ತತ್ತ್ವ ಶೋಡಷ

ತತ್ತ್ವ ಶೋಡಷ

ಕವನ

ಗಣಾಧೀಶ ನೀ ಈಶ ಸರ್ವ ಸದ್ಗುಗುಣಗಳಿಗೆ

ಮೂಲಾರಂಭ ಆರಂಭ ನಿಜದಿ ನಿರ್ಗುಣಕೆ |

ನಮಿಸುವೆನು ಶಾರದೆಗೆ ಶಬ್ದಬ್ರಹ್ಮನ ಸತಿಗೆ

ಕೊಡು ಮತಿಯ ರಚಿಸುವುದಕೆ ತತ್ತ್ವ ಷೋಡಶಕೆ ||೧||

 

ತಿದ್ದಿ ತೀಡುತಲೆನ್ನ ನಡೆನುಡಿಗಳನು ಸಿಂಗರಿಸಿ

ನನ್ನ ಸೋಲಿಗೆ ಕಣ್ಣ ಕಂಬನಿಯ ಸುರಿಸಿ

ನನ್ನ ಗೆಲುವಿಗೆ ಮಿಂಚ ಕಣ್ಣಲ್ಲಿ ಹರಸುತ್ತ

ಈ ಇಳೆಗೆ ತಂದವಳ ಮೊದಲು ನಮಿಪೆ ||೨||

 

ಅನ್ನ ವಸನವನಿತ್ತು ಪೊರೆದವಗೆ ನಾ ನಮಿಪೆ

ಶಿಲ್ಪಿಯಂದದಿ ಕಟೆದು ರೂಪವಿತ್ತವಗೆ |

ಅವನಾತ್ಮಪ್ರತಿರೂಪ ನಾನೆಂದು ಮನಗಂಡು

ಪಿತೃರೂಪದಲಿ ಎನ್ನ ಸತತ ಕಾಯ್ದವಗೆ ||೩||

 

ಅಕ್ಕರಕೆ, ಅರಿವಿಂಗೆ ಗುರುವೊಬ್ಬನಿರಬೇಕು

ನಮಿಪೆ ಗುರಿ ತೋರ್ದವಗೆ ಗುರುವಾದವಂಗೆ |

ನದಿ ದಾಟ ಬಯಸುವವ ಈಸ ಕಲಿಯಲು ಬೇಕು

ಬಾಳ ಪಯಣಕೆ ಬೇಕು ಅನುಭವದ ಬುತ್ತಿ ||೪||

 

ನಾನು ಯಾರೆಲ್ಲಿಂದ ಇಲ್ಲಿಗೇತಕೆ ಬಂದೆ

ಬಂದ ಕಾರ್ಯವದೇನು ನಾನೊಂದನರಿಯೆ |

ಈ ಜಗದ ನಾಟಕದಿ ನಾನೊಬ್ಬ ನಟನಷ್ಟೆ

ನನ್ನ ಕೃತಿ ಮಾತೆಲ್ಲ ಅವನ ನಿರ್ದೇಶನವು ||೫||

 

ಜಗವೊಂದು ಚದುರಂಗ ನಾವದರ ದಾಳಗಳು

ಕೈಯ್ಯೊಂದು ಆಡಿಪುದು ಅದರಿಚ್ಛೆಯಂತೆ |

ಆಟ ಗೆಲ್ಲುವುದಕ್ಕೆ ಅಂಕುಡೊಂಕಿನ ದಾರಿ

ಗೆಲುವು ಸೋಲುಗಳೆಲ್ಲ ಅವನಿಚ್ಛೆ ಕಾಣೊ ||೬|||

 

ಬೆಳಕೀವ ಆ ಭಾನು ತಂಪೆರೆವ ಚಂದಿರನ

ಪ್ರಾಣವಾಯುವ ನೀಡಿ ಕಾಯ್ವ ಮಾರುತನ

ಬಳಲಿ ಬಾಯಾರಿದಗೆ ಅಮೃತವಾಗಿಹ ಜಲದ

ಪೊತ್ತುಕಾಯ್ದಿಳೆಯ ಋಣ ಸತತವಿದೆ ನಮಗೆ ||೭||

 

ನಡೆದ ದಾರಿಯ ಹಿಂದೆ ನೀ ತಿರುಗಿ ನೋಡು

ಬರುವರೇ ಸತಿಸುತರು ಬಂಧುವರ್ಗಗಳು |

ನೀ ಗೈದ ಕರ್ಮಗಳು ನಿನ್ನ ಬೆನ್ನ ಹಿಂದಿಹವು

ಬೇವ ಬಿತ್ತಿದರೆ ಮಾವು ಸಿಗದು ನಿನಗೆಂದು ||೮||

 

ನಾನು ಸುಖಿಯೆಂಬುವನು ಯಾರಿಹನು ಲೋಕದೊಳು

ಕರ್ಮಸಂಚಯದಂತೆ ಫಲಪ್ರಾಪ್ತಿಯಿಹುದು |

ಸತಿಸುತರು ವೈಭವವು ಮಾನ ಸಮ್ಮಾನಗಳು

ಕ್ಷಣಿಕ ಕಾಲನ ಕ್ರೀಡೆ ನೀ ತಿಳಿಯೊ ನಿಜದಿ ||೯||

 

ಸುವರ್ಣಮೃಗವಿರದೆಂದು ಅರಿವಿಲ್ಲವೆ ನೃಪಗೆ

ಬೆಂಬತ್ತಿದನು ರಾಮ ಸತಿಯಿಚ್ಛೆಯಂತೆ |

ದಾಟಿ ಲಕ್ಷ್ಮಣರೇಖೆ ಬಂದಿಯಾದಳು ಸೀತೆ

ಆತುರತೆ ಸಲ್ಲದೈ ಕಾರ್ಯಸಾಧನೆಗೆ ||೧೦||

 

ಹುಟ್ಟು ಸಾವಿನ ಚಕ್ರ ಜನನಿಯುದರದಿ ವಾಸ

ಮತ್ತೆ ಶೈಶವ ಬಾಲ್ಯ ಯೌವ್ವನವು ವೃದ್ಧಾಪ್ಯ |

ಬಾಲತನದೊಳು ಕ್ರೀಡೆ ವ್ಯಾಮೋಹ ಯೌವ್ವನದಿ

ಏಕಾಂಗಿ ಮುದಿತನಕೆ ಚಿಂತೆ ಸಂಗಾತಿ ||೧೧||

 

ಸುಖವೆಂಬುದಕೆ ಅರ್ಥ ತಿಳಿಸಿದವರಾರುಂಟು

ತರುಣಿಯಪ್ಪುಗೆಯೊ ಧನ ಕನಕ ಸಿರಿಯೊ |

ಮಾನಸಮ್ಮಾನಗಳೊ ಅಧಿಕಾರ ಪದವಿಗಳೊ

ಅನುಭವಿಸಿದವರುಸುವರು ತಿಳಿದಿಲ್ಲವೆಂದು ||೧೨||

 

ಮೊಗ್ಗರಳಿ ಹೂವಾಗಿ ಹೀಚು ಕಾಯಾಗಿ

ಫಲಿತವಾಗುವುದಕ್ಕೆ ಸಮಯ ನಿರ್ಬಂಧವಿದೆ |

ಅನುಭವವು ಯೋಜನೆಯು ಕಾರ್ಯತತ್ಪರತೆ

ನಿರತ ಪರಿಶ್ರಮವೊಂದೆ ಸಿದ್ಧಿಸಾಧನೆಗೆ ||೧೩||

 

ಮನವೆಂಬ ಮಂದಿರದಿ ದುಷ್ಟ ಯೋಚನೆ ಬೇಡ

ಬೇಡ ಅರಿಷಡ್ವರ್ಗಗಳು ಪಾಪಕರ್ಮಗಳು |

ಸದಾ ನೀತಿ ಮಾರ್ಗದೊಳು ಸಾಗು ನೀ ಮುಂದೆ

ರಾಮ ಕಾಯ್ವನು ನಿನ್ನ ಸದಾ ಬೆನ್ನ ಹಿಂದೆ ||೧೪||

 

ನೆಲೆಸಿರಲಿ ಮನ ಭಕ್ತಿಪಂಥದೊಳು ಅನವರತ

ಶ್ರೀಹರಿಯ ಒಲುಮೆಗಿದು ಸಾಧನವು ಸತತ |

ಜನನಿಂದ್ಯ ಕರ್ಮವದ ಬಿಡು ನೀನು ಅನವರತ

ಜನವಂದ್ಯ ಕರ್ಮದೊಳು ಆಗು ನೀ ನಿರತ ||೧೫||

 

ಬೆಳಗಿನೊಳು ನೀ ನೆನೆಯೊ ಶ್ರೀರಾಮನಾಮ

ಮಧುರ ವಚನದ ವೈಖರಿಯೊಳು ದಿವ್ಯನಾಮ |

ಸದಾಚಾರ ಸುವಿಚಾರ ಬಿಡಬೇಡ ಎಂದೂ

ರಾಮ ಕಾಯ್ವನು ನಿನ್ನ ಪ್ರೇಮದಲಿ ಎಂದೂ ||೧೬||

 

 

 

 

 

 

 

 

 

 

 

 

 

 

 

 

 

 

 

 

 

 

 

 

ಚಿತ್ರ್