ಟಿಪಿಕಲ್ ಟೆಂಪಲ್

ಟಿಪಿಕಲ್ ಟೆಂಪಲ್

 

     ಅದೊಂದು ದಿನ ನನಗೆ ಇದ್ದಕಿದ್ದಂತೆ ದೇವಸ್ಥಾನಕ್ಕೆ ಹೋಗಬೇಕೆನಿಸಿತು. ಬರುವ ಭಾನುವಾರದಂದು ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಕ್ಕೆ ಹೋಗೋಣವೆಂದು ನಿರ್ಧರಿಸಿದೆ. ಆ ದಿನದಂದು ಮನಸ್ಸನ್ನು ಬೇರೆಲ್ಲಾ ಯೋಚನೆಗಳಿಂದ ಆದಷ್ಟೂ ಮುಕ್ತಗೊಳಿಸಿ ಎಷ್ಟು ಸಾಧ್ಯವೋ ಅಷ್ಟು ಪ್ರಶಾಂತಗೊಳಿಸಿ ದೇಗುಲದ ದಾರಿ ಹಿಡಿದೆ. 
     ಅದೇನೋ ಹೇಳುತ್ತಾರಲ್ಲಾ ' ಸಂಕಟ ಬಂದಾಗ ವೆಂಕಟರಮಣ ' ಅಂತ ಹೆಚ್ಚು ಕಡಿಮೆ ನಂದು ಅದೇ ರೀತಿ ಇತ್ತು ಪರಿಸ್ಥಿತಿ. ತಿಂಗಳ ಕೊನೆಯ ದಿನವಾಗಿತ್ತು ಆ ಭಾನುವಾರ. ತಿಂಗಳ ಮೊದಲನೆಯ ದಿನವಾಗಿದ್ದರೆ ಖಡಾಖಂಡಿತವಾಗಿಯೂ ದೇವಸ್ಥಾನವನ್ನ ನೆನಪಿಸಿಕೊಳ್ಳುತ್ತಲೂ ಇರಲಿಲ್ಲ. ಇದಕ್ಕೆ ಸಾಕ್ಷಿಗಳು  ಬೆಂಗಳೂರಿನ ಚಿತ್ರಮಂದಿರಗಳು, ಹೋಟೆಲುಗಳು ಹಾಗು ಆಟದ ಮೈದಾನವು. 'ಕೈಯಲ್ಲಿ ದುಡ್ಡಿಲ್ಲದಿದ್ದಾಗ ಇನ್ಯಾರು ತಾನೇ ನೆನಪಿಗೆ ಬಂದಾರು' ಆದುದರಿಂದ ತಿಂಗಳ ಕೊನೆಯಲ್ಲಿ ದೇವಸ್ಥಾನವೇ ಸುರಕ್ಷಿತ ಎಂದು ಸೆಲ್ ಫೋನ್ ಕೂಡ ಮುಟ್ಟದೆ ನಿರ್ಮಲವಾದ ಮನಸ್ಸಿನಿಂದ 'ದೇವರೇ ನೀನೇ  ಗತಿ ' ಎಂದು ನನ್ನ ಇಷ್ಟಾರ್ಥವನ್ನು ಬೇಡಿಕೊಳ್ಳಲು ದೇಗುಲದ ಮುಂದೆ ಬಂದು ನಿಂತಿದ್ದೆ. 
     ಅದು ವೆಂಕಟೇಶ್ವರನ ಒಂದು ಸುಂದರ ದೇವಾಲಯ. ಅದನ್ನು ಈಗಿನ ಕಾಲದಲ್ಲಿ ಕಟ್ಟಿದ್ದರೂ ಸಹ ಪ್ರಾಚೀನ ಕಾಲದ ವಿಶಿಷ್ಟ್ಯದಂತೆಯೇ ನಿರ್ಮಿಸಿದ್ದರು. ದೇವಸ್ಥಾನದ ಮುಖ್ಯದ್ವಾರದಲ್ಲಿ ಒಂದು ದೊಡ್ಡ ಗೋಪುರವು ಅದರ ಮೇಲೆ ಕಣ್ಣಿಗೆ ಮೀಟುವುವಂತಹ ಕಲಶವೂ ಇದ್ದಿತು.ಮುಖ್ಯದ್ವಾರದಲ್ಲಿ ದ್ವಾರಪಾಲಕರಾದ ಜಯ ಹಾಗು ವಿಜಯರ ದೊಡ್ಡ ಪ್ರತಿಮೆಗಳ ಸುಂದರ ವಿನ್ಯಾಸ ನೋಡುಗರ ಕಣ್ಣು ಕುಕ್ಕುತ್ತಿತ್ತು. ಪ್ರವೇಶ ದ್ವಾರದ ಒಳಗೆ ಹೋಗುತ್ತಲೇ ಎದುರಿಗೆ ಗರುಡಗಂಬ ಹಾಗು ಆ ಕಡೆ ಈ ಕಡೆ ಅಂಗಳದಲ್ಲಿ ಕೆಲವು ಚಿಕ್ಕ ಮಂದಿರಗಳಿದ್ದವು. ಅವುಗಳ ಮಧ್ಯದಲ್ಲಿದ್ದ ದೊಡ್ಡ ಮಂದಿರದಲ್ಲಿ ವೆಂಕಟೇಶ್ವರ ಹಾಗು ಲಕ್ಷ್ಮೀದೇವಿಯ ಸನ್ನಿಧಾನಗಳಿದ್ದವು. ದೇವಸ್ಥಾನದ ಸುತ್ತಳತೆಯುದ್ಧಕ್ಕೂ ಜಗಲಿಯನ್ನು ಕಟ್ಟಿದ್ದರು ಮತ್ತೆ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ದೊಡ್ಡ ಸಭಾಂಗಣವೂ ಇತ್ತು. ದೇವಸ್ಥಾನದ ಒಳಾಂಗಣವು ಶ್ರೀಕೃಷ್ಣನ ದ್ವಾರಕೆಯಷ್ಟು ಸುಂದರವಾಗಿತ್ತು. 
   ಪ್ರವೇಶದ್ವಾರದ ಕಾರ್ಯ ವೈಖರಿಯನ್ನು ನೋಡಿಕೊಂಡು ಅದರ ಒಳಗಡೆಯಿದ್ದ ಗರುಡಗಂಬದ ಹತ್ತಿರ ಹೋದೆ. ತುಂಬಾ ಅದ್ಭುತವಾಗಿ ವಿನ್ಯಾಸಗೊಳಿಸಿದ್ದನ್ನು ನೋಡಿ ಬಹಳ ಖುಷಿಯಾಯಿತು. ಅದರ ಕೆಳಗೆ ಏನೋ ಚೌಕಾಕಾರದ ಚಿಹ್ನಯಂತ' ಆಕೃತಿಯನ್ನು  ಕೆತ್ತಿದ್ದರು. ಅದೇ ತರಹದ ಆಕೃತಿಯನ್ನು ದೇವಸ್ಥಾನದ ಒಳಗಡೆ ಬೇರೆ ಬೇರೆ ಕಡೆಗಳಲ್ಲೂ ನೋಡಿದೆನು. ಮುಖ್ಯದ್ವಾರದಲ್ಲಿ ಆ ಆಕೃತಿ ಸ್ವಲ್ಪ ದೊಡ್ಡದಾಗಿತ್ತು. ಭಕ್ತಾದಿಗಳು ಅದರ ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಿದ್ದರು. ' ದೇವಸ್ಥಾನದ ಒಳಗಡೆ ಛಾಯಾಚಿತ್ರ ನಿಷಿದ್ಧ ' ಎಂಬ ಹಲಗೆ ಎಲ್ಲಿಯೂ ಇರಲಿಲ್ಲ.  ಹೊಸದಾಗಿ ಕಟ್ಟಿಸಿದ್ದರಿಂದ ನಂತರದಲ್ಲಿ ಅಭಿವೃದ್ಧಿ ಮಾಡುವರು ಎಂದುಕೊಂಡು. ಗರುಡಗಂಬದ ಆಕೃತಿಯನ್ನು ಅರ್ಥ್ಯಿಸಿಕೊಳ್ಲಲು ಪ್ರಯತ್ನಿಸುತ್ತಿದ್ದೆ.
    ಚೌಕಾಕಾರದ ಆಕೃತಿ ತುಂಬಾ ಭಿನ್ನವಾಗಿತ್ತು.  ಗಮನಿಸುತ್ತಿರಬೇಕಾದರೆ ಒಂದು ತರಹದ ಘಂಟಾನಾದವು ಕೇಳಿಸತೊಡಗಿತು . ಅದು ವಿಚಿತ್ರವಾಗಿದ್ದರು ಸ್ವಲ್ಪ ಸಮಯದ ನಂತರ ಮಾಯವಾಯಿತು. ದೇಗುಲದ ಅಕ್ಕ ಪಕ್ಕ ತುಂಬಾ ಶಬ್ದ ವಿದ್ದಿದ್ದರಿಂದ  ಅದರ ಬಗ್ಗೆ ಗಮನ ಕೊಡದೆ ಆಕೃತಿಯನ್ನು ದಿಟ್ಟಿಸಿ ನೋಡತೊಡಗಿದೆ. ನನ್ನ ಬುದ್ದಿಗೆ ತಿಳಿದ ಹಾಗೆ ಓಂ, ಸ್ವಸ್ತಿಕ,ತಿಲಕ , ತ್ರಿಶೂಲ  ಅಥವಾ ಯಂತ್ರ ಈ  ಯಾವ ಆಕೃತಿಯು ಅಲ್ಲಿ ಕಾಣಿಸಲಿಲ್ಲ.ಅದು ಸ್ವಲ್ಪ ಯಂತ್ರದ ಚಿಹ್ನೆಯನ್ನು ಹೋಲುವಂತಿತ್ತು. ಮೇಲಿನ ಚೌಕದ ಒಳಗೆ ಭಹಳ ಕ್ಲಿಷ್ಟಕರವಾದ ವಿನ್ಯಾಸವಿತ್ತು.ಅದನ್ನು ಎಷ್ಟು ಜಾಗರೂಕತೆಯಿಂದ ಕೆತ್ತಿದ್ದಾರೆ ಎಂದು ಯೋಚಿಸುತ್ತ ಮುನ್ನಡೆದೆ.
      ನಂತರದಲ್ಲಿ ವೆಂಕಟೇಶ್ವರನ ಮಂದಿರದ ಒಳ ಬಂದೆ. ಗರ್ಭಗುಡಿಯ ಒಳಗಿನಿಂದ ವೆಂಕಟೇಶ್ವರನ ಪ್ರತಿಮೆ ಎದ್ದು ಕಾಣುತ್ತಿತ್ತು.ಅ ವೈಭೂತಪೂರ್ಣ ಮೂರ್ತಿಯನ್ನು ಕಣ್ತುಂಬಿಸಿಕೊಂಡು ವೆಂಕಟೇಶ್ವರನ ಹತ್ತಿರ ಹೆಚ್ಚು ಕೆಲಸವಿಲ್ಲದ್ದರಿಂದ ಬರಿ ಕುಶಲೋಪರಿಗಳನ್ನು ಅರ್ಪಿಸುತ್ತಾ ಅಲ್ಲಿಂದ ಲಕ್ಷ್ಮೀ ದೇವಿಯ ಬಳಿಗೆ ತೆರಳಿದೆ. ನಾನು ತೆರಳಿದಂತೆ ಆವಾಗಲೇ ಕೇಳಿಸಿದ ಘಂಟಾನಾದ ಮತ್ತೆ ಕೇಳಿಸತೊಡಗಿತು. ಅಲ್ಲಿರುವವರು ಯಾರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಮೊದಲಿನಷ್ಟೇ ತಿಷ್ಣತೆಯಲ್ಲಿ ಕೇಳಿಸಿದ್ದರಿಂದ ನನಗೆ ಅನುಮಾನ ಬಂತು. ಗುಡಿಯ ಒಳಗಡೆ. ಅಷ್ಟು ಜೋರಾಗಿ ಹೇಗೆ ಕೇಳಿಸಲು ಸಧ್ಯ ? ಅಥವಾ ಇದು ಬೇರೆ ಅಗೋಚರ ಶಕ್ತಿಯ ಅನುಭವದ ಸುಳಿವೇ ?
     ಅದೇನೇ ಇರಲಿ ನನ್ನೆದುರು ಸಾಕ್ಷಾತ್ ಲಕ್ಷ್ಮೀ  ದೇವಿ ಇದ್ದಾಳೆ.  ನಾನು ಲಕ್ಷ್ಮೀ ದೇವಿಯನ್ನು ಅಚಲನಾಗಿ ಪ್ರಾರ್ಥಿಸುವುದು ಮುಗಿದಾಗ ಕಣ್ತೆರೆದೆ. ಎದುರುಗಡೆ ಪೂಜಾರಿಗಳು ಆರತಿ ತಟ್ಟೆಯನ್ನು ಹಿಡಿದು ನಿಂತಿದ್ದರು. ಆರತಿ ತೆಗೆದುಕೊಂಡು ತೀರ್ಥವನ್ನು ಕುಡಿದು ಕಾಟು ಎತ್ತಿದೆ. ಒಬ್ಬರು ಪೂಜಾರಿ ಹೊಸ ದೇವಸ್ಥಾನದ ಅಭಿವೃದ್ಧಿಗೋ ಅಥವಾ ಯಾವುದೊ ಕಾರ್ಯಕ್ರಮಕ್ಕೋ ಚಂದ ಕೇಳಲು ಟ್ಯಾಬ್ಲೆಟ್ ಫೋನ್ನಲ್ಲಿ ಪೊಅಸ್ಟರನ್ನು ಎಲ್ಲರ ಮುಂದೆ ಹಿಡಿಯುತ್ತಾ ಬರುತ್ತಿದ್ದದ್ದಂತೆ ಕಾಣಿಸಿತು. ' ಎಲ ಇವರ ಲಕ್ಷ್ಮೀ ದೇವಿಯ ಹತ್ತಿರ ನಾನು ದುಡ್ಡು ಕೇಳೋಣವೆಂದರೆ ಇವರು ನನ್ನ ಹತ್ತಿರವೇ ದುಡ್ಡು ಕಿಳೋ ಪ್ರಯತ್ನ ಮಾಡುವರು' ಎಂದೆನಿಸಿ ಅಲ್ಲಿಂದ ಕಾಲ್ಕಿತ್ತೆ.
     ಮನಸ್ಸು ಪ್ರಶಾಂತವಾಗಿತ್ತು. ದೇವರನ್ನು ಪ್ರಾರ್ಥಿಸಿದ  ನೆಮ್ಮದಿ ನನ್ನನ್ನು ಆವರಿಸಿತ್ತು. ಮುಖದಲ್ಲಿ ಏನನ್ನೋ ಗೆದ್ದ ಕಳೆ ಇತ್ತು ಎರಡು ಕೆಲಸಗಳಲ್ಲಿ ಒಂದನ್ನು ಮುಗಿಸಿದ್ದೆ . ಕಷ್ಟ ಪಟ್ಟು ದುಡಿದು ಕೂಡಿ ಹಾಕಿದ್ದ ದುಡ್ಡಿನಲ್ಲಿ ಸ್ವಲ್ಪದನ್ನು ಕಾಣಿಕೆಯಾಗಿ ಕೊಡೋಣವೆಂದರೆ ಇಡೀ ದೇವಸ್ಥಾನದಲ್ಲಿ ಎಲ್ಲಿಯೂ ಕಾಣಿಕೆ ಹುಂಡಿ ಇಲ್ಲದಿರುವುದು ನನ್ನ ಗಮನಕ್ಕೆ ಬಂತು.ದೇವಸ್ಥಾನವನ್ನೆಲ್ಲ ಸುತ್ತು ಹಾಕುತ್ತಾ ಸಭಾಂಗಣದ ಹತ್ತಿರ ಬಂದೆ.ಅಲ್ಲಿ ಒಂದು ನೃತ್ಯ ಕಾರ್ಯಕ್ರಮ ಏರ್ಪಾಡಾಗಿತ್ತು. ದಾಸರ  ಕೀರ್ತನೆಯಾದ ' ಆಡಿಸಿದಳೇಶೋದ ಜಗದೋದ್ಧಾರನ ' ಹಾಡಿಗೆ ಭರತನಾಟ್ಯದ ನೃತ್ಯ ಅದ್ಭುತವಾಗಿ ಜರುಗುತ್ತಿತ್ತು ಅದನ್ನೇ ನೋಡುತ್ತಾ ನಿಂತಿದ್ದ ನನಗೆ ಎಚ್ಚರವಾಗಿದ್ದು ಇನ್ನೊಂದು ಕೆಲಸ ಜ್ಞಾಪಕಕ್ಕೆ ಬಂದಾಗ.
      ಪ್ರಸಾದವನ್ನು ಹುಡುಕಿಕೊಂಡು ದೇವಸ್ಥಾನವನ್ನೆಲ್ಲಾ ಅಲೆದೆ. ಕಡೆಯಲ್ಲಿ ಒಂದು ಕಡೆ ಪ್ರಸಾದ ಎಂಬ ಹಲಗೆ ಕಾಣಿಸಿ ಸ್ವಲ್ಪ ನಿರಾಳವಾಯಿತು. ಕೆಳಗೆ ನೋಡಿದರೆ ಅಲ್ಲಿ ಜೋಯಿಸರೊಬ್ಬರು ಕೂತು ಮೊಬೈಲ್ ನಲ್ಲಿ ಏನನ್ನೋ ಓದುತ್ತಿದ್ದರು ಸುತ್ತ ಮುತ್ತ ಪ್ರಸಾದದ ಅಣಕು ಕೂಡ ಇರಲಿಲ್ಲ ಒಂದು ಚಿಕ್ಕ ಪೆಟ್ಟಿಗೆ ಮಾತ್ರ ಇತ್ತಲ್ಲಿ. ಮೂಕಪ್ರೇಕ್ಷಕನಂತೆ ಅವರನ್ನೇ ನೋಡುತ್ತಾ ನಿಂತಿದ್ದ ನನ್ನನ್ನು ನೋಡಿ ಅವರೇ ಹತ್ತಿರ ಕರೆದು ವಿಚಾರಿಸಿದರು.
 
"ಏನಾಯಿತು ಯಾಕೆ ಹಾಗೆ ನಿಂತಿದ್ದೀಯಾ?"
 
   ನಾನು ಎಲ್ಲವನ್ನೂ ಒದರಿದೆ " ಜೋಯಿಸರೇ ಪ್ರಸಾದ ಅಂತ ಹಲಗೆ ಕಾಣಿಸುತ್ತಿದೆ ಆದರೆ ಇಲ್ಲಿ ಪ್ರಸಾದ ಬಿಟ್ಟು ಬೇರೆಲ್ಲಾ ಇದೆ. ನೀವಷ್ಟೇಅಲ್ಲದೆ ಗರ್ಭಗುಡಿಯಲ್ಲೂ ಪೂಜಾರಿಗಳು ಚಂದ ವಸೂಲಿಗೆ ಮೊಬೈಲೆಯನ್ನು ಉಪಯೋಗಿಸುತ್ತಿದ್ದಾರೆ . ಭಕ್ತಾದಿಗಳು ಗರುಡಗಂಬದ ಚಿತ್ರ ತೆಗೆಯುತ್ತಿದ್ದಾರೆ ಛಾಯಾಗ್ರಹಣ ನಿಷಿದ್ಧ ಎಂಬ ಹಲಗಯು ಎಲ್ಲೂ ಕಾಣಿಸುತ್ತಿಲ್ಲ. ಅದಲ್ಲದೆ ಎಲ್ಲಿಯೂ ಒಂದೇ ಒಂದು ಕಾಣಿಕೆ ಹುಂಡಿ ಕಾಣಿಸುತ್ತಿಲ್ಲ. ವಿಚಿತ್ರವಾದ ಶಬ್ದಗಳು ಕೇಳಿಬರುತ್ತಿವೆ. ನನಗೇನೂ ಅರ್ಥವಾಗುತ್ತಿಲ್ಲ". ಎಂದು ಹೇಳಿ ಉತ್ತರಕ್ಕೆ ಕಾಯುತ್ತಿದ್ದೆ.
   
     ಅವರು ಜೋರಾಗಿ ನಕ್ಕು " ಇದು ನಿನ್ನ ಮೊದಲ ಭೇಟಿಯೇ ಈ ದೇವಸ್ಥಾನಕ್ಕೆ?" ಎಂದರು. "ಹೌದು" ಎಂದೆ.
   
     "ಹಾಗಾದರೆ ಕೇಳು, ಇತ್ತೀಚೆಗಂತೂ ಜನರು ದೇವಸ್ಥಾನಕ್ಕೆ ದೇವರ ದರ್ಶನವೊಂದೇ ಅಲ್ಲದೆ ೨೦೦೦ರೂಗೆ ಚಿಲ್ಲರೆಯೂ ಸಿಗುವುದೆಂದು ಬರುತ್ತಾರೆ. ಅದಕ್ಕೊಸ್ಕರ ಒಳಗಡೆ ಪೂಜಾರಿಗಳು ದಕ್ಷಣೆಗಾಗಿ ಪೆಟಿಎಂ ಅನ್ನು ಉಪಯೋಗಿಸುತ್ತಿದ್ದಾರೆ.ಆಮೇಲೆ ನೀನು ನೋಡಿದಂತೆ ಭಕ್ತಾದಿಗಳ ಅನುಕೂಲಕ್ಕಾಗೆಯೇ ಗರುಡಗಂಬದ ಮೇಲೆ ಪೆಟಿಎಂನ  ಕ್ಯೂ ಆರ್ ಕೋಡ್ ಅನ್ನು ಕೆತ್ತಿಸಿಬಿಟ್ಟಿದ್ದೇವೆ ಜನರು ಎಷ್ಟು ಬೇಕಾದರೂ ದುಡ್ಡನ್ನು ದೇವಸ್ಥಾನಕ್ಕೆ ಕಳುಹಿಸಬಹುದು. ಅದೇ ತರಹ ಅಲ್ಲಿ ಇಲ್ಲಿ ಕೆತ್ತಿಸಿದ್ದೇವೆ."
     ಇದನ್ನು ಕೇಳಿಸಿಕೊಂಡು ತಬ್ಬಿಬ್ಬಾದ ನಾನು "ಮತ್ತೆ ಪ್ರಸಾದ ?" ಎಂದು ಕೇಳಿದೆ. ಅವರು " ಓ ಅದ, ಪ್ರಸಾದಕ್ಕೆ ಬೇಕಾದ ಪದಾರ್ಥಗಳ ಬೆಲೆ ಜಾಸ್ತಿಯಾಗಿದ್ದು ಹಾಗು ಪ್ರಸಾದವನ್ನ ತಿಂದು ಇಲ್ಲೆಲ್ಲಾ ಗಲೀಜು ಮಾಡುವುದರಿಂದ ನೈವೇದ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು  ಮಾಡಿಸಿ ದೇವರಿಗೆ ನೈವೇದ್ಯ ಮಾಡಿ ಒಳ್ಳೊಳ್ಳೆ ಹೋಟೆಲುಗಳಿಗೆ ಕಳುಹಿಸಿ ಕೊಡುತ್ತೇವೆ ". " ಮತ್ತೆ ನಮಗೆ ?"ಎಂದಾಗ ಅವರು " ಭಗ್ತಾದಿಗಳಿಗೆ ಅನುಕೂಲವಾಗುವಂತೆ ಹೋಟೆಲಿನವರು ಪ್ರಸಾದದ ವೊಚೇರ್ಗಳನ್ನು ನಮಗೆ ಕೊಡುತ್ತಾರೆ ಅದನ್ನು ನಾವು ನಿಮಗೆ ಯಾವ ಪ್ರಸಾದ ಬೇಕೋ, ಅಂದರೆ ಪುಳಿಯೋಗರೆ, ಚಿತ್ರಾನ್ನ ಹಾಗೂ ಮೊಸರನ್ನ, ಹೇಗೆ ಹೋಟೆಲಿನ ರುಚಿಯಾದ ತಿನಿಸುಗಳಲ್ಲಿ  ನಿಮಗೆ ಯಾವುದು ಬೇಕೋ ಅದನ್ನು ಕೊಡುತ್ತೇವೆ. ವೊಚೆರ್ ನ  ಮೇಲೆ ಶೇ ೮೦ ರಷ್ಟು  ರಿಯಾಯಿತಿ ಇರುತ್ತದೆ" ಎಂದು ಹೇಳಿ ಪೆಟ್ಟಿಗೆಯಲ್ಲಿದ್ದ ಹಲವಾರು ವೊಚೇರ್ ಗಳನ್ನೂ ತೆಗೆದರು.
    ಅದನ್ನು ಕೇಳಿ ಇದೆಂತ ಟಿಪಿಕಲ್ ಟೆಂಪಲ್ಗೆ ಬಂದೆ ನಾನು ಎಂದು ಕೊಂಡೆ. ಬಂದಿದ್ದೇ ಪ್ರಸಾದಕ್ಕೋಸ್ಕರವಾದ್ದರಿಂದ  ಇದನ್ನೆಲ್ಲಾ  ಕೇಳಿ ಮೂರ್ಛೆ ಬಂದಿತಾದರೂ ಕಡೆಯದಾಗಿ ಅವರನ್ನು ಕುರಿತು  " ಮತ್ತೆ ಆ ಘಂಟಾನಾದ ?" ಏನೆಂಬುದು ಕೇಳಿದೆ." ಯಾವ ಘಂಟಾನಾದ ದೇವಸ್ಥಾನದ ಘಂಟೆಯ ಶಬ್ದ ಬಿಟ್ಟು ಇನ್ಯಾವುದೂ ನಮಗೆ ಕೇಳಿಸಲಿಲ್ಲವಲ್ಲಾ" ಎಂದರು. ಅಲ್ಲಿ ಭೋಜನಶಾಲೆಯೆಲ್ಲಿದೆ  ಎಂದು ಕೇಳಿದೆ ಅದಕ್ಕವರು " ಭೋಜನಶಾಲೆಯ ಕೆಲಸ ಇನ್ನು ಪೂರ್ತಿ ಮುಗಿದಿಲ್ಲ ದೇವಸ್ಥಾನದ ವೆಬ್ಸೈಟ್ ನ ದೆವೆಲೋಪ್ ಮಾಡುತಿದ್ದರೆ ತದನಂತರ ಭಗ್ತಾದಿಗಳು ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ಭೋಜನ ಶಾಲೆಯಲ್ಲಿ ನಿಮ್ಮ ಸಮಯ ಹಾಗು ಜಾಗವನ್ನು ಬುಕ್ ಮಾಡಿಕೊಂಡು ಬಾರೋ ತರಹದ ವ್ಯವಸ್ಥೆಯನ್ನು  ಪರೀಕ್ಷೆಸುತ್ತಿದ್ದರೆ ಅದನ್ನು ಜಾರಿಗೆ ತಂದು ಭೋಜನ ಶಾಲೆಯನ್ನು ಪ್ರಾರಂಭಿಸುವ  ಯೋಜನೆ ಮಾಡುತ್ತಿದ್ದಾರೆ. ಇದರಿಂದ ಭಕ್ತಾದಿಗಳು ಸುಮ್ಮನೆ ಘಂಟೆಗಟ್ಟಲೆ ಕ್ಯೂ ನಲ್ಲಿ ನಿಲ್ಲುವುದು ತಪ್ಪುತ್ತದೆ ಎಂದು ಅವರ ಅಭಿಪ್ರಾಯ "  ಎಂದು ಹೇಳಿದರು.
     ಇದನ್ನು ಕೇಳಿ ನನಗೆ ಅತೀವ್ರ ಕೋಪ ಬಂದಿತು ಈ ಕಡೆ ಪ್ರಸಾದವೂ ಇಲ್ಲ ಆ ಕಡೆ ಭೋಜನವೂ ಇಲ್ಲ ಇನ್ನೇನು ಅವರಿಗೀಗ  ಗ್ರಹಚರ ಬಿಡಿಸೋಣವೆಂದು ಜೋರಾಗಿ ಬಾಯಿತೆರೆಯೋವಷ್ಟರಲ್ಲಿ ಮತ್ತೆ ಆ ಘಂಟಾನಾದವು ಕೇಳಿಸಿತು. ಅದೇ ಸಮಯದಲ್ಲಿ ಯಾರೋ ಹಿಂದಿನಿಂದ ಗುದ್ದಿದಂತೆ ಅನ್ನಿಸಿತು ಯಾರು ಎಂದು ತಿರುಗಿದರೆ ನಮ್ಮಮ್ಮ. ನನ್ನನ್ನು ನೋಡುತ್ತಾ " ಏ ಮೂರೂ ಬಾರಿ ಅಲಾರಾಂ ಹೊಡೆದು ಕೊಂಡರು ಕನಸು ಕಾಣುತ್ತಾ ಇನ್ನೂ ಮಲಗಿದ್ದೀಯಲ್ಲ, ಎದ್ದು  ಮೊದಲು ಕಚೇರಿಗೆ ಹೊರಡು " ಎಂದು ಹೇಳಿ ಒಳಗೆ ಹೋದರು.  ನನಗೆ ಏನಾಯಿತೆಂದು ಅರಿವಿಗೆ ಬರುವ ತನಕ ದಿಬ್ರಮೆಗೊಂಡವನಂತೆ ಹಾಸಿಗೆಯ ಮೇಲೆ ಕೂತಿದ್ದೆ.  ಕನಸಿನಲ್ಲೇ ಲಕ್ಷ್ಮಿ ವೆಂಕಟೇಶ್ವೆರ ದರುಶನ ಸಿಕ್ಕಿದ್ದರಿಂದ  ಖುಷಿಯಾಗಿ ನನ್ನ ದಿನಚರಿ ಪ್ರಾರಂಭಿಸಿದೆ.
 
 
ಎಲ್ಲರಿಗು ಕ್ರಿಸ್ಮಸ್ ಹಾಗು ಹೊಸ ವರುಷದ ಹಾರ್ದಿಕ ಶುಭಾಶಯಗಳು.
   
                                                                                                                     - ಭರತ್