು? ಬೆಳ್ತಂಗಡಿ ತಾಲ್ಲೂಕಿನಲ್ಲಿ ಚಟುವಟಿಕೆಯಿಂದಿರುವ "ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ" ಇದರ ಹಿಂದಿದೆ. ನಾವು ಮರೆಯುತ್ತಿರುವ ಹಳ್ಳಿಗಾಡಿನ ಕಲೆ- ಸಂಸ್ಕಾರಗಳಿಗೆ ಮರುಚೈತನ್ಯ ನೀಡುವ ಜೊತೆಗೆ, ಹಳ್ಳಿಯ ಜನ ವಿವಿಧ ಇಲಾಖೆಗಳ ಜನರೊಂದಿಗೆ ತಮ್ಮ ತೊಂದರೆಗಳನ್ನು ಖುದ್ದು ಹೇಳಿಕೊಳ್ಳಲು ಅವಕಾಶ ನೀಡಬೇಕೆಂದು ಕೃಷಿಮೇಳಗಳ ಉದ್ದೇಶ. ಅದಕ್ಕೆ ಕೃಷಿಮೇಳಕ್ಕಾಗಿ ಆರೆಂಟು ಹಳ್ಳಿಗಳೇ ಅಲ್ಲಿ ಸೇರಿದ್ದವು.
 
ಇತ್ತ ಒಂದೆಡೆ ಕುಣಿತ - ಹಾಡು ಸಾಗಿದ್ದರೆ ಇನ್ನೊಂದೆಡೆ ರಾಸುಗಳ ಪ್ರದರ್ಶನ ಸಾಗಿತ್ತು. ಮತ್ತೊಂದು ಕಡೆ ಶಿಶುಪ್ರದರ್ಶನವೂ ನಡೆದಿತ್ತು. ಹೀಗಾಗಿ ಜನಕ್ಕೆ ಅಲ್ಲಿ - ಇಲ್ಲಿ - ಎಲ್ಲಿ ನೋಡುವುದಂತಲೇ ಸಮಸ್ಯೆ.
 
ಮೇಳದ ಯುವಕ
 
ಇದೇ ಸಮಯ ಬಯಲಲ್ಲಿ ಹಳ್ಳಿ ಆಟಗಳು - ಸ್ಪರ್ಧೆಗಳು. ಮಕ್ಕಳಿಗೆ ಮಿಠಾಯಿ ಅನ್ವೇಷಣೆ, ಬಲೂನು ಒಡೆಯವದು , ಚಮಚದ ಓಟ ಮುಂತಾದದ್ದು. ಬಿಸಿ ರಕ್ತದ ಯುವಕರಿಗೆ ಗುಡ್ಡಗಾಡು ಓಟ, ಹಗ್ಗ ಎಳೆತ ಶೌರ್ಯ ಪ್ರದರ್ಶನಕ್ಕಾದರೆ , ನಿಧಾನ ಸೈಕಲ್ ರೇಸ್ ಅವರ ತಾಳ್ಮೆಗೆ ಸವಾಲು. “ಶಕ್ತಿ ಕಲ್ಲು" ಸ್ಪರ್ಧೆ ಅತ್ಯಂತ ಭಾರ ಎತ್ತುವ ಭೀಮನಿಗೆ "ಮೇಳದ ಜವಣೆ" (ಮೇಲದ ಯುವಕ) ಬಿರುದು ದೊರಕಿಸುವಂಥದ್ದು. ಮನುಷ್ಯನಿಗೆ ವರ್ಷ ಸಂದಷ್ಟೂ ದುಡ್ಡು ಮಾಡುವ ಆಸೆ ಹೆಚ್ಚುವದಂತೆ. ಅದಕ್ಕೇ ಇರಬೇಕು - ಮುದುಕರಿಗಿರುವ ಆಟ ಯಾವುದು ಗೊತ್ತೇ? ನಿಧಿ ಅನ್ವೇಷಣೆ! ಮಹಿಳೆಯರೇ ಆಟೋಟಗಳಲ್ಲಿ ನಮ್ಮ ದೇಶದ ಮಾನ ಉಳಿಸಿದವರಾದರೂ ಕೃಷಿ ಮೇಳದಲ್ಲಿ ಅವರಿಗಿದ್ದ ಸ್ಪರ್ಧೆ ಸಂಗೀತ ಖುರ್ಚಿ (ಮ್ಯೂಸಿಕಲ್ ಚೇರ್) ಮಾತ್ರ.
 
ಈ ಹೊತ್ತಿಗೆ ಮುಖ್ಯ ವೇದಿಕೆಯಲ್ಲಿ ಜನಪದ ಕಲಾಪ್ರದರ್ಶನ ಮುಗಿದು 'ತುಳು ಪಡ್ಡಾನ"ಗಳ ಸ್ಪರ್ಧೆ ಸಾಗಿತ್ತು. ತುಳು ಪಾಡ್ಡನಗಳು ಈ ಭಾಗದ ಹೆಂಗೆಳೆಯರ ಹಾಡು- ಮೈಸೂರು ಸೀಮೆಯಲ್ಲಿ ರಾಗಿ ಬೀಸುವ ಹಾಡುಗಳಿದ್ದ ಹಾಗೆ. ಈ ಪಾಡ್ಡನಗಳ ಈಚೆಗೆ ಹುಟ್ಟುವುದೇ ಕಮ್ಮಿ. ಚಿಕ್ಕಂದಿನಲ್ಲಿ ಕಲಿತದ್ದು ಚೂರುಪಾರು ನೆನಪುಂಟು - ಹೊಸ ತೊಂದೂ ಇಲ್ಲ ಎಂಬಂಥ ಸ್ಥಿತಿ. ಹೆಂಗಸರು ನೆನೆಪಿಸಿಕೊಂಡು ಪಾಡ್ಡನಗಳನ್ನು ಹೇಳುತ್ತಿದ್ದರು. ಆದರೂ ಈ ಪಾಡ್ಡನಗಳು ಎಷ್ಟು ಇಂಪಾಗಿದ್ದವೆಂದರೆ ಮಧ್ಯಾಹ್ನದ ಉರಿಬಿಸಿಲನ್ನೂ ತಂಪಾಗಿಸುತ್ತಿದ್ದವು.
 
ಮಧ್ಯಾಹ್ನದ ಊಟ ನಡೆದಿತ್ತು. ಊಟದ ಚಪ್ಪರದೆದುರು ಸಾಲು ಬೆಳೆಯುತ್ತಲೇ ಇತ್ತು. ಅಬ್ಬಾ! ಒಂದು ದಿನಕ್ಕೆ ಇಷ್ಟೊಂದು ಜನಕ್ಕೆ ಅಡಿಗೆ ಮಾಡಬೇಕಾದರೆ ಅಡಿಗೆಯ ತಯಾರಿ ಹೇಗಿರಬಹುದು! ಅಲೆ ಒಲೆಯಂಥ ನಾಲ್ಕು ಒಲೆಗಳ ಮೇಲೆ ಕೊಪ್ಪರಿಗೆಯಂಥ ಪಾತ್ರೆಗಳಲ್ಲಿ ಸಾರು - ಸಾಂಬಾರು - ಪಾಯಸ ಕುದಿಯುತ್ತಿದ್ದವು. ಈ ಹೊತ್ತಿಗೆ ಎಂಟೂವರೆ ಕ್ವಿಂಟಾಲು ಅಕ್ಕಿಯ ಅನ್ನಮಾಡಿಯಾಯ್ತು. ಅಂದರೆ ಕನಿಷ್ಠವೆಂದರೂ ಆರು ಸಾವಿರ ಜನ ಊಟಮಾಡಿರಬಹುದು - ಎಂದು ಅಂಗಡಿಯವರು ಲೆಕ್ಕ ತೆಗೆದರು. ಮತ್ತೆ ಸಂಜೆಗೆ ಇಷ್ಟೇ ಜನಕ್ಕೆ ಊಟವಾಗಬೇಕಲ್ಲ ಎಂದೆ ! ಅವರು ನಕ್ಕರು.
 
(ಲೇಖನ ಬರೆದ ವರ್ಷ 1989)
 
 
 

Comments

Submitted by addoor Wed, 06/21/2017 - 22:21

In reply to by smurthygr

ಕೃಷಿಮೇಳಗಳು ಮುಂದುವರಿಯುತ್ತಿವೆ. ಪ್ರತಿ ವರುಷವೂ ಕರ್ನಾಟಕದ ಬೇರೆಬೇರೆ ಸ್ಥಳಗಳಲ್ಲಿ ಅದನ್ನು ನಡೆಸಲಾಗುತ್ತಿದೆ.
- ಅಡ್ಡೂರು ಕೃಷ್ಣ ರಾವ್