ಎ.ಪಿ.ಸದಾಶಿವರ ೧೫ ವರುಷ ಕಾಯಕ: ಮಣ್ಣಿಗೆ ಮರುಜೀವ

ಎ.ಪಿ.ಸದಾಶಿವರ ೧೫ ವರುಷ ಕಾಯಕ: ಮಣ್ಣಿಗೆ ಮರುಜೀವ

ನನ್ನ ಬಾಲ್ಯದ ಒಂದು ನೆನಪು: ಭತ್ತದ ಗದ್ದೆಗಳ ನಡುವಿನ ಕಟ್ಟಪುಣಿ (ಕಾಲುದಾರಿ)ಯಲ್ಲಿ ನಡೆಯುವಾಗ, ಹಾದಿಯುದ್ದ ಸಾಲಾಗಿ ಕೂತಿರುತ್ತಿದ್ದ ನೂರಾರು ಕಪ್ಪೆಗಳದ್ದು. ನಾನು ಹೆಜ್ಜೆಯಿಡುತ್ತಾ ಹತ್ತಿರ ಬಂದಾಗ ಅವು ಪುಳಕ್ಕನೆ ಭತ್ತದ ಗದ್ದೆಗೆ ಜಿಗಿಯುತ್ತಿದ್ದವು. ನಾನು ಮುಂದಕ್ಕೆ ನಡೆದಾಗ ಆ ಕಪ್ಪೆಗಳು ಮೇಲಕ್ಕೆ ಜಿಗಿದು ಕಟ್ಟಪುಣಿಯಲ್ಲಿ ಪುನಃ ಸಾಲಾಗಿ ಕೂರುತ್ತಿದ್ದವು.
ಹಾಗೆಯೇ ನಮ್ಮ ಆರ್ಯಾಪು ಗ್ರಾಮದ ಗದ್ದೆಗಳಲ್ಲಿ ಮೀನುಗಳು, ಗುಬ್ಬಚ್ಚಿಗಳು, ಕೊಕ್ಕರೆಗಳು ಯಾವಾಗಲೂ ಕಾಣ ಸಿಗುತ್ತಿದ್ದವು. ಈಗ ಅವೆಲ್ಲ ನೆನಪು ಮಾತ್ರ. ನಮ್ಮ ದಕ್ಷಿಣ ಕನ್ನಡದಲ್ಲಿ ಭತ್ತದ ಗದ್ದೆಗಳಲ್ಲಿ ಈಗ ಅವೆಲ್ಲ ಕಾಣಿಸುವುದಿಲ್ಲ. ಇದೆಲ್ಲ ಹೇಗಾಯಿತು?
ನನಗೆ ಚೆನ್ನಾಗಿ ನೆನಪಿದೆ. ನಮ್ಮ ಹಳ್ಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಬರಲು ಶುರುವಾದದ್ದು ೧೯೬೦ರ ದಶಕದಲ್ಲಿ. “ರಾಸಾಯನಿಕ ಗೊಬ್ಬರ ಹಾಕಿ, ಭಾರೀ ಬೆಳೆ ಬರ್ತದೆ” ಎಂದು ಅವರಿಂದ ರೈತರಿಗೆ ಪುಕ್ಕಟೆ ಸಲಹೆ. ಅನಂತರ ನಮ್ಮ ಹಳ್ಳಿಗಳಿಗೆ ಮೂಟೆಮೂಟೆ ರಾಸಾಯನಿಕ ಗೊಬ್ಬರ ಬಂತು. ಆ ಗೊಬ್ಬರ ಹಾಕಿ ಭತ್ತದ ಫಸಲು ಜಾಸ್ತಿಯಾದಂತೆ, ಬೆಳೆಗೆ ಹುಳಗಳ ಕಾಟವೂ ಜಾಸ್ತಿಯಾಯಿತು. ಕೃಷಿ ಇಲಾಖೆಯವರು ಹೇಳಿದ ವಿಷದ್ರಾವಣಗಳನ್ನೆಲ್ಲ ಸಿಂಪರಣೆ ಮಾಡಿದರೂ ಹುಳಗಳು ನಿಯಂತ್ರಣಕ್ಕೆ ಬರಲಿಲ್ಲ ಎಂದು ನನ್ನ ತಂದೆ ಗೊಣಗುತ್ತಲೇ ಇದ್ದರು.
ನನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ನಾನೂ ಕೃಷಿಗೆ ಇಳಿದೆ. ಆಗ ಭತ್ತದ ಬೆಳೆಗೆ ಹಿಟ್ಟಿನ ತಿಗಣೆ ಕಾಟ ಶುರುವಾಯಿತು. ಇದಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ: “ಭತ್ತದ ಬೆಳೆಗೆ ಥಿಮೆಟ್ ಹಾಕಿ.” ಆ ವಿಷ ರಾಸಾಯನಿಕ ಹಾಕಿದ್ದೇ ಹಾಕಿದ್ದು – ನಮ್ಮ ಜಮೀನಿನಲ್ಲಿದ್ದ ಎರೆಹುಳ, ನರ್ತೆ, ಮೀನು, ಕಪ್ಪೆ, ಕೇರೆ ಹಾವು ಎಲ್ಲ ಸತ್ತು ಬಿದ್ದವು. ಹೀಗೆ ನಾವು ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಸುರಿದುಸುರಿದು ಮಣ್ಣನ್ನು ವಿಷಮಯ ಮಾಡಿದ್ದೇವೆ. ಸಾವಿರಾರು ವರುಷಗಳಿಂದ ಫಲವತ್ತಾಗಿದ್ದ ಮಣ್ಣನ್ನು ಒಂದೆರಡು ದಶಕಗಳಲ್ಲಿಯೇ ಹಾಳು ಮಾಡಿದ್ದೇವೆ. ಇದನ್ನೀಗ ಒಂದೆರಡು ವರುಷಗಳಲ್ಲಿ ಸರಿ ಮಾಡಲಾದೀತೇ?
ನನಗಂತೂ ವಿಷ ತುಂಬಿದ ಮಣ್ಣನ್ನು ಪುನಃ ಫಲವತ್ತಾಗಿಸಲು ಹದಿನೈದು ವರುಷ ಬೇಕಾಯಿತು. ಈ ಅವಧಿಯಲ್ಲಿ ನನ್ನ ಜಮೀನಿಗೆ ವರುಷವರುಷವೂ ಸೊಪ್ಪು ಹಾಕಿದೆ; ಹಟ್ಟಿಗೊಬ್ಬರ ಹಾಕಿದೆ; ಗದ್ದೆಯಲ್ಲಿ ಧಾನ್ಯ ಬೆಳೆಸಿದೆ. ಇಂತಹ ನಿರಂತರ ಪ್ರಯತ್ನದಿಂದಾಗಿ ನನ್ನ ಜಮೀನಿನ ಮಣ್ಣಿಗೆ ಮರುಜೀವ ಬಂದಿದೆ. ಇದರ ಪುರಾವೆ: ನಾನು ಬೆಳೆಸುವ ಗಂಧಸಾಲೆ ಭತ್ತದ ತಳಿಯ ಅಕ್ಕಿಗೆ ಪುನಃ ಘಮಘಮ ಪರಿಮಳ ಬಂದದ್ದು. ಅದರ ಪರಿಮಳದಿಂದಾಗಿಯೇ ಅದಕ್ಕೆ ಗಂಧಸಾಲೆ ಎಂಬ ಹೆಸರು. ನಮ್ಮ ಜಮೀನಿನ ಮಣ್ಣು ವಿಷಮಯವಾದಾಗ ಈ ತಳಿಯ ಪರಿಮಳವೇ ಕಳೆದು ಹೋಗಿತ್ತು. ಒಂದೆಕ್ರೆ ಜಮೀನಿನಲ್ಲಿ ನನ್ನ ಭತ್ತದ ಕೃಷಿ. ವರುಷಕ್ಕೆ ಎರಡು ಬೆಳೆ – ಮಳೆಗಾಲದ ಬೆಳೆ ಮತ್ತು ಸುಗ್ಗಿ ಬೆಳೆ. ಇದರಿಂದ ನನಗೆ ಎಕ್ರೆಗೆ ೮ರಿಂದ ೯ ಕ್ವಿಂಟಾಲ್ ಅಕ್ಕಿ ಸಿಗುತ್ತಿತ್ತು. ಆದರೆ ಈಗ ಎಕ್ರೆಗೆ ೩ರಿಂದ ೪ ಕ್ವಿಂಟಾಲ್ ಮಾತ್ರ ಸಿಗುತ್ತಿದೆ. ಕಾರಣ: ನಮ್ಮ ಆರ್ಯಾಪು ಗ್ರಾಮದ ಮರಿಕೆ ಬಯಲಿನಲ್ಲಿ ಬೇರೆಯವರೆಲ್ಲ ಭತ್ತದ ಕೃಷಿ ತೊರೆದಿದ್ದಾರೆ. ೨೦೦ ಎಕ್ರೆ ಬಯಲಿನಲ್ಲಿ ನಾನೊಬ್ಬ ಮಾತ್ರ ಭತ್ತ ಬೆಳೆಸಿದಾಗ ಏನಾಗುತ್ತದೆ?
ಸುತ್ತಮುತ್ತಲಿನ ಕಾಡುಹಂದಿ, ನವಿಲು, ಸಣ್ಣಪುಟ್ಟ ಹಕ್ಕಿಗಳೆಲ್ಲ ದಾಳಿ ಮಾಡೋದು ನನ್ನ ಭತ್ತದ ಗದ್ದೆಗೇ. ಅಬ್ಬಬ್ಬಾ, ನೂರಾರು ಪುಟ್ಟ ಹಕ್ಕಿಗಳ ಸೈನ್ಯ ನನ್ನ ಭತ್ತದ ಗದ್ದೆಗಿಳಿಯುವುದನ್ನು ನೋಡಬೇಕು ನೀವು. ಕೆಲವೇ ನಿಮಿಷಗಳಲ್ಲಿ ಸಾವಿರಾರು ಭತ್ತದ ಕಾಳು ತಿಂದು ಧ್ವಂಸ ಮಾಡ್ತವೆ.
ಇಷ್ಟೆಲ್ಲ ಕಷ್ಟಪಟ್ಟು ಭತ್ತ ಬೆಳೆದು, ಅಕ್ಕಿ ಮಾಡಲಿಕ್ಕಾಗಿ ಭತ್ತದ ಮಿಲ್ಲಿಗೆ ಒಯ್ದರೆ, “ಇದನ್ನು ನಾವು ಅಕ್ಕಿ ಮಾಡೋದಿಲ್ಲ. ನಮಗೆ ಕನಿಷ್ಠ ನೂರು ಕ್ವಿಂಟಾಲ್ ಭತ್ತ ತನ್ನಿ” ಅಂತಾರೆ. ಹಾಗಾಗಿ, ನಾವೇ ಭತ್ತದಿಂದ ಅಕ್ಕಿ ಮಾಡಬೇಕಾಗಿದೆ. ಹಾಗೆ ನಾವೇ ಅಕ್ಕಿ ಮಾಡುವಾಗ, ಅಕ್ಕಿಕಾಳುಗಳು ತುಂಡಾಗುತ್ತವೆ. ಈ ಅಕ್ಕಿ ನೋಡಿದ ಗ್ರಾಹಕರು “ಇದರಲ್ಲಿ ಕಡಿ ಅಕ್ಕಿ ಉಂಟು; ನಮಗೆ ಬೇಡ” ಅಂತಾರೆ. ಮಾರಾಟ ಆಗದಿರುವ ಅಕ್ಕಿಯನ್ನು ಶೇಖರಿಸಿಡುವುದೂ ನಮಗೆ ಸಮಸ್ಯೆ. ಆರು ತಿಂಗಳ ನಂತರ ಅಕ್ಕಿಯಲ್ಲಿ ಗುಗ್ಗುರು (ಕೀಟ) ಆಗಿಯೇ ಆಗುತ್ತದೆ. ಗ್ರಾಹಕರು “ಇದರಲ್ಲಿ ಗುಗ್ಗುರು ಇದೆ; ನಮಗೆ ಬೇಡ” ಅಂತಾರೆ. ಗೋಡೌನಿನಲ್ಲಾದರೆ ಅಕ್ಕಿಯಲ್ಲಿ ಗುಗ್ಗುರು ಆಗದಂತೆ ಅಕ್ಕಿ ಮೂಟೆಗಳಲ್ಲಿ ಕ್ವಿಕ್ ಫೋಸ್ ಗುಳಿಗೆ ಇಡುತ್ತಾರೆ. ಅದು ಅಲ್ಯುಮಿನಿಯಂ ಫಾಸ್ಪೈಡ್ ಎಂಬ ಮಹಾವಿಷ. ಇದನ್ನೆಲ್ಲ ತಿಳಿಯದ ಗ್ರಾಹಕರಿಗೆ, ನನ್ನಂಥವರು ಬೆಳೆಸಿದ ಸಾವಯವ ಅಕ್ಕಿಯ ನಿಜವಾದ ಬೆಲೆ ಗೊತ್ತೇ?
ತರಕಾರಿ ಬೇಸಾಯವಂತೂ ರೈತರಿಗೆ ದೊಡ್ಡ ಸವಾಲು. ಯಾವ ತರಕಾರಿ ಬೀಜ ಬಿತ್ತಿದರೂ, ಮೊಳಕೆ ಬರುವಾಗಲೇ ಕೊತ್ತಂಬರಿ ಹುಳದ ದಾಳಿ. ಅನಂತರ ಹಲವಾರು ಕೀಟಗಳ, ರೋಗಗಳ ಬಾಧೆ. ತರಕಾರಿ ಗಿಡಗಳಿಗೆ ವಾರವಾರವೂ ಸಾವಯವ ಗೊಬ್ಬರ ಹಾಕಲೇ ಬೇಕು. ಅಂತೂ ಉತ್ಪಾದನಾ ವೆಚ್ಚವೇ ಕಿಲೋಕ್ಕೆ ೪೦ರಿಂದ ೪೫ ರೂಪಾಯಿ ಆಗ್ತದೆ. ಇದಕ್ಕೆ ಸಾಗಾಟ ವೆಚ್ಚ ಸೇರಿಸಿದರೆ, ಯಾವುದೇ ತರಕಾರಿಯನ್ನು ಕಿಲೋಕ್ಕೆ ೫೦ರಿಂದ ೬೦ ರೂಪಾಯಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗದು. ಇದನ್ನೆಲ್ಲ ತಿಳಿಯದ ಗ್ರಾಹಕರು “ನಿಮ್ಮ ರೇಟು ಇಷ್ಟು ಜಾಸ್ತೀನಾ?” ಎಂದು ಕೇಳುತ್ತಾರೆ. ಅವರಿಗೆ ಏನೆಂದು ಉತ್ತರಿಸಬೇಕು?
ಇವೆಲ್ಲ ಸಮಸ್ಯೆಗಳೊಂದಿಗೆ, ಈಗ ಎಲ್ಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ. ಇದು ನಾವೇ ಮಾಡಿಕೊಂಡ ಸಮಸ್ಯೆ. ನಮ್ಮ ಆರ್ಯಾಪು ಗ್ರಾಮದಲ್ಲೇ ನೋಡಿ – ೨೦೦ ಎಕರೆ ಮರಿಕೆ ಬಯಲಿನಲ್ಲಿ ೨೦೦ ಬೋರ್ ವೆಲ್ಲುಗಳಿಂದ ನೀರೆತ್ತಲಾಗುತ್ತಿದೆ. ಈ ರೀತಿಯಲ್ಲಿ ಅಂತರ್ಜಲದ ದುರ್ಬಳಕೆ ಮಾಡಿದರೆ, ನೀರಿನ ಸಮಸ್ಯೆ ವರುಷದಿಂದ ವರುಷಕ್ಕೆ ಬಿಗಡಾಯಿಸದೆ ಇದ್ದೀತೇ?
ವಿದ್ಯುತ್ತಿನದಂತೂ ಎಂದಿಗೂ ಮುಗಿಯದ ಸಮಸ್ಯೆ. ನಮ್ಮ ಹಳ್ಳಿಗಳಲ್ಲಿ ಎಷ್ಟು ಗಂಟೆ ವಿದ್ಯುತ್ ಇಲ್ಲ ಅನ್ನೋದಕ್ಕಿಂತ ಎಷ್ಟು ಗಂಟೆ ವಿದ್ಯುತ್ ಇದೆ ಎಂಬ ಲೆಕ್ಕ ಸುಲಭ. ಕೆಲವೇ ಗಂಟೆ ವಿದ್ಯುತ್ ಇದ್ದರೂ ಆಗ ವೋಲ್ಟೇಜ್ ಕಡಿಮೆ. ಹಾಗಿರುವಾಗ, ನಾವು ಕೃಷಿಕರು ನಮ್ಮ ಬೆಳೆಗಳಿಗೆ ನೀರೊದಗಿಸಲು ಸಾಧ್ಯವೇ?
ಹೀಗೆ, ಬೇಸಾಯದ ಬಗ್ಗೆ ತಮ್ಮ ದಶಕಗಳ ಅನುಭವ ಹಂಚಿಕೊಳ್ಳುತ್ತ, ರೈತರ ಇಂದಿನ ಸ್ಥಿತಿಗತಿ ಬಗ್ಗೆ ಹತ್ತುಹಲವು ಪ್ರಶ್ನೆಗಳನ್ನು ೧೯ ಮಾರ್ಚ್ ೨೦೧೬ರಂದು ನೆರೆದಿದ್ದವರ ಮುಂದಿಟ್ಟವರು ದಕ್ಷಿಣ ಕನ್ನಡದ ಹೆಸರುವಾಸಿ ಸಾವಯವ ಕೃಷಿಕರಾದ ಎ.ಪಿ. ಸದಾಶಿವ. (ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು ವೇಣೂರು ಹತ್ತಿರದ ಪಿಲಿಯೂರು ಗ್ರಾಮದ ಸುರೇಶ್ ಗೋರೆಯವರ ತೋಟದ ಮನೆಯಲ್ಲಿ ಏರ್ಪಡಿಸಿದ್ದ “ಕೃಷಿಕರೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ.) ಅವರು ಮಾತು ಮುಗಿಸಿದಾಗ ಅಲ್ಲಿ ಮೌನವಿತ್ತು – ಅವರ ಯಾವುದೇ ಪ್ರಶ್ನೆಗೆ ಉತ್ತರಿಸಲಾಗದ ಮೌನ. (ಅವರ ಮೊಬೈಲ್ ೯೪೪೯೨೮೨೮೯೨)