26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಜೋಗಣಿ

August 10, 2012 - 4:06am
Rajendra Kumar ...


ಜೋಗಣಿ 

ನಾ ಊರ್ ಹೊರಗಿರಾಕಿ
ತಂದಿ ಅನ್ನಾವ್ ಇಲ್ಲ
ಹೆತ್ತಾಕಿ ಹೇಳಿದ್ದು, 'ನೀ ದೇವ್ರ ಮಗಳು ಬಾಳ' ಅಂತ.
ಹೊಟ್ಟ್ಯಾಗ್ ಉರಿಯೋ ಹಸಿವಿಗಿ, ಆಕಿ ಮಾಡಿದ್
'ಜನ್ರ್ ಸೇವಾ' ಇಲ್ಲಿ ಹೇಳ್ವ್ಹಂತಹದಲ್ಲ.
ಬ್ಯಾಡ ಅಂದ್ರು ಬೆಳದ್ ನಿಂದ್ರೋ ಈ ಬೇವರ್ಸಿ ಮೈಗಿ
ತುಂಡು ಲಂಗದ ಕೇಡು.
ಯಾರದ್ದೋ ತೊಟ್ಟ ಹರದ್ ಬಟ್ಯಾಗ್ ತೊಡಿ ಹುಡುಕೋ
ಮ್ಯಾಲ್ ಜಾತಿ ಮಂದಿಗಿ ಆಗ ಜಾತಿ ನೆನಪಾಗಂಗೆಯಿಲ್ಲ.
ಹುಟ್ಟಿದ್ ಹದಿನಾರಕ್ಕ ಹೆರೆ ಬಂತು ಅಂತ ಊರ ಅಂತು.
ಹೆಣ್ ದೇವ್ರ ಜ್ಯಾತ್ರ್ಯಗ್ "ದೆವ್ರಿಗ್ ಬಿಟ್ಟದ್ದು" ಆಯ್ತು.
ಅದೇದಿನ ರಾತ್ರಿ ಗೌಡ್ರ ಮಗ್ಗಲಿನ್ಯಾಗ್ ಹಾಸಗಿ ಸುಖ !
ಮರುದಿನ ತೊಟ್ಟಿಲು, ಇಟ್ಟ ಹೆಸರು 'ಜೋಗಣಿ' !.
ಊರಿನ ಬರಗಾಲಕ್ಕ, ಸೀರಿ ಉಟ್ಟವರ ಹೂಸ್ತ್ಲಾಗಿನ್ ಮಾತು,
ಮರ್ವಾದಸ್ತುರ್ ಅನ್ನೋರ್ ಮಾತಿಗ್ ಸೋತು,
ನಾ ಮಾಡಿದ್ ಬೆತ್ಲೆಸೆವಾ, ಯಾರೂ ನೋಡಿಲ್ಲ ಅನ್ನುವಂಗಿಲ್ಲ !,
ಇದಾದ್ ಮ್ಯಾಕ್ ನಾ ಇದ್ದದ್ದು ಮಿಂಚ್ ಹುಳುದ್ದಂಗ...,
ಹಗಲಿನ್ಯಾಗ್ ಯಾರಿಗೂ ಕಂಡದ್ದು ಇಲ್ಲ, ನೆನಪಾದ್ದದ್ದು ಇಲ್ಲ !.
ಹೆಣ್ತಿ ಬ್ಯಾಸತ್ತೋರಿಗಿ ನಾ ಚೆಲುವಿ.
'ಯಪ್ಪಾ ಹಸಿವೋ' ಅನ್ನೋ ಹೈಕ್ಳ ಬಾಯಾಗ್
ಕಸಾ ತುಂಬಿದ ಮಂದಿ ಕಿಸ್ಯಾ ಖಾಲಿ ಮಾಡ್ಕೊಂಡಿದ್ದು
ನನ್ ಮಗ್ಗಲ್ನ್ಯಾಗ್ ಬಿದ್ದು ಖಂದ್ಯೇಲಿ ಆರಿಸಿದ್ಮ್ಯಾಕ....
ಹಗಲೆಲ್ಲ ಛೀ...ಥೂ ... ಎಂದುಗುಳಿದ ಸುಸಂಸ್ಕೃತ ನಾಯಿಗಳು,
ರಾತ್ರಿ ಬಂದು ನನ್ ಮೈ ನೆಕ್ಕಿದ್ದು,
ಕತ್ಲಾಗಿನ್ ದೃಶ್ಯ ಕಾಣಂಗಿಲ್ಲ .....
ಖೌದ್ಯಾಗಿನ್ ಮಾತು ಕೆಲ್ಸಂಗಿಲ್ಲ.....

 

ರಾಜೇಂದ್ರಕುಮಾರ್ ರಾಯಕೋಡಿ - Copyright©

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Seema.v.Joshi on
ನಿಮ್ಮ ಪೂರ್ತಿ ಕವನ ಅಲ್ಲಲ್ಲ ಜೋಗಿಣಿಯ ದುರಂತ ಜೀವನದ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ. ಆದರೆ

Submitted by Rajendra Kumar ... on
ಆತ್ಮೀಯ ಸೀಮಾ ಜೋಶಿ ಅವರೆ, ಸತ್ಯವನ್ನು ಆದಷ್ಟು ಮುಂದಿಡಲು ಪ್ರಯತ್ನಿಸಿದೆ. ನಿಮ್ಮ ಪ್ರತಿಕ್ರಿಯೆ ತುಂಬಾ ಪ್ರೋತ್ಸಾಹದಾಯಕವಾಗಿದೆ. ಧನ್ಯವಾದಗಳು.

Submitted by mmshaik on
ಆತ್ಮೀಯ ರಾಜೇಂದ್ರ ಅವ್ರಿಗೆ ನಮಸ್ಕಾರ. ಕವಿತೆಯು ಪ್ರಸ್ತುತ ಸಮಾಜದ ದೇವದಾಸಿಯರ ಒಡಲಾಳವನ್ನುಸಮರ್ಥವಾಗಿ ಓದುಗರ ಮುಂದೆ ತೆರೆದಿಟ್ಟಿದೆ.ಆ ಜನರ ಆಡುಭಾಷೆಯನ್ನು ಬಳಸಿಕೊಂಡಿರುವುದು ಕವನಕ್ಕೆ ಕುಂದಣತೊಡಿಸಿದಂತಿದೆ.ಒಬ್ಬ ಸಮರ್ಥ ಕವಿ ಮಾತ್ರ ಈ ರೀತಿ ಪರಕಾಯ ಪ್ರವೇಶ ಮಾಡಬಲ್ಲ ಎನ್ನುವುದು ನನ್ನ ಅನಿಸಿಕೆ.ದೇವ್ರ ಮಗಳು ಎಂದು ಅಟ್ಟಕ್ಕೇರಿಸಿ ಹಿಂದುಳಿದ ,ದುರ್ಬಲ ವರ್ಗದವರನ್ನು,ಶೋಷಣೆ ಮಾಡುವ ಈ ರೀತಿ,ವಿಧಾನ ಶತ‍ಶತಮಾನಗಳಿಂದ ನಡೆದು ಬಂದಿದೆ.ಇದು ಅವರ ಅರಿವಿಗೆ ಬಾರದ ಹೊರತು ಯಾರೂ ಬದಲಾವಣೆ ತರಲು ಸಾಧ್ಯವಿಲ್ಲ ಎನ್ನುವುದೂ ಸತ್ಯ.ತಮ್ಮ ಕವನದ ಮೂಲಕ ಸಮಾಜಿಕ ಅನಿಷ್ಟಗಳನ್ನು ಹೊರತೆಗೆದು ಎಲ್ಲರ ಮನಮಿಡಿಯುವಂತೆ ಮಾಡುತ್ತಿರುವ ತಮ್ಮ ಸಾಮಾಜಿಕ ಕಾಳಜಿಗೆ ನನ್ನ ಒಂದು ಸಲಾಂ ಇರಲಿ.ಸಾಮಾಜಿಕ ಕಟು ವಾಸ್ತವವನ್ನು ಸೂಕ್ತ ವಕ್ರೋಕ್ತಿಗಳಿಂದ ನಮ್ಮೆಲ್ಲರ ಮುಂದೆ ಅಪರಾಧಿಯಂತೆ ಪ್ರಮಾಣಿಕವಾಗಿ,ಅಷ್ಟೇ ಸಮರ್ಥವಾಗಿ ನಿಲ್ಲಿಸುವ ಮೂಲಕ ಸಂಪದದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಿರಿ.ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ರಾಬಿಯ ಅವರೆ, ಪ್ರತಿ ಕವನ ಬರೆಯುವ ಮುನ್ನ ನೀವು ಹೇಳಿದಂತೆ ನಾನು ಪರಕಾಯ ಪ್ರವೇಶ ಮಾಡುತ್ತೇನೆ. ನಾನು ಅಂತಹ ಸ್ಥಿತಿಯಲ್ಲಿದ್ದರೆ ನನ್ನ ಅನುಭವ ಏನಾಗುತ್ತಿತ್ತು ಎಂದು ವಿಚಾರಿಸಿ ಆದಷ್ಟು ಅನುಭವಿಸಿ, ಆ ಸ್ಥಿತಿಯಲ್ಲಿರುವವರ ನೋವು ನಲಿವುಗಳನ್ನ ಗ್ರಹಿಸಿ ಜನರ ಮುಂದಿಡಲು ಪ್ರಯತ್ನಿಸುತ್ತೇನೆ. ಕೆಲ ಒಮ್ಮೆ ಆ ನೋವು ನಲಿವುಗಳು ನನ್ನವೇ ಆಗಿರುತ್ತವೆ. ನಾನು ಗುಲ್ಬರ್ಗ ಜಿಲ್ಲೆ ಆಳಂದ್ ತಾಲೂಕು ಚಿಂಚನಸೂರು ಗ್ರಾಮದವನು. ಈ ಊರಿನ ಗ್ರಾಮ ದೇವತೆ ಮಹಾಪೂರತಾಯಿ. ನನಗೆ ಎಲ್ಲ ತರಹದ ಕವನಗಳು ಬರೆಯಲು ಇಷ್ಟ. ಆದರೆ ಸಮಾಜಿಕ ಅನಿಷ್ಟಗಳ ಬಗ್ಗೆ ಬರೆದು ಅವನ್ನು ಹೊರದೂಡಲು ಸ್ವಲ್ಪ ಹೆಚ್ಚಿನ ಕಾಳಜಿ. ಇಂತಹ ಕಾರ್ಯದಲ್ಲಿ ನಮ್ಮ ನಿಮ್ಮಂತಹ ಕವಿ / ಕವಿಯತ್ರಿ ಮತ್ತು ಬರಹಗಾರರ ಜವಾಬ್ದಾರಿ ತುಂಬಾ ಇರುತ್ತದೆ. ನಿಮ್ಮ ಪ್ರೋತ್ಸಾಹ, ವಿಮರ್ಶೆ, ಸಲಹೆ ಮತ್ತು ಸ್ನೇಹಪೂರ್ಣ ಅಭಿನಂದನೆ ಮತ್ತು ಹಾರೈಕೆಗಳು ಇಲ್ಲದೆ ಇದುಯಾವುದು ನನ್ನಿಂದ ಸಾಧ್ಯವಾಗುವುದಿಲ್ಲ. ನಿಮ್ಮ ಪ್ರತಿಕ್ರಿಯೆಗಳು ಮತ್ತು ಪ್ರೋತ್ಸಾಹ ಹೀಗೆಯೇ ನಿರಂತರವಾಗಿರಲಿ. ಕೂಡಿ ದುಡಿದು, ಸ್ರಮಿಸಿ ನಮ್ಮಿಂದಾದಷ್ಟು ಸಮಾಜವನ್ನು ಸಕಾರಾತ್ಮಕವಾಗಿ ಬದಲಾಯಿಸೋಣ. ಧನ್ಯವಾದಗಳು.

Submitted by dayanandac on
ಕತ್ಲಾಗಿನ್ ದೃಶ್ಯ ಕಾಣಂಗಿಲ್ಲ ..... ಖೌದ್ಯಾಗಿನ್ ಮಾತು ಕೆಲ್ಸಂಗಿಲ್ಲ ಈ ಕೊನೆಯ ಎರೆಡು ಸಾಲುಗಳು, ನನಗೆ ಕುವೆಂಪು ರವರ "ಕನಸೊಡೆದೆದ್ದೆ ಇನ್ನೆಲ್ಲಿಯ ನಿದ್ದೆ" ಎನ್ನುವ ಸಾಲುಗಳನ್ನ ನೆನಪಿಸುತ್ತವೆ, ಈಡೀ ಕವನದ ಆಶಯವನ್ನ ಬಹಳ ಮಾರ್ಮಿಕವಾಗಿ ಆವರಿಸಿಕೊಳ್ಳುತ್ತಾ ಓದುಗನನ್ನ ಕಾಡುತ್ತವೆ. ನಿಮ್ಮ ಸಮಾಜಮುಖಿ ಕವನಗಳನ್ನ ಪ್ರೊತ್ಸಾಹಿಸಲೇ ಬೇಕಾದ ಅಗತ್ಯ ಹಾಗೊ ಜವಾಭ್ದಾರಿ ನನ್ನ ಕರ್ತವ್ಯವೆಂದೇ ಭಾವಿಸುತ್ತೇನೆ. ಇದು ಬ‌ರಿ ಜೋಗಿಣಿಯ‌ ಬ‌ದುಕ‌ಲ್ಲ‌, ಏಸ್ಟೊ ಹೆಣ್ಣುಗಳ ದಿನ ನಿತ್ಯದ ಬದುಕು, ಬಹು ಪಾಲು ಬಡವರ, ದೀನರ ಹಾಗೊ ಅತ್ಯಂತ ಮುಂದುವರೆದ ದೇಶಗಳಲ್ಲಿನ ಸಾಮಾನ್ಯ ಹೆಣ್ನುಗಳ ಬದುಕು ಇದಕ್ಕಿಂತ ಬಿನ್ನವಿಲ್ಲ ಹಾಗಾಗಿ ಈ ಕವನ ನಿನ್ನೆ ಹಾಗೊ ಇವತ್ತಿನ ವಾಸ್ಥವಗಳಿಗಿಗಿದ ಕೈಕನ್ನಡಿ.‌ ಜವಾಬ್ಧಾರಿಯುತ ಕವನಗಳನ್ನ ಬರೆಯಲೇಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ಈ ನಿಮ್ಮ ಕವನ ನಾನು ಇತ್ತೀಚೆಗೆ ಓದಿದ ಉತ್ತಮ ಕವಿತೆಗಳಲೊಂದು, ಇದನ್ನ ಪತಿಕೆಯಲ್ಲಿ ಪ್ರಕಟಿಸಿ, ಕನ್ನಡಿಗರಿಗೆ ನಿಮ್ಮನ್ನ ಮತ್ತು ಈ ಕವನವನ್ನ ತೆರೆದುಕೊಳ್ಳಿ.

Submitted by Rajendra Kumar ... on
ಆತ್ಮೀಯ ದಯಾನ೦ದ ಚ೦ದ್ರಪ್ಪ ಅವರೆ, ನಿಮ್ಮ ಪ್ರತಿಕ್ರಿಯೆ ನನಗೆ ಸ್ವಲ್ಪ ಭಾವುಕನಾಗಿಸಿತು ಮತ್ತು ಆನಂದ ನೀಡಿತು. ನಾನು ಪ್ರೆಮಕವಿತೆಗಳು ಬರೆಯಲು ಕುಳಿತಾಗಲೆಲ್ಲ, ಅದು ಏಕೋ ನನಗೆ ಈ ತರಹದ ಭಾವನೆಗಳೇ ಹೆಚ್ಚಿಗೆ ಕಾಡುತ್ತವೆ. ನನ್ನಿಂದಾದಷ್ಟು ಸಮಾಜಕ್ಕೆ ಸೇವೆಮಾಡಿ, ಉಳಿದದ್ದು ಇನ್ನು ಹೆಚ್ಚಿಗೆ ಮಾಡಲು ಸಾಧ್ಯವಾಗುವ ಜನರಿಗೆ ಒಂದು ಸಂದೇಶ, ಒಂದು ಎಚ್ಚರಿಕೆ, ಒಂದು ವಿನಂತಿಯ ರೂಪವನ್ನು ಕವನವಾಗಿಸಿ ಸಮಾಜದೆದುರು ಇಡುತ್ತೇನೆ. ನಾವು ಯಾರೋ ಒಬ್ಬ ನಾಯಕ ಬಂದು ಒಂದು ದಿನ ಬದಲಾವಣೆ ತರುತ್ತಾನೆ ಎಂದು ಕಾಯುವುದಕ್ಕಿಂತ, ನಮ್ಮೊಳಗಿನ ನಾಯಕನನ್ನು ಎಚ್ಚರಿಸಿದರೆ, ಆಗದ ಕೆಲಸಗಳೆಷ್ಟೋ ಆಗಿಬಿಡುತ್ತವೆ. ನಿಮ್ಮಂತಹ ಕವಿ / ಬರಹಗಾರ ಮಿತ್ರರ ಜೊತೆ ಸಿಕ್ಕರೆ ನಾವು ಹೀಗೆ ಬದಲಾವಣೆಯತ್ತ ಸಾಗಬಹುದು ಮತ್ತು ಇನ್ನೂ ನಾಲ್ಕು ಜನರಿಗೆ ಜೊತೆಯಲ್ಲಿ ಕರೆದೊಯ್ಯಬಹುದು. ನಿಮ್ಮ ಈ ಪ್ರತಿಕ್ರಿಯೆ ನನಗೆ ಒಂದು ಗೌರವ. ಧನ್ಯವಾದಗಳು.

Submitted by S.NAGARAJ on
ಶ್ರೀ ರಾಜೇಂದ್ರ ಕುಮಾರ್ ರವರೆ, ಸಮಾಜದ ಷೋಶಣೆ ವಿಚಾರವನ್ನು ಸುಂದರವಾಗಿ ಬಣ್ಣಿಸಿದ್ದಿರಿ. ಶುಭಾಶಯಗಳು.

Submitted by Rajendra Kumar ... on
ಆತ್ಮೀಯ ನಾಗರಾಜ್ ಸರ್, ತಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by venkatb83 on
ಇದಾದ್ ಮ್ಯಾಕ್ ನಾ ಇದ್ದದ್ದು ಮಿಂಚ್ ಹುಳುದ್ದಂಗ..., ============================== ರಾಜೇಂದ್ರ ಅವ್ರೆ ನಿಮ್ಮ ಬರಹದ ಬಗ್ಗೆ ಈಗಾಗಲೇ ಎಂ ಎಂ ಶೇಖ್ ಮತ್ತು ದಯಾನಂದ ಅವರು ಹೇಳಿರುವ ಪ್ರತಿಕ್ರಿಯೆಗಳಿಗೆ ನನ್ ಸಹಮತ ಇದೆ... +೧ +೧ ನನಗೀದಿನ ಬಹು ಖುಷಿ ಆಗುತ್ತಿದೆ. ಅದ್ಕೆ ಕಾರಣ- ನಾ ಆಗಾಗ ಕೊಂಡು ಓದುವ ಪತ್ರಿಕೆ-ಪುಸ್ತಕಗಳಲ್ಲಿ ಈಗೀಗ ಪುಸ್ತಕ ಓದುವ (ಸಾಹಿತ್ಯ) ಬರೆಯುವವರ ಸಂಖ್ಯೆ ಕಡಿಮೆ ಅಂತಲೋ ಇಲ್ಲವೇ ಅದ್ಕೆ ಪ್ರೋತ್ಸಾಹವೇ ಇಲ್ಲವೆಂತಲೋ, ಸಾಹಿತ್ಯ ಕೃಷಿ -ನಿಂತ ನೀರಾಗಿದೆ- ಇತ್ಯಾದಿ ಹೇಳಿಕೆಗಳನ್ನು ಕೆಲ ಮಹನೀಯರು ಕೊಟ್ಟಿದ್ದು ಓದಿದ್ದೆ, ಆಗ ನನಗೂ ಅನ್ನಿಸತೊಡಗಿತ್ತು - ನಿಜವಾಗಿಯೂ ಓದುಗರ ಸಂಖ್ಯೆ ಕಡಿಮೆ ಆಗಿದೆಯ? ಸಾಹಿತ್ಯ ಸೃಷ್ಟಿ ಆಗುತ್ತಿಲ್ಲವೇ? ಆದರೂ ಗುಣಮಟ್ಟದ ಕೊರತೆ ಇದೆಯೇ? ಅಂತ, ಆ ಬಗ್ಗೆ ಅಸ್ಟೆನೂ ಜ್ಞಾನ ಇರದಿದ್ದುದರಿಂದ -ಹಾಗಾಗದಿರಲಿ ಸಾಹಿತ್ಯ ಕೃಷಿ ಹೆಚಾಗ್ಲಿ. ಪ್ರೋತ್ಸಾಹಕರು ಸಾಕಷ್ಟು ಸಂಖ್ಯೆಯಲ್ಲಿ ಇರಲಿ ಎಂದು ಆಶಿಸುತ್ತಿದ್ದೆ. ಹಾಗೆಯೇ ಅಂತರ್ಜಾಲದಲ್ಲಿ ಸಂಪದ , ವಿಸ್ಮಯನಗರಿ, ಮತ್ತು ಇನ್ನಿತರ ಜಾಲತಾಣಗಳು ಸಾಹಿತ್ಯ ಕ್ರುಶಿಯನ್- ಯುವ ಉತ್ಸಾಹಿಗಳನ್ನ ಬರೆಯುವ ಹಾಗೆ ಮಾಡಿ ಕಾಲಾನುಕ್ರಮೇಣ ಹಲವು ಉತ್ತಮ ಬರಹಗಾರರು -ಬರಹಗಳು ನಮಗೀಗ ಕಾಣ(ಓದ) ಸಿಗುತ್ತಿವೆ.... ಸಂಪದದಲ್ಲಿ ಸಕ್ರಿಯನಾದ ಮೇಲೆ ನನಗೆ ಸಾಹಿತ್ಯ ಕೃಷಿ ನಿಂತ ನೀರಾಗಿಲ್ಲ, ಕೆಲವು ಸಲ ಗುಣಮಟ್ಟದ ಅಂಶ ಕಡಿಮೆ ಆದರೂ ಉತ್ಕೃಷ್ಟ ಬರಹಗಳು ಬರುತ್ತಿವೆ ಅನ್ನಿಸಿತು... ಅದಕ್ಕೆ ತಕ್ಕಂತೆ ಉತ್ತೇಜಕರು-ಪ್ರೋತ್ಸಾಹಕರು ಈ ಎಲ್ಲ ಜಾಲತಾಣಗಳಲಿ ಇರುವರು... ಈಗೀಗ ಸಂಪದದಲ್ಲಿ ಹಲವು ಉತ್ತಮ ಬರಹಗಳು ಪ್ರಕಟವಾಗುತ್ತಿದ್ದು , ಅವುಗಳನ್ನು ಓದೋದೇ ಮಜಾ, ಹಾಗೆಯೇ ಬರಹಕ್ಕೆ ಸದ್ಯಕ್ಕೆ ಕಾಮ(,) ಇಟ್ಟು ನಾ ಪ್ರತಿಕ್ರಿಯಿಸಲೇ ಶುರು ಹಚ್ಚಿಕೊಂಡಿರುವೆ.... ಈಗ ೪‍, ದಿನ ಊರಲ್ಲಿ ಇರಲಿಲ್ಲ, ಈಗ ಒಟ್ಟಿಗೆ ಹಲವು ಬರಹಗಳನ್ನು ಗುಡ್ಡೆ ಹಾಕಿಕೊಂಡು ಕೂರುವೆ, ಓದಲು /ಪ್ರತಿಕ್ರಿಯಿಸಲು... ಈಗ ಜೋಗತಿಯರ ಬಗೆಗಿನ ಬರಹ ಆವರ ಮನದಾಳದ ನೋವು -ನಲಿವು(ಅದೆಲ್ಲಿ)-ಗಳ ದರ್ಶನ ಮಾಡಿಸಿತು... ಇದಕೆ ಜೋಗಣಿ ಅಂತ ಶೀಷಿಕೆ ಕೊಟ್ಟಿದ್ದು ನನಗೆ ಅರ್ಥ ಆಗಲಿಲ್ಲ ಆದರೆ ನೀವ್ ಬರೆದುದು ಓದಿದ ಮೇಲೆ ಅದು ( ದೇವದಾಸಿ ಬಗ್ಗೆ ಅನ್ಸುತ್ತೆ)- ನಾ ನಮ್ ಹಳ್ಳಿಯಲ್ಲಿ ಚಿಕ್ಕವನಾಗಿದ್ದಾಗಿಂದ ಅವರನ್ನು ನೋಡಿದ್ದೇ, ಅವರ ಕಷ್ಟ ನಷ್ಟಗಳ ಅರಿವಿತ್ತು.. ಈಗೀಗ ಸಾಮಾಜಿಕ ಜಾಗೃತಿ ಕಾರಣ ಆ ಸಮಸ್ಯೆ ಇಲ್ಲ.. ಅವರ ಮ್ಕಳು ಗೌರವಯುತವಾಗಿ ಬಾಳುತ್ತಿರುವರು... ಸಾಮಾಜಿಕ ಕೆಡುಕಿನ ಅಂಶಗಳ ಬಗ್ಗೆ ನೀವು ಬೆಳಕು ಚೆಲ್ಲುವ ಬರಹ ಬರೆವಿರಿ.. ನಿಮ್ಮ ಬರಹಗಳು ಬರೀ ಸಂಪದ ಮಾತ್ರ ಅಲ್ಲದೆ ಇನ್ನಿತರ ಕನ್ನಡ ಜಾಲತಾಣಗಳಲ್ಲಿಯೂ( www.kendsampige.com www.vismayanagari.com www.vishvakannada.com) ಪ್ರಕಟ ಆಗಲಿ.ಹಾಗೆಯೇ ಪತ್ರಿಕೆ- ಪಾಕ್ಸ್ಚಿಕ -ವಾರ ಪತ್ರಿಕೆ-ಮಾಸ ಪತ್ರಿಕೆಗಳಿಗೆ ಸಹಾ ಕಳುಹಿಸಿ... ಶುಭವಾಗಲಿ... \|/

Submitted by Rajendra Kumar ... on
ಆತ್ಮೀಯ ಸಪ್ತಗಿರಿವಾಸಿ ಅವರೆ, ನಮಸ್ಕಾರ. ನಿಮ್ಮ ಗೈರು ಹಾಜರಿ ಸಂಪದದಲ್ಲಿ ಎದ್ದು ಕಾಣುತಿತ್ತು. ರೋಗಿಯೊಬ್ಬ ಆಪರೇಷನ್ ಥಿಯೇಟರ್ ನಲ್ಲಿ ಮುಖ್ಯ ಡಾಕ್ಟರಗಾಗಿ ಕಾಯುವಂತೆ, ಉಳಿದ ಎಲ್ಲರ ಪ್ರತಿಕ್ರಿಯೆ ಬಂದರೂ ನಿಮ್ಮ ಪ್ರತಿಕ್ರಿಯೆಗಾಗಿ ಉಳಿದ ಕವಿ/ ಕವಿಯತ್ರಿ ಮತ್ತು ಇತರ ಬರಹಗಾರರು ಕಾಯುತ್ತಿರುತ್ತಾರೆ. ಮರಳಿ ಬಂದು ಮತ್ತೆ ಪ್ರತಿಕ್ರಿಯಿಸುವ ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದಕ್ಕೆ ಕೃತಜ್ಞತೆಗಳು ಮತ್ತು ಧನ್ಯವಾದಗಳು. ಈ ಕವಿತೆ ನಾನು 15 ವರ್ಷಗಳ ಹಿಂದೆ ಬರೆದಿದ್ದೆ. ಗೆಳೆಯರ ಹೊರತು ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಸಂಪದದ ಓದುಗರ ಜೊತೆ ಹಂಚಿಕೊಳ್ಳಬೇಕೆನಿಸಿತು. ಅದಕೆ ಇಲ್ಲಿ ಪ್ರಕಟಿಸಿದೆ. ನಮ್ಮ ಹಳ್ಳಿಯಲ್ಲಿ ಇಂತಹ ಪದ್ಧತಿ ಇತ್ತು. ನೀವು ಹೇಳಿದ ಹಾಗೆ ಈಗ ಸಾಮಾಜಿಕ ಜಾಗೃತಿಯ ಕಾರಣ ನಿಂತಿದೆ. ಆದರೆ ಅಂದು ಬಲೆಗೆ ಬಿದ್ದ ಇನ್ನೂ ಕೆಲವು ಹೆಂಗಸರನ್ನು ನಾನು ಅಲ್ಲಿ ಕಾಣುತ್ತೇನೆ. ಒಬ್ಬ ಉತ್ತಮ ಬರಹಗಾರ ಉದ್ಭವಿಸಬೇಕಾದರೆ, ಅವನ ಬರಹಗಳಿಗೆ ಓದಿ ಪ್ರೋತ್ರಾಸಹದ ಜೊತೆಗೆ ನೇರವಾದರೂ ಅವನ ಬರಹವನ್ನು ವಿಮರ್ಶಿಸಲು ಒಬ್ಬರು ಬೇಕೇಬೇಕು. ಆ ಉತ್ತಮ ಕೆಲಸ ನೀವು ಮಾಡುತಿದ್ದಿರಿ. ನಿಮ್ಮ ಸಲಹೆ ಮನ್ನಿಸಿ ನಾನು ಇನ್ನೂ ಕೆಲವೆಡೆ ನನ್ನ ಬರಹವನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ಪ್ರತಿಕ್ರಿಯೆಗಳ ಜೊತೆಗೆ ನಿಮ್ಮ ಕವನ ಮತ್ತು ಇತರ ಬರಹವನ್ನು ನಾವು ಕೂಡ ನಿರಂತವಾಗಿ ಓದಲು ಇಷ್ಟ ಪಡುತ್ತೇವೆ. ಅದಕ್ಕಾಗಿ ದಯವಿಟ್ಟು ಬರೆಯಿರಿ. ಧನ್ಯವಾದಗಳು.