ಒಂದೆರಡು ದಶಕಗಳ ಹಿಂದೆ, ಮದುವೆ ನಡೆಯುವ ಸಂದರ್ಭದಲ್ಲಿ, ಧ್ವನಿವರ್ಧಕಗಳ ಮೂಲಕ ಒಂದು ಮಧುರವಾದ ಹಾಡು, ಅನಿವಾರ್ಯವೆಂಬಂತೆ ಯಾವಾಗಲೂ ಕೇಳಿಬರುತ್ತಿತ್ತು. ಧ್ವನಿವರ್ಧಕದವರು ತಮ್ಮ ಪರಿಕರಗಳನ್ನು ಜೋಡಿಸಿದ ಕೂಡಲೆ, ಗಣೇಶನ ಸ್ತುತಿಯ ಹಾಡನ್ನು ಹಾಕುತ್ತಿರುವಂತೆಯೇ, ಸೀತಾ ಚಿತ್ರದ ಒಂದು ಗೀತೆಯನ್ನು ಬಿತ್ತರಿಸುತ್ತಿದ್ದರು. ಈ ಹಾಡನ್ನು ಬರೆದ ಕವಿಗೆ, ಸಂಗೀತ ಸಂಯೋಜಕರಿಗೆ ಮತ್ತು ಮುಖ್ಯವಾಗಿ ಇದನ್ನು ಮಧುರವಾಗಿ ಹಾಡಿದ ಗಾಯಕ ಎಸ್.ಪಿ.ಬಿ. ಅವರಿಗೆ ಅದೆಷ್ಟು ನವ ದಂಪತಿಗಳು ತಮ್ಮ ಧನ್ಯವಾದಗಳನ್ನು ಸಮರ್ಪಿಸಿರಬಹುದೋ, ನಿಜಕ್ಕೂ ಲೆಕ್ಕಕ್ಕೆ ಸಿಗಲಾರದು.
ಶುಭಾಶಯ, ಶುಭಾಶಯ
ಮದುಮಗಳಿಗೂ, ಮದುಮಗನಿಗೂ
ಶುಭಾಶಯ||
ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ.
ಮದುವೆಯ ಈ ಬಂಧ, ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ||
ಮನಸನ್ನು ಅರಿತು ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ನೂರೊಂದು ವರುಷ ಚೆಲ್ಲಿರಲಿ ಹರುಷ
ಬೆಳಗಿರಲಿ ಒಲವ ಹಣತೆ||
ಸಿರಿತನದ ಸಿಹಿಯು ಬಡತನದ ಕಹಿಯು
ನಿಮಗೆಂದು ಒಂದೆ ಇರಲಿ||
ಸಮನಾದ ರೀತಿ ತೋರುವುದೆ ಪ್ರೀತಿ
ಬಿರುಗಾಳಿ ಏನೆ ಬರಲಿ||
ಈ ಹಾಡಿನಲ್ಲಿ ಕ್ಲೀಷೆ ಅನ್ನಿಸಬಹುದಾದ ಕೆಲವು ಸಾಲುಗಳಿದ್ದರೂ, ಮದುವೆಯ ಪವಿತ್ರ ಸಂಬಂಧಕ್ಕೆ ಹೊಂದುವ ಹಲವು ವಿಚಾರಗಳು ಸರಳವಾಗಿ ಮೂಡಿಬಂದಿವೆ. ಸರಳತೆಯೇ ಈ ಗೀತೆಯ ಸಾಹಿತ್ಯದ ತಿರುಳು.
ಅಂದಿನ ಗಾಯಕರೇ ಹಾಗೆ. ಹಾಡಿನ ಭಾವ ಮತ್ತು ರಸಕ್ಕೆ ಅನುಗುಣವಾಗಿ, ಧ್ವನಿಯಲ್ಲಿ ಏರಿಳಿತ ತೋರಿ ಹಾಡುವಲ್ಲಿ ತಮ್ಮ ಪ್ರಾವಿಣ್ಯತೆ ಮೆರೆಯುತ್ತಾರೆ. ಉದಾಹರಣೆಗೆ ಸಾಕ್ಷಾತ್ಕಾರ ಚಿತ್ರದ ಹಾಡುಗಳನ್ನು ಹಾಡುವಲ್ಲಿ, ಪಿ.ಬಿ.ಶ್ರೀನಿವಾಸ್ ತೋರಿದ ಧ್ವನಿ ವೈವಿಧ್ಯತೆಯನ್ನು ಗಮನಿಸಬಹುದು. ಒಲವೆ ಜೀವನ ಸಾಕ್ಷಾತ್ಕಾರ ಎಂಬ ಯುಗಳ ಗೀತೆಯಲ್ಲಿ, ಹೆಣ್ಣು ಧ್ವನಿಯು ಮೊದಲಿಗೆ ಬಂದು, ಅದನ್ನು ಅನುಸರಿಸಿ, ಪಿ.ಬಿ.ಎಸ್. ಹಾಡುವಾಗ, ನಾವು ಕೇಳುವ ಧ್ವನಿಯೇ ಬೇರೆ, ಅದೇ ಚಿತ್ರದ ಕೆಳಕಂಡ ಇನ್ನೊಂದು ಹಾಡನ್ನು ಅವರು ಹೇಳುವ ಧ್ವನಿಯೇ ಬೇರೆ-
ಜನ್ಮ ಜನ್ಮದಾ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ||
ಅನಂತ ಪ್ರಕೃತಿಯ ಲಾವಣ್ಯದಂತೆ
ಲಾವಣ್ಯವತಿಯರ ವಯ್ಯಾರದಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ತುಂಗ ಭದ್ರ ಸಂಗಮದಂತೆ||ಜನ್ಮಜನ್ಮದಾ||
ಮಧುರತೆಯೇ ಮೈವೆತ್ತ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ಈ ರೀತಿಯ ಕೆಲವು ಹಾಡುಗಳನ್ನು ಕೇಳುವುದೇ ಒಂದು ಒಳ್ಳೆಯ ಅನುಭವ.
ತಮ್ಮ ಧ್ವನಿಯಲ್ಲಿ ಪ್ರೀತಿಯೇ ಒಸರುವಂತೆ ಪಿ.ಬಿ.ಎಸ್. ಹಾಡಿರುವ ಕೆಲವು ಪ್ರೇಮಗೀತೆಗಳಿಗೆ ಮನಸೋಲದ ಕನ್ನಡಿಗರೇ ಇಲ್ಲವೆನ್ನಬಹುದು. ಮಧುರ ಧ್ವನಿಯ ಜೊತೆ, ಆ ಹಾಡಿನ ಭಾವವನ್ನು ಬಿಂಬಿಸುವ ಕೆಲವು ಹಳೆಯ ಚಿತ್ರಗೀತೆಗಳು, ಕನ್ನಡ ಸಂಗೀತ ಪ್ರಪಂಚದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವುದಲ್ಲದೇ, ಪಿ.ಬಿ.ಶ್ರೀನಿವಾಸ್ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಿವೆ.
ಕುಲವಧು ಚಿತ್ರದಲ್ಲಿ ಪಿ.ಬಿ.ಎಸ್. ಹಾಡಿರುವ ಒಂದು ಮಧುರಗೀತೆಯ ಚರಣದಲ್ಲಿ, ಮಧುರಗೀತೆ ಎಂಬ ಶಬ್ದ ಬೆಸೆದುಕೊಂಡುರುವುದು ಒಂದು ವಿಶೇಷ.
ಒಲವಿನ ಪ್ರಿಯಲತೆ, ಅವಳದೇ ಚಿಂತೆ,
ಅವಳ ಮಾತೆ ಮಧುರ ಗೀತೆ, ಅವಳೆ ಎನ್ನ ದೇವತೆ
ಮರೆಯದಂಥ ಪ್ರೇಮ ರಾಶಿ,
ಹೃದಯದಾಶಾ ರೂಪಸಿ
ಮನದೊಳಾಡೊ ಆ ವಿಲಾಸಿ, ಒಲಿದು ಬಂದು ಪ್ರೇಯಸಿ
ಈ ಹಾಡಿನ ಧ್ವನಿಯ ಏರಿಳಿತ ಮತ್ತು ಗಾಂಧಿನಗರ ಚಿತ್ರದ ಒಂದು ಗೀತೆಯ ಧ್ವನಿಯನ್ನು ನೆನಪಿಸಿಕೊಂಡರೆ, ಪಿ.ಬಿ.ಎಸ್. ಅವರ ಧ್ವನಿ ಪ್ರೇಮಗೀತೆಗಳಿಗೆ ಅದೆಷ್ಟು ಸರಿಯಾಗಿ ಹೊಂದುತ್ತದೆಂಬುದು ಸ್ಪಷ್ಟವಾಗುತ್ತದೆ.
ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಅದನೋದಲು ಹರಿವುದು ಜೇನಿನಾ ಹೊಳೆ
ಈ ಹಾಡಿನ ಶೈಲಿಯನ್ನೇ ನೆನಪಿಸುವ ಮತ್ತೊಂದು ಗೀತೆ ಕಸ್ತೂರಿ ನಿವಾಸ ಚಿತ್ರದ್ದು.
ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
ನಕ್ಕು ನೀ ನಲಿದಾಗ, ಸೋತೆ ನಾನಾಗ
ವಾಸಂತಿ ನಲಿದಾಗ, ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕವಿದಾಗ, ನವಿಲೊಂದು ಕುಣಿದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರಡು ಬೆರೆತಾಗ
ಮಿಡಿದಂಥ ಹೊಸರಾಗ ಅದುವೇ ಅನುರಾಗ, ಬಾರಾ.
ಹೀಗೆ ಪಿ.ಬಿ.ಎಸ್. ಹಾಡಿದ ಮಧುರ ಗೀತೆಗಳ ಕುರಿತು ಎಷ್ಟು ಬರೆದರೂ ಕಡಿಮೆಯೇ ಅನ್ನಬಹುದು. ಕನ್ನಡದ ಸಾರ್ವಕಾಲಿಕ ಮಧುರ ಗೀತೆಗಳ ಪಟ್ಟಿಮಾಡಿದರೆ, ಅದರಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿದ ಹಲವಾರು ಹಳೆಯ ಚಿತ್ರಗೀತೆಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ. ಸೀತಾ ಚಿತ್ರ ಈ ಒಂದು ಹಾಡು ಎಲ್ಲಾ ಪ್ರೇಮಿಗಳ ಮನದಲ್ಲೂ ತನ್ನ ಛಾಪನ್ನು ಮೂಡಿಸಿರಲೇಬೇಕು.
ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೊ ಏನೊ ನನ್ನ ಮನದ ಗುಡಿಯಲಿ.
ಮಿಡಿದೆ ನೀನು ಪ್ರಣಯನಾದ, ಹೃದಯ ವೀಣೆ ಅದರಲಿ
ಬೆರೆತು ಹೋದೆ ಮರೆತು ನಿಂದೆ ಅದರ ಮಧುರ ಸ್ವರದಲಿ.
ಕಂಗಳಲ್ಲೇ ಕವನ ಬರೆದು ಕಳಿಸಿದೆ ನೀ ಇಲ್ಲಿಗೆ
ಅಂಗಳದಿ ಅರಳಿದಾಗ, ನನ್ನ ಒಲವ ಮಲ್ಲಿಗೆ.
ನಾ ಮೆಚ್ಚಿದ ಹುಡುಗ ಚಿತ್ರದ ಯುಗಳಗೀತೆಯೊಂದರಲ್ಲಿ, (ಸಹ ಗಾಯಕಿ ಪಿ.ಸುಶೀಲ), ಶ್ರೀನಿವಾಸ ಅವರ ಮಧುರ ಕಂಠ ಹೊರೆಡಿಸುವ ಪ್ರೀತಿಯ ಕಂಪನ, ಅಂತಹ ಸಾರ್ವಕಾಲಿಕ ಮಧುರತೆಗೆ ಒಂದು ಉದಾಹರಣೆ:
ಬೆಳದಿಂಗಳಿನಾ ನೊರೆ ಹಾಲು ಕೊಡದಲಿ ತುಂಬಿ ತಂದವಳೆ
ಹೊಳೆಯುವ ತಾರೆಯ ಹೊಂಬೆಳಕು
ಕಣ್ಣಲಿ ಸೂಸಿ ತಂದವಳೆ.
ಬಾ ಬಾರೆ, ಓ ಗೆಳತಿ ಜೀವನ ಸಂಗಾತಿ.
ಮಲ್ಲಿಗೆ ಹಂಬಿನ ತೋಟದಲಿ, ಚಂದಿರನಂತೆ ಬಂದವನೆ
ಅರಿಯದ ಹೆಣ್ಣಿನ ಹೃದಯದಲಿ, ಸುಮಧುರ ನೋವನು ತಂದವನೆ
ಬಾಬಾರೋ, ಓ ಗೆಳೆಯ, ಜೀವನ ಸಂಗಾತಿ.
ಪಿ.ಬಿ.ಶ್ರೀನಿವಾಸ ಹಾಡಿದ, ವಧೂವರರಿಗೆಂದೇ ಮೀಸಲಾದ, ಶುಭಾಶಯ, ಶುಭಾಶಯ ಗೀತೆ ಮತ್ತು ನವ ದಂಪತಿಗಳಿಗೆ ಸೂಕ್ತವೆನಿಸುವ, ಈ ಮೇಲಿನ ಬೆಳದಿಂಗಳಿನಾ . . . ಹಾಡುಗಳು, ಎಲ್ಲಾ ಮದುವೆ ಮಂಟಪಗಳಲ್ಲಿ ಸದಾ ಅನುರಣನ ಗೊಳ್ಳುತ್ತಿರಲಿ ಎಂದು ಅನಿಸಿದರೆ, ಅದಕ್ಕೆ ಪಿ.ಬಿ.ಶ್ರೀನಿವಾಸ್ ಅವರ ಮಧುರ ಧ್ವನಿಯೇ ಕಾರಣ.









ಪ್ರತಿಕ್ರಿಯೆಗಳು
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ಶಶಿಧರ್ ಅವರೆ ನಿಮ್ಮ ಲೇಖನವನ್ನು ನನ್ನ ಪರಿಕರದಲ್ಲಿ ಓದಲಾಗುತ್ತಿಲ್ಲ. ಯೂನಿಕೋಡ್ ಬಳಸಿ ಲೇಖನವನ್ನು ಮಿನ್ನೇರಿಸಿದರೆ ಓದಬಹುದೆ0ದುಕೊಳ್ಳುತ್ತೇನೆ.
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ಯುನಿಕೋಡ್ ನಲ್ಲಿ ಲೇಖನವನ್ನು ಬದಲಿಸಿದ ಸಂಪದ ತಂಡಕ್ಕೆ ಧನ್ಯವಾದಗಳು. ಈಗ ನೀವು ಓದಬಹುದೆನ್ನಿಸುತ್ತೆ.
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ಯೂನಿಕೋಡ್^ನಲ್ಲಿ ಬದಲಾಯಿಸಿದ ನ0ತರ ಲೇಖನವನ್ನು ಓದಿದೆ; ಒಳ್ಳೆಯ ವಿಷಯಾಧಾರಿತ ಲೇಖನಕ್ಕೆ ಅಭಿನ0ದನೆಗಳು ಶಶಿಧರ್ ಅವರೆ.
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ಅಭಿನಂದನೆಗಳು ಮತ್ತು ಧನ್ಯವಾದಗಳೆಲ್ಲಾ ಪಿ.ಬಿ.ಎಸ್. ಅವರಿಗೇ ಸಲ್ಲಬೇಕು.
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ಶಶಿಧರ್ ರವರೆ,
"ಮದುವೆಯ ಈ ಬಂಧ.." ಹಾಡು ಹಾಡಿದ್ದು ಪಿ.ಬಿ.ಎಸ್ ರವರು ಅಲ್ಲ, ಅದನ್ನು ಹಾಡಿದ್ದು ಎಸ್. ಪಿ. ಬಾಲಸುಬ್ರಮಣ್ಯಂ ರವರು.
ಚಿತ್ರ: ಸೀತಾ, ತೆರೆಕಂಡ ವರ್ಷ: ೧೯೭೦, ತಾರಾಗಣ: ಗಂಗಾಧರ್, ಕಲ್ಪನಾ, ರಮೇಶ್, ಅಶ್ವಥ್ ಮುಂತಾದವರು
ಹಾಡಿನ ಕೊಂಡಿ ಇಲ್ಲಿದೆ: http://www.raaga.com...
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ನೀವಂದದ್ದು ನಿಜ. ನನ್ನ ಗಮನಕ್ಕೆ ಈಗ ಬಂದಿದೆ. ಅದಕ್ಕೆಂದೇ ಸ್ವಲ್ಪ ಬದಲಾವಣೆ ಮಾಡಿದ್ದೇನೆ. ನಿಮಗೆ ನನ್ನ ಧನ್ಯವಾದ.
ಉ: ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ "ಶುಭಾಶಯ"
ಶಶಿಧರ್ ರವರೆ, ಆದರೆ ಅವರ ಇನ್ನೊಂದು ಹಾಡು " ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ" - ದಾರಿ ತಪ್ಪಿದ ಮಗ ಚಿತ್ರದ್ದು - ನಿಮ್ಮ ಉದಾಹರಣೆಗೆ ಸೇರಿಸಿಕೊಳ್ಳಬಹುದು. ಪಿ.ಬಿ.ಶ್ರೀನಿವಾಸ್ ರವರು ಹಾಡಿದ ಮಧುರ ಹಾಡುಗಳಲ್ಲಿ (ನನ್ನ ಮೆಚ್ಚಿನದು ಸಹ..) ಒಂದು...
ಲಿಂಕ್: http://www.youtube.c...
ಉ: ಒಂದು ಹಳೆಯ ಚಿತ್ರಗೀತೆ: "ಶುಭಾಶಯ... ಶುಭಾಶಯ...."
ಶಶಿಧರ ಹೆಬ್ಬಾರ ಹಾಲಾಡಿಯವರಿಗೆ ನಮಸ್ಕಾರಗಳು,
ನಿಮ್ಮ ಒಂದು ಹಳೆಯ ಚಿತ್ರಗೀತೆ ' ಶುಭಾಶಯ ' ಲೇಖನ ಓದಿದೆ. ಪಿ.ಬಿ.ಶ್ರೀನಿವಾಸರನ್ನು ನೆನಪಿಸಿಕೊಳ್ಳುವುದೇ ಒಂದು ಸುಮಧುರ ಗಳಿಗೆ. ನಾವೆಲ್ಲ ಪಿ.ಬಿ, ಘಂಟಸಾಲಾ, ರಫಿ, ಮುಖೇಶ, ಮನ್ನಾಡೆ, ತಲತ್ ಮೆಹಮ್ಮೂದ್, ಹೇಮಂತ ಕುಮಾರ, ಎಸ್.ಡಿ.ಬರ್ಮನ್, ಹೇಮಂತ ಕುಮಾರರ ವೈವಿಧ್ಯಪೂರ್ಣ ಹಾಡುಗಳನ್ನು ಕೇಳಿ ಅನಂದಿಸಿದವರು. ಪಿ.ಬಿ.ಯವರ ಹಾಡುಗಳು ಇಂದಿಗೂ ನಮ್ಮನ್ನು ಅವ್ಯಕ್ತ ಲೋಕಕ್ಕೆ ಎಳೆದುಕೊಂಡು ಹೋಗುತ್ತವೆ.ಅವರದು ಗಂಧರ್ವ ಗಾನ. ಅವರ ಹೆಸರಿನಲ್ಲಿ ಸಂಗೀತದ ರಸ ಹೊನಲುಗಳೆ ಹರಿದಿವೆ. ಅವುಗಳನ್ನೆಲ್ಲ ನಿಮ್ಮ ಲೇಖನ ಜ್ಞಾಪಿಸಿತು. ಧನ್ಯವಾದಗಳು ಶಶಿಧರರೆ.
ಉ: ಒಂದು ಹಳೆಯ ಚಿತ್ರಗೀತೆ: "ಶುಭಾಶಯ... ಶುಭಾಶಯ...."
ಯಾವ ಕಾಲಕ್ಕಾದರೂ `old is gold ` ಉತ್ತಮ ಚಿತ್ರದೊಂದಿಗೆ ಹಳೆಯ ನೆನಪಿನ ಸುರಳಿ ಬಿಚ್ಚಿಸಿದ ತಮಗೆ ಧನ್ಯವಾದಗಳು ಶಶಿಧರ ಹೆಬ್ಬಾರರೆ.
-ರಾಮಮೋಹನ