ದಿನದ ಮೊದಲ ಬಾರಿಗೆ ಗುರುಗಳೋ, ಹಿರಿಯರೋ, ಪರಿಚಿತರೋ ಅಥವ ಸಹೋದ್ಯೋಗಿಗಳೋ ಎದಿರಾದರೆ ‘ನಮಸ್ಕಾರ’ ಆನುವುದು ಭಾರತೀಯ ಸಂಸ್ಕೃತಿಯ ದ್ಯೋತಕ. ಹಾಗೆ ನಮಸ್ಕಾರ ಅನ್ನುವಾಗ ಗೊತ್ತಿಲ್ಲದೆ ಕೈ ಮುಗಿದಿರುತ್ತದೆ ಮತ್ತು ತಲೆ ಬಾಗಿ ವಂದಿಸುವುದು ನಡೆದಿರುತ್ತದೆ. ‘ನಂ’ ಧಾತುವಿನಿಂದ ನಿಷ್ಪನ್ನವಾದ ನಮಸ್ಕಾರ ‘ಬಾಗು’ ಅನ್ನುವ ಅರ್ಥವನ್ನೇ ಹೊಂದಿದೆ. ಅಂದರೆ ನಮಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ, ಜ್ಞಾನದಲ್ಲಿ ಮುಂದಿರುವವರ ಮುಂದೆ ಬಾಗಲೇ ಬೇಕೆಂಬುದು ಅಂತರಾರ್ಥ. ನನ್ನದೆಂಬುದು ಯಾವುದೂ ಇಲ್ಲ, ಎಲ್ಲವೂ ಆ ಸರ್ವಶಕ್ತನದು ಅನ್ನುವ ನಿರಹಂಕರಣ ಕೂಡ ನಮಸ್ಕರಿಸುವುದರಲ್ಲಿದೆ. ತಲೆ ಎಂದರೆ ಶಿರ. ಅರ್ಥಾಂತರದಲ್ಲಿ ಮನುಷ್ಯ ದೇಹದ ಕಳಸ. ಅಂದರೆ ಅದು ಅಹಂಕಾರದ ಕೇಂದ್ರ ಸ್ಥಳ. ತಲೆ ತಗ್ಗಿಸಿ ಅಂದರೆ ಅಹಂಕಾರವನ್ನು ಅದುಮಿ ಅನ್ಯರಿಗೆ ಗೌರವ ಕೊಡುವ ಕ್ರಿಯೆ ನಮಸ್ಕರಿಸುವುದರಲ್ಲಿದೆ. ಆದ್ದರಿಂದಲೇ ಗೌರವಪೂರ್ವಕ ನಮಸ್ಕಾರವೆಂದರೆ ತಲೆ ಬಾಗಿಸಿ ಕೈ ಮುಗಿಯುವ ಅಭಿವಾದನೆ. ಹೆತ್ತವರಿಗೆ, ಗುರುಗಳಿಗೆ, ಆಶ್ರಯ ದಾತರಿಗೆ, ಅನ್ನದಾತರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ. ನಂ- ಅಂದರೆ ನಮಿಸು ಬಾಗು ಅನ್ನುವುದು ಹಳೆಯ ಕಾಲದ ದೇವಸ್ಥಾನಗಳ ಗರ್ಭಗುಡಿ ಹೊಕ್ಕಾಗ ಅರಿವಾಗುತ್ತದೆ. ಮನುಷ್ಯಾಕೃತಿಯ ಎತ್ತರಕ್ಕಿಂತಲೂ ಕಡಿಮೆ ಎತ್ತರದ ಈ ಗರ್ಭಗುಡಿಯೊಳಗೆ ಪ್ರವೇಶಿಸಬೇಕೆಂದರೆ ತಲೆ ತಗ್ಗಿಸಿಯೇ ನಡೆಯಬೇಕು.
ತಲೆ ಬಾಗಿಸಿ, ಕೈ ಮುಗಿದು, ಧ್ಯಾನಿಸುತ್ತಲೇ ಪ್ರದಕ್ಷಿಣೆ ಹಾಕಿ ದೀರ್ಘದಂಡ ನಮಸ್ಕ್ಕಾರ ಹಾಕುವುದರಲ್ಲಿ ಶಾರೀರಿಕ ಕ್ರಿಯೆಗಳಷ್ಟೇ ಅಲ್ಲದೆ ಅವು ಮಾನಸಿಕ ಸಿದ್ಧತೆಯನ್ನೂ ಬೇಡುತ್ತವೆ. ಆರ್ತತೆಯ ಭಾವವಿಲ್ಲದಿದ್ದಲ್ಲಿ ಮನಸ್ಸು ಮಣಿಯುವುದಿಲ್ಲ. ಮನಸ್ಸು ಮಣಿಯದೇ ಅಹಂಕಾರ ತೀರುವುದಿಲ್ಲ. ಹಾಗಿಲ್ಲದ ನಮಸ್ಕಾರ ಒಣ ಶಿಷ್ಟಾಚಾರವಾಗುತ್ತದೆಯೇ ವಿನಾ ಸದ್ಗುಣವಾಗುವುದೇ ಇಲ್ಲ. ದೇಹ ಮನಸ್ಸು ಮತ್ತು ಆಲೋಚನೆಗಳು ಒಂದು ಸಹಜ ಬಿಂದುವಿನಲ್ಲಿ ಸಂಧಿಸಿದಾಗಷ್ಟೇ ವಿನಯ ಒಡಮೂಡುತ್ತದೆ.ಅಹಂಕಾರ ಅಳಿಯುತ್ತದೆ. ಆದರೆ ಇಂದಿನ ವರ್ತಮಾನದಲ್ಲಿ ವ್ಯಾವಹಾರಿಕತೆಯೇ ಮುಖ್ಯವಾದ ಲೌಕಿಕದಲ್ಲಿ ನಮಸ್ಕಾರವೆನುವುದು ಶುಷ್ಕ ಯಾಂತ್ರಿಕ ಕ್ರಿಯೆಯಾಗುತ್ತಿದೆ. ನಮಸ್ಕರಿಸಲ್ಪಡಬೇಕಾದ ಜಾಗದಲ್ಲಿರುವವರು ಜಾತಿ ಆಧಾರಿತ, ಲಿಂಗ ಬೇಧದ ಪ್ರತೀಗಾಮಿ ನಡೆಯುಳ್ಳವರಾಗಿದ್ದರೆ ನಮಸ್ಕ್ಕರಿಸುವವನಿಗೆ ಸಹಜ ಗೌರವ, ವಿನಯ, ವಿವೇಚನೆಗಳು ದೂರವಾಗಿ ಶಿಷ್ಟಾಚಾರದ ಕ್ರಿಯೆಯಾಗಿ ಉಳಿಯುತ್ತದೆ. ಇಷ್ಟಕ್ಕೂ ನಮಸ್ಕಾರ ಅಂದವರ ಮನಸ್ಸಿನಲ್ಲಿ ಇರುವ ನಿಜಭಾವವೇನು ಅನ್ನುವುದು ನಮಸ್ಕರಿಸಲ್ಪಟ್ಟವರಿಗೆ ಅರಿಯುವ ರೀತಿಯಾದರೂ ಇಲ್ಲವಲ್ಲ! ದ್ರೋಹ ಚಿಂತನ, ಸ್ವಾರ್ಥ, ಸೇಡಿನ ಭಾವ ಇದ್ದೂ ವಿನಯದ ನಾಟಕ ನಡೆದಿರಬಹುದಲ್ಲ?
ಮಣಿದಿರಲಿ ಮುಡಿ, ಮತ್ತೆ ಮುಗಿದಿರಲಿ ಕಯ್, ಮತ್ತೆ ಮಡಿಯಾಗಿರಲಿ ಬಾಳ್ವೆ ಅನ್ನುವುದು ಕುವೆಂಪು ನಮಗೆ ಕೊಟ್ಟ ದೃಷ್ಟಿ. ಕೇವಲ ಆಂಗಿಕ ವಿನ್ಯಾಸವನ್ನೇ ಅಲ್ಲದೆ ಮುಂದಿನ ಬದುಕಲ್ಲೂ ಕಳಂಕ ತಟ್ಟದಂತೆ ಬಾಳಬೇಕೆನ್ನುವ ಪರಿ ಅದೆಷ್ಟು ಸೊಗಸಾದುದು. ಕಳಂಕ ಬರದ ಹಾಗೆ ಅಂದರೆ ಶುಚಿತ್ವದ ಘನಸ್ತಿಕೆ. ಅದನ್ನು ಕಾಪಿಟ್ಟುಕೊಳ್ಳುವುದೆಂದರೆ ಅದೊಂದು ಅಸಿಧಾರ ವ್ರತ. ಅಂದರೆ ಕತ್ತಿಯಲುಗಿನ ಮೇಲಣ ನಡೆ. ಕೊಂಚ ಎಚ್ಚರತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಧೃಢ ಇಚ್ಛಾಶಕ್ತಿ, ಕನಿಷ್ಠ ಬದ್ಧತೆ ಮತ್ತು ಲೋಕ ನಿಂದನೆಯ ಭಯ ಶುಚಿತ್ವದ ಪರಮ ಸೋಪಾನಗಳು. ಈ ಸೋಪಾನಗಳಲ್ಲಿ ಕೊಳೆ ಕೂರದಂತೆ ಕಾಪಿಡುವ ಕ್ರಿಯೆ ಲಘುವಾದುದೇನೂ ಅಲ್ಲ. ಅದೊಂದು ಭಾವಶುದ್ಧಿಯ ನಿತ್ಯ ಸೂತ್ರ. ನಿರಂತರವಾಗಿ ಮನವನ್ನು ಶೋಧಿಸಿಕೊಳ್ಳುತ್ತಲೇ ಇರುವವರು ಮಾತ್ರ ಇದನ್ನು ಮಾಡಬಲ್ಲರು. ಆದರೆ ಮನಸ್ಸಿನ ಮೇಲೆ ಲೌಕಿಕದ ಕೊಳೆ ಕಲ್ಮಶಗಳನ್ನು ಹಾಯಗೊಡದೆ ಚಿತ್ತಚಾಂಚಲ್ಯಕ್ಕೊಳಗಾಗದೇ ಭಾವನೈರ್ಮಲ್ಯ ಕಾಪಾಡಿಕೊಳ್ಳುವುದು ಎಲ್ಲರಿಂದ ಸಾಧ್ಯವಿಲ್ಲದ ಸಂಗತಿ. ‘ಮನವ ಶೋಧಿಸಬೇಕು ನಿಚ್ಚ, ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ’ ಅನ್ನುವ ದಾಸರ ಮಾತು ಕೂಡ ಇದನ್ನೇ ಧ್ವನಿಸಿದೆ.
ಆದರೆ ಇತ್ತೀಚೆಗೆ ನಮ್ಮ ನಮಸ್ಕಾರಗಳೆಲ್ಲ ಲೌಕಿಕದ ರಿಚ್ಯುಯೆಲ್‍ಗಳಾಗಿ ಬದಲಾಗಿವೆ. ಅಂದರೆ ಗೌರವ ಭಾವ, ಪ್ರಪತ್ತಿ ಭಾವ, ಸ್ನೇಹ ಭಾವಗಳಿಲ್ಲದ ತೋರುಗಾಣಿಕೆಯ ನಮಸ್ಕಾರ ಕೈಕುಲುಕುವುದರೊಂದಿಗೆ ಮುಗಿಯುತ್ತಿದೆ. ತಲೆ ಬಾಗಿ ನಮಸ್ಕರಿಸುವುದಕ್ಕೂ ಕೈಕೊಟ್ಟು ಅಂದರೆ ಹಸ್ತ ಲಾಘವ ಮಾಡಿ ಯುದ್ಧಕ್ಕೆ ಆಹ್ವಾನಿಸುವುದಕ್ಕೂ ವ್ಯತ್ಯಾಸಗಳಿದ್ದೇ ಇವೆ. ಭಾವ ಶುದ್ಧಿಯು ಆತ್ಮ ಗೌರವಗಳಿಲ್ಲದಿದ್ದಲ್ಲಿ ಹುಟ್ಟುವುದು ಕಷ್ಟ ಸಾಧ್ಯದ ಮಾತು. ನಮಸ್ತೆ ಅನ್ನುವುದು ಇಂಥಲ್ಲಿ ಬರಿ ಹಾಜರಿಯ ಸಂಕೇತ ಮಾತ್ರವೇ ವಿನಾ ಭಾಗವಹಿಸುವಿಕೆಯ ದ್ಯೋತಕವಾಗುವುದಿಲ್ಲ.
ನಮಸ್ಕಾರ
August 18, 2012 - 10:46pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ನಮಸ್ಕಾರ
ರಾಮಸ್ವಾಮಿಗಳಿಗೆ ನಮಸ್ಕಾರಗಳು. ಉಪಯುಕ್ತ ಲೇಖನ.
ಉ: ನಮಸ್ಕಾರ
ನಮ್ಮ ಸಂಪ್ರದಾಯದ ,ಶಿಷ್ಟಾಚಾರಗಳ ಉತ್ತಮ ನಿರೂಪಣೆ.
ಉ: ನಮಸ್ಕಾರ
ನಮಸ್ಕಾರದ ಆದ್ಯಂತಗಳನ್ನು ಬಹಳ ಕೂಲಂಕುಶವಾಗಿ ವಿಶದಪಡಿಸಿದ್ದೀರ, ವಂದನೆಗಳು ರಾಮಸ್ವಾಮಿಯವರೆ. ಇದು ಯಾವುದೇ ರೀತಿಯಲ್ಲಿ ಇಂದು ಪ್ರಚಲಿತದಲ್ಲಿರಲಿ ಅದರ ವಿವರಣೆಯನ್ನು ನಿಮ್ಮಂತಹ ಸಹ್ರುದಯರು ಆಗಿಂದಾಗ್ಗೆ ಜನಕ್ಕೆ ತಿಳಿಸಿದಾಗ ಅದರ ಹಿರಿಮೆಯ ಅರಿವಾಗುತ್ತದೆ. ಆದ್ದರಿಂದ ಆ ಶಿಷ್ಟಾಚಾರ ಯಾಂತ್ರಿಕವಾಗಿಯಾದರೂ ಮುಂದುವರೆಯಲಿ ಬಿಡಿ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ನಮಸ್ಕಾರ
ಪ್ರಿಯ
ರಾಮ ಸ್ವಾಮೀ ಅವ್ರೆ
ನೀವು ಹಾಕಿದ್ದು ಯಾವ ಬರಹವೋ ? ವಿಶ್ಯ ವಸ್ತು ಏನೋ? ಒಂದೂ ಗೊತ್ತಾಗುತ್ತಿಲ್ಲ..
ಕಾರಣ..
ಅಲ್ಲಿ ಆಂಗ್ಲ ಅಕ್ಷರಗಳೇ ಕಾಣಿಸುತ್ತಿವೆ..
ಬಹುಶ ನೀವು ಸೇರಿಸುವಾಗ ಅಥವಾ ಆಮೇಲೆ ಏನೋ ಬದಲಾವಣೆ ಆಗಿದೆ..
ಸರಿಪಡಿಸಿ..
ನಾ ಇದನ್ನು ನಿರ್ವಾಹಕರ ಗಮನಕ್ಕೂ ತಂದಿರುವೆ...
ಶುಭವಾಗಲಿ...
\|/
ಉ: ನಮಸ್ಕಾರ
ಸಪ್ತಗಿರಿವಾಸಿಗಳೇ.... ನನ್ನ ಕಂಪ್ಯೂಟರ್ ನಲ್ಲಿ ಓಪನ್ ಆಗುತ್ತಿದೆ.
ಉ: ನಮಸ್ಕಾರ
ಸಪ್ತಗಿರಿವಾಸಿಗಳೇ.... ನನ್ನ ಕಂಪ್ಯೂಟರ್ ನಲ್ಲಿ ಓಪನ್ ಆಗುತ್ತಿದೆ. ಅಲ್ಲಿದ್ದ ಎರಡು ವಾಕ್ಯಗಳನ್ನು ಕಾಪಿ ಪೇಸ್ಟ್ ಮಾಡಲು ಹೋದರೆ ಬೇರೆ ಅಕ್ಷರ ಮೂಡುತ್ತಿದೆ.
ರಾಮಸ್ವಾಮಿಯವರು BRH kannada ಫಾಂಟ್ ಬಳಸಿದ್ದಾರೆ.ಕಂಪ್ಯೂಟರ್ ಗೆ ಕಾಪಿ ಮಾಡಿ ನೋಡಿದೆ. ಇದು ನುಡಿ ತಂತ್ರಾಂಶದ ಫಾಂಟ್ ಎಂದು ಕಾಣುತ್ತದೆ
ಉ: ನಮಸ್ಕಾರ
ನಿಮ್ಮ ಮಾತು ನಿಜ ನಂಜುಂಡ ಅವರೆ, ನನ್ನ ಕಂಪ್ಯೂಟರಿನಲ್ಲಿ ಬರಹ ಫಾಂಟ್ ಇರುವುದರಿಂದ ಅದನ್ನು ಓದಲು ಸಾಧ್ಯವಾಗುತ್ತಿದೆ.
ಉ: ನಮಸ್ಕಾರ
ನಿಮ್ಮ ಬರಹ ಲಿನಕ್ಸಿನಲ್ಲಿ ಕಾಣಿಸುತ್ತಿಲ್ಲ. ಯುನಿಕೋಡ್ ಬಳಸಿದ್ದರೆ ಚೆನ್ನಾಗಿರುತ್ತಿತ್ತು. ಸಂಪದದಲ್ಲೇ ಕನ್ವರ್ಟರ್ ಇದೆ ಅನ್ನಿಸುತ್ತದೆ.
ಉ: ನಮಸ್ಕಾರ
ಇಲ್ಲಿ ಎಲ್ಲವೊ ಮಾರುಕಟ್ಟೆಯ ಸರಕುಗಳಾಗುತ್ತಿರುವುದನ್ನ ಎಲ್ಲರೊ ಮನಗಂಡಿದ್ದಾರಾದ್ದರಿಂದ ಈ ರೀತಿಯ ಆಚರಣೆಗಳು ಬರೀ ಶಿಶ್ಟಾಚಾರಗಳಾಗಿವೆ ಎಂಬುದು ದಿನ ನಿತ್ಯದ ಸತ್ಯ, ಅಂದ ಹಾಗೆ ನಿಜಕ್ಕೊ ಆ ರೀತಿಯ ವ್ಯಕ್ತಿತ್ವದ ಹಾಗೊ ವ್ಯಕ್ತಿಗಳ ಕೊರತೆ ನಮ್ಮ ಸಮಾಜದಲ್ಲಿ ಇರುವುದರಿಂದ ನಮಸ್ಕಾರಗಳು ಬರೀ ಶಿಶ್ಟಾಚಾರಗಳಾಗಿ ಆಚರಣೆಯಲ್ಲಿವೆ ಎನುವುದನ್ನ ಉಹಿಸಲು ಕಷ್ಟವೇನಲ್ಲ, ನಿಜದ ವ್ಯಕ್ತಿತ್ವದ ಧರ್ಶನವಾದೊಡನೆ ಸಹಜವಾಗಿ ತಲೆ ಬಾಗುತ್ತದೆ, ಮನ ನಮಿಸುತ್ತದೆ ಇದರಲ್ಲಿ ಸಂದೇಹಗಳಿಲ್ಲ.
ನಮಸ್ಕಾರದ ನಿಜವಾದ ಉದ್ದೇಶಗಳನ್ನ ತಿಳಿಸುವಲ್ಲಿ ನಿಮ್ಮ ಲೇಖನ ವಿಶಾಯಾಧಾರಿತವಾಗಿ ರೊಪಗೊಂಡಿದೆ, ಸಮಾಜದ ಇತರೆ ಅಗತ್ಯ ಹಾಗೊ ಅನಿವಾರ್ಯಗಳನ್ನ ಬದಿಗೊತ್ತಿದಂತಿದೆ.
ಉ: ನಮಸ್ಕಾರ
ಆರ್ತತೆಯ ಭಾವವಿಲ್ಲದಿದ್ದಲ್ಲಿ ಮನಸ್ಸು ಮಣಿಯುವುದಿಲ್ಲ. ಮನಸ್ಸು ಮಣಿಯದೇ ಅಹಂಕಾರ ತೀರುವುದಿಲ್ಲ.
ಎಂಥ ,ಉದಾತ್ತವಾದ ವಿಚಾರ ! ಇದಕ್ಕೆ ಹಿಂದೂ ಸಂಸ್ಕೃತಿ ಎನ್ನುವುದು. ನಮ್ಮ ಪೂರ್ವಜರು ಎಲ್ಲವನ್ನೂ ಎಷ್ಟು ಶಾಸ್ತ್ರಬದ್ಧವಾಗಿ ಮಾಡಿದ್ದಾರಲ್ಲವೇ?
ನಿಮ್ಮ ಲೇಖನ ಅನೇಕ ಆಯಾಮಗಳನ್ನು ತೆರೆದಂತಾಯಿತು.
ಕೃಷ್ಣ