ಕಲ್ಲು ಬಾಳೆ: ಕಾಡಿಗೂ ಸೈ ನಾಡಿಗೂ ಸೈ

ಕಲ್ಲು ಬಾಳೆ: ಕಾಡಿಗೂ ಸೈ ನಾಡಿಗೂ ಸೈ

'ಕಲ್ಲುಬಾಳೆ'ಯೆಂಬ  ಹೆಸರೇ ಒಂದು ವಿರೋಧಾಭಾಸ! ಬಾಳೆಯ ಮೃದುತ್ವ ಮತ್ತು ಕಲ್ಲಿನ ಒರಟುತನದ ಅರ್ಥಪೂರ್ಣ ಮಿಶ್ರಣ -  ಕಲ್ಲುಬಾಳೆಎಂಬ ಹೆಸರು. ನೋಡಲು ಕಾಂಡವು ತಾಳೆ ಮರದ ಒರಟಾದ ಬೊಡ್ಡೆಯಂತೆಯೂ, ಎಲೆಗಳು ಬಾಳೆ ಎಲೆಯಂತೆಯೂ ಕಾಣುವ ವಿಶಿಷ್ಟ ಕಲ್ಲುಬಾಳೆ 'ಎನ್ಸೆಟೆ'. ಪೂರ್ಣ ವೈಜ್ಞಾನಿಕ ನಾಮ 'ಎನ್ಸೆಟೆ ಸುಪರ್ಬಂ'. ಊರಿನ ಬಾಳೆಗಳು ಮತ್ತು ಕಲ್ಲುಬಾಳೆಗಳಿಗಿಂತ ಬೆಟ್ಟದ 'ಎನ್ಸೆಟೆ' ಕಲ್ಲುಬಾಳೆಗಳು ನೋಡಲು ತುಂಬಾ ಭಿನ್ನ (ಚಿತ್ರದಲ್ಲಿ ಕಾಣುವಂತೆ). ಸೊಂಪಾಗಿ ಬೆಳೆದರೆ ಇದರ ಎಲೆಗಳು ಹತ್ತು ಅಡಿಗಿಂತ ಉದ್ದವಾಗಿ ಬೆಳೆಯುತ್ತವೆ. ಎಲೆಯ ಮಧ್ಯದ ದಂಟು ಕೆಂಪಾಗಿ ಇದ್ದು ಗಿಡವನ್ನು ಮತ್ತಷ್ಟು ಆಕರ್ಷಕವನ್ನಾಗಿಸುತ್ತದೆ. ಕುಳ್ಳಗಿದ್ದರೂ ಬೃಹದಾಕಾರದ ಈ ಗಿಡವನ್ನೊಮ್ಮೆ ನೋಡದೆ ಹೀಗೊಂದು ಗಿಡವಿದೆಯೆಂದು ಊಹಿಸುವುದೇ ಕಷ್ಟ.
ಬಾಳೆಯ ಕುಟುಂಬ ನಕ್ಷೆ
ಬಾಳೆಯೆಂಬ 'ಕುಟುಂಬ'(Family) ದಲ್ಲಿ ಒಟ್ಟು 3 ಪ್ರಧಾನ ಜಾತಿಗಳು (Genus).
1) ಮೂಸ (ತಿನ್ನುವ ಸಾಮಾನ್ಯ ಬಾಳೆಗಳು ಮತ್ತು ತಿನ್ನಲಾಗದ ಬೀಜಯುಕ್ತ ಬಾಳೆಗಳು - ಒಟ್ಟು ಹಲವಾರು ಉಪಜಾತಿಗಳು). ಇವು ಹೊಸ ಪಿಳ್ಳೆ (ಕಂದು)ಗಳ ಮೂಲಕವೂ ಹರಡಬಲ್ಲವು.  
2) ಎನ್ಸೆಟೆ (ಬೀಜಯುಕ್ತ ಕಲ್ಲುಬಾಳೆಗಳು - ಸುಮಾರು 7 ಉಪಜಾತಿಗಳು). ಕಂದುಗಳಿಲ್ಲ. ಬೀಜದ ಮೂಲಕವಷ್ಟೇ ಸಂತತಿ.  
3)ಮುಸೆಲ್ಲ (2 ಅಲಂಕಾರಿಕ ಉಪಜಾತಿಗಳು). ನೋಡಲು ಬಹಳ ಸುಂದರ. ಭಾರತದಲ್ಲಿ ಇರುವ ಉಲ್ಲೇಖ ನನಗೆ ತಿಳಿದಿಲ್ಲ. ಸದ್ಯಕ್ಕೆ ನನ್ನ ಸಂಗ್ರಹಕ್ಕಾಗಿ ಹುಡುಕುತ್ತಿದ್ದೇನೆ.

ಬೀಜವಿರುವ ಎಲ್ಲ ಬಾಳೆಗಳನ್ನು ಕಲ್ಲುಬಾಳೆಯೆಂದು ಕರೆಯುವುದು ವಾಡಿಕೆಯಾದರೂ ಸದ್ಯಕ್ಕೆ 'ಎನ್ಸೆಟೆ' ಪ್ರಧಾನ ಜಾತಿಯ (Genus), 'ಎನ್ಸೆಟೆ ಸುಪರ್ಬಂ' ಎನ್ನುವ ಉಪಜಾತಿಯನ್ನಷ್ಟೇ (species) ನೋಡೋಣ.

ಎಲ್ಲಿವೆ ಮತ್ತು ಹೇಗಿವೆ?
ಈ ಜಾತಿಯ ಕಲ್ಲು ಬಾಳೆಗಳು ಆಫ್ರಿಕ ಮತ್ತು ಏಶಿಯ ದಲ್ಲಿ ಇವೆ. ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮೊದಲು ಹೇರಳವಾಗಿದ್ದ ಇವು ಸದ್ಯಕ್ಕೆ ಸಂಖ್ಯೆಯಲ್ಲಿ ಕ್ಷೀಣಿಸುತ್ತಿವೆ. ನಾನು ಇವುಗಳ ಹುಡುಕಾಟದಲ್ಲಿ ಕೊಲ್ಲೂರಿನ ಸುತ್ತಮುತ್ತ, ಚಾರ್ಮಾಡಿ ಮತ್ತು ಶೀರಾಡಿ ಘಾಟಿಗಳಲ್ಲಿ ಸುತ್ತಾಡಿದ್ದೇನೆ. ಸ್ನೇಹಿತರಿಂದ ಪಡೆದು, ಈಗ ನನ್ನ ತೋಟದಲ್ಲಿ ಹತ್ತಾರು ಗಿಡಗಳು ಇವೆ.

ಇವುಗಳ ಆಯುಸ್ಸು ಸುಮಾರು 4 ವರ್ಷ. ಕಂದುಗಳ ಮೂಲಕ ವಂಶಾಭಿವೃದ್ಧಿ ಇಲ್ಲ. ಜೀವನದಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಬೀಜ ಧರಿಸಿ ಬಳಿಕ ಗಿಡವು ಸಾಯುತ್ತದೆ (ಪಣೆ ಮರವನ್ನು ನೆನಪಿಸಿಕೊಳ್ಳಿ). ಎನ್ಸೆಟೆ ಜಾತಿಯ ಮತ್ತೊಂದು ವಿಶೇಷ ಇವುಗಳ 'ಅಭಾವ ವೈರಾಗ್ಯ'. ಮಳೆಗಾಲ ಮುಗಿದು ನೀರಿನ ಲಭ್ಯತೆ ಕಡಿಮೆಯಾಗುತ್ತಲೂ ತನ್ನ ಎಲೆಗಳನ್ನೆಲ್ಲ ಪೂರ್ತಿ ಒಣಗಿಸಿ ಬರಿಯ ಗಡ್ಡೆಯ ಕುಟುಕು ಜೀವವನ್ನಷ್ಟೇ ಉಳಿಸಿ ಮಳೆಗಾಲಕ್ಕೆ ಕಾಯುತ್ತದೆ. ಮಳೆ ಬರುತ್ತಲೂ ಹೊಸ ಚಿಗುರನ್ನು ಕೊಟ್ಟು ಗತ ವೈಭವಕ್ಕೆ ಮರಳುತ್ತದೆ. ಧಾರಾಳ ನೀರಿರುವ ತಂಪು ಜಾಗದಲ್ಲಿ ಈ ವರ್ತನೆ ಇಲ್ಲ. ಪ್ರಬುದ್ಧ ಗಿಡವು ದೊಡ್ಡ ಹೂಗುಚ್ಛ ಧರಿಸಿ ವಂಶಾಭಿವೃದ್ಧಿಯ ಜೊತೆಗೆ ತನ್ನ ಸಾವಿಗೆ ನಾಂದಿ ಹಾಡುತ್ತದೆ. ಒತ್ತಾಗಿ ಬಾಳೆಕಾಯಿಗಳು ತುಂಬಿದ ಗೊನೆ ಧಾರಾಳ ಬೀಜ ಕೊಡುತ್ತದೆ.  
ಉಪಯೋಗಗಳು
ಔಷಧವಾಗಿ ಇದರ ವಿಶೇಷ ಉಪಯೋಗವಿದೆ. ಮೂತ್ರಕೋಶದ ಕಲ್ಲು ಕರಗಿಸಲು ಉಪಕಾರಿ. ಇಥಿಯೋಪಿಯದ ಜನರು ಇದನ್ನು ಕ್ಷಾಮ ಕಾಲದ ಮತ್ತು ಸಾಮಾನ್ಯ ಆಹಾರವಾಗಿ (staple food) ಬಹಳಷ್ಟು ಉಪಯೋಗಿಸುತ್ತಾರೆ. ಅಲ್ಲಿ ಇದರ ಗಡ್ದೆಯೂ ಆಹಾರವೇ. ಬೆಳೆದ ದೊಡ್ಡ ಬಾಳೆಯ ಗಡ್ಡೆ 40 ಕೆಜಿಯಷ್ಟು ಆಹಾರ ನೀಡಬಲ್ಲುದೆಂದು ಉಲ್ಲೇಖವಿದೆ. ಅಲಂಕಾರಿಕ ಸಸ್ಯವಾಗಿ ಕಾರ್ಪೋರೆಟ್ ಜಗತ್ತು ಇದಕ್ಕೆ ಮಣೆ ಹಾಕುತ್ತದೆ. ಹಣ್ಣು ತಿನ್ನುವುದೊಂದನ್ನು ಬಿಟ್ಟರೆ ಉಳಿದಂತೆ ಸಾಮಾನ್ಯ ಬಾಳೆಯ ಎಲ್ಲ ಉಪಯೋಗಗಳೂ ಇದಕ್ಕಿವೆ. ಬೀಜದ ಲಭ್ಯತೆ ಕಡಿಮೆಯಾದ್ದರಿಂದ ನರ್ಸರಿಗಳಲ್ಲಿ ಇದರ ಬೀಜದ ಗಿಡಕ್ಕೆ ತುಂಬಾ ಬೇಡಿಕೆ ಬರಬಹುದು. ಒಮ್ಮೆ ಗಿಡದ ಸೌಂದರ್ಯ ನೋಡಿದವನು 'ನನಗಿದು ಬೇಕು' ಎನ್ನದೆ ಇರಲಾರ!.

ಕಲ್ಲು ಬಾಳೆಯೆಂಬ ಹೆಸರು ಹಣ್ಣಿನಲ್ಲಿ ಬೀಜವಿರುದರಿಂದಲೋ, ಕಲ್ಲಿನ ಸಂದುಗಳಲ್ಲಿಯೇ ಬೆಳೆಯುವುದರಿಂದಲೋ ಅಥವಾ ಕ್ಷಾಮಕ್ಕೆ ಹೊಂದಿಕೊಳ್ಳುವ ಅದರ ಗುಣದಿಂದಲೋ? ಬಹುಶ: ಇವೆಲ್ಲ ಕಾರಣಗಳಿಗೆ ಇರಬಹುದು. ಪ್ರಾಣಿಪಕ್ಷಿಗಳು ತಾವಿರುವ ಪರಿಸರಕ್ಕೆ ಹೊಂದಿಕೊಳ್ಳುವ ಅದ್ಭುತ ಶಕ್ತಿಯ ಒಂದು ಒಳ್ಳೆಯ ಉದಾಹರಣೆ ಕಲ್ಲು ಬಾಳೆ. ಬೇಸಿಗೆಯಲ್ಲಿ ತಂಪನ್ನು, ಚಳಿಗಾಲದಲ್ಲಿ ಬಿಸಿಯನ್ನೂ, ಮರಳುಗಾಡಿನಲ್ಲಿ ಹಿಮವನ್ನೂ ಮುಂತಾಗಿ ಎಲ್ಲ ಅಪ್ರಾಕೃತಿಕ ಸೊಬಗನ್ನು ಪ್ರಕೃತಿಯ ಸತತ ಶೋಷಣೆಯಿಂದ ಸೃಷ್ಟಿಸಿಕೊಳ್ಳುವ ನಿರ್ದಯಿ ಮನುಷ್ಯನಿಗೆ ಕಲ್ಲುಬಾಳೆ ಒಂದು ಪಾಠ.   ಎಲ್ಲ ಇದ್ದಾಗ ಸೊಕ್ಕಿ ಬೆಳೆಯುವ ಬಾಳೆ, ನೀರು ಬತ್ತಿದಾಗ ಮುಕ್ಕಾಲು ಭಾಗ ಸತ್ತು, ತನ್ನ ಇರವಿನ ಬಗ್ಗೆ ತೋರುವ ನಿರ್ಮೋಹ, ಸಕಲ ಬಲ್ಲಿದನಾದ ಮನುಷ್ಯನಿಗೆ ಇನ್ನೂ ಸಿದ್ಧಿಯಾಗದ ವಿದ್ಯೆ. ನೋಡಲು ಅತಿ ಸುಂದರವಾದ, ಪ್ರತಿಯೊಂದು ಭಾಗವೂ ಉಪಯುಕ್ತವಾದ, ಜ್ಞಾನಿ ಕಲ್ಲುಬಾಳೆ ನಿಸ್ಸಂಶಯವಾಗಿ ಅದರ ಸಸ್ಯ ನಾಮದಂತೆ 'ಸುಪರ್ಬಂ'. ಇದನ್ನು ಕಾಡಿನಲ್ಲಿ ಉಳಿಸಿಕೊಂಡು, ಕೈ ತೋಟದಲ್ಲಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ.