ಅವನ ಪರೀಕ್ಷೆ ನನ್ನ ನಿರೀಕ್ಷೆ

ಅವನ ಪರೀಕ್ಷೆ ನನ್ನ ನಿರೀಕ್ಷೆ

ಕವನ

 

 

ನನ್ನ ಮಗನಿಗೆ ಪರೀಕ್ಷೆ

ನನಗೋ ಬಹಳ ನಿರೀಕ್ಷೆ

 

                  ಹೊತ್ತು ಗೊತ್ತಿಲ್ಲದೇ  ಹತ್ತು ಮಾತನು ಬೈದು ಮನೆಕೆಲಸ ಬಿಟ್ಟವನ ತಲೆ ತಿನ್ನುವೆ

                  ಮತ್ತೆ ಹೊತ್ತಗೆ ಹಿಡಿದು ನಿದ್ದೆಯೊಡಲಲಿ ಜಾರೆ ಪುಸ್ತಕವಹಿಡಿದೆಸೆದು ಪೆಟ್ಟ ಕೊದುವೆ

 

   ಅವನಿಗೋ ಹತ್ತರ ಪರೀಕ್ಷೆ

  ನನಗೋ ಸಾವಿರಾರು ನಿರೀಕ್ಷೆ

 

               ಎಂದಿಲ್ಲದಾಲಸ  ಇಂದೇಕೆ ನಿನಗೆನ್ನ  ಕಂದ ಓದೆನ್ನುತ್ತ ಮುದ್ದುಗರೆವೆ

               ಮುಂದೆ  ಹೋಗುವರೆಲ್ಲ ನಿನ್ನ ಸಹಪಾಠಿಗಳು  ಹಿಂದುಳಿವೆ ಮಗನೆ ಕಷ್ಟಪಡು ಎನ್ನುವೆ

 

ಅವನಿಗೋ ಬೇಡವಾದ ಪರೀಕ್ಷೆ

ನನಗವನ ಭವಿಷ್ಯದ ನಿರೀಕ್ಷೆ

 

                  ರಾತ್ರಿ ನಿದ್ದೆಯು ಇಲ್ಲ ಬೆಳಗಿನಲು ಮಲಗಿಲ್ಲ ಮಧ್ಯೆ ಹಿರಿಯರೆಲ್ಲರ ಕಿರಿಕಿರಿಯ ಉಪದೇಶ

                  ಖಾತ್ರಿ ಯಾಗಿಯು ಪ್ರಥಮ ಸ್ಥಾನವನು ಪಡೆವೆ ನೀನೆಂದು ಹುರಿದುಂಬಿಸಲವಗದಮ್ಯೌತ್ಸಾಹ

 

ಅವನಿಗೂ ಇಷ್ಟ ಪರೀಕ್ಷೆ    ಆದರೆ

ಮಾಡಬಾರದು ನಾನು ಬಹಳ ನಿರೀಕ್ಷೆ

 

                   ನಾಳೆಮುಗಿವುದು ಚಿನ್ನ ನಿನ್ನ ಪರೀಕ್ಷೆಯದು ಮುಕ್ತ ನೀನೀಗ ಕೆಲಕಾಲ ಬಂಧನದಿಂದ

                   ಹಕ್ಕಿಯೊಲು ಹಾರಾಡು ಸಂತಸದಿ ಓಲಾಡು ಕುಣಿದು ಕುಪ್ಪಳಿಸೀಗ ಸಮಯವಿದೆಯಲ್ಲ

 

ಮುಗಿವುದವನಿಗೆ ನಾಳೆ ಪರೀಕ್ಷೆ

ಅವನಿಗೋ ಕಾತರದ ನಿರೀಕ್ಷೆ

ತದನಂತರ ಅಧ್ಯಾಪಕರ ಸಮೀಕ್ಷೆ

ನನಗೋ ಫಲಿತಾಂಶದ ಪ್ರತೀಕ್ಷೆ

 

ಮುಗಿದರೂ ಅವನ ಪರೀಕ್ಷೆ

ಮುಗಿಯದು ನನ್ನ ನಿರೀಕ್ಷೆ

 

 

 

 

 

 

 

Comments