ಪಾತ್ರ ಅನ್ವೇಷಣಾ

ಪಾತ್ರ ಅನ್ವೇಷಣಾ

ಪುಸ್ತಕದ ಲೇಖಕ/ಕವಿಯ ಹೆಸರು
ಬದರಿನಾಥ ಪಲವಳ್ಳಿ
ಪ್ರಕಾಶಕರು
ಕುಶಿ ಪ್ರಕಾಶನ
ಪುಸ್ತಕದ ಬೆಲೆ
100 ರೂಪಾಯಿ

ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ.

ಪಾಚಿ ಬೆಳೆದ ಹೊಡದಲ್ಲಿ ಹೇಗೆ ಆ ಹೊಂಡದ ಆಳವನ್ನು ತಿಳಿಯಲಾಗುವುದಿಲ್ಲವೋ ಹಾಗೆ, ನಮ್ಮ ಜೊತೆಯಲ್ಲೇ ಇದ್ದು ನಮ್ಮ ವಿರುದ್ದ ಪಿತೂರಿ ನಡೆಸುವ ಹಿತ ಶತ್ರುಗಳನ್ನು ಅರಿಯುವುದು ಕಷ್ಟ ಎನ್ನುವ ಈ ಕೆಳಗಿನ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಗೆಳೆಯ ಬದರಿನಾಥ ಪಲವಳ್ಳಿಯವರ "ಪಾತ್ರ ಅನ್ವೇಷಣಾ" ಕವನ ಸಂಕಲನ.

ಎಲ್ಲೆಲ್ಲಿ ವಾಮನರೋ

ಪಿತೂರಿ ಸಾಧಕರೋ

ಬುಡ ಘಾತುಕರೋ

ತಿಳಿಯಲ್ಲ್ ಪಾಚಿ ಹೊಂಡ...

ಹೀಗೆ ಪ್ರಾರಂಭವಾಗುವ ಕವನ ಸಂಕಲನ, ಸೇದು ಹೊಗೆಯುಗುಳುವ ಧೂಮಪಾನದ ಜೊತೆಗೆ ಮದ್ಯಪಾನದಂತಹ ಚಟಗಳು ಮನುಷ್ಯನನ್ನು ಬಹು ಬೇಗ ಚಟ್ಟ ಹತ್ತಿಸಿ ಮನೆ ಮುಂದೆ ಹೊಗೆಯಾಡಿಸುವುಂತೆ ಮಾಡೀತು ಎನ್ನುವ ಎಚ್ಚರಿಕೆಯೊಂದಿಗೆ ಮುಕ್ತಾಯವಾಗುತ್ತದೆ.

ಚಟ ಚಟ್ಟವ ಹತ್ತಿಸೀತು,

ಸೇದಿದರೆ ಧೂಮಪಾನ

ಜೊತೆಗೆ ಮದ್ಯಪಾನ

ಮನೆ ಮುಂದೆ ಹಾಕ್ತಾರೆ

ಹೊಗೆ ಜೋಪಾನ!

ಆರಂಭ ಮುಕ್ತಾಯಗಳ ನಡುವೆ ಇಂತಹ ಹಲವು ಸಾಲುಗಳಿರುವ ೯೮ ಕವನಗಳ , ಕವನ ಸಂಕಲನ " ಪಾತ್ರ ಅನ್ವೇಷಣಾ". ಒಂದೊಂದು ಸಾಲಲ್ಲೂ ಒಂದೊಂದು ಬಗೆಯ ಅರ್ಥ, ಭಾವಾರ್ಥಗಳು ಹುದುಗಿಕೊಂಡಿವೆ ಎನ್ನುವುದು ಒಂದೊಂದು ಸಾಲುಗಳನ್ನು ಓದಿದಾಗಲೂ ಭಾಸವಾಗುತ್ತದೆ. ಅಂತಹುಗಳಲ್ಲಿ ನನಗಿಷ್ಟವಾದ ಒಂದೆರಡು ತುಣುಕುಗಳನ್ನು ಇಲ್ಲಿ ಪ್ರಕಟಿಸಿದ್ದೇನೆ.

ಇಂದಿನ ರಸ್ತೆಯ ಪಯಣದಲ್ಲಿ ಅಂಗಾಂಗಳಿಗೆ ಯಾವುದೇ ಹಾನಿಯಾಗದೇ, ಮನೆಗೆ ಜೀವಂತವಾಗಿ ತಲುಪಿಸಿ ಬಿಡು ಎಂದು, ತಮ್ಮ "ಪಾಪಿಷ್ಠ ಕೆಟ್ಟ ರಸ್ತೆ..." ಎಂಬ ಕವನದಲ್ಲಿ ಹೀಗೆ ಬರೆಯುತ್ತಾರೆ,

ಪಾಪಿಷ್ಠ ಕೆಟ್ಟ ರಸ್ತೆ ಇದು

ಬ್ರೇಕು ಬ್ರೇಕಿಗೂ ಭೂನರಕ

ಜೋರು ಗೇರೂ ಕಂಗಾರು,

ದಾಟಿಸಿ ಬಿಡು ಲೆಕ್ಕಿಗನೇ

ಬದುಕಲಿನ್ನೂ ಬೇಜಾರಿದೆ

ಸವಿಯಲು ಮಧುಪಾನ!

ಜೀವಂತ ತಲುಪಿಸಿ ಬಿಡು

ಮನೆಗೆ ಪೂರ್ಣ ಅಂಗಾಂಗ....

ನಾಳೆಗೆ ಬಾಡಿ ಹೋಗುವ ಮಾವಿನ ಎಲೆಯನ್ನು ಹಣಕೊಟ್ಟು ತಂದು ಅದರಿಂದ ತೋರಣ ಕಟ್ಟಿ ಪಜೀತಿಪಟ್ಟಿಕೊಳ್ಳುವುದಕ್ಕಿಂತ ಪ್ಲಾಸ್ಟಿಕಿನ ಸಿದ್ದ ತೋರಣವೇ ಬಾಗಿಲಿಗೆ ಓಳ್ಳಯದಲ್ಲವೇ, ಬಾಡುವುದಿಲ್ಲ, ತೋರಣ ಕಟ್ಟುವ ಪಜೀತಿಯಿಲ್ಲ, ಈ ವರ್ಷದನ್ನು ಮುಂದಿನ ವರ್ಷವೂ ಬಳಸಬಹುದಲ್ಲ ಎಂದು "ಬಂತು ಉಗಾದಿ" ಎನ್ನುವ ಕವನದಲ್ಲಿ ಹೀಗೆ ಹೇಳುತ್ತಾರೆ,

ಮಾವಿನ ಎಲೆ ತೋರಣ

ತಂದು ಕಟ್ಟುವ ಪಜೀತಿ

ಪ್ಲಾಸ್ಟಿಕಿನ ಸಿದ್ದ ತೋರಣ

ಅಲಂಕರಿಸಲಿ ಬಾಗಿಲಿಗೆ!

ಕಾರಾಗೃಹದಲ್ಲಿ ಕುಳಿತು ಭಗವದ್ಗೀತೆ ಪಠಿಸಿದರೆ ಮೈದಾನದಲ್ಲಿ ಮೈ ಮಾರಿಕೊಂಡು ಕಳ್ಳಾಟವಾಡಿದ್ದು ಕಳೆದು ಹೋಗುತ್ತದೆಯೇ ಎಂದು ಬದರಿಯವರು ಹೀಗೆ ಬರೆಯುತ್ತಾರೆ,

ಕಾರಾಗೃಹದಲಿ ಕುಳಿತು

ಭಗವದ್ಗೀತೆ ಪಠಿಸಿದರೆ

ಕಳೆಯುವುದೇ ಮೈದಾನದಲಿ

ಮೈಮಾರಿಕೊಂಡ ಕಳ್ಳಾಟ.

ಹೀಗೆ ಇಂತಹ ಹಲವಾರು ಸುಂದರ ಸಾಲುಗಳು ಈ ಕವನ ಸಂಕಲನದಲ್ಲಿದೆ. ತಮ್ಮ ಕವನ ಸಂಕಲನದ ಒಂದು ಪ್ರತಿಯನ್ನು ನನಗೆ ನೀಡಿ, ಆ ಕವನ ಸಂಕಲನದ ಕವನಗಳನ್ನು ಓದಲು ಅವಕಾಶ ಮಾಡಿಕೊಟ್ಟ ಗೆಳೆಯ ಬದರಿಯವರಿಗೆ ಹಾಗೂ ಅದನ್ನು ಪ್ರಕಟಿಸಿದ ಕುಶಿ ಪ್ರಕಾಶನ ಬಳಗಕ್ಕೂ ನನ್ನ ಅಭಿನಂದನೆಗಳು. ಬದರಿಯವರಿಂದ ಹಾಗೂ ಅವರ ಕವನಗಳಿಗೆ ಪುಸ್ತಕ ರೂಪಕೊಟ್ಟು ಪ್ರಕಟಿಸಿದ ಕುಶಿ ಪ್ರಕಾಶನ ಇವರಿಂದ ಇಂತಹ ಹಲವು ಕವನ ಸಂಕಲನಗಳು ಮೂಡಿ ಬರಲಿ ಎಂದು ಹಾರೈಸಿ, ಶುಭಕೋರುತ್ತೇನೆ.

--ಮಂಜು ಹಿಚ್ಕಡ್