#ಹಿಟ್ಟಂ_ತಿಂದಂ_ಬೆಟ್ಟಂ_ಕಿತ್ತಿಟ್ಟಂ

#ಹಿಟ್ಟಂ_ತಿಂದಂ_ಬೆಟ್ಟಂ_ಕಿತ್ತಿಟ್ಟಂ

'ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ' ಎಂಬ ನಾಣ್ನುಡಿಯಂತೆ ನಮ್ಮ ಸಮ ಶೀತೋಷ್ಣ ವಲಯದ ಭಾರತ ದೇಶಕ್ಕೆ ಅದರಲ್ಲೂ ಕರ್ನಾಟಕಕ್ಕೆ ರಾಗಿಯ ತಿನಿಸುಗಳು ಆರೋಗ್ಯ ವರ್ಧಕ. ಹೊಟ್ಟೆಗೆ ತಂಪು. 'ದಿನಕ್ಕೊಮ್ಮೆ ರಾಗಿ ತಿಂದರೆ ಆಗುವನು ನಿರೋಗಿ' ಕೇಳಿದ್ದೀರಲ್ಲ ಗೆಳೆಯರೇ.... 

ಕೊತ ಕೊತ ಕುದಿವ ನೀರಿಗೆ ಹಿಡಿಯುವಷ್ಟು ರಾಗಿ ಹಿಟ್ಟು ಹಾಕಿ ಚೆನ್ನಾಗಿ ಬೆಂದ ಮೇಲೆ ಗೊಟಾಯಿಸಿ ಮುದ್ದೆ ಮಾಡಿ ಸೊಪ್ಪಿನ ಹುಳಿ, ಕೂಟು, ಮೊಳಕೆಕಾಳಿನ ಸಾರು, ಗೊಜ್ಜು, ತಂಬುಳಿ ಜೊತೆ ತಿಂದರೆ...ಆಹಾ..ಎಂಥಹ ಆನಂದ! ಏನೂ ಪದಾರ್ಥ ಸಿಗದಿದ್ದರೆ ಕಡೆಗೆ ಬರಿಯ ಚಟ್ನಿ ಪುಡಿ, ಮೊಸರಲ್ಲೂ ರಾಗಿ ಮುದ್ದೆ ಉಣ್ಣಬಹುದು. ಮುದ್ದೆ ಇಷ್ಟ ಇಲ್ಲವೇ ??.. ರಾಗಿಯ ಬಿಸ್ಕಿಟ್, ರಾಗಿ ಗಂಜಿ, ಅವರೆ ಕಾಳು ಸೇರಿಸಿ ತಟ್ಟಿದ ರಾಗಿ ರೊಟ್ಟಿ , ರಾಗಿಯ ಶಾವಿಗೆ ಬಾತ್ ... ಹೀಗೇ ರಾಗಿ ಎಲ್ಲಾ ರೂಪಗಳಲ್ಲೂ ದರ್ಶನ ಕೊಡುತ್ತದೆ. 
 

ನಿಮ್ಮ ತೂಕ ಇಳಿಸಬೇಕೆ, ಮಧು ಮೇಹವೆಂದು ಕೊರಗುತ್ತಿದ್ದೀರಾ , ಮೂಳೆ ಗಟ್ಟಿಯಾಗಬೇಕೆ - ಎಲ್ಲದಕ್ಕೂ ಒಂದೇ ರಾಮ ಬಾಣ - ' ರಾಗಿ '. ಅಪ್ಪಟ ನೈಸರ್ಗಿಕ ವಿಧಾನದಲ್ಲಿ ರಾಗಿ ಉಪಯೋಗಿಸಿ, ಅಡುಗೆ ಮಾಡಿ.  ಹಣ, ಆರೋಗ್ಯ ಎರಡರನ್ನೂ ಸುಲಭವಾಗಿ ಕಾಪಾಡಿಕೊಳ್ಳಿ .

ತೂಕ ಇಳಿಸಲು : ಸ್ವಲ್ಪ ರಾಗಿ ಹಿಟ್ಟನ್ನು ಸೇರಿಸಿ ತೆಳುವಾಗಿ ಅಂಬಲಿ ತಯಾರಿಸಿಟ್ಟುಕೊಳ್ಳಿ . ಕಡೆದಿಟ್ಟ ಮಜ್ಜಿಗೆಗೆ ಜಜ್ಜಿದ ಶುಂಠಿ, ಕತ್ತರಿಸಿದ ಕೊತ್ತಂಬರಿಸೊಪ್ಪು, ಸ್ವಲ್ಪ ಉಪ್ಪು( ಚಿಕ್ಕದಾಗಿ ಕತ್ತರಿಸಿದ ಸೌತೆ, ಈರುಳ್ಳಿ ಬೇಕಾದರೆ ಸೇರಿಸಿ) ಅಂಬಲಿಗೆ ಬೆರೆಸಿ, ಎರಡು ಮೂರು ಲೋಟಗಳಷ್ಟು ಕುಡಿದರೆ ಬೇಗ ಹಸಿವಾಗದು. ಮೂರೂ ಹೊತ್ತೂ ಕುಡಿಯಬಹುದಾದ ಪೇಯವಿದು. 
ಎಂಥಾ ಬಿಸಿಲು ....!! ಈ ಬಿಸಿಲಲ್ಲಿ ಖಾರದ ಮತ್ತು ಮಸಾಲೆಯುಕ್ತ ಅಡಿಗೆ ಕಡಿಮೆ ಮಾಡಿ,  ರಾಗಿ ಅಥವಾ ಸಿರಿಧಾನ್ಯಗಳಿಂದ ತಯಾರಿಸಿದ ದ್ರವರೂಪದ ಆಹಾರ ಹೆಚ್ಚು ಬಳಸಿ.

ಮರೆತ ಮಾತು : ರಾಗಿಯಲ್ಲಿ ಶೇ.5-8ರಷ್ಟು ಪ್ರೋಟಿನ್, ಕೇವಲ ಶೇ.1-2ರಷ್ಟು ಕೊಬ್ಬಿನಾಂಶ, ಶೇ.65-75ರಷ್ಟು ಕಾರ್ಬೋಹೈಡ್ರೇಟ್, ಶೇ.15-20ರಷ್ಟು ಫೈಬರ್ ಮತ್ತು ಶೇ.2.5ರಿಂದ 3.5ರಷ್ಟು ಮಿನರಲ್ಸ್ ಅಂಶಗಳು ಮತ್ತು ಪ್ರತಿ ನೂರು ಗ್ರಾಂ ರಾಗಿಯಲ್ಲಿ 344 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಇರುತ್ತದೆ.

PC-google