ಕವನ : ಬಿದಿರನೂದುವ ಗೊಲ್ಲ

ಕವನ : ಬಿದಿರನೂದುವ ಗೊಲ್ಲ

ಕವನ

ಕವನ : ಬಿದಿರನೂದುವ ಗೊಲ್ಲ
 

ಆರುತೂತಿನ ಬಿದಿರ ಕೊಳಲನೂದುವ ಗೊಲ್ಲ
ಮಧುರಭಾವದಿ ಮಯ್ಯ ಮರೆತ  ರಾಧೆಯ ನಲ್ಲ
ಕೃಪೆ ಮಾಡಿ ನಿಲಿಸಯ್ಯ ನಿನ್ನ ಕೊಳಲೂದನು.

ಇರುವಾರು ತೂತಿನೊಳ ದನಿಯ ಕೇಳೆನು ಬಯಸಿ
ಕಣ್ಣ ತಪ್ಪಿಸಲಾರೆ ಆತ್ಮ ಪ್ರಜ್ಞೆಯ ಮರೆಸಿ
ಎನಿತು ಕರ್ಕಷ ನಿನ್ನ ಕೊಳಲ ದನಿ ಗಾನವು.

ಎಲ್ಲ ರಂಧ್ರವ ಮುಚ್ಚಿ ಮೌನ ರಾಗವ ಹಿಡಿದು
ಏಕತಾಳದ ಲಯಕೆ ಒಳ ದನಿಯ ಹೊರ ತಡೆದು
ದೇವಗಾನವ ನುಡಿಸು ಈ ದೇಹ ಮೀಯಲು.

ಕಾಮಕ್ರೊಧದ ತೂತು ಲೋಭಮೋಹದ ತೂತು
ಮದಮತ್ಸರಾದಿ ತನುವೆಂಬ ಕೊಳಲಿನ ತೂತು
ನಿನ್ನ ಕೈ ಬೆರಳಿಂದ ಇವ ಮುಚ್ಚ ಬಾರದೇ

ಭಿನ್ನ ರಾಗವ ಬಯಸಿ ಮರುಳಾಗದಿರೆ ನಾನು
ಥರಥರದ ರಾಗಕ್ಕೆ ತೂತು ತೆರೆಯುವೆ ನೀನು
ದಯೆಯಿರಲಿ ಕೇಳುಗನ  ತೆರೆದ ಕಿವಿ ಮೇಲೆ.

ಈ ಬಿದಿರು ಹಸಿ ಬಿದಿರು ಹಿಡಿದೆಯೇತಕೊ ಕಾಣೆ
ಒಡೆದು ಹೋದಿತು ನಿನ್ನ ಬೆರಳತಾಡನ ತಾಳೆ
ಇದನೆಸೆದು ಹೊಸದೊಂದ ವಾದಿಸಲು ಆಗದೇ