ಕನ್ನಡ ಜಾಗರಣ

ಕನ್ನಡ ಜಾಗರಣ

ಕವನ

ಕನ್ನಡದ ನುಡಿಗರತಿ ಕಳವಳಿಸುವ ಸರತಿ ಎದುರು ಬಂದಿದೆ ಕನ್ನಡಿಗ ಸಿದ್ಧನಾಗು

ಅಲ್ಲಿ ಆ ಗಡಿಯಲ್ಲಿ, ಇಲ್ಲಿ ಈ ನುಡಿಯಲ್ಲಿ ದಿಕ್ಕು-ದೆಸೆ ಬಾಂದಳದಿ ಸದ್ದುಮಾಡು.

 

ಪರಭಾಷೆ ಪರಧರ್ಮ ಪರರಟ್ಟಹಾಸಗಳ ಸಹಿಸಿದ್ದು ಸಾಕಿನ್ನು ಎದ್ದುನಿಲ್ಲು

ನಿನ್ನ ನಿರಭಿಮಾನ ಆಧುನಿಕದಭಿಮಾನ ಬಿಟ್ಟು ನಡೆ ಬದುಕೆಲ್ಲ ಹಾಲು ಜೇನು.

 

ಕನ್ನಡದ ಕವಿಕೋಟೆ, ನದ-ನದಿಗಳ ಊಟೆ ಕನ್ನಗಳವಿಗೆ ಹೊಂಚಿ ಸಂಚುಗಾರ

ಬಾಳಠಾಕ್ರೆಯರಂತ ಚಿತ್ತ ಚಾಂಚಲ್ಯರ ಬಿಡದೆ ಸದ್ದಡಗಿಸು ಏಳು ಬೇಟೆಗಾರ.

 

ಭಾರತಾಂಬೆಯ ನೆಲಕೆ ಗುಂಡನಿಕ್ಕಿದ ಉಗ್ರ ಕಸಬನಂತವ ಬಂದಾನೆಚ್ಚರಾಗು

ಹನುಮಶಕ್ತಿಯ ಧೀರ ಕನ್ನಡದ ಕಲಿವೀರ ನೀನಲ್ಲದಿನ್ಯಾರು ಬದ್ಧನಾಗು

 

ಬಹು ಹಿಂದೆ ಕನ್ನಡಿಗ ಛಲವಂತ ಗುಣವಂತ ಇಂದು ಬರಿ ನೆಲ ನದಿಯ ಅಗೆದ ದುಡ್ಡು

ಮುಂದೆ ಗಡಿ-ನಡೆ-ನುಡಿಯ ಗತಿಯೇನು ಮತಿಯೇನು ನೆನೆದ ಕನ್ನಡತಿಗೆ ಭಯದ ಜಡ್ಡು.

 

ಅಖಂಡ ಈ ನಾಡ ನಿರ್ಮಾಣದ ಕನಸು ಕಯ್ಯಾರರಂತವರ ಮನಸ ಮಾಗು

ನೆಲವ ರಕ್ಷಿಪ ಜ್ಞಾನ, ನುಡಿಯ ಕಟ್ಟುವ ಜಾಣ ಮರೆತು ಮತ್ತೇರದೆ ಜಾಗರನಾಗು.

 

ರೈತನಿಂದಲೆ ನಾಡು, ರೈತನಿಂದಲೆ ನುಡಿಯು ಇವ ನಿಜ ಕನ್ನಡಿಗ ಅನ್ನದೇವ

ಹುಸಿ ರಾಜಕಾರಣ ಹಸಿವನೀಗುವುದೇನು ರಕ್ಷಿಸಿ ನಮ ರೈತ ಕನ್ನಡದ ಜೀವ.

 

ತನ ತವರು ರಾಜಧಾನಿಯಲಿಂದು ಅನ್ಯಭಾಷೆಗಳಿಂದ ಬಂದು ಆಪತ್ತು

ಹಳ್ಳಿ ಜನಪದರಲ್ಲಿ ನುಡಿಗಂಧ ಸೊಗಡಲ್ಲಿ ಮೆರೆದಿಹಳು ಕನ್ನಡತಿ ತನ್ನ ತಾಕತ್ತು.

 

ಭರತಮಾತೆಯ ಮಡಿಲ ಸಿಡಿಲಮರಿ ಕನ್ನಡತಿ ಹೆತ್ತ ತಾಯ ಋಣವ ಸ್ಮರಿಸುತಿಹಳು

ದೇಶ ರಕ್ಷೆಗೆ ಅಮಿತ ದಕ್ಷ ಮಕ್ಕಳ ಹಡೆದು ನಿರತ ಗಡಿ ಬುರುಜಲ್ಲಿ ನಿಲಿಸುತಿಹಳು.

 

ಕನ್ನಡ ಕವಿ ಪಂಡಿತರ ಜ್ಞಾನಪೀಠದ ಆಸ್ತಿ ಎಂಟು ನೂರೆಂಟಾಗಿ ವಿಸ್ತರಿಸಬೇಕು

ಸರಸತಿಯ ಸಮ್ಮಾನ, ಪಂಪ ಪ್ರಶಸ್ತಿಗಳು ನಿತ್ಯ ಶಾರದೆ ಮುಡಿಗೇರಬೇಕು.

 

ಗಂಡುಗಲಿಗಳ ನೆಲದಲ್ಲಿ ಕವಿಗಾಯಕರ ಸ್ವರದಲ್ಲಿ ಭವ್ಯ ಸಂಸ್ಕೃತಿ ಪಲ್ಲಕ್ಕಿ ವಿಜೃಂಭಿಸಬೇಕು

ಲಲಿತಕಲೆ ಮಾಲೆಯಲ್ಲಿ ನಾಟ್ಯಸಿರಿ ಲೀಲೆಯಲ್ಲಿ ಜೇನ್ನುಡಿಯ ಹೊನ್ನ ಗೆಜ್ಜೆ ಝಂಝಣಿಸಬೇಕು.

 

ಎರಡು ಸಾವಿರ ವರುಷದನುಭಾವಿ ಕನ್ನಡತಿ ನಮ್ಮೆಲ್ಲರೆದೆಯಲ್ಲು ವಿರಾಜಮಾನ

ಕರುನಾಡ ಸಂಸ್ಕೃತಿಗೆ ಕೊಡುಗೈಯ ವರದಾತೆ ಕನ್ನಡವ ರಕ್ಷಿಪುದು ನಮ್ಮ ಅಭಿಮಾನ.

 

(ಗಂಗಾವತಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಲಾದ ಕವಿತೆ)

000                                                                *** ಗುರುರಾಜ್ ಹಾಲ್ಮಠ್