ಕಾಲವೆಂಬ ಮಹಾಶಕ್ತಿ

ಕಾಲವೆಂಬ ಮಹಾಶಕ್ತಿ

ಕವನ

ಕಾಲವೆಂಬ ಮಹಾಶಕ್ತಿ
ಕಾಲದ ಗಾಳಕೆ ಸಿಕ್ಕಿಹ ಮೀನಾಗಿರುವೆ
ಗತಿಸಿದ ನಿನ್ನೆಯಲಿ ನಾ ಗಳಿಸಿದ್ದೇನುಂಟು?
ಮಿಂಚಿನೋಟದ ಇಂದು ನನದಾಗಿ ದಕ್ಕದಾಗಿದೇಕೆ?
ಬರುವ ನಾಳೆಯು ನನದೆಂಬುದದು ಪ್ರಶ್ನಾತೀತ

ಕಾಲದ ವಿಸ್ತಾರವು ನನ್ನೂಹೆಗೆ ನಿಲುಕದಾಗಿಹುದು
ಅದೆಷ್ಟು ಬಲವಾದ ರೆಕ್ಕೆಗಳ ಕಟ್ಟಿದರೂ
ಗಗನದಾಚೆಗೆ ಹಾರಿ ಕಾಲದ ಕಣ್ತಪ್ಪಿಸದಾದೀತೆ?
ಕಡಲ್ತಳಕೀಜಿದರೂ ಕಾಲದ ಕೈಯಿಂದ ನುಸುಳುವೆನೆ?

ನಾನೆಂಬ ಮಾನವನು ಕಾಲವನೆಂದೂ ಗೆದ್ದಿದ್ದಿಲ್ಲ
ಕಾಲದ ಚಕ್ರದಲಿ ಜೀವನಗತಿಯ ರೂಪಿಸಿ
ನೆನ್ನೆ-ನಾಳೆಗಳ ಮಧ್ಯೆಯ ಇಂದನ್ನು ಮರೆಯದೆ
ಕಾಲವೆಂಬ ನೌಕೆಯೊಯ್ಯುವ ಗಮ್ಯಸ್ಥಾನವ ಸೇರೋಣ

© ರಾಘವ ಹರಿವಾಣಂ

Comments