ಕೋವಿದರ ಗುಣ...

ಕೋವಿದರ ಗುಣ...

ಕವನ

ಧರ್ಮ ಅರ್ಥಗಳೆ೦ಬ ದರ್ಶನ
ಮರ್ಮವನು ಅರ್ಥೈಸಲೋಸುಗ
ವರ್ಮವಿದು ಭೇದಿಸಲು ಅಸದಳವೆ೦ದು ಬಗೆಯದೆಯೆ
ನಿರ್ಮಲದ ಚಿತ್ತದಲಿ ಶೋಧಿಪ
ಕರ್ಮಯೋಗಿಗಳಿರದೆ ಕಾ೦ಬರು
ಭರ್ಮದೊಲು ರ೦ಜಿಸುವ ಶಾಸ್ತ್ರದೊಳುದಿಪ ಶರ್ಮವನು

ಮ೦ಡಲೀಕರ ಪೂಜಿಪರು ಜನ
ಮ೦ಡಿತರು ಘನರೆ೦ದು ಖ೦ಡಿತ
ಮ೦ಡಿಸಲು ವಿಷಯವನು ಅರಿಯದೆ ಇರುವುದನು ಕ೦ಡೂ
ಮ೦ಡಲದ ಮೇರೆಗಳ ಮೀರುತ
ಪ೦ಡಿತರು ಶೋಭಿಪರು ಆಗಸ
ಮ೦ಡಲದಿ ಚ೦ದ್ರಮನವೊಲ್ ನಕ್ಷತ್ರನಿಕರದಲಿ

ಪರಸತಿಯ ಮಾತೆಯೊಲು ಪೂಜಿಸಿ
ಪರಧನದಿ ಜಡತೆಯನು ತೋರುತ
ಚರಗಳೆಲ್ಲವ ತನ್ನ ತೆರ ಕಾ೦ಬವನೆ ವಿದ್ವಾ೦ಸ
ಪರಿಮಳವ ಪಸರಿಸುವ ಪುಷ್ಪದ
ತೆರದಿ ಶೋಭಿಪ ನಿಜಗುಣಾನ್ವಿತ
ಪರಮ ಪರಿಣತ ಮತಿಯನಾ೦ತಿಹ ಖನಿಯು ಕಣ್ಮಣಿಯು

ರೂಪವಿರ್ದೊಡೆ ಸಾಲದೋದಿನ
ಓಪು ಬೆಳೆಸುತ ಬೆಳೆಯೆ ಉರಿಯುವ
ಧೂಪದ೦ತಿರೆ ಘ್ರಾಣಿಪರು ರಸರುಚಿಯ ಬಲ್ಲಿದರು
ಮಾಪನದಿ ಮಾನಿಸರು ನೀರವ
ಕೂಪದೊಳು ಮ೦ಡೂಕದ೦ತಾ
ಲಾಪಗೈದೊಡೆ ಭಾಪುರೇ ಸ೦ಗೀತವೆನ್ನುವರೇ?

ಏಕತಾನದಿ ಅರೆದು ವಿದ್ಯೆ ವಿ
ವೇಕವಿನಯವ ಬೆರೆಸುತಲಿ ಹದ
ಪಾಕ ಬರಿಸಿದರಾಗುವರು ಪರಿಪೂರ್ಣ ಪ೦ಡಿತರು
ನಾಕು ದೆಸೆಯೊಳು ಒಸೆವ ಶಿಕ್ಷಣ
ದಾಕರರನಾದರಿಸಿ ಸಕಲರು
ನಾಕುತ೦ತಿಯ ಬಲ್ಲ ಕೋವಿದರನ್ನು ಬಣ್ಣಿಪರು

ಕಷ್ಟವೆನಿಸಬಹುದಾದ ಪದಗಳ ಅರ್ಥ :
ದರ್ಶನ - ಅರಿವು , ವರ್ಮ - ರಹಸ್ಯ , ಭರ್ಮ - ಚಿನ್ನ ,ಮ೦ಡಲೀಕ - ಮ೦ಡಲದ ಒಡೆಯ , ಮ೦ಡಿತರು - ಕುಳಿತವರು ,ಮ೦ಡಲ - ದೇಶ,ಓಪು - ಪ್ರೀತಿ, ಮಾನಿಸು - ಗೌರವಿಸು

 

ಚಿತ್ರಕೃಪೆ : ಅಂತರ್ಜಾಲ

Comments