ಅಪ್ಪಟ ಸಾವಯವ ಕೃಷಿಕ :ಇ. ವಿಠಲ ರಾವ್

ಅಪ್ಪಟ ಸಾವಯವ ಕೃಷಿಕ :ಇ. ವಿಠಲ ರಾವ್

“ದೊಡ್ಡ ಅಣೆಕಟ್ಟು ಯಾರಿಗೆ ಬೇಕಾಗಿದೆ? ಮರದ ವ್ಯಾಪಾರಿಗಳಿಗೆ, ಸಿಮೆಂಟ್ ವ್ಯಾಪಾರಿಗಳಿಗೆ, ಕಬ್ಬಿಣದ ವ್ಯಾಪಾರಿಗಳಿಗೆ ಮತ್ತು ಕಂಟ್ರಾಕ್ಟ್ದಾರರಿಗೆ. ಡ್ಯಾಮ್ ನೀರಿನಲ್ಲಿ ಮುಳುಗಡೆ ಆಗಲಿರುವ ಕಾಡಿನ ಮರಗಳನ್ನು ಮರದ ವ್ಯಾಪಾರಿಗಳು ಘನ ಅಡಿಗೆ ಒಂದೆರಡು ರೂಪಾಯಿ ರೇಟಿಗೆ ತಗೊಳ್ತಾರೆ. ಮತ್ತೆ ಅದನ್ನೇ ಘನ ಅಡಿಗೆ ಮುನ್ನೂರು ರೂಪಾಯಿಗಿಂತ ಜಾಸ್ತಿ ರೇಟಿಗೆ ಮಾರ್ತಾರೆ. ಹಾಗೇನೇ ಒಂದು ಡ್ಯಾಮ್ ಕಟ್ಟಲಿಕ್ಕೆ ಶುರು ಮಾಡಿದ ನಂತರ ನಾಲ್ಕೈದು ವರುಷ ಸಿಮೆಂಟಿನ ಮತ್ತು ಕಬ್ಬಿಣದ ವ್ಯಾಪಾರಿಗಳಿಗೆ ಬೇರೆ ಯಾವ ಬಿಸಿನೆಸ್ಸೂ ಬೇಡ – ಡ್ಯಾಮ್ ಒಂದೇ ಸಾಕು. ಈ ಡ್ಯಾಮುಗಳಿಂದ ರೈತರಿಗೆ ಏನು ಉಪಕಾರ ಆಗುತ್ತದೆ? ಒಂದು ತಲೆಮಾರಿನವರಿಗೆ ನೀರು ಸಿಗಬಹುದು. ಆ ನಂತರ ಹೂಳು ತುಂಬಿ ಅಣೆಕಟ್ಟು ನಿರುಪಯೋಗಿ ಆಗ್ತದೆ. ಒಟ್ಟಾರೆಯಾಗಿ ಈ ಅಣೆಕಟ್ಟುಗಳಿಂದ ನಾವು ಪಡಕೊಳ್ಳೋದಕ್ಕಿಂತ ಕಳಕೊಳ್ಳೋದೇ ಜಾಸ್ತಿ” ಎನ್ನುತ್ತಾ ಯೋಚನಾಮಗ್ನರಾದರು ಇಡ್ಯ ವಿಠಲ ರಾಯರು. ಮೇ ೧೧, ೨೦೦೫ರ ಸಂಜೆ ಕಿನ್ಯಾದ ಅವರ ನೂರು ವರುಷ ಹಳೆಯ ಮನೆಯಲ್ಲಿ ಅವರೊಂದಿಗೆ ಮಾತಾಡುತ್ತಾ ಕುಳಿತಿದ್ದಾಗ. ಎಪ್ಪತ್ತೆಂಟು ವರುಷಗಳ ಬದುಕಿನ ಅನುಭವ ಅವರ ಮಾತಿನಲ್ಲೂ ಮುಖದಲ್ಲೂ ಮಿಂಚುತ್ತಿತ್ತು.
ಅಣೆಕಟ್ಟುಗಳಿಂದ ಜನಸಾಮಾನ್ಯರ ಬದುಕಿನ ಮೇಲಾಗುವ ಪರಿಣಾಮಗಳನ್ನೂ ಅಣೆಕಟ್ಟು ನಿರ್ಮಾಣದ ತೆರೆಮರೆಯಲ್ಲಿರುವ ಲಾಬಿಗಳನ್ನೂ ಅದೊಂದೇ ಮಾತಿನಲ್ಲಿ ಬಿಚ್ಚಿ ಇಟ್ಟಿದ್ದರು ವಿಠಲ ರಾಯರು. ಇಂತಹ ಚಿಕಿತ್ಸಕ ದೃಷ್ಠಿ ಇರೋದರಿಂದಲೇ ಅವರು ಇತರ ಕೃಷಿಕರಿಗಿಂತ ಭಿನ್ನ. ತಮ್ಮ ಯೌವನದಲ್ಲೇ ಮಂಗಳೂರು ತಾಲೂಕಿನ ಸೋಮೇಶ್ವರ ಉಚ್ಚಿಲ ಹತ್ತಿರದ ಕಿನ್ಯಾ ಗ್ರಾಮದ ಕುಟುಂಬದ ಕೃಷಿ ಭೂಮಿಗೆ ಮರಳಿದ ವಿಠಲರಾಯರು ಕಳೆದ ಐದು ದಶಕಗಳಲ್ಲಿ ಪತ್ನಿ  ತಾರಾ ಅವರ ಸಹಕಾರದೊಂದಿಗೆ ಕೃಷಿಯನ್ನೇ ನೆಚ್ಚಿಕೊಂಡು ಬದುಕಿದವರು. ತನ್ನ ಎರಡೆಕ್ರೆ ಅಡಿಕೆ ತೋಟದ ಆದಾಯದಲ್ಲೇ ತೃಪ್ತಿ ಕಂಡವರು. ಅಡಿಕೆಗೆ ಬೆಲೆ ಏರಿದಾಗ, ಶತಮಾನ ಹಳೆಯ ಮನೆ ಕೆಡವಿ ಬಂಗಲೆ ಕಟ್ಟಿಸಲು ಹೊರಟವರಲ್ಲ. ಇದ್ದ ಬೈಕನ್ನು ಮಾರಿದರೇ ವಿನಃ ಕಾರು ಖರೀದಿಸಿ ತಂದವರಲ್ಲ. ಹಾಗಂತ ಮುಖ್ಯ ಬೆಳೆ ಅಡಿಕೆಯನ್ನೇ ನಂಬಿ ಕುಳಿತವರಲ್ಲ. ಅದರ ಜೊತೆ ಬಾಳೆ, ಕರಿಮೆಣಸು ಇತ್ಯಾದಿ ಉಪಬೆಳೆಗಳನ್ನು ಬೆಳೆದರು. ಉಪಕಸುಬಾಗಿ ಹಾಲಿನ ಡೈರಿ ನಡೆಸಿದರು.
ಆರಂಭದಲ್ಲಿ ವಿಠಲರಾಯರು ತಮ್ಮ ಬೆಳೆಗಳಿಗೆ ರಾಸಾಯನಿಕಗಳನ್ನು ಪ್ರಯೋಗಿಸಿದ್ದರು. ಕ್ರಮೇಣ ಪುಸ್ತಕಗಳ ಓದಿನಿಂದ ಅವರಿಗೆ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳ ಭಯಂಕರ ಅಪಾಯಗಳ ಅರಿವಾಯಿತು. ಕೈಗಾರಿಕೋದ್ಯಮಿಗಳು ತಮ್ಮ ಲಾಭ ಹೆಚ್ಚಿಸಲಿಕ್ಕಾಗಿ ಕೃಷಿರಂಗದಲ್ಲಿ ಮಾಡುವ ಹುನ್ನಾರಗಳ ಜಾಡು ಸಿಕ್ಕಿತು. ಹಾಗಾಗಿ ಅವರು ಹಠಾತ್ತನೇ ತಮ್ಮ ಜಮೀನಿನಲ್ಲಿ ರಾಸಾಯನಿಕಗಳ ಬಳಕೆ ನಿಷೇಧಿಸಿದರು. ಇದರಿಂದಾಗಿ ಒಂದೆರಡು ವರುಷ ಫಸಲು ಕಡಿಮೆಯಾದರೂ ಪ್ರಯೋಗಗಳನ್ನು ಮಾಡುತ್ತಾ ಮಣ್ಣಿನ ಚೈತನ್ಯ ಹೆಚ್ಚಿಸಲು ಗಮನ ನೀಡಿದರು. ಅನಂತರ ಅಪ್ಪಟ ಸಾವಯವ ಕೃಷಿಕರಾಗಿಯೇ ಮುಂದುವರಿದರು. ನೂರಾರು ರೈತರನ್ನು ಸಾವಯವ ಕೃಷಿಯ ಹಾದಿಗೆ ತಿರುಗಿಸಿದರು. ಎರಡು ಕೆರೆಗಳ ನೀರಿನಿಂದ ಇಡೀ ತೋಟದಲ್ಲಿ ಹಸುರು ಉಳಿಸಿಕೊಂಡವರು ವಿಠಲರಾಯರು. ೨೫ ಅಡಿಗಳ ಆಳದ ಕೆಳ ಮಟ್ಟದ ಕೆರೆಯಲ್ಲಿ ಮೇ ೧೧, ೨೦೦೫ರ ಬೇಸಗೆಯಲ್ಲಿಯೂ ಎಂಟು ಅಡಿಗಳಷ್ಟು ನೀರಿತ್ತು. ಇಡೀ ತೋಟಕ್ಕೆ ಸ್ಪ್ರಿಂಕ್ಲರ್ ಜಾಲ. ನವೆಂಬರಿನಿಂದ ಮಾರ್ಚ್ ತನಕ ಅದರಿಂದಲೇ ತೋಟಕ್ಕೆ ನೀರು. ಅವರ ತೋಟದಲ್ಲಿ ಒಂದೆಡೆ ಬರ್ಮಾ ಬಿದಿರಿನ ದಟ್ಟ ಮೆಳೆ. ೪೦ ಅಡಿ ಮೀರಿ ಬೆಳೆದ ಬಿದಿರು. ಪ್ರತಿ ವರುಷ ೧೦ – ೧೫ ಬಿದಿರಿನ ಗಳಗಳ ಮಾರಾಟ. ಷಾಮಿಯಾನಾ ಹಾಕುವವರಿಂದ ಖರೀದಿ – ಗಳಕ್ಕೆ ರೂ.೧೦೦ ದರದಲ್ಲಿ. ಇನ್ನೊಂದೆಡೆ ಲೆಂಕಿರಿ ಬಿದಿರಿನ ಮೆಳೆ. ಅದರ ಮಾರಾಟದಿಂದಲೂ ಆದಾಯ. ವಿಠಲರಾಯರ ಅಡಿಕೆ ತೋಟ ಹಾಗೂ ಭತ್ತದ ಹೊಲಗಳಿಗಿಂತ ಮಿಗಿಲಾದ ಸೊತ್ತು ಅವರ ಹಳೆಯ ಪುಸ್ತಕಗಳು ಮತ್ತು ಅವರ ಅಗಾಧ ಓದು. ಅಪರೂಪಕ್ಕೊಮ್ಮೆ ಅವರ ಓದಿನ ಜ್ನಾನ ತೀಕ್ಷ್ಣ. ಒಳನೋಟಗಳೊಂದಿಗೆ ಬರಹಕ್ಕೆ ಇಳಿಯುತ್ತದೆ. ೧೯೯೩ರಲ್ಲಿ ಕರ್ನಾಟಕದಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮತ್ತು ೨೦೦೪ರಲ್ಲಿ ಜತ್ರೋಪಾ ಬೆಳೆ ಸುದ್ದಿಯಾದಾಗ ಅವರು ಬರೆದ ಮಾಹಿತಿಪೂರ್ಣ ಲೇಖನಗಳು “ಅಡಿಕೆ ಪತ್ರಿಕೆ“ಯಲ್ಲಿ ಪ್ರಕಟವಾಗಿದ್ದವು. ಕೃಷಿಕರ ಸಂಘಟನೆಯಲ್ಲಿಯೂ ಮುಂಚೂಣಿಯಲ್ಲಿದ್ದವರು ವಿಠಲರಾಯರು. ಮಂಗಳೂರಿನ “ಕೃಷಿ ಅನುಭವ ಕೂಟ“ವನ್ನು ಅಡ್ಡೂರು ಶಿವಶಂಕರ ರಾವ್ ಹಾಗೂ ಇತರ ಕೃಷಿ ಮಿತ್ರರೊಂದಿಗೆ ಮುನ್ನಡೆಸಿದವರು. ಅನಂತರ ಕೃಷಿ ಅನುಭವ ಕೂಟದ ವಾರ್ತಾಪತ್ರ ಆರಂಭಿಸಿದಾಗ ನನಗೆ ಉಪಯುಕ್ತ ಸಲಹೆಗಳನ್ನಿತ್ತರು. ಕಳೆದ ದಶಕದಲ್ಲಿ ದಕ್ಷಿಣ ಕನ್ನಡ ಪರಿಸರಾಸಕ್ತ ಒಕ್ಕೂಟದಲ್ಲಿ ಸಕ್ರಿಯರಾಗಿದ್ದ ವಿಠಲರಾಯರು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾದಾಗೆಲ್ಲ ಧ್ವನಿಯೆತ್ತುವವರು. ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ೧೯೯೫ರಲ್ಲಿ ಪ್ರಕಟಿಸಿದ ವಿಠಲರಾಯರ ಪುಟ್ಟ ಪುಸ್ತಕ “ಹಳ್ಳಿಗಳಲ್ಲಿ ಸುಲಭವಾಗಿ ಬೆಳೆಸಬಹುದಾದ ಜನೋಪಯೋಗಿ ಸಸ್ಯ ಸಂಪತ್ತು“. ಇದು ಅವರ ಮಾಹಿತಿ ಖಜಾನೆಯ ಆಳ-ಅಗಲಗಳ ಸೂಚಿ. ಅವರು ಕೃಷಿ ಕಾಲೇಜಿನಲ್ಲಿ ಓದಿದವರಲ್ಲ. ಆದರೆ ಕೃಷಿ ಪದವೀಧರರಿಗೆ ನಿಲುಕದ ದೇಸಿ ಜ್ನಾನ ಸಂಪನ್ನರು.
 
 
ಅಂದು ಸಂಜೆ ಅಲ್ಲಿಂದ ಹೊರಡುವಾಗ ವಿಠಲರಾಯರ ಬಳಿ ನಾನು ಕೇಳಿದ ಪ್ರಶ್ನೆ: “ನಮ್ಮ ಅಡ್ಡೂರಿನ ತೋಟದಲ್ಲಿ ಜೀಗುಜ್ಜೆ ಮರಗಳಿವೆ. ಒಂದರಲ್ಲೂ ಚೆನ್ನಾಗಿ ಕಾಯಿ ಕಟ್ಟುತ್ತಿಲ್ಲ. ಇದಕ್ಕೇನು ಪರಿಹಾರ?” ತಕ್ಷಣ ಅವರ ಉತ್ತರ, “ಯಾವುದೇ ಗಿಡ ಸರಿಯಾಗಿ ಫಲ ಕೊಡದಿದ್ದರೆ ಅದರ ಮೂಲ ಸ್ಥಾನ ಪರಿಶೀಲಿಸಿ. ಜೀಗುಜ್ಜೆಯ ಮೂಲಸ್ಥಾನ ಶಾಂತಸಾಗರದ ಹಾಯಿತಿ ಮತ್ತು ತಾಯಿತಿ ದ್ವೀಪ ಸಮೂಹ. ಅಗ್ನಿಪರ್ವತಗಳಿಂದ ಹೊರ ನುಗ್ಗಿದ ಲಾವಾದಿಂದಾದ ಅಲ್ಲಿನ ಮಣ್ಣಿನಲ್ಲಿ ನೀರು ಚೆನ್ನಾಗಿ ಬಸಿದು ಹೋಗುತ್ತದೆ. ಅಂತಹ ನೀರು ಬಸಿದು ಹೋಗುವ ಮಣ್ಣು ಜೀಗುಜ್ಜೆ ಗಿಡಕ್ಕೆ ಸೂಕ್ತ.” “ಇಲ್ಲಿದೆ ನೋಡಿ, ನಮ್ಮ ಜೀಗುಜ್ಜೆ ಗಿಡ, ಅಂಗಳದ ಅಂಚಿನಲ್ಲಿ. ಅದರಾಚೆಗೆ ನಾಲ್ಕಡಿ ತಗ್ಗಿನಲ್ಲಿದೆ ನೆಲ. ಅದರ ಬುಡಕ್ಕೆ ಹೋಗುವ ಬಾತ್ರೂಮಿನ ನೀರೆಲ್ಲ ಬಸಿದು ಹೋಗುತ್ತದೆ. ಹಾಗಾಗಿ ಅದು ಚೆನ್ನಾಗಿ ಫಲ ಕೊಡ್ತಿದೆ. ನಿಮ್ಮ ತೋಟ ಸಮತಟ್ಟಾಗಿದೆ. ಮಳೆಗಾಲದಲ್ಲಿ ಅಲ್ಲಿ ನೀರಿನ ಮಟ್ಟ ಬಹಳ ಮೇಲಕ್ಕೆ ಏರುತ್ತದೆ. ಅದಕ್ಕಾಗಿ ನೀರು ಬಸಿದು ಹೋಗಲು ಜೀಗುಜ್ಜೆ ಮರದ ಸುತ್ತಲೂ, ಬುಡದಿಂದ ಐದಡಿ ಅಂತರದಲ್ಲಿ ಎರಡಡಿ ಅಗಲದ ಅಗಳು ತೋಡಿ. ಅದನ್ನು ಹಂಚಿನ ಚೂರು, ಕಲ್ಲುಗಳು ಮತ್ತು ಜಂಬಿಟ್ಟಿಗೆ ಚೂರುಗಳಿಂದ ಮುಚ್ಚಿ. ಒಂದೆರಡು ವರುಷಗಳಲ್ಲೇ ಆ ಮರ ಚೆನ್ನಾಗಿ ಕಾಯಿ ಬಿಡುತ್ತದೆ.”
 
ಗಮನಿಸಿ: ಶ್ರೀಮತಿ ತಾರಾ ಅವರು ನಿನ್ನೆ , 16 ಏಪ್ರಿಲ್ 2017 ವಿಧಿವಶರಾದರು.
22 ಆಗಸ್ಟ್ 2016 ರಂದು "ಸಂಪದದಲ್ಲಿ" ಪ್ರಕಟವಾಗಿರುವ ಈ ಲೇಖನವನ್ನು ಓದಿಕೊಳ್ಳಬಹುದು : ಬ್ಯಾಂಕನ್ನೇ ಬಡಿದೆಬ್ಬಿಸಿದ ರೈತ ಹೋರಾಟಗಾರ: ಇ. ವಿಠಲ ರಾವ್