ಪ್ರಶ್ನೆಗಳ ಗೊಂದಲ

ಪ್ರಶ್ನೆಗಳ ಗೊಂದಲ

ಕವನ

ಕೆಲವರು ಹೇಳುತ್ತಾರೆ, ಕೆಲಸ ಮಾಡು‍‍ ಪ್ರತಿಫಲ ಬಯಸಬೇಡ

ಅದೇ ಕೆಲವರು ಬೇಡುತ್ತಾರೆ, ಕಾರ್ಯ ಸಾಧನೆಗೆ ತುಂಬಿರಬೇಕು ಪ್ರೋತ್ಸಾಹದ ಕೊಡ

ಎಂತ ಆಶ್ಚರ್ಯ ‍‍ಅಣುಕು !

 

ನಾವೆಲ್ಲ ಬಯಸುವ ಪ್ರತಿಫಲ ಪ್ರೋತ್ಸಾಹವೇ ಅಲ್ಲವೇ?!

ಪ್ರತಿಫಲಕ್ಕೆ ಎನೂ ಬೆಲೆಯೇ ಇಲ್ಲವೇ?

 

ಅಷ್ಟಕ್ಕೂ ಪ್ರೋತ್ಸಾಹ ಎಂದರೇನು?

ಪ್ರಯತ್ನಕ್ಕೆ ಸಿಕ್ಕ ಗೆಲುವೇ? ಮನಸ್ಸಿಗೆ ಸಿಗುವ ಸಮಾಧಾನವೇ? |

ನಾಲ್ಕಾರು ಮಂದಿ ಹೊಗಳಿ ಹೊನ್ನ ಶೂಲಕ್ಕೇರಿಸಿದರೆ,

ಅದು ಪ್ರೋತ್ಸಾಹವಾದೀತೇ? ಮರುಕದಂತೆ ಕಾಣದೇ ಅದು?

 

ಪ್ರಯತ್ನದ ಬಳಲಿಕೆ ತಣಿಯಲು ದೊರಕುವ, ಜೀವನಾಧಾರವೇ ನಿಜವಾದ ಪ್ರೋತ್ಸಾಹವಲ್ಲವೇ?

ಜೀವನಾಧಾರ ಕೊಡದ ಪ್ರಯತ್ನ ವ್ಯರ್ಥವಲ್ಲವೇ? ಅಥವಾ ಪ್ರಯತ್ನದ ದಿಕ್ಕು ಸರಿಯಿಲ್ಲವೇ?

ಅಷ್ಟಕ್ಕೂ ದಿಕ್ಕು ನಿಶ್ಚಿತವೇ? ಇಲ್ಲಾ ನಮ್ಮ ಕಲ್ಪನೆಯೇ?

 

ಮೊದಮೊದಲು ಬಯಸದ ಪ್ರತಿಫಲ, ಈಗ ಬೇಡಿದ್ದೇ ತಪ್ಪೇ? ತುಂಬಾ ತಡವಾಯಿತೇ?

ಗೊತ್ತಿಲ್ಲಾ..

 

ಮನಸ್ಸು ಈ ಎರಡು ದಿಕ್ಕುಗಳ ನಡುವೆ ಅಲೆಮಾರಿ

ಯಾಕೋ ಸಿಗುತ್ತಿಲ್ಲ ಸರಳ ದಾರಿ |

ಎರಡು ದೊಣಿಯ ಪಯಣ ಸುಖವಲ್ಲ, ನನಗೂ ಗೊತ್ತು

ನನ್ನ ಮನಸ್ಸಿದು ನನ್ನದಲ್ಲದ ಸ್ವತ್ತು !

 

ಮನ‍ ಮೆದುಳು, ಯಾವಾಗಲೂ ಹೀಗೆ ವೈರಿಗಳೇ?

ವೈರಿಗಳಲ್ಲೂ ವಿರೋಧವೆನ್ನುವುದು ಸಮಾನ ಅಂಶವಲ್ಲವೇ? |

ದಿಕ್ಕುಗಳು ನಿಶ್ಚಿತವಾದರೆ, ಸಮಾನ ಅಂಶ ಅಸಮವೇ? ಅಥವಾ

ದಿಕ್ಕುಗಳು ಸಂಧಿಸುವವೇ ಮುಂದೊಂದು ದಿನ?

ಗೊತ್ತಿಲ್ಲ..

 

ಕಾಲದ ಹರಿವಲ್ಲಿ ಉತ್ತರ ಸಿಗುವುದೇ? ಅದೂ ತಿಳಿದಿಲ್ಲ

ತಿಳಿದಿರುವುದೊಂದೇ

ದಿಕ್ಕು ನಿಶ್ಚಿತವೆಂದೊಪ್ಪುವ ಸ್ಂಕಲ್ಪವಿರೆ, ಆರಿಸಿಕೊ ಎರಡರಲಿ ಒಂದನು |

ಇಲ್ಲವೋ, ಮನಸ್ಸು ಮರುಳು ಎನ್ನುತ್ತಾರೆ !

ಪುಸಲಾಯಿಸು, ದಿಕ್ಕು ಸಂಧಿಸುವವು ಎಂದು !!

ಆ ಹೊಯ್ದಾಟದ ಅಲೆಗಳಲಿ, ಸಾಗುತಿರಲಿ

ಪ್ರಯತ್ನದ ಪಯಣ ನಿಂದು

 

ಅಷ್ಟಕೂ ಪ್ರಯತ್ನ ಎಂದರೇನು?