ಈಗಿನಂತೆ 2 ಸದಸ್ಯರು ಮತ್ತು 90 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

"ಗಣ"ಪ್ಪನ "ಗಳಾ"ಟೆ.
savithru's picture
ಸವಿತೃ
11
Sep
2011
ಬ್ಲಾಗ್ ಬರಹ

ಹಿನ್ನಲೆ:

  ಕೆಲ ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದೆ. "ಗಣೇಶ" ಅನ್ನುವಲ್ಲಿ "ಗಣ" ಅನ್ನೋ ಪದವು ಕನ್ನಡದ ಬಹುವಚನ ಪ್ರತ್ಯಯವಾದ "ಗಳು" / "ಗಳ"...

ಪ್ರತಿಕ್ರಿಯೆಗಳು: 12
ಹಿಟ್ಸ್ : 402
ಪಶ್ಚಾತ್ತಾಪ
tvsrinivas41's picture
02
Aug
2005
ಪುಟ

ತುಂಡ ಅಂತ ರವಿಯ ಮನೆಯಲ್ಲಿ ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅದಕ್ಕೊಂದು ಹಿನ್ನೆಲೆ ಇದೆ. ಅವನು ಯಾವಾಗಲೂ ಬೌಲಿಂಗ್ ಮಾಡ್ತಾ ಇರ್ತಿದ್ದ. ಅಂಗಡಿಗೆ ಹೋಗಿ ಏನಾದರೂ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,412
೧. ಬಂದಿಳಿದೆ!
benaka's picture
ಬೆನಕ
25
Apr
2006
ಬ್ಲಾಗ್ ಬರಹ

ನನ್ನ ಜಪಾನ್ ಪ್ರವಾಸ : ೧. ಬಂದಿಳಿದೆ!

------------------------------

...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,827
ಬರವಣಿಗೆಯೆಂಬ ಯಾಂತ್ರಿಕ ಕ್ರಿಯೆ
uniquesupri's picture
ಸುಪ್ರೀತ್.ಕೆ.ಎಸ್
29
Dec
2010
ಬ್ಲಾಗ್ ಬರಹ

ನಾನು ಹೈಸ್ಕೂಲಿನಲ್ಲಿದ್ದಾಗ ಪ್ರತಿಭಾ ಕಾರಂಜಿ ಎಂದೋ ಅಥವಾ ಇನ್ಯಾವುದೋ ಹೆಸರಿನ ಜಿಲ್ಲಾ ಮಟ್ಟದ ಸ್ಪರ್ಧೆಯೊಂದು ನಡೆದಿತ್ತು. ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಕವಿತೆ- ಕತೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 705
ಅಮ್ಮಮ್ಮನ ಕಾಫಿಪ್ರೇಮ (ಒಂದು ಪ್ರಬಂಧ)
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
08
Jul
2011
ಬ್ಲಾಗ್ ಬರಹ

 

 

 

...
ಪ್ರತಿಕ್ರಿಯೆಗಳು: 8
ಹಿಟ್ಸ್ : 633
ಡಿಯೇಗೋ ಮೆರಡೋನ
hpn's picture
ಹರಿ ಪ್ರಸಾದ್ ನಾಡಿಗ್
11
Jun
2006
ಬ್ಲಾಗ್ ಬರಹ
ಚಿಕ್ಕವನಿದ್ದಾಗ ಬಬ್ಬಲ್ ಗಮ್ ಜೊತೆ ಸಿಗುತ್ತಿದ್ದ ಕಾರ್ಡುಗಳನ್ನು ಜೋಡಿಸುವುದು ಸಹವಾಸದ ಫಲವಾಗಿ ರೂಢಿಯಾಗಿದ್ದ ಹವ್ಯಾಸ. ಸ್ನೇಹಿತರಿಗಿಂತ ಹೆಚ್ಚು ಕಾರ್ಡುಗಳು ನನ್ನ ಬಳಿ ಇರಬೇಕು....
ಪ್ರತಿಕ್ರಿಯೆಗಳು: 0
ಹಿಟ್ಸ್ : 2,066
ಬೆತ್ತಲೆ ಲೋಕದಲ್ಲಿ ....
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
10
Oct
2011
ಬ್ಲಾಗ್ ಬರಹ

ಮೊನ್ನೆಯ ದಿನ ಕಚೇರಿಯಲ್ಲಿ  ನಾಲ್ಕೈದು ಘಟನೆಗಳು ಸಾಲಾಗಿ ನಡೆದವು.

ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 445
ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯
anilkumar's picture
ಎಚ್.ಎ. ಅನಿಲ್ ಕುಮಾರ್
17
Apr
2011
ಬ್ಲಾಗ್ ಬರಹ

 (೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ....

ಪ್ರತಿಕ್ರಿಯೆಗಳು: 1
ಹಿಟ್ಸ್ : 485
ಶ್ರಾವಣ ಮಾಸ ಬಂದಾಗ....
ramvani's picture
ವಾಣಿ
02
Aug
2011
ಲೇಖನ

ಶ್ರಾವಣ ಮಾಸ ಬಂದಾಗ....

ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 615
ಕನ್ನಡ ಪತ್ರದಲ್ಲಿ ಕನ್ನಡ ಬರೆಯಬೇಕು...ಮರಾಠಿಯಲ್ಲಿ ಸಹಿ ಮಾಡುವದು ಅವಶ್ಯವಿಲ್ಲ ( ಉ.ಕ.ಕ-೧೧)
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
16
Aug
2006
ಬ್ಲಾಗ್ ಬರಹ
ಡೆಪ್ಯುಟಿ ಚನ್ನಬಸಪ್ಪನವರ ಸೂಕ್ಷ್ಮ ದೃಷ್ಟಿಯಿಂದ ಯಾವ ಸಣ್ಣ ವಿಷಯವೂ ಮರೆಯಾಗಲಿಲ್ಲ . ಶಾಲಾ ಮಾಸ್ತರರು ಸಹಿ ಮಾಡುವದು , ಪತ್ರ ಬರೆಯುವದು - ಮೊದಲಾದ ಎಲ್ಲ ಅಂಶಗಳನ್ನು ಗಮನಿಸಿ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,447

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಆಚರಣೆಗಳ ನೋಟ : ಬುದ್ಧಿಜೀವಿಗಳ ಹೊಯ್ದಾಟ

ಆಚರಣೆಗಳ ನೋಟ : ಬುದ್ಧಿಜೀವಿಗಳ ಹೊಯ್ದಾಟ

ಸಂತೋಷ್ ಕುಮಾರ್ ಪಿ.ಕೆ, ಮತ್ತು ಪ್ರವೀಣ್ ಟಿ.ಎಲ್.

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, 

 

ಕುಕ್ಕೆ ಸುಬ್ರಮಣ್ಯದ ಎಂಜಲೆಲೆಯ ಆಚರಣೆ ಹಾಗೂ ಐ.ಪಿಎಲ್ ನಲ್ಲಿ ಕ್ರಿಕೆಟ್ ಆಟಗಾರರ ಹರಾಜು ಇವೆರೆಡನ್ನೂ ಅವಲೋಕಿಸಿ ಕೆ.ವಿ.ಅಕ್ಷರರವರು ಉತ್ತಮವಾದ ಲೇಖನವನ್ನು ಪ್ರಜಾವಾಣಿಯಲ್ಲಿ ಪ್ರಕಟಿಸಿದ್ದರು. ಪ್ರಗತಿಪರರಂತೆ ಅಕ್ಷರರವರು ಆಚರಣೆಯನ್ನು ಬೇಕಾಬಿಟ್ಟಿ ಟೀಕಿಸದೆ ಅದನ್ನು ಅರ್ಥಮಾಡಿಕೊಳ್ಳಲು ಇರಬಹುದಾದದ ಬೇರೆ ಬೇರೆ ಅಧ್ಯಯನದ ಮಾರ್ಗಗಳನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಾಧ್ಯಮಗಳಲ್ಲಿ ಆಚರಣೆಯನ್ನು ಕೇವಲ ಬಿತ್ತರಿಸುತ್ತಿರುವುದು ಮಾತ್ರವಲ್ಲದೆ ಜನರ ಮೌಢ್ಯತೆ ಎಂಬಂತೆಯೂ ಹಾಗೂ ಯಾವುದೋ ಜಾತಿಯ ಕುತಂತ್ರ ಎಂಬಂತೆಯೂ ತೋರಿಸಲಾಗುತ್ತಿದೆ. ಆದರೆ ಅದಕ್ಕೆ ವಿರುದ್ಧವಾಗಿ ಆಚರಣೆಯಲ್ಲಿ ಶೋಷಣೆ ಯಾರಿಗೆ ಆಗುತ್ತಿದೆ? ಆ ಆಚರಣೆಯನ್ನು ಶೋಷಣೆ ಎಂದು ಗ್ರಹಿಸುವುದರಲ್ಲೆ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವ ಸ್ವಾತಂತ್ರ ಅಕ್ಷರರವರ ಲೇಖನವನ್ನು ಓದಿದವರಿಗೆ ದೊರಕುತ್ತದೆ. ಇದರ ಜೊತೆಗೆ ಅಕ್ಷರರವರಿಗೆ ಪ್ರತಿಕ್ರಿಯಿಸಿದ ವೈದೇಹಿ ಹಾಗೂ ರಘುನಂದನ ಅವರ ಲೇಖನಗಳನ್ನು ನೋಡಿದರೆ ಅವರೆಡೂ ಒಂದಕ್ಕೊಂದು ವಿರೋಧವಾದಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಗೋಚರವಾಗುತ್ತದೆ. ವೈದೇಹಿಯವರು ಆ ಆಚರಣೆಯನ್ನು ಸಮರ್ಥನೆ ಮಾಡದೆ ತಮ್ಮ ಅನುಭವದ ಮೂಲಕ ಅದನ್ನು ವಿವರಿಸುವ ಪ್ರಯತ್ನವನ್ನು ಮಾತ್ರ ಮಾಡಿರುವುದರಿಂದ ಅದರ ಕುರಿತು ಆಕ್ರೋಶವಿಲ್ಲದೆ ಕೇವಲ ವಿವರಿಸುವ ಪ್ರಯತ್ನ ಮಾತ್ರ ಕಾಣುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ಆ ಆಚರಣೆಯ ಅನುಭವವಿಲ್ಲದೆ ರಘುನಂದನರವರು ಪ್ರಗತಿಪರರ ವಿಚಾರಗಳನ್ನೆ ಪುಸರುತ್ಪಾದಿಸುವ ಕೆಲಸವನ್ನು ಮಾಡಿದ್ದಾರೆ. ಈ ಬರವಣಿಗೆಯಲ್ಲಿ ಅಕ್ಷರ ಹಾಗೂ ವೈದೇಹಿ ಗುರುತಿಸಿರುವ ಅನುಭವವನ್ನು ಮತ್ತೂ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲಾಗುವುದು. ಹೀಗೆ ಮಾಡುವುದರ ಅಗತ್ಯವೇಕಿದೆ ಎಂದರೆ ಭಾರತದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಇದುವರೆಗೂ ಹಲವಾರು ಸಮಾಜ ಸುಧಾರಣಾ ಚಳುವಳಿಗಳು ಕಾರ್ಯನಿರ್ವಹಿಸುತ್ತಾ ಬಂದಿವೆ. ಅವುಗಳ ಪ್ರಯತ್ನ ಎಷ್ಟೇ ಪ್ರಬಲವಾಗಿದ್ದರೂ ಇನ್ನೂ ಹಲವಾರು ಸಮಸ್ಯೆಗಳು ಹಾಗೆಯೇ ನಮ್ಮ ಸಮಾಜದಲ್ಲಿ ಉಳಿದುಕೊಂಡಿವೆ. ಇದುವರೆಗೂ ನಡೆದ ಚಳುವಳಿಗಳು ಸಮಾಜವನ್ನು ತಿದ್ದುವ, ಬದಲಾಯಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿವೆ. ಸಮಾಜವನ್ನು ಬದಲಾಯಿಸಿದರೂ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ ಎಂದರೆ ನಾವು ಅನ್ಯ ಮಾರ್ಗವನ್ನು ಹುಡುಕಬೇಕಾಗುತ್ತದೆ. ಅಂದರೆ ಸಮಾಜವನ್ನು ಬದಲಾಯಿಸುವ ಮುನ್ನ ನಮ್ಮ ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಹಾಗೆ ಅರ್ಥಮಾಡಿಕೊಳ್ಳುವ ಮೂಲಕ ಅವುಗಳಲ್ಲಿರುವ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಲು ಹಾಗೂ ಬಗೆಹರಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಿನಿಕತನದಿಂದ ಎಲ್ಲವನ್ನೂ ದೂಷಿಸುತ್ತಾ ಓಡಾಡಿಕೊಂಡಿರಬೇಕಾಗುತ್ತದೆ.

ಕುಕ್ಕೆಸುಬ್ರಮಣ್ಯದಲ್ಲಿ ನಡೆದ ಆಚರಣೆಯನ್ನು ಬ್ರಾಹ್ಮಣರ ಕುತಂತ್ರವೆಂದು ಕರೆಯಲಾಗಿದೆ ಏಕೆಂದರೆ ಬ್ರಾಹ್ಮಣರ ಎಂಜಲೆಲೆಯ ಮೇಲೆ ಬೇರೆ ಸಮುದಾಯಗಳ ಭಕ್ತರು ಹೊರಳಾಡುತ್ತಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕರಾವಳಿಯ ಕೆಲವಾರು ಪ್ರದೇಶಗಳಲ್ಲಿ ಸ್ವತಃ ಬ್ರಾಹ್ಮಣರೇ ಎಂಜಲು ಎಲೆಗಳ ಮೇಲೆ ಹೊರಳಾಡುತ್ತಿರುವುದರ ಕುರಿತೂ ಮಾದ್ಯಮವು ಸ್ಪಷ್ಟ ಪಡಿಸಿದೆ. ಒಟ್ಟಿನಲ್ಲಿ ಈ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರು ಎಲ್ಲರೂ ಪಾಲ್ಗೊಳ್ಳುತ್ತಿರುವುದಂತೂ ಸ್ಪಷ್ಟ. ಅಂದರೆ ಇದು ಜನರು ತಾವೇ ತಮ್ಮ ಇಚ್ಚೆಯಿಂದ ಮಾಡುತ್ತಿರುವ ಕ್ರಿಯಾವಿಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳದೆ ಬೇಕಾಬಿಟ್ಟಿಯಾಗಿ ಯಾವುದೋ ಒಂದು ಸಮುದಾಯದ ಕುತಂತ್ರ ಎಂದು ಮಾತನಾಡಿದರೆ ಸಮಾಜದ ಸ್ವಾಸ್ಥ್ಯವನ್ನು ನಾವೇ ಹಾಳುಮಾಡಿದಂತೆ ಆಗುತ್ತದೆ. ಒಂದು ಸಮುದಾಯವನ್ನು ವಿನಾಕಾರಣ ದೂಷಣೆಗೆ ಒಳಗಾಗಿಸಿ ಅವರ ವಿರುದ್ಧ ಕೆಟ್ಟ ಭಾವನೆ ಬೆಳೆಯಲು ಪ್ರಚೋದನೆ ನೀಡಿದಂತಾಗುತ್ತದೆ. ಅದನ್ನು ವಿರೋಧಿಸುವವರಿಗೆ ಬ್ರಾಹ್ಮಣರ ಕುರಿತು ವಿರೋಧವೋ ಅಥವಾ ಕೇವಲ ಆಚರಣೆಯ ಕುರಿತು ವಿರೋಧವೋ ಎಂಬುದು ಸ್ಪಷ್ಟವಾಗಬೇಕು. ಏಕೆಂದರೆ ಬ್ರಾಹ್ಮಣರ ಕುರಿತು ವಿರೋಧವಾದರೆ ನಮ್ಮ ಸಮಾಜದಲ್ಲಿ ಬ್ರಾಹ್ಮಣರನ್ನು ಜನರು ಅರ್ಥಮಾಡಿಕೊಂಡಿರುವುದಕ್ಕೂ ವಿದ್ವಾಂಸರು ಅರ್ಥಮಾಡಿಕೊಂಡಿರುವುದಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕಾಗುತ್ತದೆ. ನಿಜವಾಗಿಯೂ ಇವರಿಬ್ಬರಲ್ಲಿ ವ್ಯತ್ಯಾಸವಿದೆ. ಆದರೆ ಆ ಚರ್ಚೆಗೆ ಹೋಗುವುದು ನಮ್ಮ ಉದ್ದೇಶವಲ್ಲ, ಬದಲಿಗೆ ಇವೆರಲ್ಲರ ವಿರೋಧ ಆಚರಣೆಯ ಕುರಿತಾಗಿ ಮಾತ್ರ ಎಂಬುದಾಗಿ ಗ್ರಹಿಸಿ ಇಲ್ಲಿ ನಮ್ಮ ಅಭಿಪ್ರಾಯವನ್ನು ಮಂಡಿಸಲು ಇಚ್ಚಿಸುತ್ತೇವೆ. ಏಕೆಂದರೆ ಆಚರಣೆಗಳ ದಾರಿಯಲ್ಲಿ ಹೋದರೆ ನಮ್ಮ ವಾದವು ಆಚರಣೆಗೆ ಮಾತ್ರ ಸೀಮಿತವಾಗಿ ಯಾವುದೋ ಒಂದು ಸಮುದಾಯವನ್ನು ಸಮರ್ಥಿಸುವುದಾಗಲಿ, ಅಥವಾ ತೆಗಳುವ ಕಾರ್ಯದಿಂದ ಹೊರಗೆ ಉಳಿಯಬಹುದು. ಆಗ ಮಾತ್ರ ಆಚರಣೆಯ ಕುರಿತು ವಿಸ್ತೃತವಾಗಿ ಚರ್ಚಿಸಬಹುದು.

ಎಂಜಲೆಲೆಯ ಮೇಲೆ ಹೊರಳಾಡುವಂತಹ ಆಚರಣೆಯನ್ನು ಮೌಢ್ಯ ಹಾಗೂ ಪ್ರಜ್ಞಾವಂತರು ಮಾಡತಕ್ಕವಲ್ಲ ಹಾಗಾಗಿ ಈ ಆಚರಣೆಗಳನ್ನು ಬಲಾತ್ಕಾರವಾಗಿಯಾದರು ನಿಲ್ಲಿಸಬೇಕೆಂದು ಆಗ್ರಹಿಸುವವರು ಒಂದು ಕಡೆ ಇದ್ದಾರೆ. ಆದರೆ ಅದೇ ವೇಳೆಗೆ ನಾವು ನಮ್ಮ ಮನಸ್ಸಿನ ಶಾಂತಿಗಾಗಿ ಇದನ್ನು ಮಾಡಿಯೇ ತೀರುತ್ತೇವೆ, ನಮ್ಮ ಮೇಲೆ ಯಾರದೇ ಬಲಾತ್ಕಾರವೂ ಇಲ್ಲ ಎಂದು ಆಚರಣೆ ಮಾಡಲು ಪಟ್ಟು ಹಿಡಿದವರು ಮತ್ತೊಂದು ಕಡೆ. ಅವರಲ್ಲೂ ಬರೀ ಅನಕ್ಷರಸ್ಥ ಬಡ ಜನರು ಮಾತ್ರವೇ ಇಲ್ಲ, ಅವರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ವಿದ್ಯಾವಂತರೂ, ಶ್ರೀಮಂತರೂ ಇದ್ದಾರೆ.  ಡಾಕ್ಟರುಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಶಿಕ್ಷಕರು, ಈ ರೀತಿಯಲ್ಲಿ ಪ್ರಜ್ಞಾವಂತ ಸಮಾಜದ ಎಲ್ಲಾ ರೀತಿಯ ಪ್ರಜೆಗಳೂ ಇದ್ದಾರೆ. ಇದನ್ನು ಆಚರಿಸುವ ಬಹುಸಂಖ್ಯಾತ ಪ್ರಜ್ಞಾವಂತರಿಗೆ ತಮ್ಮನ್ನೆಲ್ಲ  ಪ್ರಜ್ಞಾವಂತರಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಿ ಟೀಕಿಸುವವರೇ  ಉದ್ಧಟರಂತೆ ತೋರಿದರೆ ಆಶ್ಚರ್ಯವಿಲ್ಲ. ಆದರೆ ಏಕೆ ಮಾಧ್ಯಮಗಳಲ್ಲಿನ ವಿದ್ಯಾವಂತ ಸಮಾಜವು ಈ ಬಹುಸಂಖ್ಯಾತರೇ ಮೂಢರೆಂಬುದಾಗಿ ತೀರ್ಮಾನಕ್ಕೆ ಬಂದಿದೆ? ಅವರನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಹಾದಿಗಳೇ ಇಲ್ಲವೆ? ಇವರೆಲ್ಲರ ಅನುಭವ ಪ್ರಪಂಚವನ್ನು ಅರ್ಥಹೀನವೆಂದು ಸಾರಾಸಗಟಾಗಿ ತಳ್ಳಿಹಾಕಿದಲ್ಲಿ ಸಮಸ್ಯೆ ಬಗೆಹರಿಯುತ್ತದೆಯೆ? ಏಕೆ ಕಳೆದ ನೂರಾರು ವರ್ಷಗಳಿಂದ ಇಂಥ ಆಚರಣೆಗಳನ್ನು ತೊಡೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ? ಇಲ್ಲಿ ತುಂಬಾ ಗಂಭೀರವಾಗಿ ಯೋಚಿಸಬೇಕಾದ ವಿಷಯವಿದೆ ಎಂಬುದು ನಮ್ಮ ಅಭಿಪ್ರಾಯ.  ಇಂಥ ಪ್ರಶ್ನೆಗಳನ್ನು ಎತ್ತುತ್ತಿರುವಾಗ ಒಂದು ಅಪಾರ್ಥ ಹೊರಡುವ ಸಂಭವವಿದೆ. ಅದೆಂದರೆ ಇಂತಹ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಕಾರ್ಯವು ನಡೆಯುತ್ತಿದೆಯೆ ಎಂದು. ಆದರೆ ಇಲ್ಲಿ ನಮ್ಮ ಉದ್ದೇಶ ಎಂಜಲೆಲೆಯ ಆಚರಣೆಯು ಅತ್ಯದ್ಭುತವಾದುದು ಹಾಗೂ ಅದನ್ನು ಮಾಡಲೇಬೇಕೆಂಬುದು ಅಲ್ಲ ಎಂಬುದನ್ನು ಒತ್ತಿಹೇಳುತ್ತೇವೆ.  ಜೊತೆಗೆ ಈ ಆಚರಣೆಯನ್ನು ಸಮರ್ಥಿಸುವ ಕಾರ್ಯವನ್ನು ಮಾಡುವುದಿಲ್ಲ. 

ಈ ಆಚರಣೆಯ ಕುರಿತು ಮಾದ್ಯಮಗಳಲ್ಲಿ ಅಷ್ಟು (ಅಪ)ಪ್ರಚಾರವಾಗುತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳುವ ವಿದ್ಯಾವಂತ ಜನರೇಕೆ ಅದನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯಿಸುತ್ತಿಲ್ಲ ಎಂಬುದೂ ಒಂದು ವಿಚಿತ್ರವೇ ಆಗಿದೆ.   ಅವರನ್ನು ಸಂದರ್ಶಿಸಿದವರಿಗೂ ಅವರು ತಿಳಿಸಿದ ಪ್ರಕಾರ ಈ ಆಚರಣೆಗಳು ಹಿಂದಿನಿಂದ ನಡೆದುಕೊಂಡು ಬಂದಿವೆ, ಅವನ್ನು ಮಾಡಿದರೆ ಶಾಂತಿ ಸಿಗುತ್ತದೆ, ಚರ್ಮರೋಗವು ವಾಸಿಯಾಗುತ್ತದೆ, ಇತ್ಯಾದಿ ಉತ್ತರಗಳು ಬಂದವು. ಈ ಉತ್ತರಗಳೂ ಕೂಡ ಈ ಆಚರಣೆಗಳ ಕುರಿತು ಏನನ್ನೂ ಹೇಳುವುದಿಲ್ಲ. ಅವನ್ನು ಮಾಡಲಿಕ್ಕೆ ಜನರು ಈ ಕ್ಷೇತ್ರಗಳಿಗೆ ಬಂದಿದ್ದಾರೆಯೇ ಹೊರತೂ ಆ ಆಚರಣೆಗಳ ಕುರಿತು ಅವರಿಗೆ ಹೇಳಲಿಕ್ಕೆ ಏನೂ ಇಲ್ಲ. ಸಮರ್ಥಿಸಲಿಕ್ಕೂ ಏನೂ ವಿವರಣೆಗಳಿಲ್ಲ, ಬಿಡಲಿಕ್ಕೂ ಏನೂ ಕಾರಣಗಳಿಲ್ಲ. ಹಾಗೂ ಅವರು ಆಚರಣೆಗಳನ್ನು ಮಾಡಲಿಕ್ಕೆ ಈ ಮೇಲಿನವು ಕಾರಣಗಳೇ ಅಲ್ಲದಿರುವ ಸಾಧ್ಯತೆಯೇ ಹೆಚ್ಚು. ಈ ಆಚರಣೆಯ ಕುರಿತು ಅನಿವಾರ್ಯವಾಗಿ ಎದುರಾದ ಪ್ರಶ್ನೆಗಳಿಗೆ ಅವರು ನೀಡಿದ ತಾತ್ಕಾಲಿಕ ಉತ್ತರವಾಗಿವೆಯಷ್ಟೆ ಎನಿಸುತ್ತದೆ. 

ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ. ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ. ಒಂದೊಮ್ಮೆ ಜನರು ಈ ಆಚರಣೆಗಳ ಮೂಲಕವೇ ತಮ್ಮ ಚರ್ಮದ ಖಾಯಿಲೆಗಳು ವಾಸಿಯಾಗುತ್ತವೆ ಎಂದು ನಿಜವಾಗಿಯೂ ನಂಬಿದ್ದರೆ ಅವರು ಆಸ್ಪತ್ರೆಗಳಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ಜನರು ಆಸ್ಪತ್ರೆಗಳಿಗೂ ತೆರಳುತ್ತಾರೆ ಅಂತೆಯೇ ದೇವಾಲಯಗಳಿಗೂ ಹೋಗುತ್ತಾರೆ. ಅವರಿಗೆ ಆಸ್ಪತ್ರೆಗಳಿಗೆ ಯಾವಾಗ ಹೋಗಬೇಕೆಂಬುದು ಚೆನ್ನಾಗಿಯೇ ತಿಳಿದಿದೆ ಹಾಗೂ ಅವರಲ್ಲಿ ಸ್ವತಃ ಡಾಕ್ಟರುಗಳೇ ದೇವಾಲಯಕ್ಕೆ ಬಂದು ಆಚರಣೆಯನ್ನು ಮಾಡುತ್ತಾರೆ, ಆಸ್ಪತ್ರೆಗೆ ಹೋಗಿ ವೈದ್ಯಕೀಯ ವೃತ್ತಿಯನ್ನೂ ಮಾಡುತ್ತಾರೆ.  ಇದರ ಸ್ಪಷ್ಟ ಸೂಚನೆಯೆಂದರೆ  ಈ ಆಚರಣೆಗಳಿಗೂ ವಿಚಾರವಂತಿಕೆಗೂ ಇವರು ಸಂಬಂಧ ಕಲ್ಪಿಸುತ್ತಿಲ್ಲ ಅಷ್ಟೆ. ಹಾಗಾಗಿ ಅವರನ್ನು ಮೂಢರೆಂದು ಕರೆಯುವುದು ಯತಾರ್ಥವಾಗಲಾರದು. ಈ ಆಚರಣೆಯ ಕುರಿತು ಏನೇ ಟೀಕೆಯನ್ನು ಮಾಡಿದರೂ, ಅವರನ್ನು ಮೂಢರೆಂದು ಪರಿಗಣಿಸುವುದು  ಅತಾರ್ಕಿಕವಾಗುತ್ತದೆ ಹಾಗೂ ಆ ಕಾರಣಕ್ಕಾಗಿ ಅಮಾನವೀಯವೂ ಆಗುತ್ತದೆ.  ಈ ಅವರ ವಿಚಾರವಂತಿಕೆಯ ಕುರಿತು ಗೌರವವನ್ನಿಟ್ಟುಕೊಂಡೇ ತಮ್ಮ ವಿಚಾರಗಳನ್ನು ಇಡಬೇಕಾಗುತ್ತದೆ. 

ನಾವು ಈ ಆಚರಣೆಗಷ್ಟೆ ನಮ್ಮ ವಾದವನ್ನು ಸೀಮಿತಗೊಳಿಸದೆ ಅದನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತೇವೆ. ಇಸ್ರೋ ದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳೂ ಸಹ ದೇವರಿಗೆ ಪೂಜೆ ಮಾಡಿಸಿ, ರಾಹುಕಾಲ ಗಳನ್ನೆಲ್ಲಾ ಲೆಕ್ಕಹಾಕಿ ತಮ್ಮ ಕೆಲಸದಲ್ಲಿ ತೊಡಗುತ್ತಾರೆ ಎಂಬುದು ಈ ಮೇಲಿನ ವಿಚಾರವಂತರ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿರುವ ವಿಷಯವಾಗಿದೆ.  ಆದರೆ ಈ ವಿಜ್ಞಾನಿಗಳಿಗೆ ಏನೂ ತಿಳಿದೇ ಇಲ್ಲವೆ? ಅವರು ಅಂತಹ ಆಚರಣೆಗಳಲ್ಲಿ ತೊಡಗದಿದ್ದರೂ ಅವರ ವಿಜ್ಞಾನ-ತಂತ್ರಜ್ಞಾನಗಳ ಸಂದರ್ಭದಲ್ಲಿ ಅವರು ವಿಚಾರವಂತರಾಗೇ ಕೆಲಸಮಾಡುತ್ತಾರೆ. ಅವರು ಈ ಮೌಢ್ಯಗಳನ್ನು ಆಚರಿಸದವನಿಗಿಂತ ದಡ್ಡರು ಎನ್ನಬಹುದೆ? ಅವರು ಬಿಡುವ ಉಪಗ್ರಹಗಳು ಅವರು ಪೂಜೆ ಮಾಡಿದ್ದರಿಂದ ಕೆಲಸಮಾಡುತ್ತವೆ ಎಂಬುದಾಗಿ ಅವರು ನಂಬಿದ್ದರೆ ಉಪಗ್ರಹ ತಂತ್ರಜ್ಞಾನವನ್ನು ಅವರೇಕೆ ತರಗತಿಗಳಲ್ಲಿ ಬೋಧಿಸುತ್ತಾರೆ? ಕೇವಲ ಪೂಜಾರಿಗಳೆ ಉಪಗ್ರಹವನ್ನು ಉಡಾವಣೆ ಮಾಡಬಹುದಿತ್ತಲ್ಲವೇ?  ಅಂತೆಯೇ ಆಸ್ಪತ್ರೆಗಳಲ್ಲಿ ಹಲವು ಬಾರಿ ವೈದ್ಯರುಗಳೇ ಇಂತಹ ಆಚರಣೆಗಳಿಗೆ ಮೊರೆಹೋಗುವುದನ್ನ ನೋಡಬಹುದು. ಅಷ್ಟು ದೊಡ್ಡ ವಿಜ್ಞಾನಿಗಳಾಗಿದ್ದರೂ, ವೈದ್ಯರಾಗಿದ್ದರೂ ಜೊತೆಗೆ ಅವರಿಗೆ ಅಷ್ಟು ಜ್ಞಾನವಿದ್ದರೂ ಅವರೇಕೆ ಇಂತಹ ಕ್ರಿಯೆಗಳನ್ನು ಮಾಡುತ್ತಾರೆ? ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಅಪಪ್ರಚಾರಕ್ಕೆ ಏಕೆ ಉತ್ತರಿಸುವುದಿಲ್ಲ? ಈ ಎರಡೂ ಪ್ರಶ್ನೆಗಳಿಗೂ ಒಂದೇ ತೆರನಾದ ಉತ್ತರವಿದೆ ಎಂಬುದು ನಮ್ಮ  ಅಭಿಪ್ರಾಯ. ಆಚರಣೆಗಳನ್ನು ವಿವರಿಸುವ ಕಾರ್ಯ ಅದರಲ್ಲಿ ಪಾಲ್ಗೊಳ್ಳುವ ಜನರಿಗೆ ಅಗತ್ಯವಿರುವುದಿಲ್ಲ. ಅವರು ಸುಮ್ಮನೆ ಮಾಡಬೇಕು ಮಾಡುತ್ತಾರಷ್ಟೆ. ಆ ಕಾರಣದಿಂದ ಅವರನ್ನು ಮೂಢರು ಎನ್ನುವುದು ಅವಸರದ ಹೇಳಿಕೆಯಾಗುತ್ತದೆ. ಅಂದರೆ ಈ ಆಚರಣೆಗಳು ವಿವರಣೆಗಳನ್ನು ಬಯಸುವುದಿಲ್ಲ, ಅವು ಕೇವಲ ಕ್ರಿಯೆಗಳನ್ನು ಮಾತ್ರ ಬಯಸುತ್ತವೆ. ಅವು ವಿಚಾರವಂತಿಕೆಗೆ ಸಂಬಂಧಪಟ್ಟವುಗಳಲ್ಲ. ಆದ್ದರಿಂದಲೇ ಅನೇಕ  ಬೌದ್ಧಿಕ ವೃತ್ತಿಯಲ್ಲ್ಲಿರುವ ಜನರೂ ಸಹ ಅವರ ಆಚರಣೆಗಳ ಕುರಿತು ಏನೇ ಪ್ರಚಾರವಾದರೂ ಅದಕ್ಕೆ ಕಿವಿಗೊಡದೆ ಅದನ್ನು ಮಾಡುವ ಸಂದರ್ಭದಲ್ಲಿ ಮಾಡುತ್ತಾರಷ್ಟೆ.  

ಇಂದು ನಮ್ಮ ಮುಂದಿರುವ ಜಿಜ್ಞಾಸೆ ಕೇವಲ ಆಚರಣೆಗಳನ್ನು ತೊಡೆದು ಹಾಕುವ ಕುರಿತಾಗಿ ಇವೆ. ಆಚರಣೆಗಳನ್ನು ಏಕೆ ತೊಡೆಯಬೇಕು? ಏಕೆಂದರೆ ಅದರಿಂದ ತೊಂದರೆಯಾಗುತ್ತಿದೆ ಎನ್ನುವುದು ಕಾರಣವಾಗಬಹುದು. ಆದರೆ ಇಲ್ಲಿ ಆಚರಣೆ ಮಾಡುವವರು ತಮಗೆ ಶಾಂತಿ ಸಿಗುತ್ತದೆ ಎನ್ನುತ್ತಿದ್ದಾರೆ. ಅಂದರೆ ತೊಂದರೆ ಆಗುತ್ತಿದೆ ಎಂಬುದನ್ನು ನಿರ್ಧರಿಸುತ್ತಿರುವವರು ಯಾರು? ನೋಡುವವರೂ ಅಲ್ಲ, ಅದರ ವರದಿಯನ್ನು ಓದಿ ಜಿಜ್ಞಾಸೆ ಮಾಡುವ ಕೆಲವು ವಿಚಾರವಂತರು. ಅಂದರೆ ಏನು ತೊಂದರೆಯಾಗುತ್ತಿದೆ ಎಂಬುದು ಆಚರಣೆ ಮಾಡುವವರಿಗೇ  ಅರಿವಿಲ್ಲದಿದ್ದರೂ ಕೆಲವು ವಿಚಾರವಂತರಿಗೆ ಅದು ಹೇಗೆ ಗೊತ್ತಾಯಿತು?   ಇದುವರೆಗೂ ಎಂಜಲೆಲೆಯ ಆಚರಣೆಯ ಕುರಿತಾದದ ಚರ್ಚೆಗೆ ಸಂಬಂಧಿಸಿದಂತೆ ಅದಕ್ಕೆ ಮೌಢ್ಯವನ್ನು ಆರೋಪಿಸಿ ಅದನ್ನು ಹೋಗಲಾಡಿಸುವ ಪ್ರಯತ್ನದಲ್ಲಿರುವವರೇ ಅದು ಅಸಹನೀಯ ಎನ್ನುತ್ತಿದ್ದಾರೆಯೇ ಹೊರತು ಆಚರಿಸುವವರ ಅನುಭವದಿಂದ ಈ ಹೇಳಿಕೆಯು ಪ್ರಮಾಣಿತವಾಗಿಲ್ಲ. ಜಿಜ್ಞಾಸೆಯನ್ನೇ ಆಧರಿಸದ ಆಚರಣೆಗಳನ್ನು ಜಿಜ್ಞಾಸೆಯ ಮೂಲಕ ನೋಡಲು ಹೋದರೆ ಇಂಥ ಅಸಂಗತ ಸನ್ನಿವೇಶ ನಿರ್ಮಾಣವಾಗುತ್ತದೆ. 

ಇದನ್ನು ಇನ್ನೂ ಸ್ಪಷ್ಟಗೊಳಿಸಿಕೊಳ್ಳುವುದಾದರೆ, ಜನರು ಬ್ರಾಹ್ಮಣರ ಎಂಜಲೆಲೆಯಿಂದ ತಮ್ಮ ರೋಗರುಜಿನ ವಾಸಿಯಾಗುತ್ತದೆ ಎಂದು ನಿಜವಾಗಿಯೂ ನಂಬಿದ್ದರೆ, ಬಹುತೇಕ ರೋಗಗ್ರಸ್ಥರು ಬ್ರಾಹ್ಮಣರ ಮನೆಯ ಮುಂದೆ ಅವರ ಎಂಜಲೆಲೆಗಳಿಗೋಸ್ಕರ ನಿಂತಿರಬೇಕಿತ್ತು. ಆದರೆ ಪರಿಸ್ಥಿತಿ ಹಾಗೆ ಇದೆಯೇ? ಖಂಡಿತ ಇಲ್ಲ, ಏಕೆಂದರೆ ನಿರ್ದಿಷ್ಟ ಸಮಯದಲ್ಲಿ ಅದೂ ದೇವಸ್ಥಾನಗಳಂತಹ ಸ್ಥಳಗಳಲ್ಲಿ ಮಾತ್ರ ಜನರು ಆ ಆಚರಣೆಯನ್ನು ಮಾಡುತ್ತಾರೆ. ಅದು ಅಲ್ಲಿ ಮಾತ್ರ ಮಾಡುವ ಕಾರ್ಯವಾಗಿದ್ದು ದೇವಸ್ಥಾನದ ಹೊರಗೆ ಅದರ ಪ್ರಸ್ತುತತೆ ಇರುವುದಿಲ್ಲ. ಆದ್ದರಿಂದ ಆಚರಣೆಗಳು ಜರುಗುವ ಸಂದರ್ಭ, ಕಾಲ, ಸ್ಥಳಗಳು ಆಚರಣೆಗಳಿಗೆ ಅರ್ಥವನ್ನು ನೀಡುತ್ತವೆಯೇ ವಿನಃ, ಅದರಿಂದ ಹೊರಬಂದರೆ ಆಚರಣೆಗಳು ಅವೈಚಾರಿಕವಾಗಿಯೇ ಕಾಣುತ್ತವೆ. ಬ್ರಾಹ್ಮಣರ ಎಂಜಲೆಲೆಯಲ್ಲಿ ಹೊರಳಾಡಿದರೆ ರೋಗ ವಾಸಿಯಾಗುವುದಿಲ್ಲ ಎಂದು ಜನರಿಗೆ ತಿಳಿದಿದೆ ಎಂದು ಜನರಿಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ ಆದರೂ ಅದು ಪೂರ್ವಕಾಲದಿಂದ ಬಂದಿದೆ ಎಂಬ ಕಾರಣಕ್ಕೋ ಅಥವಾ ತಮ್ಮ ಮನಃಶಾಂತಿಗೋ ಹಾಗೂ ಇನ್ಯಾವುದೋ ಕಾರಣಗಳಿಗೆ, ಅಥವಾ ಯಾವುದೇ ಕಾರಣಗಳಿಲ್ಲದೆಯೂ ಆ ಆಚರಣೆಯಲ್ಲಿ ತೊಡಗುತ್ತಾರೆ. ಆದ್ದರಿಂದ ಜನರು ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ದಿಷ್ಟವಾದ ನಂಬಿಕೆ ಇರುತ್ತದೆ ಎಂಬ ಅವೈಚಾರಿಕ ವಿಶ್ಲೇಷಣೆ ನಮ್ಮ ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾದಿತಪ್ಪಿಸುತ್ತವೆ.

ದೇವರಿಗೆ ಅರ್ಪಿಸುವ ನೈವೇದ್ಯವಾಗಲಿ, ದೇವರ ಮುಂದೆ ಇಡುವ ಎಡೆಯಾಗಲೀ ದೇವರು ತೆಗೆದುಕೊಳ್ಳುತ್ತಾನೆ ಎಂಬುದು ಮೌಢ್ಯದಂತೆಯೇ ಕಾಣುತ್ತದೆ. ಆದರೆ ಅದನ್ನು ಮಾಡುವ ಜನರಿಗೆ ಅವುಗಳನ್ನು ದೇವರು ತಿನ್ನಲು ಸಾಧ್ಯವಿಲ್ಲ ಎಂಬ ಕ್ಷುಲ್ಲಕ ಸಂಗತಿಗಳು ತಿಳಿದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದರೆ ಹಾದಿ ತಪ್ಪುತ್ತೇವೆ. ದೇವರು ಕಥೆಗಳಲ್ಲಿ ಬಿಟ್ಟರೆ ನಿಜದಲ್ಲಿ ಎಂದೂ ತಿನ್ನುವುದೂ ಇಲ್ಲ ಎಂಬುದು ಅವರ ಅನುಭವ. ಆದರೂ ಜನರೇಕೆ ಎಡೆ ಇಡುತ್ತಾರೆ? ಏಕೆ ಇಡುತ್ತಾರೆಂದರೆ ಅವರ ಪೂರ್ವಜರು ಅವರಿಗೆ ಹಾಗೆ ಹೇಳಿಕೊಟ್ಟಿದ್ದಾರೆ. ಅದನ್ನು ಮುಂದುವರೆಸುವುದರಿಂದ ಅವರಿಗೇನು ತೊಂದರೆಯೂ ಇಲ್ಲ, ಅಡ್ಡಿ ಆತಂಕಗಳೂ ಇಲ್ಲ. ಇದನ್ನು ಇನ್ನೂ ಸ್ಪಷ್ಟಪಡಿಸುವುದಾದರೆ, ಆಚರಣೆಗಳನ್ನು ಮಾಡಲು ಇಂತದ್ದೇ ನಿರ್ದಿಷ್ಟ ಕಾರಣ ಇರಬೇಕೆಂಬ ನಿಯಮವಿಲ್ಲ, ಇನ್ನೂ ನಿರ್ದಿಷ್ಟವಾಗಿ ವೈಚಾರಿಕ ವಿವರಣೆ ಅಥವಾ ಕಾರಣಗಳ ಅಗತ್ಯವಿಲ್ಲ. ಅಂತಹ ಯಾವುದೇ ಕಾರಣಗಳಿಲ್ಲದೆಯೂ ಜನರು ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಆ ಆಚರಣೆಗಳಿಗೆ ಕಾರಣಗಳಿಲ್ಲ, ಹಾಗಾಗಿ ಮೂಢ ಆಚರಣೆಗಳು, ಆ ಕಾರಣಕ್ಕಾಗಿ ಅವುಗಳನ್ನು ನಿಲ್ಲಿಸಬೇಕು ಎನ್ನುವವರು ಮನುಷ್ಯ ವರ್ತನೆಯ ಒಂದು ವೈಜ್ಞಾನಿಕ ಸತ್ಯವನ್ನು ಅರಿತಿಲ್ಲ.  ಅದೆಂದರೆ, ಆಚರಣೆಗಳನ್ನು ಮುಂದುವರೆಸಲು  ಕಾರಣಗಳು ಇಲ್ಲ ಎನ್ನುವುದೇ ಅವುಗಳನ್ನು ನಿಲ್ಲಿಸಲು ಕಾರಣವಾಗಲಾರದು. ಅವುಗಳನ್ನು ನಿಲ್ಲಿಸಲು ಪ್ರತ್ಯೇಕ ಕಾರಣಗಳು ಬೇಕು. ಇದು ಮಾನವ ಆಚರಣೆಯ ಕುರಿತು ವಿಜ್ಞಾನಿಗಳೇ ಹೇಳಿದ ವಿಚಾರ. ಹಾಗಾಗಿ ಒಂದೊಮ್ಮೆ ಜನರಿಗೆ ಯಾವುದಾದರೂ ಆಚರಣೆ ತಪ್ಪು, ಅದನ್ನು ನಿಲ್ಲಿಸಬೇಕು ಎಂದು ಅನಿಸಿದಾಗೆಲ್ಲ ಕಾಲಕ್ರಮೇಣ ಅಂತಹ ಆಚರಣೆಗಳನ್ನು ಪರಿವರ್ತಿಸಿಕೊಂಡಿದ್ದಾರೆ ಇಲ್ಲವೆ ಬಿಟ್ಟು ಬಿಟ್ಟಿದ್ದಾರೆ. ಹೀಗೆ ಎಷ್ಟೋ ಆಚರಣೆಗಳು ಅಳಿದಿವೆ, ಎಷ್ಟೋ ಹೊಸದಾಗಿ ಹುಟ್ಟಿಕೊಂಡಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ.

ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಎಂಬುದು ವೇದ್ಯವಾಗುತ್ತದೆ. ಇದರ ಸ್ಪಷ್ಟ ಸೂಚನೆ ಎಂದರೆ ಭಾಗವಹಿಸುವವರು ಎಷ್ಟೇ ವಿರೋಧವಿದ್ದರೂ ಭಾಗವಹಿಸುತ್ತಲೇ ಇದ್ದಾರೆ, ವಿರೋಧಿಸುವವರು ಜನರು ಎಷ್ಟೇ ನಿರಾಸಕ್ತಿ ತೋರಿದರೂ ವಿರೋಧಿಸುತ್ತಲೇ ಇದ್ದಾರೆ. ಇವರಿಬ್ಬರ ನಡುವೆ ಯಾವುದೋ ಒಂದು ತೆರನಾದ ಕಂದರವಿದೆ ಎಂಬುದು ನಮ್ಮ ಅಭಿಪ್ರಾಯ. ಇಲ್ಲಿರುವ ಕಂದರವನ್ನು ಹೋಗಲಾಡಿಸಲು ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಬೇಕಾದ ತುರ್ತು ಇಂದು ನಮಗಿದೆ. ಹಾಗೆ ಅರ್ಥಮಾಡಿಕೊಳ್ಳಲು ಅಕ್ಷರ ರಂತಹ ಚಿಂತಕರ ಅಭಿಪ್ರಾಯಗಳು ನಮಗೆ ಮಾರ್ಗದರ್ಶನವಾಗಬಹುದು.

 

 

Average: 5 (2 votes)
3294 ಹಿಟ್ಸ್

ಪ್ರತಿಕ್ರಿಯೆಗಳು

mpneerkaje's picture
01
Feb
2011
6:03

ಸೋ ಕಾಲ್ಡ್ ಮೌಢ್ಯಗಳ ಬಗ್ಗೆ ಹೊಸ ಚಿಂತನೆಯೊಂದನ್ನು ಹುಟ್ಟುಹಾಕಿದ್ದಕ್ಕೆ ಧನ್ಯವಾದಗಳು. ಕೆಲವು ಸಾಲುಗಳಂತೂ ತುಂಬಾ ಇಷ್ಟವಾದವು :

{ಅವನ್ನು ಮಾಡಲಿಕ್ಕೆ ಜನರು ಈ ಕ್ಷೇತ್ರಗಳಿಗೆ ಬಂದಿದ್ದಾರೆಯೇ ಹೊರತೂ ಆ ಆಚರಣೆಗಳ ಕುರಿತು ಅವರಿಗೆ ಹೇಳಲಿಕ್ಕೆ ಏನೂ ಇಲ್ಲ. ಸಮರ್ಥಿಸಲಿಕ್ಕೂ ಏನೂ ವಿವರಣೆಗಳಿಲ್ಲ, ಬಿಡಲಿಕ್ಕೂ ಏನೂ ಕಾರಣಗಳಿಲ್ಲ. ಹಾಗೂ ಅವರು ಆಚರಣೆಗಳನ್ನು ಮಾಡಲಿಕ್ಕೆ ಈ ಮೇಲಿನವು ಕಾರಣಗಳೇ ಅಲ್ಲದಿರುವ ಸಾಧ್ಯತೆಯೇ ಹೆಚ್ಚು.}
{ಅವರು ಬಿಡುವ ಉಪಗ್ರಹಗಳು ಅವರು ಪೂಜೆ ಮಾಡಿದ್ದರಿಂದ ಕೆಲಸಮಾಡುತ್ತವೆ ಎಂಬುದಾಗಿ ಅವರು ನಂಬಿದ್ದರೆ ಉಪಗ್ರಹ ತಂತ್ರಜ್ಞಾನವನ್ನು ಅವರೇಕೆ ತರಗತಿಗಳಲ್ಲಿ ಬೋಧಿಸುತ್ತಾರೆ}
{ಆದರೆ ಅದನ್ನು ಮಾಡುವ ಜನರಿಗೆ ಅವುಗಳನ್ನು ದೇವರು ತಿನ್ನಲು ಸಾಧ್ಯವಿಲ್ಲ ಎಂಬ ಕ್ಷುಲ್ಲಕ ಸಂಗತಿಗಳು ತಿಳಿದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದರೆ ಹಾದಿ ತಪ್ಪುತ್ತೇವೆ}
{ಅದೆಂದರೆ, ಆಚರಣೆಗಳನ್ನು ಮುಂದುವರೆಸಲು ಕಾರಣಗಳು ಇಲ್ಲ ಎನ್ನುವುದೇ ಅವುಗಳನ್ನು ನಿಲ್ಲಿಸಲು ಕಾರಣವಾಗಲಾರದು. ಅವುಗಳನ್ನು ನಿಲ್ಲಿಸಲು ಪ್ರತ್ಯೇಕ ಕಾರಣಗಳು ಬೇಕು.}

ಈ ಸಂದರ್ಭದಲ್ಲಿ ನನಗೆ ನೆನಪಾಗುವ ಒಂದು ಸನ್ನಿವೇಶ - ಸಂಬಂಧಿಯೊಬ್ಬರ ಚಿಕಿತ್ಸೆಗೆಂದು ಪ್ರಸಿಧ್ಧ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ವೈದ್ಯರೊಬ್ಬರ ಬಳಿ ಹೋಗಿದ್ದಾಗ ಅವರ ಕಚೇರಿಯಲ್ಲಿ ಕಂಡ ಒಂದು ಬರಹ ಇದು - "Doctor treats, God heals". ಇದೂ ಕೂಡ ಲೇಖಕರು ತಿಳಿಸಿದ ಪ್ರವೃತ್ತಿಯನ್ನೇ ತೋರಿಸುತ್ತದೆ ಎಂದು ಅನಿಸುತ್ತದೆ ನನಗೆ.

ವೈಯಕ್ತಿಕವಾಗಿ ಮಡೆ ಸ್ನಾನದಂತಹ ಆಚರಣೆಯಲ್ಲಿ ಪಾಲ್ಗೊಳ್ಳುವುದು ನನಗಂತೂ ಅಸಾಧ್ಯ. ಹಾಗೆಂದು ಅದನ್ನು ಇತರರ ಆಚರಣೆಯ ಹಿನ್ನೆಲೆಯಲ್ಲಿ ವಿರೋಧಿಸುವುದು ಬಹುಷ: ಇನ್ನೊಂದು ಮೌಢ್ಯವಾಗುತ್ತದೇನೋ.

ಈ ಮೊದಲು ಚರ್ಚಿತವಾಗಿದ್ದ "ಭಾರತದ ಸಂಸ್ಕೃತಿಯು ಕ್ರಿಯಾ ಪ್ರಧಾನ" ಎಂಬ ಕಾನ್ಸೆಪ್ಟ್ ಇಲ್ಲಿ ಹೆಚ್ಚು ವಿವರವಾಗಿ ಚಿತ್ರಿತವಾಗಿದೆ. ಆ ಸಮಯದಲ್ಲಿ ನಾನು ಬೇರೆಯೇ ರೀತಿ ಅರ್ಥೈಸಿಕೊಂಡಿದ್ದೆ. ಇದಕ್ಕೆ ಪ್ರತಿಯಾಗಿ ನಾನು ಹೇಳಿದ್ದ ಸಂಗತಿಗಳು ಬೇರೆಯೇ ಸನ್ನಿವೇಶದಲ್ಲಿ ಪ್ರಕಟವಾಗುವಂತಹವುಗಳು. ಒಟ್ಟಿನಲ್ಲಿ ಒಳ್ಳೇ ಲೇಖನ.

shanmukha24's picture
01
Feb
2011
6:22

ಪ್ರಿಯ ಮಹೇಶ್ ರವರೇ,

ನಮ್ಮ ನಿರೀಕ್ಷೆಯಂತೆ ನೀವೇ ಮೊದಲು ಪ್ರತಿಕ್ರಿಯಿಸಿದ್ದೀರಿ. ಈ ಕುರಿತು ಅಕ್ಷರರವರ ಲೇಖನ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಪ್ರಕಟವಾದ ತಕ್ಷಣ ಬಹಳಷ್ಟು ಜನ ಆ ಲೇಖನದ ಮೇಲೆ ಮುಗಿಬಿದ್ದಿದ್ದಾರೆ. ಅವರೆಲ್ಲರನ್ನು (ಅವರೆಲ್ಲರ ವಾದಗಳನ್ನು) ಗಮನದಲ್ಲಿ ಇಟ್ಟುಕೊಂಡು ಇಲ್ಲಿ ಇನ್ನಿತರರು ಈ ಲೇಖನದ ಕುರಿತು ಪ್ರಶ್ನೆಗಳನ್ನು ಎತ್ತುತ್ತಾರೆ ಎನ್ನುವ ನಿರೀಕ್ಷೆ ಇದೆ. ಕೆಸರೆರಚಾಟದ ಬದಲಿಗೆ ಈ ಕುರಿತು ಅರ್ಥಪೂರ್ಣವಾದ ಚರ್ಚೆ ನಡೆಸುವ. ನೀವೂ ಈ ಚರ್ಚೆಯಲ್ಲಿ ಭಾಗವಹಿಸುವಿರೆಂಬ ಭರವಸೆ ಇದೆ.

ಷಣ್ಮುಖ

narabhangi's picture
01
Feb
2011
7:29

ಸಮಚಿತ್ತದಿ೦ದ ಬರೆದ ಯಾವ ಪೂರ್ವಾಗ್ರಹಗಳಿಲ್ಲದೆ ವಿಷಯವನ್ನು ಸಮತೋಲನದಿ೦ದ ಸೂಕ್ಷ್ಮ ಮನಸ್ಸಿನಿ೦ದ ವಿಶ್ಲೇಷಿಸಿ ಯಾರನ್ನೂ ಮೆಚ್ಚಿಸದೆ ಯಾರನ್ನೂ ಅಪಮಾನಿಸದೆ ಬರೆದ ಒ೦ದು ಚಿ೦ತನೀಯ ಲೇಖನ. ಬಹಳ ದಿನಗಳಾಗಿದ್ದವು ಇ೦ಥಾ ಒ೦ದು ಪ್ರಬುದ್ಧ ಲೇಖನವನ್ನು ಓದದೆ ಅಥವಾ ಕಣ್ಣಿಗೆ ಕಾಣದೆ..
ನಿಜ, ಮೌಢ್ಯವೆ೦ದು ಮೊದಲು ಜರೆಯುವ ಮುನ್ನ ಆ ಮೌಢ್ಯಕ್ಕೆ ತುತ್ತಾದವರ ಮಾನಸಿಕ ಹಿನ್ನೆಲೆಯನ್ನು ಸಹಾನುಭೂತಿಯಿ೦ದ ಅರ್ಥಮಾಡಿಕೊ೦೦ಡಾಗ ಮಾತ್ರ ಹಲವಾರು ಅರ್ಥಹೀನ ಮೌಢ್ಯಗಳು ಕ್ರಮೇಣ ಮರೆಯಾಗಲು ಸಾಧ್ಯ. ವೈಯುಕ್ತಿಕ ನ೦ಬಿಕೆಗಳು ಬೇರೆ ಸಾಮೂಹಿಕ ನ೦ಬಿಕೆಗಳು ಬೇರೆ. ಆ ನ೦ಬಿಕೆಗಳು ಮಾನವನಿಗೆ ಯಾವ ರೀತಿ ಆಸರೆ ಸಾ೦ತ್ವನ ನೀಡಬಲ್ಲುದು ಎ೦ಬುದು ಒ೦ದು ಸ೦ಶೋಧನೆಯ ಸ೦ಗತಿ.
<<ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಎಂಬುದು ವೇದ್ಯವಾಗುತ್ತದೆ. ಇದರ ಸ್ಪಷ್ಟ ಸೂಚನೆ ಎಂದರೆ ಭಾಗವಹಿಸುವವರು ಎಷ್ಟೇ ವಿರೋಧವಿದ್ದರೂ ಭಾಗವಹಿಸುತ್ತಲೇ ಇದ್ದಾರೆ, ವಿರೋಧಿಸುವವರು ಜನರು ಎಷ್ಟೇ ನಿರಾಸಕ್ತಿ ತೋರಿದರೂ ವಿರೋಧಿಸುತ್ತಲೇ ಇದ್ದಾರೆ. ಇವರಿಬ್ಬರ ನಡುವೆ ಯಾವುದೋ ಒಂದು ತೆರನಾದ ಕಂದರವಿದೆ ಎಂಬುದು ನಮ್ಮ ಅಭಿಪ್ರಾಯ. ಇಲ್ಲಿರುವ ಕಂದರವನ್ನು ಹೋಗಲಾಡಿಸಲು ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಬೇಕಾದ ತುರ್ತು ಇಂದು ನಮಗಿದೆ. ಹಾಗೆ ಅರ್ಥಮಾಡಿಕೊಳ್ಳಲು ಅಕ್ಷರ ರಂತಹ ಚಿಂತಕರ ಅಭಿಪ್ರಾಯಗಳು ನಮಗೆ ಮಾರ್ಗದರ್ಶನವಾಗಬಹುದು.>>>
ಅರ್ಥಪೂರ್ಣ ಲೇಖನಕ್ಕೆ ಅರ್ಥಪೂರ್ಣ ಅ೦ತ್ಯ ಸಾಲುಗಳು.

sankru's picture
02
Feb
2011
9:56

ಪ್ರೀತಿಯ ಮಹೇಶ್ ಹಾಗೂ ನಾರಭಂಗಿ

ನಿಮ್ಮ ಅರ್ಥಪೂರ್ಣ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಆಚರಣೆಗಳನ್ನು ಟೀಕಿಸುವುದರಲ್ಲೇ ಕಾಲಕಳೆಯುವುದನ್ನು ಬಿಟ್ಟು ಅವುಗಳನ್ನು ಅರ್ಥಮಾಡಿಕೊಳ್ಳುವ ಜರೂರು ಇಂದು ನಮಗಿದೆ. ಅಂತಹ ಒಂದು ಪ್ರಯತ್ನವನ್ನು ನಾವು ಮಾಡುವ ನಿಟ್ಟಿನಲ್ಲಿದ್ದೇವೆ. ಆದ್ದರಿಂದ ಅದರ ಕುರಿತು ಚರ್ಚೆಯಾಗಲಿ ಎಂದು ನಮ್ಮ ಸಂಪದದ ಬಳಗಕ್ಕೆ ಈ ಬರವಣಿಗೆಯನ್ನು ಅರ್ಪಿಸಿದ್ದೇವೆ. ಚರ್ಚೆ ಹೆಚ್ಚಾದಷ್ಟು ಆಚರಣೆಗಳ ಕುರಿತ ಜ್ಞಾನ ಹೆಚ್ಚಾಗುವುದು ಎಂಬುದು ನಮ್ಮ ಅಭಿಪ್ರಾಯ.

ಮತ್ತೊಮ್ಮೆ ನಿಮಗೆ ಧನ್ಯವಾದಗಳು

narabhangi's picture
02
Feb
2011
4:09

ನಾರಭಂಗಿ
ಅಲ್ಲ ನರಸಿ೦ಹ ಭ೦ಗಿ..

sankru's picture
02
Feb
2011
5:54

ಕ್ಷಮಿಸಿ ಎಲ್ಲವನ್ನು ಸಂಕ್ಷಿಪ್ತವಾಗಿ ಹೇಳುವ ಅಭ್ಯಾಸ

kavinagaraj's picture
02
Feb
2011
12:00

ಇಂತಹ ನೇರನೋಟದ ಲೇಖನ ಸ್ವಾಗತಾರ್ಹ. ವಿರೋಧ ಮಾಡುವುದರಿಂದ ಪರಿವರ್ತನೆ ಸಾಧ್ಯವಿಲ್ಲ. ಅದರಿಂದ ಹಿನ್ನಡೆಯೇ ಆಗುವುದು. ಬದಲಿಗೆ ವಿರೋಧಿಸದೆ ಸತ್ಯದ ವಿಚಾರಗಳನ್ನು ಹೇಳುತ್ತಾ ಹೋಗುವುದು ಒಳ್ಳೆಯದು. ಕೇಳಿದರೆ ಸರಿ, ಇಲ್ಲದಿದ್ದರೆ ಬಿಡಲಿ!

sankru's picture
02
Feb
2011
2:37

ಹೌದು ನೀವು ಹೇಳುವುದು ನೂರಕ್ಕೆ ನೂರು ನಿಜ.

raghusp's picture
02
Feb
2011
3:06

ನಿಮ್ಮ ಲೇಖನದ ವೈಖರಿ ಮತ್ತು ವಿಷಯಗಳ ಮಹತ್ವವು ಹೆಚ್ಚು ಚಿಂತನೆಗೆ ಹಚ್ಚುತ್ತದೆ.
ನನ್ನ ಪ್ರಕಾರ
ಒಂದು ಸಂಪ್ರದಾಯ ಅಥವಾ ಆಚರಣೆ ರೂಡಿ ತಪ್ಪಿದ್ದರೆ, ಆ ಆಚರಣೆಯ ಹಿಂದಿರುವ ಒಂದು ಸಂಸ್ಕೃತಿಯು ಮರೆಯಾದಂತೆ, ಇತಿಹಾಸವನ್ನು ನೋಡಿದಾಗ ಕಾಲ ನಂತರ ಆಚರಣೆಯ ಆಯಾಮಗಳು ಬದಲಾಗಿರುವುದು ಕಂಡುಬಂದಿವೆ ಆದರೆ ಈ ಬದಲಾವಣೆಗಳು ಕಾಲದ ಕಾಲ್ತುಳಿತಕ್ಕೆ ಸಿಕ್ಕಿ ಮರೆಯಾದಂತವು ಕೆಲವೊಂದು ಪರಿಸ್ಥಿತಿಯೊಂದಿಗೆ ಸಂದಿ ಮಾಡಿಕೊಂದತವು.
ಮಡೆ ಸ್ನಾನದ ವಿಷಯದಲ್ಲೂ ಅಷ್ಟೆ ಇಲ್ಲಿ ಬಲಾತ್ಕಾರದಿಂದ ಏನು ನಡೆಯುತ್ತಿಲ್ಲ, ಇದೊಂದು ನಂಬಿಕೆ ಆಚರಣೆಯಾಗಿ ಪರಿವರ್ತನೆಗೊಂಡಂತೆ ಕಾಣಿಸುತ್ತದೆ.
ಈ ಆಚರಣೆ ಮಾಧ್ಯಮದವರ ಕಣ್ಣಿಗೆ ಬೀಳುವವರೆಗೂ ಎಲ್ಲವು ಸರಿಯಾಗೇ ಇತ್ತು.
ಇದೆ ರೀತಿ ಉತ್ತರಕರ್ನಾಟಕ ದಲ್ಲಿ ದೇವದಾಸಿಯರು ನಡೆಸುತ್ತಿದ್ದ ಬೆತ್ತಲೆ ಸೇವೆ ಮಾಧ್ಯಮದವರ ಮಧ್ಯ ಪ್ರವೇಶದಿಂದಾಗಿ ಇವತ್ತು ಆಚರಣೆ ನಿಂತಿದೆ. ಕ್ಯಾಮರ ಕಣ್ಣು ಅಲ್ಲಿಗೆ ಬಿಳುವಾವರೆಗೂ ಅಲ್ಲಿ ಎಲ್ಲವು ಒಂದು ನಂಬಿಕೆ ಮತ್ತು ಭಕ್ತಿ ಆಧಾರದ ಮೇಲೆ ನಡೆಯುತ್ತಿತ್ತು. ಒಂದು ಪಂಗಡ ಅಥವಾ ಜನಾಂಗದ ನಂಬಿಕೆಗಳನ್ನು ತಪ್ಪು ಎಂದು ಹೇಳಲು ನಾವ್ಯಾರು. ಈ ರೀತಿ ಎಲ್ಲಾ ಆಚರಣೆಗಳನ್ನು ತಪ್ಪು ಎಂದು ಸಾಧಿಸಲು ಹೊರಟರೆ ನಮ್ಮ ಹಬ್ಬ, ಜಾತ್ರೆ ಇವುಗಳು ಮೂಡ ನಂಬಿಕೆಯಲ್ಲವೇ.
ಮಡೆ ಸ್ನಾನದ ಮೂಲವನ್ನು ಹುಡುಕುತ್ತ ಹೊರತಷ್ಟು ಜಾತಿ ವಸಾಹುತುಶಾಹಿ ಅಗ್ರಹಾರ ಗಳು ಇನ್ನು ಮುಂತಾದವುಗಳು ಹೊರ ಬರುವ ಸಾಧ್ಯತೆ ಹೆಚ್ಚು

sankru's picture
02
Feb
2011
3:44

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮ್ಮ ಕೊನೆಯ ಸಾಲು ಅರ್ಥವಾಗಲಿಲ್ಲ, ದಯವಿಟ್ಟು ಬಿಡಿಸಿ ಹೇಳಲು ಸಾಧ್ಯವಾ?

raghusp's picture
02
Feb
2011
4:09

ಬಿಡಿಸಿದಷ್ಟು ಚರ್ಚೆಯ ದಿಕ್ಕು ಬದಲಾಗುವ ಸಾಧ್ಯತೆ ಜಾಸ್ತಿ , ಅದು ಹಾಗೆ ಇರಲಿ

narabhangi's picture
02
Feb
2011
4:11

<<<ಬಿಡಿಸಿದಷ್ಟು ಚರ್ಚೆಯ ದಿಕ್ಕು ಬದಲಾಗುವ ಸಾಧ್ಯತೆ ಜಾಸ್ತಿ , ಅದು ಹಾಗೆ ಇರಲಿ>>
ಹಾಗಾದರೆ ಅ೦ತಹ ದಿಕ್ಕು ತಪ್ಪಿಸುವ ಸಾಲನ್ನು ಬರೆಯುವುದಾದರೂ ಏತಕ್ಕೆ??

raghusp's picture
02
Feb
2011
4:13

ಆ ಸಾಲು ನಿಮ್ಮನ್ನು ಹೇಗೆ ದಿಕ್ಕು ತಪ್ಪಿಸಿದೆ ಎಂದು ಹೇಳಿದರೆ ಅದಕ್ಕೆ ಸಮಜಾಯಿಷಿ ಕೊಡುವ ಪ್ರಯತ್ನ ಮಾಡೋಣ

sankru's picture
02
Feb
2011
4:37

ದಿಕ್ಕು ತಪ್ಪಿಸುತ್ತದೆಯೋ ಇಲ್ಲವೋ ತಿಳಿದಿಲ್ಲ, ಅದು ಏನೇ ಇರಲಿ ಅಂತಹ ಚರ್ಚೆಗೆ ಹೋಗುವುದು ಬೇಡ. ಮೇಲೆ ಬರೆದಿರುವ ಬರವಣಿಗೆಗೆ ಸಂಬಂಧಿಸಿದಂತೆ ಏನಾದರೂ ವಿಷಯವಿದ್ದರೆ ಚರ್ಚಿಸುವಾ...

raghusp's picture
02
Feb
2011
4:46

ಚರ್ಚಾ ವಿಷಯದ ಗಂಭೀರತೆಯನ್ನು ಅರಿತಿದ್ದರಿಂದಲೇ , ನಿಮಗೆ ಉತ್ತರಿಸುವ ಪ್ರಯತ್ನ ಮಾಡಿಲ್ಲ

shanmukha24's picture
02
Feb
2011
4:49

ಆ ಸಾಲನ್ನು ಬಿಡಿಸಿದರೆ ಚರ್ಚೆ ದಿಕ್ಕು ತಪ್ಪುತ್ತದೆ ಎಂದು ಹೇಳಿದವರು ನೀವು ರಘುರವರೇ!!! ಹಾಗಾಗಿ, ಹೇಗೆ ದಿಕ್ಕು ತಪ್ಪುತ್ತದೆ ಎಂಬುದನ್ನು ನೀವೇ ಹೇಳಬೇಕು ಇಲ್ಲವೇ ಸಂತೋಷ್ ಕೇಳಿದ ಹಾಗೆ ಆ ಸಾಲಿನ ಅರ್ಥವನ್ನು ನೀವೇ ವಿವರಿಸಬೇಕು. ಎರಡರೊಲ್ಲೊಂದನ್ನು ಮಾಡಿದರೆ ಚರ್ಚೆ ಮುಂದುವರಿಯಬಹುದು!!

raghusp's picture
02
Feb
2011
5:03

ಮಾನ್ಯರೇ
ಹಿಂದಿನ ಅಗ್ರಹಾರ ಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಸೃಷ್ಟಿಸಿದ ಅರ್ಥಹೀನ ಆಚರಣೆಗಳ ಫಲಗಳಲ್ಲಿ ಈ ಮಡೆ ಸ್ನಾನವು ಒಂದು.
ಇಂತ ಎಷ್ಟೋ ಅರ್ಥಹೀನ ಆಚರಣೆಗಳನ್ನು ಸೃಷ್ಟಿಸಿ, ತಾವು ಮೇಲ್ಪಂಕ್ತಿ ಯವರೆಂದು ಜನಗಳಲ್ಲಿ ಭಯ ಹುಟ್ಟಿಸಿದವರು ಈ ಅಗ್ರಹಾರದ ದೊರೆಗಳು.

sankru's picture
02
Feb
2011
5:32

ರಘು ರವರೆ

೧. ಆಚರಣೆಗಳು ಅರ್ಥಹೀನ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಅದನ್ನು ಇದುವರೆಗೂ ಆಚರಣೆಗಳ ಕುರಿತು ಬಂದಿರುವ ಸಿದ್ಧಾಂತಗಳು ಸ್ಪಷ್ಟಪಡಿಸುತ್ತವೆ. ಬ್ರಾಹ್ಮಣರೋ ಅಥವಾ ಅಗ್ರಹಾರಗಳೋ ಇಂತಹ ಆಚರಣೆಗಳನ್ನು ಸೃಷ್ಟಿಸಿವೆ ಎಂದು ಹೇಳಲು ನಿಖರವಾದ ದಾಖಲೆ ಹಾಗೂ ವಾದಗಳು ಬೇಕಾಗುತ್ತವೆ. ನಿಮ್ಮ ವಾದಕ್ಕೆ ನಾಣು ವಿರುದ್ಧವಾಗಿ ಹೀಗೆ ಹೇಳಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಂಟರು ಹಿಂದಿನಿಂದ ಬ್ರಾಹ್ಮಣರಿಗೆ ಈ ಆಚರಣೆಯನ್ನು ಜಾರಿಗೆ ತರಲು ಪೀಡಿಸಿರಬಹುದು, ಇಲ್ಲ ಬ್ರಾಹ್ಮಣರ ಮೇಲೆ ಒತ್ತಾಯ ಮಾಡಿರಬಹುದು. ಈ ವ್ಯಾಖ್ಯೆಯನ್ನು ಹೇಗೆ ಸಾಭೀತು ಪಡಿಸುವುದು ಅಥವಾ ತಿರಸ್ಕರಿಸುವುದು? ಸದ್ಯಕ್ಕೆ ಎರಡೂ ಕೆಲಸಗಳೂ ಆಗುವುದಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಚಾರಿತ್ರಿಕ ದಾಖಲೆಗಳನ್ನು ಒದಗಿಸುವಲ್ಲಿ ನಾವು ಸೋಲುತ್ತೇವೆ. ಹಾಗೆಯೇ ಅಗ್ರಹಾರ ಸೃಷ್ಟಿಸಿದೆ ಎಂದರೆ ನನ್ನ ಕೆಲವು ಪ್ರಶ್ನೆಗಳಿವೆ. ಅವೇಕೆ ಜನರನ್ನು ನಿಯಂತ್ರಿಸಲು ವಿಜ್ಞಾನವನ್ನು ಕಟ್ಟಲಿಲ್ಲ? ಏಕೆ ಅವು ಎಲ್ಲರನ್ನು ನಿಯಂತ್ರಿಸಲು ಹೊರ ಆರ್ಥಿಕ ನೀತಿಯನ್ನು ಸೃಷ್ಟಿಸಲಿಲ್ಲ? ಏಕೆ ಅವು ತಮ್ಮ ಬೇಳೆ ಕಾಳನ್ನು ಬೇಯಿಸಿಕೊಳ್ಳಲು ದಮನಕಾರಿ ನೀತಿಯನ್ನು ಅಳವಡಿಸಿಕೊಳ್ಳಲಿಲ್ಲ? ಕೇವಲ ಮಡೆಸ್ನಾನದಂತಹ ಅರ್ಥಹೀನ ಆಚರಣೆಗಳನ್ನು ಮಾತ್ರ ಸೃಷ್ಟಿಸಿದರು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಏಳುತ್ತವೆ. ನಮ್ಮ ಗುರಿ ಈಗಿರುವ ಆಚರಣೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದರತ್ತ ಹೊರಳಿದರೆ ಉಪಯುಕ್ತವಾಗುತ್ತದೆ. ಅದು ಇಂತಿಂತಿಹ ಕಾರಣಗಳಿಗೆ ಹುಟ್ಟಿತು ಎಂದು ಹೇಳಲು ಸಾಧ್ಯವೂ ಇಲ್ಲ ಹಾಗೂ ಅದರಿಂದ ನಮಗೆ ಉಪಯೋಗವೂ ಇಲ್ಲ. ಪ್ರಪಂಚ ಇಷ್ಟು ಮುಂದುವರೆದರೂ ಜನರೇಕೆ ಇಂತಹ ಆಚರಣೆಗಳನ್ನು ಮಾಡುತ್ತಾರೆಂದು ಅರ್ಥಮಾಡಿಕೊಳ್ಳುವ ಸವಾಲು ನಮ್ಮ ಮುಂದಿದೆ. ಅದಕ್ಕೆ ಉತ್ತರ ದೊರಕದಿದ್ದರೆ ಯಾವುದೋ ಕಾರಣಗಳಿಗೆ ಹುಟ್ಟಿದೆ ಎಂದು ಹೇಳಿ ಯಾರನ್ನೋ ದೂಷಿಸಿ ಸುಮ್ಮನಾಗುವುದು ಒಳಿತಲ್ಲ. ಅದಕ್ಕೂ ಹೆಚ್ಚಾಗಿ ಇಂದು ಜನರೇಕೆ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆಂಬ ಪ್ರಶ್ನೆಗೆ ಅಗ್ರಹಾರದ ಸೃಷ್ಟಿ ಎಂಬುದು ಉತ್ತರವಾಗುವುದಿಲ್ಲ. ಏಕೆಂದರೆ ಅದು ಅಗ್ರಹಾರದ ಸೃಷ್ಟಿ ಎಂಬ ಉತ್ತರವನ್ನು ನೀಡಿದರೆ, ೨೧ ನೇ ಶತಮಾನದಲ್ಲಿ ವಿಜ್ಞಾನ ಇಷ್ಟು ಮುಂದುವರೆದಿದ್ದರೂ ಇನ್ನೂ ಹಳೆಯ ಅಗ್ರಹಾರದ ಸೃಷ್ಟಿಯನ್ನು ಏಕೆ ಮುಂದುವರೆಸುತ್ತಾರೆ ಎಂಬ ಮತ್ತೊಂದು ಪ್ರಶ್ನೆ ಏಳುತ್ತದೆ. ಆಗ ಮತ್ತೆ ಪ್ರಗತಿಪರರಂತೆ ಜನರೆಲ್ಲಾ ಮೂಢರು ಎಂಬ ಉತ್ತರವನ್ನು ನೀಡಿ ಸುಮ್ಮನಾಗಬೇಕಾಗುತ್ತದೆ. ಆದರೆ ನಮ್ಮ ಲೇಖನದಲ್ಲಿ ಅದು ಮೂಢತನದ ಸಂಕೇತವಲ್ಲ ಎಂಬುದನ್ನು ವಾದಿಸಿದ್ದೇವೆ.

೨. ಆಚರಣೆಗಳನ್ನು ಮಾಡುವುದರಿಂದ ಅಥವಾ ಮಾಡಿಸುವುದರಿಂದ ಮೇಲ್ಪಂಕ್ತಿಯೂ ಬರುವುದಿಲ್ಲ ಅಥವಾ ಕೆಳಪಂಕ್ತಿಯೂ ಬರುವುದಿಲ್ಲ. ಮಡೆಸ್ನಾನದಲ್ಲಿ ಭಾಗವಹಿಸಿದವರು ಬ್ರಾಹ್ಮಣರು ತುಂಬಾ ಮೇಲ್ಪಂಕ್ತಿಯ ಜನ ಅವರ ಎಲೆಗಳ ಮೇಲೆ ಉರುಳಾಡಿದರೆ ಸ್ವರ್ಗ ಸಿಗುತ್ತದೆ ಎಂದು ಭಾವಿಸುತ್ತಾರೆಯೇ? ಅವರ ಹರಕೆಯನ್ನು ತೀರಿಸಲು ಹಾಗೆ ಮಾಡುತ್ತಾರೆ. ದಕ್ಷಿಣ ಕನ್ನಡದ ಹಲವೆಡೆ ಸ್ವತಃ ಬ್ರಾಹ್ಮಣರೂ ಸಹ ಎಳಜಲೆಲೆಗಳ ಮೇಲೆ ಹೊರಳಾಡುವುದನ್ನು ನಮ್ಮ ಮಾಧ್ಯಮಗಳು ಬಿತ್ತರಿಸಿವೆ. ಕೇವಲ ಮಡೆಸ್ನಾನವನ್ನು ಮಾಡಿಸುವುದರಿಂದ ಬ್ರಾಹ್ಮಣರಿಗೆ ಮೇಲ್ಪಂಕ್ತಿ ದೊರಕುತ್ತದೆ ಮಾಡಿದವರಿಗೆ ಕೆಳಪಂಕ್ತಿ ದೊರಕುತ್ತದೆ ಎಂದಾದರೆ ಸ್ವತಃ ಬ್ರಾಹ್ಮಣರೇ ಹೊರಳಾಡುವುದನ್ನು ಹೇಗೆ ವಿವರಿಸುತ್ತೀರಿ? ನಮ್ಮ ಪ್ರಕಾರ ಆಚರಣೆಯು ಶ್ರೇಣೀಕರಣಕ್ಕೆ ಸಂಬಂದಪಡದೆ, ಅವರವರ ಸಂಪ್ರದಾಯಗಳಿಗೆ ಮಾತ್ರ ಸಂಬಂಧಪಟ್ಟಿದೆ.

raghusp's picture
02
Feb
2011
6:00

ಮಾನ್ಯರೇ
ನೀವು ಹಳ್ಳಿಗಳನ್ನು ಎಷ್ಟು ಬಲ್ಲಿರೋ ಗೊತ್ತಿಲ್ಲ, ಆದರೆ ನಾನು ನೋಡಿ ನಂಬಿದವನು.
ನಾ ಕಂಡ ಒಂದು ಹಳ್ಳಿಯ ಉದಾಹರಣೆ ಕೊಡಲು ಇಚ್ಚಿಸುತ್ತೇನೆ. ಈ ಒಂದು ಹಳ್ಳಿಯಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದು ವಾಡಿಕೆ , ಊರಿನ ದೇವರು ರಂಗನಾಥ. ಸಾಮಾನ್ಯವಾಗಿ ಈ ಜಾತ್ರೆ ರಾಮ ನವಮಿಯ ಹಿಂದೆ ಮುಂದೆ ನಡೆಯುತ್ತದೆ.
ಸುಡು ಬಿಸಿಲಿನ ಕಾಲ. ಈ ಹಳ್ಳಿಯಲ್ಲಿ ದೇವದುಥರು ಈ ಅಗ್ರಹಾರದ ದೊರೆಗಳೇ. ಜಾತ್ರೆಯ ದಿನ ಉತ್ಸವ ಮೂರ್ತಿ ಅರ್ಚಕರ ಮನೆಯಿಂದ ಹೊರಟು ಸುಮಾರು ಒಂದು ಮೈಲಿ ದೂರವಿರುವ ರಥವನ್ನು ತಲುಪಬೇಕು ಅಲ್ಲಿಂದ ರಥವೇರಿ ದೇವಸ್ಥಾನ ತಲುಪಬೇಕು ಇದು ಆಚರಣೆ. ಆರ್ಚಕರ ಮನೆಯಿಂದ ರಥ ತಲುಪುವ ದಾರಿಯನ್ನು ಉತ್ಸವ ಮೂರ್ತಿ ಬಟ್ಟೆಯ ಮೇಲೆ ನಡೆಯಬೇಕು ಇದಕ್ಕೆ ನೆಡೆಮುಡಿ ಎಂದು ಹೆಸರು. ಈ ಬಟ್ಟೆಯನ್ನು ಹಾಸುವುದು ತಲೆ ತಲಾಂತರದಿಂದ ಆ ಊರಿನ ಮಡಿವಾಳರ ಮನೆಯ ಜವಾಬ್ದಾರಿ.
ಹಿಂದಿನ ಎರಡು ಪಿಲಿಗೆಯವರು ನಡೆಸಿಕೊಂಡು ಬಂದ ಈ ಪದ್ದತಿಯನ್ನ ಈ ಪೀಳಿಗೆಯ ಆ ಮನೆಯ ಜನ ಮುರಿದ್ದಿದ್ದಾರೆ, ಕಾರಣ ಆ ಮನೆಯ ಎಲ್ಲಾ ಮಕ್ಕಳು ಪಟ್ಟಣ ಸೇರಿ ಒಳ್ಳೆ ಹುದ್ದೆಯಲ್ಲಿದ್ದಾರೆ , ಈ ಪರಿಸ್ಥಿತಿಯಲ್ಲಿ ಈ ಮಕ್ಕಳು ಊರಿನ ಎಲ್ಲರ ಮುಂದೆ ನಡೆ ಮುಡಿ ಹಾಸುವುದು ತಮಗೆ ಮಾಡಿದ ಅವಮಾನವೆಂದೆ ಭಾವಿಸಿ ಹೋದ ವರ್ಷ ಜಾತ್ರೆಯಲ್ಲಿ ನೆಡೆಮುಡಿ ಹಾಸಲಿಲ್ಲ. ನಡೆ ಮುಡಿ ಇಲ್ಲದೆ ಉತ್ಸವ ಸಾಧ್ಯವೇ ಇಲ್ಲ ಎಂದ ಅಗ್ರಹಾರದವರು ಅದೇ ಕೆಲಸವನ್ನು ಮಾಡಲು ಬೇರೆ ಯಾವ ಪಂಗಡದವರಾಗಲಿ ಮುಂದೆ ಬಂದಿಲ್ಲ , ಪರಿಣಾಮ ಮಡಿವಾಳರ ಮನೆಗೆ ಊರಿಂದ ಬಹಿಷ್ಕಾರ.
<<ಅವೇಕೆ ಜನರನ್ನು ನಿಯಂತ್ರಿಸಲು ವಿಜ್ಞಾನವನ್ನು ಕಟ್ಟಲಿಲ್ಲ?>>

ವಿಜ್ಞಾನ ಮೂಡ ನಂಬಿಕೆ ಮೇಲೆ ಬೆಳಕು ಚೆಲ್ಲುತ್ತದೆ , ಈ ಬದಲಾವಣೆಯಿಂದ ಜನರ ಮೇಲಿನ ಹಿಡಿತ ತಪ್ಪುತ್ತಿತ್ತು.

<<ದಮನಕಾರಿ ನೀತಿಯನ್ನು ಅಳವಡಿಸಿಕೊಳ್ಳಲಿಲ್ಲ? >>
ದಮನಕಾರಿ ನೀತಿಯಿಂದ ಜನ ಬೇಗ ಬಂಡೇಳುವ ಸಾಧ್ಯತೆ ಜಾಸ್ತಿ, ಮೂಡ ನಂಬಿಕೆ ಸೃಷ್ಟಿಸುವುದರಿಂದ ಜನರಲ್ಲಿ ಭಯ ಹುಟ್ಟಿಸಬಹುದು.

sankru's picture
03
Feb
2011
9:33

ನೀವು ನೀಡಿರುವ ಉದಾಹರಣೆ ಹಾಗೂ ನಿಮ್ಮ ಅನುಭವ ಎರಡೂ ಸತ್ಯವಾಗಿವೆ ಅದನ್ನು ನಾನು ಸುಳ್ಳು ಎಂದು ಹೇಳುವುದಿಲ್ಲ. ಆದರೆ ಅದನ್ನು ಹೇಗೆ ವಿಶ್ಲೇಷಿಸುತ್ತೇವೆ ಎಂಬುದು ಮಾತ್ರ ಸಮಸ್ಯೆಯಾಗಿ ಕಾಣುತ್ತದೆ. ಈಗ ನೀವೆ ಹೇಳುವಂತೆ ನಿಮ್ಮ ಅನುಭವಕ್ಕೂ ಮಡೆಸ್ನಾನ ಆಚರಣೆಗೂ ಸಂಬಂಧವಿಲ್ಲ. ಏಕೆಂದರೆ ಮಡಿವಾಳರು ನಿಮ್ಮ ಊರಿನ ಆಚರಣೆಯಲ್ಲಿ ಬಟ್ಟೆ ಹಾಸುವುದನ್ನು ನಿಲ್ಲಿಸಿ ಶಿಕ್ಷೆ ಅನುಭವಿಸಿರುವುದು, ಸುಬ್ರಮಣ್ಯದ ಎಂಜಲೆಲೆಯ ಹೊರಳಾಟದ ಆಚರಣೆಯನ್ನು ಅಗ್ರಹಾರಗಳೇ ಸೃಷ್ಟಿ ಎಂಬುದನ್ನು ಸಾಭೀತು ಪಡಿಸುವುದಿಲ್ಲ. ನೀವು ಹೇಳಿರುವಂತಹ ಆಚರಣೆಗಳಿಗೆ ಪ್ರತಿಯಾಗಿ ಬ್ರಾಹ್ಮಣರಿಲ್ಲದೆ ನಡೆಯುವ ಆಚರಣೆಗಳ ಉದಾಹರಣೆಗಳನ್ನು ನೀಡಬಹುದು.

ಒಂದು ವಾದವನ್ನು ಪುಷ್ಠಿಗೊಳಿಸಲು ಕೇವಲ ಉದಾಹರಣೆಗಳು ಸಾಕಾಗುವುದಿಲ್ಲ. ಉದಾಹರಣೆಗಳು ಇರುವ ವಾದವನ್ನು ಮುಂದೊತ್ತಲು ಸಹಕರಿಸಬಹುದು ಅಷ್ಟೆ. ನಮ್ಮ ವಾದಕ್ಕಿಂತ ನಿಮ್ಮ ವಾದವು ಉತ್ತಮವಾಗಿರಬೇಕಾದರೆ, ನಾವು ಹೇಳುತ್ತಿರುವ ವಿದ್ಯಮಾನದ ವಿವರಣೆ ನಿಮ್ಮ ವಾದದಿಂದ ಇನ್ನೂ ಉತ್ತಮವಾಗಿ ಬರಬೇಕು. ಆದರೆ ನೀವು ನೀಡುತ್ತಿರುವ ಉದಾಹರಣೆ ಯಾವುದನ್ನೂ ಪುಷ್ಠಿಗೊಳಿಸುವುದಿಲ್ಲ, ಜೊತೆಗೆ ಯಾವುದನ್ನೂ ನಿರಾಕರಿಸುವುದಿಲ್ಲ. ನಿಮ್ಮ ಉದಾಹರಣೆಯನ್ನು ನಾನು ಹೇಗೆ ಬೇಕಾದರೂ ಅರ್ಥೈಸಲು ಸಾಧ್ಯವಿದೆ.

<<ದಮನಕಾರಿ ನೀತಿಯನ್ನು ಅಳವಡಿಸಿಕೊಳ್ಳಲಿಲ್ಲ?ದಮನಕಾರಿ ನೀತಿಯಿಂದ ಜನ ಬೇಗ ಬಂಡೇಳುವ ಸಾಧ್ಯತೆ ಜಾಸ್ತಿ, ಮೂಡ ನಂಬಿಕೆ ಸೃಷ್ಟಿಸುವುದರಿಂದ ಜನರಲ್ಲಿ ಭಯ >>
ಮೌಢ್ಯತನವನ್ನು ಬ್ರಾಹ್ಮಣರು ಹುಟ್ಟುಹಾಕಿರುವುದು ಜನರನ್ನು ನಿಯಂತ್ರಿಸಲಿಕ್ಕೆ ಎಂದು ತಮ್ಮ ಹಿಂದಿನ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಿರಿ ಜೊತೆಗೆ ಜನರು ತಿರುಗಿಬೀಳುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಿರಿ. ಆದರೆ ಅದಕ್ಕೆ ವಿರುದ್ದವಾಗಿ ಈಗ ದಮನಕಾರಿ ನೀತಿಯನ್ನು ಅಳವಡಿಸಿಕೊಳ್ಳದಿದ್ದರೂ ಜನರು ಆ ಆಚರಣೆಯನ್ನು (ಅದು ನಿಮ್ಮ ಊರಲ್ಲಿ) ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಿರಿ. ಯಾವುದೇ ಆಚರಣೆಯಾಗಲಿ ಜನರಿಗೆ ಸರಿ ಅನಿಸುವ ತನಕ ಮಾಡುತ್ತಾರೆ, ಅದನ್ನು ನಿಲ್ಲಿಸಲು ಒಳ್ಳೆಯ ಕಾರಣ ದೊರಕಿದರೆ ನಿಜವಾಗಿಯೂ ಅವುಗಳನ್ನು ನಿಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ ನೀವು ನೀಡಿದ ಉದಾಹರಣೆಯಿಂದಲೇ ಆಚರಣೆಗಳು ಅಗ್ರಹಾರಗಳ ಸೃಷ್ಟಿ ಎಂದು ಸಾಭೀತಾಗುವುದಿಲ್ಲ.

ಆಚರಣೆಗಳು ಹೀಗೆ ಜರುಗುತ್ತಿವೆ ಎಂಬುದನ್ನಷ್ಟೆ ಸದ್ಯಕ್ಕೆ ಹೇಳಬಹುದೇ ಹೊರತು, ಯಾರಿಂದ ಯಾವುದು ಸೃಷ್ಟಿಯಾಯಿತು ಎಂದು ಹೇಳಲು ಸಾಧ್ಯವಿಲ್ಲ ಎಂಬುದು ನಮ್ಮ ಅಭಿಮತ

narabhangi's picture
02
Feb
2011
6:24

ನಿಮ್ಮ ಪ್ರಕಾರವೇ ದಿಕ್ಕು ತಪ್ಪುತ್ತದೆ . ನೀವೆ ಹೇಳಿ ಈಗ ನನಗೆ ಸಮಜಾಯಿಷಿ ಕೊಡುವ ಪ್ರಯತ್ನ ... ತಮಾಷೆಯಾಗಿದೆ!

asuhegde's picture
02
Feb
2011
5:02

ಶ್ರೀ ಕೆ.ವಿ. ಅಕ್ಷರ ತಮ್ಮ ಬರಹದಲ್ಲಿ "ಮಾನ ಅವಮಾನವನ್ನು", ಅವಮಾನಕ್ಕೆ ಗುರಿಯಾದ ವ್ಯಕ್ತಿಗಳೇ ನಿರ್ಧರಿಸಬೇಕು ಅನ್ನುವ ಮಾತನ್ನು ಹೇಳುತ್ತಾ, ಕ್ರಿಕೆಟ್ ಆಟಗಾರರ ಹರಾಜು ಜಾಸ್ತಿ ಅವಮಾನಕರ ಅನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಅದರ ಬಗ್ಗೆ "ಅವಧಿ" ಯಲ್ಲಿ ಮತ್ತಿತರ ತಾಣಗಳಲ್ಲಿ, ಸುದೀರ್ಘ ಚರ್ಚೆಗಳು ನಡೆದಿವೆ.

ಅವರ "ಮಾನಾಪಮಾನವನ್ನು ಆಯಾ ವ್ಯಕ್ತಿಗಳಿಗೇ ಬಿಡಬೇಕು" ಎನ್ನುವ ಮಾತನ್ನು ಒಪ್ಪಿಕೊಂಡು ಮುಂದುವರೆಯುವುದಾದರೆ, ಅವರ ಪೂರ್ತಿ ಬರಹ ತನ್ನ ಔಚಿತ್ಯವನ್ನೇ ಕಳೆದುಕೊಳ್ಳುತ್ತದೆ. ಏಕೆಂದರೆ ಎರಡರ ಬಗ್ಗೆಯೂ ನಾವು ಮೌನಿಗಳಾಗಬೇಕು, ಅವಮಾನಿತರಾದ ವ್ಯಕ್ತಿಗಳು ನಮ್ಮ ಸಲಹೆ ಕೇಳುವ ತನಕ.

ಅಕ್ಷರ ಅವರ ಅನಿಸಿಕೆಗಳನ್ನು ಬದಿಗಿಟ್ಟು, ತಮ್ಮ ಈ ಬರಹವನ್ನು ಓದುವ ಯತ್ನ ಮಾಡುವಾಗ, ಇದು ಚಿಂತನಾರ್ಹ ಬರಹವೆಂಬ ಅನಿಸಿಕೆ ಮೂಡುತ್ತದೆ.

ಆದರೆ ಈ ಸಮಸ್ಯೆಗಳಿಗೆ ದಿನಬೆಳಗಾಗುವುದರಲ್ಲಿ ಪರಿಹಾರ ದೊರೆಯದು, ದೊರೆಯಲೂ ಬಾರದು. ಸಾಮಾಜಿಕ ಬದಲಾವಣೆಗಳು ಕಾಲಾನು ಕಾಲದಲ್ಲಿ ನಡೆಯುತ್ತಾ ಹೋಗುತ್ತವೆ. ನಾಡಿನ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಯಾದರೆ ಎಲ್ಲವೂ ಸಾಧ್ಯ. ಯಾವುದೇ ಪಕ್ಷಪಾತ ಧೋರಣೆಯನ್ನು ಹೊರಗೆಡಹದ ಪಠ್ಯ ಪುಸ್ತಕಗಳು, ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀತಿ ಜಾರಿಗೆ ಬಂದಲ್ಲಿ, ಯಾವುದೇ ಸಂಘರ್ಷಗಳಿಲ್ಲದೇ ಸಾಮಾಜಿಕ ಬದಲಾವಣೆಗಳು ಕಂಡುಬಂದಾವು. ಆಚರಣೆಗಳು ಬೇಕೋ ಬೇಡವೋ, ಅಥವಾ ಸರಿಯೋ ತಪ್ಪೋ ಅನ್ನುವುನ್ನು, ಕಣಕ್ಕಿಳಿಯದ, ದೂರದಲ್ಲಿ ಕೂತ ಅತಿ ಬುದ್ಧಿಜೀವಿಗಳೆನಿಸಿಕೊಂಡವರು ನಿರ್ಧರಿಸಲಾಗದು.

ಆದರೆ ಆ ಬಗ್ಗೆ ವಿಚಾರ ವಿನಿಮಯ ನಡೆಯಬಾರದೆಂದು ನಾನು ಅನ್ನಲಾರೆ. ಇದು ಸ್ವಾಗತಾರ್ಹ. ಹಾಗಿಲ್ಲವಾದಲ್ಲಿ ನನ್ನ ಪ್ರತಿಕ್ರಿಯೆಯೇ ಅತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತಿತ್ತು.

ಆದಷ್ಟು ಈ ಆಚರಣೆಗಳ ಮತ್ತು ಆಚರಣೆಗಳಲ್ಲಿ ಭಾಗಿಯಾದವರ ಹತ್ತಿರ ಹೋಗಿ, ಸಂವಾದ ನಡೆಸಿ, ಅರಿತು, ವಿಮರ್ಶಿಸುವ ಅಗತ್ಯ ಇದೆ ಎನ್ನುವುದೇ ನನ್ನ ಒಟ್ಟಾರೆ ಅಭಿಪ್ರಾಯ.

-ಆಸು ಹೆಗ್ಡೆ

sankru's picture
02
Feb
2011
5:53

ಅಸು ಹೆಗ್ಡೆಯವರೆ

ನಿಮ್ಮ ಕೆಲವು ವಿಚಾರಗಳನ್ನು ನಾನೂ ಒಪ್ಪುತ್ತೇನೆ. ೧. ಅದೆಂದರೆ ಬುದ್ಧಿಜೀವಿಗಳು ಜನರ ನಡವಳಿಕೆಗಳನ್ನು ನಿರ್ಧರಿಸುವ ಕೆಲಸಕ್ಕೆ ಹೋಗಬಾರದು. ಅದು ನಿಜ, ನನಗೆ ಅದರಲ್ಲೇನೂ ಸಂಶಯವಿಲ್ಲ. ಆದರೆ ಬುದ್ಧಿಜೀವಿಗಳು ಹಾಗೂ ಚಿಂತಕರುಗಳು ಅದನ್ನು ಅರ್ಥೈಸುವ ಹಾಗೂ ವಿವರಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಅದು ಸಮಾಜವಿಜ್ಞಾನ ಮಾಡುವ ಕೆಲಸವೂ ಆಗಿದೆ. ಆದರೆ ಇತ್ತೀಚೆಗೆ ಮಡೆಸ್ನಾನದ ಕುರಿತು ಬಂದಿರುವಂತಹ ಬಹುತೇಕ ಬರಹಗಳು ಅದನ್ನು ನಿಲ್ಲಿಸಬೇಕೆಂಬ ಧೋರಣೆಯನ್ನು ಹೊಂದಿವೆ. ಅದನ್ನು ನಿಲ್ಲಿಡುವ ಹಕ್ಕು ಅದರಲ್ಲಿ ಭಾಗವಹಿಸುವ ಜನರಿಗೆ ಮಾತ್ರವಿದೆ. ಅಂತಹ ಆಚರಣೆಯಿಂದ ಭಾಗವಹಿಸುವವರಿಗೆ ಹಾಗೂ ಇತತರಿಗೆ ಏನಾದರೂ ತೊಂದರೆಯಾಗುತ್ತಿದೆ ಎಂದು ಖಚಿತವಾದರೆ ಅವರೂ ನಿಲ್ಲಿಸಲೂಬಹುದು, ಇಲ್ಲ ಕಾನೂನಾತ್ಮಕವಾಗಿ ಯಾರಾದರೂ ನಿಲ್ಲಿಸಬಹುದು. ಆದರೆ ಅದರಿಂದ ತೊಂದರೆ ಏನಾಗುತ್ತಿದೆ ಎಂದು ವಿವರಿಸದೆ ಕೇವಲ ಮೌಢ್ಯ, ಮೂಢತನ ಎಂಬಂತಹ ನಿರ್ಣಯಗಳನ್ನು ನೀಡಿದರೆ ಅದು ಯಾರಿಗೂ ಅರ್ಥವಾಗುವುದಿಲ್ಲ, ವಿಶೇಷವಾಗಿ ಅದರಲ್ಲಿ ಭಾಗವಹಿಸುವ ಜನರಿಗೆ.
೨. ಆಚರಣೆಗಳನ್ನು ಅರ್ಥಮಾಡಿಕೊಳ್ಳಲು ಅದರಲ್ಲಿ ಭಾಗವಹಿಸುವವರ ಸಂದರ್ಶನ, ಅವರ ಅನಿಸಿಕೆಗಳು ತುಂಬಾ ಮುಖ್ಯವಾದವು ಎಂಬುದನ್ನೂ ನಾನು ಒಪ್ಪುತ್ತೇನೆ.

ಅರ್ಥವಾಗದ ಸಂಗತಿ ಎಂದರೆ
೧. ಶಿಕ್ಷಣಪದ್ಧತಿ ಬದಲಾದೊಡನೆ ಸಾಮಾಜಿಕ ಬದಲಾವಣೆಯಾಗುತ್ತದೆ ಎಂಬುದು. ನೋಡಿ, ಮೇಕಾಲೆ ಭಾರತಕ್ಕೆ ಬಂದ ನಂತರ ಆಂಗ್ಲ ಶೀಕ್ಷಣವನ್ನು ಭಾರತದಲ್ಲಿ ಜಾರಿಗೆ ತಂದರು, ಸ್ವತಂತ್ರ ನಂತರ ಆಧುನಿಕ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯನ್ನು ನಾವು ಅಳವಡಿಸಿಕೊಂಡೆವು. ಅದರ ಪರಿಣಾವೇನು? ನಮ್ಮ ಬಹುತೇಕ ಆಚರಣೆಗಳು ಮೂಢತನದಿಂದ ಕೂಡಿವೆ, ಭಾರತ ಅತ್ಯಂತ ಹಿಂದುಳಿದಿರುವ ದೇಶ, ಕೆಲಸಕ್ಕೆ ಬಾರದ ಆಧ್ಯಾತ್ಮವನ್ನು ಹೊಂದಿದ ದೇಶ, ವ್ಯಕ್ತಿಗಳನ್ನು ಬೆಳೆಯಲು ಬಿಡದ ಸಾಮಾಜಿಕ ವ್ಯವಸ್ಥೆ ಎಂಬಿತ್ಯಾದಿ ಚಿತ್ರಣಗಳನ್ನು ನಮ್ಮ ಬಗ್ಗೆ ನಾವು ಇಟ್ಟುಕೊಂಡಿದ್ದೇವೆ. ಆದ್ದರಿಂದಲೇ ಪ್ರಗತಿಪರರ ವಿಚಾರಗಳು ಹೆಚ್ಚಾಗಿ ಎಲ್ಲವನ್ನೂ ಟೀಕಿಸುವ ಹಾದಿಯಲ್ಲಿವೆ. ನಾವು ಪಡೆದ ಶಿಕ್ಷಣದಿಂದ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೆ, ಎಂತಹ ಶಿಕ್ಷಣವನ್ನು ನಾವು ಪಡೆಯಬೇಕು ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ನಮ್ಮ ಹಳ್ಳಿಗಳ ಕಡೆ ಹೇಳುವುದು: ಏನೋ ನಾಲ್ಕು ಅಕ್ಷರ ಕಲ್ತಿದಿಯ ಅಂತ ಇಲ್ಲದ್ದೆಲ್ಲಾ ಮಾಡಬೇಡ ಅಂತ. ನನಗನಿಸುವಂತೆ ಸಧ್ಯದ ಶಿಕ್ಷಣ ಪದ್ಧತಿಯಿಂದ ನಮ್ಮ ಸಾಮಾಜಿಕ ಬದಲಾವಣೆಯಾಗುವುದು ಕನಸಿನ ಮಾತು. ಏಕೆಂದರೆ ಇಂತಹ ಶಿಕ್ಷಣದಿಂದ ಸಮಾಜದ ಪರಿವರ್ತನೆಯಾಗಬೇಕೆಂದು ಹೋರಾಡುವ ಮನೋಭಾವನ ಬರುತ್ತದೆಯೇ ವಿನಃ, ನಮ್ಮ ಸಮಾಜವನ್ನು ಮೊದಲು ಅರ್ಥಮಾಡಿಕೊಳ್ಳಬೇಕೆಂಬ ಕನಿಷ್ಠತಮ ಸಹನೆಯೂ ಇರುವುದಿಲ್ಲ.

ನನಗನಿಸಿದ್ದು....

asuhegde's picture
02
Feb
2011
6:36

<<ನೋಡಿ, ಮೇಕಾಲೆ ಭಾರತಕ್ಕೆ ಬಂದ ನಂತರ ಆಂಗ್ಲ ಶೀಕ್ಷಣವನ್ನು ಭಾರತದಲ್ಲಿ ಜಾರಿಗೆ ತಂದರು, ಸ್ವತಂತ್ರ ನಂತರ ಆಧುನಿಕ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯನ್ನು ನಾವು ಅಳವಡಿಸಿಕೊಂಡೆವು. ಅದರ ಪರಿಣಾವೇನು? ನಮ್ಮ ಬಹುತೇಕ ಆಚರಣೆಗಳು ಮೂಢತನದಿಂದ ಕೂಡಿವೆ, ಭಾರತ ಅತ್ಯಂತ ಹಿಂದುಳಿದಿರುವ ದೇಶ, ಕೆಲಸಕ್ಕೆ ಬಾರದ ಆಧ್ಯಾತ್ಮವನ್ನು ಹೊಂದಿದ ದೇಶ, ವ್ಯಕ್ತಿಗಳನ್ನು ಬೆಳೆಯಲು ಬಿಡದ ಸಾಮಾಜಿಕ ವ್ಯವಸ್ಥೆ ಎಂಬಿತ್ಯಾದಿ ಚಿತ್ರಣಗಳನ್ನು ನಮ್ಮ ಬಗ್ಗೆ ನಾವು ಇಟ್ಟುಕೊಂಡಿದ್ದೇವೆ. ಆದ್ದರಿಂದಲೇ ಪ್ರಗತಿಪರರ ವಿಚಾರಗಳು ಹೆಚ್ಚಾಗಿ ಎಲ್ಲವನ್ನೂ ಟೀಕಿಸುವ ಹಾದಿಯಲ್ಲಿವೆ. ನಾವು ಪಡೆದ ಶಿಕ್ಷಣದಿಂದ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೆ, ಎಂತಹ ಶಿಕ್ಷಣವನ್ನು ನಾವು ಪಡೆಯಬೇಕು ಎಂಬ ಪ್ರಶ್ನೆ ಕಾಡುತ್ತದೆ.>>

ತಮ್ಮ ಈ ಮಾತುಗಳಲ್ಲೇ, ನಮ್ಮ ಈಗಿನ ಶಿಕ್ಷಣ ಪದ್ಧತಿ ಸರಿ ಇಲ್ಲ ಎಂಬುದರ ಸೂಚನೆ ಇದೆ ಎಂದು ನನಗನಿಸುತ್ತಿದೆ.

ಇಂಥ ಗಂಭೀರ ವಿಶ್ಃಅಯಗಳ ಮೇಲಿನ ಚರ್ಚೆಗೆ ನನ್ನನ್ನು ಒಡ್ಡುವಷ್ಟು ಜ್ಞಾನಿ ನಾನಲ್ಲ.

ತಮ್ಮಗಳ ಪರಿಶ್ರಮವನ್ನು ನಾನು ಒಪ್ಪುತ್ತೇನೆ. ಆದರೆ ನಾವು ಜನರಿಗೆ ಆದಷ್ಟು ಹತ್ತಿರ ಹೋಗಿ ಸಂವಾದ ನಡೆಸಿ ವಿಮರ್ಶಿಸಬೇಕೆಂಬುದೇ ನನ್ನ ಆಶಯ.

-ಆಸು
(ನನ್ನಲ್ಲಿ ಅಸು ಇದೆ, ಆದರೆ ನಾನೇ ಅಸು ಅಲ್ಲ. ನಾನು ಆಸು ಹೆಗ್ಡೆ :) )

sankru's picture
03
Feb
2011
6:13

ನಿಜ ಇಂದಿನ ಶಿಕ್ಷಣ ಪದ್ಧತಿ ಸರಿ ಇಲ್ಲ, ಯಾವ ಅರ್ಥದಲ್ಲಿ ಎಂದರೆ ನಮ್ಮ ಕುರಿತು ಇರುವ ಚಿತ್ರಣಗಳು ಪಾಶ್ಚಾತ್ಯರು ನೀಡಿದಂತವುಗಳಾಗಿದ್ದು, ನಮ್ಮ ಶಿಕ್ಷಣ ಅದನ್ನೆ ಪನರುತ್ಪಾದಿಸಿ ನಮಗೆ ಕಲಿಸುತ್ತಿದೆ. ನಮ್ಮನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕಲಿಸುವಲ್ಲಿ ಸೋಲುತ್ತಿದೆ

manju787's picture
04
Feb
2011
12:23

ಒ೦ದು ಉತ್ತಮ ಚರ್ಚೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಇ೦ದಿನ ಶಿಕ್ಷಣ ಪದ್ಧತಿ ಬ್ರಿಟಿಷರು ರಚಿಸಿದ "ಕಾರಕೂನ"ರನ್ನು ತಯಾರಿಸುವ ಶಿಕ್ಷಣ ಪದ್ಧತಿಯಾಗಿದೆ, ಅದಕ್ಕೇ ನಾವು ಇ೦ದಿಗೂ ಜೋತು ಬಿದ್ದಿದ್ದೇವೆ. ಆಮೂಲಾಗ್ರ ಬದಲಾವಣೆಯಾಗಬೇಕಾದರೆ ಶಿಕ್ಷಣ ಪದ್ಧತಿಯಲ್ಲಿ ಮೊದಲು ಬದಲಾವಣೆಯಾಗಬೇಕು. ಆಗ ಎಲ್ಲ ಮೂಢ ನ೦ಬಿಕೆಗಳೂ, ಅವಾಸ್ತವಿಕ ಆಚರಣೆಗಳು ತ೦ತಾನೇ ನಿಲ್ಲುತ್ತವೆ. ವಿದ್ಯಾವ೦ತರಿ೦ದ ತು೦ಬಿರುವ ಬೆ೦ಗಳೂರು ನಗರ ಸೂರ್ಯಗ್ರಹಣದ ದಿನ ಸ್ತಬ್ಧವಾಗುತ್ತದೆ. ಇದು ನಮ್ಮ ವಿದ್ಯೆಯ ಮಟ್ಟವನ್ನು ಸಾರಿ ಹೇಳುವುದಿಲ್ಲವೇ? ಮಾಟ ಮ೦ತ್ರ ಮಾಡಿದ್ದಾರೆ, ವಿಧಾನಸೌಧಕ್ಕೆ ಹೋದರೆ ಮನೆಗೆ ಬರುವುದೇ ಗ್ಯಾರ೦ಟಿಯಿಲ್ಲ ಎನ್ನುವ ಮುಖ್ಯಮ೦ತ್ರಿಗಳು ಇರುವಾಗ ಜನಸಾಮಾನ್ಯರನ್ನು ಅವರ ಕ೦ದಾಚಾರಗಳಿಗಾಗಿ ದೂಷಿಸಿ ಫಲವೇನು? ಚರ್ಚೆ ಹೀಗೆಯೇ ಮು೦ದುವರೆಯಲಿ, ಇನ್ನಷ್ಟು ತಾರ್ಕಿಕ ವಿಚಾರಗಳನ್ನು ಸ೦ಪದಿಗರ ಮು೦ದಿಡಲಿ.

sankru's picture
04
Feb
2011
2:52

<<ವಿದ್ಯಾವ೦ತರಿ೦ದ ತು೦ಬಿರುವ ಬೆ೦ಗಳೂರು ನಗರ ಸೂರ್ಯಗ್ರಹಣದ ದಿನ ಸ್ತಬ್ಧವಾಗುತ್ತದೆ.>>

ನಮ್ಮ ವಿದ್ಯೆಗೂ ನಮ್ಮಸ್ಥಬ್ದತೆಗೂ ಸಂಬಂಧ ಇಲ್ಲಾ ಎಂದಾಯಿತು

manju787's picture
05
Feb
2011
12:28

ಆ ಸ್ತಬ್ಧತೆಯನ್ನು ನಿವಾರಿಸುವಲ್ಲಿ ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆ ಎ೦ದು ನನ್ನ ಅಭಿಪ್ರಾಯ.

sankru's picture
06
Feb
2011
6:25

ನಮ್ಮ ಪ್ರಸ್ತುತ ಶಿಕ್ಷಣದಿಂದ ಅದನ್ನು ನಿವಾರಿಸುವುದಿರಲಿ, ಆ ಸ್ತಬ್ದತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ

sankru's picture
06
Feb
2011
6:26

ನಮ್ಮ ಪ್ರಸ್ತುತ ಶಿಕ್ಷಣದಿಂದ ಅದನ್ನು ನಿವಾರಿಸುವುದಿರಲಿ, ಆ ಸ್ತಬ್ದತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ

narabhangi's picture
02
Feb
2011
6:20

ಇ೦ದಿನ ಶಿಕ್ಷಣ ಜನರ ಮನಸ್ಸನ್ನು ಪರಿವರ್ತನೆ ಮಾಡುತ್ತದೆ ಎ೦ಬುದು ಒ೦ದು ಭ್ರಮೆ. ಒ೦ದು ರಾಜ್ಯದ ಮುಖ್ಯಮ೦ತ್ರಿ ನನ್ನನ್ನು ಮುಗಿಸಲು ಮಾಟ, ವಾಮಚಾರ ಮಾಡುತ್ತಿದ್ದಾರೆ ಎ೦ದು ಹಲುಬುವುದು ಖ೦ಡಿತಾ ಶಿಕ್ಷಣದ ಫಲವಲ್ಲ. ಕ೦ಡ ಕ೦ಡ ದೇವರನ್ನು ಮುಗಿವ ಕ೦ಡ ಕ೦ಡಲ್ಲಿ ಹೋಮ ಮಾಡಿಸುವ ಸುಶಿಕ್ಷಿತ ನಾಯಕರು ಮೌಢ್ಯವನ್ನು ತೊಲಗಿಸಲಾರರು. ಜನರಲ್ಲಿ ಒ೦ದು ರೀತಿಯ ಶರಣಾಗತಿಯ ಪ್ರಜ್ಞೆ, ಅಲೌಕಿಕದಲ್ಲೆಲ್ಲೋ ಅರಸುವ ಸಾ೦ತ್ವನದ ದಟ್ಟ ಪ್ರಭಾವ, ಬಹುಶಃ ಮೌಡ್ಯವನ್ನು ಮು೦ದೂಡಬಹುದು ಅಥವಾ ಪ್ರಬಲಗೊಳಿಸಬಹುದು. ಒಟ್ಟಾರೆ ಈ ಮೌಡ್ಯದ ವಿರುದ್ಧ ಅನುಕ೦ಪರಹಿತ ವಿವೇಚನೆರಹಿತ ಸ೦ಘರ್ಷ ಸಾಧ್ಯವಿಲ್ಲ ಎ೦ಬುದನ್ನು ನಾವೆಲ್ಲರೂ ಮನಗಾಣಬೇಕು.

Narayana's picture
02
Feb
2011
10:37

ಸಂತೋಷ್ ಕುಮಾರ್ ಮತ್ತು ಪ್ರವೀಣ್

ಒಳ್ಳೆಯ ಸಮತೂಕದ ಬರಹ. ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿ ವಿಶ್ಲೇಷಿಸಿದ್ದೀರಿ.
ಸಂಪದಕ್ಕೆ ಮತ್ತೆ ಮತ್ತೆ ಬರುವಂತೆ ಮಾಡುವುದು ಇಂಥಾ ಅಪರೂಪದ ಬರಹಗಳು. ಇರಲಿ.

ನಾನು ಅಕ್ಷರ ಬರೆದ ಲೇಖನ ಮತ್ತು ಅದಕ್ಕೆ ಬಂದ ಅನೇಕ ಪರ ವಿರೋಧದ ಪ್ರತಿಕ್ರಿಯೆಗಳು ಇವುಗಳನ್ನು ಕೇವಲ ಅವಧಿ ಮತ್ತಿತರ ಅಂತರಜಾಲ ತಾಣಗಳಲ್ಲಿ ಓದಿದ್ದು ಎಷ್ಟೋ ಅಷ್ಟೇ. ಪ್ರಜಾವಾಣಿ ಓದಿಲ್ಲ. ನನ್ನ ಅಭಿಪ್ರಾಯ ಇಂತಿದೆ.

ಅಕ್ಷರರು ಯಾವುದೇ ಕ್ರಿಯೆಯಿಂದ ಅವಮಾನವಾಗಿದೆಯೋ ಎಂಬುದನ್ನು ಆ ಕ್ರಿಯೆಯಲ್ಲಿ ತೊಡಗಿದವರು ನಿರ್ಧರಿಸಬೇಕೇ ವಿನಃ ಬೇರೆಯವರಲ್ಲ ಎನ್ನುತ್ತಾರೆ. ಇದನ್ನು ಒಪ್ಪುವುದು ಕಷ್ಟ. ಪ್ರತಿಕ್ರಿಯೆಗಳಲ್ಲಿ ಆಗಲೇ ಬಂದಿರುವಂತೆ ಈ ವಾದ ರಾಜಾರಾಮ ಮೋಹನ ರಾಯ್ ರಂತಹ ಸುಧಾರಕರ ಪಾತ್ರವನ್ನು ಸತಿಯಂತಹ , ಬಾಲ್ಯವಿವಾಹದಂತಹ ಆಚರಣೆಯಲ್ಲಿ ಸ್ವತಹ ತೊಡಗಿರಲಿಲ್ಲ ಅನ್ನುವ ಏಕಮೇವ ಕಾರಣಕ್ಕೆ ಅಲ್ಲಗೆಳೆಯುತ್ತದೆ. ಇದೇ ಮಾತು ಗಾಂಧಿಯವರು ಅಸ್ಪೃಶ್ಯತೆಯ ವಿರುದ್ಧದ ಹೋರಾಟಕ್ಕೂ ಅನ್ವಯಿಸುತ್ತದೆ. ಗಾಂಧಿ ಸ್ವತಹ ಅಸ್ಪೃಶ್ಯತೆಯನ್ನು ಅನುಭವಿಸಿದವರಲ್ಲ.

ಆದರೆ , ಯಾವುದೇ ಆಚರಣೆಯ ವಿರುದ್ಧ ಯಾರೋ ಸಾರ್ವಜನಿಕರು (ಪ್ರಗತಿವಾದಿ, ವಿಚಾರವಾದಿ ಯಾರೇ ಆಗಿರಲಿ) ತಮ್ಮ ಮಾನದಂಡದ ಪ್ರಕಾರ ಮೌಢ್ಯ ಎಂದು ನಿರ್ಧರಿಸಿ , ಅದಕ್ಕೆ ಒಂದು ಜಾತಿಯನ್ನು ಅದಕ್ಕೆ ಎಳೆತಂದು , ಅದರ ಮೇಲೆ ಷಡ್ಯಂತ್ರದ ಆರೋಪ ಹೊರೆಸುವುದು ಇತ್ಯಾದಿಗಳು ಕೂಡಾ ಒಪ್ಪುವುದಕ್ಕೆ ಅಷ್ಟೇ ಕಷ್ಟವಾದ ಸಂಗತಿ.

<ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಎಂಬುದು ವೇದ್ಯವಾಗುತ್ತದೆ. ಇದರ ಸ್ಪಷ್ಟ ಸೂಚನೆ ಎಂದರೆ ಭಾಗವಹಿಸುವವರು ಎಷ್ಟೇ ವಿರೋಧವಿದ್ದರೂ ಭಾಗವಹಿಸುತ್ತಲೇ ಇದ್ದಾರೆ, ವಿರೋಧಿಸುವವರು ಜನರು ಎಷ್ಟೇ ನಿರಾಸಕ್ತಿ ತೋರಿದರೂ ವಿರೋಧಿಸುತ್ತಲೇ ಇದ್ದಾರೆ. ಇವರಿಬ್ಬರ ನಡುವೆ ಯಾವುದೋ ಒಂದು ತೆರನಾದ ಕಂದರವಿದೆ ಎಂಬುದು ನಮ್ಮ ಅಭಿಪ್ರಾಯ. >
ಈ ಕಂದರವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇವೆರಡು ಧಾರೆಗಳ ಮೂಲವನ್ನು ನೋಡಬೇಕು ಅನ್ನಿಸುತ್ತದೆ.

ಪ್ರಗತಿಪರರ ಆಲೋಚನೆಗಳು ವಿಚಾರಪ್ರಧಾನವಾದವು. ಇಲ್ಲಿ ಬುದ್ಧಿಯ ಉಪಯೋಗ ಮುಖ್ಯ. ತಮಗೆ ಕಾರ್ಯ ಕಾರಣ ಸಂಬಂಧ ಕಾಣದ ಯಾವುದೇ ಆಚರಣೆಯನ್ನು ಇವರು ಮೌಢ್ಯವೆಂದು ನಿರ್ಧರಿಸಬಹುದು. ಮಡೆ ಸ್ನಾನ ಮಾಡುವುದಕ್ಕೂ , ಅದನ್ನು ಮಾಡಿದವರ ಮನಸ್ಸಿನ ಇಚ್ಚೆ ಈಡೇರುವುದಕ್ಕೂ ಕಾರ್ಯ ಕಾರಣ ಸಂಬಂಧವನ್ನು ತಾರ್ಕಿಕವಾಗಿ ಹುಡುಕಲಾಗುವುದಿಲ್ಲ. ಆದ್ದರಿಂದ ಅದು ಮೌಡ್ಯ ಎಂದು ಅವರು ತೀರ್ಮಾನಕ್ಕೆ ಬರಬಹುದು. (ಇದು ಬ್ರಾಹ್ಮಣರ ಹುನ್ನಾರು ಇತ್ಯಾದಿ ಇತ್ಯಾದಿ ವಾದಗಳು ಬೇರೆಯೇ ವಿಷಯ. ಅದನ್ನು ನಾನಿಲ್ಲಿ ಚರ್ಚಿಸುವುದಿಲ್ಲ.)

ಮಡೆಸ್ನಾನದಂಥಾ ಆಚರಣೆ ಮಾಡುವವರದ್ದು ಭಾವನಾಪ್ರಧಾನ ಪ್ರಪಂಚ. ಅವರಿಗೆ ಮಡೆ ಸ್ನಾನ ಮಾದುವುದರಿಂದ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ಅಚಲ ನಂಬಿಕೆ. ಅದು ಯಾಕೆ, ಹೇಗೆ ಎನ್ನುವು ತರ್ಕಬದ್ಧ ಉತ್ತರ ಅವರಿಗೆ ಗೊತ್ತಿಲ್ಲ, ಅಷ್ಟೇ ಅಲ್ಲ ಅದು ಬಹುಷ: ಅವರಿಗೆ ಅಪ್ರಸ್ತುತ. ನೀವು ಗಮನಿಸಿದಂತೆ ಅದಕ್ಕೇ ಅವರು ಈ ರೀತಿಯ ಚರ್ಚೆಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ. ಅವರಿಗೆ ನಂಬಿಕೆ ಇಲ್ಲದವರಿಗೆ proove ಮಾಡಿ ಏನನ್ನೂ ಸಾಧಿಸಬೇಕಾಗಿಲ್ಲ.

ಹೀಗೆ ಬುದ್ಧಿಮೂಲದ ವಿಚಾರಗಳು ಶ್ರದ್ಧಾಮೂಲದ ನಂಬಿಕೆಗಳನ್ನು ಪ್ರಶ್ನಿಸುವಾಗ common ground ಇಲ್ಲವಾಗಿ ಕಂದರ ನಿರ್ಮಾಣವಾಗುತ್ತದೆ ಅನ್ನಿಸುತ್ತದೆ.

ಇನ್ನೊಂದು ವಿಚಾರ. ನಮ್ಮ ಬಹುತೇಕ ಪ್ರಗತಿಪರರು, ವಿಚಾರವಾದಿಗಳು ಪಶ್ಚಿಮದ ಶಿಕ್ಷಣ ಪ್ರೇರಿತರಾಗಿರುವುದು ಯಾಕೆ ? ನಮ್ಮ thought leadership ಬರಿಯ ಇಂಥವರ ಕೈಯಲ್ಲಿಯೇ ಇರುವುದು ಯಾಕೆ? ಹಾಗೆಯೇ faith leadership ಬರಿಯ ಧಾರ್ಮಿಕ ಮುಖಂಡರುಗಳು , ಸ್ವಾಮಿಗಳು ಇಂಥವರ ಕೈಯಲ್ಲಿರುವುದು ಯಾಕೆ?
ಈ ಧ್ರುವೀಕರಣ ಇಲ್ಲದೆ ನಮಗೆ ಮಿಶ್ರ ಅಭಿಪ್ರಾಯಗಳು ಯಾಕೆ ಕೇಳಸಿಗುವುದಿಲ್ಲ. ಉದಾಹರಣೆಗೆ ವಿಚಾರವಾದಿಗಳು ವೇದವನ್ನು ಅರ್ಥೈಸುವ ಅಥವಾ ಧಾರ್ಮಿಕ ಮುಖಂಡರು ಹಳೆಯ ಆಚರಣೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಎಷ್ಟು ಪ್ರಸ್ತುತ ಎಂದು ಒರೆಗೆ ಹಚ್ಚುವ ಸಂಗತಿ ನಮಗೇಕೆ ಆಗಾಗ ಕಾಣುವುದಿಲ್ಲ? ನನಗನ್ನಿಸುತ್ತದೆ ಎಲ್ಲಿಯವರೆಗೆ ಈ ಧ್ರುವೀಕರಣ ಇರುತ್ತದೆಯೋ ಅಲ್ಲಿಯವರೆಗೆ ಕಂದಕ ಉಳಿದೇ ಇರುತ್ತದೆ.

ನಿಮ್ಮದೇನು ಅಭಿಪ್ರಾಯ?

ನಾರಾಯಣ

sankru's picture
03
Feb
2011
6:15

ನಾರಾಯಣ್ ರವರೆ
ನಿಮ್ಮ ಪ್ರತಿಕ್ರಿಯೆಗೆ ಮೊದಲು ಧನ್ಯವಾದ ಅರ್ಪಿಸಲು ಇಚ್ಚಿಸುತ್ತೇನೆ. ಏಕೆಂದರೆ ನಾವು ನಮ್ಮ ಬರವಣಿಗೆಯಲ್ಲಿ ನಮ್ಮ ವಾದವನ್ನು ಎಲ್ಲಿಗೆ ತಂದು ನಿಲ್ಲಿಸುತ್ತೇವೆಯೋ, ಅಲ್ಲಿಂದ ಮುಂದೆ ಹೋಗುವ ಪ್ರಯತ್ನವನ್ನು ನೀವು ಮಾಡಿದ್ದೀರಿ. ತುಂಬಾ ಉತ್ತಮ ಪ್ರಯತ್ನ..

ನೀವು ಹೇಳುತ್ತಿರುವುದು ನೂರಕ್ಕೆ ನೂರು ನಿಜ, ವಿಚಾರವಂತರ ವಿಚಾರವಂತಿಕೆ, ಜನಸಮುದಾಯದ ಶ್ರದ್ಧಾನಂಬಿಕೆ ಬೇರೆ ಬೇರೆಯಾಗಿ ದೃವೀಕರಣಗೊಂಡಿರುವುದು ಅವರ ನಡುವೆ ಕಂದರ ಏರ್ಪಟ್ಟಿರುವುದಕ್ಕೆ ಪ್ರಮುಖವಾದ ಕಾರಣವಾಗಿದೆ. ಇದು ನಮ್ಮ ಸಮಾಜವನ್ನು ಹಾಗೂ ವಿಚಾರವಂತರ ಚರ್ಚೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾಥಮಿಕವಾದ ಅಂಶವಾಗಿದೆ. ನಾವು ಈ ಅಂಶವನ್ನೂ ಒಪ್ಪಿಕೊಂಡು ಅದಕ್ಕಿಂತ ಮುಂದೆ ಹೋಗುವ ಅಗತ್ಯವಿದೆ. ಏಕೆಂದರೆ ನಮ್ಮ ಸಮಸ್ಯೆ ಹಾಗೂ ವಾಸ್ತವ ಎರಡೂ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತಾ ಹೋಗುತ್ತವೆ. ಆದ್ದರಿಂದ ನಿಮ್ಮ ಪ್ರಶ್ನೆಯನ್ನು ನಿರ್ದಿಷ್ಟಗೊಳಿಸಿಕೊಂಡು ಅದನ್ನು ಇನ್ನೂ ಸ್ಪಷ್ಟವಾಗಿ ಹೀಗೆ ಇಡಬಹುದು. ನಮ್ಮ ಸಂಪ್ರದಾಯಗಳನ್ನು ವಿಚಾರವಂತರು ಹಾಗೆ ಗ್ರಹಿಸಲು ಏನು ಕಾರಣ? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ನಾವು ಸತ್ಯಕ್ಕೆ ಹತ್ತಿರವಾದ ಹಾಗೂ ಸಮಂಜಸವಾದ ಉತ್ತರ ದೊರಕಬಹುದು.

ವಿಚಾರವಂತರು ನಮ್ಮ ಸಂಪ್ರದಾಯಗಳನ್ನು ಕೇವಲ ಗ್ರಹಿಸಿದರೆ ಏನೂ ತೊಂದರೆ ಇಲ್ಲ, ಆದರೆ ಅವರು ಏಕೆ ನಮ್ಮ ಸಂಪ್ರದಾಯಗಳನ್ನು ಹೀನಾಯವಾಗಿ ನೋಡುತ್ತಾರೆ? ಅವರಷ್ಟೇ ಏಕೆ, ಪಾಶ್ಚಾತ್ಯ ಆಧುನಿಕ ಶಿಕ್ಷಣ ಪಡೆದ ಬಹುತೇಕ ಭಾರತೀಯರು ತಾವು ಬದುಕುತ್ತಿರುವ ಸಮಾಜಕ್ಕೂ ತಮ್ಮ ವಿಚಾರಕ್ಕೂ ಸಂಬಂಧವೇ ಇಲ್ಲದಂತೆ ಮಾತನಾಡುವುದನ್ನು ನಾವು ನೋಡಬಹುದು. ಉದಾಹರಣೆಗೆ ರಾಜೀವ್ ಭಾರ್ಗವರಂತಹ ಸೆಕ್ಯುಲರಿಸಂ ವಿಚಾರಧಾರೆಗಳು ನಮ್ಮಂತ ಸಾಮಾನ್ಯ ಜನರಿಗೆ ಅರ್ಥವೇ ಆಗುವುದಿಲ್ಲ. ನಾವು ಬದುಕುತ್ತಿರುವ ರೀತಿಗೂ ಅವರು ಹೇಳುವ ವಿಚಾರ ಧಾರೆಗೂ ಕೊಂಡಿಯೇ ಕಳಚಿಕೊಂಡಂತೆ ಭಾಸವಾಗುತ್ತದೆ. ಅದೇ ರೀತಿ ಪ್ರಗತಿಪರರು ನೀಡುವ ಟೀಕೆಗಳೂ ಸಹ ಮಡೆಸ್ನಾನದಂತಹ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೂ ಅರ್ಥವಾಗುತ್ತಿಲ್ಲ. ನಾವೇಕೆ (ವಿಚಾರವಂತರು) ಹೀಗೆ ಮಾತನಾಡುಲು ಪ್ರಾರಂಭಿಸಿದ್ದೇವೆ? ಇದಕ್ಕೆ ಸ್ವಲ್ಪ ಸಮಂಜಸವಾದ ಉತ್ತರವನ್ನು ಪ್ರೊ.ಬಾಲಗಂಗಾಧರರವರ ಬರವಣಿಗೆಗಳಲ್ಲಿ ಕಾಣಬಹುದು. ಅವರು ಹೇಳುವಂತೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲಾಗದ ಪರಿಸ್ಥಿತಿಗೆ ವಸಾಹತಶಾಹಿತ್ವ ನಮ್ಮನ್ನು ತಳ್ಳಿದೆ. ಅಂದರೆ ನಮ್ಮ ಅನುಭವವನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನೇ ನಾವು ಮರೆತಿದ್ದೇವೆ ಎಂದು ಹೇಳುತ್ತಾರೆ. ಪಾಶ್ಚಾತ್ಯರು ಭಾರತದ ಕುರಿತು ಸುಮಾರು ೪೦೦ ವರ್ಷಗಳಿಂದ ನೀಡಿರುವ ಚಿತ್ರಣಗಳನ್ನೇ ಭಾರತೀಯರು ತಮ್ಮ ಚಿತ್ರಣವೆಂದು ನಂಬಿದರು. ಹಾಗೂ ಅದಕ್ಕೆ ಪ್ರತಿಕ್ರಿಯಿಸಿ ಭಾರತದ ಸಮಾಜವನ್ನು ಸುಧಾರಣೆ ಮಾಡುವ ಕಾರ್ಯಕ್ಕೆ ಕೈಹಾಕಿದರು. ಪಾಶ್ಚಾತ್ಯರು ಭಾರತೀಯರ ಕುರಿತು ನೀಡಿದ ಚಿತ್ರಣ ಸರಿ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಕಾರ್ಯವನ್ನೂ ಸಹ ಯಾರೂ ಮಾಡಲಿಲ್ಲ. (ಧರ್ಮಪಾಲ್ ಎಂಬ ಚಿಂತಕರನ್ನು ಬಿಟ್ಟರೆ). ಅದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಜಾತಿವ್ಯವಸ್ಥೆಯ ಕುರಿತು ಇಂದು ಇರುವ ಚಿತ್ರಣ, ಈ ಚಿತ್ರಣವು ೧೬ ನೇ ಶತಮಾನದಿಂದಲೂ ಇದೆ. ಚಿತ್ರಣ ಅಂದಿನಿಂದ ಇದೆ ಎಂದು, ಜಾತಿವ್ಯವಸ್ಥೆಯೂ ಇರಬೇಕೆಂಬ ನಿಯಮವಿಲ್ಲ. ಏಕೆಂದರೆ ಜಾತಿವ್ಯವಸ್ಥೆ ಇದೆಯೇ ಎಂಬುದನ್ನು ಪ್ರಮಾಣಿಸಿ ನೋಡುವ ಕಾರ್ಯಕ್ಕೆ ಯಾರೂ ಹೋಗಿಲ್ಲ. ಇಲ್ಲಿ ಏನೇ ಸಮಸ್ಯೆಯಾದರೂ ಅದಕ್ಕೆ ಜಾತಿವ್ಯವಸ್ಥೆಯೇ ಕಾರಣವೆಂಬ ರೆಡಿಮೇಡ್ ಉತ್ತರವನ್ನು ಕಂಡುಕೋಂಡೆವು. ಪಾಶ್ಚಾತ್ಯರು ಇಲ್ಲಿ ಜಾತಿಗಳನ್ನು ನೋಡಿದರು ಅದನ್ನು ಒಂದು ವ್ಯವಸ್ಥೆ ಎಂದರು, ನಾವೂ ಸಹ ಅದನ್ನು ನಂಬಿದೆವು. ಪಾಶ್ಚಾತ್ಯರು ಹಾಗೆ ಚಿತ್ರಣ ನೀಡಲು ಕಾರಣ ಅವರ ಸಂಸ್ಕೃತಿಯಲ್ಲಿ ಗಿಲ್ಡ್ ವ್ಯವಸ್ಥೆ. ಇರಲಿ ಇಂತಹ ಹಲವಾರು ಉದಾಹರಣೆಗಳು ಇಂದು ಸಮಾಜವಿಜ್ಞಾನದಲ್ಲಿ ದೊರಕುತ್ತವೆ.

ಹೀಗೆ ವಸಾಹತುಶಾಹಿತ್ವ/ಪಾಶ್ಚಾತ್ಯರು ನೀಡಿದ ಚಿತ್ರಣಗಳೇ ಭಾರತೀಯರ ಕುರಿತ ನಿಜಗಳಾಗುತ್ತ ಬಂದದ್ದರಿಂದ ನಮ್ಮ ಅನುಭವಗಳು ಅದಕ್ಕೆ ವ್ಯತಿರಿಕ್ತವಾಗಿದ್ದರೂ ಅದನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದೆ ಸಿದ್ಧವಿರುವ ಚಿತ್ರಣವೇ ನಿಜವೆಂದು ನಂಬಿ ಎಲ್ಲವನ್ನೂ ಟೀಕಿಸುತ್ತಾ ಬಂದೆವು. ಅದರ ಫಲವೇ ಇಂದು ಮಡೆಸ್ನಾನದ ಕುರಿತು ಬರುತ್ತಿರುವ ಟೀಕೆಗಳು. ಆ ಆಚರಣೆಯಿಂದ ನಿಜವಾಗಿಯೂ ಒಂದೊಮ್ಮೆ ತೊಂದರೆ ಇದೆ ಎಂದೆನಿಸಿದರೆ ಅದನ್ನು ಟೀಕಿಸುವವರಲ್ಲಿ ನಾನೂ ಒಬ್ಬ. ಆದರೆ ಅದಕ್ಕೂ ಮುನ್ನ ಆಚರಣೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹೀಗೆ ಅರ್ಥಮಾಡಿಕೊಳ್ಳದೆ ಪಾಶ್ಚತ್ಯರ ಚಿತ್ರಣವನ್ನೇ ನಿಜವೆಂದು ನಂಬಿಕೂತಿರುವದರಿಂದ ವಿಚಾರವಂತರಿಗೂ ಹಾಗೂ ಆಚರಣಾಧಾರರಿಗೂ ಕಂದರ ಹೆಚ್ಚಾಗುತ್ತಿರಬಹುದು ಎಂಬುದು ನಮ್ಮ ಅಭಿಪ್ರಾಯ.

ಈ ಮೇಲಿನ ಅಭಿಪ್ರಾಯವನ್ನು ಹೈಪೋಥೀಸಿಸ್ ಪಾತಳಿಯಲ್ಲಿ ಇಡುತ್ತಿದ್ದೇವೆ. ಅಂದರೆ ಇಲ್ಲಿರುವ ಕಂದರಕ್ಕೆ ಪಾಶ್ಚಾತ್ಯರ ಚಿತ್ರಣ ಹಾಗೂ ಅದರ ಮುಂದುವರಿಕೆಯೇ ಕಾರಣವಿರಬಹುದು. ಸಾಧ್ಯವಾದಷ್ಟು ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ಅದು ನನ್ನ ಅಧ್ಯಯನದ ಮಿತಿಯಲ್ಲಿ...

ನಿಮ್ಮ ಪ್ರಶ್ನೆ ಹಾಗೂ ಸಹನೆಗೆ ತುಂಬು ಹೃದಯದ ವಂದನೆ

ಇಲ್ಲಿ ನೀಡಿರುವ ಉದಾಹರಣೆಗಳನ್ನು ಕೇವಲ ಉದಾಹರಣೆಗಳೆಂಬಂತೆ ಭಾವಿಸಿ, ಅದರಿಂದಾಚೆ ವಾದವನ್ನು ಅರ್ಥಮಾಡಿಕೊಳ್ಳಬೇಕಾಗಿ ನಮೃವಾಗಿ ವಿನಂತಿಸುತ್ತೇನೆ. ಏಕೆಂದರೆ ಉದಾಹರಣೆಯ ಹಿಂದೆ ಹೋದರೆ ವಿಚಾರಗಳು ಮೂಲೆಗೊತ್ತಲ್ಪಡುತ್ತವೆ.

Narayana's picture
03
Feb
2011
9:14

<ನಮ್ಮ ಸಂಪ್ರದಾಯಗಳನ್ನು ವಿಚಾರವಂತರು ಹಾಗೆ ಗ್ರಹಿಸಲು ಏನು ಕಾರಣ? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ನಾವು ಸತ್ಯಕ್ಕೆ ಹತ್ತಿರವಾದ ಹಾಗೂ ಸಮಂಜಸವಾದ ಉತ್ತರ ದೊರಕಬಹುದು.>

ಸರಿ . ನಮ್ಮ ಸಂಪ್ರದಾಯಗಳ ಬಗ್ಯೆ ವಿಚಾರವಂತರಿಗೆ ಇರುವ ತಾತ್ಸಾರಕ್ಕೆ ಮೂಲ ಬ್ರಿಟೀಷ್ ಪ್ರಣೀತ ಶಿಕ್ಷಣ ಪದ್ಧತಿ ಎಂದು Hypothesis ಮಟ್ಟದಲ್ಲಿ ಒಪ್ಪಿಕೊಳ್ಳೋಣ. ಆದರೆ ಈ ಶಿಕ್ಷಣ ಪದ್ಧತಿಯೂ ತರ್ಕಬದ್ಧವಾಗಿ ವಿಚಾರ ಮಾಡುವ ಶಿಸ್ತನ್ನು ಕಲಿಸುತ್ತದಲ್ಲಾ. ಈ ಶಿಸ್ತನ್ನು ಉಪಯೋಗಿಸಿಕೊಂಡು ನಮ್ಮ ನಂಬಿಕೆಯ ಮೂಲವನ್ನು, ಧರ್ಮವನ್ನು , ಆಚರಣೆಗಳನ್ನು, ಸಾರಾಸಗಟಾಗಿ ತಿರಸ್ಕರಿಸದೆ, ವಸ್ತುನಿಷ್ಟವಾಗಿ ನೋಡಬಹುದಲ್ಲ. ಆ ಪ್ರಯತ್ನ ಯಾಕೆ ನಮ್ಮ ವಿಚಾರವಂತ ಗುಂಪಿನಲ್ಲಿ ಹೆಚ್ಚು ಕಾಣುವುದಿಲ್ಲ- ಇದು ನನಗರ್ಥವಾಗದ್ದು.

ನೆನಪಿಡಿ. ಗಾಂಧೀಜಿ ಕೂಡ ಈ ಇಂಗ್ಲೀಷ್ ಶಿಕ್ಷಣ ಪದ್ಧತಿಯ ಕೂಸೇ. ಇಂಗ್ಲೆಂಡಿನಲ್ಲಿ ಇದ್ದು ಓದಿದವರು ಅವರು. ಈ exposure ಅವರಿಗೆ ಭಾರತೀಯ ಪದ್ಧತಿಗಳ ಬಗ್ಯೆ ತಿರಸ್ಕಾರ ಹುಟ್ಟಿಸಲಿಲ್ಲ. ಅದರ ಬದಲು ನಮ್ಮ ಜನಗಳ ದುರವಸ್ಥೆಯ ಬಗ್ಯೆ ಅನುಕಂಪವನ್ನು ಹುಟ್ಟಿಸಿತು. ಅಸ್ಪೃಶ್ಯತೆಯನ್ನು ತೊಡೆದುಹಾಕುವ ಅವರ ಹೋರಾಟವನ್ನು, ಕುಷ್ಟ ರೋಗಿಗಳನ್ನು ತಮ್ಮ ಆಶ್ರಮದಲ್ಲಿ ಸಲಹುವ ಅವರ ಪ್ರಯತ್ನವನ್ನು ಈ ಹಿನ್ನೆಲೆಯಲ್ಲಿ ನೋಡಿ. ಅವರ ಜೀವನಕ್ಕೆ ಮಾರ್ಗದರ್ಶಕವಾದದ್ದು ಕೊನೆಯವರೆಗೂ ಭಗವದ್ಗೀತೆಯೇ ಹೊರತು ಯಾವುದೇ ಪಾಶ್ಚಿಮಾತ್ಯ ವಿಚಾರವಂತರ ಗ್ರಂಥವಲ್ಲ.
ಇನ್ನೊಂದು ಉದಾಹರಣೆ ಅಂಬೇಡ್ಕರ್. ಪಶ್ಚಿಮದ ಶಿಕ್ಷಣ ಅವರಲ್ಲಿ ತಮ್ಮ ಜನಗಳ ದುರವಸ್ಥೆಯ ವಿರುದ್ಧ ಹೋರಾಡುವ ಕೆಚ್ಚನ್ನು ಮೂಡಿಸಿತು. Intellectual capital ಅನ್ನು ಒದಗಿಸಿತು.

ಇವರಿಬ್ಬರೂ ಒಳಗಿದ್ದುಕೊಂಡೇ ಬದಲಾವಣೆ ಸಾಧಿಸಿದರು. ಹೊರಗೆ ನಿಂತು , ನಂಬಿಕೆಗಳತ್ತ ’ಇದು ಮೌಢ್ಯ’ ಎಂದು ಬೊಟ್ಟು ತೋರಿಸಿದವರಲ್ಲ. ಅಂಬೇಡ್ಕರ್ ಕೊನೆಯ ಕಾಲದಲ್ಲಿ ಬೇಸತ್ತು ಹಿಂದೂಧರ್ಮದಿಂದ ಹೊರನಡೆಯುವ ನಿರ್ಧಾರ ಮಾಡಿದಾಗಲೂ ಕೂಡಾ, ಅವರು ಕೊನೆಗೂ ಆಯ್ದುಕೊಂಡದ್ದು , ನಮ್ಮ ನೆಲದ್ದೇ ಆದ ಬೌದ್ಧ ಧರ್ಮವನ್ನೇ ಹೊರತು ಕ್ರಿಶ್ಚಿಯನ್ ಅಥವಾ ಯಹೂದಿ ಇತ್ಯಾದಿ ಪಾಶ್ಚಾತ್ಯ ಧರ್ಮವನ್ನಲ್ಲ.

ಇವೆರಡು ಉದಾಹರಣೆಗಳಿಂದ ನಾನು ಹೇಳಹೊರಟಿರುವುದು , ನಮ್ಮ ವಿಚಾರವಂತರು ನಮ್ಮ ನೆಲದ ಆಚರಣೆಗಳನ್ನು ಕೀಳಾಗಿ ಕಾಣುವುದಕ್ಕೆ ಪಾಶ್ಚಾತ್ಯ ಶಿಕ್ಷಣವೇ ಕಾರಣ ಅನ್ನುವ explanation ಬಹಳ ಸರಳವಾಗಿ ಕಾಣುತ್ತದೆ. ಹಿಂದೆ ಗಾಂಧಿ ಮಾಡಿದ್ದನ್ನು, ಅಂಬೇಡ್ಕರ್ ಮಾಡಿದ್ದನ್ನು ನಮ್ಮ ಕಾಲದಲ್ಲಿ ಮಾಡುವ ಪ್ರಯತ್ನದಲ್ಲಿರುವ ವಿಚಾರವಂತರು ನಮಗೇಕೆ ಕಾಣುವುದಿಲ್ಲ?

ಅಂದ ಮೇಲೆ ನಮ್ಮ ವಿಚಾರವಂತ ವರ್ಗದ ಮನೋಭಾವಕ್ಕೆ ಶಿಕ್ಷಣವೂ ಒಂದು ಕಾರಣವಿರಬಹುದೇ ಹೊರತು, ಅದೊಂದೇ ಕಾರಣವಿರಲಾರದು. ಅಲ್ಲವೇ?

ನಾರಾಯಣ

ಅಂದಹಾಗೆ , ನೀವು ಹೇಳಿರುವ ರಾಜೀವ ಭಾರ್ಗವ, ಪ್ರೊ. ಬಾಲಗಂಗಾಧರ ಮತ್ತು ಧರ್ಮಪಾಲ ಅವರ ಬಗ್ಯೆ, ಅವರ ಕೃತಿಗಳ ಬಗ್ಯೆ ವಿವರ ಕೊಡಿ.

sankru's picture
04
Feb
2011
2:04

<<ಸರಿ . ನಮ್ಮ ಸಂಪ್ರದಾಯಗಳ ಬಗ್ಯೆ ವಿಚಾರವಂತರಿಗೆ ಇರುವ ತಾತ್ಸಾರಕ್ಕೆ ಮೂಲ ಬ್ರಿಟೀಷ್ ಪ್ರಣೀತ ಶಿಕ್ಷಣ ಪದ್ಧತಿ ಎಂದು Hypothesis ಮಟ್ಟದಲ್ಲಿ ಒಪ್ಪಿಕೊಳ್ಳೋಣ. ಆದರೆ ಈ ಶಿಕ್ಷಣ ಪದ್ಧತಿಯೂ ತರ್ಕಬದ್ಧವಾಗಿ ವಿಚಾರ ಮಾಡುವ ಶಿಸ್ತನ್ನು ಕಲಿಸುತ್ತದಲ್ಲಾ. ಈ ಶಿಸ್ತನ್ನು ಉಪಯೋಗಿಸಿಕೊಂಡು ನಮ್ಮ ನಂಬಿಕೆಯ ಮೂಲವನ್ನು, ಧರ್ಮವನ್ನು , ಆಚರಣೆಗಳನ್ನು, ಸಾರಾಸಗಟಾಗಿ ತಿರಸ್ಕರಿಸದೆ, ವಸ್ತುನಿಷ್ಟವಾಗಿ ನೋಡಬಹುದಲ್ಲ. ಆ ಪ್ರಯತ್ನ ಯಾಕೆ ನಮ್ಮ ವಿಚಾರವಂತ ಗುಂಪಿನಲ್ಲಿ ಹೆಚ್ಚು ಕಾಣುವುದಿಲ್ಲ- ಇದು ನನಗರ್ಥವಾಗದ್ದು.>>

ಆಂಗ್ಲ ಶಿಕ್ಷಣ ನೀವು ಹೇಳುತ್ತಿರುವ ತರ್ಕ, ವೈಜ್ಞಾನಿಕ ವಿಧಾನ ಎಲ್ಲವನ್ನೂ ಕಲಿಸುತ್ತದೆ ನಿಜ, ಆದರೆ ಆ ಶಿಕ್ಷಣ ಪದ್ಧತಿಯು ನಮ್ಮ ಸಮಾಜ ಕುರಿತು ಪಾಶ್ಚಾತ್ಯರು ಇದುವರೆಗೂ ನಮ್ಮ ಕುರಿತು ಹೇಳಿರುವ ಜ್ಞಾನವನ್ನೇ ಪುನರುತ್ಪಾದಿಸುತ್ತಿದೆ. ನಾವು ಆ ಜ್ಞಾನ ಅಥವಾ ಚಿತ್ರಣಗಳನ್ನು ಒಪ್ಪಿಕೊಂಡು ವಸ್ತುನಿಷ್ಟವಾಗಿ ಅಧ್ಯಯನ ಮಾಡಿದರೂ ಪ್ರಯೋಜನವಿಲ್ಲ. ಉದಾಹರಣೆಗೆ, ಭಾರತೀಯರು ಡೀಜನರೇಟ್ ಆಗಿರುವ (ಅಥವಾ ವಿಕೃತಗೊಂಡಿರುವ) ರಿಲಿಜನ್ ಗಳನ್ನು ಹೊಂದಿದ್ದಾರೆ ಎಂಬ ಪಾಶ್ಚಾತ್ಯರ ಚಿತ್ರಣವನ್ನು ಒಪ್ಪಿಕೊಂಡು ನಾವು ಸುಧಾರಣೆ ಮಾಡಲು ಪ್ರಾರಂಭಿಸಿದೆವು, ಅಂದರೆ ನಮ್ಮದು ಸುಳ್ಳು ರಿಲಿಜನ್ ಅಲ್ಲ, ಸತ್ಯವಾದ ರಿಲಿಜನ್ ಗಳೆಂಬ ವಾದವನ್ನು ಹಾಗೂ ಮೂರ್ತಿಪೂಜೆ ಇತ್ಯಾದಿ ಆಚರಣೆಗಳನ್ನು ತಿರಸ್ಕರಿಸುವ ಮನೋಭಾವಗಳನ್ನು ಬೆಳೆಸಿಕೊಂಡೆವು. ನಾವು ಒಂದೊಮ್ಮೆ ನಮ್ಮಲ್ಲಿ ರಿಲಿಜನ್ ಇಲ್ಲದಿರಬಹುದು ಎಂಬ ಬೇರೆ ರೀತಿಯ ವಾದವನ್ನು ಹುಟ್ಟುಹಾಕಿದರೆ ನಮ್ಮ ಸಮಾಜದ ಕುರಿತು ನೀವು ಹೇಳುವ ಹಾಗೆ ವಸ್ತುನಿಷ್ಟವಾಗಿ ಹೊಸ ಅಧ್ಯಯನಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ಅವರ ಚಿತ್ರಣಗಳನ್ನೇ ಪುನರುತ್ಪಾದಿಸಿ, ಅವುಗಳನ್ನು ಕೊಂಚ ಬದಲಿಸಿಕೊಂಡು ಸಂಶೋಧನೆ ಮಾಡಿದರೆ, ಅವರು ಹೇಳಿದ್ದನ್ನೇ ಬೇರೆ ರೂಪದಲ್ಲಿ ಹೇಳುತ್ತೇವೆಯೇ ಹೊರತು ಮತ್ತೇನನ್ನೂ ಅಲ್ಲ. ಇದನ್ನು ಸಂಕ್ಷಿಪ್ತವಾಗಿ ಇಡುವುದಾದರೆ, ನಮ್ಮ ಸಮಾಜವನ್ನು ವಸ್ತುನಿಷ್ಟವಾಗಿ ನೋಡಲು ಸಾಧ್ಯವಾಗದೆ ಹೋಗುತ್ತಿರುವುದು ಕೇವಲ ಆಂಗ್ಲ ಶಿಕ್ಷಣ ಪದ್ದತಿಯೊಂದೇ ಕಾರಣವಲ್ಲ, ಅದರ ಜೊತೆಗೆ ಪಾಶ್ಚಾತ್ಯರು ನಮ್ಮ ಕುರಿತು ಕಟ್ಟಿಕೊಟ್ಟ ಚಿತ್ರಣವೂ ಸಹ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಅಂದರೆ ನಮ್ಮನ್ನು ನಾವೇ ಗ್ರಹಿಸುವ ಶಕ್ತಿಯನ್ನು ವಸಾಹತುಶಾಹಿತ್ವ ಕಸಿದುಕೊಂಡಿದೆ. ಇದನ್ನೇ ಗಾಂಧಿಯೂ ಬೇರೆ ರೂಪದಲ್ಲಿ ಹೇಳಿರುವುದು.

<<ನೆನಪಿಡಿ. ಗಾಂಧೀಜಿ ಕೂಡ ಈ ಇಂಗ್ಲೀಷ್ ಶಿಕ್ಷಣ ಪದ್ಧತಿಯ ಕೂಸೇ. ಇಂಗ್ಲೆಂಡಿನಲ್ಲಿ ಇದ್ದು ಓದಿದವರು ಅವರು. ಈ exposure ಅವರಿಗೆ ಭಾರತೀಯ ಪದ್ಧತಿಗಳ ಬಗ್ಯೆ ತಿರಸ್ಕಾರ ಹುಟ್ಟಿಸಲಿಲ್ಲ. ಅದರ ಬದಲು ನಮ್ಮ ಜನಗಳ ದುರವಸ್ಥೆಯ ಬಗ್ಯೆ ಅನುಕಂಪವನ್ನು ಹುಟ್ಟಿಸಿತು. ಅಸ್ಪೃಶ್ಯತೆಯನ್ನು ತೊಡೆದುಹಾಕುವ ಅವರ ಹೋರಾಟವನ್ನು, ಕುಷ್ಟ ರೋಗಿಗಳನ್ನು ತಮ್ಮ ಆಶ್ರಮದಲ್ಲಿ ಸಲಹುವ ಅವರ ಪ್ರಯತ್ನವನ್ನು ಈ ಹಿನ್ನೆಲೆಯಲ್ಲಿ ನೋಡಿ. ಅವರ ಜೀವನಕ್ಕೆ ಮಾರ್ಗದರ್ಶಕವಾದದ್ದು ಕೊನೆಯವರೆಗೂ ಭಗವದ್ಗೀತೆಯೇ ಹೊರತು ಯಾವುದೇ ಪಾಶ್ಚಿಮಾತ್ಯ ವಿಚಾರವಂತರ ಗ್ರಂಥವಲ್ಲ.>>

ಗಾಂಧೀಜಿಯವರು ನಮ್ಮ ಸಂಪ್ರದಾಯಗಳನ್ನು ಏಕೆ ತಿರಸ್ಕರಿಸಲಿಲ್ಲ ಎಂಬುದಕ್ಕೆ ಒಂದು ಪ್ರಮುಖವಾದ ಕಾರಣವಿದೆ. ಅವರ ಬರವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ತಮ್ಮ ಅನುಭವಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡಿದ್ದರೇ ಹೊರತು ಪಾಶ್ಚಾತ್ಯ ಸಿದ್ಧಾಂತಗಳಿಗಳಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ ತಮ್ಮ ಅನುಭವದಿಂದ ನಮ್ಮ ಸಮಾಜವನ್ನು ನೋಡುವುದಕ್ಕೂ ಪಾಶ್ಚಾತ್ಯರ ದೃಷ್ಟಯಿಂದ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದೇ ವ್ಯತ್ಯಾಸ ಅಂಬೇಡ್ಕರ‍್ ಹಾಗೂ ಗಾಂಧಿ ಯವರಲ್ಲಿ ನಾವು ಕಾಣಬಹುದು.

<<ಇನ್ನೊಂದು ಉದಾಹರಣೆ ಅಂಬೇಡ್ಕರ್. ಪಶ್ಚಿಮದ ಶಿಕ್ಷಣ ಅವರಲ್ಲಿ ತಮ್ಮ ಜನಗಳ ದುರವಸ್ಥೆಯ ವಿರುದ್ಧ ಹೋರಾಡುವ ಕೆಚ್ಚನ್ನು ಮೂಡಿಸಿತು. Intellectual capital ಅನ್ನು ಒದಗಿಸಿತು.>>

ಅಂಬೇಡ್ಕರರವರ ವಿಚಾರದ ಕುರಿತು ನನಗಿಂತ ಸ್ಪಷ್ಟವಾಗಿ ಮಾತನಾಡುವ ಅರ್ಹವ್ಯಕ್ತಿಗಳು ಹಾಗೂ ಪರಿಣಿತರು ನಮ್ಮ ಬಳಗದಲ್ಲಿದ್ದಾರೆ. ಅವರ‍್ಯಾರದರೂ ನಿಮಗೆ ಉತ್ತರಿಸಬಹುದು.

<<ಅಂದಹಾಗೆ , ನೀವು ಹೇಳಿರುವ ರಾಜೀವ ಭಾರ್ಗವ, ಪ್ರೊ. ಬಾಲಗಂಗಾಧರ ಮತ್ತು ಧರ್ಮಪಾಲ ಅವರ ಬಗ್ಯೆ, ಅವರ ಕೃತಿಗಳ ಬಗ್ಯೆ ವಿವರ ಕೊಡಿ.>>

ರಾಜೀವ ಭಾರ್ಗವ: ಸೆಕ್ಯುಲರಿಸಂ ಅಂಡ್ ಇಟ್ಸ್ ಕ್ರಿಟಿಕ್ಸ್: (ಆಕ್ಸ್ ಫಡ್ð ಯುನಿವರ್ಸಿಟಿ ಪ್ರೆಸ್, ನವದೆಹಲಿ)
ಬಾಲಗಂಗಾಧರ: ದ ಹೀದನ್ ಇನ್ ಹಿಸ್ ಬ್ಲೈಂಡ್ ನೆಸ್. ಇದರ ಕನ್ನಡನುವಾದ-ಸ್ಮೃತಿ ವಿಸ್ಮೃತಿ ಭಾರತೀಯ ಸಂಸ್ಕೃತಿ, (ಅಕ್ಷರ ಪ್ರಕಾಶನ, ಹೆಗ್ಗೋಡು)
ಧರ್ಮಪಾಲ್: ದ ಬ್ಯೂಟಿಫುಲ್ ಟ್ರಿ (Uttaranchal: Society for Integrated Development of Himalayas [SIDH] )

shanmukha24's picture
04
Feb
2011
3:12

<<ಇನ್ನೊಂದು ಉದಾಹರಣೆ ಅಂಬೇಡ್ಕರ್. ಪಶ್ಚಿಮದ ಶಿಕ್ಷಣ ಅವರಲ್ಲಿ ತಮ್ಮ ಜನಗಳ ದುರವಸ್ಥೆಯ ವಿರುದ್ಧ ಹೋರಾಡುವ ಕೆಚ್ಚನ್ನು ಮೂಡಿಸಿತು. Intellectual capital ಅನ್ನು ಒದಗಿಸಿತು.>>

ಇಲ್ಲಿನ ಎಲ್ಲಾ ಆಚರಣೆಗಳನ್ನು ಮೌಡ್ಯವೆಂದು ತೀರ್ಮಾನಿಸಿ ನಿಷೇಧಿಸಲು ಆಗ್ರಹಿಸುವವರಲ್ಲಿ ಅಂಬೇಡ್ಕರ್ ವಾದದ ಮುಂದುವರಿಕೆ ಇದೆಯೆಂದಾದರೆ ಅಂಬೇಡ್ಕರ್ ರವರೂ ಸಹ ಭಾರತೀಯ ಸಮಾಜದ ನಿರೂಪಣೆಯಲ್ಲಿ ಪಶ್ಚಿಮದ ಚಿತ್ರಣವನ್ನು ವಾಸ್ತವವೆಂದು ಒಪ್ಪಿಕೊಂಡಿದ್ದರೆಂದಾಗುತ್ತದೆ. ಅಂಬೇಡ್ಕರರು ಕೆಲವು ಹಂತಗಳಲ್ಲಿ ಇಲ್ಲಿನ ತಳ ಸಮುದಾಯಗಳ ಸಮಸ್ಯೆಗಳನ್ನು ಗುರ್ತಿಸುವಲ್ಲಿ ಸಫಲರಾದರೂ ಸಹ ಆ ಸಮಸ್ಯೆಗಳ ವಿವರಣೆ ಮತ್ತು ಅವುಗಳ ಪರಿಹಾರಕ್ಕೆ ಅವರು ನೆಚ್ಚುವ ಚೌಕಟ್ಟು ಪುನಃ ಅದೇ ಪಶ್ಚಿಮ ಪ್ರಣೀತ ಹೀಂದೂ ರಿಲಿಜಿನ್ ಮತ್ತು ಜಾತಿವ್ಯವಸ್ಥೆಯ ಸಿದ್ದಾಂತಗಳೇ. ಇಲ್ಲಿ ಮಡೆ ಸ್ನಾನದ ಸಂಧರ್ಭದಲ್ಲಿಯೂ ಈ ಸಮಸ್ಯೆಯನ್ನು ಗುರ್ತಿಸಿದವರು ಅದರ ವಿವರಣೆ ಮತ್ತು ಪರಿಹಾರಕ್ಕೆ ಇದೇ ರೀತಿಯ ಪಶ್ಚಿಮದ ವಸಾಹತುಶಾಹಿತ್ವ ಚೌಕಟ್ಟನ್ನೇ ಬಳಸುತ್ತಿರುವುದರಿಂದ ಈ ಸಮಸ್ಯೆಯ ಗುರ್ತಿಸುವಿಕೆ, ವಿವರಣೆ ಮತ್ತು ವಿರೋಧಗಳು ಆಚರಣೆಗಳಲ್ಲಿ ತೊಡಗಿದವರ ತಿಳುವಳಿಕೆಗೆ ನಿಲುಕುತ್ತಿಲ್ಲ ಮತ್ತು ಅವರು ಇದು ತಮ್ಮ ಅನುಭವದ ವಿವರಣೆಯೆಂದೂ ಒಪ್ಪಿಕೊಳ್ಳುತ್ತಿಲ್ಲ. ಅದೇನೇ ಇರಲಿ ಅಂಬೇಡ್ಕರ್ ರವರ ಚಿತ್ರಣಗಳಿಗೆ ಸಂಬಂದಿಸಿದವು ಒಂದು ಬೇರೆಯದೇ ರೀತಿಯ ಚರ್ಚೆಯಾಗಬಹುದಾದ್ದರಿಂದ ಇಲ್ಲಿಯ ಚರ್ಚೆಯ ಪರಿಧಿಯಲ್ಲಿ ಅಂಬೇಡ್ಕರ್ ರ ಕುರಿತು ಸ್ಪಷ್ಟೀಕರಣ ನೀಡಿದ್ದೇನೆ. ಇನ್ನೂ ಮಡೆ ಸ್ನಾನದಂತಹ ಆಚರಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಚರ್ಚೆ ಮುಂದುವರಿಯಲಿ

Narayana's picture
04
Feb
2011
9:44

ಶಣ್ಮುಖರವರೇ
ಒಪ್ಪಿದೆ. ಈ ಧಾರೆಯನ್ನು ಇಲ್ಲಿಗೇ ಬಿಡೋಣ.
ನಾರಾಯಣ

Narayana's picture
04
Feb
2011
9:50

<ನಮ್ಮ ಸಮಾಜವನ್ನು ವಸ್ತುನಿಷ್ಟವಾಗಿ ನೋಡಲು ಸಾಧ್ಯವಾಗದೆ ಹೋಗುತ್ತಿರುವುದು ಕೇವಲ ಆಂಗ್ಲ ಶಿಕ್ಷಣ ಪದ್ದತಿಯೊಂದೇ ಕಾರಣವಲ್ಲ, ಅದರ ಜೊತೆಗೆ ಪಾಶ್ಚಾತ್ಯರು ನಮ್ಮ ಕುರಿತು ಕಟ್ಟಿಕೊಟ್ಟ ಚಿತ್ರಣವೂ ಸಹ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. >

ಇದೇ ಎಳೆಯನ್ನು ಮುಂದುವರಿಸೋಣ.

ಅಂದರೆ ನಮ್ಮ ಸಮಾಜವನ್ನು ವಸ್ತುನಿಷ್ಟವಾಗಿ ನೋಡದೇ , ತಾತ್ಸಾರದ ಮನೋಭಾವ ಹುಟ್ಟಲು ಕಾರಣ
೧. ಆಂಗ್ಲ ಶಿಕ್ಷಣ ಪದ್ಧತಿ
ಮತ್ತು
೨.ಪಾಶ್ಚಾತ್ಯರು ನಮ್ಮ ಬಗ್ಯೆ ಕಟ್ಟಿಕೊಟ್ಟ ಚಿತ್ರಣ

ನಮ್ಮ ಶಿಕ್ಷಣ ಪದ್ಧತಿ , ಮದರಸಾ, ಗುರುಕುಲದಂಥಾ ಕೆಲವು ವಿನಾಯ್ತಿಗಳನ್ನು ಹೊರತು ಪಡಿಸಿದರೆ ಬಹುತೇಕ ಏಕರೂಪವಾಗಿವೆ. Curriculum ಗಳಲ್ಲಿ ಕೂಡಾ ಪ್ರಾದೇಶಿಕ ಬದಲಾವಣೆಗಳಿರಬಹುದೇ ಹೊರತು, ಇಲ್ಲದಿದ್ದರೆ ವಿಪರೀತ ಬದಲಾವಣೆ ಇಲ್ಲ. ನಾನು, ನೀವು, ಮತ್ತೆಲ್ಲರೂ ಹೀಗೆ ಕಲಿತ ಶಿಕ್ಷಣ ಪದ್ಧತಿ ಬ್ರಿಟಿಷರು ಹಾಕಿಕೊಟ್ಟ ಪದ್ಧತಿ- ಅಂದರೆ ಆಂಗ್ಲ ಪದ್ಧತಿ. ಆದರೂ ಇಂಥಾ ಪದ್ಧತಿಯಿಂದ ಹೊರಬಂದ ನನ್ನಂಥಾ ಅನೇಕರು ನಮ್ಮ ಸಂಪ್ರದಾಯದ ಬಗ್ಯೆ ತಾತ್ಸಾರದ ಭಾವನೆ ಬೆಳೆಸಿಕೊಂಡಿಲ್ಲ. ಮೇಲಿನ ವಾದವನ್ನು ಮುಂದುವರಿಸಿದರೆ, ಇದಕ್ಕೆ ಕಾರಣ ನಮಗೆ ಪಾಶ್ಚಾತ್ಯರು ನಮ್ಮ ಬಗ್ಯೆ ಕಟ್ಟಿಕೊಟ್ಟ ಚಿತ್ರಣ ಗೊತ್ತಿಲ್ಲ. ಯಾಕೆ ಗೊತ್ತಿಲ್ಲ ಅಂದರೆ ನಮ್ಮ ಶಿಕ್ಷಣ ಪದ್ಧತಿಯ ಭಾಗವಾಗಿ ನಾವು ಅದನ್ನು ಕಲಿತಿಲ್ಲ. ಅಥವಾ ಇದನ್ನು ಕಲಿಸುವ ಮಟ್ಟದ ಶಿಕ್ಷಣ ನಮಗಿಲ್ಲ ಅಥವಾ ಯಾವ ಶಿಕ್ಷಣದ ಶಾಖೆಯಲ್ಲಿ ಇದನ್ನು ಕಲಿಸಲಾಗುತ್ತದೆಯೋ ಅದನ್ನು ನಾವು ಆರಿಸಿಕೊಂಡಿಲ್ಲ.
ಇದನ್ನು ಒಪ್ಪಿದರೆ , ಮತ್ತೆ ಕೆಲವು ಪ್ರಶ್ನೆಗಳು ಏಳುತ್ತವೆ.
೧.ಪಾಶ್ಚಾತ್ಯರು ನಮ್ಮ ಬಗ್ಯೆ ಕಟ್ಟಿ ಕೊಟ್ಟ ಈ ಚಿತ್ರಣದ ಸ್ವರೂಪವೇನು?
೨. ಇದು ಭಾರತೀಯರ ಒಂದು ಗುಂಪಿಗೆ ಮಾತ್ರ ದಕ್ಕಿದ್ದು ಯಾಕೆ ಮತ್ತು ಹೇಗೆ? (ವಿಚಾರವಾದಿ ಗುಂಪು ಎನ್ನೋಣ)
೩. ಇಷ್ಟು ವರ್ಷಗಳ ನಂತರವೂ ಇದರ ಪ್ರಭಾವಲಯದಲ್ಲಿ ಬಂದವರು ನಮ್ಮ ಸಮಾಜದ ಆಚರಣೆಗಳ ಬಗ್ಯೆ ಏಕರೀತಿಯ ತುಚ್ಚ ಮನೋಭಾವವನ್ನೇ ಬೆಳೆಸಿಕೊಳ್ಳಬೇಕಾದರೆ ಆ ಚಿತ್ರಣದ propaganda value ಎಷ್ಟು ಬಲವಾಗಿರಬಹುದು?

ಈ ದಿಕ್ಕಿನಲ್ಲಿ ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲಿ.

<ಅಂದರೆ ನಮ್ಮನ್ನು ನಾವೇ ಗ್ರಹಿಸುವ ಶಕ್ತಿಯನ್ನು ವಸಾಹತುಶಾಹಿತ್ವ ಕಸಿದುಕೊಂಡಿದೆ. ಇದನ್ನೇ ಗಾಂಧಿಯೂ ಬೇರೆ ರೂಪದಲ್ಲಿ ಹೇಳಿರುವುದು>

ಗಾಂಧಿ ಇದನ್ನು ಹೇಳಿದ್ದು ಎಲ್ಲಿ ಎಂದು reference ಕೊಡುತ್ತೀರಾ?

ನಾರಾಯಣ

sankru's picture
05
Feb
2011
10:36

<<ನಮ್ಮ ಶಿಕ್ಷಣ ಪದ್ಧತಿ , ಮದರಸಾ, ಗುರುಕುಲದಂಥಾ ಕೆಲವು ವಿನಾಯ್ತಿಗಳನ್ನು ಹೊರತು ಪಡಿಸಿದರೆ ಬಹುತೇಕ ಏಕರೂಪವಾಗಿವೆ. Curriculum ಗಳಲ್ಲಿ ಕೂಡಾ ಪ್ರಾದೇಶಿಕ ಬದಲಾವಣೆಗಳಿರಬಹುದೇ ಹೊರತು, ಇಲ್ಲದಿದ್ದರೆ ವಿಪರೀತ ಬದಲಾವಣೆ ಇಲ್ಲ. ನಾನು, ನೀವು, ಮತ್ತೆಲ್ಲರೂ ಹೀಗೆ ಕಲಿತ ಶಿಕ್ಷಣ ಪದ್ಧತಿ ಬ್ರಿಟಿಷರು ಹಾಕಿಕೊಟ್ಟ ಪದ್ಧತಿ- ಅಂದರೆ ಆಂಗ್ಲ ಪದ್ಧತಿ. ಆದರೂ ಇಂಥಾ ಪದ್ಧತಿಯಿಂದ ಹೊರಬಂದ ನನ್ನಂಥಾ ಅನೇಕರು ನಮ್ಮ ಸಂಪ್ರದಾಯದ ಬಗ್ಯೆ ತಾತ್ಸಾರದ ಭಾವನೆ ಬೆಳೆಸಿಕೊಂಡಿಲ್ಲ. ಮೇಲಿನ ವಾದವನ್ನು ಮುಂದುವರಿಸಿದರೆ, ಇದಕ್ಕೆ ಕಾರಣ ನಮಗೆ ಪಾಶ್ಚಾತ್ಯರು ನಮ್ಮ ಬಗ್ಯೆ ಕಟ್ಟಿಕೊಟ್ಟ ಚಿತ್ರಣ ಗೊತ್ತಿಲ್ಲ. ಯಾಕೆ ಗೊತ್ತಿಲ್ಲ ಅಂದರೆ ನಮ್ಮ ಶಿಕ್ಷಣ ಪದ್ಧತಿಯ ಭಾಗವಾಗಿ ನಾವು ಅದನ್ನು ಕಲಿತಿಲ್ಲ. ಅಥವಾ ಇದನ್ನು ಕಲಿಸುವ ಮಟ್ಟದ ಶಿಕ್ಷಣ ನಮಗಿಲ್ಲ ಅಥವಾ ಯಾವ ಶಿಕ್ಷಣದ ಶಾಖೆಯಲ್ಲಿ ಇದನ್ನು ಕಲಿಸಲಾಗುತ್ತದೆಯೋ ಅದನ್ನು ನಾವು ಆರಿಸಿಕೊಂಡಿಲ್ಲ.>>

ನಮ್ಮ ಸಮಾಜವಿಜ್ಞಾನಗಳನ್ನು ನೋಡಿದರೆ, ಅಥವಾ ಓದಿದರೆ ನಮ್ಮ ಸಮಾಜದ ಕುರಿತು ಏನೇನು ಚಿತ್ರಣವಿದೆಯೋ ಅದು ಸಮಾಜವಿಜ್ಞಾನಗಳು ನಮ್ಮನ್ನು ಅಧ್ಯಯನ ಮಾಡಿ ಕಟ್ಟಿಕೊಂಡ ಚಿತ್ರಣಗಳಲ್ಲ, ಬದಲಿಗೆ ಪಾಶ್ಚಾತ್ಯರು ಕಟ್ಟಿಕೊಟ್ಟ ಚಿತ್ರಣವಾಗಿದೆ. ಭಾರತದಲ್ಲಿ ಜಾತಿವ್ಯವಸ್ಥೆ, ಹಿಂದೂಯಿಸಂ ಎಂಬ ರಿಲಿಜನ್, ಮೂರ್ತಿಪೂಜೆ ಕೆಟ್ಟದು (ರಾಜಾರಾಮ್ ಮೋಹನ್ ರಾಯ್ ನಡೆಸಿದ ಚಳುವಳಿ), ರಾಮಾಯಣ, ಮಹಾಭಾರತ, ವೇದಗಳು ಹಿಂದೂ ಧರ್ಮದ ಪವಿತ್ರಗ್ರಂಥಗಳು, ಮನುಕುಲದ ಇತಿಹಾಸದ ಕಾಲಾನುಕ್ರಮಣಿಕೆಯಲ್ಲಿ ಅತ್ಯಂತ ಹಿಂದುಳಿದವರು, ಅದಕ್ಕೆ ಕಾರಣ ಜಾತಿವ್ಯವಸ್ಥೆ (ಓರಿಯಂಟಲಿಸ್ಟರು, ರಮ್ಯವಾದಿಗಳು, ಮಾರ್ಕ್ಸ್ ಇತ್ಯಾದಿ ಬರಹಗಳು ಇದನ್ನು ಸ್ಪಷ್ಟ ಪಡಿಸುತ್ತವೆ), ಅಧಿಕಾರವಿಲ್ಲದ ರಾಜರು, ನೈತಿಕತೆ ಇಲ್ಲದ ಜನರು ಹೀಗೆ ಹಲವಾರು ಚಿತ್ರಣಗಳನ್ನು ನಾವು ಓದುತ್ತಾ ಬಂದಿಲ್ಲವೆ? ಇವೆಲ್ಲವೂ ಭಾರತದ ಕುರಿತ ವಾಸ್ತವಾಂಶ (ಫ್ಯಾಕ್ಸ್) ಗಳಾಗಿರದೆ, ಐರೋಪ್ಯರು ಅವರ ಅನುಭವದಿಂದ ಹಾಗೂ ಅವರ ಸಂಸ್ಕೃತಿಯ ಹಿನ್ನೆಲೆಯಿಂದ ನೀಡಿದಂತಹ ಚಿತ್ರಣಗಳಾಗಿವೆ. ಇವುಗಳನ್ನು ಓದಿದ ನಮಗೂ ನಮ್ಮ ಆಚರಣೆ, ಸಮಾಜದ ಕುರಿತು ತಾತ್ಸಾರ ಬರುವುದು ಸಹಜವೆ ಸರಿ. ಆದರೆ ಬಾಲಗಂಗಾಧರರಂತಹ ಚಿಂತಕರ ಬರಹಗಳಿಂದಾಗಿ ನಮ್ಮ ಓದಿನ ಕ್ರಮ ಬೇರೆಯಾದ್ದರಿಂದ ನಮಗೆ ಬೇರೆ ವಿಧಾನದಲ್ಲಿ ಸಮಾಜವನ್ನು ಗ್ರಹಿಸುವ ಪ್ರಯತ್ನ ಮಾಡುತ್ತಿದ್ದೇವೆ.

<<೧.ಪಾಶ್ಚಾತ್ಯರು ನಮ್ಮ ಬಗ್ಯೆ ಕಟ್ಟಿ ಕೊಟ್ಟ ಈ ಚಿತ್ರಣದ ಸ್ವರೂಪವೇನು?
೨. ಇದು ಭಾರತೀಯರ ಒಂದು ಗುಂಪಿಗೆ ಮಾತ್ರ ದಕ್ಕಿದ್ದು ಯಾಕೆ ಮತ್ತು ಹೇಗೆ? (ವಿಚಾರವಾದಿ ಗುಂಪು ಎನ್ನೋಣ)
೩. ಇಷ್ಟು ವರ್ಷಗಳ ನಂತರವೂ ಇದರ ಪ್ರಭಾವಲಯದಲ್ಲಿ ಬಂದವರು ನಮ್ಮ ಸಮಾಜದ ಆಚರಣೆಗಳ ಬಗ್ಯೆ ಏಕರೀತಿಯ ತುಚ್ಚ ಮನೋಭಾವವನ್ನೇ ಬೆಳೆಸಿಕೊಳ್ಳಬೇಕಾದರೆ ಆ ಚಿತ್ರಣದ propaganda value ಎಷ್ಟು ಬಲವಾಗಿರಬಹುದು?>>

ನಿಮ್ಮ ಪ್ರಶ್ನೆಗಳು ತುಂಬಾ ದೊಡ್ಡದಾದ ಉತ್ತರವನ್ನು ಬಯಸುತ್ತವೆ. ಅಂದರೆ ಪ್ರಶ್ನೆಯ ಗಾಂಭೀರ್ಯ, ಆಳ ಅಷ್ಟಿದೆ. ಇಂತಹ ಪ್ರಶ್ನೆಗಳನ್ನು ಹೆಚ್ಚೆಚ್ಚು ಚರ್ಚೆ ಹಾಗೂ ಹೆಚ್ಚಿನ ಓದಿನ ಮೂಲಕ ಮಾಡಬೇಕಾಗುತ್ತದೆ. (ತಮಗೆ ಆಸಕ್ತಿ ಹಾಗೂ ಸಮಯ ಇದ್ದರೆ, ನಮ್ಮ ಅಧ್ಯಯನ ಕೇಂದ್ರಕ್ಕೆ ಒಮ್ಮೆ ಬನ್ನಿ ವಿಸ್ತೃತವಾಗಿ ಓದುವ, ಚರ್ಚಿಸುವಾ) ಅದಕ್ಕೆ ಇಲ್ಲಿ ಉತ್ತರಿಸುವುದಕ್ಕಿಂದ ಬಾಲಗಂಗಾಧರರವರ ಕೃತಿಯನ್ನು ನೀವು ಓದಿದರೆ ನಿಮ್ಮ ಇನ್ನೂ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕಬಹುದು ಎನ್ನುವುದು ನನ್ನ ಆಶಯ. ಇಲ್ಲಿ ಆಚರಣೆಗಳ ಕುರಿತ ಚರ್ಚೆಯನ್ನು ಮುಂದುವರೆಸುವಾ..

Narayana's picture
05
Feb
2011
11:26

ಸಂತೋಷ್

ಇಲ್ಲಿಗೆ ಬಹುಶ ನನ್ನ ಸರಕು ಖಾಲಿಯಾಯಿತು!!!

ನೀವು ಕೊಟ್ಟ references ಹುಡುಕಿ ಓದುವ ಪ್ರಯತ್ನ ಮಾಡುತ್ತೇನೆ.

ಒಳ್ಳೆಯ , ಸಹನೆಯ ಪ್ರತಿಕ್ರಿಯೆ ಕೊಟ್ಟದ್ದಕ್ಕೆ ವಂದನೆಗಳು

ನಮಸ್ಕಾರ

ನಾರಾಯಣ

sankru's picture
07
Feb
2011
11:46

ನಾರಾಯಣ್ ರವರೆ
ನಿಮಗೂ ಸಹ ಧನ್ಯವಾದಗಳು, ನೀವು ಅಷ್ಟೆ ಸಹನೆ ತಾಳ್ಮೆಯಿಂದ ಸಹಕರಿಸಿದ್ದೀರಿ..

vijay pai's picture
05
Feb
2011
1:41

ನಾರಾಯಣ್ ..

ಯು.ಆರ್ ಅನಂತಮೂರ್ತಿಯವರ ಈ ಬರಹದ ಕೊಂಡಿ ಕೊಟ್ಟಿದ್ದೇನೆ. ಅದರಲ್ಲಿ ಈ ಚರ್ಚೆಯಲ್ಲಿ ಎತ್ತಿದ ಕೆಲವೊಂದು ಪ್ರಶ್ನೆಗಳಿಗೆ ಪೂರಕ ಮಾಹಿತಿಯೂ ಸಿಗುತ್ತದೆ.

http://www.prajavani...

Narayana's picture
05
Feb
2011
2:22

ವಿಜಯ್

ನೀವು ಕೊಟ್ಟ ಕೊಂಡಿ ಓದಿದೆ.
ಲೇಖನದಲ್ಲಿ ಈ ಚರ್ಚೆಗೆ ಪೂರಕವಾಗಿದೆ ಅಂತ ನನಗೆ ಅನ್ನಿಸಿದನ್ನು ಕೆಳಗೆ ಕೊಟ್ಟಿದ್ದೇನೆ.

"ಅಸ್ಪೃಶ್ಯತೆಗೂ ಭೂಕಂಪಕ್ಕೂ ಇರುವ ಸಂಬಂಧವನ್ನು ನಾನು ತರ್ಕಬದ್ಧವಾಗಿ ವಿವರಿಸಲಾರೆ. ಆದರೆ ನನ್ನ ಹೃದಯದಲ್ಲಿ ಹಾಗೆ ನನಗನ್ನಿಸಿದೆ. ನನ್ನ ಅತಾರ್ಕಿಕ ಮಾತು ಟ್ಯಾಗೋರಿಗೆ ಅಸಂಬದ್ಧವೆನ್ನಿಸಿದರೆ ನನಗೇನೂ ಬೇಸರವಿಲ್ಲ. ಏಕೆಂದರೆ ಅಂತಹ ಸಂಬಂಧ ಇದೆ ಎಂದು ತಿಳಿಯುವುದರಿಂದ ನನಗೇನೋ ನೈತಿಕವಾಗಿ ಒಳ್ಳೆಯದೇ ಆಗಿದೆ’.

ಇಲ್ಲಿಯ (ಸಂಪದದ) ಚರ್ಚೆ, ಸ್ವಲ್ಪದರಲ್ಲಿಯೇ ಹೇಳುವುದಾದರೆ

ಯಾವುದೇ ಸಾಮೂಹಿಕ ಆಚರಣೆಯನ್ನು ( ಉದಾ. ಮಡೆಸ್ನಾನ) ವನ್ನು ತರ್ಕಬದ್ಧವಾಗಿ ವಿವರಿಸಲಾಗದು ಎಂಬ ಕಾರಣಕ್ಕೆ ಮೌಡ್ಯ ಎಂದು ವರ್ಗೀಕರಿಸಿ ತಿರಸ್ಕರಿಸುವುದು ಸಾಧುವೇ?

ಒಳ್ಳೆಯ ಲೇಖನದ ಕೊಂಡಿಗೆ ಧನ್ಯವಾದಗಳು.

ನಾರಾಯಣ

vijay pai's picture
06
Feb
2011
8:24

ನಾರಾಯಣ್..
ಇಲ್ಲಿ ಈ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೆ ಇನ್ನೊಂದು ಉತ್ತಮ ಲೇಖನ ಓದಲು ಸಿಕ್ಕಿತು. ಇದು ಪರ್ಯಾಯ ಸಂಸ್ಕೃತಿಯ ಬಗ್ಗೆ.. ಕೆ.ವಿ ತಿರುಮಲೇಶ ಅವರು ಬರೆದಿದ್ದು. ಫೆಬ್ರವರಿ 4 ರ ವಿಜಯ ಕರ್ನಾಟಕದಲ್ಲಿದೆ. ಓದಲು ಕೆಳಗಿನ ಕೊಂಡಿ ಉಪಯೋಗಿಸಿ, ಲಾಗ್ ಇನ್ ಆಗಿ..
http://www.vijaykarn...

Narayana's picture
06
Feb
2011
8:43

ವಿಜಯ್

ಥ್ಯಾಂಕ್ಸ್. ಓದುತ್ತೇನೆ. ಸದ್ಯ ಸಮಯವಿಲ್ಲ !!
ನಾರಾಯಣ

narabhangi's picture
03
Feb
2011
8:30

+ 1
ಬಹುಶಃ ಇ೦ತಹ ಸಮಚಿತ್ತದ ಉದ್ರೇಕರಹಿತ ಪ್ರತಿಕ್ರಿಯೆ ವಿಶ್ಲೇಷಣೆಯಿ೦ದಲೇ ಬರಹಗಳಿಗೆ ತೂಕ ಹೆಚ್ಚುವುದು. ಹಾಗೆಯೇ ಸ೦ಪದದ ಘನತೆಯೂ..
ಹ್ಯಾಟ್ಸ್ ಆಫ್ ನಾರಾಯಣರಿಗೆ..

skakkilaya's picture
03
Feb
2011
3:22

ಪ್ರಜಾವಾಣಿಯಲ್ಲಿ ಅಕ್ಷರರು ಬರೆದ ಹರಕೆ-ಹರಾಜುಎಂಬ ಲೇಖನ ಹಾಗೂ ಅದಕ್ಕೆ ವೈದೇಹಿಯವರು ಬರೆದ ಪ್ರತಿಕ್ರಿಯೆ ಗಳನ್ನು ಉದ್ಧರಿಸಿ ಬರೆದಿರುವ ಈ ಲೇಖನದ ಉದ್ದೇಶವೇನೆನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲ. ಅದು ಅಲ್ಲಿ ಇಲ್ಲಿ ಸುತ್ತಿ ಮತ್ತೆ ಮೊದಲಲ್ಲೇ ನಿಂತಂತಿದೆ.

ಅಕ್ಷರರ ಲೇಖನದಲ್ಲಿ ಎಂಜಲೆಲೆ ಸೇವೆ ಹಾಗೂ ಐಪಿಎಲ್ ಹರಾಜುಗಳಿಂದಾಗುವ ಅವಮಾನಗಳ ಮೌಲ್ಯವೆಷ್ಟು ಎನ್ನುವ ಬಗ್ಗೆ ಹಾಗೂ ಮಾಧ್ಯಮಗಳು ಈ ಎರಡನ್ನು ವರದಿ ಮಾಡಿರುವಲ್ಲಿ ಎದ್ದು ಕಾಣುವ ವ್ಯತ್ಯಾಸಗಳ ಬಗ್ಗೆ ಜಿಜ್ಞಾಸೆಯಿದೆಯೇ ಹೊರತು, ಎಂಜಲೆಲೆಯ ಮೇಲೆ ಉರುಳುವುದನ್ನು ಅವರು ಯಾವುದೇ ರೀತಿಯಲ್ಲಿ ಸಮರ್ಥಿಸಿರುವುದಾಗಲೀ, ಆ ಬಗ್ಗೆ ಸೂಕ್ಷ್ಮವಾದ ಅಧ್ಯಯನಗಳಾದರೆ ಒಳಿತು ಎಂದು ಸೂಚಿಸಿರುವುದಾಗಲೀ ಕಾಣುವುದಿಲ್ಲ. ಅದೇ ರೀತಿ, >>ವೈದೇಹಿಯವರು ಆ ಆಚರಣೆಯನ್ನು ಸಮರ್ಥನೆ ಮಾಡದೆ ತಮ್ಮ ಅನುಭವದ ಮೂಲಕ ಅದನ್ನು ವಿವರಿಸುವ ಪ್ರಯತ್ನವನ್ನು ಮಾತ್ರ ಮಾಡಿರುವುದರಿಂದ ಅದರ ಕುರಿತು ಆಕ್ರೋಶವಿಲ್ಲದೆ ಕೇವಲ ವಿವರಿಸುವ ಪ್ರಯತ್ನ ಮಾತ್ರ ಕಾಣುತ್ತದೆ<< ಎನ್ನುವ ನಿಮ್ಮ ಅಭಿಪ್ರಾಯವೂ ವೈದೇಹಿಯವರ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದಂತಿಲ್ಲ; "ತಾವು ಶ್ರೇಷ್ಠವರ್ಗ ಎಂದು ತಾವೇ ಅಂದುಕೊಂಡು ಆ ಭ್ರಮೆಯಲ್ಲಿ ಮುಳುಗಿದವರು ಕೆಲ ಸಮುದಾಯಗಳಿಗೆ ನೀಡುತ್ತಿದ್ದ ಮರ್ಮಾಂತಿಕ, ಅಕ್ಷಮ್ಯ, ಕ್ಷಮೆಯೇ ಇಲ್ಲದ ಅಗಣಿತ ನೋವುಗಳ ಜೊತೆಗೇನೆ, ಕೇವಲ ವಾದ ವಿವಾದಕ್ಕೆ ನಿಲುಕಲಾರದ, ಸಾವಧಾನವಾಗಿ ಚಿಂತಿಸಬೇಕಾದ ಸಂಗತಿಗಳೂ ನಾವು ಬೆಳೆದು ಬಂದ ಹಾದಿಯಲ್ಲಿ ಇವೆ" ಎಂದಲ್ಲಿಯೂ, "ಪರಿಹಾರ ಕಾಣದ ವ್ಯಾಕುಲತೆ, ಸಂಕಟಗಳ ಪರಾಕಾಷ್ಠೆಯಲ್ಲಿ .......ಸದ್ಯ ಇದು ಆಗಬೇಕು, ಬಂದಿರುವ ಆಪತ್ತು ಕಳೆಯ ಬೇಕು, ಎದುರಾದ ಗುಡ್ಡ ಮಂಜಿನಂತೆ ಕರಗಬೇಕು, ಕಾಣದ ದೇವರೇ, ಕಾಪಾಡು’" ಎಂದಲ್ಲಿಯೂ ಇಂತಹಾ ಆಚರಣೆಗಳ ಬಗ್ಗೆ ಅವರಿಗಿರುವ ಅಭಿಪ್ರಾಯವು ಸ್ಪಷ್ಟವಾಗುತ್ತದೆ.

>>ಸಮಾಜವನ್ನು ಬದಲಾಯಿಸುವ ಮುನ್ನ ನಮ್ಮ ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ<< ಹಾಗೂ >>ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ<< ಎಂದಾದ ಬಳಿಕ >> ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ<< ಎಂದುಬಿಟ್ಟರೆ ಹೇಗೆ? ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಆಧಾರಗಳಾದರೂ ಏನು? ಹಾಗಾಗಿ, ಆಚರಣೆಗಳ ಬಗ್ಗೆ ಅಧ್ಯಯನಗಳು ಬೇಕೇ ಬೇಡವೇ ಎನ್ನುವ ಬಗ್ಗೆ ಲೇಖಕರ ಸ್ಪಷ್ಟವಾದ ನಿಲುವೇನು ಎನ್ನುವುದು ನನಗಂತೂ ತಿಳಿಯಲಿಲ್ಲ. ಬೇಕು ಅನ್ನುವುದಾದರೆ ಅಂತಹಾ ಅಧ್ಯಯನಗಳು >>ವೈಜ್ಞಾನಿಕವಾಗಿ<<ಯೇ ನಡೆಯಬೇಕಲ್ಲವೇ? ಅದು ಸಾಧ್ಯವಿಲ್ಲವೆಂದಾದರೆ ಬೇರೆ ಯಾವ ರೀತಿಯ ಅಧ್ಯಯನಗಳನ್ನು ನಡೆಸಬಹುದೆನ್ನುವುದು, ಅವುಗಳ ರೂಪರೇಷೆಗಳೇನು ಎನ್ನುವುದು ಸ್ಪಷ್ಟವಾಗಬೇಕು. ಅಧ್ಯಯನಗಳು ಸಾಧ್ಯವೇ ಇಲ್ಲ ಅಥವಾ ನಡೆದಿಲ್ಲ ಎಂದಾದರೆ >>ಇದುವರೆಗೂ ಎಂಜಲೆಲೆಯ ಆಚರಣೆಯ ಕುರಿತಾದದ ಚರ್ಚೆಗೆ ಸಂಬಂಧಿಸಿದಂತೆ ಅದಕ್ಕೆ ಮೌಢ್ಯವನ್ನು ಆರೋಪಿಸಿ ಅದನ್ನು ಹೋಗಲಾಡಿಸುವ ಪ್ರಯತ್ನದಲ್ಲಿರುವವರೇ ಅದು ಅಸಹನೀಯ ಎನ್ನುತ್ತಿದ್ದಾರೆಯೇ ಹೊರತು ಆಚರಿಸುವವರ ಅನುಭವದಿಂದ ಈ ಹೇಳಿಕೆಯು ಪ್ರಮಾಣಿತವಾಗಿಲ್ಲ<< ಎನ್ನುವುದು ಹೇಗೆ ಸಾಧ್ಯ? ಅಧ್ಯಯನಗಳ ಆಧಾರದಲ್ಲಿಯೇ ಅಥವಾ ಲೇಖಕರ ಜಿಜ್ಞಾಸೆಯೇ? >>ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ<< ಎನ್ನುವುದಕ್ಕೂ ಆಧಾರಗಳೇನು? ಒಂದೆಡೆ, ಪಾಲ್ಗೊಳ್ಳುವವರಲ್ಲಿ ಅಧ್ಯಯನ ಸಾಧ್ಯವಿಲ್ಲ; ಇನ್ನೊಂದೆಡೆ >>ಓದಿ ಜಿಜ್ಞಾಸೆ ಮಾಡುವ ಕೆಲವು ವಿಚಾರವಂತರು<< >>ಜಿಜ್ಞಾಸೆಯನ್ನೇ ಆಧರಿಸದ ಆಚರಣೆಗಳನ್ನು ಜಿಜ್ಞಾಸೆಯ ಮೂಲಕ ನೋಡಲು ಹೋಗುವುದರಿಂದ... ಇಂಥ ಅಸಂಗತ ಸನ್ನಿವೇಶ ನಿರ್ಮಾಣವಾಗುತ್ತದೆ<< ಎನ್ನುವಾಗ ಪಾಲ್ಗೊಳ್ಳುವವರಲ್ಲಿ ಅಧ್ಯಯನವನ್ನೂ ಮಾಡುವಂತಿಲ್ಲ, ಹೊರಗಿನವರ ಜಿಜ್ಞಾಸೆಯೂ ಸರಿಯೆನಿಸದು ಎಂದಾದರೆ ಯಥಾಸ್ಥಿತಿಯ ಮುಂದುವರಿಕೆಯಲ್ಲದೆ ಬೇರೇನು ಸಾಧ್ಯವಾದೀತು? ಯಥಾಸ್ಥಿತಿ ಮುಂದುವರಿಯುವುದೇ ಒಳ್ಳೆಯದು ಎಂದರೆ ಆಚರಣೆಗಳನ್ನು ಪರೋಕ್ಷವಾಗಿಯಾದರೂ ಬೆಂಬಲಿಸಿದಂತೆಯೇ ಆಗುವುದಿಲ್ಲವೇ? >>ಈ ಆಚರಣೆಯನ್ನು ಸಮರ್ಥಿಸುವ ಕಾರ್ಯವನ್ನು ಮಾಡುವು<<ದಕ್ಕೆ >>ಎಂಜಲೆಲೆಯ ಆಚರಣೆಯು ಅತ್ಯದ್ಭುತವಾದುದು ಹಾಗೂ ಅದನ್ನು ಮಾಡಲೇಬೇಕೆಂದು ...ಒತ್ತಿ<< ಹೇಳಬೇಕಾಗಿಯೇ ಇಲ್ಲ.

sankru's picture
03
Feb
2011
4:41

<<<ಪ್ರಜಾವಾಣಿಯಲ್ಲಿ ಅಕ್ಷರರು ಬರೆದ ಹರಕೆ-ಹರಾಜುಎಂಬ ಲೇಖನ ಹಾಗೂ ಅದಕ್ಕೆ ವೈದೇಹಿಯವರು ಬರೆದ ಪ್ರತಿಕ್ರಿಯೆ ಗಳನ್ನು ಉದ್ಧರಿಸಿ ಬರೆದಿರುವ ಈ ಲೇಖನದ ಉದ್ದೇಶವೇನೆನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲ. ಅದು ಅಲ್ಲಿ ಇಲ್ಲಿ ಸುತ್ತಿ ಮತ್ತೆ ಮೊದಲಲ್ಲೇ ನಿಂತಂತಿದೆ.>>>

ಲೇಖನವೇ ಅರ್ಥವಾಗಿಲ್ಲವೆಂದ ಮೇಲೆ ಅದು ಅಲ್ಲಿ ಇಲ್ಲಿ ಸುತ್ತಿ ಇನ್ನೆಲ್ಲೋ ಬಂದಿದೆ ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ಉದ್ದೇಶ ಸಾವಿರ ಇರಬಹುದು, ಅದೇನೇ ಇರಲಿ, ಆದರೆ ಲೇಖನದಲ್ಲಿರುವ ವಿಚಾರಗಳ ಕುರಿತು ಮಾತ್ರ ಚರ್ಚಿಸುವಾ. ನಮ್ಮ ಉದ್ದೇಶಕ್ಕೂ ಈ ಲೇಖನಕ್ಕೂ ಸಂಬಂಧವೇ ಇಲ್ಲದಿರಬಹುದು, ಅದಕ್ಕೂ ಹೆಚ್ಚಾಗಿ ನಮಗೆ ಯಾವುದೇ ಉದ್ದೇಶ ಇಲ್ಲದಿರಬಹುದು, ಅದನ್ನು ಕಂಡುಹಿಡಿಯಲೂ ಸಾಧ್ಯವಿಲ್ಲ ಜೊತೆಗೆ ಅದನ್ನು ನಿರ್ಣಯಿಸುವ ಯಾವ ನಿರ್ಧಾರಕ ಅಂಶಗಳೂ ಇಲ್ಲ. ಆದ್ದರಿಂದ ಉದ್ದೇಶದ ಹಿಂದೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ.

<<ಅಕ್ಷರರ ಲೇಖನದಲ್ಲಿ ಎಂಜಲೆಲೆ ಸೇವೆ ಹಾಗೂ ಐಪಿಎಲ್ ಹರಾಜುಗಳಿಂದಾಗುವ ಅವಮಾನಗಳ ಮೌಲ್ಯವೆಷ್ಟು ಎನ್ನುವ ಬಗ್ಗೆ ಹಾಗೂ ಮಾಧ್ಯಮಗಳು ಈ ಎರಡನ್ನು ವರದಿ ಮಾಡಿರುವಲ್ಲಿ ಎದ್ದು ಕಾಣುವ ವ್ಯತ್ಯಾಸಗಳ ಬಗ್ಗೆ ಜಿಜ್ಞಾಸೆಯಿದೆಯೇ ಹೊರತು, ಎಂಜಲೆಲೆಯ ಮೇಲೆ ಉರುಳುವುದನ್ನು ಅವರು ಯಾವುದೇ ರೀತಿಯಲ್ಲಿ ಸಮರ್ಥಿಸಿರುವುದಾಗಲೀ, ಆ ಬಗ್ಗೆ ಸೂಕ್ಷ್ಮವಾದ ಅಧ್ಯಯನಗಳಾದರೆ ಒಳಿತು ಎಂದು ಸೂಚಿಸಿರುವುದಾಗಲೀ ಕಾಣುವುದಿಲ್ಲ.>>

ಅಕ್ಷರರವರು ಆಚರಣೆಗಳನ್ನು ಸಮರ್ಥಿಸಿದ್ದಾರೆಂದು ನಾವೂ ಸಹ ಎಲ್ಲಿಯೂ ಹೇಳಿಲ್ಲ, ಅದಕ್ಕೂ ಹೆಚ್ಚಾಗಿ ಅದನ್ನು ಸಮರ್ಥಿಸುವ ಇರಾದೆಯೂ ನಮಗೆ ಇಲ್ಲ. ಅದರ ಕುರಿತು ಅಧ್ಯಯನಗಳಾದರೆ ಒಳಿತು ಎಂದು ಅವರು ನೇರವಾಗಿ ಹೇಳದಿದ್ದರೂ ಅದರ ಕುರಿತು ಈಗ ಇರುವ ಗ್ರಹಿಕೆಗಳನ್ನು ಅಲ್ಲಗಳೆಯುವ ಪ್ರಯತ್ನವನ್ನುಮಾಡುತ್ತಿದ್ದಾರೆ. ಅಂದರೆ ಅವಮಾನ ಯಾರಿಗೆ? ಎಂಬ ಪ್ರಶ್ನೆಯನ್ನು ಕೇಳುತ್ತಾರೆಂದರೆ ಆ ವಿದ್ಯಮಾನವನ್ನು ಬೇರೆ ರೀತಿಯಲ್ಲೇ ನೋಡಬೇಕೆಂಬುದು ಅರ್ಥವಲ್ಲವೇ?

<<ವೈದೇಹಿಯವರು ಆ ಆಚರಣೆಯನ್ನು ಸಮರ್ಥನೆ ಮಾಡದೆ ತಮ್ಮ ಅನುಭವದ ಮೂಲಕ ಅದನ್ನು ವಿವರಿಸುವ ಪ್ರಯತ್ನವನ್ನು ಮಾತ್ರ ಮಾಡಿರುವುದರಿಂದ ಅದರ ಕುರಿತು ಆಕ್ರೋಶವಿಲ್ಲದೆ ಕೇವಲ ವಿವರಿಸುವ ಪ್ರಯತ್ನ ಮಾತ್ರ ಕಾಣುತ್ತದೆ ಎನ್ನುವ ನಿಮ್ಮ ಅಭಿಪ್ರಾಯವೂ ವೈದೇಹಿಯವರ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದಂತಿಲ್ಲ;>>

ವೈದೇಹಿಯವರ ಲೇಖನದಲ್ಲಿ ಮತ್ತೇನಿದೆ? ಸ್ವಲ್ಪ ವಿವರಿಸಿ ನೋಡುವಾ?

<<"ತಾವು ಶ್ರೇಷ್ಠವರ್ಗ ಎಂದು ತಾವೇ ಅಂದುಕೊಂಡು ಆ ಭ್ರಮೆಯಲ್ಲಿ ಮುಳುಗಿದವರು ಕೆಲ ಸಮುದಾಯಗಳಿಗೆ ನೀಡುತ್ತಿದ್ದ ಮರ್ಮಾಂತಿಕ, ಅಕ್ಷಮ್ಯ, ಕ್ಷಮೆಯೇ ಇಲ್ಲದ ಅಗಣಿತ ನೋವುಗಳ ಜೊತೆಗೇನೆ, ಕೇವಲ ವಾದ ವಿವಾದಕ್ಕೆ ನಿಲುಕಲಾರದ, ಸಾವಧಾನವಾಗಿ ಚಿಂತಿಸಬೇಕಾದ ಸಂಗತಿಗಳೂ ನಾವು ಬೆಳೆದು ಬಂದ ಹಾದಿಯಲ್ಲಿ ಇವೆ" ಎಂದಲ್ಲಿಯೂ, "ಪರಿಹಾರ ಕಾಣದ ವ್ಯಾಕುಲತೆ, ಸಂಕಟಗಳ ಪರಾಕಾಷ್ಠೆಯಲ್ಲಿ .......ಸದ್ಯ ಇದು ಆಗಬೇಕು, ಬಂದಿರುವ ಆಪತ್ತು ಕಳೆಯ ಬೇಕು, ಎದುರಾದ ಗುಡ್ಡ ಮಂಜಿನಂತೆ ಕರಗಬೇಕು, ಕಾಣದ ದೇವರೇ, ಕಾಪಾಡು’" ಎಂದಲ್ಲಿಯೂ ಇಂತಹಾ ಆಚರಣೆಗಳ ಬಗ್ಗೆ ಅವರಿಗಿರುವ ಅಭಿಪ್ರಾಯವು ಸ್ಪಷ್ಟವಾಗುತ್ತದೆ.>>

ಅರ್ಥವಾಗುತ್ತಿಲ್ಲ ಸಾರ‍್?

<<ಸಮಾಜವನ್ನು ಬದಲಾಯಿಸುವ ಮುನ್ನ ನಮ್ಮ ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ಹಾಗೂ ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ ಎಂದಾದ ಬಳಿಕ ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ ಎಂದುಬಿಟ್ಟರೆ ಹೇಗೆ? ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಆಧಾರಗಳಾದರೂ ಏನು? ಹಾಗಾಗಿ, ಆಚರಣೆಗಳ ಬಗ್ಗೆ ಅಧ್ಯಯನಗಳು ಬೇಕೇ ಬೇಡವೇ ಎನ್ನುವ ಬಗ್ಗೆ ಲೇಖಕರ ಸ್ಪಷ್ಟವಾದ ನಿಲುವೇನು ಎನ್ನುವುದು ನನಗಂತೂ ತಿಳಿಯಲಿಲ್ಲ.>>

ಸಮಾಜವನ್ನು ಬದಲಾಯಿಸುವ ಮುನ್ನ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಜರೂರು ಇದೆ ಎಂಬುದು ನಮ್ಮದು ಅಭಿಪ್ರಾಯ ಹಾಗೂ ಅದಕ್ಕೆ ವೈಜ್ಞಾನಿಕ ಅಧ್ಯಯನದ ಅವಶ್ಯಕತೆಯೂ ಇದೆ ಎಂಬುದೂ ನಮ್ಮ ಅಭಿಪ್ರಾಯವಾಗಿದೆ. ಆದರೆ ವೈಜ್ಞಾನಿಕ ಅಧ್ಯಯನ ಎಂದೊಡನೆ ಜನರ ಆಚರಣೆಯ ಹಿಂದಿರುವ ಉದ್ದೇಶಗಳನ್ನು ಕಂಡುಹಿಯುವುದು ಮಾತ್ರ ಎಂಬ ನಂಬಿಕೆಯ ಕುರಿತು ನಮಗೆ ತೊಂದರೆ ಕಾಣುತ್ತಿದೆ. ಏಕೆಂದರೆ ಸಮಾಜವಿಜ್ಞಾನಗಳಲ್ಲಿ ವಿಟಿಗೈನ್ಸ್ಟೈನ್ ನಿಂದ ಹಿಡಿದು ಫ್ರಿಟ್ಸ್ ಸ್ಟಾಲ್, ಮುಂದುವರೆದು ಬಾಲಗಂಗಾಧರ ರವರೆಲ್ಲಾ ತೋರಿಸುವಂತೆ ಆಚರಣೆಗಳನ್ನು ಮಾಡಲು ನಂಬಿಕೆ ಅಥವಾ ಉದ್ದೇಶದ ಅಗತ್ಯವಿಲ್ಲ. ಅವರೆಡೂ ಜೊತೆಗಿವೆ ಎಂಬ ಮಾತ್ರಕ್ಕೆ ನಂಬಿಕೆಯಿಂದಲೇ ಆಚರಣೆ ನಡೆಯುತ್ತಿದೆ ಎಂದು ವಾದಿಸಲು ಸಾಧ್ಯವಾಗುವುದಿಲ್ಲ. ಆಚರಣೆಗಳ ಕುರಿತು ಇಂತಹ ನಿರುಪಯುಕ್ತ ಅಧ್ಯಯನ ಸಾಧ್ಯವಿಲ್ಲ ಎಂದು ಹೇಳಿದ್ದೇವೆಯೇ ಹೊರತು ಅದರ ಕುರಿತು ಯಾವ ಅಧ್ಯಯನವೂ ಸಾಧ್ಯವಿಲ್ಲ ಎಂದು ಹೇಳಿಲ್ಲ. ಹಾಗೊಮ್ಮೆ ಹೇಳಿದ್ದರೆ ಇಂದು ನಾವು ಅದರ ಕುರಿತು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಆಚರಣೆಗಳನ್ನು ಅಧ್ಯಯನ ಮಾಡಲು ಸಾಧ್ಯವಿದೆ. ಆದರೆ ಪಾಶ್ಚಾತ್ಯರು ನಮಗೆ ಹೇಳಿಕೊಟ್ಟಿರುವ (ಆಚರಣೆಗೂ ನಂಬಿಕೆಗೂ ಸಂಬಂಧವಿರಲೇಬೇಕು) ವಿಧಾನದಿಂದ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದಷ್ಟೆ ನಮ್ಮ ವಾದ.

ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ<< ಎನ್ನುವುದಕ್ಕೂ ಆಧಾರಗಳೇನು?>>

ಆಧಾರ ಸ್ಪಷ್ಟವಾಗೇ ಗೋಚರಿಸುತ್ತಿದೆ. ಯಾರಾದರೂ ಮಡೆಸ್ನಾದ ಕುರಿತು ಆಗುತ್ತಿರುವ ಚರ್ಚೆಯನ್ನು ಗಮನಿಸಿದರೆ ತಿಳಿಯುತ್ತದೆ. ಪ್ರಗತಿಪರರು ಅಷ್ಟು ವಿರೋಧಿಸಿ ತಮ್ಮ ವಿದ್ವತ್ ನ್ನು ಪ್ರದರ್ಶಿಸಿದರೂ ಅದಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡುವ ಗೋಜಿಗೆ ಆಚರಣೆಯಲ್ಲಿ ಭಾಗವಹಿಸುವವರು ಹೋಗುತ್ತಿಲ್ಲ. ಅಂದರೆ ಇದು ಏನನ್ನು ಸೂಚಿಸುತ್ತದೆ, ಪ್ರಗತಿಪರರ ವಿರೋಧ ಒಂದು ಭಾಗಿದಾರರಿಗೆ ಅರ್ಥವಾಗುತ್ತಿಲ್ಲ ಇಲ್ಲ ಅವರು ಟೀಕೆಗಳ ಕುರಿತು ನಿರಾಸಕ್ತಿಯನ್ನು ಹೊಂದಿದ್ದಾರೆ.

<<ಯಥಾಸ್ಥಿತಿ ಮುಂದುವರಿಯುವುದೇ ಒಳ್ಳೆಯದು ಎಂದರೆ ಆಚರಣೆಗಳನ್ನು ಪರೋಕ್ಷವಾಗಿಯಾದರೂ ಬೆಂಬಲಿಸಿದಂತೆಯೇ ಆಗುವುದಿಲ್ಲವೇ? ಈ ಆಚರಣೆಯನ್ನು ಸಮರ್ಥಿಸುವ ಕಾರ್ಯವನ್ನು ಮಾಡುವು<<ದಕ್ಕೆ >>ಎಂಜಲೆಲೆಯ ಆಚರಣೆಯು ಅತ್ಯದ್ಭುತವಾದುದು ಹಾಗೂ ಅದನ್ನು ಮಾಡಲೇಬೇಕೆಂದು ...ಒತ್ತಿಹೇಳಬೇಕಾಗಿಯೇ ಇಲ್ಲ.>>

ಯಥಾಸ್ಥಿತಿ ಮುಂದುವರೆಯಲಿ, ಇಲ್ಲ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಲಿ, ಏನಾದರೂ ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಮಾತ್ರ ಅರ್ಥಮಾಡಿಕೊಳ್ಳುವ ಪ್ರಯತ್ನ ನಮ್ಮದು. ನಾವಂತೂ ಚಳುವಳಿಗಾರರಲ್ಲ ಏಕೆಂದರೆ ಎಲ್ಲವೂ ಬದಲಾಗಲಿ ಎಂಬ ಧೋರಣೆಯೂ ನಮ್ಮಲ್ಲಿಲ್ಲ, ಜೊತೆಗೆ ನಾವು ಕಟ್ಟಾ ಕನ್ಸರ‍್ ವೇಟಿವ್ಸ್ ಅಲ್ಲ, ಏಕೆಂದರೆ ಈಗಿರುವ ಸ್ಥಿತಿ ಅದ್ಭುತವಾಗಿದೆ, ಎಲ್ಲವೂ ಹಾಗೆಯೇ ಇರಲಿ ಎಂಬ ಆಶಾಭಾವನೆಯೂ ನಮ್ಮಲ್ಲಿ ಇಲ್ಲ. ನಾವು ಅಧ್ಯಯನಕಾರರೆಂದು ತಿಳಿದುಕೊಂಡಿದ್ದೇವೆ, ನಮ್ಮ ಮುಖ್ಯ ಕೆಲಸ ಇರುವುದನ್ನು ಅರ್ಥೈಸುವುದಷ್ಟೆ.

ಇಲ್ಲಿ ಸಾಧ್ಯವಾದಷ್ಟು ನಿಮ್ಮ ಗೊಂದಲಗಳನ್ನು ತಿಳಿಮಾಡಲು ಇಚ್ಚಿಸಿದ್ದೇನೆ. ನಿಮ್ಮನ್ನು ವೈಯುಕ್ತಿಕವಾಗಿ ಟೀಕಿಸುವ, ಹಾಗೂ ಹೊಗಳುವ ಯಾವ ಹುನ್ನಾರವೂ ನಮಗಿಲ್ಲ. ಆದರೆ ಬರೆಯುವ ಓಘದಲ್ಲಿ ಅಂತಹದ್ದೇನಾದರೂ ಕಂಡರೆ ಕ್ಷಮೆಯಿರಲಿ.

skakkilaya's picture
03
Feb
2011
5:16

ಧನ್ಯವಾದಗಳು ಸಂತೋಷ್. ಮರುಕ್ಷಣವೇ ಉತ್ತರಿಸಿದ್ದೀರಿ! ಈಗ ಸ್ವಲ್ಪ ಅರ್ಥ ಆದಂತಿದೆ.

>>ಪಾಶ್ಚಾತ್ಯರು ನಮಗೆ ಹೇಳಿಕೊಟ್ಟಿರುವ (ಆಚರಣೆಗೂ ನಂಬಿಕೆಗೂ ಸಂಬಂಧವಿರಲೇಬೇಕು) ವಿಧಾನದಿಂದ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ<< ಎಂದಾದರೆ ಬೇರೆ ರೀತಿಯ ಅಧ್ಯಯನಗಳ ರೂಪರೇಷೆಗಳೇನು ಎನ್ನುವುದನ್ನು ಸಂಕ್ಷಿಪ್ತವಾಗಿ ಬರೆದರೆ ನನಗೆ ಇನ್ನೂ ಹೆಚ್ಚು ಅರ್ಥವಾದೀತು. ನಾನು ಯಾವುದೇ ಬರಹವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ, ತೆಗಳಿದರೂ ವಿಚಲಿತನಾಗುವುದಿಲ್ಲ.
ಮಡೆಸ್ನಾನದ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಅಗತ್ಯ ಬಿದ್ದರೆ ಆಮೇಲೆ ಬರೆಯುತ್ತೇನೆ (ಹಾಗೇ ವೈದೇಹಿಯವರ ಲೇಖನವನ್ನು ನಾನು ಅರ್ಥೈಸಿಕೊಂದದ್ದನ್ನೂ)

sankru's picture
03
Feb
2011
6:03

ನಿಮ್ಮ ಆಸಕ್ತಿಗೆ ಧನ್ಯವಾದಗಳು

ಬೇರೆ ರೀತಿಯ ಅಧ್ಯಯನ ಹೇಗೆ ಮಾಡಬೇಕೆಂಬುದನ್ನೇ ಸಂಶೋಧನೆ ಮಾಡುತ್ತಿದ್ದೇವೆ. ಆದರೆ ಸದ್ಯಕ್ಕೆ ಇರುವ ಗ್ರಹಿಕೆಯಿಂದ ಆಚರಣೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮಾತ್ರ ಮನದಟ್ಟಾಗುತ್ತಿದೆ. ನಿಮ್ಮ ಪ್ರಶ್ನೆಗೆ ಸುಲಭವಾದ ವಿಧಾನವನ್ನು ನಾನು ಹೇಳಬಹುದು, ಅದೆಂದರೆ ಪಾಶ್ಚಾತ್ಯರು ನಂಬಿಕೆ ಹಾಗೂ ಆಚರಣೆಗೆ ಸಂಬಂಧವಿರಬೇಕು ಎಂಬ ಗ್ರಹಿಕೆಯನ್ನು ನಮಗೆ ಕಟ್ಟಿಕೊಟ್ಟಿದ್ದಾರೆ, ಆದರೆ ಅದನ್ನು ನಾವು ತಿರಸ್ಕರಿಸಿ, ಅವೆರೆಡಕ್ಕೂ ಸಂಬಂಧವಿಲ್ಲ ಎಂಬ ಹೈಪೋಥೀಸಿಸ್ ನಿಂದ ಅಧ್ಯಯನವನ್ನು ಪ್ರಾರಂಭಿಸಬಹುದು. ಆಗ ಬೇರೆ ಬೇರೆ ರೀತಿಯಲ್ಲಿ ನಮ್ಮ ಸಂಪ್ರದಾಯಗಳು ನಮಗೆ ಅರ್ಥವಾಗಲೂ ಬಹುದು.

ಬದಲಿ ಅಧ್ಯಯನ ವಿಧಾನವನ್ನು ಹುಡುಕುವುದು ಅಷ್ಟು ಸುಲಭದ ಕೆಲಸ ಅಲ್ಲ ಎಂಬುದು ನಿಮಗೂ ತಿಳಿದಿರಬಹುದು. ಆದರೆ ಇರುವುದರಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬಹುದು ಎಂಬುದು ನಮ್ಮ ಅಭಿಪ್ರಾಯ