20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನನ್ಯ ಅಲ್ಲಮ ೧೨ (೧೯)

May 29, 2012 - 4:24pm
csomsekraiah

 ಗೊಡಚಿಯಲ್ಲಿ ಶರಣರಿಗೆ ಅನಿರೀಕ್ಷಿತವಾಗಿ ಸಿಕ್ಕಿದ ಕದಂಬಸೈನ್ಯದ ನೆರವು ಹೊಸ ಭರವಸೆಯನ್ನೇ ನೀಡಿದಂತಾಯಿತು . ಆದರೆ ಆ ಸಮಾಧಾನದ ಹಿಂದೆ ಬರಸಿಡಿಲೊಂದು ಅವಿತು ಕುಳಿತಿದ್ದುದು ಅವರ ನಿರೀಕ್ಷೆಯಲ್ಲಿರಲಿಲ್ಲ . ಮರುದಿನ ಗೊಡಚಿಯಿಂದ ಮುಂದೆ ಸಾಗುತ್ತಿದ್ದ ಶರಣಸಂದಣಿಯ ಮೇಲೆ, ನಾಗರಿಕ ವೇಷದಲ್ಲಿದ್ದ ಕಲಚುರ್ಯ ಪಡೆಯ ತಂಡವೊಂದು ಒಮ್ಮೆಲೇ ಮುಗಿ ಬಿದ್ದುದರಿಂದ ಶರಣರಲ್ಲಿ ಗೊಂದಲ ಉಂಟಾಯಿತು . ಮಾಚಿದೇವೆರು ಎಚ್ಚತ್ತು ಒರೆಯಿಂದ ಕತ್ತಿಯನ್ನು ಹೊರಸೆಳೆಯುತ್ತಿರುವಾಗಲೇ ಅವರ ಹಿಂದಿನಿಂದ ಆಕ್ರಮಣ ಮಾಡಿದ ಕಲಚುರ್ಯ ಸೈನಿಕನೊಬ್ಬ ಅವರ ಬೆನ್ನಿಗೆ ಕತ್ತಿಯಿಂದ ಆಳವಾಗಿ ಇರಿದು ಅಲ್ಲಿಂದ ವೇಗವಾಗಿ ಓಡಿ ತಪ್ಪಿಸಿಕೊಳ್ಳಲೆತ್ನಿಸಿದ . ಆದರೆ ಆ ವೇಳೆಗೆ ಅಲ್ಲಿಗೆ ಧಾವಿಸಿದ ಕದಂಬಸೇನೆಯ ಆಕ್ರಮಣಕ್ಕೊಳಗಾಗಿ ಧರೆಗುರುಳಿದ . ಮತ್ತೆ ಗೊಡಚಿಯ ದಾರಿಯೇ ಸಮರಾಂಗಣವಾಗಿ ರಕ್ತದ ಮಡುವಾಯಿತು  . ಈ ಘಟನೆಯಿಂದ ಶರಣಸಂದಣಿ ದಿಗ್ಭ್ರಾಂತವಾಯಿತು . ಗಾಯವಡೆದ ಮಾಚಿದೇವರನ್ನು ಬಂಡಿಯ ಮೇಲೆ ಹತ್ತಿರದಲ್ಲಿದ್ದ ಕಾರಿಮನಿಯ ಪಂಡಿತರ ಬಳಿಗೆ ಅವಸರದಿಂದ ತರಲಾಯಿತು ಆದರೆ ಆದ ಗಾಯವನ್ನು ದಕ್ಕಿಸಿಕೊಳ್ಳಲಾರದೆ ಮಾಚಿದೇವರು ಕಾರಿಮನಿಯಲ್ಲಿಯೇ ಕೊನೆಯುಸಿರೆಳೆದರು .

 
ಅತ್ಯಂತ ಭಾರವಾದ ಮನಸ್ಸಿನಿಂದ ಚನ್ನಬಸವಣ್ಣನವರು ಕಾರಿಮನಿಯಲ್ಲಿ ಮಾಚಿದೇವರ ಕಳೇವರವನ್ನು ಗದ್ದುಗೆ ಮಾಡಿ , 
 
ನರಸುರಾದಿಗಳೆಲ್ಲರೂ ನಿಮ್ಮ ಹೊಳೆಯಲ್ಲಿದ್ದರು , 
ಮನು ಮುನಿ ಯತಿ ವ್ರತಿಗಳೆಲ್ಲರೂ ನಿಮ್ಮ ತೋಹಿನೊಳಗಿದ್ದರು ,
ಗಂಗೆವಾಳಕರೆಲ್ಲರೂ ನಿಮ್ಮ ಮಡಿಯೊಳಡಗಿದರು .
ಗಂಗೆ ಗೌರಿವಲ್ಲಭರೆಲ್ಲರೂ , ಚತುರ್ಮುಖ ಪಂಚಮುಖ 
ದಶಮುಖರೆಲ್ಲ ನಿಮ್ಮ ಮಡಿಯ ಗಳಿಗೆಯೊಳಡಗಿದರು ,
ಲೋಕಾದಿಲೋಕವೆಲ್ಲವೂ ನಿಮ್ಮ ಕುಕ್ಷಿಯೊಳಗು .
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ , 
ನಿಮ್ಮ ನಿರಾಳ ಪ್ರಸಾದದಿಂದ ನಿರವಯದ ಹಾದಿಯ ಕಂಡೆನಲದೆ 
ನಿಮ್ಮಿಂದಲಾನು ಘನವೇ ಮಡಿವಾಳ ಮಾಚಯ್ಯ ?
 
ಭಾರವಾದ ಹೃದಯದಿಂದ ಕಾರಿ ಮನಿಯಿಂದ ಹೊರಟ ಶರಣರತಂಡ ಸೊಗಲದ ಮಾರ್ಗವಾಗಿ ಮುರಗೋಡಕ್ಕೆ ಬಂದರು ಮುರಗೋಡದಲ್ಲಿ ಸಾಮಾಜಿಕರು ಶರಣರ ತಂಡವನ್ನು ಅದ್ಭುತವಾಗಿ ಸ್ವಾಗತಿಸಿದರು . "ಎಲ್ಲ ಶರಣರೂ ಇಲ್ಲಿಯೇ ಉಳಿಯಿರಿ, ನಿಮಗೆ ಬೇಕಾದ ರಕ್ಷಣೆ ಆಶನ ವಸನಾದಿಗಳು ಎಲ್ಲವನ್ನೂ ಒದಗಿಸುತ್ತೇವೆ,, ಎಂದು ಊರ ಜನ ಪ್ರೀತ್ಯಾದರಗಳನ್ನು ತೋರಿದರು .  
 
ಅವರ ಆತ್ಮೀಯತೆಗೆ ಸೋತ ಚನ್ನಬಸವಣ್ಣನವರು , " ನಿಮ್ಮ ಪ್ರೀತಿಗೆ ನಾನು ಅಭಾರಿ , ಆದರೆ ನಮ್ಮಿಂದಾಗಿ ನೀವು ಪ್ರಭುಶಕ್ತಿಯನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ . ನೀವು ಎಷ್ಟೇ ಮಾನಧನರೂ , ಸ್ವಾಭಿಮಾನಿಗಳೂ ಆದರೂ ಸುಸಜ್ಜಿತ ಸೈನ್ಯದೆದುರು ಅನಗತ್ಯವಾಗಿ ದೇಹವನ್ನೊಡ್ಡಬೇಕಾಗುತ್ತದೆ . ಬೇಡ ನಮಗೆ ರಕ್ಷಣೆ ನೀಡಲು ಕದಂಬರು ಕಟಿಬದ್ದರಾಗಿದ್ದಾರೆ . ಒಂದು ಪ್ರಭುಶಕ್ತಿಯ ರಾಕ್ಷಸೀ ಮಹತ್ವಾಕಾಂಕ್ಷೆಯನ್ನು ಇನ್ನೊಂದು ಪ್ರಭುಶಕ್ತಿಮಾತ್ರ ಎದುರಿಸಬಲ್ಲದು . ಆದುದರಿಂದ ಕದಂಬರ ಆಶ್ರಯದಲ್ಲಿ ನಾವು ಉಳವಿಯಲ್ಲಿ ಉಳಿಯಬಯಸುತ್ತೇವೆ ನಿಮ್ಮ ಪ್ರೀತಿಗೆ ನಮ್ಮ ಮನದುಂಬಿದ ಶರಣಾರ್ತಿಗಳು ,,ಎಂದರು 
 
ಚನ್ನ ಬಸವಣ್ಣನವರ ಮಾತಿನಿಂದ ಮುರಗೋಡದ ಮುಖಂಡನ ಕಣ್ಣು ಹನಿಗೂಡಿದವು . "ನೀವು ಉಳವಿಗೆ ಹೊರಡುವುದಾದರೆ ನಮ್ಮ ಊರಿನಲ್ಲಿ ಅದರ ಜ್ಞಾಪಕಾರ್ಥವಾಗಿ , ’ಉಳವಿಯ ಬಾಗಿಲು’ ಎಂಬ ಮಹಾದ್ವಾರವೊಂದನ್ನು ನಿರ್ಮಿಸಲು ಅನುಮತಿ ನೀಡಿರಿ . ಮುಂದಿನ ನಮ್ಮ ಊರಿನ ಜನ , ’ಶರಣರನ್ನು ಆದರಿಸಿ ಕಳಿಸಿದ ಜನ ನಾವು”ಎಂದು ಹೆಮ್ಮೆಯಿಂದ ಬಾಳಲಿ ,,ಎಂದರು ಅವರ ಅತಿಶಯ ಪ್ರೀತಿಗೆ ಮಾರುಹೋದ ಅಕ್ಕನಾಗಲಾಂಬಿಕೆಯರು ಒಪ್ಪಿಗೆಯಿಂದ ತಲೆಯಾಡಿಸಿ ಮೌನ ಸಮ್ಮತಿಯನ್ನು ಸೂಚಿಸಿದರು . 
 
ಮುಂದೆ ಶರಣರು ಬೈಲಹೊಂಗಲ , ಹೊಸೂರುಗಳ ಮೂಲಕ ತ್ರಿಗುಡಿಗೆ ಬಂದರು . ಕಲ್ಯಾಣದ ಕ್ರಾಂತಿನಂತರ ಕಲ್ಯಾಣಮ್ಮ ನವರು ಮಾತೇ ಇಲ್ಲದಂತಾಗಿದ್ದರು . ಈಗ ಕಾರಿಮನಿಯಲ್ಲಿ ಮಾಚಿದೇವರ ಅಂತ್ಯವನ್ನು ಕಂಡನಂತರ ಆ ತಾಯಿ ಸಂಪೂರ್ಣವಾಗಿ ಮೂಕಿಯಾದರು . ಆಕೆಯ ಸಂತಾಪದ ಮನಃಸ್ಥಿತಿಯನ್ನು ಕಂಡ ನಾಗಲಾಂಬಿಕೆಯರು 
 
" ಕಲ್ಯಾಣ ಅತ್ತುಬಿಡೆ , ದುಃಖವನ್ನು ನುಂಗಿ ನುಂಗಿ ಏನಾಗಬೇಕೆಂದುಕೊಂಡಿದ್ದೀಯೆ ? ನನಗೆ ಗೊತ್ತು , ಕೈಹಿಡಿದ ಗಂಡನನ್ನು ಕಳೆದುಕೊಂಡೆ , ಹೆತ್ತ ಮಗನನ್ನು ಕಳೆದುಕೊಂಡೆ , ಮುದ್ದು ಸೊಸೆಯನ್ನು ಕಳೆದುಕೊಂಡೆ , ನಾನು ನಿನ್ನನ್ನು ಹೇಗೆ ಸಮಾಧಾನಿಸಲಿ . ಸಾಧ್ಯವಿಲ್ಲ ತಾಯಿ , ಅಳು , ಅತ್ತು ನಿನ್ನೆಲ್ಲ ದುಃಖವನ್ನು ಹೊರ ಹಾಕು ,, 
 
ಕಲ್ಯಾಣಮ್ಮ ಅಳಲಿಲ್ಲ ನಾಗಲಾಂಬಿಕೆಯನ್ನು ಬಿಗಿದಪ್ಪಿದಳು , 
 
" ಅಕ್ಕ ಇದು ನಿಜವೇ ? ಆ ಕೈಲಾಸದಲ್ಲಿ ನನ್ನವರೆಲ್ಲಾ ಇರುವರೆ ? ಮತ್ತೆ ಅವರನ್ನು ನಾನು ಕಾಣಬಲ್ಲೆನೆ ? ,, 
 
"ಏಕೆ ಈ ಹುಚ್ಚು ಪ್ರಶ್ನೆ ಕಲ್ಯಾಣ ? ,, 
 
" ಹುಚ್ಚಲ್ಲಕ್ಕ , ಈ ನಿತ್ಯದ ಮಾರಣಹೋಮವನ್ನು ನಾನು ನೋಡಲಾರೆ , ನನ್ನವರು ಮಾತ್ರವಲ್ಲ ದಿನ ದಿನವೂ ಶರಣರ ತಲೆಗಳುರುತ್ತಲೇ ಇವೆ . ಈ ನೀಚ , ಕ್ರೌರ್ಯ ತುಂಬಿದ ಪಾಪಿಷ್ಟ ಜಗತ್ತನ್ನು ತಿದ್ದುವುದಕ್ಕಾಗಿಯೇನಕ್ಕ ಅಣ್ಣ ಬಸವಣ್ಣ ಅಷ್ಟೊಂದು ಹೆಣಗಿದುದು , ಆಬ್ಬಾ !  ಇದನ್ನು ತಿದ್ದುವುದು!   ಸಾಧ್ಯವಿಲ್ಲಕ್ಕ , ಸಾಧ್ಯವಿಲ್ಲ ,,
 
" ಹತಾಸೆಯ ಮಾತಾಡಬೇಡ ಕಲ್ಯಾಣ , ಸಮುದ್ರ ಮಥನದಲ್ಲಿ ವಿಷ ಬಂದ ನಂತರವೇ ಅಮೃತ ಬಂದುದು ,, 
 
ಕಲ್ಯಾಣಮ್ಮನವರ ಮುಖದಲ್ಲಿ ಅಂತಹ ಸಮಯದಲ್ಲೂ ಅಸಹಾಯಕ ಕಿರುನಗು ಮೂಡಿತು
 
 " ಅಕ್ಕ ಕ್ಷಮಿಸಿ ನನ್ನನ್ನು , ನಾನು ಕಡೆಯವರೆಗೆ ನಿಮ್ಮೆಲ್ಲರ ಸಂಗದಲ್ಲಿರಬೇಕೆಂದುಕೊಂಡಿದ್ದೆ , ಆಗುತ್ತಿಲ್ಲ ಅಕ್ಕ , ನನಗೆ ಅಪ್ಪಣೆ ಕೊಡಿ , ನನಗೆ ಈ ಅಸಹ್ಯಕರ ಜಗತ್ತು ಸಾಕು; ಸಾಕು . ಎನ್ನುತ್ತಾ ನಾಗಲಾಂಬಿಕೆ ಮಡಿಲಿನಲ್ಲಿ ಕೊನೆಯುಸಿರೆಳೆದರು .       
 
ಅಕ್ಕನಾಗಲಾಂಬಿಕೆ ಸ್ಥಬ್ದರಾಗಿ ಹೋದರು , ತ್ರಿಗುಡಿಯಲ್ಲಿ ಕಲ್ಯಾಣಮ್ಮನವರ ಗದ್ದುಗೆ ನಿರ್ಮಾಣವಾಯಿತು .
 
ತ್ರಿಗುಡಿಯಿಂದ  ಸಂಪಗಾಂವ್ ಗೆ ಬಂದ ಶರಣ ತಂಡ ಅಲ್ಲಿ ಬೀಡು ಬಿಟ್ಟಿತು . ಅಲ್ಲಿ ಮಲೆಪ್ರಭ ನದಿಯಲ್ಲಿ ಮೀಯುತ್ತಿದ್ದ ನಾಗಲಾಂಬಿಕೆಯರ ಸಮೀಪಕ್ಕೆ ಬಂದ  ಗಂಗಾಂಬಿಕೆಯರು 
 
" ಅಕ್ಕ ನಾವು ಏಕೆ ಇನ್ನೂ ಬದುಕಿದ್ದೇವೆ ? ,,
 
" ಅಯ್ಯೊ ಏನು ಮಾತಾಡುತ್ತಿರುವೆ ಕಂದಾ , ನೀನೂ ಶರಣರನ್ನು  ಅನಾಥರನ್ನಾಗಿ ಮಾಡಬೇಕೆಂದಿರುವೆಯಾ ? ,, 
 
" ನೀಲ ಪುಣ್ಯವಂತೆ , ಈಗ ನೋಡಿದರೆ ಕಲ್ಯಾಣಮ್ಮ , ನಾನೇನು ಪಾಪ ಮಾಡಿದ್ದೆ ? ಈ ಸಾಲು ಮರಣಗಳನ್ನು ಕಾಣುತ್ತಾ ಬದುಕಿರುವ ಶಿಕ್ಷೆಯನ್ನು ನನಗೇಕೆ ವಿಧಿಸಿದರು ,, 
 
" ಬದುಕಿರುವವರು ಜಗತ್ತನ್ನು ನ್ಯಾಯಮಾರ್ಗದಿಂದ ಎದುರಿಸಿ ಬದುಕಬೇಕು ಗಂಗಾ , ಬಸವಣ್ಣ ನಾನು ಎತ್ತಿ ಆಡಿಸಿದ ಕಂದ , ಬರಿಯ ಏಳೆಂಟು ವರ್ಷದ ನಾನು , ಒಂದುವರೆ ವರ್ಷದ ಬಸವಣ್ಣನನ್ನು ಕಂಕುಳಲ್ಲಿ ಕವುಚಿ ಊರೆಲ್ಲಾ ಸುತ್ತುತ್ತಿದ್ದೆ . ಅದಕ್ಕಾಗಿ ಅಮ್ಮನಿಂದ ಬೈಸಿಕೊಳ್ಳುತ್ತಿದ್ದೆ . ಬೆಳೆಯುತ್ತಾ ಬಸವಣ್ಣ ಸಣ್ಣ ವಯಸ್ಸಿನಲ್ಲಿಯೇ ಅದ್ಭುತವಾಗಿ ಮಾತಾಡುತ್ತಿದ್ದ , ಅವನ ಆಲೋಚನಾಶಕ್ತಿ ಹರಿತವಾಗಿತ್ತು . ಅನೇಕ ಕಂದಾಚಾರಗಳನ್ನು ಇದು ಏಕೆ ಹೀಗೆ ? ಎಂದು ನನ್ನನ್ನು ಪ್ರಶ್ನಿಸುತ್ತಿದ್ದ , ನನಗೇನು ಗೊತ್ತಿತ್ತು ? ನಾನು ತಲೆ ಅಲ್ಲಾಡಿಸುತ್ತಿದ್ದೆ . ಉಪನಯನದ ದಿನ ಅದನ್ನು ವಿರೋಧಿಸಿ ಮನೆಯಿಂದಲೇ ಅವನು  ಹೊರಟ . ಒಂದು ದಿನವೂ ಅವನನ್ನು ಬಿಟ್ಟಿರದ ನಾನು ನನ್ನ ತಮ್ಮನ ಹಿಂದೆಯೇ ಸಂಗಮಕ್ಕೆ ಹೊರಟೆ , ಹನ್ನೆರಡು ವರ್ಷ ನಾವು ಸಂಗಮದಲ್ಲಿಯೇ ಇದ್ದೆವು . ಅಲ್ಲಿಯೇ ಬಸವಣ್ಣ ಶಿವಸ್ವಾಮಿಯವರಿಗೆ ಮತ್ತು ನನಗೆ ಮದುವೆ ಮಾಡಿಸಿದ . ಇದು ನಮ್ಮ ಮನೆಯವರನ್ನು ಇನ್ನಷ್ಟು ಕೆರಳಿಸಿತು . ರಾಜ ಸಂಬಂಧಿಗಳಾದ ನಮ್ಮ ಮಗಳನ್ನು ಒಬ್ಬ ಅನಾಮಧೇಯನಿಗೆ ಮದುವೆ ಮಾಡಿಸಿದ ಎಂಬ ದುಃಖ ಅವರನ್ನು ಕಾಡಿತು. ಮನುಷ್ಯರು ನೋಡುವುದು ಕೇವಲ ಅಂತಸ್ತನ್ನು ,  ಶಿವ ಸ್ವಾಮಿಯವರ ಜ್ಞಾನ ಮತ್ತು ಹೃದಯವನ್ನು ನಮ್ಮವರು ಕಾಣಲಿಲ್ಲ . ಹೀಗೆ ನನ್ನ ತಮ್ಮನ  ಒಂದು ಮಾತನ್ನೂ ಎಂದೂ ಮೀರಿದವಳಲ್ಲ ನಾನು , ಈಗ ನನ್ನನ್ನೂ ಬಿಟ್ಟು ಅವನು ಸಂಗಮಕ್ಕೆ ಹೊರಟು ಹೋಗಲಿಲ್ಲವೇ ? ಅವನ ಇಷ್ಟದಂತೆ ಶರಣಸಂಕುಲದ ಜೊತೆ ನಾವು ಬದುಕಲೇಬೇಕು ,, 
 
" ಅಕ್ಕ ನಿಮ್ಮಷ್ಟು ದೊಡ್ಡವಳಲ್ಲ ನಾನು , ಬೇಕಾದರೆ ನನ್ನನ್ನು ಸ್ವಾರ್ಥಿ ಎಂದುಕೊಳ್ಳಿ . ಇದೇ ಮಲಪ್ರಭೆಯೆ ಅಲ್ಲವೇ ಅಕ್ಕ ಅಲ್ಲಿ ಸಂಗಮದಲ್ಲಿ ಕೃಷ್ಣೆಯೊಡನೆ ಕೂಡುವುದು , ಅಲ್ಲಿ ಅವರೆಲ್ಲ ಇದ್ದಾರೆ ನನ್ನವರು !  ನನ್ನ ನೀಲಲೋಚನೆ ! ನನ್ನ ಬಸವರಸರು ! ನಾನೇಕೆ ಇಲ್ಲಿರಬೇಕು ? ,, 
 
" ಗಂಗಾ ಗಂಗಾ , ಏನು ನಿರ್ಧರಿಸುತ್ತಿರುವೆಯಮ್ಮ ? ಗಂಗಾ ನಮ್ಮ ಕೈ ಬಿಡಬೇಡಮ್ಮ ,, 
 
" ಏನಿಲ್ಲ ಅಕ್ಕ , ನೀಲಲೋಚನೆಗಿಂತ ಮೊದಲು ನಾನು ತಾನೆ ಬಸವರಸರ ಕೈ ಹಿಡಿದವಳು ,  ಅವಳಿಗೆ ಅಲ್ಲಿ ಸ್ಥಾನವಿರುವುದಾದರೆ ನನಗೇಕೆ ಇಲ್ಲ ? ಇದು ನ್ಯಾಯವಲ್ಲ ಅಕ್ಕ, ಅವರಿಬ್ಬರ ಜೊತೆ ನಾನು ಯಾವಾಗಲೂ ಇದ್ದವಳು , ಆದರೆ ನನ್ನನ್ನು ಏಕಾಂಗಿಯನ್ನಾಗಿ ಮಾಡಿ ಅವರು ಹೋದುದು ನ್ಯಾಯವೇನಕ್ಕ ? ,, 
 
ಎನ್ನುತ್ತಾ ಮಲಪ್ರಭೆಯ ದಂಡೆಲಲ್ಲಿ ನೀಲಾಂಬಿಕೆಯ ತೊಡೆಯ ಮೇಲೆ ತಲೆಇಟ್ಟು ಮಲಗಿದ ಗಂಗಾಂಬಿಕೆ , ಇಹವನ್ನು ತ್ಯಜಿಸಿದಳು . ಅಂತಹ ಧೃಢ ಮನಸ್ಸಿನ ನಾಗಲಾಂಬಿಕೆಯರೂ ಕ್ಷಣಕಾಲ ದಿಗ್ಭ್ರಮೆಗೊಳಗಾದರು.
 
ಸಂಪಗಾಂವ್ ನಲ್ಲಿ ಮಲಪ್ರಭೆಯ ದಂಡೆಯ ಮೇಲೆ ಗಂಗಾಂಬಿಕೆಯರ ಗದ್ದುಗೆಯನ್ನು ನಿರ್ಮಿಸಿದ ಶರಣರು ಭಾರವಾದ ಮನಸ್ಸಿನಿಂದ  ಕಾದರವಳ್ಳಿಯ ಕಡೆ ಹೊರಟರು .
ಈ ಎಲ್ಲ ಸಂಕಟಗಳ ನಡುವೆ ಅವಿಶ್ರಾಂತವಾಗಿ ಶರಣರು ಮುನ್ನಡೆಯಲೇಬೇಕಿತ್ತು , ಅದು ಶರಣಸಂದಣಿಯ ಅಳಿವು ಉಳಿವಿನ ಪ್ರಶ್ನೆಯಾಗಿತ್ತು .  ಕಾದರವಳ್ಳಿ ಶರಣರ ಪಾಲಿಗೆ ಮರಣವೇ ಮಹಾನವಮಿ ಎನ್ನುವಂತಾಯಿತು.  ಎಲ್ಲ ಅಡೆತಡೆಗಳ ನಡುವೆ ಶರಣರು ಮುನ್ನಡೆಯುತ್ತಲೇ ಇದ್ದುದು  ಮಾಧವನಾಯಕನ ಪಿತ್ತ ಕೆರಳುವಂತಾಯಿತು . ಕಾದರವಳ್ಳಿಯಲ್ಲಿ  ಚತುರ ಬಿಲ್ಲುಗಾರರನ್ನೊಳಗೊಂಡ ಎರಡು ಸಾವಿರದಷ್ಟು ಸನ್ನದ್ದ ಕಲಚುರ್ಯ ಯೋಧರು , ಒಮ್ಮೆಲೆ ಶರಣರು ಮತ್ತು ಕದಂಬ ಪಡೆಯ ಮೇಲೆ ಮುಗಿಬಿದ್ದರು . ಅಲ್ಲಿ ಘನಘೋರ ಕದನ ನಡೆಯಿತು , ಕನಿಷ್ಟ ನಾನೂರು ಶರಣರು , ಇನ್ನೂರರಷ್ಟು ಕದಂಬ ಯೋಧರು ಇನ್ನೂರಕ್ಕೂ ಹೆಚ್ಚು ಕಲಚುರ್ಯ ಸೈನಿಕರು ಈ ಘೋರ ಕದನದಲ್ಲಿ ಮಡಿದರು . ಸರಿ ಸುಮಾರು ಎಂಟು ನೂರು ಜನ ರಣರಂಗದಲ್ಲಿ ಮಡಿದ ವಾರ್ತೆ ಬಹು ಬೇಗ ಎಲ್ಲ ಕಡೆ ಪಸರಿಸಿತು . ನಡೆದ ಎಲ್ಲ ಘಟನೆಗಳನ್ನು ಕೇಳಿ ತಿಳಿದ ಕಸ್ತೂರಿಕಾಮೋದಿನೀ ದೇವಿಯರು , ದಿಗ್ಭ್ರಮೆಗೊಂಡು ನೊಂದ ಮನದಿಂದ , ತಮ್ಮ ಸೈನ್ಯಕ್ಕೆ  ರಾಜಧಾನಿಗೆ ಹಿಂದಿರುಗುವಂತೆ   ಆಜ್ಞಾಪಿಸಿದರು. ಮಂಚಣ್ಣ ಪಂಡಿತರು ’ಇದು ಮಾಧವನಾಯಕನ ಕುತಂತ್ರ ಎಂದು ತಾವು ಅಜ್ಞರೆಂಬಂತೆ ನಟಿಸಿದರು .    ಮಾಧವನಾಯಕನನ್ನು ಬಂಧಿಸಿ ವಿಚಾರಣೆಗೆ ಕರೆತರುವಂತೆ ರಾಜಕುಮಾರ ಸೋವಿದೇವನು ಆಣತಿ ಇತ್ತನು . ಆದರೆ ಅಲ್ಲಿಂದ ಪಲಾಯನ ಮಾಡಿದ ಮಾಧವನಾಯಕನು , ತನಗೆ ನಿಷ್ಟರಾದ ಕೆಲವು ಸೈನಿಕರನ್ನು  ಕಟ್ಟಿಕೊಂಡು ಶರಣರ ಮೇಲಿನ ದ್ವೇಷವನ್ನು ಮುಂದುವರಿಸಿದನು . ಈ ಎಲ್ಲ ವಿವರಗಳನ್ನು ತಿಳಿದ ಕದಂಬರು ಹಳಿಯಾಳದ ತಮ್ಮ ಸಿಬಿರದಿಂದ ಶರಣರ ರಕ್ಷಣೆಗೆ ಹೆಚ್ಚುವರಿ ಸೈನ್ಯವನ್ನು ಕಳಿಸಿದರು .  
 
ನಂತರ ಕದಂಬರ ಹೆಚ್ಚುವರಿ ರಕ್ಷಣೆಯೊಂದಿಗೆ ಸ್ಥಳೀಯ ನಾಗರಿಕರ ಬೆಂಬಲದಿಂದ ಶರಣರು , ಹುಣಸೆಕಟ್ಟೆ , ಕಿತ್ತೂರುಗಳ ಮಾರ್ಗವಾಗಿ ಹೂಬಳ್ಳಿಗೆ ಬಂದರು . ಅಲ್ಲಿ ಹೂಬಳ್ಳಿಯಲ್ಲಿ ಹುಚ್ಚುಸಿದ್ದೇಶ್ವರಸ್ವಾಮಿಗಳೆಂದು ಹೆಸರುವಡೆದ ಒಬ್ಬ ಅವಧೂತರು , ಅಷ್ಟೊಂದು ಶರಣ ಸಂಕುಲಕ್ಕೆ ತಮ್ಮ ಚಿಕ್ಕದಾದ  ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಿ ತಮ್ಮಲ್ಲಿ ತಂಗಲು ಆಶ್ರಯ ನೀಡಿದರು  . ಆ ಹುಚ್ಚು ಅವಧೂತರು  ಹುಚ್ಚು ನಗೆ ನಗುತ್ತಾ , 
 
" ಅಲ್ಲಪ್ಪಾ ಇದೇ ನೋಡು ವಿಚಿತ್ರ , ಸೊನ್ನಲಿಗೆಯಿಂದ ಹೊರಟವರು ನೀವು ಮೂರುವರೆ ಸಾವಿರ ಜನ , ಇಲ್ಲಿಗೆ ತಲುಪಿರುವುದು ಮೂರುಸಾವಿರ . ಎನಾಯಿತು ಲೆಕ್ಕ ? ಐನೂರುಜನ ಶರಣರು ಹೊರಟೇಹೋದರು ; ವೀರಾವೇಶದ ಮಾಚಯ್ಯಕೂಡ . ಪುಣ್ಯಸತಿ ಕಲ್ಯಾಣಮ್ಮ , ಮಾತೆ ಗಂಗಮ್ಮ ಎಲ್ಲರೂ ತೆರಳಿದರು .  ನಾನು ಕಲ್ಯಾಣಕ್ಕೆ ಬಂದಾಗ ಗಂಗಮ್ಮನ ಕೈಯಿನ ಪ್ರಸಾದ ಉಂಡಿದ್ದೆ ಕಣ್ರೋ , ಆಕೀನ ನಡುದಾರೀಲಿ ಬಿಟ್ಟೇ ಬಂದ್ರಲ್ಲಪ್ಪ . ಇದೇ ಕಣ್ರೋ ಕಣ್ಣೆದುರಿಗೆ ನಡೆದರೂ ಮನುಷ್ಯ ಏನೂ ಅರಿವಿಲ್ಲದೆ, ಲೋಭ ಮೋಹಗಳ ಮಾಯೆಗೆ ಸಿಲುಕುವುದು ಅಂದ್ರೆ ,,
 
 ಎನ್ನುತ್ತಾ ಕೈ ಹೊಯ್ಯುತ್ತಾ ಮತ್ತಷ್ಟು ನಗುತ್ತಾ ಕುಳಿತರು . ಚನ್ನಬಸವಣ್ಣನವರು ಆ ಮಹಾತ್ಮರಿಗೆ ಮನದಲ್ಲೇ ನಮಿಸುತ್ತಾ ಭಾವಪರವಶರಾದರು . ಮುಂದೆ ಆ ಸ್ಥಳ ಮೂರುಸಾವಿರ ಶರಣರಿಗೆ ಆಶ್ರಯ ನೀಡಿದ ಮೂರುಸಾವಿರ ಮಠವೆಂಬ ಹೆಸರಿನಿಂದ ಖ್ಯಾತಿಯನ್ನು ಪಡೆಯಿತು . 
 
ನಂತರ ಕಕ್ಕೇರಿ , ಹಳಿಯಾಳ , ಕಲಘಟಗಿ , ಸಾಮ್ರಾಣಿಗಳ ಮಾರ್ಗವಾಗಿ ಶರಣರು ಮುನ್ನಡೆದರು , ಕಲಘಟಗಿ ಸಾಮ್ರಾಣಿಗಳಲ್ಲಿ ಕಾಡಿನಲ್ಲಿ ಅವಿತಿದ್ದ ಮಾಧವನಾಯಕನ ವಿದ್ರೋಹಿ ಸೈನಿಕರು ಶರಣರ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ಮುಂದುವರಿಸಿದರು , ಇದರಿಂದಾಗಿ ಇನ್ನಷ್ಟು ಶರಣರು ದಾರುಣ ಹತ್ಯೆಗೀಡಾದರು . ಅಂತಿಮವಾಗಿ ಉಳವಿಯನ್ನು ತಲುಪುವ ವೇಳೆಗೆ ಶರಣರಲ್ಲಿ ಬೇಕಾದಷ್ಟು ಪ್ರಾಣಹಾನಿ ಸಂಭವಿಸಿತ್ತು . ಅದೇ ವೇಳೆಯಲ್ಲಿ ಉಳವಿಯ ಕಾಡಿನಲ್ಲಿ ಅಡಗಿ ವಿದ್ರೋಹ ಚಿಂತನೆಯನ್ನು ನಡೆಸುತ್ತಿದ್ದ ಮಾಧವನಾಯಕನನ್ನು ಬಂಧಿಸುವಲ್ಲಿ ಕದಂಬ ಪಡೆ ಯಶಸ್ವಿಯಾಯಿತು . ಅವನನ್ನು ಬಂಧಿಸಿ ಗೋಮಾಂತಕದ ಸೆರೆಮನೆಯಲ್ಲಿಟ್ಟರು . ಅಲ್ಲಿಗೆ ಶರಣರ ಮೇಲಿನ ಸಂಘಟಿತ ದೌರ್ಜನ್ಯಕ್ಕೆ ಕೊನೆಹಾಡಿದಂತಾಯಿತು .  
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಸೋಮಶೇಖರಯ್ಯನವರೆ,
ಉತ್ತರ ಕರ್ನಾಟಕದಲ್ಲಿ ಶರಣರಿಗೆ ಸಂಭಂದಿಸಿದ ಊರುಗಳನ್ನು ಮತ್ತು ಅವುಗಳ ಮಹತ್ವವನ್ನು ಚೆನ್ನಾಗಿ ಬಿಂಬಿಸುತ್ತಿದೆ ಸರಣಿಯಲ್ಲಿನ ಈ ಲೇಖನ. ಓದುತ್ತಾ ಓದುತ್ತಾ ಶರಣರ ಅವಸಾನ ಈ ರೀತಿಯಾಗಿದ್ದಕ್ಕೆ ಮನದಲ್ಲಿ ದು:ಖವೂ ಆಗುತ್ತದೆ. (ಈ ಹಿಂದಿನ ಒಂದರೆಡು ಲೇಖನಗಳನ್ನು ಕಾರಾಣಾಂತರಗಳಿಂದ ಓದಲಾಗಿರಲಿಲ್ಲ; ಈಗ ಓದುತ್ತೇನೆ.)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by csomsekraiah on

ಆತ್ಮೀಯ ಶ್ರೀಧರ್ ಬಂಡ್ರಿಯವರೆ
ಹನ್ನೆರಡನೆಯ ಶತಮಾನದ ಕಲ್ಯಾಣದ ಕ್ರಾಂತಿ ಕನ್ನಡ ನಾಡಿನ ಮರೆಯಲಾಗದ ಒಂದು ವಿಷಾದಗೀತೆ . ಆದರೆ ಜನಮಾನಸವನ್ನು ಎಚ್ಚರಿಸುವಲ್ಲಿ ಇಟ್ಟ ಒಂದು ದೈತ್ಯ ಹೆಜ್ಜೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatesh on

ಹನ್ನೆರಡನೆಯ ಶತಮಾನದ ಬಗ್ಗೆ ಬಹಳ ರೋಚಕ ಸನ್ನವೇಶಗಳು ಬೆಳಕಿಗೆ ಬಂದಿವೆ. ಓದಲು ಮುದಕೊಡುವ ಮತ್ತು ವೈಚಾರಿಕತೆಗೆ ಕರೆದೊಯ್ಯುವ ಗಳಿಗೆಗಳವು !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by csomsekraiah on

ಅತ್ಮೀಯ ವೆಂಕಟೇಶ್ ಅವರೆ

ಬಹಳ ದಿನಗಳ ನಂತರ ತಮ್ಮ ಭೇಟಿ ಸಂತೋಷ ನೀಡಿತು , ಪ್ರತಿಕ್ರಿಯೆಗಾಗಿ ಧನ್ಯವಾದಗಳು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.