ಕೇರಳದ ಕಾಡಿನ ಕಾಲು ಹಾದಿ ಮತ್ತು ಅಚ್ಚು

ಕೇರಳದ ಕಾಡಿನ ಕಾಲು ಹಾದಿ ಮತ್ತು ಅಚ್ಚು

ಅಲ್ಲೇನು ಇಲ್ಲ, ಚಿಕ್ಕ ಕಾಲು ದಾರಿ ಅಷ್ಟೇ, ಆದರೂ ನೂರಾರು ನೆನಪುಗಳು ಅದರ ಅಕ್ಕ ಪಕ್ಕ. ನಾನು ಹಾಗು ಗೆಳೆಯ ಇಬ್ಬರೂ ಸೇರಿ ಅದೇ ಕಾಲು ಹಾದಿಯಲ್ಲಿ ನಡೆದು ಕೇರಳದ ಕಾಡಿನ ಒಳಗೆ ಹೋಗುತ್ತಿದ್ದುದು, ಕಾಲು ಹಾದಿಯ ಮಧ್ಯದಲ್ಲಿ ಒಂದು ಚಿಕ್ಕ ಗುಡಿಸಲು, ಅಲ್ಲೊಬ್ಬರು ಜೇನು ಹಿಡಿಯುವವರು ವಾಸಿಸುತ್ತಿದ್ದರು, ಅವರು ಸಾಕಿದ ನಾಯಿ ಅಚ್ಚು ಮೊದಲಿಗೆ ನಮ್ಮನ್ನು ನೋಡಿ ಜೋರಾಗಿ ಬೊಗಳುತ್ತಿತ್ತು,,,, ಕ್ರಮೇಣ ನಮ್ಮ ಮೈಯ ಪರಿಮಳ ಅದಕ್ಕೆ ಪರಿಚಿತ ಆಗಿತ್ತು. ಕುಂಯ್ ಕುಂಯ್ ಎನ್ನುತ್ತಾ ಗೆಳೆತನಕ್ಕೆ ಪ್ರಯತ್ನಿಸುತ್ತಿತ್ತು, ನಮಗೂ ಪಾಪ ಎನಿಸಿ, ಅದನ್ನು ನಮ್ಮ ಗೆಳೆಯರ ಪಟ್ಟಿಗೆ ಸೇರಿಸಿಕೊಂಡಿದ್ದೆವು.
ಒಂದಿನ ನಾನು, ಗೆಳೆಯ, ಹಾಗು ನಾಯಿ-ಅಚ್ಚು ಮೂವರು, ಕಾಲು ಹಾದಿಯಲ್ಲಿ ನಡೆಯುತ್ತಾ, ನೀರನ್ನು ದೂರಕ್ಕೆ ದುಮ್ಮಿಕ್ಕಿಸುತ್ತಾ ಹರಿಯುತ್ತಿದ್ದ ಚಿಕ್ಕ ಜಲಪಾತದ ಬುಡದಲ್ಲಿ ಕುಳಿತಿದ್ದೆವು. ಅಚ್ಚುವಿಗೆ ಈ ರೀತಿಯ ಟ್ರಕ್ಕಿಂಗ್-ಗಳು ಮಾಮೂಲಿ. ನಮಗೆ ಕಾಡಿನ ಮಧ್ಯ ಚಿಕ್ಕ ಜಲಪಾತ ಕಂಡು ಹುಚ್ಚು ಹಿಡಿದಷ್ಟು ಖುಷಿಯಾಗಿತ್ತು, ಅವತ್ತು ಮಳೆಗಾಲವಾದರೂ, ಮಳೆ ಅಷ್ಟೊಂದು ಇರಲಿಲ್ಲ,,,,,,, ನಾವು ಅಲ್ಲೇ ಇದ್ದ ಚಿಕ್ಕ ಬಂಡೆಯ ಮೇಲೆ ಕುಳಿತು, ಗೆಳೆಯ ಅವನ ಮನೆಯಿಂದ ತಂದ ಮೀನು ಪ್ಫ್ರೈ ಅನ್ನು, ಅಗಲ ಎಲೆಯೊಳಗೆ ಹಾಕಿ ತಿನ್ನಲಾರಂಭಿಸಿದೆವು, ಅಚ್ಚು ತನಗೂ ಬೇಕೆಂದು ಹಠ ಮಾಡುತ್ತಿದ್ದ, ನಾನು ಉಳಿದ ಮುಳ್ಳನ್ನು ಮಾತ್ರ ಅಚ್ಚುವಿಗೆ ಎಸೆಯುತ್ತಿದ್ದ, ಅಚ್ಚು ಬೇಜಾರಿಲ್ಲದೆ ತಿನ್ನುತ್ತಿದ್ದ,,,,, ಆದರೆ ಗೆಳೆಯ ಮಾತ್ರ ಇಡೀ ಒಂದು ಮೀನನ್ನು ಅಚ್ಚುವಿಗೆ ತಿನ್ನಲು ಕೊಟ್ಟ. ನನಗೆ ಸ್ವಲ್ಪ ಸಿಟ್ಟು ಬಂತು, ಅಷ್ಟು ದೂರದಿಂದ ಕಷ್ಟಪಟ್ಟು ಎತ್ಕೊಂಡು ಬಂದು, ಇಲ್ಲಿ ನೀನ್ ಅದನ್ನ ನಾಯಿಗೆ ಹಾಕ್ತಿಯ ಅಂತ ಬೈದೆ,,, ಅವನು ಮುಗುಳ್ನಕ್ಕು, ನಿನ್ನ ಪಾಲಿಂದಲ್ಲ, ನನ್ನ ಪಾಲಿಂದು ಹಾಕಿದ್ದು, ತಗೋ ತಿನ್ನು ಮಾರಾಯ ಅಂತ ನನ್ನ ಎಲೆಗೆ ಇನ್ನೊಂದು ಮೀನನ್ನು ಹಾಕಿದ, ಅಚ್ಚುವಿನಷ್ಟೇ ಖುಷಿ ನನಗೆ.
ತಿಂದು, ಕೈ ತೊಳೆದುಕೊಂಡು ಸುಮ್ಮನೆ ಬಂಡೆಯ ಮೇಲೆ ಕೈ ಊರಿ ಜಲಪಾತದ ಎತ್ತರಕ್ಕೆ ತಲೆ ಎತ್ತಿ ನೋಡುತ್ತಾ ಧ್ಯಾನಸ್ಥರಾಗಿಬಿಟ್ಟೆವು, ಇದ್ದಕ್ಕಿದ್ದಂತೆ ಅಚ್ಚು ಜೋರಾಗಿ ಬೊಗಳಲಾರಂಭಿಸಿದ, ನಮ್ಮ ಏಕಾಂತಕ್ಕೆ ಭಂಗ ತಂದುದಕ್ಕೆ ನಮಗಿಬ್ಬರಿಗೂ ಸಿಟ್ಟು ಬಂತು, ಏ ಅಚ್ಚು "ಇವಿಡೇ ವಾ"(ಬಾ ಇಲ್ಲಿ) ಎಂದು ಮಲಯಾಳಂನಲ್ಲಿ ಗೆಳೆಯ ಕರೆಯಲಾರಂಭಿಸಿದ, ಅಚ್ಚು ಮಾತ್ರ ನಮ್ಮ ಹಿಂದೆ ಏನನ್ನೋ ನೋಡಿದ ಹಾಗೆ ನೆಗೆದು ನೆಗೆದು ಬೊಗಳಲಾರಂಭಿಸಿದ. ಯಾಕೆ ಹೀಗೆ ಬೇಗಳ್ತಾನೆ ಎಂದು ಎದ್ದು ನಿಂತು ನೋಡಿದೆವು, ನಾವು ಕುಳಿತ ಜಾಗದಿಂದ ನಾಲ್ಕೈದು ಅಡಿ ದೂರದಲ್ಲಿ, ಸುಂದರ ಹಾವೊಂದು ನಮ್ಮನ್ನೇ ನೋಡುತ್ತಿತ್ತು, ಎದೆ ಝಲಕ್ ಎಂದಿತು,,,,, ನಾಯಿ ಅಷ್ಟು ಬೊಗಳುತ್ತಿದ್ದರೂ, ಅಷ್ಟು ಧೈರ್ಯದಿಂದ ನಿಂತ ಹಾವನ್ನು ಅದೇ ಮೊದಲು ನೋಡಿದ್ದು, ಅಬ್ಬಾ,,,,, ಬದುಕಿದೆಯಾ ಬಡ ಜೀವವೇ ಎನಿಸಿತು, ನಾವು ನಿಂತಲ್ಲಿಂದ ಕದಲಲಿಲ್ಲ,,,,,, ಅಚ್ಚುವಿನ ಗಲಾಟೆ ತಾಳಲಾರದೆ ಹಾವು ದೂರ ಹೋಯಿತು,,,,, ಸಮಾಧಾನ ಎನಿಸಿತು ನಮಗೆ, ಗೆಳೆಯನ ಎದೆಬಡಿತ ನನಗೆ ಕೇಳಿಸುತ್ತಿತ್ತು,,,,,, ನಾನು ಅಚ್ಚುವಿನ ಕಡೆ ನೋಡಿದೆ, ಏನು ಆಗೇ ಇಲ್ಲ ಎಂಬಂತೆ ಆರಾಮವಾಗಿ ಬಾಲ ಅಲ್ಲಾಡಿಸುತ್ತ ಕುಳಿತಿದ್ದ ಅಚ್ಚು. ಈ ಬಾರಿ ನಾನು ಅಚ್ಚುವನ್ನು ಅಪ್ಪಿ ಮುತ್ತಿಟ್ಟೆ. ಆ ದಿನ ಯಾಕೋ ಅಚ್ಚು ಇಲ್ಲದಿದ್ದರೆ ಏನಾಗಬಹುದಿತ್ತು ಎಂದು ನೆನೆಸಿಕೊಂಡರೆ ಭಯವಾಗುತ್ತದೆ,
ಅಡ್ಡಾಗಿ ಬಹಳ ಸಲ ನಾವು ಆ ಜಲಪಾತಕ್ಕೆ ಹೋಗಿದ್ದೇವೆ, ಆಗೆಲ್ಲ ಅಚ್ಚು ನಮಗೆ ಜೊತೆಯಾಗುತ್ತಿದ್ದ. ಅವನಿಗೆ ಎಂಟತ್ತು ಪ್ಯಾಕು ಬಿಸ್ಕೆಟಗಳನ್ನು ನಾನು ಕೊಂಡು ಹೋಗುತ್ತಿದ್ದೆ, ದೂಸರಾ ಮಾತನಾಡದೆ ಸದಾ ಹಸನ್ಮುಖಿಯಾಗಿ ನಡೆಯುತ್ತಿರುತ್ತಿದ್ದ, ಕಾಲು ಹಾದಿಯಲ್ಲಿ ನಡೆಯುವಾಗ ಕೆಲವೊಮ್ಮೆ ಹಾದಿ ಮುಚ್ಚಿದಂತಾಗಿ ಯಾವ ಕಡೆ ಹೋಗೋದಪ್ಪ ಅಂತ ಅನಿಸಿದಾಗಲೆಲ್ಲ, ಅಚ್ಚು ಮುಂದಾಳತ್ವ ವಹಿಸಿಕೊಂಡು, ಗಿಡ-ಗೆಂಟೆಗಳ ಒಳಗೆಲ್ಲ ನುಗ್ಗಿ ಸರಿಯಾದ ದಾರಿ ಕಂಡು ಹಿಡಿಯುತ್ತಿದ್ದ. ಕಾಲು ಹಾದಿಗೂ ಅವನಿಗೂ ಅದೇನೋ ಬಾಂದವ್ಯ ಇರುವಂತೆ ತೋರುತ್ತಿತ್ತು......
ನಿನ್ನೆ ಬೆಂಗಳೂರಿನ, ಕಪ್ಪು ರಸ್ತೆಯ ಟ್ರಾಫಿಕ್ಕಿನಲ್ಲಿ ಬೈಕು ಓಡಿಸುವಾಗ, ಮಳೆ ಬಂದು, ಫುಲ್ ಟ್ರಾಫಿಕ್ ಜಾಮ್ ಆಗಿ. ಮಳೆಯಲ್ಲೇ ನೆನೆಯುವಾಗ, ಪಕ್ಕದ ಪುಟ್-ಪಾತ್-ನಲ್ಲಿ ಜನವೇ ಇಲ್ಲದೆ, ಬಣಗುಡುತ್ತಿತ್ತು ,,,,,,,, ಆಗ ನನಗೆ ಕೇರಳದ ಕಾಲು ಹಾದಿ ಮತ್ತು ಅಚ್ಚುವಿನ ನೆನಪಾಯಿತು.
-GK Naveen Kumar