Skip to main content

ಅನನ್ಯ ಅಲ್ಲಮ ೧೨ (೧೨)

5

 ಭಾದ್ರಪದ ಬಹುಳ ತ್ರಯೋದಶಿಯಂದು ಸೂರ್ಯೋದಯದ ಎರಡು ಘಳಿಗೆಗಳ ನಂತರ ಅಸವರ್ಣ ವಿವಾಹ ವಿಚಾರಣಾಸಮಿತಿಯು ಕಾರ್ಯಾರಂಭ ಮಾಡುತ್ತದೆ . ಅಂದಿನ ವಿಚಾರಣೆಯಲ್ಲಿ ಹೇಳಿಕೆಗಳನ್ನು ಪಡೆಯಲು ನಿಮ್ಮ ಉಪಸ್ಥಿತಿ ಅಗತ್ಯವಿರುವುದರಿಂದ ಸರಿಯಾಗಿ ಸೂರ್ಯೋದಯಾನಂತರ ಒಂದು ಘಳಿಗೆಯ ಒಳಗಾಗಿ ಕೊತ್ವಾಲ ಚಾವಡಿಗೆ ಬರತಕ್ಕದ್ದು . ಎಂಬ ನಿರೂಪಗಳು  ಮಧುವರಸರಿಗೆ , ಹರಳಯ್ಯನವರಿಗೆ , ಮದುಮಕ್ಕಳಿಗೆ ಪ್ರತ್ಯೇಕವಾಗಿ ತಲುಪಿದವು . 

 
ಅಂದು ಮಹಮನೆಯಲ್ಲಿ ತೀವ್ರವಾದ ಸಂಚಲನ ಉಂಟಾಯಿತು .  ಹಿರಿಯರಾದ ಕಿನ್ನರಿ ಬೊಮ್ಮಯ್ಯನವರು ಶರಣರಿಗೆ ಧೈರ್ಯವನ್ನು ತುಂಬುತ್ತಾ ,
 
" ಅಂಥದೇನೂ ಜರುಗುವುದಿಲ್ಲ ಈ ಹಿಂದೆ ಇಂಥ ಪ್ರಕರಣಗಳಿಗೆ ಹೆಚ್ಚೆಂದರೆ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ . ಚಾಲುಕ್ಯ ಅರಸರ ಅರಸಾಂಗದ ಆಡಳಿತ ಇನ್ನೂ ಪ್ರಾಚೀನ ಕಾಲದ ಸ್ಮೃತಿ , ಸಂಹಿತೆಗಳಿಗೆ ಒಳಪಟ್ಟಿರುವುದರಿಂದ ಇದು ಅರಸಾಂಗಕ್ಕೆ ಅನಿವಾರ್ಯವಾಗಬಹುದು  . ಆಗಲಿ ಅವರು ಬಹಿಷ್ಕಾರ ವಿಧಿಸಿದರೆ , ಮದುಮಕ್ಕಳನ್ನು ವಾರಂಗಲ್ಲಿಗೆ ಕಳುಹಿಸೋಣ ಅಲ್ಲಿ ಆಡಳಿತ ನಡೆಸುವವರು ಸ್ಮೃತಿಯ ಆಧಾರವನ್ನು ಲೆಕ್ಕಿಸುವುದಿಲ್ಲ . ಅವರ ಆಡಳಿತ ಶಿವಸಂಹಿತೆಗೆ ಅನುಗುಣವಾಗಿರುವುದರಿಂದ ವರ್ಣಾಶ್ರಮವೆಂಬುದು ಐಚ್ಛಿಕವಾದುದು . ಯಾರಾದರೂ ಆಶ್ರಮ ಧರ್ಮವನ್ನು ಮೀರಿದರೆ , ಆಡಳಿತ ಅವರ ವಿರುದ್ದದ ದೂರನ್ನು ನಿರ್ಲಕ್ಷಿಸುತ್ತದೆ . ಅಣ್ಣ ಬಸವಣ್ಣನವರು ಮತ್ತು ಕಲ್ಯಾಣದ  ಶರಣರು ಎಂದರೆ , ಕಾಕತೀಯ ಅರಸು ಎರಡನೇ ಫ್ರೊಲ್ಲರಾಜನ ಮಗ ಪ್ರತಾಪರುದ್ರ ದೇವನಿಗೆ ತನ್ನ ತಂದೆಯಂತೆಯೇ  ಅತೀವ ಅಭಿಮಾನ ಮತ್ತು ಗೌರವ ಅಲ್ಲಿ ಅವರಿಗೆ ಆಶ್ರಯ ಸಿಗುತ್ತದೆ ,, 
 
ಎಂದು ಸಮಾಧಾನ ಮಾಡಿದರು , ಆದರೆ ಕಲ್ಯಾಣವನ್ನು ತೊರೆಯುವುದು ಎಂಬ ಮಾತೇ ಶೀಲವಂತನಿಗೆ ಶೂಲದಂತಹ ಕೂರಂಬಾಗಿ ಕಾಡಿತು . ತಾನು ಹುಟ್ಟಿ ಬೆಳೆದ ಕಲ್ಯಾಣದ ಕಣಕಣವೂ ಅವನನ್ನು ಆಕರ್ಷಿಸುವ , ಸೆಳೆಯುವ , ಮಧುರಾನುಭೂತಿಯನ್ನು ಹೊಮ್ಮಿಸುವ , ಶರಣರ ಪಾದಧೂಳಿಯಿಂದ ಪವಿತ್ರವಾದ ಪುಣ್ಯಭೂಮಿಯಾಗಿ ಮನಸ್ಸನ್ನು ಆವರಿಸಿತ್ತು .
 
ನಿರೂಪದಲ್ಲಿ ತಿಳಿಸಿದಂತೆ ವಿಚಾರಣಾ ಸಮಯಕ್ಕೆ ಅರ್ಧ ಘಳಿಗೆ ಮುಂಚಿತವಾಗಿಯೇ  ಹರಳಯ್ಯನವರು , ಮಧುವರಸರು , ಶೀಲವಂತ ಲಾವಣ್ಯರು ಚಾವಡಿಗೆ ಬಂದರು . ಜೊತೆಯಲ್ಲಿ ಬಂದ ಅನೇಕ ಶರಣರನ್ನು ಮುಖ್ಯದ್ವಾರದಲ್ಲಿಯೇ ತಡೆದು , ’ ಬೇರೆಯವರಿಗೆ ಪ್ರವೇಶವಿಲ್ಲ  ಮಾತ್ರವಲ್ಲ ರಾಜಧಾನಿಯಲ್ಲಿ ಗುಂಪುಗೂಡುವುದನ್ನೂ ಸಹ ನಿಷೇಧಿಸಲಾಗಿದೆ , ಆದುದರಿಂದ ನೀವೆಲ್ಲ ನಿಮ್ಮ ನಿಮ್ಮ ಮನೆಗಳಿಗೆ ತೆರಳತಕ್ಕದ್ದು ಎಂಬ ಕಟ್ಟಪ್ಪಣೆ ಸ್ವತಃ ಕೊತ್ವಾಲರಿಂದ ಪ್ರಕಟವಾಯಿತು .
 
ಸೂರ್ಯೋದಯಾನಂತರ ಎರಡು ಘಳಿಗೆಗಳಲ್ಲಿ ಸಭೆ ಆರಂಭವಾಗುತ್ತದೆಂದು ಪ್ರಕಟಿಸಲಾಗಿತ್ತಾದರೂ , ನಾಲ್ಕು ಘಳಿಗೆಗಳ ನಂತರವೂ ಸಭೆ ಆರಂಭವಾಗಲೇ ಇಲ್ಲ .  ಬಂದವರು ಮನುಷ್ಯರೆಂದು ಪರಿಗಣಿಸಿ , ಅವರಿಗೆ ಅನ್ನಪಾನಾದಿಗಳ ವ್ಯವಸ್ಥೆಯೂ ಇರಲಿಲ್ಲ . ಬೇಸರಗೊಂಡ ನಧುವರಸರು ಕೊತ್ವಾಲರೊಂದಿಗೆ 
 
" ಏನಿದು ಅವ್ಯವಸ್ಥೆ ಕೊತ್ವಾಲರೆ ? ನಾನೂ ಬಿಜ್ಜಳದೊರೆಯ ಮಂತ್ರಿ , ಕನಿಷ್ಟ ಸೌಜನ್ಯಕ್ಕಾದರೂ ಇಲ್ಲಿ ವಿಚಾರಿಸುವವರೂ ಗತಿ ಇಲ್ಲ . ಬಿಜ್ಜಳ ದೊರೆಯ ನ್ಯಾಯಾಸ್ಥಾನದಲ್ಲಿ ಕಳ್ಳರನ್ನೂ ಸಹ ಅಮಾನುಷವಾಗಿ  ನಡೆಸಿಕೊಂಡ ಉದಾಹರಣೆ ಇಲ್ಲ . ಕಳ್ಳರಿಗಿಂತ ಕರ ಕಷ್ಟವಾಯಿತೇ ನಮ್ಮ ಬಾಳು , ವಿಚಾರಣೆಯ ಸರಿಯಾದ ಸಮಯವನ್ನು ತಿಳಿಸಿದ್ದರೆ ಆಗಲೇ ನಾವು ಬರುತ್ತಿದ್ದೆವು . ವಿಚಾರಣೆಗೆ ಮೊದಲೇ ಕಾಯುವ ಈ ಶಿಕ್ಷೆಯನ್ನು ನಾವು ಅನುಭವಿಸಬೇಕೆ ? ,, 
 
ಕೊತ್ವಾಲ 
 
" ಅದು ಹಾಗಲ್ಲ ಮಹಾಸ್ವಾಮಿ ಮಧುವರಸರೆ , ಈ ದಿನ ವಿಚಾರಣೆ ಇಲ್ಲವೆಂದು ಇದೀಗ ತಾನೆ ಪ್ರಕಟಣೆ ಹೊರಬಿದ್ದಿದೆ . ವಿಚಾರಣೆಯನ್ನು  ನಾಳೆಗೆ ಮುಂದೂಡಲಾಗಿದೆ . ಆದರೆ ವಿಚಾರಣೆ ಮುಗಿಯುವವರೆಗೆ ತಮ್ಮನ್ನು ಹೊರ ಹೋಗಗೊಡಕೂಡದೆಂಬುದು ವಿಚಾರಣಾಸಮಿತಿಯ ಆಜ್ಞೆ ,, 
 
" ಅಂದರೆ ನಮ್ಮನ್ನು ಬಂಧಿಸಲಾಗಿದೆಯೇ ? ಇದೆಂತಹ ಅನ್ಯಾಯದ ಆಜ್ಞೆ ? ಯಾವ ಸಾಮಾಜಿಕ ಘೋರ ಅಪರಾಧವನ್ನೂ ಮಾಡದೆ ,  ಕೇವಲ ವೈಯುಕ್ತಿಕ ಅಭೀಷ್ಟದಂತೆ ನಡೆದವರನ್ನು , ಅವರಿಗೇ ತಿಳಿಯದಂತೆ , ಪರರ ವಿತ್ತ ಪ್ರಾಣಗಳನ್ನು ಹಾನಿಗೊಳಿಸುವ ಘೋರ ಪಾತಕಿಗಳಂತೆ ಬಂಧನಕ್ಕೀಡು ಮಾಡುವ  ಹೊಸ ಪರಿಪಾಠ ಕಲ್ಯಾಣ ರಾಜ್ಯದಲ್ಲಿ ಯಾವಾಗಿನಿಂದ ಜಾರಿಗೆ ಬಂತು ? ,, 
 
ಹರಳಯ್ಯನವರು 
 
" ಹೋಗಲಿ ಬಿಡಿ ಮಧುವರಸರೆ , ಅರಸಾಂಗದ ವಿರುದ್ದ ಏಕೆ ವಾದ , ಅಪ್ಪಾ ಕೊತ್ವಾಲರೆ , ನಮ್ಮನ್ನು ಸೆರೆಮನೆಗೆ ಕಳಿಸಿ , ನಾವು ಅಲ್ಲಿಯೇ  ಉಳಿಯುತ್ತೇವೆ .  ಆದರೆ ಆ ಹುಡುಗರನ್ನು ಕಳಿಸಿಬಿಡಿ , ನಾಳೆ ವಿಚಾರಣೆಯ ವೇಳೆಗೆ ಇಲ್ಲಿಗೆ ಬರಲು ಆಜ್ಞಾಪಿಸಿದರೆ ಅವರು ಬರುತ್ತಾರೆ . 
 
ಕೊತ್ವಾಲ ಕಣ್ಣಲ್ಲಿ ನೀರು ತುಂಬಿಕೊಂಡು , 
 
" ಅದೂ ಸಹ ಸಾಧ್ಯವಿಲ್ಲ ಹರಳಯ್ಯ ತಂದೆ , ಇಲ್ಲಿಂದ ಶೀಲವಂತ ಲಾವಣ್ಯರನ್ನು  ಹೋಗಗೊಟ್ಟರೆ ಅವರು ಕಾಕತೀಯ ರಾಜ್ಯಕ್ಕೆ ಪಲಾಯನ ಮಾಡಲಿರುವ ಸಂಚನ್ನು ಗೂಢಚಾರರು ವರದಿ ಮಾಡಿದ್ದಾರೆ . ನಿಮ್ಮೆಲ್ಲರನ್ನೂ ನಿನ್ನೆಯೇ ಬಂಧಿಸುವಂತೆ ಆಜ್ಞೆಯಾಗಿತ್ತು , ಆದರೆ ನಾನೇ ತಡೆದೆ . ಅನಗತ್ಯವಾಗಿ ಪಟ್ಟಣದಲ್ಲಿ ಕ್ಷೋಭೆಯಾಗುತ್ತದೆಂದು . ಕ್ಷಮಿಸಿರಿ,   ನೀವೆಲ್ಲರೂ ಈಗ ಬಂದಿಗಳು . ನಿಮಗೆ ಕನಿಷ್ಟ ಸೌಕರ್ಯಗಳೂ ದೊರೆಯಕೂಡದೆಂದು ಗುಟ್ಟಿನಲ್ಲಿ ಆಜ್ಞೆಯಾಗಿದೆ ,  ಆದರೆ ಸೆರೆ ಮನೆಯ ಮುಖ್ಯ ಕಾವಲುಗಾರ ಭರಮದಳವಾಯಿ ಶರಣರ ಪಕ್ಷಪಾತಿ , ಇಂದು ಅವನಿಗೆ ಬೇಕಾದವರನ್ನೇ ಕಾವಲಿಗೆ ಸೇರಿಸಿಕೊಂಡಿದ್ದಾನೆ . ನಿಮಗೆ ಗುಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸುತ್ತಾನೆ ,,  
 
ಮಧುವರಸರು 
 
" ನಮಗೆ ಗುಟ್ಟಿನಲ್ಲಿ ಕೊಡುವ ಯಾವ ಸೌಲಭ್ಯಗಳೂ ಬೇಡ ಕೊತ್ವಾಲರೆ , ಮನುಷ್ಯರಾದವರಿಗೆ ಅವರು ಎಂತಹ ಅಪರಾಧಗಳನ್ನು ಮಾಡಿದ್ದರೂ , ಅವರನ್ನು ಮನುಷ್ಯರಂತೆಯೇ ನಡೆಸಿಕೊಳ್ಳಬೇಕೆಂಬುದೇ ಎಲ್ಲ ರಾಜ ಶಾಸನಗಳ ಮೂಲ ಉದ್ದೇಶ . ಎಲ್ಲವನ್ನೂ ನ್ಯಾಯ ವ್ಯವಸ್ಥೆಯಂತೆಯೇ  ನೇರವಾಗಿಯೇ ನಡೆಸಲಿ , ಯಾರೂ ಎಲ್ಲಿಗೂ ಪಲಾಯನ ಮಾಡುವುದಿಲ್ಲ . ಮದುಮಕ್ಕಳು  ಕಾಕತೀಯ ರಾಜ್ಯಕ್ಕೆ ತೆರಳಬೇಕೆಂಬ ಸಲಹೆ ಬಂದುದು , ಅವರನ್ನು ಇಲ್ಲಿಂದ ಪಲಾಯನ ಮಾಡಿಸಲೆಂದಲ್ಲ ; ಅವರ ವಿವಾಹದ ಕಾರಣದಿಂದ ಇಲ್ಲಿ ಬಹಿಷ್ಕಾರಕ್ಕೊಳಗಾದರೆ , ಅವರನ್ನು ಕಾಕತೀಯ ಆಶ್ರಯಕ್ಕೆ ಕಳುಹಿಸಬೇಕೆಂಬ ಸಲಹೆಯಷ್ಟೇ ಬಂದಿದೆ , ಅದೂ ಹಿರಿಯರಾದ ಕಿನ್ನರಿ ಬೊಮ್ಮಯ್ಯನವರಿಂದ . ಅದರಲ್ಲಿ ಯಾವ ಗುಟ್ಟೂ ಇಲ್ಲ ; ಸಂಚೂ ಇಲ್ಲ ,, 
 
ಕೊತ್ವಾಲ ಮಧುವರಸರನ್ನು ಪ್ರತ್ಯೇಕವಾಗಿ ದೂರಕ್ಕೆ ಕರೆದು ಪಿಸುದನಿಯಲ್ಲಿ 
 
" ನೀವೆಂಥ ಅಮಾಯಕರು ಮಧುವರಸ ಅಪ್ಪಗಳೇ , ಈಗ ವಿಚಾರಣೆಯ ನೆಪದಲ್ಲಿ ನಿಮ್ಮನ್ನು ಬಗೆಬಗೆಯಾಗಿ ಹಿಂಸಿಸಲು ಸನ್ನಾಹ ನಡೆದಿದೆ ಈ ಮನುಷ್ಯ ರೂಪದ ಕ್ರೂರ ಜಂತುಗಳಿಂದ , ವಿಚಾರಣೆಯಲ್ಲಿರುವ ಪ್ರಮುಖರು ಯಾರೆಂಬುದು ತಿಳಿದಿದೆಯೇ ? ಮನುಷ್ಯತ್ವದ ಪರಿಚಯವೇ ಇಲ್ಲದ ಶುಷ್ಕ ಪಂಡಿತ ಮಂಡಲಿ ಅದು . (ಮತ್ತಷ್ಟು ತಗ್ಗಿದ ದನಿಯಲ್ಲಿ )ಅದಕ್ಕಾಗಿಯೇ ಭರಮದಳವಾಯಿ ಮತ್ತು ನಾನು ಆಲೋಚಿಸಿದ್ದೇವೆ .ಈ ದಿನ ನೀವು ನಮ್ಮ ವಶದಲ್ಲಿರುತ್ತೀರಿ , ಮಧ್ಯ ರಾತ್ರಿಯ ವೇಳೆಗೆ , ನೀವು ಸೆರೆಮನೆಯಿಂದ ತಪ್ಪಿಸಿಕೊಳ್ಳಲು ಅನುವಾಗುವಂತೆ  ಸನ್ನಾಹಗಳು ನಡೆದಿವೆ . ನೀವು ನಾಲ್ವರೂ ನೇರವಾಗಿ ಇಂದೇ ರಾತ್ರಿ ರಂಜಾಲವನ್ನು ದಾಟಿದರೆ , ಕಾಕತೀಯರ ಸಾಮ್ರಾಜ್ಯವನ್ನು ಪ್ರವೇಶಿಸುತ್ತೀರಿ .  ಅಲ್ಲಿ ನಿಮಗೆ ಸಕಲ ಅನುಕೂಲಗಳೂ ದೊರಕೊಳುವ ಏರ್ಪಾಡು ಮಾಡಿದ್ದೇವೆ , ನಂತರ ಇಲ್ಲಿ ನಡೆಯುವ ವಿದ್ಯಮಾನಗಳಿಗೆ ಎದೆಗೊಡುವ ಜವಾಬ್ದಾರಿ ನಮ್ಮದು .   ಸತ್ಯ ಹೇಳುತ್ತೇನೆ , ನಿಮ್ಮನ್ನು ಜೀವ ಸಹಿತ ಉಳಿಸುವ ಉದ್ದೇಶ ಅವರಾರಿಗೂ ಇಲ್ಲ , ನಿಮ್ಮ ವಿಷಯ ಹಾಗಿರಲಿ ಆ ಮದುಮಕ್ಕಳನ್ನು ನೋಡಿ , ಎಂಥವರಿಗಾದರೂ ಕನಿಕರ ಬಂದೀತು ; ಬರಿಯ ಪುಸ್ತಕಗಳ ಹೊರೆ ಹೊತ್ತಿರುವ ಪಂಡಿತ ಮಂಡಳಿಗೆ ಎಲ್ಲಿಯ ಕನಿಕರ ?,, 
 
" ಛೇ , ಕಲ್ಯಾಣದಲ್ಲಿ ಇಂತಹ ಅಮಾನುಷ ಆಡಳಿತ ಜಾರಿಯಲ್ಲಿದೆಯೇ ? ನಂಬಲೇ ಆಗುತ್ತಿಲ್ಲವಲ್ಲ  ಕೊತ್ವಾಲರೆ , ನಮ್ಮ ಬಗ್ಗೆ ನಿಮಗಿರುವ  ಕಳಕಳಿಗೆ ಕೃತಜ್ಞತೆಗಳು ,ಆದರೆ ನಾವು ಇಲ್ಲಿಂದ ಪಲಾಯನ ಮಾಡಿ ಓಡಿ ಹೋಗಲೇ ? ಹರಳಯ್ಯನವರಿಗೆ ಈ ವಿಷಯವನ್ನು ಹೇಳಿ ನೋಡಿ , ನಕ್ಕುಬಿಡುತ್ತಾರೆ. ಶರಣರಿಗೆ ಮರಣವೇ ಮಹಾನವಮಿ . ಅಂಥ ಜೀವಗಳ್ಳತನವಿದ್ದರೆ ಈ ಮದುವೆ ಮಾಡುತ್ತಿದ್ದೆವೆ ? ’ನಾಳೆ ಬಪ್ಪುದು ನಮಗಿಂದೇ ಬರಲಿ ’ ಎಂದ ಅಣ್ಣನವರ ಅನುಯಾಯಿಗಳು ನಾವು ; ಮರಣಕ್ಕಂಜುವವರಲ್ಲ . ನೀವೂ ಅಷ್ಟೇ ನಿಷ್ಟೆಯಿಂದ ಕರ್ತವ್ಯವನ್ನು ನಿರ್ವಹಿಸಿರಿ ; ಯೋಚಿಸಬೇಡಿ , ನಮ್ಮನ್ನು ಸಾಮಾನ್ಯ ಬಂದಿಗಳಂತೆಯೇ ನಡೆಸಿಕೊಳ್ಳಿ . ನಮ್ಮ ಮೇಲಣ ಅಭಿಮಾನದಿಂದ ನೀವು ಕರ್ತವ್ಯಚ್ಯುತರಾಗುವುದು ಬೇಡ ,, 
 
ಕೊತ್ವಾಲ ದುಃಖ ತುಂಬಿದ ದನಿಯಲ್ಲಿ 
 
" ನಾನು ಈ ಮಾತನ್ನು ಭರಮ ದಳವಾಯಿಗೆ ಹೇಳಿದೆ , ತೋರಿಕೆಯ ವಿಚಾರಣೆ ನಡೆಸುವ ಈ ಪಾಪಿಗಳಂತೆ ಕುತಂತ್ರಿಗಳಲ್ಲ ಶರಣರು ಎಂದು , ಆದರೆ ಅವನು ಹೇಗಾದರೂ ಮಾಡಿ ಈ ಪಾತಕಿಗಳ ಕೈಯಿಂದ ಹರಳಯ್ಯ ಮಧುವಯ್ಯಗಳನ್ನು ನವದಂಪತಿಗಳನ್ನು ಪಾರು ಮಾಡಲೇಬೇಕು ಎಂದು ಸಂಕಲ್ಪ ಮಾಡಿದ್ದಾನೆ , ಅದಕ್ಕಾಗಿ ಎಂಥ ಕಷ್ಟಗಳು ಬಂದರೂ , ತನ್ನ ಪ್ರಾಣವೇ ಹೋದರೂ ಚಿಂತೆ ಇಲ್ಲವೆಂದು ನಿರ್ಧರಿಸಿದ್ದಾನೆ . ಈಗ ನಿಮ್ಮ ನಿರ್ಧಾರಗಳನ್ನು ಅವನಿಗೆ ತಿಳಿಸಿದರೆ ತುಂಬಾ ಸಂಕಟಪಡುತ್ತಾನೆ ,, 
 
ಮಧುವರಸರು 
 
" ನಮಗಾಗಿ ತನ್ನ  ಸ್ವಂತ ಜೀವವನ್ನು ತೃಣವಾಗಿ ಕಾಣುತ್ತಿರುವ ಭರಮದಳವಾಯಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯುತ್ತಿಲ್ಲ . ಆದರೆ ನಾವಾರೂ ಕಲ್ಯಾಣದ ನ್ಯಾಯದಾನ ವಿಧಾನವನ್ನು  ಮಿರುವಂತಿಲ್ಲ . ಅದನ್ನು ಭರಮ ದಳವಾಯಿಗೂ ಮನದಟ್ಟು ಮಾಡಿಕೊಡಿ , ನಮಗೆ ಅನುಕೂಲ ಮಾಡುವುದಕ್ಕಾಗಿ ದಳವಾಯಿ ರಾಜದ್ರೋಹಿಯಾಗುವುದು ಬೇಡ ,,   
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೋಮಶೇಖರಯ್ಯನವರೇ, ತಿಳಿದ ವಿಷಯವಾದರೂ ತಮ್ಮ ನಿರೂಪಣೆ ಕಣ್ನೆದುರು ನಡೆಯುತ್ತಿರುವಂತೆ ಭಾಸವಾಗುವ ರೀತಿಯಲ್ಲಿದೆ. ಮನಸ್ಸು ಭಾರಗೊಳಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕವಿನಾಗರಾಜ್ ಅವರೆ ನಿಮ್ಮ ಭಾವನೆಗಳಿಗೆ ವಂದನೆಗಳು , ನಿಮ್ಮ ರೀತಿಯ ಬರಹಗಾರರ ಮೆಚ್ಚುಗೆ ಬರೆದವನ ಮನಸ್ಸನ್ನು ಹಗುರಗೊಳಿಸುತ್ತದೆ ಅದಕ್ಕಾಗಿ ವಿಶೇಷ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮಶೇಖರಯ್ಯನವರೆ, <<ಶರಣರಿಗೆ ಮರಣವೇ ಮಹಾನವಮಿ . ಅಂಥ ಜೀವಗಳ್ಳತನವಿದ್ದರೆ ಈ ಮದುವೆ ಮಾಡುತ್ತಿದ್ದೆವೆ ? ’ನಾಳೆ ಬಪ್ಪುದು ನಮಗಿಂದೇ ಬರಲಿ ’ ಎಂದ ಅಣ್ಣನವರ ಅನುಯಾಯಿಗಳು ನಾವು >> ಇಡೀ ಲೇಖನದ ಸಾರಾಂಶವನ್ನು ಹಿಡಿದಿಟ್ಟ ಸಾಲುಗಳಿವು. ಕವಿ ನಾಗರಾಜರೆಂದಂತೆ ನಿಮ್ಮ ನಿರೂಪಣೆ ಕಣ್ಣಿಗೆ ಕಟ್ಟಿದಂತಿದೆ. ಗುರು ಬಸವೇಶ್ವರರ ನಿಮ್ಮಿಂದ ಒಳ್ಳೆಯ ಸರಣಿಯನ್ನು ರಚನೆ ಮಾಡಿಸುತ್ತಿದ್ದಾನೆ; ಅವನ ಕ್ರುಪೆ ನಿಮ್ಮ ಮೇಲಿದೆ ಎನಿಸುತ್ತದೆ; ಇಲ್ಲದಿದ್ದರೆ ಎಷ್ಟೊಂದು ಕ್ಲಿಷ್ಟ ವಿಷಯಗಳನ್ನು ಹೀಗೆ ಸರಳವಾಗಿ ನಿರೂಪಿಸಲಾಗುತ್ತಿರಲಿಲ್ಲ. ನಮಸ್ಕಾರಗಳೊಂದಿಗೆ , ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+೧ ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ ಅವರಿಗೆ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಶ್ರೀಧರ್ ಬಂಡ್ರಿಯವರಿಗೆ ಕೃಪೆ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ , ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.