ಚಪ್ಪೆ ಸಾರು (ಸಪ್ಪೆ ಅಥವಾ ಕಟ್ಟಿನ ಸಾರು)

ಚಪ್ಪೆ ಸಾರು (ಸಪ್ಪೆ ಅಥವಾ ಕಟ್ಟಿನ ಸಾರು)

ಬೇಕಿರುವ ಸಾಮಗ್ರಿ

ತೊಗರಿ ಬೇಳೆ - 2 ಕಪ್, ನಿಂಬೆ ಹಣ್ಣು – ½ ಕಡಿ, ಟೊಮ್ಯಾಟೋ – 1, ಹಸಿ ಮೆಣಸಿನಕಾಯಿ – ಖಾರಕ್ಕೆ ತಕ್ಕಂತೆ, ಅರಿಶಿನ – ¼ ಚಮಚ, ಎಣ್ಣೆ – 1 ಚಮಚ, ಬೆಲ್ಲ – ಸಣ್ಣ ನಿಂಬೆ ಗಾತ್ರ, ಗಟ್ಟಿ ಕಾಯಿ ಹಾಲು – 1 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – 3 ಎಸಳು................... ಒಗ್ಗರಣೆಗೆ : ತುಪ್ಪ ಅಥವಾ ಎಣ್ಣೆ – 2 ಚಮಚ, ಸಾಸಿವೆ – 1 ಚಮಚ, ಕರಿಬೇವಿನ ಸೊಪ್ಪು – 5 ಅಥವಾ 6 ಎಸಳು, ಒಣ ಮೆಣಸಿನ ಕಾಯಿ – 4 ಅಥವಾ 5 ತುಂಡುಗಳು, ಇಂಗು – 2 ಚಿಟಿಕೆ,

ತಯಾರಿಸುವ ವಿಧಾನ

ಟೊಮ್ಯಾಟೋವನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿಟ್ಟುಕೊಳ್ಳಿ. ಕುಕ್ಕರಿನಲ್ಲಿ ನೀರು ಹಾಕಿ ತೊಗರಿ ಬೇಳೆ, ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಲು ಇಡಿ. 3 ಅಥವಾ 4 ಕೂಗು ಬಂದೊಡನೆ ಕುಕ್ಕರನ್ನು ಇಳಿಸಿ. ಒಂದು ಅಗಲ ಬಾಯಿಯ ಪಾತ್ರೆಗೆ ನೀರು ಹಾಕಿ, ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿಯನ್ನು ಅದಕ್ಕೆ ಹಾಕಿ. ಬೆಲ್ಲ ಮತ್ತು ಉಪ್ಪು ಹಾಕಿ. ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು ಹಾಕಿ. ನಂತರ ಒಗ್ಗರಣೆಗೆ ಹೇಳಿದ ಪದಾರ್ಥಗಳನ್ನೆಲ್ಲ ಹಾಕಿ ಒಗ್ಗರಣೆ ಮಾಡಿ. ಈಗ ಈ ಮಿಶ್ರಣವನ್ನು ಕುದಿಯಲು ಇಡಿ. ಒಂದು ಕುದಿ ಬಂದನಂತರ 10 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಬೆಂದ ಬೇಳೆಯನ್ನು ಸ್ಮ್ಯಾಶ್ ಮಾಡಿ ಬೆರೆಸಿ. ಕಾಯಿ ಹಾಲನ್ನೂ ಬೆರೆಸಿ. ಅಳತೆಗೆ ತಕ್ಕಷ್ಟು ನೀರನ್ನು ಹಾಕಿ (ಸಾರು ಸ್ವಲ್ಪ ಗಟ್ಟಿ ಇರಬೇಕು). ಚೆನ್ನಾಗಿ ಕುದಿಸಿದ ಕೆಳಗಿಳಿಸಿ ನಂತರ ನಿಂಬೆ ರಸ ಹಿಂಡಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಬಿಸಿ ಬಿಸಿ ಅನ್ನದೊಂದಿಗೆ ಸಾರು, ತುಪ್ಪ ಹಾಕಿಕೊಂಡು ಬಾಳಕದ ಮೆಣಸಿನಕಾಯಿ ಅಥವಾ ಸಂಡಿಗೆ ನೆಂಜಿಕೊಂಡು ಊಟಮಾಡಲು ಸೊಗಸಾಗಿರುತ್ತದೆ. .....................................................................................................................................................................

ಕಾಯಿಹಾಲು ಮಾಡುವ ವಿಧಾನ:
ತೆಂಗಿನ ತುರಿಗೆ ಸ್ವಲ್ಪ ನೀರನ್ನು ಹಾಕಿ ಕಿವುಚಿ, ಹಿಂಡಿ ಸೋಸಿ ಹಾಲನ್ನು ತೆಗೆಯಿರಿ. ಉಳಿದ ಚರಟವನ್ನು ಪಲ್ಯಕ್ಕೆ ಉಪಯೋಗಿಸಬಹುದು.