ನಮನ-೦೯: ನಮ್ಮದು ಒಂದು ಊರು !!

ನಮನ-೦೯: ನಮ್ಮದು ಒಂದು ಊರು !!

ಕವನ

ನಮ್ಮದು ಒಂದು ಊರು !!
ಅಲ್ಲವೇ ಮತ್ತೆ?

ವರುಷ ಐವತ್ತಾಯ್ತು ಬಸ್ಸುಗಳಾಗಮಿಸಿ 
ಇಂದಿಗೂ ಇಲ್ಲ ಬಸ್ ಸ್ಟಾಂಡು 
ಅಡ್ಡಿಯಿಲ್ಲ ಬಿಡಿ, ಇದ್ದಾವೆ ಅಂಗಡಿಗಳು 
ಜಗಲಿಯಲಿ ಜನರ ತುಂಬಿಕೊಂಡು 

ಬಂದಾಗ ಸಿಟಿಬಸ್ಸು ಕಾದು ನೋಡುವರಿಲ್ಲಿ 
ಬಸ್ ನ ಟಾಪಿಗೆ ಹಂಚು ತಗುಲದಂತೆ 
ಒದ್ದಾಡುವರಾರಿದಕೆ, ಇದ್ದರೂ 
ಊರೊಳಗೆ  ನಾಯಕರ ಸಂತೆ 

ಇವೆ ನೋಡಿ, ನಮ್ಮಲ್ಲೂ ನಲ್ಲಿ ನೀರು 
ಅಲ್ಲಲ್ಲಿ ಪಬ್ಲಿಕ್ ಟ್ಯಾಪುಗಳು ಕೂಡ 
ನೀರು ಪೋಲಾಗುತಿದೆ ಎಂದು ಮುಚ್ಚಿದ ಬಾಯಿ 
ಇಂದಿಗೂ ತೆರೆದಿಲ್ಲವೆನ್ಬುದೆ ಗೂಢ 

ಭೂಮಿ ಗಂಡೋ ಹೆಣ್ಣೊ ಎಂದೆನ್ನ ಕೇಳಿದರೆ 
ಸಿದ್ದ ಉತ್ತರವಿದೆ, 'ಹೆಣ್ಣು' ಎಂದು 
ನಮ್ಮೂರ ರಸ್ತೆಗಳ ಉಬ್ಬು ತಗ್ಗುಗಳೆಲ್ಲ 
ಹೆಣ್ತನವ ಸಾರುತಿವೆ ಇಂದು 

ಕಣ್ಣು ಹೊಡೆಯುತ್ತಿದ್ದ ಬೀದಿ ದೀಪಗಳೆಲ್ಲ 
ಸಭ್ಯರಾಗಿವೆ ನೋಡಿ ಮೊನ್ನೆಯಿಂದ 
ಬೀದಿ ದೀಪಗಳ ಬೆಳಕಿನಲಿ ಓದಲಿಕೆ 
ಎಮ್ ವಿ ಯಂತವರು ಇಲ್ಲದ್ದರಿಂದ 

ಹೊಲೆಗೇರಿಗಳ ಕಾಲ ಕಳೆದರೂ ಕೂಡ 
ಹೊಲಸುಗೇರಿಗಳೇನು ಕಮ್ಮಿಯಿಲ್ಲ
ನೀರು ಹರಿಯಲಿಕಿರುವ ನಾಲೆಯೊಳಗೆಲ್ಲ 
ಕೆಸರು ತುಂಬಿರಿಸದ ಹೊಟೇಲೇ  ಇಲ್ಲ 

ಬಸ್ ಸ್ಟಾಂಡು ಇಲ್ಲದೆಯೂ ಬಸ್ಸು ನಿಲ್ಲುವಾಗ 
ಅದಕೆಂದು ಸುಮ್ಮನೇಕೆ ಖರ್ಚು?
ಇಂದಲ್ಲ ನಾಳೆ, ಬಾರದಿರುವುದೆ ಮಳೆ ?
ಈ ಪಬ್ಲಿಕ್ ಟ್ಯಾಪುಗಳಿಗೇನು ತುರ್ತು?

ಹೆಣ್ಣು ರಸ್ತೆಯ ಮೇಲೆ ಹಾಕಿದರೆ ಪಿಕ್ಕಾಸಿ 
ಕೇಸು ಖಟ್ಲೆ ಗಳಾಗದೇ, ಕೊನೆಗೆ?
ದೀಪವಿಲ್ಲ ನಿಜ, ಕಂಬವಾದರೂ ಇದೆಯಲ್ಲ 
ಎಂಬ ತೃಪ್ತಿಯು ಸಾಲದೇ ನಮಗೆ?

ಮಾರಿಗೊಂದಿದೆ ಹೊಲಸು, ಕೆಸರಿನ ಗೋರಿ 
ಊರೆನ್ನಲಡ್ಡಿಯಿದೆಯೆ ನಿಮಗೆ?
ಅಂತೆಯೇ, ನಮ್ಮದು ಒಂದು ಊರು!!

Comments

Submitted by makara Tue, 07/15/2014 - 12:08

In reply to by ಗಣೇಶ

ಊರು ಉಡುಪಿ ತಾಲೂಕಿನ ಪರ್ಕಳ. ಮಣಿಪಾಲದ ಹತ್ತಿರ....... ಈ ಊರಾ ಗಣೇಶ್‌ಜಿ. 

ಆದರೂ ಅದು ಸಾಂಕೇತಿಕವಷ್ಟೇ - ಇದು ಸ್ವಲ್ಪ ಹೆಚ್ಚೂ ಕಡಿಮೆ ಎಲ್ಲಾ ಊರುಗಳ ಕಥೆ.