ಒಂದು ಗೂಡು, ಒಂದು ಪಯಣ, ಒಂದು ವಲಸೆ

ಒಂದು ಗೂಡು, ಒಂದು ಪಯಣ, ಒಂದು ವಲಸೆ

ಕವನ

(ಈ ಪದ್ಯವನ್ನು ಐದಾರು ವರ್ಶಗಳ ಹಿಂದೆ ಬರೆದದ್ದು. ಇದು ನನ್ನ ಸ್ವತಂತ್ರ ಕವನವೋ, ಅನುವಾದವೋ ಎಂಬುದರ ಬಗ್ಗೆ ನನಗೆ ಖಚಿತವಾಗಿ ತಿಳಿದಿಲ್ಲ. ಹೀಗೆಯೇ ಏನನ್ನೋ ಹುಡುಕುತ್ತಿದ್ದಾಗ ಸಿಕ್ಕ ನನ್ನ ಕೈಬರೆಹದಲ್ಲಿದ್ದ ಈ ಕವನವನ್ನು ಇಲ್ಲಿ ಹಾಕುತ್ತಿದ್ದೇನೆ. ಹಾಗೆಯೇ, ಸಂಪದದಲ್ಲಿ ಇದು ನಾನು ಹಾಕುತ್ತಿರುವ ಮೊದಲ ಕವನ. ತಮಗೂ ಇಶ್ಟವಾದರೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ.)

 

 

 


 

ಪ್ರತಿ ಹಕ್ಕಿಗೊಂದು ಗೂಡು, ಒಂದು ಪಯಣ,

ಒಂದು ವಲಸೆ;

ಕೊನೆಯಿಲ್ಲದ ಬಾನಿನಲಿ ತಾ ಏಕಾಂಗಿ, ಒಂಟಿ ಬದುಕು,

ಒಂದು ಹಾರಾಟ;

ಚುಮುಚುಮು ಚಳಿಯಲೂ ಚೆಚ್ಚನೆ ಸ್ಪರ್ಶವೀವ

ಹಳೆ ನೆನಪುಗಳು

ಹಗಲಿಡೀ ವಿಶಾಲ ಆಗಸವಿಡೀ ಜೋಕಾಲಿ

ಇರುಳು ಮಾತ್ರ ತನ್ನ ಪುಟ್ಟಗೂಡಿನಲಿ

ನಡುವೆ ಆಗೊಮ್ಮೆ ಈಗೊಮ್ಮೆ ಅರಿಯದ ಭೂಜಗದಲಿ ಸಮೀಕ್ಶೆ

ಹಗಲು-ಇರುಳು ಕಳೆದಂತೆ, ಋತುಮಾಸಗಳ

ಸ್ಥಿತ್ಯಂತರ,

ಗಾಢಾಂಧಕಾರದಿ ಮನದ ಬಯಲಲಿ

ಭೂತ ಸಂಚಾರ,

                         ಸಾಮ್ರಾಜ್ಯದಿ ಹಕ್ಕಿ ತಾ ಒಬ್ಬಂಟಿ, ಅಶಕ್ತ

ಬದುಕು, ಅನಿಶ್ಚಿತ ವಾಸ

ಸದ್ದುಗದ್ದಲದ ಕಾಲದ ಪರಿಧಿಯಲಿ ನೋವಿನ ಆರ್ತತೆ,

ಕ್ಶೀಣಸ್ವರ

ಹಕ್ಕಿ ತಾ ನಿಗದಿಗೊಳಿಸಿದ ಸಮಯದ ನಿರೀಕ್ಶೆ

ಮಾಡುತಿಹುದು,

ತಾ ಸಾಗಿದ ದಾರಿಯ ಅದೃಶ್ಯ ತಂತು ಮುರಿದು

ಬಿದ್ದುದ ನೋಡಿಹುದು,

ಹಕ್ಕಿಯ ಸಹಜ ಪ್ರವೃತ್ತಿ ಸದ್ಯದ ಘಟನೆ

ಸೂಚಿಸುತಿಹುದು,

ಹಾದಿಯಿಲ್ಲದ ಜಗವು ಹಕ್ಕಿಗಾವ ದಾರಿಯ ತೋರಿಸುವುದು?

ಬೆಟ್ಟಗುಡ್ಡಗಳ ಸಂಕೀರ್ಣ ಭೂಪಟ

ದಿಕ್ಕುಗೆಟ್ಟಿಹ ಹಕ್ಕಿಯನು ಪರಿಹಾಸ್ಯ

ಮಾಡುತಿಹುದು

ಹಕ್ಕಿಯ ಕೊನೆಯುಸಿರು ಹಸಿದ ಗಾಳಿಯ

ಆಹಾರವಾಗಿಹುದು

ನಿರ್ದಯಿ ಭೂಮಿ, ಸಂತಾಪ ಸೂಚಿಸದೆ

ನಿರ್ಲಿಪ್ತವಾಗಿ

ಹಕ್ಕಿಯ ಸಾವಿನ ಹೊರೆಯ ಹೊತ್ತಿಹುದು...!

 

(ಚಿತ್ರ ಕೃಪೆ: ಗೂಗಲ್ ಇಮೇಜಸ್ )