ಬೆಳಕು ಎಲ್ಲಿ

ಬೆಳಕು ಎಲ್ಲಿ

ಕವನ

 

ಎಲ್ಲಿ ಬೆಳಕು... ಬೆಳಕು ಎಲ್ಲಿ....

 

ಮೋಡ ಕವಿದ ಧರೆಗೆ

ಧಾರೆ ಮಳೆ ಆಗುವಲ್ಲಿ

ನದಿಯು ತುಂಬಿ ಹರಿದು

ದೋಣಿ ದಡಕೆ ಸಾಗುವಲ್ಲಿ

 

ಒಳಹೊರಗಿನ ಮಲಿನ ತೊಲಗಿ

ಶುದ್ಧ ಗಾಳಿ ಬೀಸುವಲ್ಲಿ

ವಿಕೃತಿ ಅಳಿದು ತೊಳೆದು

ಪ್ರಕೃತಿ ರೀತಿ ತೋರಿದಲ್ಲಿ

 

ಕಾನನಗಳ ಉಳಿಸಿ ಬೆಳೆಸಿ

ಜೀವ ಕಲರವ ಕೇಳುವಲ್ಲಿ

ದುಡಿವ ತುಡಿವ ಕಾಯಗಳಿಗೆ

ಸಮೃದ್ಧ ಹಸಿರ ರಾಶಿಯಲ್ಲಿ

 

ಅಸುರ ನೀತಿ ಅಳಿಸಿ

ಸಾಮರಸ್ಯ ಸೇರುವಲ್ಲಿ

ಶೋಷಣೆಯ ಕಪ್ಪು ಕಳೆದು

ಸಮಾನತೆಯ ಹಾಡಿನಲ್ಲಿ

 

ಕೃದ್ಧತೆಯನು ಆಳ ಹುಗಿದು

ಶಾಂತವನ ಕಟ್ಟುವಲ್ಲಿ

ಸತ್ಯ ನಿತ್ಯ ಹೊಳೆದು

ಮಿಥ್ಯೆ ಮೀರಿ ಅಳಿವಲ್ಲಿ

 

ಜಡತೆ ಜೊಂಪು ಜರಿದು

ಅರಿವು ಜೀವ ತಳೆವಲ್ಲಿ

ಭೂಮಿ ಹೃದಯ ಅರಳಿ

ಉಸಿರುಗಳ ಉಳಿಸುವಲ್ಲಿ

 

ಬೆಳಕು ಇಲ್ಲಿ ಬೆಳಕು ಇಲ್ಲಿ....

 

                           -  ಅನಂತ ರಮೇಶ್

ಚಿತ್ರ್