ಕುಂವೀ ಆತ್ಮಕಥನ - ಗಾಂಧಿ ಕ್ಲಾಸು

ಕುಂವೀ ಆತ್ಮಕಥನ - ಗಾಂಧಿ ಕ್ಲಾಸು

ಬರಹ

ಕುಂವೀ ಆತ್ಮಕಥನ - ಗಾಂಧಿ ಕ್ಲಾಸು
ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದೆ, ಇಲ್ಲಿ ಬರುವ ಎಲ್ಲ ಘಟನೆಗಳೂ ತಮ್ಮ ಜೀವನದ ಶೇ.೯೯ರಷ್ಟು ಸತ್ಯವೆಂದೇ ಕುಂವೀ ಹೇಳುತ್ತಾರೆ. 
ಬಾಲ್ಯದಿಂದ ಹಿಡಿದು, ಅಮೆರಿಕಾದ ಅಕ್ಕ ಸಮ್ಮೇಳನದವರೆಗೆ ಬೆಳೆದ ಕುಂವೀಯನ್ನು ನಾವಿಲ್ಲಿ ಕಾಣುತ್ತೇವೆ. ಅಪ್ಪಟ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಷೆಯ ಸೊಗಡನ್ನು ಆತ್ಮಕಥನದ ಸನ್ನಿವೇಶಗಳಲ್ಲಿ ಹಿಡಿದಿಡುತ್ತಲೇ, ಹಿಂದುಳಿದ ಜನಾಂಗದ ಬದುಕಿನ ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಇಲ್ಲಿ ಬಾಲ್ಯ ಸಹಜ ಕುತೂಹಲಗಳಿವೆ, ಬೆರಗುಗಣ್ಣುಗಳಿವೆ, ಉತ್ಸಾಹ, ಉಲ್ಲಾಸ, ಅಂತೆಯೇ ಕಾಮದ ಕುತೂಹಲವೂ ಒಡಮೂಡಿದೆ. ಆತ್ಮಕಥನದ ಮೊದಲಿಗೆ ಬರವಣಿಗೆ ಬಹು ಲಘುವಾಗಿ ಸಾಗುತ್ತದೆ. ಕುಂವೀಯ ಎಂದಿನ ಭಾಷಾ ಶೈಲಿಯ ಸೊಗಡನ್ನು ಆಸ್ವಾದಿಸಬಹುದು. ಅವರಲ್ಲಿ ಕಾದಂಬರಿಕಾರ ಒಡಮೂಡಿದ ನಂತರ ಕೃತಿಯ ಗಂಭೀರತೆ ಹೆಚ್ಚುತ್ತ ಹೋಗುತ್ತದೆ. ಕೃತಿಯುದ್ದಕ್ಕೂ ನಗುವಿನ ಸೆಳಹುಗಳಿವೆ. ಅಂತೆಯೇ ಬಡತನ, ಕ್ರೌರ್ಯ, ಹಿಂಸೆ, ಹಸಿವಿನ ದಾಖಲೆಗಳೂ ಇವೆ. ಇಡೀ ಗ್ರಾಮಕ್ಕೇ ಕೊಡುಗೈ ದೊರೆಯೆನಿಸಿಕೊಂಡಿದ್ದ ಕುಂವೀಯವರ ಮನೆತನ ಬಡತನದ ಬವಣೆಗೆ ಸಿಲುಕುವ ಪ್ರತಿ ಹಂತಗಳೂ ಕೃತಿಯಲ್ಲಿ ದಾಖಲಾಗಿವೆ. ಹಿಂದುಳಿದ ಜನಾಂಗವನ್ನು ಸಮಾಜ ಕಾಣುವ ದೃಷ್ಟಿಕೋನ, ಅವಮಾನದ ಪ್ರಸಂಗಗಳು, ಅದನ್ನು ಭರಿಸಿ ಸವಾಲಿನ ರೀತಿಯಲ್ಲಿ ಮುಂದೆ ಸಾಗುವ ಸನ್ನಿವೇಶಗಳೇ ಓದುಗನನ್ನು ಹಿಡಿದಿಡಲು ಸಮರ್ಥವಾಗಿವೆ. 
ಕುಂವೀ ಬಾಲ್ಯದ ಕೊಟ್ಟೂರು, ಶಿಕ್ಷಕರಾಗಿ ಕೆಲಸ ಮಾಡುವ ಆಂಧ್ರಪ್ರದೇಶದ ಕ್ರೌರ್ಯ ತುಂಬಿದ ವಾಗಿಲಿಯಂಥ ಪ್ರದೇಶಗಳು, ಅಲ್ಲಿನ ಜಮೀನ್ದಾರಿ ಪದ್ಧತಿಯ ರೆಡ್ಡಿಗಳ ಅಟ್ಟಹಾಸ, ಜೊತೆಯಲ್ಲಿಯೇ ಅದನ್ನು ತಮ್ಮೊಳಗಿನ ಕಾದಂಬರಿಕಾರನಿಗೆ ಉಣಬಡಿಸುವ, ದಾಖಲಿಸುವ ಪ್ರಕರಣಗಳು ಕುಂವೀ ಬೆಳೆದ ದಾರಿಯನು ತೋರುತ್ತವೆ. ಬದುಕಿನುದ್ದಕ್ಕೂ ನೋವು, ಸವಾಲು, ಆರ್ಥಿಕ ತೊಂದರೆಗಳನ್ನು ಅನುಭವಿಸುತ್ತಲೇ, ಅದರಲ್ಲಿಯೇ ಸಂತಸದ ಕ್ಷಣಗಳನ್ನೂ ಕುಂವೀ ತೋರಿದ್ದಾರೆ. ತಮ್ಮ ಕೇರಿಯ, ದಲಿತರ ಕೇರಿಯ ದೃಶ್ಯಗಳನ್ನು ಕೃತಿಯಲ್ಲಿ ಒಡಮೂಡಿಸಿರುವುದು ಅದ್ಭುತವಾಗಿದೆ. ಆತ್ಮಕಥನದಲ್ಲಿ ಬರುವ ದೆವ್ವಗಳ ಪ್ರಸಂಗ, ಮುದುಕಿಯರ ಜಗಳಗಳು, ರಂಪಾಟ, ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ರೀತಿ, ಗ್ರಾಮೀಣ ಭಾಗದಲ್ಲಿ ಶೌಚಾಲಯಗಳಿಲ್ಲದೆ ಬಯಲು ಪ್ರದೇಶಕ್ಕೆ ಹೋದಾಗ ನಡೆವ ಸನ್ನಿವೇಶಗಳು ಓದುಗರು ನಗೆ ಚೆಲ್ಲುವಂತೆ ಮಾಡುವುವಲ್ಲದೆ, ಗ್ರಾಮಗಳ ನೈಜ ಸ್ಥಿತಿಯನ್ನು ಬಿಂಬಿಸುತ್ತವೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ, ಹಗಲಿರುಳೆನ್ನದೆ ಘಟನಾವಳಿಗಳ ಬೆಂಬತ್ತಿ ನೂರಾರು ಪುಟಗಳ ಕಾದಂಬರಿಗಳನ್ನು ಬರೆದು ಬಿಸಾಕುವ ಕುಂವೀಯ ದೈತ್ಯ ಶಕ್ತಿ ಕೃತಿಯಲ್ಲಿ ಮಿಂಚಿದೆ. ಚಲನಚಿತ್ರರಂಗದಿಂದ ಕಲಿತ ಪಾಠಗಳೂ ಆತ್ಮಕಥನದಲ್ಲಿ ಬಂದಿವೆ. ಮಲ್ಲೇಪುರಂ ವೆಂಕಟೇಶ್‌ರಂತಹ ವಿದ್ವಾಂಸರೊಂದಿಗೆ ಒಡನಾಡುವ ಕುಂವೀ ಅದೇ ಸಮಯದಲ್ಲಿ ರಕ್ತದೋಕುಳಿಯಾಡುವ ರೆಡ್ಡಿಗಳೊಂದಿಗೂ ಕುಶಲ ಸಂಭಾಷಣೆ ನಡೆಸುವುದೇ ವಿಚಿತ್ರವೆನಿಸುತ್ತದೆ. ಅಪಾಯಕಾರಿ ಸಂದರ್ಭಗಳಲ್ಲಿ ಕುಂವೀ ಪಾರಾಗುವ ಸನ್ನಿವೇಶಗಳು ಓದುಗರನ್ನು ರೋಮಾಂಚನಗೊಳಿಸುತ್ತವೆ. 
ಕೃತಿ ಎಲ್ಲಿಯೂ ತಡೆಯಿಲ್ಲದಂತೆ ಓದಿಸಿಕೊಂಡು ಹೋಗುವುದು ಅದರಲ್ಲಿನ ಗ್ರಾಮೀಣ ಭಾಷಾ ಲಾಲಿತ್ಯದಿಂದಾಗಿ. ಅದೇ ಕುಂವೀಯ ಶಕ್ತಿಯೂ ಕೂಡ. ಹಿಂದುಳಿದ ಜನಾಂಗದ ಬಾಲಕನೊಬ್ಬ ದೈತ್ಯಾಕಾರದ ಕಾದಂಬರಿಕಾರನಾಗಿ ಬೆಳೆಯುವ, ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ ಎಲ್ಲರ ಹುಬ್ಬೇರುವಂತೆ ತನ್ನ ಬರವಣಿಗೆಯ ಸಾಮರ್ಥ್ಯದಿಂದ ಅಮೆರಿಕದ ಅಕ್ಕ ಸಮ್ಮೇಳನದವರೆಗೆ ಸಾಗುವ ಹೆಜ್ಜೆ ಗುರುತುಗಳು ಕೃತಿಯಲ್ಲಿ ಮೂಡಿವೆ. 
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆಯ  ಕುಮಾರವ್ಯಾಸನಂತೆಯೇ ತಾವೂ ಒಮ್ಮೆ ಬರೆದರೆ ಅದನ್ನು ಮತ್ತೆ ತಿದ್ದುಪಡಿ ಮಾಡುವ ಗೋಜಿಗೇ ಹೋಗುವುದಿಲ್ಲ ಎಂದು ತಮ್ಮ ಬರವಣಿಗೆಯ ಬಗ್ಗೆ ಕುಂವೀ ಹೇಳಿಕೊಳ್ಳುತ್ತಾರೆ. ಗಾಂಧಿ ಕ್ಲಾಸು ಕನ್ನಡ ಸಾಹಿತ್ಯದಲ್ಲಿ ವಿನೂತನ, ವಿಶಿಷ್ಟತೆಯನ್ನೊಳಗೊಂಡ ಆತ್ಮಕಥನ ಎಂದು ಹೇಳಬಹುದು. ಕುಂವೀಯನ್ನು ಹತ್ತಿರದಿಂದ ನೋಡಬೇಕೆಂದರೆ ಈ ಕೃತಿಯನ್ನು ಓದಬೇಕು. 
ಬೆಂಗಳೂರಿನ ಸಪ್ನ ಬುಕ್ ಹೌಸ್‌ನಿಂದ ಪ್ರಕಟಗೊಂಡಿರುವ ಕೃತಿಯ ಬೆಲೆ ೨೨೫ ರೂ.ಗಳು. 
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದೆ, ಇಲ್ಲಿ ಬರುವ ಎಲ್ಲ ಘಟನೆಗಳೂ ತಮ್ಮ ಜೀವನದ ಶೇ.೯೯ರಷ್ಟು ಸತ್ಯವೆಂದೇ ಕುಂವೀ ಹೇಳುತ್ತಾರೆ. 