19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ

August 1, 2012 - 1:33am
Rajendra Kumar ...

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ

ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,
ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.
ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆ
ಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತಿದರೆ,
ನಾನು ಅಲ್ಲಿ ಇರಲೇ ಇಲ್ಲವೇನೋ ಎನ್ನುವ ಹಾಗಿರುತ್ತೇನೆ.
ಪಕ್ಕದಮನೆಯಲ್ಲಿ ಅತ್ತೆಯೊಬ್ಬಳು,
ವರದಕ್ಷಿಣೆಗಾಗಿ ಸೊಸೆಗೆ ಪೀಡಿಸಿ, ಕಿರುಕುಳ ಕೊಟ್ಟು
ಸೀಮೆಯೆಣ್ಣೆ ಸುರಿದರೂ,
ಭದ್ರವಾಗಿಹ ನನ್ನ ಮನೆಯ ಬಾಗಿಲು ತೆಗೆಯುವುದಿಲ್ಲ,
ಏನಾಯಿತೆಂದು ವಿಚಾರಿಸುವುದಿಲ್ಲ.  
ಮಕ್ಕಳಿದ್ದರೂ ಅನಾಥವಾಗಿರುವ ವೃದ್ದ ತಾಯಂದಿರು,
ಒಂದು ಹೊತ್ತಿನ ಊಟಕ್ಕೂ ಪರಿತಪಿಸುವದ
ನೋಡಿಯೂ ನಾನು ಹೊಟ್ಟೆ ತುಂಬಾ ಉಂಡು ಮಲಗುತ್ತೇನೆ.
ಹಳ್ಳಿಯಿಂದ ಪ್ರೀತಿಯಂದೋ, ಕೆಲಸಕ್ಕೆಂದೋ ಆಶೆ ಹಚ್ಚಿಸಿ
ಎತ್ತುಕೊಂಡು ಬಂದ ಹುಡುಗಿಯರನು,
ಸೂಳೆಮನೆಗೆ ಮಾರುವದ ನೋಡಿಯೂ ನಾನು ಮೌನವಾಗುತ್ತೇನೆ.
ಕುಡಿದು ಬರುವ ಗಂಡ ಬಸಿರು ಹೆಂಡತಿಯ ಹೊಟ್ಟೆಗೊದ್ದರೂ
ನಾನು ಕರಗುವುದಿಲ್ಲ, ನನಗೆ ಕರುಣೆ ಬರುವುದಿಲ್ಲ.

ಇನ್ನೂ ಎಲ್ಲೆಲ್ಲಿ ಯಾರ ಯಾರ ಚಪಲಕ್ಕೆ
ಹೆಣ್ಣು ಹಣ್ಣಾಗುತ್ತಿದ್ದಾಳೆಂದು ಗೊತ್ತಿದ್ದರೂ ನನಗೇನು
ನನ್ನವರಲ್ಲದ ಇವರಾರಿಗೂ ಏನಾದರೇನಂತೆ
ನನಗೆ ಮತ್ತು ನನ್ನ ಮನೆಯವರಿಗೆ ದೌರ್ಜನ್ಯ ಆಗುವತನಕ
ಅದು ನನಗೆ ಅನ್ಯಾಯ ಅನ್ನಿಸುವುದೇ ಇಲ್ಲ

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಸುಮ್ಮನೆ ಹೇಡಿಯಾಗಿ ಇರು ಎಂದು ಬದುಕು ಹೇಳುತ್ತದೆ
ಈ ಹೇಡಿತನ ಎಷ್ಟೇ ಉಸಿರಾಡಿದರೂ,
ನನಗೆ ನಾನು ಜೀವಂತವಾಗಿರುವ ಬಗ್ಗೆ ಸಂಶಯ ಬರುತ್ತದೆ.

ರಾಜೇಂದ್ರಕುಮಾರ್ ರಾಯಕೋಡಿ - Copyright©

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Manjula N Harihar on
ನಿಜ ಸಂಗತಿಯನ್ನೇ ಅರ್ಥಪೂರ್ಣವಾಗಿ ಹೇಳಿದ್ದಿರಿ, ಹೆಣ್ಣಿನ ಶೋಷಣೆಯ ಬಗ್ಗೆ ಚೆನ್ನಾಗಿ ಮೂಡಿಬಂದಿದೆ ನಿಲ್ಲಬೇಕು ಆಗ ಮಾತ್ರ ನಿಜವಾದ ಸ್ವಾತಂತ್ರ ಬಂದಂತೆ.

Submitted by venkatb83 on
"ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ ಸುಮ್ಮನೆ ಹೇಡಿಯಾಗಿ ಇರು ಎಂದು ಬದುಕು ಹೇಳುತ್ತದೆ ಈ ಹೇಡಿತನ ಎಷ್ಟೇ ಉಸಿರಾಡಿದರೂ, ನನಗೆ ನಾನು ಜೀವಂತವಾಗಿರುವ ಬಗ್ಗೆ ಸಂಶಯ ಬರುತ್ತದೆ." ================================= ರಾಜೇಂದ್ರ ಕುಮಾರ್ ಅವ್ರೆ- ಸಾವಿರ ಶಬ್ಧಗಳಲ್ಲಿ ಒಂದು ದೊಡ್ಡ ಲೇಖನ ಬರಹ ಬರೆದು ಹೇಳಲಾಗದ್ದನ್ನ ನೀವು ಪುಟ್ಟ ಕವನದಲ್ಲಿ ಹೇಳಿರುವಿರಿ.. ನಿಮ್ಮ ಕವನದ ಭಾವ(ಭಾವನೆ) ನಮ್ಮೆಲ್ಲರಲ್ಲಿ ಹಲವೊಮ್ಮೆ ಬಂದಿರುತ್ತೆ.... ನಾನಂತೂ ಬಹು ಸಾರಿ ಈ ರೀತಿ ಯೋಚಿಸಿರುವೆ..... ಅಸ್ತೆಲ್ಲ ನಮ್ಮ ಕಣ್ಣೆದುರು ನಡೆದರೂ - ನಾವ್ ಕಿವಿಯಾರೆ ಕೇಳಿದರೂ ಕೆಲವೊಮ್ಮೆ ನಾವೇ ಅದರಲ್ಲಿ ಭಾಗಿಯಾದರೂ ಮುಂದಡಿ ಇಟ್ಟು ಆ ತರಹದ್ದನ್ನ ವಿರೋಧಿಸಲು ಮನ ಹಿಂದೇಟು ಹಾಕೋದು ನಿಜ ಮತ್ತು ಅದಕ್ಕೆ ಅದರದೇ ಆದ ಹಲವು ಕಾರಣಗಳಿವೆ... ಆದ್ರೆ ಆ ತರಹ ಏನಾದರೂ ನಡೆಯುವಾಗ ಒಬ್ಬರಾದರೂ ವಿರೋಧಿಸಿದರೆ ಮತ್ತಸ್ತು ಜನಕ್ಕೆ ಹುರುಪು ಬಂದು ಚೈತನ್ಯ ಆವರಿಸಿ ,ಗಂಟಲಲ್ಲಿ ನೀರಿನ ಪಸೆ ಉತ್ಪನ್ನವಾಗಿ.... ..!!!! ನಿಮ್ಮ ಈ ಕವನಕ್ಕೆ ಪ್ರೇರಣೆ (ಕಾರಣ) ಮೊನ್ನೆ ರಶ್ಮಿ ಅವರು ಬರೆದ ಬರಹ ಮತ್ತು ಕೆಲ ದಿನಗಳ ಅಂತರದಲ್ಲಿ ನಡೆದ(ಈ ಹಿಂದೆಯೂ ನಡೆದಿವೆ) ಕೆಲ ಕೆಟ್ಟ ಘಟನೆಗಳು ಕಾರಣ ಅಲ್ಲವೇ...?? ಹೆಣ್ಣು ಮಕ್ಕಳು ಸರ್ವೆಸಾಧಾರಣವಾಗಿ ಎಲ್ಲೆಡೆ ಎಲ್ಲ ಕಾಲದಲ್ಲಿ ಅನುಭವಿಸುವ ಎಲ್ಲ ವಿಧದ ಕಷ್ಟ ನಸ್ಟಗಳ -ಕೋಟಲೆಗಳ ಪಟ್ಟಿ ಮಾಡಿರುವಿರಿ... ಆ ತರಹದ್ದು ನಡೆದಾಗ ನಾವೆಲ್ಲಾ ವಿರೋಧಿಸೋಣ.. >>>>ನಿಮ್ಮ ಒಪ್ಪಿಗೆ ಸಿಕ್ಕರೆ ನಾ ಇದನ್ನು ಫೆಸ್ಬುಕ್ನಲ್ಲಿ ಸೇರಿಸಬೇಕು ಎಂದಿರುವೆ...(ಕಾಪಿ ರೈಟ್ಸ್ ಸಮಸ್ಯೆ..!!) ಶುಭವಾಗಲಿ... \|/

Submitted by Rajendra Kumar ... on
ಆತ್ಮೀಯ ಸಪ್ತಗಿರಿವಾಸಿಯವರೆ, ಪ್ರತಿಕ್ರಿಯೆ ಮತ್ತು ಅಭಿಪ್ರಾಯದ ರೀತಿಯಲ್ಲಿ ಒಂದು ಉತ್ತಮ ಲೇಖನವನ್ನೇ ಬರೆದ್ದಿದ್ದೀರಿ.. ಓದಿ ಸಂತೋಷವಾಯಿತು. ನನಗೆ ನನ್ನ ಸುತ್ತ ಮುತ್ತ ನಡೆಯುವ ಸಂಗತಿಗಳು, ನನ್ನ ಬದುಕೇ ಪ್ರೇರಣೆಯಾಗುತ್ತದೆ. ನನ್ನ ಹೆಸರಿನಲ್ಲಿಯೇ ಫೇಸ್ ಬುಕ್ ನಲ್ಲಿ ಈ ಕವನವನ್ನು ಹಂಚಿ ಕೊಂಡರೆ ಕಾಪಿರೈಟ್ ಪ್ರಶ್ನೆಬರುವುದಿಲ್ಲ....! ಅದು ಸಂತೋಷದವಿಶಯವೇ...ಮತ್ತೊಮ್ಮೆ ನಿಮ್ಮ ಪ್ರತಿಕ್ರಿಯೆಗೆ ಆಭಾರಿಯಾಗಿದ್ದೇನೆ...ಧನ್ಯವಾದಗಳು.

Submitted by makara on
ಪಕ್ಕದ ಮನೆಯ ಹುಡುಗ ರಾಷ್ ಡ್ರೈವಿಂಗ್ ಮಾಡಿ ಸಾಯಲಿ ನನಗೇನು ಎಂದು ಕೊಂಡರೆ ಅವನ ಡ್ರೈವಿಂಗಿನ ಪರಿಣಾಮದಿಂದಾಗಿ ನನ್ನ ಕೈಯೋ ಇಲ್ಲಾ ಪ್ರಾಣವೋ ಇಲ್ಲಾ ನನ್ನ ಮಗನಿಗೋ ಅಪಾಯವಾಗಬಹುದು. ಆದ್ದರಿಂದ ಅವನಿಗೆ ತಿಳಿಹೇಳುವುದು ಒಳ್ಳೆಯದು. ಹಾಗೆಯೆ ಯಾರಿಗೋ ಏನೋ ಆಗುತ್ತದೆಂದುಕೊಂಡು ಸುಮ್ಮನಿರುವುದು ಒಳ್ಳೆಯದಲ್ಲವೆನ್ನುವುದನ್ನು ಬಹು ಮಾರ್ಮಿಕವಾಗಿ ತಿಳಿಸಿದ್ದೀರ, ರಾಜೇಂದ್ರ ಅವರೆ.

Submitted by makara on
ಪಕ್ಕದ ಮನೆಯ ಹುಡುಗ ರಾಷ್ ಡ್ರೈವಿಂಗ್ ಮಾಡಿ ಸಾಯಲಿ ನನಗೇನು ಎಂದು ಕೊಂಡರೆ ಅವನ ಡ್ರೈವಿಂಗಿನ ಪರಿಣಾಮದಿಂದಾಗಿ ನನ್ನ ಕೈಯೋ ಇಲ್ಲಾ ಪ್ರಾಣವೋ ಇಲ್ಲಾ ನನ್ನ ಮಗನಿಗೋ ಅಪಾಯವಾಗಬಹುದು. ಆದ್ದರಿಂದ ಅವನಿಗೆ ತಿಳಿಹೇಳುವುದು ಒಳ್ಳೆಯದು. ಹಾಗೆಯೆ ಯಾರಿಗೋ ಏನೋ ಆಗುತ್ತದೆಂದುಕೊಂಡು ಸುಮ್ಮನಿರುವುದು ಒಳ್ಳೆಯದಲ್ಲವೆನ್ನುವುದನ್ನು ಬಹು ಮಾರ್ಮಿಕವಾಗಿ ತಿಳಿಸಿದ್ದೀರ, ರಾಜೇಂದ್ರ ಅವರೆ.

Submitted by Rajendra Kumar ... on
ಆತ್ಮೀಯ ಶ್ರೀಧರ್ ಬಂಡ್ರಿಯವರೆ, ಈ ಕವಿತೆಯಲ್ಲಿ ನನ್ನ ನಿಸ್ಸಾಹಯಕತೆ, ತಪ್ಪಿತಸ್ತ ಭಾವನೆ, ಹೇಡಿತನ ಎಲ್ಲವೂ ಕೂಡಿದೆ. ಸಮುದ್ರದ ಅಲೆಗಳು ಹೊರಹಾಕಿದ ಲಕ್ಷಾಂತರ ಮೀನುಗಳು ದಡದ ಮರುಳಿನಲ್ಲಿ ಬಿದ್ದು ಸಾಯುತ್ತವೆ. ಎಲ್ಲವನ್ನು ಎತ್ತಿ ಸಮುದ್ರಕ್ಕೆ ಹಾಕಲಿಕ್ಕೆ ಬರದೆ ಇರಬಹುದು. ಆದರೆ ಒಂದಾದರೂ ಮೀನಿಗೆ ಮರಳಿ ನೀರಿಗೆ ಬಿಟ್ಟರೆ, ಆ ಒಂದರ ಜೀವವಾದರೂ ಉಳಿಯುತ್ತದೆ ಎಂದು ಎಲ್ಲೋ ಓದಿದ್ದೆ. ಸಂಪೂರ್ಣ ಸಮಾಜಕ್ಕೆ ಬದಲಾಯಿಸಲಾಗದು. ಆದರೆ, ನಮ್ಮ ಸುತ್ತ ನಡೆಯುವ ಆ ಒಂದು ಕೆಟ್ಟ ಕಾರ್ಯವನ್ನು ನಿಲ್ಲಿಸುವ ಧೈರ್ಯ ಮಾಡಿದರೆ, ಆ ಒಂದು ಕೆಟ್ಟ ಕಾರ್ಯವಾದರೂ ನಿಲ್ಲಿಸಬಹುದು ಎಂದು ನನ್ನ ಅಭಿಪ್ರಾಯ.. ನೀವು ಹಂಚಿಕೊಂಡ ಡ್ರೈವಿಂಗ್ ವಿಷಯ ಒಂದು ಉತ್ತಮ ಉದಾಹರಣೆ...ಪ್ರತಿಕ್ರಿಯೆ ಮತ್ತು ಅಭಿಪ್ರಾಯಕ್ಕೆ ಧನ್ಯವಾದಗಳು....

Submitted by Premashri on
ಎಲ್ಲರಲ್ಲಿರುವ ಈ ಭಾವ ತೊರೆದು ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಿದರೆ ಹೆಣ್ಣಿನ ಮೇಲಿನ ದೌರ್ಜನ್ಯ ಕಡಿಮೆಯಾಗಬಹುದು.ಸಾಮಾಜಿಕ ಕಳಕಳಿಯ ಅರ್ಥಪೂರ್ಣ ಕವನ.

Submitted by Rajendra Kumar ... on
ಆತ್ಮೀಯ ಪ್ರೇಮಾ ಅವರೆ, ಈ ಕವನದ ಆಶಯ ಮತ್ತು ಉದ್ದೇಶದಂತೆ ಮತ್ತು ನಿಮ್ಮ ಅಭಿಪ್ರಾಯದಂತೆ ಎಲ್ಲರೂ ಒಟ್ಟುಗೂಡಿ ಸಮಾಜ ಸುಧಾರಿಸಲು ತಮ್ಮ ಅಳಿಲು ಸೇವೆ ಸಲ್ಲಿಸಿದರೆ ದೌರ್ಜನ್ಯ ಕಡಿಮೆಯಾಗಬಹುದು. ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ಪ್ರೇಮಾ ಅವರೆ, ಈ ಕವನದ ಆಶಯ ಮತ್ತು ಉದ್ದೇಶದಂತೆ ಮತ್ತು ನಿಮ್ಮ ಅಭಿಪ್ರಾಯದಂತೆ ಎಲ್ಲರೂ ಒಟ್ಟುಗೂಡಿ ಸಮಾಜ ಸುಧಾರಿಸಲು ತಮ್ಮ ಅಳಿಲು ಸೇವೆ ಸಲ್ಲಿಸಿದರೆ ದೌರ್ಜನ್ಯ ಕಡಿಮೆಯಾಗಬಹುದು. ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ಸಂಗಮೇಶ‌ ಅವರೆ, ನೀವು ಹೇಳಿದ್ದು ನಿಜ, ಕೆಲವೊಮ್ಮೆ ನಾವೇ ಆ ಸ್ಥಿತಿಯಲ್ಲಿ ಇದ್ದು, ನಮ್ಮಿಂದ ಸಾಧ್ಯವಾದರೂ ಏನೂ ಮಾಡದೆ ಇದ್ದಾಗ ನಮ್ಮ ಮೇಲೆಯೇ ನಮಗೆ ಹೇಸಿಗೆಯಾಗುತ್ತದೆ. ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by Soumya Bhat on
ರಾಜೇಂದ್ರ ಕುಮಾರ್ ರವರೆ ಸ್ವಿಕರಿಸಲು ಕಷ್ಟವಾದ ಸತ್ಯ. ಬೇರೆಯವರಿಗೆ ಸಹಾಯ ಮಾಡಿದರೆ ನಮಗೇ ಎಲ್ಲಿ ತೊಂದರೆಯಾಗುವುದೋ ಎಂದು ನಾವೇ ಕಲ್ಪಿಸಿಕೊಂಡು ಸುಮ್ಮನಿದ್ದು ಬಿಡುತ್ತೇವೆ, ಆದರೆ ನಮಗೇ ಆ ಪರಿಸ್ಥಿತಿ ಬಂದರೆ ಬೇರೆಯವರು ಸಹಾಯ ಮಾಡಲಿಲ್ಲವೆಂದು ದೂರುತ್ತೇವೆ. ಎಲ್ಲರ ಮನಸಾಕ್ಷಿಯು ಎಲ್ಲೋ ಒಂದು ಕಡೆ ಇದೇ ಪ್ರಶ್ನೆ ಕೇಳಿರುತ್ತೆ . ತಮ್ಮ ಕವನದಿಂದ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಂಡಂತಾಯಿತು. ಧನ್ಯವಾದಗಳು... ಶುಭವಾಗಲಿ, >ಸೌಮ್ಯ

Submitted by Rajendra Kumar ... on
ಆತ್ಮೀಯ ಸೌಮ್ಯ ಅವರೆ, ನಿಮ್ಮ ಭಾವನೆಯಲ್ಲಿ ಸತ್ಯಾಂಶವಿದೆ … ಪಾಪವನ್ನು ಸಹಿಸುವುದೂ ಪಾಪವೇ, ಪಾಪವನ್ನು ಆಗುವಾಗ ತಡೆಯದೆ ಇರುವುದು ಪಾಪವೇ ಆಗುತ್ತದೆ… ನಮ್ಮ ಮೇಲೆ ಅತ್ಯಾಚಾರವಾದಾಗ, ಅನ್ಯಾಯ ಆದಾಗ ಬರುವ ಸಿಟ್ಟು ಮತ್ತು ಹೋರಾಡುವ ಶಕ್ತಿ, ನಮ್ಮ ಜೊತೆ ಬಾಳುವ ಒಳ್ಳೆಯ ಜನರ ಮೇಲೆ ಆದಾಗಲೂ ಬಂದರೆ, ಪಾಪಮಾಡುವವರು ಮುಂದೆ ತಮ್ಮ ಕಪಟದಾಟ ಆಡುವಾಗ ಎರಡು ಬಾರಿ ಯೋಚಿಸುತ್ತಾರೆ. ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by bhalle on
ಕಳಕಳಿಯ ಕವನ ಚೆನ್ನಾಗಿದೆ ... ಕಮೆಂಟಿಸಿದ ಮಾತ್ರಕ್ಕೆ ನನ್ನ ಜವಾಬ್ದಾರಿ ಮುಗಿಯಲಿಲ್ಲ ಎಂಬುವುದು ಸತ್ಯ ... ಕಮೆಂಟಿಸಿ ಆಯ್ತು 'ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ.. ಹೋದ್ರೆ ಹೋಗ್ಲಿ ಇನ್ನೊಬ್ಬರ ಒಡವೆ ' ಅಂದಾಗ ಆ ಕಳ್ಳ ನನ್ನ ಒಡವೆಯನ್ನೂ ಕದಿಯಲು ಬರಬಹುದು ಎಂಬುದು ನೆನಪಲ್ಲಿರಬೇಕು .... ನಿಮ್ಮ ಕವನ "ಏಳು ಸುತ್ತಿನ ಕೋಟೆ" ಚಿತ್ರವನ್ನೂ ಮತ್ತು ಅದರಲ್ಲಿನ ಒಂದು ಹಾಡಿನ ಈ ಸಾಲುಗಳನ್ನು ನೆನಪಿಸಿತು ಒಂದು ರೋಗದ ರೆಂಬೆ ಕಡಿದೂ ಗೆಲ್ಲುವೆನೆಂದೆ ಕೋಟಿ ಬೇರುಗಳಿಂದ‌ ನರಳುತಿದೆ ಬದುಕು

Submitted by Rajendra Kumar ... on
ಆತ್ಮೀಯ ಶ್ರೀನಾಥ್ ಭಲ್ಲೆ ಅವರೆ, ಒಂದು ಪದ್ಯ ಮತ್ತು ಅದಕ್ಕೆ ಬಂದ ಎಲ್ಲರ ಅಮೂಲ್ಯ ಪ್ರತಿಕ್ರಿಯೆಗಳು ನಾವೆಲ್ಲರೂ ಬಯಸುವ ಸ್ವಚ್ಛ ಬದುಕಿನ ಆಶೆಯನ್ನು ವ್ಯಕ್ತಪಡಿಸುತ್ತವೆ. ನೀವು ಅಂದಂತೆ ನಾವೆಲ್ಲರೂ ನಮಗಾದಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಗಿಡದ ಯಾವುದೋ ಒಂದು ಭಾಗಕ್ಕೆ ನೋವಾಗುತ್ತಿದ್ದರೆ, ಆ ಒಂದು ರೋಗದ ರೆಂಬೆಯಿಂದ ಬಿಡಿಸಿಕೊಂಡರೆ, ಆ ಭಾಗಕ್ಕಾದರೂ ನೋವು ನಿಲ್ಲುತ್ತದೆ. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ರಾಬಿಯ ಅವರೆ, ಕೆಲವೊಮ್ಮೆ ನಾನು ನನ್ನ ಪಾಲಿನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸದೆ ಇದ್ದಾಗ ನನಗೆ ನಾನು ಪ್ರಶ್ನೆಗಳನ್ನು ಕೇಳುತ್ತೇನೆ. ಉತ್ತರ ಸಿಗದೇ ಇದ್ದಾಗ ಪರಿತಪಿಸುತ್ತೇನೆ. ತಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆ ಕೂಡ ವಿಚಾರ ಮಾಡಿಸುತ್ತಿದೆ. ಧನ್ಯವಾದಗಳು.