ಕಥೆಗಾರ

ಕಥೆಗಾರ

ಬರಹ

ದೂರದಿಂದ ಕೋಗಿಲೆಯ ಇಂಚರ "ಕುಹೂ, ಕುಹೂ" ಎಂದು ಕೇಳಿಸುತ್ತಿದ್ದರೆ, ಕಥೆಗಾರ ತನ್ನಷ್ಟಕ್ಕೆ ಆಡಿಕೊಳ್ಳುತಿದ್ದ "ಅದು ನನ್ನ ಹುಡುಗಿಯ ಕೊರಳ ದನಿಯಂತಿದೆಯಲ್ಲ!" ಇದೇನು ಹೊಸದಾಗಿರಲ್ಲಿಲ್ಲ ಕಥೆಗಾರನ ಪರಿಸರಕ್ಕೆ. ಉತ್ತರವಿಲ್ಲದ ಪ್ರಶ್ನೆಗಳನ್ನು ಕೂಡಿಸಿ ಸೇರಿಸುವುದರ ಜೊತೆಗೆ, ಜಗತ್ತಿನಲ್ಲಿ ನಡೆವ ಎಲ್ಲಾ ಸುಂದರವಾದ ಆಗುಹೋಗುಗಳನ್ನು ತನ್ನ ಮನದನ್ನೆಯ ಜೊತೆಗೆ ಹೋಲಿಸಿಕೊಳ್ಳುವುದು ಅವನಿಗೆ ದಿನನಿತ್ಯದ ರೂಡಿಯಾಗಿತ್ತು. ಕೋಗಿಲೆಯ ಗಾನ ನಿಂತರೂ ಅವನಿನ್ನೂ ಅವನ ಕಲ್ಪನಾಲೋಕದಿಂದ ಹೊರಬಂದಿರಲಿಲ್ಲ. ನಡೆದು ಬಂದ ದಾರಿಯತ್ತ ದಾಪುಗಾಲು ಹಾಕುತ್ತ ಅವನ ಮನಸ್ಸು ಹಿಂದೆ ಹಿಂದೆ ನಾಗಾಲೋಟವನಿಕ್ಕುತಿತ್ತು.

ಕಥೆಗಾರ, ಅದೊಂದೇ ಅವನಿಗಿದ್ದ ಸದ್ಯದ ಪರಿಚಯ. ತೀರಾ ಬಿಳಿಯಲ್ಲದ್ದಿದ್ದರೂ ಹೊಳಪಾದ ಬಣ್ಣ, ನೀಳ ತೋಳು, ಆಕರ್ಷಕವೆನ್ನುವಂತಿದ್ದ ಮುಖ, ಒಳಗಿಳಿದಿದ್ದ ಕಣ್ಣು ಹಾಗೂ ಬಹಳಷ್ಟು ಕಥೆಗಾರರಂತೆ ಅವನಿಗೂ ಒಂದಿಷ್ಟು ಕುರುಚಲು ಗಡ್ಡ. ಮನೆಯ ಒಳ ಹೊಕ್ಕರೆ ತನ್ನ ಕೋಣೆಯಲ್ಲಿನ ಪುಸ್ತಕ, ಪೆನ್ನು ಮತ್ತು ಕನಸಿನ ಜೊತೆ ಅವನ ಬದುಕು. ಕೋಣೆಯ ಹೊರ ನಡೆದರೆ, ಅಮ್ಮ, ಅಪ್ಪ, ತಂಗಿ ಮತ್ತು ಮನೆಯ ನಾಯಿಮರಿಯ ಜೊತೆ ಒಂದಿಷ್ಟು ಹರಟೆ, ಪ್ರೀತಿಯ ಒಡನಾಟ. ಮನೆಯ ಹೊರಬಿದ್ದರೆ ಮನೆಯಿಂದ ಒಂದಷ್ಟು ದೂರದಲ್ಲಿದ್ದ ಗುಡ್ಡದತ್ತ ಪಯಣ, ಅಲ್ಲಿನ ಕೆರೆಯ ತಡಿಯೊಲ್ಲಿಂದಿಷ್ಟು ಕನಸು ಕಟ್ಟುವ, ಭಾವನೆಗಳ ಅಳೆದು ನೋಡುವ ಪ್ರವೃತ್ತಿ.

ಒಂದಷ್ಟು ದಿನದ ಹಿಂದೆ, ಎಂದಿನಂತೆ ಮನೆಯ ಹೊರ ಹೊರಟು ಕೆರೆಯತ್ತ ನಡೆದಿದ್ದ ಅವನಿಗೆ ಅಚಾನಕವೆಂಬಂತೆ ಕಾಣಿಸಿದ್ದಳು ಆ ಬೆಡಗಿ. ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ ತಿರುಗಿ ನೋಡಬೇಕೆನಿಸುವ ಸ್ನಿಗ್ದ ಸೌಂದರ್ಯ. ಮನಸ್ಸಿನ ಆಸೆಗೆ ಕೆಂಪು ನಿಶಾನೆ ತೋರಿಸಿ, ಮತ್ತೆ ತನ್ನ ಕಾಯಕವನ್ನು ಮುಂದುವರಿಸಿದ್ದ. ದಿನಗಳೆದಂತೆ ಮರೆತು ಹೋಗಿದ್ದ ಹುಡುಗಿ ಮತ್ತೆ ಪ್ರತ್ಯಕ್ಷ, ಅದೂ ತನ್ನ ಮನೆಯಲ್ಲಿ, ಅವನ ತಂಗಿಯ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಳು. ದೂರದಿಂದಲೇ ಅವನ ಆಗಮನವ ಕಂಡು, ಓಡಿಹೋಗಿದ್ದಳು. ಓಡಿಹೋಗುತ್ತಿದ್ದ ಹುಡುಗಿಯ ಕಂಡ ಅವನ ಮನಸ್ಸಿನಲ್ಲಿ ಬಂದ ಮೊದಲ ಸಾಲು, "ಜಿಂಕೆಯಂತೆ ಜಿಗಿಯುತಿಹಳಲ್ಲ!"

ತಂಗಿಯ ಹೊಸ ಗೆಳತಿಯ ಮುಖ ಪರಿಚಯದ ಜೊತೆ, ಅವಳು ಯಾರು, ಏನು ಅನ್ನುವುದನ್ನು ತಂಗಿಯಿಂದಲೇ ತಿಳಿದುಕೊಂಡ. ಮತ್ತೆ ಅವನ ಕೋಣೆಯತ್ತ ಅವನ ಪಯಣ. ಕೈಗೊಂದು ಪೆನ್ನು, ಜೊತೆಗೊಂದು ಪುಸ್ತಕ ಹಿಡಿದು, ಆದಿನ ಮನಸ್ಸಿನಲ್ಲಿ ಬಂದ ವಿಷಯ ಮತ್ತು ಭಾವಿಸಿದ ಭಾವನೆಗಳನ್ನೆಲ್ಲ ಬರೆಯಹತ್ತಿದ. ಅವನರಿವಿಲ್ಲದೆ ಕೊನೆಗೊಂದು ಸಾಲು,

"ಮನದ ಹೊಸ್ತಿಲ ದಾಟಿ, ನಡುಮನೆಯ ಸೇರಿದಳಾಕೆ,
ತಿಳಿನೀರ ಕೊಳದಲಿ ತುಂಬಿ ಅರಿವಾಗದ ಹೊಸ ಬಯಕೆ".

ಇದೇಕೆ ಹೀಗೆ? ಉತ್ತರವಿಲ್ಲದ ಇನ್ನೊಂದು ಪ್ರಶ್ನೆ. ಉತ್ತರ ಹುಡುಕುವ ಗೋಜಿಗೆ ಹೋಗದೆ, ತನ್ನಷ್ಟಕ್ಕೆ ತಾನಿರುವುದು ಅವನಿಗೆ ರೂಡಿಯಾಗಿತ್ತು.

ದಿನಗಳೆದಂತೆ ಅವನು ಆಕೆಯತ್ತ ಬಹಳಷ್ಟು ಆಕರ್ಷಿತನಾಗುತ್ತಿದ್ದ. ಅವಳ ನಡೆ, ನುಡಿ, ಹಾವ, ಭಾವ ಅವನಿಗಿಷ್ಟವಾಗುತಿತ್ತು. ಕೆರೆಯ ತಡಿಗೆ ಹೋಗುವುದನ್ನ ಒಂದಿಷ್ಟು ಕಡಿಮೆ ಮಾಡಿ ಅವಳ ಆಗಮನವನ್ನು ಚಾತಕಪಕ್ಷಿಯಂತೆ ಕಾದು ನೋಡುತ್ತಿದ್ದ. ಅವನ ತಂಗಿ ಮತ್ತು ಆ ಹುಡುಗಿ ಮಾಡುತ್ತಿದ್ದ ಹರಟೆಗೆ ತಾನು ಜೊತೆಯಾಗುತ್ತಿದ್ದ. ತನ್ನ ಕಥೆ-ಕವನಗಳ ಪರಿಚಯ ಮಾಡಿಸುತ್ತಿದ್ದ. ಕಣ್ಣರಳಿಸಿ ನೋಡುವುದರ ಜೊತೆಗೆ, ಕಿವಿಯಗಲಿಸಿ ಕೇಳುವುದನ್ನೂ ಮಾಡುತ್ತಿದ್ದಳು. ಅವಳ ಸಾಂಗತ್ಯದಲ್ಲೇನೋ ಹೊಸ ಹುರುಪು ಅವನಿಗೆ. ಅವಳ ನೆನಪನ್ನು ಮನದಿಂದ ತುಂಬಿಸಿ, ಹೃದಯ ಬಡಿತದ ಜೊತೆ ಸೇರಿಸಿ ಆನಂದಿಸುತ್ತಿದ್ದ.

ಕೋಗಿಲೆಯ ಕೂಗು ನಿಂತು, ಆಗಸವ ಕೆಂಪಾಗಿಸುತ್ತಿದ್ದ ಸಂಜೆ ಸೂರ್ಯನ ನೋಡಿ, ತಮ್ಮ ಗೂಡತ್ತ ಹಾರುತ್ತಿದ್ದ ಕಾಗೆಗಳ "ಕಾವ್ ಕಾವ್" ಕೂಗಿಗೆ ಇಹಕ್ಕೆ ಇಳಿದ ಕಥೆಗಾರ. ಕತ್ತಲು ಪಸರಿಸುವ ಮುನ್ನ ಮನೆಯ ಸೇರಬೇಕೆಂಬ ಆಲೋಚನೆ ಮನಸ್ಸ ಹೊಕ್ಕು, ವೇಗವಾಗಿ ನಡೆಯ ಹತ್ತಿದ. ದಾರಿಯ ಸವೆಸುತ್ತಿದ್ದ ಅವನಿಗೆ ಮಸುಕಾಗಿ ಕಾಣಿಸುತ್ತಿದ್ದ ದಾರಿಯ ಮೇಲೊಂದು ಯೋಚನೆ. ಈ ದಾರಿ, ಲೋಕದ ಕಣ್ಣಲ್ಲಿ ಮರೆಯಾಗಿಸುವ ದಿಕ್ಕು, ಭವಿಷ್ಯದತ್ತ ಕರೆದೊಯ್ಯೊ ಅಂಬಿಗ. ಈ ಬದುಕೇ ಹೀಗೆ, ದಾರಿಯಂತೆ, ನಾವು ನೋಡುವ ದೃಷ್ಟಿಯ ಮೇಲೆ ನಿಂತಿದೆ, ನಮ್ಮ ನಂಬಿಕೆಯ ಜೊತೆಗೆ!

ಮನೆಯ ಸೇರಿಕೊಂಡ ಅವನು, ಊಟ, ಹರಟೆಯ ಮುಗಿಸಿ ತನ್ನ ಕೋಣೆಯೊಳಗೋಗಿ, ಮತ್ತೆ ತನ್ನ ಕಥಾಲೋಕದತ್ತ ನುಸುಳಿದ. ಕಣ್ಣ ತುಂಬಾ ಅವಳದ್ದೇ ಬಿಂಬ. ನಾನ್ಯಾಕೆ ಅವಳಿರುವಿಕೆಯನ್ನ ನನ್ನ ಹಿಡಿತವಿಲ್ಲದ ಮನದ ಕಣದ ತುಂಬಾ ಓಡಾಡುವ ಕುದುರೆಯಂತೆ ಬಿಟ್ಟು ಬಿಟ್ಟಿದ್ದೆನೆ? ಅವನೊಡಲಿನ ತುಂಬ ಉತ್ತರಕ್ಕೆ ಜಾಗವಿಲ್ಲದಿದ್ದರೂ, ಉತ್ತರವಿಲ್ಲದ ಪ್ರಶ್ನೆಗಳಿಗೆ ಬರವಿರಲಿಲ್ಲ. ಹಿಂದಿನ ದಿನ ತಂದಿದ್ದ ಹೊಸ ಕಾದಂಬರಿಯ ಓದುತ್ತಿದ್ದ ಅವನ ಮನಸ್ಸಿನಲ್ಲಿ ಅವನರಿವಿಲ್ಲದೆ ಇನ್ನೊಂದು ಸುಳಿ ಚಿಗುರೊಡೆಯ ಹತ್ತಿತು. ಕೈಯಲ್ಲಿದ್ದ ಪುಸ್ತಕವ ಬದಿಗಿಟ್ಟು, ಚಿಗುರೊಡೆದ ಭಾವನೆಯನ್ನು ಸೆರೆಹಿಡಿಯ ಹೊರಟು ಪೆನ್ನನ್ನು ಕೈಗೆತ್ತಿಕೊಂಡ. "ಕರುಣೆಯಿಲ್ಲದ ಕಣ್ಣು, ಮಮತೆಯಿಲ್ಲದ ಮಾತೆ, ಬರ ಬಡಿದ ಸಾಗರ, ಹೇಗೆ ಅಸಾಧ್ಯವೋ, ಗೆಳತಿ, ಹಾಗೆ ನನ್ನ ಪ್ರೀತಿ, ನಿಷ್ಕಲ್ಮಕ, ಹುಳುಕಿಲ್ಲದ ಪ್ರೀತಿ". ಈ ಒಂದು ಸಾಲನ್ನು ಬರೆದ ನಂತರ, ಅವನ ಮನದ ಮೂಲೆಯಲ್ಲೇನೊ ನಗು, ನಿತ್ಯಸತ್ಯದ ಜೊತೆಗೆ ನನ್ನ ಪ್ರೀತಿಯ ಹೋಲಿಕೆ. ಭಾವನೆಗಳ ಬಾಗಿಲಾಗಿ ನಿಂತ ಕಣ್ಣುಗಳನ್ನು ಮುಚ್ಚಿ ನಿದ್ರೆಯ ಮೊರೆಹೊಕ್ಕ ಅವನು. ಭಾವನೆಗಳು ಅವನ ಬಿಟ್ಟುಬಿಡುವ ಮನಸ್ಸಿಲ್ಲದೆ ಕನಸಾಗಿ ಲಗ್ಗೆ ಇಡಲು ತಯಾರಿ ನಡೆಸಿದವು.

ಉದ್ದಕ್ಕೆ ಶಾಂತವಾಗಿ ಹಾದು ಮಲಗಿದ ಸಮುದ್ರ ಕಿನಾರೆ, ತಂಪಾಗಿ ಬೀಸುತಿದ್ದ ಗಾಳಿ, ಆಗೊಮ್ಮೆ, ಈಗೊಮ್ಮೆ ಎಂಬಂತೆ ದಡಕ್ಕಪ್ಪಳಿಸುತ್ತಿದ್ದ ಅಲೆಗಳು, ಎಲ್ಲಿ ಕಡಲ ತಡಿಲಿಗೆ ನೋವಾಗುವುದೋ ಎಂದು. ಮೊದಲೇ ಯೋಚಿಸಿದಂತೆ ಅವಳನ್ನು ಕಡಲ ಕಿನಾರೆಗೆ ಕರೆ ತಂದಿದ್ದ. ಬಹಳ ಸನಿಹವಾಗಿ ಮರಳ ಮೇಲೆ ನಡೆಯುತ್ತಿದ್ದಕ್ಕೆ, ಅವರಿಬ್ಬರ ಕೈಗಳು ಪಿಸಿಗುಟ್ಟುವಷ್ಟು ಹತ್ತಿರ ಬಂದು ದೂರ ಹೋಗುತ್ತಿದ್ದವು. ಹುಣ್ಣಿಮೆ ಚಂದ್ರನ ಹಾಲಿನಂತಾ ಬೆಳಕು ಎಲ್ಲೆಲ್ಲೂ ಹರಡಿ ಅವನ ಸ್ವರ್ಗಕ್ಕೆ ಇನ್ನೂ ಮೆರಗು ಕೊಟ್ಟಿತ್ತು. ಅದಷ್ಟು ದೂರ ನಡೆದು, ಆಕೆಯತ್ತ ತಿರುಗಿ, ಚಂದ್ರನ ಜೊತೆ ಸ್ಪರ್ದೆಗಿಳಿದ ಜೋಡು ಚಂದ್ರಮರಂತೆ ಮಿಂಚುತಿದ್ದ ಆಕೆಯ ಕಣ್ಣುಗಳ ಜೊತೆ ನೋಟ ಬೆರೆಸಿದ. ಆಕೆ ತನ್ನ ಕಣ್ಣುಗಳನ್ನು ಕಿರಿದಾಗಿಸುವ ಪ್ರಯತ್ನದಲ್ಲಿದ್ದಾಗಲೇ, ಆಕೆಯ ಕೈಗಾಗಿ ಕೈ ಚಾಚಿದ. ಮಾಂತ್ರಿಕನ ಮಂತ್ರಶಕ್ತಿಗೆ ಸಿಲುಕಿದ ರಾಜಕುಮಾರಿಯಂತೆ, ಅವನ ಕೈಗೆ ಕೈ ಜೋಡಿಸಿದಳು. ಆಕೆಯನ್ನು ಸನಿಹ ಬರಸೆಳೆದು, ಅವಳ ಕಿವಿಯಲ್ಲಿ ಉಸುರಿದ, "ನನ್ನ ಮನಸ್ಸು, ಹೃದಯಗಳ ಕದ್ದ ಹುಡುಗಿ, ನನ್ನ ಹೃದಯದೊಳಗೆ ನುಸುಳಿದ ಹುಡುಗಿ, ಸದಾ ನಿನ್ನ ನೆರಳಾಗಿ ಜೊತೆಗಿರುವೆ. ನನ್ನ ಬದುಕಿನ ಅಂಗವಾಗಿ, ನನ್ನ ಜೊತೆ ನಡೆಯುವ ಇನ್ನೊಂದು ನೆರಳಾಗುವೆಯಾ?, ನಿನ್ನ ವ್ಯಕ್ತಿತ್ವ, ಸ್ವತಂತ್ರ್ಯ, ಭಾವನೆ, ಆಸೆ-ಆಕಾಂಕ್ಷೆ, ಬೇಕು-ಬೇಡಗಳಿಗೆ ಸ್ಪಂದಿಸಲು ಅನುವು ಮಾಡಿಕೊಡುವೆಯಾ?"

ದಡಕ್ಕನೆ ಎಚ್ಚರವಾಯ್ತು, ಬೀಸುತ್ತಿದ್ದ ಶೀತಗಾಳಿಗೆ ಮನೆಯ ಕಿಟಕಿ ಟಪ ಟಪ ಶಬ್ದ ಮಾಡಿದ್ದಕ್ಕಿರಬೇಕು. ದೇಹದ ನಿದ್ದೆಗೆ ಮನೆಯ ಕಿಟಕಿಯು ತೆರೆದು ಭಂಗವಾದರೆ, ಮನದ ನಿದ್ದೆಗೆ ಹೃದಯದ ಕಿಟಕಿ ತೆರೆದು ತ್ರಾಸ ಕೊಡುತಿತ್ತು. ಕಿಟಕಿಯ ತೆರೆದ ಶೀತಗಾಳಿ, ಕಥೆಗಾರನ ಹುಡುಗಿ, ನಿಂತು ನಗುತ್ತಿದ್ದಳೆ ಅವಳು? ಅವನ ಉತ್ತರವಿಲ್ಲದ ಪ್ರಶ್ನೆಗಳ ಸಾಲಿಗೆ ಇನ್ನೊಂದು ಪ್ರಶ್ನೆ! ಅರ್ದಕ್ಕೆ ತೆರೆ ಬಿದ್ದ ಕನಸು ಮುಂದುವರಿಯುವುದೇನೊ ಎಂಬ ಆಸೆಯೊಂದಿಗೆ ಒಳ ಹೋಗಿ, ಒಂದಿಷ್ಟು ನೀರು ಕುಡಿದು ಮತ್ತೆ ನಿದ್ದೆಗಿಳಿದ.

ಮತ್ತೆ ಎಚ್ಚರವಾದಾಗ ಬೆಳಗಾಗಿತ್ತು. ರಾತ್ರಿ ಮಲಗಿದ್ದಾಗ ನಿದ್ದೆಯ ಮಂಪರಿನ ಕನಸಿನ ಬಸಿರ ಪ್ರಸವ ವೇದನೆಯಲ್ಲಿ ಜನ್ಮ ತಾಳಿದ ಮರಿಗೂಸಂತೆ ಹೊಸ ಯೋಚನಾಲಹರಿ ಹೊರಬಂತು. ಅನುಭವದ ಪರಿಪೂರ್ಣ ವ್ಯಾಪ್ತಿಗೆ ಬರದೆ, ಕೂಡಿ ಕಟ್ಟಿ ಹಾಕಿದ್ದ ಕನಸುಗಳು, ಭಾವೋದ್ಬವಕ್ಕೆ ಸಿಕ್ಕಿದಾಗ ಜನ್ಮವೆತ್ತಿದ ಭಾವನೆಗಳ ತಿಕ್ಕಾಟ ಹಾಗೆ ಮುಂದುವರಿಯುತಿತ್ತು. ಈ ಎಲ್ಲಾ ಪರಿಕಲ್ಪನೆಗಳಿಗೊಂದು ಸಾರ್ಥಕತೆಯ ಸಾಕಾರ ಮೂರ್ತಿಯ ಕೆತ್ತಿ, ಅದಕ್ಕೆ ಜೀವ ಕೊಡಿಸಬೇಕೆಂಬ ಅವನ ಮನಸ್ಸಿನ ಸುಳಿ ಹೆಮ್ಮರವಾಗಿ ಅವನನ್ನು ವ್ಯಾಪಿಸಿಕೊಂಡಿತು. ದೀರ್ಘವಾಗಿ ಉಸಿರೆಳೆದು, ತನ್ನ ಕೋಣೆಯಿಂದ ಹೊರಬಿದ್ದ, ಮೈ-ಮನಸ್ಸಿಗೊಂದಷ್ಟು ವಿಶ್ರಾಂತಿ ಕೊಡುವ ಸಂಕಲ್ಪದಲ್ಲಿ.

ಉಕ್ಕಿ ಹರಿಯುತ್ತಿದ್ದ ಮನಸ್ಸಿಗೊಂದಿಷ್ಟು ಬಿಡುವು ಕೊಡುವ ನೆವದಲ್ಲಿ ಆ ದಿನದ ದಿನಪತ್ರಿಕೆಯ ಹಿಡಿದನವ. ಪತ್ರಿಕೆಯ ತುಂಬೆಲ್ಲಾ ರಾಜಕಾರಣ, ಗಲಬೆ, ಮಾರುಕಟ್ಟೆಯ ಕಾರುಬಾರು. ಪುಟಗಳ ಮಗುಚುತಿದ್ದಂತೆ, ಅಲ್ಲೊಂದು ಸುದ್ದಿ, "ವಿವಾಹ ವಿಚ್ಚೇದನ, ಯಾರಿಗೆ ಮಕ್ಕಳು?". ಕಥೆಗಾರ ನಕ್ಕನಿಷ್ಟು! ಹುಟ್ಟುವ ಮಕ್ಕಳು ಯಾರ ಪಾಲು, ಯಾರ ಸ್ವತ್ತು, ಅಪ್ಪಂದೋ, ಅಮ್ಮಂದೋ? ಮತ್ತೆ ನಗು, ಕನಸು ಯಾರ ಸ್ವತ್ತು, ಮನಸ್ಸಿದ್ದೋ, ಹೃದಯದ್ದೋ? ಕೆಡುತ್ತಿದೆ ಸಮಾಜ, ಆಸ್ತಿಯ ಜೊತೆಗೆ ಕನಸು, ಭಾವನೆಗಳನ್ನ ಕಸಿದುಕೊಳ್ಳಲು ಹೇಸದ ಜನ. ಯಾಕೆ ಹೀಗೆ? ಅವನಿಗೆಲ್ಲಿಯ ಉತ್ತರ? ಪತ್ರಿಕೆಯ ಪಕ್ಕಕ್ಕಿಟ್ಟು ಕಾಲು ಚಾಚಿ ಆಗಸದತ್ತ ದೃಷ್ಟಿ ಹಾಯಿಸಿದ. ಮನಸ್ಸಿನ ಜೊತೆ ಅವನ ಮಾತು, "ಅಗಾಧವಾದ ನೀಲಿ ಬಾನು, ದೃಷ್ಟಿಯ ಮೇರೆಗೆಟುಕುತ್ತಿಲ್ಲ. ಇರಬಹುದೆ ಒಂದು ಕೊನೆ ಈ ಆಗಸಕ್ಕೆ? ಊಹು, ಕಲ್ಪನೆಗೂ ಸಿಗುತ್ತಿಲ್ಲ ಬಾನಿನ ಆಂಚು, ಇರಲಿಕ್ಕಿಲ್ಲ ಅದಕ್ಕೊಂದು ಬೇಲಿ, ಅದು ನಿರಂತರ ಹಾಗೂ ಅಪರಿಮಿತ, ನನ್ನ ಪ್ರೀತಿಯಂತೆ!"

ಮನಸ್ಸ ಹೊಕ್ಕ ಹುಡುಗಿಯನ್ನು ಯೋಚನೆಯಲ್ಲಿ ತುಂಬಿಸಿಕೊಂಡು ಹೊರ ನಡೆದ. ಪ್ರಶಾಂತವಾಗಿರುವ ಪ್ರಕೃತಿಯ ಮಡಿಲಲ್ಲಿ ಪವಡಿಸಿದಾಗ ಎಳೆ ಎಳೆಯಾಗಿ ಅಲೋಚನೆಗಳು ಮಾತಾಗಿ ಹೊರಬಂದವು. ನನ್ನ ಪ್ರೀತಿಯನ್ನು ದಿಕ್ಕರಿಸಿದರೆ ಆ ಹುಡುಗಿ, ಹೇಗಿರಬಲ್ಲೆ ನಾನು? ಅವಳ ಇಲ್ಲದಿರುವಿಕೆಯನ್ನು ಹೃದಯ ಮತ್ತು ಮನಸ್ಸಿಗೆ ಹೇಗೆ ಒಪ್ಪಿಸುವ ಪ್ರಯತ್ನ ಮಾಡಬಹುದು ನಾನು? ಅವಳ ನೆನಪನ್ನು ನನ್ನುಸಿರಿನಲ್ಲಿರಿಸಿ ಕೊನೆ ತನಕ ಹಾಗೇ ಬದುಕಬಲ್ಲೆನೆ ನಾನು? ಬದುಕಬಹುದು, ಆದರೆ ಹೇಗೆ, ಸನ್ಯಾಸಿಯಾಗಿ? ಅಂತದೊಂದು ಆಲೋಚನೆ ಮನಸನ್ನ ಹೊಕ್ಕ ಬಗೆಯ ನೆನೆದೊಂದಿಷ್ಟು ನಕ್ಕ ಕಥೆಗಾರ. ಇಲ್ಲ, ಕಾಮ, ಕ್ರೊಧ, ಲೋಬ, ಮೋಹ, ಮದ, ಮತ್ಸರಗಳೆಂಬ ಅರಿಷಡ್ಗರ್ಗಗಳನ್ನ ಮೀರಿ ನಿಂತವನಾನಲ್ಲ. ಪರಿಪೂರ್ಣವಾದ, ಅಗಾಧವಾದ ಪ್ರೀತಿಯಿರುವುದು ನಿಜ, ಅವಳ ವಿರಹದಿಂದ ಮನಸ್ಸು, ಹೃದಯ ಸುಡಬಹುದು, ಅವಳಗಲಿಕೆಯಿಂದ ಜೀವ ಬೆಂದು, ನೊಂದು ಕುಂದಬಹುದು. ಇಲ್ಲ, ಅದಕ್ಕೆಲ್ಲಾ ಅವಕಾಶಕೊಡಬಾರದು, ನನ್ನ ಪ್ರೀತಿಯನ್ನ ಅವಳ ಮುಂದಿಡಬೇಕು, ಅವಳು ನನ್ನ ಪ್ರೀತಿಯನ್ನು ಒಪ್ಪುವ ಆ ಕ್ಷಣ ಸನ್ನಿಹಿತವಾಗಬೇಕು. ನಿರ್ಧಾರ ಸಾಕರವಾಗಿಸಬೇಕೆಂಬ ಛಲ ಅವನ ಮನದಲ್ಲಿ ಮೂಡಿತು.

ಅದೊಂದು ದಿನ, ಸರಿ ಸುಮಾರು ಸಂಜೆಯ ವೇಳೆ ಮನೆಗೆ ಬಂದಿದ್ದಳು ಆ ಹುಡುಗಿ. ಸೂರ್ಯ ಮುಳುಗಿ, ಚಂದ್ರ ಬಾನಂಗಳದಲ್ಲಿ ಇಣುಕುವ ತನಕ ಇದ್ದಳು, ಅವನ ಜೊತೆ ಅವನ ಕಥೆ-ಕವನಗಳ ಬಗ್ಗೆ ಮಾತನಾಡುತ್ತ. ಕತ್ತಲಾಗಿದ್ದ ಅರಿತು ಹೊರಟು ಹೋಗಲು ಅಣಿಯಾಗುತ್ತಿದ್ದ ಹುಡುಗಿಯನ್ನು ಅವಳ ಮನೆ ತನಕ ಬಿಟ್ಟು ಬರುವೆನೆಂದರೂ ಕೇಳದೆ ಒಬ್ಬಳೇ ಹೋಗುವ ಧೈರ್ಯ ಮಾಡಿದಳು. ಇವನ್ನೆಲ್ಲಿ ಬಿಡಬೇಕು, ಅವಳನ್ನು ಮನೆ ಸೇರಿಸುವ ಹೊಣೆ ಹೊತ್ತು ಜೊತೆ ನಡೆದ. ಇನ್ನೇನು ಅವಳ ಮನೆಯಂಗಳಕ್ಕೆ ಕಣ್ಣು ಹಾಯಿಕೆಯ ದೂರವಿರುವಾಗ, ಬೇಡ ಇನ್ನು ಬರುವುದು ಎಂದು ಹೇಳಿ ಓಟಕ್ಕಿತ್ತಳು. ಹೊರಟು ಹೋಗುವ ಮೊದಲು, ಅವನ ಕೈ ಅದುಮಿ ಕಣ್ಣೆಲ್ಲೆನೋ ಹೇಳಿದಳು. ಅನಾಮತ್ತಾಗಿ ನಡೆದ ಘಟನೆ, ಅವನು ಸ್ಪಂದಿಸುವ ಮೊದಲೇ ತಿರುಗಿ ನಡೆದಳು. ಅವಳು ಕತ್ತಲಲ್ಲಿ ಕರಗಿ ಕಣ್ಮರೆಯಾಗುವ ತನಕ ನಿಂತು ನೋಡುತ್ತಿದ. ಅವಳು ಮರೆಯಾದ ನಂತರ, ಮನೆಯ ಕಡೆ ಹೆಜ್ಜೆ ಹಾಕುತ್ತಿರುವಾಗ, ಅವನ ಅಸ್ತಿಪಟಲದಲ್ಲಿ ನಗುತ್ತಿರುವ ಅವಳ ಮುದ್ರೆ. ಪುಟಿದೇಳುತ್ತಿದ್ದ ಭಾವನೆಯನ್ನ ಮನದ ಹಾಳೆಯಲ್ಲಿ ಗೀಚಿಟ್ಟಿದ್ದ.
"ಅಕೋ ಅಲ್ಲಿ ನಿಂತು ನಗುತಿಹಳು
ನನ್ನೆದೆಗೆ ಲಗ್ಗೆಯಿಟ್ಟ ಹುಡುಗಿ
ನನ್ನ ಭಾವನೆಗಳ ಬಡಿದೆಬ್ಬಿಸಿದವಳು
ನೈದಿಲೆಯನೂ ನಾಚಿಸುವ ಬೆಡಗಿ"

ಕತ್ತಲಲ್ಲಿ ಹೆಜ್ಜೆ ಹಾಕುತ್ತಿದ್ದವನಿಗೆ ಗವ್ ಎಂದು ಬಡಿಯುತ್ತಿದ್ದ ಗಾಳಿ, ಕಪ್ಪುಗತ್ತಲೆಯ ಅಟ್ಟಹಾಸ, ನಡೆಯುವಾಗ ಎಡವುವಂತೆ ಮಾಡಿ ಮನಸ್ಸಲ್ಲೇನೋ ಭಯ ಹುಟ್ಟುವಂತೆ ಮಾಡಿತು. ಹೆಜ್ಜೆ ಇಡುವ ಮುಂಚೆ ಎಡವಿ ಬೀಳಬಾರದೆಂಬ ಯೋಚನೆ, ಅವನ ಭಯಕ್ಕೆ ಪ್ರೋತ್ಸಹಿಸುವಂತಿತ್ತು. ಇಲ್ಲ, ನನಗೇನು ಭಯವಿಲ್ಲ, ಮನೆಯ ದಾರಿ ಸರಿಯಾಗಿ ಕಾಣಿಸದಿದ್ದರೇನಂತೆ, ನನ್ನ ಮುಂದಿನ ಬದುಕು ನನಗೆ ಸರಿಯಾಗಿ ಕಾಣಿಸುತ್ತಿದೆ, ನನ್ನ ಮತ್ತು ಅವಳ ಮುಂದಿನ ಭೇಟಿ ನಾಕಂಡ ಆ ಕನಸಿನ ಸಮುದ್ರ ಕಿನಾರೆಯಲ್ಲಿ, ಹಿಂತಿರುಗಿ ಬರುವಷ್ಟರಲ್ಲಿ ಅವಳು ನನ್ನವಳು. ಮುಂದೆ ನಡೆಯಬಹುದಿದ್ದ ಭವಿಷ್ಯವನ್ನು ನೆನೆದು ನಕ್ಕ ಕಥೆಗಾರ, ಮನ ಬಿಚ್ಚಿ, ಕಣ್ಣು ತೊಟ್ಟಿಕ್ಕುವವರೆಗೆ.