ದಶಕಾಂತರದ ಸುಖ

ದಶಕಾಂತರದ ಸುಖ

ಕವನ

        

(ಪೂರ್ವಾರ್ಧ ಕ್ರಿ.ಶ.2010 )

ಸಖನೊಲುಮೆಯ ನುಡಿ
ಬಂಧು ಮಿತ್ರರ ಸವಿ ಚಾಟು
ಹಸಿವ ಹಿಂಗಿಸುವ ಹಿಟ್ಟಿನೊಂದು ಹಿಡಿ
ದಾಹ ತಣಿಸುವ ಬೊಗಸೆ ನೀರು
ಮುಗಿಲಡಿಯ ಪುಟ್ಟ ಗುಡಿಸಲು
ಕಂದಮ್ಮಗಳ ಪುಟಿಪುಟಿಸುವ ನಡೆ
ಸಾಕಿಷ್ಟು ಬೇಕಾದಷ್ಟು
ಮುಖದಲ್ಲಿ ನಿರಿಗೆ ಸಡಿಲಲು
ಹೃದಯದಲ್ಲಿ ಮತ್ತೆ ಆಸೆ
ಕಣ್ಣಲ್ಲಿ ಹೊಸ ಪಲ್ಲವ ಪಸರಿಸಲು
ದಣಿವಲ್ಲಿ ಉತ್ಸಾಹ ಉಕ್ಕಲು
ನಗೆ ಮುಸಲ ಧಾರೆಯಾಗಲು

 

(ಕ್ರಿ.ಶ.2020)

ನೆಟ್ಟಲ್ಲಿ ಸಖನೊಡನೆ ಚಾಟು
ಆಫ಼ೀಸಿನ ಅರೆಬರೆ ಟೈಮಿನಲ್ಲಿ
ಪಾರ್ಟಿ ಫ಼ೋಟೋಗಳ ಅಪ್ಲೋಡು
ವಾಟ್ಸಪ್ಪಿನಲ್ಲಿ ಕಮೆಂಟುಗಳ ತಡಕಾಡಿ
ತಿಂಗಳ ಆನ್ಲೈನಿನ ಕಡಿತದುಡುಪುಗಳು
ಮೇಕಪ್ಪು ಕಿಟ್ಟುಗಳು 
ಅಡಿಗೆಮನೆಗಾಗುವ
ಯಂತ್ರಗಳ ಪಟ್ಟಿಸಿ ನೋಡುತ್ತಾ
ರಾತ್ರಿಗೆ ಸದ್ಯ ಫ಼್ರಿಜ್ಜಾನ್ನವಿದೆಯೆಂದು 
ಖುಶಿಪಟ್ಟು ತಿಂದು ತಲೆ ಬೆಡ್ಡಿನಲ್ಲೂರಿದರೆ
ಸಖ ಅಮೆರಿಕದಿಂದ ಸ್ಕೈಪಿನಲ್ಲಿ ಬಂದು 
ಉಸುರಿದ ಇಲ್ಲಿ ಬೆಳಗಾಯ್ತು;
ಬರುವ ವರ್ಷಕ್ಕಾದರೂ ಮಗು
ಆಗಲೆಂದು ಅವನು ಗೋಗರೆದಾಗ
ಗರ್ಭ ದೊರಕಿದರೆ ಬಾಡಿಗೆಗೆ 
ತಮ್ಮ ಬೇಬಿಯನ್ನು ಬೆಳೆಸುವ 
ಸುಖದ ಕನಸು

 

(ಕ್ರಿ.ಶ.2030)

ಕಿಚನಿಲ್ಲದ ಫ಼್ಲಾಟಲ್ಲೇ ಆಫ಼ೀಸು ಕೆಲಸ 
ಬೇಸ್ಮೆಂಟಿನ ಕ್ಯಾಂಟೀನಿನಿಂದ
ಸಮಯಾಸಮಯಕ್ಕೆ ಕಾಫ಼ಿ ತಿಂಡಿ ಊಟ 
ಸಮಯ ಸ್ವಲ್ಪ ಉಳಿಯುತ್ತಿದೆಯಾಗಿ
ಮೊನ್ನೆ ಕೊಂಡ ಬ್ರೈನಿ ಪಾಪುವನ್ನು
ಬೇಬಿ ಶಾಪಲ್ಲೆ ಬಿಡಬಾರದಾಗಿ 
ರೈಟ್ ಗ್ರೋತ್ ಕ್ಲಿನಿಕಿನಲ್ಲಿ
ಈ ವೀಕೆಂಡಲ್ಲಾದರೂ ಹೋಗಿ ಸೇರಿಸಿದರೆ
ಬರುವ ಮೊದಲ ಬರ್ತ್ ಡೇಗೆನೇ 
ಮಾತು ಕಲಿತು
ಹಿಡಿದು ಗುರುತು ” ಮಾ – ಬೈ ” 
ಹೇಳುತ್ತಿರುವಂಥ 
ಸ್ಥಿತ್ಯಂತರದ ಮನಸು

                                            (ಚಿತ್ರಕೃಪೆ:ಅಂತರ್ಜಾಲ)