ದ್ವೀಪವ ಬಯಸಿ

ದ್ವೀಪವ ಬಯಸಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ಆರ್.ದತ್ತಾತ್ರಿ
ಪ್ರಕಾಶಕರು
ಛಂದ ಪುಸ್ತಕ
ಪುಸ್ತಕದ ಬೆಲೆ
150

 

“ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,

ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ

ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು

ಬದುಕಿಗೂ ಈ ಕರಿ ನೀರಲ್ಲಿ

ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ

ಅತ್ತಿತ್ತ ದೋಣಿ ಸಂಚಾರ, ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ

ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ

ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ

ತನ್ನ ಇನ್ನೊಂದರ್ಧ, ಎಲ್ಲಾದರೂ ಕ್ಷಣಾರ್ಧ

ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ”.. (ಚಿಂತಾಮಣಿಯಲ್ಲಿ ಕಂಡ ಮುಖ- ಗೋಪಾಲಕೃಷ್ಣ ಅಡಿಗ)

“ದ್ವೀಪವ ಬಯಸಿ...” ಎಂ.ಆರ್‍.ದತ್ತಾತ್ರಿಯವರ ಕಾದಂಬರಿಯನ್ನು ಓದುವಾಗ ಮತ್ತೆ ಮತ್ತೆ ಅಡಿಗರ ಈ ಸಾಲುಗಳು ನೆನಪಾದವು. ಹೌದಲ್ಲ ಪ್ರತಿಯೊಬ್ಬ ಮನುಷ್ಯನು ಒಂದು ದ್ವೀಪ. ತನ್ನೊಳಗಿನ ಲೋಕದಲ್ಲಿ ಅವನು ಏಕಾಂಗಿ. ಪ್ರತಿಯೊಬ್ಬನಲ್ಲೂ ಇರುವ ‘ಹುಡುಕಾಟ’ ಅದು ಯಾವುದರ ಹುಡುಕಾಟ ಎಂದು ಸುಲಭವಾಗಿ ಹೇಳಲಾಗದಂತದ್ದು. ಆದರೂ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ತಮ್ಮ ಬದುಕಿನ ಯಾವುದೋ ಹುಡುಕಾಟದಲ್ಲಿ ತೊಡಗಿರುತ್ತಾರೆ. ಅದು ಒಂದು ರೀತಿಯಲ್ಲಿ ತಾವು ಬಯಸುವ ದ್ವೀಪವನ್ನು ಅರಸುವುದೇ ಆಗಿರುತ್ತದೆ. ಅದು ಸಿಕ್ಕನಂತರ ಹುಡುಕಾಟ ಕೊನೆಗೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ ದ್ವೀಪದ ಬಯಕೆಯಂತೂ ಇದ್ದೇ ಇರುತ್ತದೆ.

ಈ ಕಾದಂಬರಿ ಇಂತಹದೇ ಹುಡುಕಾಟವನ್ನು ಹೊಂದಿರುವಂತದ್ದು. ಇದರ ನಾಯಕ ಅವನ ಸುತ್ತಲಿನ ಪಾತ್ರಗಳು ಈ ಹುಡುಕಾಟದಲ್ಲೇ ತಂತಮ್ಮ ಬದುಕಿನ ನೆಲೆಗಳನ್ನು ಕಂಡುಕೊಳ್ಳುವುದನ್ನು ಇಲ್ಲಿ ಕಾಣಬಹುದಾಗಿದೆ. ಕಥಾನಾಯಕನ ಕೆಲಸ ಇಂದಿನ ಬಹು ಬೇಡಿಕೆಯ ಸಾಫ್ಟವೇರ್‍ ಉದ್ಯಮಕ್ಕೆ ಸಂಬಂಧಿಸಿದ್ದು. ಈ ಲೋಕದ ತವಕ, ತಲ್ಲಣಗಳನ್ನು ಬಹಳ ಸೂಕ್ಷ್ಮವಾಗಿ ಲೇಖಕರು ಕಟ್ಟಿಕೊಡುತ್ತಾರೆ. ಈ ಉದ್ಯಮದಲ್ಲಿನ ಸೂಕ್ಷ್ಮಸಂವೇದಿಯಾದ ಮನಸ್ಸು ಹೇಗೆ ಈ ಲೋಕದ ಮಾನವೀಯತೆಯ ಸೋಗಿನಲ್ಲಿ ಅಡಗಿರುವ ಕ್ರೌರ್ಯವನ್ನು ಕಾಣುತ್ತದೆ, ಈ ಉದ್ಯಮವು ಸಮಾಜದ ಒಟ್ಟು ಆಕೃತಿಯ ಮೇಲೆ ಬೀರಿರುವ ಪರಿಣಾಮಗಳು ಎಂಥವು, ಮಾನವೀಯತೆ ಹೇಗೆ ಇಲ್ಲಿ ಅರ್ಥಹೀನವಾಗುತ್ತದೆ ಎನ್ನುವುದು ಇಲ್ಲಿ ದಾಖಲಾಗುತ್ತಾ ಹೋಗುತ್ತದೆ. ಇದರ ಜೊತೆಯಲ್ಲೇ ವಿತ್ತಕೇಂದ್ರಿತವಾಗಿ ಬದಲಾಗುತ್ತಿರುವ ಸಮಾಜ ಮತ್ತು ಬೆಳವಣಿಗೆಯೆಂದರೆ ಆರ್ಥಿಕ ಸಂಪತ್ತಿನ ಗಳಿಕೆಯೆಂದಾಗಿರುವ ಸಮಾಜದ ಆಖ್ಯಾನಗಳ ನಡುವೆ “ಹೃದಯದ ಹಾದಿ”ಯನ್ನು ಹಿಡಿದು ಹೊರಟವರ ಕತೆಯು ಇಲ್ಲಿ ಬರುತ್ತದೆ. ಇಂದಿನ ಯುವಪೀಳಿಗೆ ತೊಳಲಾಟಗಳು ಕತೆಯುದ್ದಕ್ಕೂ ಕಾಣಸಿಗುತ್ತವೆ.

ಈ ಹಿನ್ನೆಲೆಯಲ್ಲಿ ಕಾದಂಬರಿಯಲ್ಲಿ ಚಿತ್ರಿತವಾಗುವ ಚಿತ್ರಪ್ರದರ್ಶನವೊಂದರ ವಿವರಣೆ, ಸಮಿಂದ ಮಧುರ ಸಿಂಘೆ ಮತ್ತು ಅವರ ಮಗ ಮಹಿಂದನ ಹುಡುಕಾಟಗಳು, ಫ್ರಾಂಕೋ, ಆಂಜನೇಯಲು, ಅಶೋಕ ಇವರ ಬದುಕಿನ ಚಿತ್ರಗಳು, ಮಹಿಂದನ ಡೈರಿಯ ಬರವಣಿಗೆ, ಯೊಸಿಮಿಟಿ ಎಂಬ ಜಾಗದಲ್ಲಿ ನಾಯಕ,ನಾಯಕಿ ತಮ್ಮ ಬದುಕಿನ ದಿಶೆ ಕಂಡುಕೊಳ್ಳುವ ಕ್ಷಣ ಇವು ಅತ್ಯಂತ ಧ್ವನಿಪೂರ್ಣ ಚಿತ್ರಗಳಾಗಿವೆ. ಭಾಷೆ ಕೆಲವೆಡೆ ಕಾವ್ಯವಾಗಿ ಹರಿಯುತ್ತದೆ. ಕೆಲವೆಡೆ ತನ್ನ ವೇಗವನ್ನು ಕಳೆದುಕೊಂಡರೂ ಒಟ್ಟಾರೆ ಓದು ಒಂದು ಒಳ್ಳೆಯ ಕಾದಂಬರಿ ಓದಿದ ಖುಷಿ ನೀಡುತ್ತದೆ.