ನಡಿಗೆ - ಸ್ವಚ್ಛತೆಯೆಡೆಗೆ

ನಡಿಗೆ - ಸ್ವಚ್ಛತೆಯೆಡೆಗೆ

ಕವನ

ಕಡಿದು ಜಾಗಗಳಲ್ಲಿ
ತಲೆ ಸಾಲು ಕಂಡಲ್ಲಿ
ಹತ್ತಿರಕ್ಕೆ ಹೋಗದಿರಿ 
ಮಂದಿ ಶೌಚಕ್ಕೆ ಪ್ರಶಸ್ತವಿಸಿದ್ದಾರೆ ಅಲ್ಲಿ !

ಸಣ್ಣ ಹಳ್ಳಗಳಲ್ಲಿ
ತಿಳಿ ನೀರು ನಿಂತಲ್ಲಿ
ಖುಷಿ ಪಡದಿರಿ ನಿಲ್ಲಿ
ಅವು ಶೌಚಶುದ್ಧಿಗೆ
ಉಪಯೋಗಿಸಿಲ್ಲದ
ಭರವಸೆ ಇಲ್ಲ ಇಲ್ಲಿ !!

ಊರ ಪಕ್ಕದ ಕೊಳ
ಊರ ಆಚೆಯ ಕೆರೆಯ
ಏರಿಗುಂಟ ನಡೆವ ಕಾಲು
ಸ್ಥಿಮಿತ ತಪ್ಪದಿರುವುದಿಲ್ಲ
ಹುಷಾರಿನ ಹೆಜ್ಜೆಗಳು
ಮುಚ್ಚಿದ ಮೂಗುಗಳು
ಹುಟ್ಟಿಸುತ್ತಿವೆ ನಮ್ಮೊಳಗೆ 
ಶಪಿಸುವ ಮನಸ್ಸುಗಳು

ಕ್ಯಾಕರಿಸುವ ಉಗುಳುವ ಶಬ್ಧಗಳು 
ಉಸಿರಾಟದಂಥ ಪರಿಚಿತಗಳು
ಕಿವಿ ಮೂಗುಗಳಲ್ಲಿ ಗಣಿಗಾರಿಕೆ ಮಾಡಿ
ತಡೆಸಿಕ್ಕಿದಲ್ಲಿ ಪಿಚಕಾರಿಸುವ ನಾವು
ಯಾರ ಸಂಬಂಧಿಗಳು !
ಗಲೀಜಿನೆಚ್ಚರ ಫಲಕಗಳಡಿಯಲ್ಲೆ
ಭಯದ ಅಮೇಧ್ಯ ಕೋಟೆಗಳು
ಹೆಜ್ಜೆಹೆಜ್ಜೆಗು ವೀಸಾ ಇಲ್ಲದ ಕಸಗಳು !

ಎಂಥ ಗರೀಬನೂ ಊಟಕ್ಕೆ
ತನ್ನದೇ ತಾಟಿಟ್ಟಿಲ್ಲವೆ
ಉರುಳುವಾಗ ಚಾಪೆ ದಿಂಬಿಗೆ
ಟವಲ್ಲು ಇದ್ದಂತೆ ಎಲ್ಲರ ಹೆಗಲಿಗೆ
ಉಳಿಸಿಕೊಳ್ಳಲಾರೆವೆ ನಮ್ಮ ಘನತೆ
ಹುಡುಕಿ ಶೌಚಕ್ಕೆ ಹಿತ್ತಲ ಮೂಲೆ
ಏರಿಸಿಬಿಡುವ ಗಟ್ಟಿಯ ಗೋಡೆ
ತೊಲಗಿಸುವ ದೇಶಕ್ಕಂಟಿದ ಪೀಡೆ

ಇನ್ನಾದರು ನಿಲ್ಲಿಸೋಣ 
ಸೂರ್ಯನಿಗೆ ಹಗಲಿನವಮಾನ
ಚಂದ್ರನಿಗೆ ರಾತ್ರಿಯವಮಾನ
ನಿರುಮ್ಮಳದಲ್ಲಿ ಇಣುಕೋಣ 
ಮೂಗು ಕಣ್ಣಿಗೆ ಬರಲಿ
ಮುದದ ಪರಿಮಳದ ಗಾಳಿ
ದೇಹ ಹೃದಯಕೆ ಬರಲಿ
ಚೈತನ್ಯದುಸಿರು ತೇಲಿ

                          -   ಅನಂತ ರಮೇಶ್

ಚಿತ್ರ ಕೃಪೆ:ಅಂತರ್ಜಾಲ

ಚಿತ್ರ್