ತೊರೆದ ಮೇಲೆ

ತೊರೆದ ಮೇಲೆ

ಕವನ

ನಾನು ಹೇಳುತ್ತಿರುತ್ತಿದ್ದೆ

’ಎರಡೇ ರೊಟ್ಟಿ ಸಾಕು’

ಆದರೆ ನೀನು ಹೊಟ್ಟೆ ಬಿರಿಯೆ

ತಿನ್ನಿಸಿರುತ್ತಿದ್ದೆ ನಾಲ್ಕು

 

ಬಸವಳಿದು ಬಂದ ದಿನಗಳಲ್ಲಿ

ನಿನ್ನ ಮೊದಲ ಮಾತು

’ಬಾ ಉಳಿದೆಲ್ಲ ಬದಿಗಿಡು

ಈಗಲೇ ಬಿಸಿರೊಟ್ಟಿ ತಿಂದುಬಿಡು’

 

ನೀನು ’ನನಗಿಂದು ಹಣ್ಣು ಸೇರುತ್ತಿಲ್ಲ’

ಅನ್ನುವುದಕ್ಕೆ ಕಾರಣವಿರುತ್ತಿತ್ತು

ಒಂದೇ ಸೇಬು ಉಳಿದಾಗೆಲೆಲ್ಲ

ನನಗದು ತಿನ್ನಿಸುವ ಉಪಾಯವಾಗಿತ್ತು !

 

ತಡರಾತ್ರಿಯ ನನ್ನ ಓದಿನ ದಿನಗಳು

ನೀನು ನಿದ್ರೆಗೆಟ್ಟು ತರುತ್ತಿದ್ದುದು

ಚಾ.. ಕಾಫ಼ಿ ಮತ್ತು ತಟ್ಟೆ ತುಂಬಾ

ಘಮಘಮಿಸುವ ಸ್ವಾದಿಷ್ಟ ತಿನಿಸು

 

ಗೆಳೆಯರೊಂದಿಗೆ ಪ್ರವಾಸಬಿದ್ದಾಗ

ತುಂಬಿದ ಬುತ್ತಿ ಕೊಟ್ಟು ನುಡಿಯುತ್ತಿದ್ದೆ

’ ಸ್ನೇಹಿತರಿಗಷ್ಟೇ ಹಂಚಿಬಿಡಬೇಡ..

ನೀನೂ ತಿನ್ನುವುದ ಮರೆಯಬೇಡ!’

 

ನಾನು ಹೊರ ಪ್ರಪಂಚದಲ್ಲಿ

ಮುಳುಗಿ ಹೋಗಿರುವ ಸಮಯ

ಮೊಬೈಲು ಗಂಟೆಗೊಮ್ಮೆ ರಿಂಗುಣಿಸಿ

ಕಳಕಳಿಸುತ್ತಿತ್ತು ’ಎಲ್ಲಿದ್ದೀಯ? ’

 

ಕೋಣೆಗೆ ಧಾವಿಸಿ ಅಸ್ತವ್ಯಸ್ತ ಬಿದ್ದು

ನಿದ್ರೆಯಲ್ಲಿಮುಳುಗಿ ಎದ್ದ ಎಲ್ಲ ದಿನ

ಬೇಸರವಿಲ್ಲದೆ ನೀನು ಹೊದ್ದಿಸಿದ

ಚಾದರದ ಬೆಚ್ಚನೆಯ ನೆನಪು

 

ನೀನು ದೇವಸ್ಥಾನಗಳಿಗೆ ಎಡತಾಕಿ

ಮೊರೆಯಿಟ್ಟು ಬಡಿಯುವುದು ಕೆನ್ನೆ

ನಿನಗಾಗಿಯಂತು ಅಲ್ಲ ಆದರದು

ಯಾರ ಗೆಲುವು ಗರಿಮೆಗೆನ್ನುವುದ ಬಲ್ಲೆ

 

ನಿನ್ನ ಬಾಧಿಸಲೆ ಇಲ್ಲ ನನ್ನ ಹೇವರಿಕೆ

ಅಸಡ್ಡೆ ಕಿರಿಕಿರಿ ಗೊಣಗುಗಳು

ನಾನೆಂದಿಗೂ ಮಡಿಲ ಮಗುವಾಗಿ

ಉಳಿದದ್ದು ಅಚ್ಚರಿಯ ಮೇರು

 

ನಿನ್ನ ಕಣ್ಣಂಚಿನ ನೀರ ಹನಿ

ತುಳುಕಿ ಬಿಸಿ ಆರುವ ಮುನ್ನ

ಹೊರಟು ಹೋಗಿದ್ದೇನೆ

ಯಾವುದೊ ಅನಾಥ ದಾರಿಗುಂಟ

 

ನಿನಗೆ ಪರ್ಯಾಯವಿದೆಯೆ

ಹುಡುಕ ಹೊರಟಿದ್ದೇನೆ

ನಿನ್ನ ಹೃದಯ ಸರಿತೂಗಬಲ್ಲವರ

ನೀ ಕೊಟ್ಟ ತುತ್ತು ತುಂಬಬಲ್ಲವರ

 

ಎದೆ ಒಡೆಯುವಂತೆ ಕೂಗಿ ಹೇಳಲೆ

ಅಮ್ಮ, ಆ ಭಗವಂತನೂ ಕೂಡ

ಮಮತೆಯಲಿ ನಿನ್ನೆತ್ತರ  ಏರಲಾರ

ನಿನ್ನ ತಾಳ್ಮೆಯ ತೂಕ ತೂಗಲಾರ                                                                                                        

                                      - ಅನಂತ ರಮೇಶ್

(Whatsapp ನಲ್ಲಿ ಹರಿದಾಡಿದ ಅನಾಮಿಕ Message ಒಂದರ ಪ್ರೇರಿತ)