ಕಡಲೆಬೇಳೆ ಚಟ್ನಿ

ಕಡಲೆಬೇಳೆ ಚಟ್ನಿ

ಬೇಕಿರುವ ಸಾಮಗ್ರಿ

ಬಳಸುವ ಪದಾರ್ಥಗಳು : ಕಡಲೆಬೇಳೆ, ಕೊಬ್ಬರಿ ತುರಿ, ಒಣಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಉಪ್ಪು, ಹುಣಸೆಹಣ್ಣು , ಎಣ್ಣೆ,ಇಂಗು,ಸಾಸುವೆ

ತಯಾರಿಸುವ ವಿಧಾನ

ಕಡಲೆಬೇಳೆಯನ್ನು ಬಾಂಡಲೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕೊಬ್ಬರಿ ತುರಿ, ಹಾಗು ಕರಿಬೇವಿನ ಸೊಪ್ಪನ್ನು ಹುರಿದು ಬಿಸಿ ಮಾಡಿಕೊಳ್ಳಿ. ಹಾಗೆ (ಒಣ) ಕೆಂಪುಮೆಣಸಿನಕಾಯಿ ಸಹ ಚೆನ್ನಾಗಿ ಬಿಸಿಮಾಡಿ. ನಂತರ ಕಡಲೆಬೇಳೆ, ಕೊಬ್ಬರಿ ತುರಿ, ಕೆಂಪು ಮೆಣಸಿನಕಾಯಿ, ಉಪ್ಪು , ಹುಣಸೆ ಹಣ್ಣು , ಬೇಕಾದಷ್ಟು ನೀರು ಎಲ್ಲವನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ನೀರನ್ನು ಹೆಚ್ಚಿಗೆ ಹಾಕಬೇಡಿ, ಸ್ವಲ್ಪ ಗಟ್ಟಿಯಾಗಿಯೆ ಇರಲಿ, ಹಾಗೆ ಪೂರ್ತಿ ಪೇಸ್ಟಿನಂತೆ ರುಬ್ಬದೆ ಸ್ವಲ್ಪ ತರಿ ತರಿಯಾಗೆ ತೆಗೆಯಿರಿ, ಚಟ್ನಿಯನ್ನು ಪಾತ್ರೆಗೆ ಹಾಕಿ. ನಂತರ ಸ್ವಲ್ಪ ಎಣ್ಣೆ, ಸಾಸುವೆ, ಇಂಗು ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಹಾಕಿ ಬೆರೆಸಿರಿ. ರುಚಿ ರುಚಿ ಚಟ್ನಿ ರೆಡಿ. ಅದನ್ನು ನೀವು ಬಿಸಿ ಅನ್ನಕ್ಕೆ ಕಲಸಿ , ಸ್ವಲ್ಪ ಹಸಿ ಎಣ್ಣೆ ಹಾಕಿ ತಿನ್ನಬಹುದು, ಇಲ್ಲವೆ ರೊಟ್ಟಿಯ ಜೊತೆ ಬಳಸಬಹುದು. ರಾಗಿ ಮುದ್ದೆ ಮಾಡುವವರು ಚಟ್ನಿಗೆ ಸ್ವಲ್ಪ ನೀರು ಬೆರೆಸಿ, ಮುದ್ದೆಯ ಜೊತೆ ವ್ಯಂಜನವಾಗಿ ಬಳಸಬಹುದು. ಊಟದ ಜೊತೆ , ಈ ರೀತಿ ಬೇಕಾದಲ್ಲಿ ಬಳಸಬಹುದು. ಒಣಕೊಬ್ಬರಿ , ಒಣ ಮೆಣಸಿನಕಾಯಿ ಬಳಸುವದರಿಂದ ಬೇಗ ಕೆಡುವುದಿಲ್ಲ.