ಕೊನೆಯ ಪ್ರೇಮ ನಿವೇದನೆ

ಕೊನೆಯ ಪ್ರೇಮ ನಿವೇದನೆ

ಕವನ
ತನಗರಿವಾಗದಂತೆ ನಿರ್ಬಂಧನಗಳ ದಿಗ್ಬಂಧನದಿ ಮುಸುಕಿತ್ತು ಸಾವು. ಬದುಕಿನ ಗಲ್ಲಿಯ ಮಾಂಸದಂಗಡಿಯಲ್ಲಿ ಗಲ್ಲಿಗೇರಿತ್ತು ಉಸಿರು. ಕಿತ್ತೊಗೆದಿದ್ದರು ನೆನಪುಗಳ ರಕ್ತ, ರೆಕ್ಕೆ-ಪುಕ್ಕ. ಗರಿ ಗರಿ ಗುರಿಯಿತ್ತು, ಕಸಾಯಿಯವನ ಕತ್ತಿ ಚರಮಗೀತೆಯಾಡಿಯಾಗಿತ್ತು. ಅವನ ಕೈ ಮೇಲಿನ ಕಲೆಗಳು ನನ್ನ ಒಲುಮೆಯ ಅಂತ್ಯದ ಶಾಸನಗಳಾಗಿದ್ದವು. ನನ್ನ ಒಲುಮೆಯ ಮಾಂಸ ಮಾರಾಟಕ್ಕಿಟ್ಟಿದ್ದರು. ಅವಳೂ ಬಂದಿದ್ದಳು, ನನ್ನೆದೆಯ ಕೂದಲಿಂದ ಕಸೂತಿಗೊಂಡ ಬ್ಯಾಗಿನೊಂದಿಗೆ. ಕೈಯಲ್ಲಿ ನನ್ನ ಅತೃಪ್ತ ಕನಸ್ಸುಗಳ ಕಾಸಿಟ್ಟಿದ್ದಳು. ಕಸಾಯಿಯವ, ಅವಳ ಕಣ್ಣ ಕೊಳದಲ್ಲಿ ನೈದಿಲೆಗೆ ಮುತ್ತಿಕ್ಕುತ್ತಿದ ಹಂಸವನೇ ನೋಡುತ್ತಿದ್ದ. ತುಂಡಾಗಿದ್ದ ನನ್ನೊಲುಮೆಯ ಮಾಂಸ ಎಗರೆಗರಿ ಬೀಳುತ್ತಿತ್ತು. ಅವಳು ಬೆಚ್ಚಿ ಬೀಳಲಿಲ್ಲ, ಪ್ರೀತಿಯ ನನ್ನ ಮಾಂಸದ ಹೂಗಳನ್ನು ಮೆತ್ತಗೆ ಆರಿಸಿದ್ದಳು. ನೇರ ಮನೆಗೊಯ್ದು ಸುಡು ಸುಡು ನೀರಲ್ಲಿ ಎಸೆದೇ ಬಿಟ್ಟಳು. ತಿರಸ್ಕೃತನಾಗಿದ್ದ ನೋವಿಗಿಂತ, ಕಾದ ನೀರಲ್ಲಿ, ಅವಳ ನೆನಪಲ್ಲಿ ಕೊತ ಕೊತ ಕುದಿಯುವ ಸಿಹಿ ಯಾತನೆ, ನನ್ನ ಕೊನೆಯ ಪ್ರೇಮ ನಿವೇದನೆ.

Comments