ಬಂದು ಹೋಗುವ‌ ನಡುವೆ

ಬಂದು ಹೋಗುವ‌ ನಡುವೆ

ಕವನ

ಬಂದದ್ದು ಹೋಗಲೇಬೇಕು
ಹೊಸದದ್ದು ಬರಲೇಬೇಕು
ಹೋಗುವ ಬರುವ ನಡುವೆ
ನೋವು ನಲಿವಿನ ಜೊತೆಗೆ ನಾವಿರಲೇಬೇಕು

ಎಷ್ಟು ವರುಷಗಳ ನಲಿಯಬೇಕೆಂದಿದ್ದವೋ
ರಕ್ತಗಳಲ್ಲಿ ಅದ್ದಿ,ನಿದ್ದೆಗೆ ಜಾರಿಸಿದಿರಲ್ಲಾ
ಮೌಂಸದ ಮುದ್ದೆಗಳು ಮೆತ್ತಿದವು ಗೋಡೆಗಳಿಗೆ
ಕೆಂಪನೆಯ ಕಂಗಳಿನವರಿಗೆ ಹರಿದ ರಕ್ತ ಕಾಣಲೇ ಇಲ್ಲ

ಮೇಲೆ ಹಾರಿ ಹೋಗಿದ್ದು ಧರೆಗುರುಳಿತು
ಸಾಗರ ಗರ್ಭ ಭೇದಿಸಿ,ತಾಯ ಗರ್ಭ ಛೇಧಿಸಿ
ದೇಹಗಳಳಿದವು ಅಳಿದು,ಜೀವಿಗಳು ಹಾರಿಹೋದವು ಮೇಲೆ
ಕಳೆದುಕೊಂಡವರ ಅಳುವು,ನಲಿವಿನ ಕಳುವು

ಬಡಿದ ಚೆಂಡು,ಬಾರಿಸದೇ ನಿಂತಿತು ಹ್ಯೂಸ್‍ನ ದಾಂಡು
ರನ್ ಕದಿಯಲೆತ್ನಿಸಿದವನನ್ನೇ ಕದ್ದ ಜವರಾಯ
ಪ್ರವಾಹದಲ್ಲಿ ಮಿಂದೆದ್ದು ಹೊಸದೊಂದರ ಹುಡುಕುವಲ್ಲಿ
ಎಡವಿ ಬಿದ್ದರೇ ಭೂ ಸ್ವರ್ಗವೆಂಬೋ ಶ್ರೀನಗರಿನವರು

ಆನೆ ನಡೆದದ್ದೇ ಹಾದಿ,ಎಂಬಂತಾಗದಿರಲಿ ಮೋದಿ
ಧನವು ನಿರ್ಧನರ ಜನರನ್ನಾಗಿಸಲಿ,ತುಂಬಲಿ ನೆಮ್ಮದಿ
ಬಡತನದ ಕೊಳೆ ಅಳಿದರೆ ಅದುವೇ ಸ್ವಚ್ಛ ಭಾರತ
ನಮ್ಮ ತಂಗಿಯರು ನಿರ್ಭಯದಿ ಬದುಕಲಿ ಅನವರತ

ಹಳೆಯ ವರುಷದ ನೋವಿನಲ್ಲೂ ನೆಮ್ಮದಿಯ ತಲಾಷ
ಮಕ್ಕಳ ಹಕ್ಕುಗಳ ಪಕ್ವಗೊಳಿಸುವಲ್ಲಿ ಮೀಸಲಾದ ಕೈಲಾಷ
ಉಗ್ರರ ಗುಂಪಿನ ನಳಿಕೆಯ ತುದಿಯಲ್ಲಿ ಅರಳಿಸಿ ಕಮಲ
ಶಾಂತಿಯ ಪ್ರತೀಕವಾಗಿಹಳು ಸೋದರಿ ಮಲಾಲ

ಹೊಸ ವರುಷದಲ್ಲಿ ನಲಿವು ಬಾರದಿದ್ದರೂ ಸರಿಯೇ
ಹಳೆಯ ವರುಷದ ನೋವುಗಳು ಮರುಕಳಿಸದಿರಲಿ
ಅನೇಕ ಗುಂಪುಗಳಿಗೆ ಆಸರೆಯಾಗಿಹಳು ಭಾರತ ಮಾತೆ
ಅವಳೇ ನಮ್ಮ ಜಾತಿ,ಧರ್ಮ...ಬದುಕಿನ ಯಶೋಗಾಥೆ