ಬಸ್ಸಾರು

ಬಸ್ಸಾರು

ಬೇಕಿರುವ ಸಾಮಗ್ರಿ

ತೊಗರಿಬೇಳೆ, ಒಂದು ಕಪ್ ಸಬ್ಬಸಿಗೆ ಸೊಪ್ಪು, ಬೆರಕೆ ಸೊಪ್ಪು, ದಂಟಿನ ಸೊಪ್ಪು (ಎಲ್ಲಾ ಒಂದೊಂದು ಕಟ್ಟು), ಈರುಳ್ಳಿ ಒಂದು, ಬೆಳ್ಳುಳ್ಳಿ, ಜೀರಿಗೆ, ಮೆಣಸು ಏಳೆಂಟು ಕಾಳು, ಅರಶಿನ, ಹುಣಸೆಹಣ್ಣು ಅಥವಾ ಹುಣಿಸೆ ರಸ, ಖಾರದ ಪುಡಿ, ಸಾಂಬಾರ್ ಪುಡಿ-ಅರ್ಧ ಚಮಚ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಉಪ್ಪು, ಎಣ್ಣೆ.

ತಯಾರಿಸುವ ವಿಧಾನ

ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸಬೇಡಿ. ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ, ರುಚಿಗೆ ತಕ್ಕ ಷ್ಟು ಉಪ್ಪನ್ನು ಹಾಕಿ, ಸೊಪ್ಪು ಬೇಯುವವರೆಗೂ ಬೇಯಿಸಿ.

ನಂತರ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು ಸೊಪ್ಪಿನ ನೀರನ್ನು ಮತ್ತು ಸೊಪ್ಪನ್ನು ಬೇರೆ ಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಮಸಾಲೆಗೆ:
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಸ್ವಲ್ಪ ಬೇಯಿಸಿದ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು , ಎರಡು ಚಮಚ ಕಾಯಿತುರಿ, ಜೀರಿಗೆ, ಖಾರದ ಪುಡಿ, ಮೆಣಸು, ಸಾರಿನ ಪುಡಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಹುರಿದು ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸೊಪ್ಪನ್ನು ಸ್ವಲ್ಪ ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ, ಬಸ್ಸಾರು ರೆಡಿ.

ಸಲಹೆ; ಬಸ್ಸಾರಿಗೆ ಕೊತ್ತಂಬರಿ ಸೊಪ್ಪು ಸ್ವಲ್ಪ ಜಾಸ್ತಿ ಹಾಕಿದರೆ ರುಚಿ ಜಾಸ್ತಿ. ಬೇಯಿಸಿದ ಉಳಿದ ಸೊಪ್ಪಿನಿಂದ ಪಲ್ಯ ತಯಾರಿಸಿ.