ಕಬಡಿಗೊಂದಿಷ್ಟು ಕಾಯಕಲ್ಪ

ಕಬಡಿಗೊಂದಿಷ್ಟು ಕಾಯಕಲ್ಪ

ರೋಲ್ ಮಾಡೆಲ್‍ಗಳಿಗಾಗಿ ಎಂದರೆ ಮಾಡಲ್‍ಗಳಾರು ಎಂದು ನಮ್ಮ ಕ್ರಿಕೆಟಿಗರ ಬಗ್ಗೆ ಜನ ಟೀಕಿಸಿದ್ದನ್ನು ನೀವು ಕೇಳಿದ್ದಿರಲೂಬಹುದು. ಅದಕ್ಕೆ ಕಾರಣವಿದೆ. ಏಕೆಂದರೆ ಒಂದಾನೊಂದು ಕಾಲದಲ್ಲಿ - ಅಂದರೆ ತೀರಾ ಇತ್ತೀಚಿನವರೆಗೆ - ನಮ್ಮ ದೇಶದ ಉತ್ಪನ್ನಗಳನ್ನು ಪ್ರಚುರಪಡಿಸಲು ಕಂಪನಿಗಳು ಪ್ರೊಫೆಷನಲ್ ಮಾಡೆಲ್‍ಗಳನ್ನು ಅಥವಾ ಸಿನಿಮಾ ತಾರೆಯರನ್ನು ಮಾತ್ರ ಬಳಸುತ್ತಿದ್ದವು. ಈಗ ಅವರ ಜಾಗವನ್ನು ನಮ್ಮ ಕ್ರಿಕೆಟಿಗರು ಆಕ್ರಮಿಸಿಕೊಂಡಿದ್ದಾರೆ. ಈ ಮಂದಿ ಎಷ್ಟು ಬ್ಯುಸಿ ಎಂದರೆ 24 ತಾಸುಗಳ ಅವಧಿಯಲ್ಲಿ ಅವರು ನೆಟ್ ಪ್ರಾಕ್ಟೀಸ್ ಮತ್ತು ಜಾಹೀರಾತು ಶೂಟಿಂಗ್ ಸೇರಿದಂತೆ ಪಾರ್ಟಿ/ಮನೆ/ಸಮಾರಂಭಗಳಲ್ಲಿ ಹಾಜರಿ - ಹೀಗೆ ಹಲವಾರು ಕಾರ್ಯಕ್ರಮಗಳಿಗೆ ಸಮಯ ನಿಗದಿ ಮಾಡಿಕೊಳ್ಳಬೇಕಾಗಿದೆ. ಇಬ್ಬರು ಜನಪ್ರಿಯ ಮ್ಯಾಟ್ಸ್‍ಮನ್‍ಗಳು ಬ್ಯಾಟಿಂಗ್ ಮಾಡುವಾಗ ಪಿಚ್ ಮೇಲೆ ಆಗಾಗ ಮಾತು ವಿನಿಮಯಮಾಡಿಕೊಳ್ಳುವಾಗ ಅವರು ಬ್ಯಾಟಿಂಗ್ ಸ್ಟ್ರಾಟಜಿ ಬಗ್ಗೆ ಮಾತನಾಡುತ್ತಾರೋ ಅಥವಾ ಸಂಜೆ/ನಾಳೆ ಶೂಟಿಂಗ್ ಬಗ್ಗೆ ಮಾತನಾಡುವರೋ ಎಂಬುದರ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ!
 
ಐವತ್ತರ ದಶಕದಲ್ಲಿ ಟೆಸ್ಟ್ ಆಡುತ್ತಾ ಇಡೀ ಐದು ದಿನಗಳ ಕಾಲದ ಪಂದ್ಯಕ್ಕೆ ಒಂದು ಭವ್ಯವಾದ 750 ರೂ ಸಂಭಾವನೆ ಪಡೆಯಿತ್ತಿದ್ದ ಪಂಕಜ್ ರಾಯ್, ಗುಪ್ತೆ, ಅಮರನಾಥ್‍ಗಳಂತೆ ಇಂದು ನಮ್ಮ ಹಾಕಿ/ಫುಟ್‍ಬಾಲ್ ಆಟಗಾರರು ದೇಶಕ್ಕಾಗಿ ಆಡುತ್ತಿದ್ದಾರೆ. ಆದರೆ ಇಂದಿನ ಪಂಕಜ್ ರಾಯ್, ಗುಪ್ತೆ, ಅಮರನಾಥ್‍ಗಳು ಕೋಟಿಗಟ್ಟಲೆ ಹಣ ಎಣಿಸುತ್ತಿದ್ದರೆ ಇತರ ಕ್ರೀಡೆಗಳ ಆಟಗಾರರು ಬರೀ ಬೆವರು ಇಳಿಸುವುದೇ ಆಗಿದೆ. ಪೂರ್ ಹಾಕಿ/ಫುಟ್‍ಬಾಲ್ ಆಟಗಾರರನ್ನಂತೂ ಕೇಳುವವರೇ ಇಲ್ಲ. 
 
ಇಂತಹ ಪರಿಸ್ಥಿತಿಯಲ್ಲಿ ಶೇ.100ರಷ್ಟು ಅಪ್ಪಟ ನಮ್ಮದೇ ಆದ ಸ್ವದೇಶು ಕಬಡ್ಡಿಯನ್ನು ಕೇಳುವವರು ಯಾರು? ಲಾರ್ಡ್ ಹನುಮಂತರಾಯನೇ ಹಗ್ಗ ಕಡಿಯುತ್ತಿದ್ದರೆ ಪೂಜಾರಿ ನೂಡಲ್ಸ್ ಕೇಳಿದ ಎನ್ನುವಂತೆ ಹಾಕಿ/ಫುಡ್‍ಬಾಲ್ ಆಡಗಾರರೇ ಬರಿಗೈ ಮಾಡಿಕೊಂಡಿರುವಾಗ - ಗೋಲ್‍ಗಳ ವಿಷಯದಲ್ಲಲ್ಲ, ಸಂಭಾವನೆ ವಿಷಯದಲ್ಲಿ - ಕಬಡ್ಡಿ ಮಂದಿಯನ್ನು ಯಾರು ಕೇರ್ ಮಾಡುತ್ತಾರೆ ಹೇಳಿ ನೋಡುವಾ?
 
ಆದರೂ ನಮ್ಮ ಸ್ವದೇಶಿ ಕಬಡ್ಡಿಗೆ ಒಂದಿಷ್ಟು ಕಾಯಕಲ್ಪ ಮಾಡುವುದಾದರೆ ಒಂದು ಆಟವನ್ನು ಉಳಿಸಿ, ಪ್ರೋತ್ಸಾಹಿಸಿದಂತಾಗುತ್ತದೆ. ಇದಕ್ಕಾಗಿ ಕ್ರಾಂತಿಕಾರಿಯಾಗಿ ಯೋಚಿಸಬಹುದು. ಹೇಗೆಂದಿರಾ? ಈಗ ನೋಡಿ; ಕಬಡ್ಡಿ ಆಟದ ಸಮಯದಲ್ಲಿ ಆಡಗಾರರು - ಎಂದರೆ ಎರಡೂ ತಂಡದವರು - ಕಬಡಿ
,ಕಬಡಿ ಎಂದು ಒಂದೇ ಮಂತ್ರವನ್ನು ಜಪಿಸುತ್ತಾರೆ. ಅದರ ಬದಲು ಒಂದು ತಂಡವನ್ನು ಒಬ್ಬ ಉತ್ಪಾದಕರು ಪ್ರಾಯೋಜಿಸಿದರೆ ಆಟಗಾರರು ಆಟದ ಸಮಯದಲ್ಲಿ ಕಬಡಿ, ಕಬಡಿ ಎನ್ನುವ ಬದಲು ಒಂದು ಪ್ರಾಡಕ್ಟಿನ ಹೆಸರನ್ನು ಹೇಳತೊಡಗಿದರೆ?
 
ಪ್ರಾಯೋಜಕರು ಎಂದರೆ ಥಟ್ಟನೆ ಹೊಳೆಯುವುದು ಕೋಕಾಕೋಲಾ ಕಂಪನಿ ತಾನೆ? ಅವರಿಲ್ಲದಿದ್ದರೆ ನಮ್ಮ ಟೀವಿ ಕಂಪನಿಗಳು ಅದೆಷ್ಟು ನಷ್ಟ ಅನುಭವಿಸಬೇಕಾಗಿ ಬರಿತ್ತಿತ್ತೋ? ಇರಲಿ. ಈಗ ಕೋಕಾಕೋಲಾ ಕಂಪನಿ ಒಂದು ಕಬಡ್ಡಿ ತಂಡವನ್ನು ಪ್ರಾಯೋಜಿಸಿದರೆ ಅದರ ಆಟಗಾರರು ಕಬಡಿ, ಕಬಡಿ ಎನ್ನುವ ಬದಲು ಕೋಲಾ, ಕೋಲಾ ಎನ್ನುತ್ತಾ ಎದುರಾಳಿಗಳನ್ನು ಹಿಡಿಯಲು ಮುನ್ನುಗ್ಗಬಹುದು. ಒಂದು ಸುತ್ತು ಮುಗಿಸಿ ಬಂದು ಒಂದು ಗುಟುಕು ಕೋಲಾ ಕುಡಿಯಬಹುದು. 
 
ಕೋಕಾಕೋಲಾ ಕಣದಲ್ಲಿ ಇಳಿದಿದೆ ಎಂದಮೇಲೆ ಪೆಪ್ಸಿ ಸುಮ್ಮನಿರುವುದೆ? ನೀವು ಈಗಾಗಲೇ ಊಹಿಸಿರುವಂತೆ ಪೆಪ್ಸಿ ಆಟಗಾರರು ಕಬಡಿ, ಕಬಡಿ ಎನ್ನದೆ ಪೆಪ್ಸಿ ಎನ್ನುತ್ತಾ ಕೋಕಾಕೋಲಾ - ಪೆಪ್ಸಿಗಳ ಸಮರ ಕಬಡಿ ಅಂಗಳಕ್ಕೂ ಇಳಿಯುತ್ತದೆ. ಆಗ ಆಟಗಾರರಿಗೆ ಒಳ್ಳೆಯ ಸಂಬಾವನೆಯೂ ಸಿಗುತ್ತದೆ. ಕಬಡ್ಡಿಗೆ ಇನ್ನಷ್ಟು ಪ್ರಚಾರ ಸಿಗುತ್ತದೆ. ಕುಡಿಯುವ ನೀರು ಇಲ್ಲದಿದ್ದರೂ ಇನ್ನಷ್ಟು ಹಳ್ಳಿಗಳಲ್ಲಿ ಪೆಪ್ಸಿ-ಕೋಕಾಕೋಲಾ ಸಿಗುವಂತಾಗುತ್ತದೆ.
 
 ಉತ್ಪಾದನೆಗಳು ಕಬಡ್ಡಿ ಕೋಕಾಕೋಲಾ- ಪೆಪ್ಸಿಗಳಿಗೆ ಸೀಮಿತಗೊಳ್ಳಬೇಕಿಲ್ಲ. ಇತರ ಉತ್ಪಾದಕರು ಸಹ ತಮ್ಮ ಮಾಲುಗಳನ್ನು ಗಾಮೀಣ ಮಾರುಕಟ್ಟೆಗಳಲ್ಲಿ ಪ್ರಚುರ ಪಡಿಸಲು ಕಬಡ್ಡಿ ಬಳಸಬಹುದು. ಉದಾಹರಣೆಗೆ, ಈ ಸೋಪ್ ಸಮರ ನೋಡಿ; ರಿನ್ ಮತ್ತು ವೀಲ್ ಹಣಾಹಣಿ ಇದೀಗ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುತ್ತದೆ. ಇದನ್ನು ಕಬಡ್ಡಿ ಮೂಲಕ ವಿಸ್ತರಿಸಲೂಬಹುದು. ರಿನ್ ತಂಡದ ಆಟಗಾರರು ರಿನ್, ರಿನ್ ಎನ್ನುತ್ತಾ ವೀಲ್ ತಂಡದ ಕೋಟೆಯೊಳಗೆ ಪ್ರವೇಶಿಸಿದರೆ, ಎದುರಾಳಿಗಳು ವೀಲ್, ವೀಲ್ ಎನ್ನುತ್ತಾ ಪ್ರತಿಸ್ಪರ್ಧೆ ಒಡ್ಡಲು ಸಾಧ್ಯ. ಆಟದ ಕೊನೆಯಲ್ಲಿ ಎರಡೂ ತಂಡಗಳು ಮಣ್ಣಾದ ತಮ್ಮ ಬಟ್ಟೆಯನ್ನು ತಾವು ಪ್ರಾಯೋಜಿಸಿದ ಸೋಪ್ ಉಪಯೋಗಿಸಿ ಒಗೆಯಲೂಬಹುದು. ಆಕರ್ಷಕ ಸಂಬಾವನೆ ಸಹ ಪಡೆಯಲು ಸಾಧ್ಯ.
 
ಇದರಂತೆ ಇನ್ನೂ ಅನೇಕ ಸಂಭವನೀಯಗಳನ್ನು ನೀವು ಊಹಿಸಿಕೊಳ್ಳಿ, ಕಿಸಾನ್- ಮ್ಯಾಗಿ; ಪಾರ್ಲೆ-ಬ್ರಟಾನಿಯಾ; ಲಕ್ಸ್-ಲೈಪ್‍ಬಾಯ್ ಉತ್ಪಾದಿಸುವ ಕಂಪನಿಗಳು ದೊಡ್ಡ ಮನಸ್ಸು ಮಾಡಿ ಈ ಸಣ್ಣ ಕ್ರೀಡೆಗೆ ಪ್ರೋತ್ಸಾಹ ನೀಡಿದರೆ ಆಟಗಾರರ ಬಾಯಿಯಿಂದ ಕಿಸಾನ್, ಮ್ಯಾಗಿ, ಮ್ಯಾಗಿ, ಪಾರ್ಲೆ, ಪಾರ್ಲೆ, ಹೀಗೆ ವೈವಿಧ್ಯಮಯ ಕೂಗುಗಳನ್ನು ಕೇಳಬಹುದು. ಕಬಡಿ, ಕಬಡಿ ಎನ್ನುವ ಈಗಿರುವ ಏಕತಾನತೆಗೆ ಅಂತ್ಯ ಹಾಡಬಹುದು.
 
ಈ ಪ್ರಾಯೋಜಕತ್ವ ತುಂಬಾ ಪಾಪ್ಯುಲರ್ ಆಯಿತು ಎಂದುಕೊಳ್ಳಿ. ಆಗ ಕಾರ್, ಪ್ರಿಜ್, ಟೀವಿ, ರೇಡಿಯೋ, ಮುಂತಾದ ವೈಟ್ ಕಾಲರ್ ಸಾಮಾಗ್ರಿಗಳ ತಯಾರಕರು ಕಬಡ್ಡಿ ಅಖಾಡಕ್ಕೆ ಇಳಿಯುವುದರಲ್ಲಿ ಸಂದೇಹವೇ ಇಲ್ಲ. ಆಗ ಕಬಡ್ಡಿ ಅಂಗಳದಲ್ಲಿ ನಮಗೆ ಕೇಳಿಬರುವುದು ಮಾರುತಿ, ಮಾರುತಿ; ಹೋಂಡಾ, ಹೋಂಡಾ; ಗಾದ್ರೆಜ್, ಗಾದ್ರೆಜ್; ಫಿಲಿಪ್ಸ್, ಫಿಲಿಪ್ಸ್; ಸೋನಿ, ಸೋನಿ - ಹೀಗೆ ಉತ್ಪನ್ನಗಳ ಹೆಸರುಗಳೇ! ಕಬಡ್ಡಿ ಆಟಕ್ಕಷ್ಟೇ ಹೆಸರು. 
 
ಈಗ ಇಲ್ಲೊಂದು ಸಣ್ಣ ಸಮಸ್ಯೆ ತಲೆದೋರುತ್ತದೆ. ಅದೇನೆಂದರೆ ಉಚ್ಚಾರಣೆ ಸಮಸ್ಯೆ. ವೀಲ್, ರಿನ್, ಲಕ್ಸ್ ಮುಂತಾದವುಗಳನ್ನು ಪಟಪಟ ಹೇಳಬಹುದು. ಸುಲಭ. ಆದರೆ ಕೋಕಾಕೋಲಾ, ಬ್ರಿಟಾನಿಯಾ, ಫಿಲಿಪ್ಸ್, ಮುಂತಾದವುಗಳನ್ನು ಪಟಪಟನೆ ಹೇಳಿ ನೋಡೋಣ! ತಡವರಿಸಬೇಕಾಗಿ ಬರುತ್ತದೆ. ಆದುದರಿಂದ ಇಂತಹ ತಂಡಗಳು ತಮ್ಮ ಪ್ರಾಯೋಜಕರಿಂದ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಡಬಹುದು. 
 
ಇನ್ನೊಂದು ಸಾಧ್ಯತೆಯೂ ಇದೆ  ದೇಶೀ ಉತ್ಪನ್ನಗಳು ಎಮ್ಮೆನ್ಸಿ ಸಾಮಾಗ್ರಿಗಳ ವಿರುದ್ಧ ಹೋರಾಡಲು ಕಬಡ್ಡಿ ಪ್ರಚಾರತಂತ್ರ. ಲಸ್ಸಿ ಮಾಡುವ ಕಂಪನಿ ತನ್ನ ತಂಡವನ್ನು ಪೆಪ್ಸಿ ತಂಡದ ವಿರುದ್ದ ನಿಲ್ಲಿಸಿದರೆ ಹೇಗೆ? ಆರ್ಯುವೇದ ಔಷಧಿಗಳು ಅಲೋಪತಿ ಡ್ರಗ್ಸ್‍ಗಳನ್ನು ಎದುರಿಸಬಹುದೆ? ಖಾದಿ ಬೋರ್ಡ್ ರೇಮಂಡ್ ತಂಡವನ್ನು ಸದೆಬಡಿಯಬಹುದೇ? ಹಾಗೆಯೇ, ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ತಂಡಗಳನ್ನು (ಎತ್ತಿ) ಕಟ್ಟಬಹುದು. ಆದರೆ ಸಮಸ್ಯೆ ಎಂದರೆ ಕೊನೆಯ ಘಳಿಗೆಯಲ್ಲಿ ಆಟಗಾರರು ಪಕ್ಷಾಂತರ ಮಾಡಿದರೆ?
 
ನಮ್ಮ ಕೆಲವು ಜನಪ್ರಿಯ ಸಿನಿಮಾ ತಾರೆಯರು ಐಪಿಎಲ್ ಮಾದರಿಯಲ್ಲಿ ತಮ್ಮದೇ ಆದ ಕಬಡ್ಡಿ ತಂಡವನ್ನು ಕಟ್ಟಿ ಪಂದ್ಯಾವಳಿಗಳಲ್ಲಿ ಆಡಲು ಬಿಡಬಹುದು. ಉದಾ: ರಾಜ್ ತಂಡ ರಾಜ್, ರಾಜ್ ಎನ್ನುತ್ತ ಮುನ್ನುಗ್ಗಿದರೆ ಎದುರಾಳಿ ತಂಡ ವಿಷ್ಣು, ವಿಷ್ಣು ಎನ್ನುತ್ತಲೋ ಅಥವಾ ಜಗ್ಗೇಶ್, ಜಗ್ಗೇಶ್ ಎಂದು ಪಿಸುಗುಟ್ಟುತ್ತಲೋ ವೈರಿಗಳ ಆವರಣವನ್ನು ಪ್ರವೇಶಿಸಬಹುದು. ಅದರಂತೆ ಜನಪ್ರಿಯ ನಟಿಯೊಬ್ಬಳು ತನ್ನ ತಂಡವನ್ನು ಎತ್ತಿ ಕಟ್ಟಿದರೆ ಆಕೆಯ ನಾಮವನ್ನು ಜಪಿಸುತ್ತಾ ಆಟಗಾರರು ಸ್ಫೂರ್ತಿಯನ್ನು ಪಡೆಯಲು ಸಾಧ್ಯ ಅಲ್ಲವೆ? ನಟನ ತಂಡ, ನಟಿಯ ತಂಡವನ್ನು ಎದುರಿಸಿದಾಗ ಪ್ರೇಕಷ್ಕರಿಗೆ ಆಗುವ ಉತ್ಕರ್ಷ, ಚಿಮ್ಮುವ ಉತ್ಸಾಹ, ಹೊರಹೊಮ್ಮುವ ಘೋಷಕ್ಕೆ ಸಾಟಿ ಇರುವುದೇ? 
 
ಇವೆಲ್ಲ ನೋಡಿದಾಗ ಕಬಡ್ಡಿಯಂತಹ ದೇಶೀ ಕ್ರೀಡೆಗೆ ಇಂತಹ ಪ್ರಾಯೋಜಕತ್ವ ಸಿಕ್ಕಿದರೆ ಅದೊಂದು ಕ್ರಾಂತಿಕಾರಿ ಬೆಳವಣಿಗೆ ಎನ್ನಬಹುದು. ಆದರೆ ಭಾರತದಲ್ಲಿ ಆಗುವುದು ಸಂಕ್ರಾಂತಿಯೇ ಹೊರತು ಕ್ರಾಂತಿಯಲ್ಲ ಎಂಬುದರ ಹಿನ್ನೆಲೆಯಲ್ಲಿ ಇದೊಂದು ಟೆಕ್ನಿಕಲ್ ಡಿಜಿಟಲ್ ಕನಸು!
 
(ಚಿತ್ರ ಕೃಪೆ: ಗೂಗಲ್)