19
June
2013

ಗಜಲ್

July 26, 2012 - 5:43pm
mmshaik

   ನನ್ನ ಕಣ್ಣ ಹನಿಗಳಿಗೆ ಶವದ ಮುಂದೆ ಅತ್ತ ನೆನಪಿಲ್ಲ.

  ಬದುಕುತ್ತಿರುವ ಬದುಕುಗಳ ನೆನೆದು ಅತ್ತ ನೆನಪಿದೆ.

 

  ಗಿಡದ ಟೊಂಗೆಗಳು ಬೇರಿನ ರುಣಕ್ಕಾಗಿ ಬಾಗಿದ್ದು ನಿಜ....

  ಮಣ್ಣಿಗೆ ಎಲ್ಲಾ ವಾಸನೆಯ ಪರಿಚಯದಿಂದ ಅತ್ತ ನೆನಪಿದೆ.

 

  ಇಂಗಿದವು ಅದಶ್ಟೋ ಹನಿಗಳು ಕೆನ್ನೆಗಳ ಮೇಲೆ...

   ದಳಗಳ ಮೇಲೆ ಬಿದ್ದ ಇಬ್ಬನಿಗಳ ನೆನೆದು ಅತ್ತ ನೆನಪಿದೆ.

 

   ಈ ಲೋಕ ನೀ ರಚಿಸಿದ ಸುಂದರ ಚಿತ್ರಕಾವ್ಯ...

   ಸೋತ ಬೆವರಲ್ಲಿ ಕಣ್ಣಹನಿ ಬೆರೆತಾಗ ಅತ್ತ ನೆನಪಿದೆ.

 

   ಊರು ಸುಂದರವಾಗಿಸಲು ಅನೇಕ ಕಟ್ಟಡಗಳಿವೆ...

   ಊರ ಹೊರಗಿನ ಗುಡಿಸಲುಗಳ ನೆನೆದು ಅತ್ತ ನೆನಪಿದೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Rajendra Kumar ... on
ಆತ್ಮೀಯ ರಾಬಿಯ, ನಿಮ್ಮ ಕವನಗಳಿಗಿಂತಲೂ ನಿಮ್ಮ ಗಜಲ್ ನಲ್ಲಿ ನಿಮ್ಮ ಭಾವನೆ ಅತಿ ಉತ್ತಮವಾಗಿ ಮೂಡಿಬರುತ್ತವೆ. ಇದು ನನ್ನ ಅಭಿಪ್ರಾಯವಷ್ಟೇ. ನಿಮ್ಮ ಎಲ್ಲ ಗಜಲ್ ನಂತೆ ಈ ಗಜಲ್ ಕೂಡ ಉತ್ತಮವಾಗಿದೆ. ಈ ಗಜಲ್ ನಲ್ಲಿ ನಾನು ಗಮನಿಸಿದ ಕೆಲವು ಅಂಶಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಮತ್ತು ನೀವು ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರೆಂದು ಆಶಿಸಿದ್ದೇನೆ. ನಿಮ್ಮ ಹಿಂದಿನ ಗಜಲ್ ಗಳನ್ನು ನಾನು ಓದಿರುವುದರಿಂದ ನಿಮಗೆ ಗಜಲ್ ಬರಹದ ಎಲ್ಲ ಪದ್ದತಿಗಳು ತಿಳಿದಿವೆ ಎಂದು ನನಗೆ ಗೊತ್ತಿದೆ. ಆದರೆ, ಈ ಗಜಲ್ ನಲ್ಲಿ ನೀವು ರಾದಿಫ್ ಮತ್ತು ಕಾಫಿಯಾದ ಬಗ್ಗೆ ಅದು ಏಕೋ ಗಮನ ಹರಿಸಿಲ್ಲ. ಅವುಗಳನ್ನು ಅಳವಡಿಸಿ ಈ ಗಜಲ್ ಅನ್ನು ಮತ್ತೊಮ್ಮೆ ಪ್ರಕಟಿಸಿದರೆ, ಕನ್ನಡದಲ್ಲಿ ಗಜಲ್ ಅನ್ನು ಬರೆಯಲು ಕಲಿಯುತ್ತಿರುವ ಹೊಸ ಕವಿಗಳಿಗೆ ಸಂಪೂರ್ಣ ಮತ್ತು ಸರಿಯಾದ ಗಜಲ್ ಬರೆಯುವ ಪದ್ಧತಿ ತಿಳಿಯುತ್ತದೆ. ನಿಮ್ಮ ಗಜಲ್ ನ "ಅತ್ತ ನೆನಪಿದೆ" ರಾದಿಫ್ ಆಗಿದೆ. ಈ ರಾದಿಫ್ "ಮತ್ಲ" ದಲ್ಲಿ ಮೊದಲನೇ ಸಾಲು ಮತ್ತು ಎರಡನೇ ಸಾಲು, ಎರಡರಲ್ಲಿಯೂ ಇರಬೇಕಿತ್ತು. ಆದರೆ ಅದು ಕಾಣುತ್ತಿಲ್ಲ. ಇನ್ನು, ನೆನೆದು, ಪರಿಚಯದಿಂದ, ಬೆರೆತಾಗ ಇವುಗಳಾವುವು ಒಂದೇ ರಿಥಂ ನಲ್ಲಿ ಇರದೇ ಇದ್ದುದರಿಂದ "ಕಾಫಿಯ" ಎನ್ನಿಸಿಕೊಳ್ಳುವುದಿಲ್ಲ. ನಾನು ನಿಮಗೆ ತಿಳಿಸಿ ಹೇಳಿದ್ದು ಸ್ವಲ್ಪ ಅತಿಯಾಯಿತೇನೋ. ಕ್ಷಮೆ ಇರಲಿ. ಆದರೆ ಸ್ವಲ್ಪ ಮಾಹಿತಿ ಇರುವ ನಮ್ಮ ನಿಮ್ಮಂತವರು ಸರಿಯಾದುದ್ದನ್ನು ಜನರಿಗೆ ತಿಳಿಸಿ ಹೇಳಿದರೆ ಮತ್ತು ಬರೆದು ತೋರಿಸಿದರೆ, ಎಲ್ಲರಿಗು ಸಹಾಯ ಮತ್ತು ಸಹಕಾರವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಧನ್ಯವಾದಗಳು.

Submitted by ಗಣೇಶ on
ರಾಜೇಂದ್ರ ಕುಮಾರ್ ಅವರೆ, ೩೦-೩೫ ವರ್ಷದಿಂದ ಗಜಲ್‌ಗಳನ್ನು ಕೇಳಿ ಆನಂದಿಸುತ್ತಿದ್ದರೂ, ಗಜಲ್‌ನ "ವ್ಯಾಕರಣ" ಗೊತ್ತಾಗಿದ್ದು ಇಂದೇ! ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ. http://smriti.com/urdu/ghazal.def.html ತಮಗೆ ತುಂಬಾ ಧನ್ಯವಾದಗಳು. mmshaik ಅವರೆ, ಕವನ ಚೆನ್ನಾಗಿದೆ. ರಾಜೇಂದ್ರರವರು ತಿಳಿಸಿದಂತೆ ಪ್ರಯತ್ನಿಸಿ, ಕನ್ನಡದ ಉತ್ತಮ ಗಜಲ್ ಕವಯಿತ್ರಿಯಾಗಿ. -ಗಣೇಶ.

Submitted by Rajendra Kumar ... on
ಆತ್ಮೀಯ ಗಣೇಶ ಅವರೆ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಗಜಲ್ ಬರವಣಿಗೆಯಲ್ಲಿ ಒಂದು ನಿಯಮ ಪಾಲಿಸಬೇಕಾಗಿರುವುದರಿಂದ ನಾವು ಸ್ವಲ್ಪ ಎಚ್ಚರಿಕೆ ಇಂದ ಇರಬೇಕಾಗುತ್ತದೆ. ಸ್ವಲ್ಪ ಏರು ಪೇರಾದರು ಅದು ಗಜಲ್ ಎನ್ನಿಸಿಕೊಳ್ಳುವುದಿಲ್ಲ. ಅದಕ್ಕಾಗಿ ಗಜಲ್ ಬರೆಯುವ ಹೊಸ ಕವಿಗಳಿಗೆ ಮಾಹಿತಿ ಇರಲಿ ಎಂದು ನನ್ನ ಅಭಿಪ್ರಾಯ ವ್ಯಕ್ತ ಪಡಿಸಬೇಕಾಯಿತು. ನೀವು ಕೊಟ್ಟಿರುವ ಲಿಂಕ್ ಅನ್ನು ಗಜಲ್ ಬರೆಯಲು ಇಷ್ಟವಿರುವ ಕವಿ ಗೆಳೆಯರು ಸದುಪಯೋಗ ಪಡಿಸಿಕೊಳ್ಳಬೇಕು. ರಾಬಿಯಾರ ಗಜಲ್ ಗಳು ಕನ್ನಡಕ್ಕೆ ಅತ್ಯುತ್ತಮ ಕೊಡುಗೆಯಾಗಲಿವೆ. ಅವರಿಂದ ಅತ್ಯುತಮ ಕನ್ನಡ ಗಜಲ್ ಗಳು ಹುಟ್ಟಿಬರಲಿವೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ ಮತ್ತು ಅವರಲ್ಲಿ ಆ ಶಕ್ತಿ ಕೂಡ ಇದೆ.

Submitted by mmshaik on
ಗಣೇಶ್ ಅವರೆ ನಮಸ್ಕಾರ. ಪ್ರತಿಕ್ರೀಯೆಗೂ ಹಾರ್ಯೆಕೆಗೂ ತುಂಬಾ ಧನ್ಯವಾದಗಳು.

Submitted by mmshaik on
ಆತ್ಮೀಯ ರಾಜೇಂದ್ರ ಅವರೆ ನಮಸ್ಕಾರ‌ ಮೊದಲು ತಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು.! ಗಜಲ್ ನಿಯಮಗಳ ಬಗೆಗೆ ವಿವರವಾದ‌ ವಿವರಣೆಯನ್ನು ನೀಡಿದ್ದೀರಿ.ನಿಜ ನೀವು ಹೇಳಿದ್ದು ಅಕ್ಸರಶ; ನಿಜ.ನಾನು ಆ ಗಜಲ್ ಅನ್ನು ನೇರವಾಗಿ ಸಂಪದದಲ್ಲಿಯೇ ಬರೆದೆ.ಕೆಂಡಸಂಪಿಗೆಯಲ್ಲಿ ನನಗೆ ಸಲಹೆ ನೀಡಿದ್ದು ನೀವ್ ತಾನೆ!!...ಖಂಡಿತ ಗಮನ ಕೊಡುವೆ.ತಾವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ತಮಗೆ ಆಭಾರಿ.

Submitted by spsshivaprasad on
ಗಝಲ್ ಬಗ್ಗೆ ನನಗಷ್ಟು ಅರಿವಿಲ್ಲ.. ಆದರೆ "ನನ್ನ ಕಣ್ಣ ಹನಿಗಳಿಗೆ ಶವದ ಮುಂದೆ ಅತ್ತ ನೆನಪಿಲ್ಲ. ಬದುಕುತ್ತಿರುವ ಬದುಕುಗಳ ನೆನೆದು ಅತ್ತ ನೆನಪಿದೆ." ಈ ಸಾಲು ಬಹಳ ಇಷ್ಟ ಆಯ್ತು.. ಈ ಭಾವಕ್ಕೊಂದು ನನ್ನ ಸಲಾಮ್ ಇರಲಿ..

Submitted by mmshaik on
ಶಿವಪ್ರಸಾದ್ ಅವರೆ ನಮಸ್ಕಾರ. ತುಂಬುಹ್ರುದಯದ ಆತ್ಮೀಯ ಪ್ರತಿಕ್ರೀಯೆಗೆ ತುಂಬಾ ತುಂಬಾ ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ರಾಬಿಯಾ, ನಿಜ, ಕೆಂಡಸಂಪಿಗೆಯಲ್ಲಿ ನಿಮ್ಮ ಗಜಲ್ ಗಳಿಗೆ ಪ್ರತಿಕ್ರಿಯಿಸಿದ್ದು ನಾನೇ. ನಿಮಗೆ ಸಲಹೆ ಕೊಡುವಷ್ಟು ದೊಡ್ದವ್ಯಕ್ತಿ ನಾನಲ್ಲ. ಏನೋ ಸ್ವಲ್ಪ ಓದಿ ತಿಳಿದಿದ್ದು ನಿಮ್ಮ ಜೊತೆಗೆ ಹಂಚಿಕೊಳ್ಳಲು ಧೈರ್ಯ ತೋರಿಸಿದೆನಷ್ಟೇ. ನಿಮ್ಮ ಮನದಂಗಳದಲ್ಲಿ ಗಜಲ್ ನ ಹೂವು ಹೀಗೆಯೇ ಅರಳುತ್ತಿರಲಿ. ರಮದಾನ್ ಕರೀಂ.

Submitted by mmshaik on
ಆತ್ಮೀಯ ರಮದಾನ್ ಕರೀಂ ಅವರೆ, ಹಾರ್ಯೆಕೆಗೆ ಧನ್ಯವಾದ.

Submitted by Gururaj Halmat on
ನಮಸ್ತೆ ಕವಯತ್ರಿ ತಮ್ಮ ಕವಿತೆ "ಅತ್ತ ನೆನಪನ್ನು ಸ್ಮರಿಸುತ್ತಿದೆ, ಈ ಪರಿಯ ಅಳುವನ್ನು ನಾನು ಕಲ್ಪಿಸಿಕೊಂಡಿರಲಿಲ್ಲ, ವಿನೂತನ ರಚನೆ. ಮುಂದುವರಿಸಿ, ಶುಭಮಸ್ತು" *****ಗುರುರಾಜ್ ಹಾಲ್ಮಠ್

Submitted by mmshaik on
ಗುರುರಾಜ್ ಅವರೆ ನಮಸ್ಕಾರ‌ ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ರಾಬಿಯಾ, ರಮದಾನ್ (ರಮ್ಜಾನ್ ) ಹಬ್ಬದ ಸಲುವಾಗಿ ನಾನು ನಿಮಗೆ "ರಮದಾನ್ ಕರೀಂ" ಎಂದು ಶುಭಾಶಯ ಕೋರಿದ್ದೆ. ಆದರೆ ನೀವು ನನ್ನ ಹೆಸರನ್ನೇ "ರಾಜೇಂದ್ರ ಕುಮಾರ್ ರಾಯಕೋಡಿ" ಇಂದ "ರಮದಾನ್ ಕರೀಂ" ಎಂದು ಬದಲಾಯಿಸಿ ಬಿಟ್ಟಿದ್ದಿರಿ....ಹ ಹ ಹ....!!!! :)

Submitted by mmshaik on
ಆತ್ಮೀಯ ರಾಜೇಂದ್ರ ಅವರೆ ನಮಸ್ಕಾರ. ತಮಗಿರುವ‌ ಭಾಷಾಜ್ನಾನದ ಮೆಚ್ಚಿಗೆಯಿಂದ ಈ ರೀತಿ ಕರೆದೆ.ತಮಗೂ,ಹಾಗೂ ಸಂಪದಿಗರಿಗೂ ಶುಭ ರಮದಾನ್.

Submitted by S.NAGARAJ on
ಎಮ್,ಎಮ್,ಷೇಕ್ ರವರೆ, ನಿಮ್ಮ ಘಜಲ್ ತುಂಬಾ ಅರ್ಥಪೂರ್ಣ. ನಿಮಗೆ ಶುಭವಾಗಲಿ.

Submitted by mmshaik on
ನಾಗರಾಜ್ ಅವರೆ ನಮಸ್ಕಾರ‌ ಧನ್ಯವಾದಗಳು.